-ಎಸ್.ವೈ.ಗುರುಶಾಂತ್
2024 ನವೆಂಬರ್ 13 ರಂದು ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ವಿಜಯ ಭೇರಿ ಬಾರಿಸಿದ ನಂತರ ಹಲವಾರು ಕ್ಷಿಪ್ರ ರಾಜಕೀಯ ವಿದ್ಯಮಾನಗಳು ಘಟಿಸುತ್ತಿವೆ. `ಮುಡಾ’ ಹಗರಣದ ತೀವ್ರ ಇಕ್ಕಟ್ಟಿನಲ್ಲಿ ನಲುಗುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಫಲಿತಾಂಶ ಸಾರ್ವಜನಿಕವಾಗಿ ವರ್ಚಸ್ಸು ವರ್ಧಕ, ಪಕ್ಷದೊಳಗೆ ಶಕ್ತಿವರ್ಧಕ ಎಂದು ಬಿಂಬಿತವಾಗುತ್ತಿದ್ದರೆ, ಅತ್ತ ಚುನಾವಣೆಯಲ್ಲಿ ಸೋತ ಬಿಜೆಪಿಯ ಅಬ್ಬರ ತಗ್ಗಿ, ಅದರೊಳಗಿನ ಪ್ರಬಲ ಗುಂಪುಗಳ ಭಿನ್ನಾಭಿಪ್ರಾಯಗಳು ಬೀದಿಗೆ ಬಿದ್ದಿವೆ. ಗೆದ್ದ
ಜಾತಿ ಮತ್ತು ಬಿಜೆಪಿಯನ್ನು ನಂಬಿ ಸ್ಪರ್ದೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದ ಜೆಡಿಎಸ್ ಪಕ್ಷ ಸೋಲು ಅನುಭವಿಸಿ ತತ್ತರಿಸುತ್ತಾ ಕಂಡವರ ಮೇಲೆ ಕೆಂಡ ಕಾರುತ್ತಿದೆ. ಸೋಲಿನ ಅಂತರ 25,515 ಎನ್ನುವುದು ಅದಕ್ಕೆ ಇನ್ನಿಲ್ಲದ ಅಘಾತ ತಂದಿದೆ. ಬಿಜೆಪಿಯೊಂದಿಗಿನ ಅದರ ಮೈತ್ರಿ ಮತ್ತು ಎನ್ ಡಿಎ ಮೈತ್ರಿ ಮತಗಳ ವರ್ಗಾವಣೆಯನ್ನು ನಿರೀಕ್ಷಿಸಿದ್ದ ಜೆಡಿಎಸ್, ಇಂತಹ ನಂಬಿಕೆಯ ದ್ರೋಹ ಅನುಭವಿಸಬೇಕಾಗಬಹುದು ಎಂದು ಎಣಿಸಿರಲಿಲ್ಲ. ಗೆದ್ದ
ತಮ್ಮ ಕುಟುಂಬದ ಕುಡಿಗೆ ಟಿಕೆಟ್ ನೀಡಿ ತಾವೇ ಸ್ಪರ್ದಿಸುವ ತಂತ್ರವೇನೋ ಫಲಿಸಿತಾದರೂ ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋದ ಸಿ.ಪಿ. ಯೋಗೇಶ್ವರ ರನ್ನು ಮಣಿಸಲಾಗಲಿಲ್ಲ. ಜೆಡಿಎಸ್ ಪಕ್ಷದ ಹತಾಶೆಯಲ್ಲಿ ಬಿಜೆಪಿ ಪಕ್ಷದೊಳಗಿನ ಬಣಗಳ ಬಡಿದಾಟದ ದಟ್ಟ ಪರಿಣಾಮವಿದೆ. ಆದರೆ ಕೇಂದ್ರದ ಸಚಿವನಾಗಿ ತನ್ನ ಪಕ್ಷವನ್ನು ಬಲಗೊಳಿಸುವ ಭರವಸೆಯೊಂದಿಗಿನ ಮೈತ್ರಿಯೇ ಮುಳುವಾಗುವ ದಿನಗಳೂ ದೂರವಿಲ್ಲ ಅನಿಸತೊಡಗಿದೆ. ಗೆದ್ದ
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಬಲ ಕುಸಿದು ಕ್ರಮೇಣ ನಾಶವಾಗುತ್ತವೆ
ಈ ಸೋಲು ಮತ್ತು ಒಕ್ಕಲಿಗರ ಮೇಲೆ ತಮ್ಮ ಹಿಡಿತ, ನಾಯಕತ್ವ ಸಡಿಲವಾಗುತ್ತಿರುವಂತೆ ಭಾಸವಾಗುತ್ಯಿರುವ ಆ ಪಕ್ಷದ ಹಲವು ಶಾಸಕರು ಅಲ್ಲಿಂದ ಕಾಲು ಕಿತ್ತುವ ವಾಸನೆಯೂ ಹೊಡೆಯುತ್ತಿರುವುದು ಜೆಡಿಎಸ್ ನಾಯಕರನ್ನು ಇನ್ನಷ್ಟು ಕಂಗಾಲಾಗಿಸುತ್ತಿದೆ. ಜೆಡಿಎಸ್ ಸೋಲಿಸಿ ಗೆದ್ದಿರುವ ಕಾಂಗ್ರೆಸ್ ನ ಯೋಗೇಶ್ವರ್ ಆಕ್ರಮಣಕಾರಿ ಮಾತುಗಳೂ ಹೆಚ್ಚಿವೆ. ಎದುರಾಳಿ ಪಕ್ಷದ ಬಗ್ಗೆ ಟೀಕಿಸಬಹುದಾದರೂ ಬಿಜೆಪಿ-ಆರ್.ಎಸ್.ಎಸ್. ಮಂಡ್ಯದಂತಹ ಜಿಲ್ಲೆಯನ್ನೂ ಒಳಗೊಂಡು ಒಕ್ಕಲಿಗರ ನೆಲೆಯಾಗಿರುವ ದಕ್ಷಿಣ ಕರ್ನಾಟಕದಲ್ಲಿ ಬೇರೂರಲು ನಡೆಸಿರುವ ಅವಿರತ ಪ್ರಯತ್ನಗಳ ಬಗ್ಗೆ ಅರಿವಿರಲಾರದೇ ಹೋಗುವುದು ತರವಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆಯೇ ರಾಜಕೀಯ ದೃವೀಕರಣವನ್ನು ಕಾಂಗ್ರೆಸ್ ಬಯಸುವುದೂ ಕೂಡ ಅದರ ಹಿತಕ್ಕೂ ಸಹಾಯಕವಲ್ಲ.
ಈ ಮೂರು ಕ್ಷೇತ್ರಗಳಲ್ಲಿ ತಾವೇ ಗೆಲ್ಲುವುದಾಗಿ ಹೇಳುತ್ತಿದ್ದರೂ ಅದಕ್ಕೆ ಗಟ್ಟಿ ಆಧಾರಗಳಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಗೆದ್ದಿರುವುದು ಅನಿರೀಕ್ಷಿತ. ಚುನಾವಣಾ ಪೂರ್ವ ಬಹುತೇಕ ಸಮೀಕ್ಷೆಗಳು ಈ ಹಿಂದೆ ಗೆದ್ದಿರುವ ಆಯಾ ಕ್ಷೇತ್ರಗಳನ್ನು ಆಯಾ ಪಕ್ಷಗಳು ಪಡೆಯುತ್ತವೆ ಎಂಬುದನ್ನೇ ಹೇಳಿದ್ದವು. ಆದರೆ ಚುನಾವಣೆಯ ಕಾವು ಹೆಚ್ಚುತ್ತಿರುವಂತೆ ಗೆಲ್ಲಲು ಏನನ್ನಾದರೂ ಮಾಡಲೇ ಬೇಕು ಎನ್ನುವ ಸ್ಪರ್ಧೆಗೆ ಪ್ರತಿಯೊಬ್ಬರೂ ಇಳಿದ ಬಳಿಕ ಫಲಿತಾಂಶ ಹೀಗೇ ಎಂದು ನಿಖರವಾಗಿ ಹೇಳುವುದು ಸ್ವಲ್ಪ ಕಷ್ಟವಾಗಿತ್ತು. ಹೀಗಾಗಿ ಮೂರೂ ಕ್ಷೇತ್ರಗಳಲ್ಲಿ ಹತ್ತಿರದ ಹಣಾಹಣಿ ಇದೆ ಎನ್ನಲಾಗುತ್ತಿತ್ತು. ಗೆದ್ದ
ಮತದಾನ ಹತ್ತಿರವಾಗುತ್ತಿರುವಂತೆ ಸಚಿವ ಜಮೀರ್ ಅಹ್ಮದ್ ಹೆಚ್.ಡಿ.ಕೆ. ಯನ್ನು ಕಾಲಿಯಾ ಎಂದು ಕರೆದ ಮಾತುಗಳು ಒಕ್ಕಲಿಗರನ್ನು ರೊಚ್ಚಿಗೆಬ್ಬಿಸಿ ಜೆಡಿಎಸ್ ನ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ ಗಳಿಕೆಗೆ ಕಾರಣವಾಗಬಹುದು ಎಂಬ ಆತಂಕ ಸ್ವತಃ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರನ್ನು ಕಾಡಿತ್ತು. ಮತದಾನದ ಬಳಿಕ ಅದನ್ನೇ ಆಡಿದ್ದರು. ಆದರೆ ಅದು ಸಂಭವಿಸಲಿಲ್ಲ. ಕಾಂಗ್ರೆಸ್ ಗೆದ್ದದ್ದು ಜೆಡಿಎಸ್ ಮತ್ತು ಒಕ್ಕಲಿಗರ ನಡುವಿನ ನಾಯಕತ್ವದ ವಿಷಯದಲ್ಲಿ ಯಾರ ಕೈ ಮೇಲಾಯಿತು ಎಂಬುದು ಯೋಚಿಸಬೇಕಾದ ಅಂಶ. ಇಲ್ಲಿನ ಫಲಿತಾಂಶ ಡಿ.ಕೆ. ಶಿವಕುಮಾರ ಮತ್ತು ಸಹೋದರರ ಭವಿಷ್ಯದ ಮೇಲೂ ಪರಿಣಾಮ ಬೀರುವುದಾಗಿತ್ತು.
ಬಸವರಾಜ ಬೊಮ್ಮಾಯಿ ಹಿಂದೆ ಗೆಲುತ್ತಲೇ ಬಂದಿದ್ದ ಶಿಗ್ಗಾವಿ ಕ್ಷೇತ್ರದಲ್ಲಿ ಅವರ ಮಗನಿಗೆ ಟಿಕೆಟ್ ಪಡೆಯಲಾಗಿತ್ತು ಮತ್ತು ಸಹಜವಾಗಿ ಗೆಲುವು ಬರಬಹುದು ಎನ್ನುವ ನಿರೀಕ್ಷೆಯನ್ನು ಇರಿಸಿಕೊಳ್ಳಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಕ್ಕೆ ಸೇರಿದವರಾದ್ದರಿಂದ ಹಿಂದೂಗಳ ಮತಗಳ ಕ್ರೋಡೀಕರಣಗೊಂಡು ಸುಲಭವಾಗಿ ಗೆಲ್ಲಬಹುದು ಎಂಬ ಸರಳ ಲೆಕ್ಕ ಅವರಲ್ಲಿತ್ತು. ಆದರೆ ಅದು ಘಟಿಸಲಿಲ್ಲ.
ಸಂಡೂರು ಕ್ಷೇತ್ರದಲ್ಲಿಯೂ ಗಾಲಿ ಜನಾರ್ದನ ರೆಡ್ಡಿ ಅಲ್ಲಿಯೇ ತಳ ಊರಿ ಬಿಜೆಪಿ ಅಭ್ಯರ್ಥಿ ಹನುಮಂತ ಅವರಿಗೆ ಗಂಗಾವತಿಯಲ್ಲಿ ಮಾಡಿದಂತೆ ಮ್ಯಾಜಿಕ್ ಮಾಡಬಹುದು ಎಂಬ ಮಾತುಗಳು ವ್ಯಾಪಕವಾಗಿದ್ದವು. ಮೇಲಾಗಿ ಕಾಂಗ್ರೆಸ್ಸಿನ ಅಭ್ಯರ್ಥಿಯು ಹಿಂದಿನ ಶಾಸಕ, ಹಾಲಿ ಸಂಸದ ತುಕರಾಮ್ ಅವರ ಪತ್ನಿಗೆ ಟಿಕೆಟ್ ನೀಡಿರುವುದು ಬೆಳೆಯುತ್ತಿದ್ದ ಒಳ ಅತೃಪ್ತಿಯಿಂದಾಗಿ ಸೋಲಬಹುದು ಎಂಬ ನಿರೀಕ್ಷೆಗಳು ಕೆಲವರಲ್ಲಿ ಇದ್ದವು, ಅದು ಆಗಲಿಲ್ಲ. ಅಲ್ಲಿ ಕಡಿಮೆ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕರಾಮ್ ಗೆದ್ದರು. ಆದರೆ ಸಂಡೂರು ಕಾಂಗ್ರೆಸ್ಸಿಗೆ ಅತ್ಯಂತ ಪ್ರಯಾಸದ ಗೆಲುವು.
ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಲಿ ಅಥವಾ ಕಾಂಗ್ರೆಸ್ ಸರ್ಕಾರ ಕೈಗೊಂಡ ಭಾರಿ ಜನಪರ ಕೆಲಸಗಳಿಂದ ಆಥವಾ ನಾಯಕರ ವರ್ಜಿಸಿನಿಂದ ಎಂದಷ್ಠೇ ಭಾವಿಸುವುದು ತಪ್ಪಾಗುತ್ತದೆ. ಒಂದೊಂದು ಕ್ಷೇತ್ರದಲ್ಲೂ ಒಂದೊಂದು ರೀತಿಯ ಜಾತಿ-ಮತ, ಹಣ ಸಂಯೋಜನೆಗಳು ಕೆಲಸ ಮಾಡಿವೆ. ಸಂಡೂರಿನಲ್ಲಿ ಬೀಡು ಬಿಟ್ಟು ಅಲ್ಲಿಂದ ತಮ್ಮ ರಾಜಕೀಯದ ಆಟಗಳನ್ನು ಆಡಲು ನೆಲೆ ಕಂಡು ಕೊಳ್ಳಬೇಕೆಂದಿದ್ದ ಗಾಲಿ ಜನಾರ್ಧನ ರೆಡ್ಡಿಯವರ ಮತ್ತು ಅವರ ಶಿಷ್ಯ ಅಭ್ಯರ್ಥಿ ಹನುಮಂತ ಅವರ ನಕಾರಾತ್ಮಕ ಇತಿಹಾಸ ಮತ್ತು ಆಕ್ರಮಣಕಾರಿ ನಡೆಗಳು, ಅಹಂಕಾರದ ಮಾತುಗಳು ಜನರಲ್ಲಿ ಆತಂಕ ಹುಟ್ಟಿಸಿದ್ದು ನಿಜ.
ಅತ್ಯಂತ ಸಂಪಧ್ಭರಿತ ಅದಿರು, ಗಣಿಗಾರಿಕೆ ಮತ್ತು ಬೃಹತ್ ಕೈಗಾರಿಕೆಗಳಿರುವ ಹಾಗೂ ಮತ್ತಷ್ಟು ಉದ್ಯಮಗಳು ಬೆಳೆಯಬಹುದಾದ ಸಾಧ್ಯತೆಗಳಿರುವ ಸಂಡೂರು ಮತ್ತು ವಿಶೇಷವಾಗಿ ಬಳ್ಳಾರಿ ಜಿಲ್ಲೆ ಮತ್ತೊಮ್ಮೆ ಗಣಿಗಳ್ಳರ ಬಹಿರಂಗ ಆಟಾಟೋಪಗಳ ಕೇಂದ್ರವಾಗದಿರುವಂತೆ ಜನತೆ ಎಚ್ಚರ ವಹಿಸಿದ್ದಾರೆ. ವಿಶೇಷವಾಗಿ ಇಲ್ಲಿಯ ಗಣಿ ಕಂಟ್ರಾಕ್ಟರ್ ಗಳು, ಬೃಹತ್ ಕೈಗಾರಿಕೆಗಳ ಮಾಲೀಕರು ಸಹ ಅವರದೇ ಹಿತಾಸಕ್ತಿಗಳಿಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸುವ, ಬಿಜೆಪಿಯನ್ನು ಸೋಲಿಸುವುದರಲ್ಲಿ ಸಕ್ರಿಯವಾಗಿದ್ದಾರೆ. ಸಂಸದ ತುಕಾರಾಮ ಅವರಿಗೆ ಇತರೆ ಜನ ವಿಭಾಗಗಳ ಜೊತೆಗೆ ಮೇಲ್ಜಾತಿ ಮತ್ತು ಮೇಲ್ವರ್ಗದೊಂದಿಗೆ ಉತ್ತಮವಾದಂತಹ ಬಾಂಧವ್ಯ ಇರುವುದು ಸಹ ಇಲ್ಲಿ ಫಲಿತಾಂಶ ಪರವಾಗಿ ಬರಲು ಸಾಧ್ಯವಾಗಿಸಿದೆ.
ಈ ಕ್ಷೇತ್ರದಲ್ಲಿ ಹಣದ ಹುಚ್ಚು ಹೊಳೆಯನ್ನು ಎರಡು ಪಕ್ಷಗಳು ಜಿದ್ದಿಗೆ ಬಿದ್ದು ಹರಿಸಿದ್ದಾರೆ ಎನ್ನಲಾಗುತ್ತದೆ. ಬಿಜೆಪಿಯನ್ನು ಮೀರಿಸುವಂತೆ ಕಾಂಗ್ರೆಸ್ ಹಣ ಖರ್ಚು ಮಾಡಿದೆ ಹೇಳಲಾಗುತ್ತಿದೆ. ಹಿಂದೆ ತುಕಾರಾಮ್ ಅವರಿಗೆ ಬಂದಿದ್ದ ಮತಗಳು ಮತ್ತು ಗೆಲುವಿನ ಅಂತರ ಈ ಬಾರಿ ಅವರ ಪತ್ನಿ ನಿಂತಾಗ ಬಂದಿಲ್ಲ. ಇದು ಕಾಂಗ್ರೆಸ್ಸಿಗೆ ಎಚ್ಚರಿಕೆಯ ಗಂಟೆಯೂ ಹೌದು. ಜನ ತುಕಾರಾಂ ಅವರ ಒಟ್ಟು ಅವಧಿಯಲ್ಲಿ ಅನೇಕ ಭರವಸೆಗಳನ್ನುಇರಿಸಿಕೊಂಡಿದ್ದರು. ಬಹುತೇಕ ಅವು ಹಾಗೆಯೇ ಉಳಿದಿರುವಾಗ, ಈ ಗೆಲುವು ಅವರ ಸಾಧನೆಗಳಿಗೆ ಸಂದ ಫಲ ಎಂದು ಬೋಳಾಗಿ ಭಾವಿಸಿದರೆ ಅದು ಮೂರ್ಖತನವಾದೀತು.
ಹಾಗೆ ಚನ್ನಪಟ್ಟಣದಲ್ಲಿ ಬಿಜೆಪಿ ಪಕ್ಷದ ಎಲ್ಲಾ ನಾಯಕರು ಮೈತ್ರಿಕೂಟವಾದ ಜೆಡಿಎಸ್ಸಿಗೆ ಪೂರ್ಣ ಪ್ರಮಾಣದಲ್ಲಿ ಶ್ರಮಿಸಿಲ್ಲ ಎನ್ನುವುದು ವಿಶೇಷವಾಗಿ ಯಡಿಯೂರಪ್ಪನವರ ಬಣ ಜೆಡಿಎಸ್ಸಿನ ಅಭ್ಯರ್ಥಿಗೆ ಬೆಂಬಲಿಸಿದಾಗ ಆರ್.ಎಸ್.ಎಸ್. ಮತ್ತು ಬಿಜೆಪಿಯಲ್ಲಿನ ಇನ್ನೊಂದು ಬಣ ತದ್ವಿರುದ್ಧವಾಗಿ ವರ್ತಿಸಿದೆ ಎನ್ನಲಾಗುತ್ತಿದೆ. ಉಪಚುನಾವಣೆಯಲ್ಲಿ ಬಿಜೆಪಿ ಸೋತರೆ ಅದು ವಿಜಯೇಂದ್ರ ಯಡಿಯೂರಪ್ಪ ಅವರಿಗೆ ನೀಡುವ ಸರಿಯಾದ ಪೆಟ್ಟು ಎಂದು ಇನ್ನೊಂದು ಬಣ ಯೋಚಿಸಿದೆ. ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಒಳಗೊಂಡಂತೆ ಆ ಗುಂಪು ಇಲ್ಲಿ ನಿಖಿಲ್ ಗೆ ಸಹಾಯ ಮಾಡಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಚರಂಡಿ: ಕೊಳಚೆ ನೀರು ರಸ್ತೆಗೆ ಹರಿದು ದುರ್ನಾತ- ಕಂಗೆಟ್ಟ ಜನ, ಅಂಗಡಿ ಮಾಲಿಕರು
ಶಿಗ್ಗಾಂವಿ ಕ್ಷೇತ್ರದಲ್ಲಿಯೂ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿ ಕಾಂಗ್ರೆಸ್ ಗೆದ್ದಿರುವುದು ಗಮನಿಸಬೇಕಾದ ಮುಖ್ಯ ಅಂಶ. ಆದರೆ ಅಲ್ಲಿ ಕಾಂಗ್ರೆಸ್ ನಾಯಕರಲ್ಲಿ ಮೂಡಿದ ಒಗ್ಗಟ್ಟು ಮತ್ತು ಅಹಿಂದ ಮತಗಳ ಗಟ್ಟಿಯಾದ ಕ್ರೋಡೀಕರಣ, ಜೊತೆಗೆ ಪಂಚಮಸಾಲಿ ಲಿಂಗಾಯಿತರ ಬೆಂಬಲ ಕಾಂಗ್ರೆಸ್ಸಿಗೆ ಪೂರಕವಾಗಿ ಒಲಿದು ಬಂದಿರುವುದು ಕೂಡ ಗೆಲುವಿನಲ್ಲಿ ಮಹತ್ವದ ಅಂಶಗಳು ಎನ್ನಲಾಗುತ್ತಿದೆ. ಅಂತೂ ಈ ಮೂರು ಕ್ಷೇತ್ರಗಳನ್ನು ಈ ಬಾರಿ ಚುನಾವಣೆಯಲ್ಲಿ ಹಣದ ಹಂಚಿಕೆ ಅತಿರೇಕದಲ್ಲಿ ನಡೆದಿರುವುದು ದೊರೆತ ವರದಿಗಳಿಂದ ಸ್ಪಷ್ಟವಾಗುತ್ತದೆ.
ಈ ಫಲಿತಾಂಶದಿಂದ ಕಾಂಗ್ರೆಸ್ ಅತಿಯಾಗಿ ಬೀಗ ಬೇಕಾಗಿಲ್ಲ. ಇಲ್ಲಿ ಹಲವರು ಪಾಠಗಳನ್ನು ಕೂಡ ಕಲಿಯುವುದು ಇದೆ ಎನ್ನುವುದನ್ನು ಗಮನಿಸಬೇಕು. ವಿರೋಧ ಪಕ್ಷವಾಗಿರುವ ಬಿಜೆಪಿಯು ನಿರಂತರವಾಗಿ ಸಿದ್ದರಾಮಯ್ಯ ನವರ ಮೇಲೆ, ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಸರ್ಕಾರದ ಮೇಲೆ ಸತತವಾದ ದಾಳಿಯನ್ನು ನಡೆಸುತ್ತಿದೆ. ಮತ್ತು ತೀವ್ರವಾಗಿ ಅಪಪ್ರಚಾರ ನಡೆಸುತ್ತಿದೆ. ಗ್ಯಾರಂಟಿಗಳನ್ನು ಹೊರತು ಪಡಿಸಿದರೆ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೂ ಹೇಳಿಕೊಳ್ಳಬಹುದಾದ ಅತಿ ಮಹತ್ವದ ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲ.
ಭೂಮಿ, ಭೂಸ್ವಾಧೀನದ ಪ್ರಶ್ನೆಗಳು ಹಾಗೆ ಉಳಿದಿವೆ. ವಸತಿಯ ಪ್ರಶ್ನೆ ಬರೀ ಪ್ರಚಾರ. ರಾಜ್ಯದಲ್ಲಿ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿರುವುದು ಕಂಡು ಬರುತ್ತಿಲ್ಲ, ಬದಲಿಯಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ರೇಷನ್ ಕಾರ್ಡುಗಳ ನಿರ್ಬಂಧ, ರೇಷನ್ ಕಡಿತ ದಂತಹ ಅನೇಕ ಅವಾಂತರಗಳು ಜನತೆಯಲ್ಲಿ ಬೇಸರವನ್ನು ಉಂಟು ಮಾಡಿದೆ. ಇದರ ದೀರ್ಘಾವಧಿ ಪರಿಣಾಮಗಳನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ತನ್ನ ಧೋರಣೆ ಯನ್ನು ಬದಲಿಸಿಕೊಳ್ಳಬೇಕು.
ಬಿಜೆಪಿ ಬಣಗಳ ಬಡಿದಾಟದ ಹಿಂದೆ
ಈ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಸರ್ಕಾರ ಉರುಳುತ್ತದೆ ನೂರಕ್ಕೆ, 200 ಸತ್ಯ ಎಂದು ಭವಿಷ್ಯವನ್ನು ಹೇಳುತ್ತಿದ್ದ ಬಿಜೆಪಿ ನಾಯಕರೇ ಈಗ ಬಿಜೆಪಿ ಪಕ್ಷವೇ ಎರಡು ಹೋಳಾಗುವುದರತ್ತ ಸಾಗುತ್ತಿದೆ. ಮುಖ್ಯವಾಗಿ, ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರು ಚುನಾವಣೆಯ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಭಾರಿ ದಾಳಿಯನ್ನು ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಮೇಲೆ ನಡೆಸುತ್ತಿದ್ದಾರೆ. ಚುನಾವಣೆಯ ನಂತರ ಬಿಜೆಪಿ ಅದ್ಯಕ್ಷ ಬಿ.ವೈ.ವಿಜೆಯೇಂದ್ರ ಪಕ್ಷದ ನಾಯಕತ್ವದಿಂದ ಬದಲಾಗುವುದು ಖಚಿತ ಎಂದು ಘಂಟಾಘೋಷವಾಗಿ ಹೇಳುತ್ತಿದ್ದರು. ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ವಕ್ಫ್ ಆಸ್ತಿ ವಿವಾದವನ್ನು ಕೈಗೆತ್ತಿಕೊಂಡು ಯತ್ನಾಳ್ ಬೀದರ್ ನಿಂದ ರಾಜ್ಯದಲ್ಲಿ ಜಾತಾವನ್ನು ಆರಂಭಿಸಿದ್ದಾರೆ. ಮತ್ತು ಎಲ್ಲಾ ಕಡೆಗಳನ್ನು ವಿಜಯೇಂದ್ರ ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರದ ಮತ್ತು ದುರ್ವ್ಯವಹಾರಗಳ ಬಗ್ಗೆ ಸತತವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಈ ಬೆಳವಣಿಗೆಗಳಿಂದ ಕುಪಿತಗೊಂಡಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು, ಅವರ ಬಣ ಹೈಕಮಾಂಡ್ ಗೆ ದೂರನ್ನು ನೀಡಿದೆ. ಎಗ್ಗಿಲ್ಲದೇ ದಾಳಿ ನಡೆಸುತ್ತಿರುವ ಯತ್ನಾಳರನ್ನು ಉಚ್ಛಾಟಿಸಬೇಕು ಎಂದು ಒತ್ತಾಯಿಸಿದೆ. ತಮ್ಮ ಬಲವನ್ನ ತೋರಿಸಲು ಬಹುದೊಡ್ಡ ರ‍್ಯಾಲಿ ಒಂದನ್ನ ನಡೆಸಲು ಯೋಜಿಸುತ್ತಿದೆ. ಇವು ಮೇಲ್ನೋಟದಲ್ಲಿ ಎರಡು ಬಣಗಳ ಬಡಿದಾಟ ಎನ್ನುವಂತೆ ಕಂಡುಬಂದರೂ ವಾಸ್ತವದಲ್ಲಿ ಹಿಂದೆ ಪ್ರಬಲ ಹಲವರಿದ್ದಾರೆ. ಬಿಜೆಪಿಯ ಹೈಕಮಾಂಡ್ ಗೆ ಯಡಿಯೂರಪ್ಪನವರ ಬಣ ಮುಂದುವರೆಯುವುದು ಅಥವಾ ಬಲಗೊಳ್ಳುವುದು ಬೇಕಾಗಿಲ್ಲ. ಅದರಲ್ಲೂ ವಿಶೇಷವಾಗಿ ಆರ್.ಎಸ್.ಎಸ್. ನ ನಾಯಕರಿಗೆ ಖಂಡಿತವಾಗಿಯೂ ಯಡಿಯೂರಪ್ಪ ಮುಂದುವರಿಯುವುದು ಮತ್ತು ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿ ಮುಂದುವರೆಯುವುದು ಇಷ್ಟವಿಲ್ಲ.
ಸಂಸತ್ತಿನ ಚುನಾವಣೆಯಲ್ಲಿ ಇವರ ಪ್ರಭಾವ ಲಾಭ ಬೇಕಾಗಿತ್ತು. ಹೇಗಾದರೂ ಈ ಗುಂಪನ್ನು ಮೂಲೆಗೆ ತಳ್ಳಬೇಕು ಎಂದು ಸತತವಾಗಿ ಪ್ರಯತ್ನ ನಡೆಸಿಕೊಂಡು ಬಂದಿರುವ ಆರ್.ಎಸ್.ಎಸ್. ಬೆಂಬಲಿತ ಬಿಜೆಪಿ ನಾಯಕ ಗಣ ಈಗ ಅತ್ಯಂತ ಅಕ್ರಮಣಕಾರಿಯಾಗಿ ದಾಳಿಯನ್ನು ನಡೆಸುತ್ತಿದೆ. ಬಸವರಾಜ ಪಾಟೀಲ್ ಯತ್ನಾಳ್ ಮತ್ತು ಅವರ ಗುಂಪಿನ ಹಿಂದೆ ಆರ್.ಎಸ್.ಎಸ್. ನ ಆಶೀರ್ವಾದ ಇದೆ, ಇಲ್ಲವಾದರೆ ಆ ಮಟ್ಟದಲ್ಲಿ ದಾಳಿಯನ್ನು ನಡೆಸಲು ಸಾಧ್ಯವಿರಲಿಲ್ಲ. ವಿಜಯೇಂದ್ರ ಅವರ ದೂರಿನ ಬಳಿಕ ಬಿಜೆಪಿ ಹೈಕಮಾಂಡ್ ಶಿಸ್ತು ಸಮಿತಿ ಯತ್ನಾಳರಿಗೆ ಶೋಕಾಸ್ ನೋಟೀಸ್ ನೀಡಿದ್ದನ್ನು ಉಪೇಕ್ಷೆ ಮಾಡಿದರು. ದೆಹಲಿಗೆ ಮಾತುಕತೆ ಗೆ ಕರೆದರೆ ಹೋಗುವುದಿಲ್ಲ ಎಂದರು.
`ಹರಕು ಬಾಯಿ’ ಪಕ್ಷಕ್ಕೆ ಹಾನಿ ಮಾಡುತ್ತಿರುವುದರಿಂದ ಉಚ್ಛಾಟಿಸಬೇಕು ಎಂಬ ಯಡಿಯೂರಪ್ಪ ಬಣದ ಬೇಡಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅಂತಹ ಕ್ರಮ ಸರಿಯಲ್ಲ ಎಂದು ಅಮಿತ್ ಶಾ ಗೆ ಹೇಳಿದ್ದಾರಂತೆ. ಜೋಷಿಯನ್ನೇ ಮುಖ್ಯಮಂತ್ರಿ ಮಾಡಬೇಕು ಎನ್ನುವ ಯೋಜನೆ ಸಂಘಕ್ಕೆ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮೇಲೆ ಆಪರೇಷನ್ ಮಾಡಿದ ಮೇಲೆ ಮುಖ್ಯಮಂತ್ರಿ ಯಾರನ್ನು ಮಾಡಬೇಕು ಎನ್ನುವುದರ ಸುತ್ತ ಈ ಬೆಳವಣಿಗೆಗಳು ಇರಲೂಬಹುದು.
ಹೀಗಾಗಿ ಯಡ್ಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಈ ಬಣವನ್ನು ಮೂಲೆಗೆ ತಳ್ಳುವ ನಿರ್ಧಾರ ಇರುವುದು ಸ್ಪಷ್ಟ. ಹಾಗಾಗಿ ತನ್ನ ಕಾರ್ಯ ಯೋಜನೆಗೆ ಯಾರನ್ನೆಲ್ಲ ಬಳಸುವುದು ಹೇಗೆ ಇದನ್ನ ತಾರ್ಕಿಕಾಂತಕ್ಕೆ ಕೊಂಡಯುವುದು ಎನ್ನುವುದರ ಬಗ್ಗೆ ಅಂತರಂಗದಲ್ಲಿ ಕಾರ್ಯ ಯೋಜನೆ ಅಡಗಿಸಿಕೊಂಡು ಕ್ರಿಯಾ ರಂಗಕ್ಕೆ ಬಿಜೆಪಿ ನಾಯಕರು ಇಳಿದಂತಿದೆ.
ಇದನ್ನೂ ನೋಡಿ: ಶೈಲಜಾ ಟೀಚರ್ ಆತ್ಮಕತೆ ಅನುವಾದಿಸುವಾಗ ಅವರೊಟ್ಟಿಗೆ ಹೆಜ್ಜೆ ಹಾಕಿದ ಅನುಭವವಾಯಿತು Janashakthi Media