ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಬಲ ಕುಸಿದು ಕ್ರಮೇಣ ನಾಶವಾಗುತ್ತವೆ

-ಸಿ,ಸಿದ್ದಯ್ಯ

ಇತ್ತೀಚೆಗೆ ನಡೆದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಜನತಾ ದಳ (ಜ್ಯಾತ್ಯಾತೀತ) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಅದರ ನಾಯಕರು ಈ ಸೋಲಿಗೆ ಯಾವ್ಯಾವುದೋ ಕಾರಣಗಳನ್ನು ತೋರಿಸುತ್ತಿದ್ದಾರೆ. ಅವುಗಳಲ್ಲಿ ಮುಸ್ಲಿಮರು ಜೆಡಿಎಸ್ ಗೆ ಮತ ಹಾಕಲಿಲ್ಲ ಎಂಬುದೊಂದು ಕಾರಣ. ಇದು ಬಹುತೇಕ ನಿಜವೂ ಆಗಿರಬಹುದು. ಆದರೆ, ಒಮ್ಮೆ ಬಿಜೆಪಿ ಅಥವಾ ಸಂಘಪರಿವಾರದ ಜೊತೆಗೂಡಿದ, ಅದರ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡ ಯಾವ ಪಕ್ಷಗಳೂ ಮತ್ತಷ್ಟು ಬೆಳೆಯಲು ಅಥವಾ ಇರುವ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ದೇಶದಲ್ಲಿ ಹಲವಾರು ಉದಾಹರಣೆಗಳಿವೆ. ಅಂತಹ ಪಕ್ಷಗಳ ಬಲ ಕುಸಿಯುತ್ತದೆ ಅಥವಾ ಕುಸಿಯುವಂತೆ ಸಂಘಪರಿವಾರ ಮಾಡುತ್ತದೆ. ಬಿಜೆಪಿ ಅಪ್ಪುಗೆಯನ್ನು ಸಾಮಾನ್ಯವಾಗಿ ಆ ಪಕ್ಷಗಳ ಸಾವಿನ ಅಪ್ಪುಗೆಯಾಗಿ ನೋಡಲಾಗುತ್ತದೆ. ಜೆಡಿಎಸ್ ಇದಕ್ಕೆ ಹೊರತಲ್ಲ.

ಪ್ರಾದೇಶಿಕ ಪಕ್ಷಗಳ ನಾಯಕರು ಆಧಿಕಾರದ ದುರಾಸೆಗೋ ಅಥವಾ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಇಂತಹ ತನಿಖಾ ಸಂಸ್ಥೆಗಳ ದಾಳಿಯ ಮೂಲಕ ಬಿಜೆಪಿ ಬೀಸುವ ಬಲೆಗೋ ಬಿದ್ದು, ಬಿಜೆಪಿ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ತಮ್ಮ ಪಕ್ಷದ ಪ್ರಾದೇಶಿಕತೆ, ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ ರಕ್ಷಣೆಯ ಪರವಾದ ನೀತಿ ನಿಲುವುಗಳನ್ನು, ತಮ್ಮ ಜಾತ್ಯಾತೀತ ಸಿದ್ದಾಂತಗಳನ್ನು ಬಿಟ್ಟುಕೊಡಲು ಇವರು ಸಿದ್ದರಾಗುತ್ತಾರೆ.  ಇದರಿಂದ ಜನರು ಇಂತಹ ಪಕ್ಷಗಳಿಂದ ದೂರವಾಗುತ್ತಾರೆ. ಅದುವರೆಗೂ, ಅದು ಜಾತ್ಯಾತೀತ ನಿಲುವನ್ನು ಹೊಂದಿರುವ ಪಕ್ಷ, ಅದು ತಮ್ಮ ಹಿತ ಕಾಯುವ ಪಕ್ಷ ಎಂದು ನಂಬಿ, ಜೆಡಿಎಸ್ ಅನ್ನು ಬೆಂಬಲಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯವು, ಆ ಪಕ್ಷ ಹಿಂದುತ್ವವಾದಿ ಪಕ್ಷದ ಜೊತೆ ಕೈಜೋಡಿಸಿದ ನಂತರ ಸಹಜವಾಗಿಯೇ ಅದರಿಂದ ದೂರವಾಗುತ್ತಾರೆ.

ಇನ್ನು ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿ ಕಾರ್ಯಕರ್ತರು ಮನಪೂರ್ವಕವಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ. ಅದುವರೆಗೂ ಜೆಡಿಎಸ್ ಮತ್ತು ಅದರ ನಾಯಕರನ್ನು ಹೀಯಾಳಿಸಿ, ಟೀಕಿಸಿ, ಕೆಟ್ಟದಾಗಿ ಬಿಂಬಿಸಿ, ಅದರ ನಾಯಕರ ವಿರುದ್ದ ಭ್ರಷ್ಟಾಚಾರದ ಆರೋಪ ಹೊರಿಸಿ, ಜೊತೆಗೆ ಇಲ್ಲಸಲ್ಲದ ಕಥೆಗಳನ್ನು ಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದ ಸಂಘಪರಿವಾರದ ಪೋಸ್ಟ್ ಗಳನ್ನು ತಾವೂ ಹಂಚಿಕೊಂಡು ಪ್ರಚಾರ ಮಾಡುತ್ತಿದ್ದ, ಮತ್ತು ಇದನ್ನು ಪ್ರಶ್ನಿಸುವವರ ವಿರುದ್ದ ವಾಗ್ಧಾಳಿ ನಡೆಸುತ್ತಿದ್ದ ಬಿಜೆಪಿ ಅಭಿಮಾನಿಗಳು, ಈಗ ದಿಡೀರನೆ ಅಂತಹ ಪಕ್ಷ ಮತ್ತು ಅದರ ನಾಯಕರ ಪರವಾಗಿ ಪ್ರಚಾರ ಮಾಡಬೇಕು, ಅದರ ಬೆಂಬಲಕ್ಕೆ ನಿಲ್ಲಬೇಕು ಎಂದರೆ, ಅವರು ಅದನ್ನು ಮನಪೂರ್ವಕವಾಗಿ ಒಪ್ಪಲಾರರು. ಅದರಲ್ಲೂ ಆರೆಸ್ಸೆಸ್ ಕಾರ್ಯಕರ್ತರಂತೂ ಅಂತಹ ಪಕ್ಷಗಳ ಅಭ್ಯರ್ಥಿಗಳು ಸೋಲುವುದನ್ನೇ ಬಯಸುತ್ತಾರೆ. ಏಕೆಂದರೆ, ಆ ಮೈತ್ರಿ ಪಕ್ಷ ಗೆಲುವು ಸಾಧಿಸಿದರೆ, ಅದು ತಮ್ಮ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಿದರೆ, ಮುಂದಿನ ಚುನಾವಣೆಗಳಲ್ಲಿಯೂ ಆ ಕ್ಷೇತ್ರದ ಮೇಲೆ ಆ ಮೈತ್ರಿ ಪಕ್ಷ ಹಕ್ಕು ಚಲಾಯಿಸುತ್ತದೆ. ಇದರಿಂದಾಗಿ ಬಿಜೆಪಿಗೆ ಆ ಕ್ಷೇತ್ರದಲ್ಲಿ ಮುಂದೆಯೂ ಅವಕಾಶ ಸಿಗುವುದಿಲ್ಲ. ಗೆಲುವು ಅನಿವಾರ್ಯವಲ್ಲದ ಸಂದರ್ಭದಲ್ಲಿ ಮಿತ್ರ ಪಕ್ಷ ಸೋಲುವುದನ್ನು ಸಂಘಪರಿವಾರ ಬಯಸುತ್ತದೆ.

ಇದನ್ನೂ ಓದಿ: UPS ಜಾರಿ: ರಾಜ್ಯ ಸರ್ಕಾರಗಳಿಗೆ ಆರ್ಥಿಕ ಹೊರೆ

ಕಾರ್ಯಕರ್ತರಲ್ಲಿ ಕೋಮು ದ್ವೇಷ ತುಂಬುವ ಮೂಲಕ

ಮತ್ತೊಂದು ವಿಧವೆಂದರೆ, ಬಿಜೆಪಿ ಮತ್ತು ಆರೆಸ್ಸೆಸ್ ನ ಸ್ಥಳೀಯ ಕಾರ್ಯಕರ್ತರು ಹಾಗೂ ನಾಯಕರು ಮೈತ್ರಿ ಪಕ್ಷಗಳ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ, ಅವರ ಮನದಲ್ಲಿ ಕೋಮು ದ್ವೇಷ ತುಂಬುವ ಮೂಲಕ, ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮೊದಲೇ ಮೃದು ಹಿಂದುತ್ವದ ಮನೋಭಾವ ಹೊಂದಿರುವ ಬಿಜೆಪಿಯೇತರ ಪಕ್ಷಗಳ ಕಾರ್ಯಕರ್ತರ ಮನದಲ್ಲಿ ಹಿಂದುತ್ವ ಮತ್ತಷ್ಟು ಬಲಗೊಳ್ಳುತ್ತದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಜಿಡಿಎಸ್ ನ ಬಹಳಷ್ಟು ಕಾರ್ಯಕರ್ತರು ಕೋಮುವಾದಿಗಳಾಗಿ, ಹಿಂದುತ್ವವಾದಿ ಪರವಾಗಿ ಮಾತನಾಡಲು ಪ್ರಾರಂಭಿಸಿರುವುದನ್ನು ಕಾಣಬಹುದಾಗಿದೆ.

ಮುಂದಿನ ದಿನಗಳಲ್ಲಿ ಜೆಡಿಎಸ್ ಬಿಜೆಪಿಯಿಂದ ದೂರವಾದರೂ, ಜೆಡಿಎಸ್ ನ ಬಹುತೇಕ ಕಾರ್ಯಕರ್ತರು ಮತ್ತು ಬೆಂಬಲಿಗರು ಅದರಿಂದ ದೂರವಾಗಿ ಬಿಜೆಪಿ ಬೆಂಬಲಿಗರಾಗಿ ಬದಲಾಗುತ್ತಾರೆ. ಏಕೆಂದರೆ, ಜೆಡಿಎಸ್ ಅಥವಾ ಮತ್ತಾವುದೇ ಬಿಜೆಪಿಯೇತರ ಪಕ್ಷಗಳಿಗಿಂತ ಹಿಂದುತ್ವ ಪೋಷಿಸುವಲ್ಲಿ ಬಿಜೆಪಿ ಹೆಚ್ಚು ಕಾರ್ಯಶೀಲವಾಗಿರುತ್ತದೆ. ಹೀಗಾಗಿ, ಒಮ್ಮೆ ಬಿಜೆಪಿ ಅಥವಾ ಆರೆಸ್ಸೆಸ್ ಸಂಪರ್ಕಕ್ಕೆ ಬರುವ ಮೃದು ಹಿಂದುತ್ವವಾದಿಗಳು ತಮ್ಮ ಮೊದಲಿನ ಪಕ್ಷಕ್ಕಿಂತ, ಬಿಜೆಪಿಯನ್ನೇ ಹೆಚ್ಚಾಗಿ ನಂಬುತ್ತಾರೆ. ಅಧಿಕಾರ, ಹಣದ ಆಮಿಷ ಮತ್ತು ಸಿಡಿ, ಇಡಿ, ಐಟಿ, ಸಿಬಿಐ ನಂತಹ ತನಿಖಾ ಸಂಸ್ಥೆಗಳ ದಾಳಿ.. . ಹೀಗೆ ಹಲವು ಅಸ್ತ್ರಗಳ ಮೂಲಕ ಮಿತ್ರ ಪಕ್ಷಗಳ ಕೆಲವು ಹಿರಿಯ ನಾಯಕರನ್ನೂ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಈ ರೀತಿ ಜೆಡಿಎಸ್ ನ ಶಕ್ತಿ ಕ್ರಮೇಣ ಕುಂದುತ್ತಾ ಹೋಗುತ್ತದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಮತ ಪ್ರಮಾಣವು, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಶೇ. 18.30 ರಿಂದ ಶೇ. 13.29 ಕ್ಕೆ ಇಳಿದು, ಶೇ. 5.1 ರಷ್ಟು ಮತ ಕಡಿಮೆಯಾಗಿದೆ. ಹೀಗಾಗಿ, 2018ರ ವಿಧಾನಸಭಾ ಚುನಾವಣೆಯಲ್ಲಿ 36 ಸ್ಥಾನಗಳಲ್ಲಿ ಜಯ ಗಳಿಸಿದ್ದ ಜೆಡಿಎಸ್ 2023ರಲ್ಲಿ 19 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರನ್ನು ಬಿಜೆಪಿ ಚಿನ್ಹೆಯಡಿ ನಿಲ್ಲಿಸುವ ಮೂಲಕ ಆ ಕ್ಷೇತ್ರದಲ್ಲಿದ್ದ ಜೆಡಿಎಸ್ ಮತಗಳನ್ನು ಪಡೆದ ಬಿಜೆಪಿ ಲೋಕಸಭೆಯಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಂಡಿತು. ಮೈತ್ರಿಯ ಪರಿಣಾಮವಾಗಿ ಜೆಡಿಎಸ್ ಗೆ 3 ಲೋಕಸಭಾ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶ ಸಿಕ್ಕಿತಾದರೂ, ಅದು 2 ಲೋಕಸಭಾ ಸ್ಥಾನಗಳಲ್ಲಿ ಗೆದ್ದು, ಒಟ್ಟಾರೆಯಾಗಿ ಶೇ. 5.60 ಮತಗಳನ್ನು ಪಡೆದಿದೆ.

ಇದನ್ನೂ ನೋಡಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕೇರಳ ಮಾದರಿ ಜಾರಿಯಾಗಲಿ – ಡಾ. ಅನೀಲ್ Janashakthi Media

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಆರು ಸ್ಥಾನಗಳಲ್ಲಿ ಸ್ಪರ್ಧಿಸಿ, ಒಂದು ಸ್ಥಾನ ಪಡೆದು ಶೇ. 9.67ರಷ್ಟು ಮತ ಗಳಿಸಿತ್ತು.  ಅಂದರೆ, ಬಿಜೆಪಿ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡ ನಂತರದ ಲೋಕಸಭಾ ಚುನಾವಣೆಯಲ್ಲಿ ಶೇ. 4.07 ಮತಗಳನ್ನು ಜೆಡಿಎಸ್  ಕಳೆದುಕೊಂಡಿದೆ. ಕಳೆದ ಆರು ವರ್ಷಗಳಲ್ಲಿ (2018ರಿಂದ 2024) ಜೆಡಿಎಸ್ ಕಳೆದುಕೊಂಡ ಶೇಕಡಾವಾರು ಮತ ಪ್ರಮಾಣ 12.70. ಜೆಡಿಎಸ್ ಸ್ಪರ್ಧೆ ಮಾಡಿದ ಕ್ಷೇತ್ರಗಳು ಕಡಿಮೆಯಾಗಿರುವ ಕಾರಣದಿಂದ ಅದರ ಮತಗಳಿಕೆಯ ಪ್ರಮಾಣ ಕಡಿಮೆಯಾಗಿದೆ ಎಂದುಕೊಂಡರೂ, ಜೆಡಿಎಸ್ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಅದರ ಕಾರ್ಯಕರ್ತರು ಬಿಜೆಪಿ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ ಎಂಬುದಂತೂ ಸತ್ಯ. ಮುಂದಿನ ದಿನಗಳಲ್ಲಿ ಇವರೆಲ್ಲರೂ ಮರಳಿ ಜೆಡಿಎಸ್ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಖಾತರಿಯಂತೂ ಇಲ್ಲ.

ಜೆಡಿಎಸ್ ಎರಡು ಹೋಳಾಗಲಿದೆಯೇ?

ಜೆಡಿಎಸ್ ನೊಳಗಿನ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಇಂತಹ ಒಂದು ಅನುಮಾನ ಮೂಡುತ್ತದೆ. ಜೆಡಿಎಸ್ ನ ಅಧ್ಯಕ್ಷರಾಗಿದ್ದ ಸಿ.ಎಂ. ಇಬ್ರಾಹಿಂ ತಮ್ಮದೇ ನಿಜವಾದ ಜೆಡಿಎಸ್ ಎಂದು ಹೇಳುತ್ತಿದ್ದಾರೆ. ಈಗಾಗಲೇ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ಮುನಿಸಿಕೊಂಡಿರುವ ಒಕ್ಕಲಿಗ ನಾಯಕ, ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿ ಇಬ್ರಾಹಿಂ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಜಿ.ಟಿ.ದೇವೇಗೌಡ ಸೇರಿದಂತೆ ಜೆಡಿಎಸ್‌ನ 12ರಿಂದ 13ಶಾಸಕರು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯ ವಿಚಾರದಲ್ಲಿ ಬೇಸರಗೊಂಡಿದ್ದಾರೆ, ಅವರು ನೋವು ನುಂಗಿಕೊಂಡಿದ್ದಾರೆ ಎಂದು ಇಬ್ರಾಹಿಂ ಹೇಳಿದ್ದಾರೆ. ಮತ್ತೊಂದಡೆ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ಅವರು, ತಮ್ಮ ನಾಯಕರು ಒಪ್ಪಿದರೆ ಹಲವು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ತಾನು ಸಿದ್ದ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇವೆಲ್ಲಾ ಬೆಳವಣಿಗೆಗಳನ್ನು ನೋಡಿದರೆ, ಜೆಡಿಎಸ್ ಶೀಘ್ರದಲ್ಲೇ ಇಬ್ಬಾಗವಾಗುವುದು ಮತ್ತು ಕೆಲ ಶಾಸಕರಾದರೂ ಜೆಡಿಎಸ್ ತೊರೆಯುವುದು ಖಚಿತ ಎಂಬಂತೆ ಕಾಣುತ್ತಿದೆ.

ಬಿಜೆಪಿ ಜೊತೆ ಸೇರಿದ ಪಕ್ಷಗಳ ಗತಿ

ತನ್ನ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಬಲವನ್ನು ಬಿಜೆಪಿಯು ತಾನು ಪಡೆದುಕೊಳ್ಳುತ್ತದೆ. ಅದೇ ಸಮಯದಲ್ಲಿ ಅದು ತನ್ನ ದೌರ್ಬಲ್ಯಗಳನ್ನು ಮೈತ್ರಿಕೂಟದ ಬಿಜೆಪಿಯೇತರ ಪಕ್ಷಗಳ ತಲೆಯ ಮೇಲೆ ಹೊರಿಸುತ್ತದೆ ಮತ್ತು ಅವುಗಳ ಬಲವನ್ನು ಕುಗ್ಗಿಸುತ್ತದೆ. ಈ ಮೂಲಕ ಬಿಜೆಪಿ ರಾಜಕೀಯವಾಗಿ ಮತ್ತಷ್ಟು ಬಲ ಹೊಂದುತ್ತದೆ. ಬಿಜೆಪಿ ಅಪ್ಪುಗೆಯನ್ನು ಸಾಮಾನ್ಯವಾಗಿ ಸಾವಿನ ಅಪ್ಪುಗೆಯಾಗಿ ನೋಡಲಾಗುತ್ತದೆ. ಕಳೆದ 30 ವರ್ಷಗಳಲ್ಲಿ ಬಿಜೆಪಿಗೆ ಸೇರಿದ ಪಕ್ಷಗಳ ರಾಜಕೀಯ ಪ್ರಭಾವ ಕುಸಿದಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ.

ಶಿವಸೇನೆ ಮತ್ತು ಶಿರೋಮಣಿ ಅಕಾಲಿದಳ

ಬಿಜೆಪಿಯ ಆರಂಭಿಕ ಮೈತ್ರಿ ಪಕ್ಷಗಳಾದ ಶಿವಸೇನೆ ಮತ್ತು ಶಿರೋಮಣಿ ಅಕಾಲಿದಳದ ಪ್ರಸ್ತುತ ಸ್ಥಿತಿ ಏನಾಗಿದೆ ನೋಡಿ. 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ಕಾರ ರಚಿಸುವ ಹಕ್ಕು ಮಂಡಿಸುವ ಸಂದರ್ಭದಲ್ಲಿ, 15 ಸಂಸತ್ ಸದಸ್ಯರಿದ್ದ ಶಿವಸೇನೆ ಮತ್ತು 8 ಸಂಸತ್ ಸದಸ್ಯರಿದ್ದ ಶಿರೋಮಣಿ ಅಕಾಲಿದಳ ವಾಜಪೇಯಿ ಬೆಂಬಲವಾಗಿ ನಿಂತವು. ಆದರೆ, ಬಿಜೆಪಿಗೆ ಬೇರೆ ಪಕ್ಷಗಳನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಇದು, ಹೊಸ ರಾಜಕೀಯ ಮೈತ್ರಿಯಾದ ಸಂಯುಕ್ತ ರಂಗ ಸರ್ಕಾರ ರಚನೆಗೆ ನಾಂದಿ ಹಾಡಿತು. ಎಚ್. ಡಿ. ದೇವೇಗೌಡರು ಪ್ರಧಾನಿಯಾದರು. 1984ರ ಸಂಸತ್ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡವು. ಈ ಮೈತ್ರಿಯನ್ನು 1989 ರಲ್ಲಿ ಹಿಂದುತ್ವ ಬೆಂಬಲದ ವೇದಿಕೆಯಲ್ಲಿ ದೃಢಪಡಿಸಲಾಯಿತು.

ಎನ್‌ಸಿಪಿ ಮತ್ತು ಶಿವಸೇನೆ ಎರಡೂ ಪಕ್ಷಗಳನ್ನು ಒಡೆಯಿತು

1992ರಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು 92-93ರ ಮುಂಬೈ ಗಲಭೆಗಳು ಮಹಾರಾಷ್ಟ್ರದಲ್ಲಿ ಮೊದಲ ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಕಾರಣವಾಯಿತು. ಶಿವಸೇನೆಯ ಮನೋಹರ ಜೋಶಿ ಮುಖ್ಯಮಂತ್ರಿಯಾದರು. ಮಹಾರಾಷ್ಟ್ರದಲ್ಲಿ ಶಿವಸೇನೆ ಸ್ಪರ್ಧಿಸಲಿದ್ದು, ರಾಷ್ಟ್ರಮಟ್ಟದಲ್ಲಿ ಬಿಜೆಪಿ ರಾಜಕೀಯ ನಡೆ ನಿರ್ಧರಿಸಲಿದೆ ಎಂಬುದು ಅಂದಿನ ಒಪ್ಪಿತ ಸೂತ್ರವಾಗಿತ್ತು. ಆದರೆ, 2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಕೇಳಿತು. ಇದು ರಾಜಕೀಯ ಸಮೀಕರಣವನ್ನೇ ಬದಲಿಸಿತು. ರಾಜ್ಯದಲ್ಲಿ ಬಿಜೆಪಿಗೆ ಅಗ್ರಸ್ಥಾನ ನೀಡಲು ಶಿವಸೇನೆ ನಿರಾಕರಿಸಿತು. ಇದರಿಂದ ಮೈತ್ರಿ ಮುರಿದುಬಿತ್ತು.

ಶಿವಸೇನೆಯ ಪ್ರಭಾವ ಇಳಿಮುಖವಾಯಿತು. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ (ಅವಿಭಜಿತ) ಬಹುಮತ ಗಳಿಸಿ, ಬಿಜೆಪಿ ಸರ್ಕಾರ ರಚನೆ ಮಾಡಿತು. ಈ ಮೈತ್ರಿ ಹೆಚ್ಚು ಕಾಲ ಉಳಿಯಲಿಲ್ಲ, ಮತ್ತು ಶಿವಸೇನೆ ಹಿಂದೆ ಸರಿಯಿತು. ನಂತರ, ಶಿವಸೇನೆಯು ಎನ್‌ಸಿಪಿ ಮತ್ತು ಕಾಂಗ್ರೆಸ್‌ ನೊಂದಿಗೆ ‘ಮಹಾ ವಿಕಾಸ್ ಅಘಾಡಿ’(ಎಂವಿಎ) ಕೂಟ ರಚಿಸಿಕೊಂಡು ಚುನಾವಣೋತ್ತರ ಸಮ್ಮಿಶ್ರ ಸರ್ಕಾರವನ್ನು ರಚಿಸಿದಾಗ, ಬಿಜೆಪಿಯು ಎನ್‌ಸಿಪಿ ಮತ್ತು ಶಿವಸೇನೆ ಈ ಎರಡೂ ಪಕ್ಷಗಳನ್ನು ಒಡೆಯಿತು. ಅವರ ಚಿಹ್ನೆಗಳನ್ನು ನಿಷೇಧಿಸಲಾಯಿತು. ಕಳೆದ ಐದು ವರ್ಷಗಳಲ್ಲಿ ರಾಜ್ಯವು ಮೂರು ವಿಭಿನ್ನ ಮುಖ್ಯಮಂತ್ರಿಗಳನ್ನು ಕಂಡಿದೆ: ಬಿಜೆಪಿಯ ದೇವೇಂದ್ರ ಫಡ್ನವಿಸ್, ಶಿವಸೇನೆಯ (ಯುಬಿಟಿ) ಉದ್ಧವ್ ಠಾಕ್ರೆ ಮತ್ತು ಶಿವಸೇನೆಯ (ಎಸ್‌ಎಚ್‌ಎಸ್) ಏಕನಾಥ್ ಶಿಂಧೆ. 2019ರಲ್ಲಿ ಬಿಜೆಪಿ 105 ಸ್ಥಾನಗಳನ್ನು ಗಳಿಸಿತ್ತು. 2024ರಲ್ಲಿ 132 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮುಖ್ಯಮಂತ್ರಿ ಸ್ಥಾನ ಪಡೆದುಕೊಂಡಿದೆ.

ಶಿರೋಮಣಿ ಅಕಾಲಿದಳ

ಶಿರೋಮಣಿ ಅಕಾಲಿದಳ 1996 ರಿಂದ ಬಿಜೆಪಿ ನೇತೃತ್ವದ ಎನ್ ಡಿ ಎ ಸದಸ್ಯ. ಈ ಒಕ್ಕೂಟವು 2007 ರಲ್ಲಿ ಪಂಜಾಬಿನಲ್ಲಿ ಅಧಿಕಾರಕ್ಕೆ ಬಂತು. 2012ರಲ್ಲಿ ಮತ್ತೆ ಸರ್ಕಾರ ರಚನೆಯಾಯಿತು. ಆದರೆ ತನ್ನನ್ನು ತಾನು ಆತ್ಮೀಯ ಸ್ನೇಹಿತ ಮತ್ತು ರೈತರ ಬೆಂಬಲದ ಧ್ವನಿ ಎಂದು ಘೋಷಿಸಿಕೊಳ್ಳುವ ಪಕ್ಷವೂ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪರಿಚಯಿಸುವ ಮೊದಲು ಬಿಜೆಪಿಯನ್ನು ಸಂಪರ್ಕಿಸಲು ಹಿಂಜರಿಯಲಿಲ್ಲ. ಈ ಮೈತ್ರಿ 2020ರಲ್ಲಿ ಮುರಿದುಬಿತ್ತು. 2022ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, 117 ಕ್ಷೇತ್ರಗಳಲ್ಲಿ ಕೇವಲ ಮೂರು ಸ್ಥಾನಗಳನ್ನು ಪಡೆದುಕೊಂಡಿತು. ರೈತರಿಗೆ ಮಾಡಿದ ದ್ರೋಹಕ್ಕೆ ಇದು ಪ್ರತಿಫಲವಾಗಿತ್ತು. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು ಸರ್ಕಾರವನ್ನು ರಚಿಸಿದ ನಂತರ, 2024ರ ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದಿತು.

ಅಸ್ಸಾಂ ಗಣ ಪರಿಷತ್ತಿನ ಕಥೆ!

ಅಸ್ಸಾಂ ಗಣ ಪರಿಷತ್ತು (ಎಜಿಪಿ) ಬಿಜೆಪಿಯೊಂದಿಗೆ ಪರ್ಯಾಯ ಮೈತ್ರಿ ಮತ್ತು ಮುರಿದುಬಿದ್ದ ಇತಿಹಾಸವನ್ನು ಹೊಂದಿದೆ. ಎಜಿಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಸರ್ಬಾನಂದ ಸೋನಾವಾಲ್ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಅವರು ಮುಖ್ಯಮಂತ್ರಿ ಹುದ್ದೆ ಅನುಭವಿಸಿದರು. ಮೈತ್ರಿಕೂಟದ ಪ್ರಮುಖ ಅಂಗವಾಗಿದ್ದ ಎಜಿಪಿ 20 ವರ್ಷಗಳಲ್ಲಿ ತನ್ನ ಸ್ಥಾನಮಾನವನ್ನು ಕಳೆದುಕೊಂಡಿತು. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಅಸ್ಸಾಂನ 14 ಸ್ಥಾನಗಳಲ್ಲಿ ಬಿಜೆಪಿ 9 ಮತ್ತು ಎಜಿಪಿ ಒಂದರಲ್ಲಿ ಗೆಲುವು ಸಾಧಿಸಿದೆ.

ಚಿಧ್ರವಾದ ಎಐಎಡಿಎಂಕೆ

ತಮಿಳುನಾಡಿನಲ್ಲಿ ಎಐಎಡಿಎಂಕೆ ಮೂರು ಬಣಗಳಾಗಿ ಒಡೆದಿದೆ. ಇಪಿಎಸ್, ಒಪಿಎಸ್ ಮತ್ತು ಡಿಟಿವಿ ದಿನಕರನ್ ನೇತೃತ್ವದ ಎರಡು ತಂಡಗಳು ದಕ್ಷಿಣ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಅಧಿಕೃತ ತಂಡಕ್ಕೆ ಗಂಭೀರ ಸವಾಲಾಗಿದೆ. ಏಕೆಂದರೆ ಅದು ಅಧಿಕೃತ ಮಾನ್ಯತೆ ಮತ್ತು ಚುನಾವಣಾ ಚಿಹ್ನೆಯನ್ನು ಹೊಂದಿದೆ. ತಮಿಳುನಾಡಿನಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಒಂದೂ ಸ್ಥಾನವನ್ನು ಗೆಲ್ಲಲಿಲ್ಲ.

ಕ್ಷೀಣಿಸಿದ ಪಿಡಿಪಿ

ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ಭವಿಷ್ಯವು ದುಃಖಕರ ಕಥೆಯಾಗಿದೆ. ಆರ್ಟಿಕಲ್ 370 ರದ್ದತಿಗೆ ಕೆಲವು ತಿಂಗಳುಗಳ ಮೊದಲು ಬಿಜೆಪಿಯೊಂದಿಗೆ ಅಧಿಕಾರವನ್ನು ಅನುಭವಿಸಿದ ಪಿಡಿಪಿ ಈಗ ಒಂದು ಸ್ಥಾನವೂ ಇಲ್ಲದೆ ಸಂಸತ್ತಿನಿಂದ ಹೊರಹಾಕಲ್ಪಟ್ಟಿದೆ. ಇತ್ತೀಚೆಗೆ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಪಿಡಿಪಿ ಶೇ. 8.87 ಮತ ಗಳಿಸಿ ಕೇವಲ 3 ಸ್ಥಾನಗಳನ್ನು ಪಡೆದಿದೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಶೇ. 22.7 ಮತ ಪಡೆದು 28 ಸ್ಥಾನಗಳಲ್ಲಿ ಪಿಡಿಪಿ ಗೆಲುವು ಸಾಧಿಸಿತ್ತು.

ಇತರೆ ಪ್ರಾದೇಶಿಕ ಪಕ್ಷಗಳ ಇತಿಹಾಸ?

ಪ್ರಾದೇಶಿಕ ಪಕ್ಷಗಳಾದ ಬಿಜು ಜನತಾ ದಳ, ವೈಎಸ್‌ಆರ್ ಕಾಂಗ್ರೆಸ್, ಭಾರತ್ ರಾಷ್ಟ್ರ ಸಮಿತಿ ಮತ್ತು ಎಐಎಡಿಎಂಕೆ ಪಕ್ಷಗಳು ಬಿಜೆಪಿಗೆ ಸಂಖ್ಯಾತ್ಮಕ ಬೆಂಬಲ ನೀಡಿವೆ. ಅನೇಕ ತಾರತಮ್ಯ ಕಾನೂನುಗಳನ್ನು ಜಾರಿಗೆ ತರಲು ಈ ಪಕ್ಷಗಳು ಒಂದಲ್ಲಾ ಒಂದು ರೀತಿಯಲ್ಲಿ ಬಿಜೆಪಿಗೆ ಬೆಂಬಲ ನೀಡಿವೆ. ಇಂತಹ ಕಾನೂನುಗಳು ಬಿಜೆಪಿಗೆ ಒಕ್ಕೂಟ ತತ್ವವನ್ನು ದುರ್ಬಲಗೊಳಿಸಲು ಸಹಾಯ ಮಾಡಿತು. ಬಿಜೆಪಿಗೆ ರಾಜ್ಯಸಭೆಯಲ್ಲಿ ಸಾಕಷ್ಟು ಸಂಖ್ಯೆಯಿಲ್ಲದ ಕಾರಣ ಮಸೂದೆಗಳನ್ನು ಅಂಗೀಕರಿಸಲು ಈ ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಬೆಂಬಲಿಸಿದವು.

ಈ ಪಕ್ಷಗಳ ಪ್ರಸ್ತುತ ಸ್ಥಿತಿ ಹೇಗಿದೆ ಮತ್ತು ಬಿಜೆಪಿ ಅವುಗಳನ್ನು ಹೇಗೆ ನಿಭಾಯಿಸುತ್ತಿದೆ ಎಂಬುದನ್ನು ನೋಡುವುದಾದರೆ, ಯುನೈಟೆಡ್ ಜನತಾ ದಳವನ್ನು ಹೊರತುಪಡಿಸಿ, ಪ್ರಾದೇಶಿಕ ಪಕ್ಷಗಳು ಇಂದು ಜನಬೆಂಬಲ ಕಳೆದುಕೊಂಡಿವೆ. 2024ರ ಲೋಕಸಭೆಯಲ್ಲಿ ವೈಎಸ್‌ಆರ್‌ಸಿಪಿ ನಾಲ್ಕು ಸ್ಥಾನಕ್ಕೆ ಕುಸಿದಿದೆ. ಒಡಿಶಾದ ಒಟ್ಟು 21 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳನ್ನು ಗೆದ್ದಿದ್ದರೆ, ಬಿಜು ಜನತಾ ದಳ ಒಂದೂ ಸ್ಥಾನ ಗೆಲ್ಲಲಿಲ್ಲ. ತೆಲಂಗಾಣದಲ್ಲಿ ಒಟ್ಟು 17 ಸ್ಥಾನಗಳಲ್ಲಿ ಬಿಜೆಪಿಗೆ 8 ಸ್ಥಾನಗಳು, ಬಿಆರ್ ಎಸ್ ಗೆ ಇದು ಶೂನ್ಯ.  ಈ ಪಕ್ಷಗಳು ಬಿಜೆಪಿಯೊಂದಿಗಿನ ರಾಜಕೀಯ ಚೌಕಾಶಿಯ ಪ್ರತಿಫಲವಾಗಿ ಆಯಾ ರಾಜ್ಯಗಳಲ್ಲಿ ತಮ್ಮ ಬಲವನ್ನು ಕಳೆದುಕೊಳ್ಳುತ್ತಿವೆ.

ಬಿಜೆಪಿಯು ತನ್ನ ದೌರ್ಬಲ್ಯಗಳನ್ನು ಮಿತ್ರ ಪಕ್ಷಗಳ ತಲೆಯ ಮೇಲೆ ಬಿಂಬಿಸುವಾಗ ಮತ್ತು ಅವುಗಳನ್ನು ಖಾಲಿ ಮಾಡುತ್ತಲೇ, ಮೈತ್ರಿ ಮಾಡಿಕೊಂಡಿರುವ ಪಕ್ಷಗಳ ಬಲವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತದೆ. ಅದರ ಅಪ್ಪುಗೆಯನ್ನು ಸಾಮಾನ್ಯವಾಗಿ ಸಾವಿನ ಅಪ್ಪುಗೆಯಾಗಿ ನೋಡಲಾಗುತ್ತದೆ. ಇದನ್ನು ಮೀರಿ ಉಳಿದುಕೊಳ್ಳುವುದು ಅಥವಾ ಬೆಳೆಯುವುದು ಒಂದು ಸಹಾಸವೇ ಸರಿ. ಜನತಾ ದಳ (ಜಾತ್ಯಾತೀತ)ವು ಬಿಜೆಪಿಯ ಡೆತ್ ಈಟರ್‌ ಗಳಲ್ಲಿ ಬದುಕಬಹುದೇ?

ಇದನ್ನೂ ಓದಿ: ಬಂಡವಾಳಗಾರರಿಗೆ ‘ಉತ್ತೇಜನೆ’ಯ ಹೆಸರಿನಲ್ಲಿ ಹಣಕಾಸು ವರ್ಗಾವಣೆ: ನಿಜವಾಗಿ ಯಾರ ಪ್ರಯೋಜನಕ್ಕಾಗಿ?

Donate Janashakthi Media

Leave a Reply

Your email address will not be published. Required fields are marked *