ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ. 100ಕ್ಕೆ ಹೆಚ್ಚಿಸಲು ಪ್ರಸ್ತಾಪ; ವಿಮಾ ಕಾಯ್ದೆ ತಿದ್ದುಪಡಿಗಳು ಯಾರಿಗಾಗಿ?

-ಸಿ. ಸಿದ್ದಯ್ಯ

ವಿಮಾ ವಲಯದಲ್ಲಿ ಶೇ. 26ರಷ್ಟು ಎಫ್‌ಡಿಐಗೆ ವಾಜಪೇಯಿ ಸರ್ಕಾರ ಅನುವು ಮಾಡಿಕೊಟ್ಟಿತು. ಮೋದಿ ಸರ್ಕಾರ 2015ರಲ್ಲಿ ಇದನ್ನು ಶೇ. 49ಕ್ಕೆ, ನಂತರ 2021ರಲ್ಲಿ ಶೇ. 74ಕ್ಕೆ ಏರಿಸಿದರು. ಈಗ ಇದನ್ನು ಶೇ. 100ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. “2047ರ ವರೆಗೆ ಎಲ್ಲರಿಗೂ ವಿಮೆ” ಎಂಬ ಕಾರಣವನ್ನು ಸರ್ಕಾರ ನೀಡುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಹಣಕಾಸು ಸೇವೆಗಳ ಇಲಾಖೆ ಮುಂದಾಗಿದೆ. ಈ ಮೂಲಕ ವಿಮಾ ಕ್ಷೇತ್ರವನ್ನು ಹಾನಿ ಮಾಡುವ ವಿಮಾ ಕಾಯ್ದೆ ತಿದ್ದುಪಡಿ ಮಸೂದೆ ತರಲು ಸರ್ಕಾರ ಮುಂದಾಗಿದೆ.  ಜನರು ದೀರ್ಘಾವಧಿಯ ಉಳಿತಾಯ ಮತ್ತು ಸಾವಿನ ನಂತರ ಕುಟುಂಬಕ್ಕೆ ಲಭ್ಯವಿರುವ ಹಣಕ್ಕೆ ಸರ್ಕಾರದ ಗ್ಯಾರಂಟಿ ಹೊಂದಿರುವ ಸರ್ಕಾರಿ ವಲಯವನ್ನು ಬಯಸುತ್ತಾರೆ ಎಂಬುದನ್ನು ಸರ್ಕಾರ ಅರಿಯಬೇಕಿದೆ.

ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಯನ್ನು 74 ರಿಂದ 100 ಪ್ರತಿಶತಕ್ಕೆ ಹೆಚ್ಚಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿಮಾ ಕಾಯಿದೆ, 1938, ಜೀವ ವಿಮಾ ನಿಗಮ ಕಾಯಿದೆ, 1956, ಹಾಗೂ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಕಾಯಿದೆ, 1999 ರಂತಹ ಕಾಯ್ದೆಗಳಿಗೆ ಈ ಪ್ರಸ್ತಾವಿತ ತಿದ್ದುಪಡಿಗಳ ಕುರಿತು ಪ್ರತಿಕ್ರಿಯೆ ನೀಡಲು ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್) ಆನ್‌ಲೈನ್‌ನಲ್ಲಿ ಅಭಿಪ್ರಾಯ ನೀಡಲು ಸಾರ್ವಜನಿಕರನ್ನು ವಿನಂತಿಸಿದೆ. ಡಿಸೆಂಬರ್ 10ರೊಳಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಲಾಗಿದೆ. ಈ ತಿದ್ದುಪಡಿ ಮಸೂದೆಯನ್ನು ಈ ಚಳಿಗಾಲದ ಸಂಸತ್ ಅಧಿವೇಶನದಲ್ಲೇ ತರಲು ಕೇಂದ್ರ ಬಯಸಿತ್ತು ಎಂಬ ಸುದ್ದಿಗಳೂ ಇವೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರ್ಕಾರವು ಕೆಲವು ವಿಷಯಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುವ ಪ್ರಯತ್ನ ಸ್ವಾಗತಾರ್ಹ. ಆದರೆ, ಈ ವಿಷಯದಲ್ಲಿ ಸರ್ಕಾರದ ಪ್ರಮಾಣಿಕತೆ ಪ್ರಶ್ನಾರ್ಹವಾಗಿದೆ.

ದೇಶದಲ್ಲಿ, ತಮ್ಮ ಅನುಯಾಯಿಗಳನ್ನು ಹೊರತುಪಡಿಸಿ, ಆನ್‌ಲೈನ್‌ನಲ್ಲಿ ಆರ್ಥಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಇತರೆ ಕೆಲವೇ ಜನರಿದ್ದಾರೆ. ಸರ್ಕಾರ ನಿಜವಾಗಿಯೂ ಅಂತಹ ಅಭಿಪ್ರಾಯಗಳನ್ನು ಸಂಗ್ರಹಿಸಿ ಅದನ್ನು ಸ್ವೀಕರಿಸಲು ಬಯಸಿದರೆ, ಅವುಗಳನ್ನು ವಿಮಾ ವಲಯದ ನೌಕರರು, ಕಾರ್ಮಿಕ ಸಂಘಗಳು, ಏಜೆಂಟ್‌ ಗಳು, ಏಜೆಂಟರ ಸಂಘಗಳು, ಪಾಲಿಸಿದಾರರು ಮತ್ತು ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಬುದ್ಧಿಜೀವಿಗಳಿಂದ ಸಂಗ್ರಹಿಸಿದರೆ ಒಂದಷ್ಟು ಪ್ರಯೋಜನವಿದೆ. ಇಲ್ಲವಾದರೆ ಜನಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಿಸಲು ಪ್ರಯತ್ನಿಸಿದರೂ ಅದರಿಂದ ಪ್ರಯೋಜನವಿಲ್ಲ. ವಿಮಾ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಉದ್ಯೋಗಿಗಳ ಮತ್ತು ಏಜೆಂಟರ ಸಂಘಗಳೊಂದಿಗೆ ತಕ್ಷಣದ ಸಂಪರ್ಕ ಅತ್ಯಗತ್ಯ.

ಇದನ್ನೂ ಓದಿ: ಕುಣಿಗಲ್: ಡಿಸೆಂಬರ್ 14ರಂದು ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರ

ಖಾಸಗಿ ಕಂಪನಿಗಳಿಗೆ ಅವಕಾಶ ಬೇಡ ಎಂದು 1998ರಲ್ಲೇ 1.65 ಕೋಟಿ ಸಹಿ ಸಂಗ್ರಹ

ಸರಕಾರಗಳು ನಿಜವಾಗಿಯೂ ಜನಾಭಿಪ್ರಾಯ ಸಂಗ್ರಹಣೆಗೆ ಆದ್ಯತೆ ನೀಡಿದ್ದರೆ, 1998ರಲ್ಲೇ ದೇಶಾದ್ಯಂತ 1 ಕೋಟಿ 65 ಲಕ್ಷ ಮಂದಿ ಸಹಿ ಹಾಕಿ, ಖಾಸಗಿ ಕಂಪನಿಗಳಿಗೆ ವಿಮಾ ಕ್ಷೇತ್ರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ, ಅದನ್ನು ಅಂದಿನ ಲೋಕಸಭೆ ಸ್ಪೀಕರ್ ಜಿಎಂಸಿ ಬಾಲಯೋಗಿ ಅವರಿಗೆ ಹಸ್ತಾಂತರಿಸಲಾಗಿತ್ತು. ಇತರ ಹಲವು ಸಂದರ್ಭಗಳಲ್ಲಿ, ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯ ಅಗತ್ಯವಿಲ್ಲ ಮತ್ತು ಅಂತಹ ಎಫ್‌ಡಿಐಗಳು ಸೇವಾ ಕೇಂದ್ರದಲ್ಲಿ ಪ್ರಮುಖ ಪಾತ್ರ ವಹಿಸುವ ವಿಮಾ ಕ್ಷೇತ್ರಕ್ಕೆ ಹೇಗೆ ಹಾನಿ ಮಾಡುತ್ತದೆ ಎಂದು ಸರ್ಕಾರಗಳಿಗೆ ತಿಳಿಸಲಾಯಿತು.

ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಅಮಾನುಲ್ಲಾ ಖಾನ್ ಮತ್ತು ಕೆ.ವೇಣುಗೋಪಾಲ್ ಅವರು ವಿಮಾ ವಲಯದಲ್ಲಿ ಎಫ್‌ಡಿಐ ಹೆಚ್ಚಿಸುವ ಕುರಿತು ಸ್ಥಾಯಿ ಸಮಿತಿಯ ಮುಂದೆ ತಮ್ಮ ವಾದಗಳನ್ನು ಮಂಡಿಸಿದರು. ಯಾವುದೇ ಸಂದರ್ಭದಲ್ಲಿ, ಸಾರ್ವಜನಿಕ ಅಭಿಪ್ರಾಯ ಅಥವಾ ಸಮುದಾಯಗಳ ಅಭಿಪ್ರಾಯಗಳಿಗೆ ಯಾವುದೇ ಮೌಲ್ಯವನ್ನು ನೀಡದೆ, ಪ್ರಸ್ತುತ ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ವಿಮಾ ವಲಯಕ್ಕೆ ನಿಯಮಿತವಾಗಿ ಎಫ್‌ಡಿಐಗಳನ್ನು ಹೆಚ್ಚಿಸುತ್ತಿದೆ. ಈಗಿನಂತೆ, ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಹೊಸ ಬದಲಾವಣೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಕೈಗಳಿಗೆ ರಕ್ತ ಅಂಟಿಕೊಳ್ಳದೆ ಹೊರಬರಲು ಅವರು ಯೋಚಿಸುತ್ತಿದ್ದಾರೆ.

ಮಹತ್ವಾಕಾಂಕ್ಷೆಯೊಂದಿಗೆ ಹೊರಹೊಮ್ಮಿದ ಎಲ್ಐಸಿ

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ವಿಮಾ ವಲಯದಲ್ಲಿ ವಿಷಮ ಪರಿಸ್ಥಿತಿಗಳಿದ್ದವು. ಜೀವವಿಮಾ ಕ್ಷೇತ್ರದಲ್ಲಿ ನಾಗರಿಕರ ಹಣದ ಭದ್ರತೆ ಖಾಸಗಿಯವರ ಕೈಯಲ್ಲಿತ್ತು. ವಿದೇಶಿ ಕಂಪನಿಗಳು ದೇಶೀಯ ಉಳಿತಾಯವನ್ನು ದೋಚುತ್ತಿದ್ದರು. ಖಾಸಗಿ ವಿಮಾ ಕಂಪನಿಗಳು ತಾವು ಸಾರ್ವಜನಿಕರಿಂದ ಸಂಗ್ರಹಿಸಿದ ಪ್ರೀಮಿಯಂಗಳನ್ನು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡು ಪಾಲಿಸಿದಾರರನ್ನು ವಂಚಿಸುತ್ತಿದ್ದವು. ನಾಗರಿಕರ ಹಣ ಸಂಪೂರ್ಣ ರಕ್ಷಣೆಯಾಗಬೇಕಾದರೆ ರಾಷ್ಟ್ರೀಕರಣವೊಂದೇ ಪರಿಹಾರವಾಗಿತ್ತು.

1956 ಜನವರಿ 19ರಂದು, ಎಲ್ಲಾ 245 ಖಾಸಗಿ ವಿಮಾ ಕಂಪನಿಗಳನ್ನು ಒಟ್ಟುಗೂಡಿಸಿ ಭಾರತೀಯ ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸುವ ಸುಗ್ರೀವಾಜ್ಞೆಯನ್ನು ಹೊರಡಿಸಲಾಯಿತು. ಭಾರತೀಯ ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸಿ “ಜೀವ ವಿಮೆ” ಎಂದು ರೂಪುಗೊಂಡ ಗುರಿಗಳನ್ನು ಸಾಧಿಸುವಲ್ಲಿ ಎಲ್ಐಸಿ ಯಶಸ್ವಿಯಾಗಿದೆ. ಅವ್ಯಾಹತವಾಗಿ ಸಾಗುತ್ತಿರುವ ವಿಮಾ ಕ್ಷೇತ್ರದತ್ತ ಖಾಸಗಿ ಹೂಡಿಕೆದಾರರ ಕಣ್ಣು ಬಿದ್ದಿದೆ ಮತ್ತು ಹೊಸ ಆರ್ಥಿಕ ನೀತಿಗಳ ಭಾಗವಾಗಿ, ಈ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶಕ್ಕೆ ಅವಕಾಶಗಳು ಹೆಚ್ಚಿವೆ.

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ, 1999

1995 ರವರೆಗೆ ಹಣಕಾಸು ಇಲಾಖೆ ಅಡಿಯಲ್ಲಿ ನಡೆಯುತ್ತಿದ್ದ ವಿಮಾ ವಲಯವನ್ನು ನಿಯಂತ್ರಿಸಲು ಹೊಸ ನಿಯಂತ್ರಣ ಸಂಸ್ಥೆ ಅಗತ್ಯವಿದೆ ಎಂಬ ಕಾರಣ ನೀಡಿದ ಆಗಿನ ಕಾಂಗ್ರೆಸ್ ಸರ್ಕಾರವು, ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಎ) ಎಂಬ ಪ್ರಸ್ತಾವನೆಯನ್ನು ಮುಂದಿಟ್ಟಿತು. ಸಂಸತ್ತಿನಲ್ಲಿ ಈ ಮಸೂದೆಯನ್ನು ಅಂಗೀಕರಿಸಲು ಅಂದಿನ ಹಣಕಾಸು ಮಂತ್ರಿಗಳಾದ ಐ.ಕೆ.ಗುಜ್ರಾಲ್ ಅವರು ಪಿ.ಚಿದಂಬರಂ ಅವರೊಂದಿಗೆ ವಿವಿಧ ಸಂದರ್ಭಗಳಲ್ಲಿ ತೀವ್ರ ಪ್ರಯತ್ನಗಳನ್ನು ಮಾಡಿ ವಿಫಲರಾದರು. 1999ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರವು, ‘ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ, 1999’ (IRDA Act-1999) ಅನ್ನು ತಂದಿತು. ಸಂಸತ್ತಿನಲ್ಲಿ ಈ ಕಾಯ್ದೆಗೆ ಸಂಬಂಧಿಸಿದ  ಮಸೂದೆಯನ್ನು ಅಂಗೀಕರಿಸಲು ವಾಜಪೇಯಿ ಸರ್ಕಾರ ಕಾಂಗ್ರೆಸ್ ಪಕ್ಷದ ಸಹಾಯ ಪಡೆಯಿತು.

ಶೇ.26ರಷ್ಟು ಎಫ್‌ಡಿಐಗೆ ಅವಕಾಶ

ಐಆರ್‌ಡಿಎ ಮಸೂದೆಯನ್ನು ಅಂಗೀಕರಿಸಿದಾಗ, ವಿಮಾ ವಲಯಕ್ಕೆ ಖಾಸಗಿ ಕಂಪನಿಗಳು ಬರಬಹುದು ಆದರೆ, ವಿದೇಶಿ ನೇರ ಹೂಡಿಕೆ(ಎಫ್ ಡಿಐ)ಗೆ  ಶೇ. 26ರಷ್ಟು ಮಾತ್ರ ಅವಕಾಶ ನೀಡಲಾಗುವುದು ಎಂಬ ನಿರ್ಬಂಧ ವಿಧಿಸಲಾಗಿದೆ. ನಿರೀಕ್ಷೆ ಮಾಡಿದಷ್ಟು ಖಾಸಗಿ ಕಂಪನಿಗಳು ನೋಂದಣಿಯಾಗದ ಕಾರಣ ಎಫ್‌ಡಿಐ ಅನ್ನು ಮತ್ತಷ್ಟು ಹೆಚ್ಚಿಸಿ ವಿದೇಶಿ ಕಂಪನಿಗಳನ್ನು ತರುವ ಹಲವು ಪ್ರಯತ್ನಗಳು ನಡೆದಿವೆ. ಆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಒಂದರ ಸರ್ಕಾರ ಎಡಪಂಥೀಯ ಪಕ್ಷಗಳ ಬೆಂಬಲ ಹೊಂದಿದ್ದರಿಂದಾಗಿ ಅದು ಸಾಧ್ಯವಾಗಲಿಲ್ಲ, ಅಂದಿನ ಆಡಳಿತವು ಸರ್ಕಾರಿ ಕ್ಷೇತ್ರಗಳಿಗೆ ಹೆಚ್ಚಿನ ಗಮನ ನೀಡಿತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2015ರಲ್ಲಿ ಎಫ್‌ಡಿಐ ಶೇ. 26ರಿಂದ 49ಕ್ಕೆ ಏರಿಕೆಯಾಗಿದೆ. ಆದರೆ, ನಿರೀಕ್ಷಿತ ಫಲಿತಾಂಶ ಬರಲಿಲ್ಲ ಎಂಬ ನೆಪದಲ್ಲಿ 2021ರಲ್ಲಿ ಶೇ.74ಕ್ಕೆ ಏರಿಸಿದರು.

ಅದರ ನಂತರವೂ ಈ 25 ವರ್ಷಗಳ ಅವಧಿಯಲ್ಲಿ, ಎಲ್ಲಾ ಖಾಸಗಿ ವಿಮಾ ಕಂಪನಿಗಳು ಸೇರಿ 25 ಸಂಖ್ಯೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಆದ್ದರಿಂದ, ಈಗ ವಿಮಾ ವಲಯದಲ್ಲಿ ಶೇಕಡಾ ನೂರರಷ್ಟು ಎಫ್‌ಡಿಐ ಹೆಚ್ಚಿಸುವ ಮೂಲಕ, ಖಾಸಗಿ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ವಿಮಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತವೆ ಎಂಬ “ಗಾಳಿಯಲ್ಲಿ ಗೋಪುರ” ಕಟ್ಟುವ ಆಶಾವಾದದ ದೃಷ್ಟಿಕೋನವನ್ನು ಕೇಂದ್ರ ಹೊಂದಿದೆ. ಎಫ್ ಡಿಐ ಗೆ ಶೇ. 100ರಷ್ಟು ಅವಕಾಶ ನೀಡಿದರೆ, ದೇಶೀಯ ಪಾಲುದಾರಿಕೆ ಕಂಪನಿ ಇಲ್ಲದೆ ವಿಮಾ ವಲಯದಲ್ಲಿ ವಿದೇಶಿ ಕಂಪನಿಗಳು ಇಲ್ಲಿ ತಮ್ಮ ಅಂಗಡಿಗಳನ್ನು ತೆರೆಯಬಹುದು.

ಈಗಾಗಲೇ ವಿಮಾ ಬ್ರೋಕರೇಜ್ ಗೆ ಸಂಬಂಧಿಸಿದ ವಲಯದಲ್ಲಿ ಶೇ.100ರಷ್ಟು ಎಫ್ ಡಿಐಗೆ ಅವಕಾಶ ನೀಡಲಾಗಿದೆ. ಆದಾಗ್ಯೂ ಈ ಬ್ರೋಕರೇಜ್ ವ್ಯವಸ್ಥೆಗಳ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. ಭಾರತದ ಪ್ರಜೆಗಳಿಗೆ ಖಾಸಗಿ ವಿಮಾವಲಯದಲ್ಲಿ ಹೆಚ್ಚು ಆಸಕ್ತಿ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಕಾರಣವೇನೆಂದರೆ, ಜನರು ದೀರ್ಘಾವಧಿಯ ಉಳಿತಾಯ ಮತ್ತು ಸಾವಿನ ನಂತರ ಕುಟುಂಬಕ್ಕೆ ಲಭ್ಯವಿರುವ ಹಣಕ್ಕೆ ಸರ್ಕಾರದ ಗ್ಯಾರಂಟಿ ಹೊಂದಿರುವ ಸರ್ಕಾರಿ ವಲಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಖಾಸಗಿ ವಲಯವು ಯುವಕರನ್ನು ಗುರಿಯಾಗಿಸಿಕೊಂಡು ದಾರಿತಪ್ಪಿಸುವ ಜಾಹೀರಾತುಗಳ ಮೂಲಕ ಕೆಲವು ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಹಾಗಿದ್ದರೂ ಮಿಸ್ ಸೆಲ್ಲಿಂಗ್ ಎಂದು, ಅದು ಅವ್ಯವಹಾರ ಎಂದು ಅನೇಕ ಸಂದರ್ಭಗಳಲ್ಲಿ IRDAI ಖಾಸಗಿ ಕಂಪನಿಗಳಿಗೆ ದಂಡ ವಿಧಿಸುತ್ತಿರುವುದು ಕೂಡ ಬಹಿರಂಗವಾಗುತ್ತಿದೆ.

ಏಜೆಂಟರ ವ್ಯವಸ್ಥೆಯ ಸಂದಿಗ್ಧತೆ!

ಈಗ ಪ್ರಸ್ತಾಪಿಸಲಾದ ವಿಮಾ ಕಾನೂನುಗಳ ತಿದ್ದುಪಡಿ ಮಸೂದೆಯು ಹಲವಾರು ಅಪಾಯಕಾರಿ ಉಲ್ಲೇಖಗಳನ್ನು ಒಳಗೊಂಡಿದೆ. ವಿದೇಶಿ ವಿಮಾ ಕಂಪನಿಗಳಿಗೆ ನಿವ್ವಳ ಸ್ವಾಮ್ಯದ ನಿಧಿ(Net proprietary fund)ಯ ಅಗತ್ಯವನ್ನು 5,000 ಕೋಟಿಯಿಂದ 1,000 ಕೋಟಿಗೆ ಇಳಿಸಲು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಜೀವ ವಿಮಾ ಕಂಪನಿಯನ್ನು ಪ್ರಾರಂಭಿಸಲು 100 ಕೋಟಿಗಳ ಕನಿಷ್ಠ ಬಂಡವಾಳದ ಅಗತ್ಯವನ್ನು ಕಡಿಮೆ ಮಾಡುವ ಪ್ರಸ್ತಾಪ ಅದರಲ್ಲಿದೆ. LIC ಆಫ್ ಇಂಡಿಯಾ ಸಂಪೂರ್ಣ ಸಾರ್ವಜನಿಕ ವಲಯದ ಕಂಪನಿಯಾಗಿರುವುದರಿಂದ ನೂರು ಕೋಟಿ ರೂಪಾಯಿ ಬಂಡವಾಳ ಬೇಕಿಲ್ಲ ಎಂದರೂ ಅದರ ಮನವಿಗೆ ಕಿವಿಗೊಡದೆ, ಎಲ್ಐಸಿ ಆಫ್ ಇಂಡಿಯಾದಿಂದ 100 ಕೋಟಿ ಬಂಡವಾಳವನ್ನು ವ್ಯವಸ್ಥೆ ಮಾಡಲಾಗಿದೆ.

ವಿಮಾ ಏಜೆಂಟರು ಲೈಫ್ ಇನ್ಯೂರೆನ್ಸ್, ಜನರಲ್ ಇನ್ಯೂರೆನ್ಸ್, ಹೆಲ್ತ್ ಇನ್ಯೂರೆನ್ಸ್ ಈ ಮೂರು ಕಂಪನಿಗಳಿಗೆ ಒಂದೇ ಲೈಸನ್ಸ್ ಮೂಲಕ ಕಾರ್ಯನಿರ್ವಹಿಸಬಹುದು ಎಂದು ಮತ್ತೊಂದು ಪ್ರಸ್ತಾಪವನ್ನು ಮಾಡಲಾಗಿದೆ. ಈ ಸಂಯೋಜಿತ ಪರವಾನಗಿಯಿಂದ ಪ್ರತಿಕೂಲ (ನಷ್ಟದಾಯಕವಾದದು) ಆಯ್ಕೆ ನಡೆಯಬಹುದೆಂಬ ಕಲ್ಪನೆಗೆ ಚರಮಗೀತೆ ಹಾಡುತ್ತಿದ್ದಾರೆ. ಇದರೊಂದಿಗೆ ಏಜೆಂಟರ ವ್ಯವಸ್ಥೆಯ ಅಸ್ತಿತ್ವ ಒಂದು ಸಂದಿಗ್ಧ ಸ್ಥಿತಿಗೆ ಸಿಲುಕುವ ಭೀತಿ ಎದುರಾಗಿದೆ. ಈ ಬದಲಾವಣೆಯ ಜೊತೆಗೆ, ವಿಮಾ ಕಂಪನಿಗಳು ತಮ್ಮ ಪ್ರಧಾನ ಮಾರ್ಗದಿಂದ ವಿಮೆಯ ಜೊತೆಗೆ ಕಲ್ಪನೆಯ ನಷ್ಟ ಪರಿಹಾರ ವ್ಯವಹಾರ, ಆಸ್ತಿಪಾಸ್ತಿಗಳ ಮಾರಾಟ ಮತ್ತು ಖರೀದಿಯಂತಹ ಇತರ ವ್ಯವಹಾರಗಳನ್ನು ಸಹಾ ಮಾಡುವ ಅವಕಾಶವನ್ನು ನೀಡಲಾಗುವುದು. ಈ ಮೂಲಕ ವಿಮೆಯ ಮುಖ್ಯ ಉದ್ದೇಶ ಅಡ್ಡದಾರಿ ಹಿಡಿಯುತ್ತದೆ.

ಭೀಮ ಸುಗಮ್”

IRDAI “ಭೀಮ ಸುಗಮ್” ಹೆಸರಿನಲ್ಲಿ “ಒಂದೇ ಸ್ಥಳದಿಂದ ವಿಮಾ ಪರಿಹಾರಗಳು” (Insurance solutions from one place) ಎಂಬ ಪ್ರಸ್ತಾವನೆ ಮೂಲಕ, ವಿಮೆಯ ತತ್ವಗಳಾದ “ವಿಮೆಯ ಆಸಕ್ತಿ, ಪ್ರತಿಕೂಲ ಆಯ್ಕೆ ಮತ್ತು ಅತ್ಯಂತ ಉತ್ತಮ ನಂಬಿಕೆ” ( Insurability Interest, Adverse Selection and Utmost Good Faith) ಮುಂತಾದವುಗಳು ಸಹ ಅಪಾಯದಲ್ಲಿ ಸಿಲುಕುತ್ತವೆ. ಇಂತಹ ಸರಳೀಕರಗೊಂಡಿರುವ ವಿಧಾನಗಳು ಖಾಸಗಿ ಕಂಪನಿಗಳಿಗೆ ತಮ್ಮ ಲಾಭಕ್ಕಾಗಿ ಯಾವುದನ್ನಾದರೂ ಮಾಡುವ ಅವಕಾಶವನ್ನು ನೀಡುತ್ತವೆ. ದೀರ್ಘಕಾಲಿಕ ಒಪ್ಪಂದಗಳಿಗೆ ರೂಢಿಯಾಗಿರುವ ವಿಮಾ ವಲಯದಲ್ಲಿ, ಇಂತಹ ಉದಾರೀಕರಣ ಕ್ರಮಗಳು ಅಪಾಯಗಳನ್ನು ತಂದೊಡ್ಡುತ್ತವೆ.

ಖಾಸಗಿ ಕಂಪನಿಗಳೊಂದಿಗೆ ಸಮಸ್ಯೆಗಳು

ಖಾಸಗೀ ಕಂಪನಿಗಳಿಗೆ ಭಾರತೀಯ ವಿಮಾ ಕ್ಷೇತ್ರದ ಬಾಗಿಲು ತೆರೆದು 25 ವರ್ಷಗಳ ನಂತರವೂ ಜೀವ ವಿಮಾ ಮತ್ತು ಸಾಮಾನ್ಯ ವಿಮಾ ಕ್ಷೇತ್ರಗಳು ಸೇರಿ ಅರವತ್ತು ಕಂಪನಿಗಳನ್ನು ಮೀರಿಲ್ಲ. ಹಲವು ಖಾಸಗಿ ಕಂಪನಿಗಳಿಗೆ ಕೋಟಿಗಟ್ಟಲೆ ದಂಡ ವಿಧಿಸಲಾಗಿದೆ. ಕ್ಲೈಮ್‌ಗಳ ಪಾವತಿಯಲ್ಲಿ ವಂಚಿಸುವ ಮೂಲಕ ಫಲಾನುಭವಿಗಳಿಗೆ ಖಾಸಗಿ ಕಂಪನಿಗಳು ತೊಂದರೆ ಕೊಡುತ್ತಿರುವ ಅನೇಕ ನಿದರ್ಶನಗಳಿವೆ. ವಿಮಾ ವಲಯದ ಮೂಲಕ (ಎಲ್‌ಐಸಿ ಮತ್ತು ಜಿಐಸಿ ಸೇರಿ) ದೇಶದೊಳಗೆ ಬಂದ ಎಫ್‌ಡಿಐ 70 ಸಾವಿರ ಕೋಟಿ ಮೀರಲಿಲ್ಲ.

ಭಾರತದಲ್ಲಿ ಖಾಸಗಿ ಕಂಪನಿಗಳು ಗಳಿಸಿದ ಲಾಭವನ್ನು ಮೂರು ವರ್ಷಗಳ ಕಾಲ ಇಲ್ಲಿ ಹೂಡಿಕೆ ಮಾಡಲು ನಿಬಂಧನೆಯನ್ನು (ವಾಪಸಾತಿ ಷರತ್ತು) 2015 ರಲ್ಲಿ ಬಿಜೆಪಿ ಸರ್ಕಾರವು ತೆಗೆದುಹಾಕಿದ ನಂತರ, ವಿದೇಶಿ ಕಂಪನಿಗಳು ತಮ್ಮ ಲಾಭವನ್ನು ಯಥೇಚ್ಛವಾಗಿ ಯಾವಾಗೆಂದರೆ ಆವಾಗ ವರ್ಗಾಯಿಸುತ್ತಿವೆ. ಅಂತಹ ಅನುಭವದ ನಂತರವೂ, ಮತ್ತಷ್ಟು ಸರಳೀಕರಣವು ನಷ್ಟದಾಯಕವೇ ಆಗುತ್ತದೆ. ಇಷ್ಟಾದರೂ ಅಂತರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಒತ್ತಡ, ಭಾರತೀಯ ವಿಮಾ ಮಾರುಕಟ್ಟೆಯ ಮೇಲಿನ ವಿದೇಶಿ ಕಂಪನಿಗಳ ನಿರೀಕ್ಷೆಗಳು ಮತ್ತು ಪ್ರಸ್ತುತ ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಗಳು ವಿಮಾ ಕ್ಷೇತ್ರವನ್ನು ಹಾನಿ ಮಾಡುವ ವಿಮಾ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ತರುತ್ತಿವೆ.

ಎಲ್ಐಸಿಯಲ್ಲಿನ ಶೇ. 3.5ರಷ್ಟು ಷೇರುಗಳು ಮಾರುಕಟ್ಟೆಗೆ

ಮೇ 2022ರಲ್ಲಿ ಅಬ್ಬರದೊಂದಿಗೆ ಎಲ್ಐಸಿಯಲ್ಲಿನ ಶೇ. 3.5ರಷ್ಟು ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಆದರೆ, ಆ ನಂತರ ಎಲ್‌ಐಸಿ ಷೇರಿನ ಬೆಲೆಯು ನಿರೀಕ್ಷಿತ ಫಲಿತಾಂಶಗಳನ್ನು ತೋರಿಸಲಿಲ್ಲ. ಸೆಬಿ ನಿಯಮಗಳ ಪ್ರಕಾರ ಮುಂದಿನ ವಿನಿಯೋಗವನ್ನು ತಡೆಹಿಡಿಯುವಂತೆ ಕೇಂದ್ರ ಸರ್ಕಾರವೇ ಸೆಬಿಗೆ ಮನವಿ ಮಾಡಿ ತಡೆ ಹಿಡಿದಿತ್ತು. ಷೇರುಗಳ ವಿನಿಯೋಗದ ನಂತರ ಯಾವುದೇ ಪವಾಡಗಳು ಸಂಭವಿಸುವುದಿಲ್ಲ.

ಏಕೆಂದರೆ LIC ಅನಗತ್ಯ ಸ್ಪರ್ಧೆಯ ತತ್ವವನ್ನು ಎದುರಿಸಿ ಲಾಭ ಗಳಿಸಲು ಮುಂದಾದರೆ, ಅದರ ಮೂಲ ಉದ್ದೇಶವೇ ಬದಲಾಗಿ ಸ್ಥಳೀಯ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ವಿಮೆ ಎಂಬ ಘೋಷಣೆಯು ಪ್ರಶ್ನಾರ್ಥಕವಾಗುತ್ತದೆ. ಕೋಟಿಗಟ್ಟಲೆ ಜನರಿಗೆ ಎಲ್ಐಸಿ ಮೇಲೆ ಅಚಲವಾದ ನಂಬಿಕೆ ಇದೆ. ಏನೇ ಏರಿಳಿತಗಳು ಸಂಭವಿಸಿದರೂ ಎಲ್ ಐಸಿ ತನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ಭರವಸೆ ಇರುವುದರಿಂದ ಎಲ್ ಐಸಿ ವಿಮಾ ವಲಯದಲ್ಲಿ ಬಹಳಷ್ಟು ಪ್ರಾಬಲ್ಯ ಸಾಧಿಸುತ್ತಿದೆ. ಹಾಗಾಗಿ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂಬ ಮಂತ್ರಗಳನ್ನು ಜಪಿಸುವುದಕ್ಕಿಂತ ಹೆಚ್ಚಾಗಿ ಪಾಲುದಾರರಾಗಿರುವ ವಿಮಾ ಕ್ಷೇತ್ರದ ಆಂತರಿಕ ಸಮುದಾಯಗಳೊಂದಿಗೆ ಚರ್ಚೆಗಳು ಉತ್ತಮ ಸುಳಿವುಗಳನ್ನು ನೀಡುತ್ತವೆ.

ಇದನ್ನೂ ನೋಡಿ: Karnataka legislative assembly Day 04 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *