ಕೌನ್‌ ಬನೇಗಾ ಮಹಾರಾಷ್ಟ್ರ ಸಿಎಂ!? | ಬಿಜೆಪಿಗೆ ಬಿಸಿ ತುಪ್ಪ

-ಗುರುರಾಜ ದೇಸಾಯಿ

ಚುನಾವಣಾ ಫಲಿತಾಂಶದಲ್ಲಿ ಗೊಂದಲಗಳಿವೆ ಎಂಬ ವಿವಾದವನ್ನು ಹೊದ್ದು ಮಲಗಿದ್ದ ಮಹಾರಾಷ್ಟ್ರ ಈಗ ಮತ್ತೆ ಸುದ್ದಿಯಲ್ಲಿದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂಬುತ್ತು ದಿನ ಕಳೆದಿದೆ.  ಆದರೆ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ  ಡಿಸೆಂಬರ್ 5ರಂದು ಪ್ರಮಾಣವಚನ ಕಾಯಕ್ರಮಕ್ಕೆ ಸಿದ್ದತೆಗಳು ನಡೆಯುತ್ತಿವೆ. ಕೌನ್‌ 

ಮಹಾರಾಷ್ಟ್ರ ಚುನಾವಣಾ ಹಲವು ಕಾರಣಗಳಿಂದಾಗಿ ಈ ಬಾರಿ ಮಹತ್ವವನ್ನು ಪಡೆದುಕೊಂಡಿತ್ತು. ಎರಡು ಪ್ರಮುಖ ಪಕ್ಷಗಳು ಇಬ್ಬಾಗಗೊಂಡ ನಂತರ, ಅಂದರೆ ಶಿವಸೇನೆ ಮತ್ತು ಎನ್‌ಸಿಪಿ ಒಂದು ತಂಡ ಮೂಲ ಪಕ್ಷದಿಂದ ಹೊರಬಂದಿದ್ದವು. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಏನಾಗಬಹುದು ಎಂಬ ಪ್ರಶ್ನೆಗಳು ಕೂಡ ಎದ್ದಿದ್ದವು. ಕೌನ್‌ 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ರಾಜ್ಯದ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗಳಿಸುವ ಮೂಲಕ ಭಾರಿ ಗೆಲುವು ಸಾಧಿಸಿದೆ. ಬಿಜೆಪಿ 132, ಶಿಂಧೆ ಬಣದ ಶಿವಸೇನೆ 57 ಮತ್ತು ಅಜೀತ್‌ ಪವಾರ್‌ ಬಣದ ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಹಾವಿಕಾಸ ಅಗಾಡಿ 49 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.  ಕೌನ್‌ 

ಇದನ್ನೂ ಓದಿ: ಮಹಾಯುತಿಯ ‘ಮಹಾ’ ವಿಜಯ ಹೇಗಾಯಿತು? ಭಾಗ-2

ಮಹಾರಾಷ್ಟ್ರ ಚುನಾವಣೆಯ ಫಲಿತಾಂಶದ ನಂತರ ಚುನಾವಣಾ ಆಯೋಗದ ಪ್ರಕ್ರಿಯೆಯ ಬಗ್ಗೆ ರಾಜಕೀಯ ತಜ್ಞರು ಹಾಗೂ ವಿರೋಧ ಪಕ್ಷಗಳು ಆಕ್ಷೇಪವನ್ನು ವ್ಯಕ್ತಪಡಿಸಿವೆ. ಮತದಾನ ಮತ್ತು ಮತ ಎಣಿಕೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ. 75 ಲಕ್ಷಕ್ಕೂ ಹೆಚ್ಚುವರಿ ಮತಗಳು ಎಲ್ಲಿಂದ ಬಂದವು ಎಂಬ ಪ್ರಶ್ನೆಗಳ ಮೂಲಕ ವಿವಾದ ಸೃಷ್ಟಿಯಾಗಿತ್ತು. ಕೌನ್‌ 

ಈ ಬಗ್ಗೆ ಇನ್ನೂ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಅಯ್ಕೆ ಮಾಡಲು ಅಸಮರ್ಥವಾಗಿರುವ ಮಹಾಯುತಿ ಮೈತ್ರಿಕೂಟ  ಮತದಾರರು ನೀಡಿದ ಜನಾದೇಶಕ್ಕೆ ಅವಮಾನ ಮಾಡುತ್ತಿದೆ ಎಂದ ಆರೋಪಗಳು ಕೇಳಿ ಬರುತ್ತಿವೆ. ಬಹುಷ: ಇದೇ ಸ್ಥಿತಿ ಕಾಂಗ್ರೆಸ್‌ ಇಲ್ಲವೇ ಇತರ ಪಕ್ಷಗಳಿಂದ ನಿರ್ಮಾಣ ಆಗಿದ್ರೆ, ಸರ್ಕಾರ ರಚನೆಗೆ ವಿಳಂಭ ಆಗಿದ್ರೆ ರಾಷ್ಟ್ರಪತಿ ಆಡಳಿತ ಹೇರುವ ಚರ್ಚೆಗಳನ್ನು ಬಿಜೆಪಿ ಆರಂಭಿಸುತ್ತಿತ್ತು. ಕೌನ್‌ 

ಸರ್ಕಾರವನ್ನು ರಚಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ,  ಪ್ರಮಾಣ ವಚನದ ದಿನಾಂಕವನ್ನು ಪ್ರಕಟಿಸಿಬಿಟ್ಟಿದೆ. ಮುಂಬೈನ ಆಜಾದ್ ಮೈದಾನದಲ್ಲಿ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಘೋಷಣೆ ಮಾಡಿದ್ದರು. ಕೌನ್‌ 

ಮುಖ್ಯಮಂತ್ರಿ ಬಿಜೆಪಿ ಪಕ್ಷದವರೇ ಆಗಿರುತ್ತಾರೆ,  ಅಜೀತ್‌ ಪವಾರ್‌ ಬಣದ ಎನ್‌ಸಿಪಿ  ಮತ್ತು ಶಿಂಧೆ ಬಣದ ಶಿವಸೇನೆಯಯಿಂದ ತಲಾ ಒಬ್ಬರಂತೆ,  ಇಬ್ಬರು ನಾಯಕರು ಉಪಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿಯ ನಾಯಕರು ಚರ್ಚೆ ಆರಂಭಿಸಿದ್ದಾರೆ. ಕೌನ್‌ 

ಮುಖ್ಯಮಂತ್ರಿ ಬಿಜೆಪಿಯವರಾಗ್ತಾರೆ ಎಂಬ ಸುದ್ದಿ ತಿಳಿದ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೋಪಗೊಂಡು ಅವರ ಸ್ವಗ್ರಾಮ ಸತಾರಾಕ್ಕೆ ತೆರಳಿದ್ದಾರೆ. ಅನಾರೋಗ್ಯದ ನೆಪ ಮಾಡಿಕೊಂಡು ಮನೆಯಲ್ಲಿದ್ದಾರೆ,  ಬಿಜೆಪಿಯ ವಿರುದ್ದ ಮುನಿಸಿಕೊಂಡಿದ್ದಾರೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ. ಏಕನಾಥ್‌ ಶಿಂದೆ ಅವರನ್ನು ಸಮಾಧಾನ ಪಡಿಸುವ ಪ್ರಯತ್ನವನ್ನು ಅಮಿತ್‌‌ ಶಾ ಮಾಡುತ್ತಿದ್ದಾರಾದರೂ, ಏಕನಾಥ್‌ ಶಿಂಧೆ ಕೋಪ ಇನ್ನೂ ಕಮ್ಮಿಯಾಗಿಲ್ಲ ಎಂಬ ವರದಿಗಳು ಲಭ್ಯವಾಗಿವೆ.

ಮೂಲಗಳ ಪ್ರಕಾರ, ಹಳೆಯ ಮತ್ತು ಹೊಸ ಮುಖಗಳ ಸಮಾನ ಮಿಶ್ರಣವನ್ನು ಹೊಂದಿರುವ 17 ಕ್ಯಾಬಿನೆಟ್ ಮಂತ್ರಿಗಳನ್ನು ಬಿಜೆಪಿ ಪಡೆಯಲಿದೆ.  ಏಕನಾಥ್ ಶಿಂಧೆ ಅವರ ಶಿವಸೇನೆಗೆ 9 ಕ್ಯಾಬಿನೆಟ್ ಸಚಿವರನ್ನು ನೀಡಬಹುದು. ಅಜಿತ್ ಪವಾರ್ ಅವರ ಎನ್‌ಸಿಪಿಗೆ 7 ಕ್ಯಾಬಿನೆಟ್ ಮಂತ್ರಿ ಸ್ಥಾನಗಳನ್ನು ನೀಡಬಹುದು ಎನ್ನಲಾಗುತ್ತಿದೆ. ಈ ಸೂತ್ರವನ್ನು ಮೂರು ಪಕ್ಷಗಳು ಒಪ್ಪಿಕೊಂಡಿದ್ದರೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಶಿಂದೆ ಬಣದ ಶಿವಸೇನೆಯ ಶಾಸಕರು ಸಿಎಂ ಪಟ್ಟ ತಮಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಇತ್ತ 132 ಶಾಸಕರನ್ನು ಹೊಂದಿರುವ ಬಿಜೆಪಿ ದೇವೇಂದ್ರ ಫಡ್ನವೀಸ್‌ರನ್ನು ಮುಖ್ಯಮಂತ್ರಿಯನ್ನಾಗಿಸಲು  ಸಿದ್ಧತೆ ಮಾಡಿಕೊಂಡಿದೆ. ಸಿಎಂ ಸ್ಥಾನಕ್ಕೆ ಬಿಜೆಪಿಯ ಇತರ ನಾಯಕರ ಹೆಸರೂ ಚಾಲ್ತಿಗೆ ಬಂದಿವೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮರಾಠ ಸಮುದಾಯದ ನಾಯಕ ವಿನೋದ್ ತಾವ್ಡೆ ಅವರು ಮುನ್ನೆಲೆಗೆ ಬಂದಿದ್ದಾರೆ. ತಾವ್ಡೆ ಅವರು ಮರಾಠ ಸಮುದಾಯಕ್ಕೆ ಸೇರಿದ ಕಾರಣ, ರಾಜ್ಯದ ಪ್ರಸ್ತುತ ಪರಿಸ್ಥಿತಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿಕಟತೆ ಹಿನ್ನೆಲೆಯಲ್ಲಿ ಅವರು ಸಿಎಂ ಆಗುವ ಸಾಧ್ಯತೆಯೂ ಇದೆ. ವಿನೋದ ತಾವ್ಡೆ ಜತೆಗೆ  ಮಾಜಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ, ಹಾಲಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನಕುಳೆ, ಸುಧೀರ್ ಮುಂಗಂಟಿವಾರ್, ಪಂಕಜಾ ಮುಂಡೆ ಅವರ ಹೆಸರುಗಳೂ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ.

ಬಿಜೆಪಿಗೆ ಈಗ ನಿಜಕ್ಕೂ ಮುಖ್ಯಮಂತ್ರಿ ಆಯ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ  ದೇವೇಂದ್ರ ಫಡ್ನವೀಸ್ ಸಿಎಂ ಆದರೆ ಮರಾಠಾ ಸಮುದಾಯದವರಿಗೆ ಸಿಟ್ಟು ಬರುವುದು ಪಕ್ಕಾ, ಇದು ಬಿಜೆಪಿಗೆ ಇಷ್ಟವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅದರ ಪರಿಣಾಮವನ್ನು ಕಂಡಿದೆ. ಮುಂದೆ ನಗರಸಭೆ ಚುನಾವಣೆ ನಡೆಯಲಿದೆ. ಹೀಗಿರುವಾಗ ಮರಾಠಾ ಸಮುದಾಯ ಸಿಟ್ಟಿಗೆದ್ದರೆ ಅದು ಬಿಜೆಪಿಗೆ ಒಳ್ಳೆಯದಲ್ಲ. ಎರಡನೆಯದಾಗಿ, ಉದ್ಧವ್‌ ಠಾಕ್ರೆ ಮತ್ತೆ ಪುಟಿದು ನಿಲ್ಲುವ ಅವಕಾಶ ಸಿಗುತ್ತದೆ ಎಂಬ ಲೆಕ್ಕಾಚಾರಗಳನ್ನು ಹಾಕುತ್ತಿದೆ. ಹಾಗಾಗಿ ಏಕನಾಥ್‌ ಶಿಂಧೆ ಇಲ್ಲವೆ ವಿನೋದ್ ತಾವ್ಡೆಯವರ ಕಡೆ ಹೈಕಮಾಂಡ್‌ ಒಲವು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ.

ಮುಖಮಂತ್ರಿ ಹುದ್ದೆ ವಿಚಾರವಾಗಿ ಎಸ್‌ ಅಥವಾ ನೋ ಹೇಳದೆ ಏಕನಾಥ ಶಿಂಧೆಯವರ ಮೌನದ ಹಿಂದೆ ಹಲವು ಲೆಕ್ಕಾಚಾರಗಳವೆ. ತಮ್ಮನ್ನು ಮುಖ್ಯಮಂತ್ರಿಯಾಗಲು ಅವಕಾಶ ನೀಡದೆ ಇದ್ದರೆ,  ಕೇಂದ್ರದ ಸಚಿವ ಸಂಪುಟದಲ್ಲಿ ತಮಗೆ ಪ್ರಮುಖ ಸ್ಥಾನ ನೀಡಬೇಕು. ಹಾಗೂ ತಮ್ಮ ಮಗ ಶ್ರೀಕಾಂತ್ ಶಿಂಧೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಹಣಕಾಸು ಮತ್ತು ಗೃಹ ಖಾತೆ ಸೇರಿದಂತೆ  9 ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಕ್ಕೆ ನೀಡಬೇಕು ಎಂದು ಏಕನಾಥ್‌ ಶಿಂಧೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತದೆ.

ಮೈತ್ರಿಕೂಟದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಏಕನಾಥ್‌ ಶಿಂಧೆಯವರ ಅಸಮಾಧಾನ ಹೊಸ ಸಮಸ್ಯೆ ಹುಟ್ಟು ಹಾಕಿದೆ. ಶಿಂಧೆ ಅವರ ಬೇಡಿಕೆಗಳಿಗೆ ಬಿಜೆಪಿ ಅವಕಾಶವನ್ನು ನೀಡಬಹುದೇ ಎಂಬುದರ ಮೇಲೆ ಮೈತ್ರಿಕೂಟದ ದೃಢತೆ ಅವಲಂಬಿಸಿದೆ. ಯಾಕೆ ಅಂದ್ರೆ ಸಣ್ಣ ಪುಟ್ಟ ಪಕ್ಷಗಳ ಸಹಾಯ ಪಡೆದ ಬಿಜೆಪಿ ಆ ಪಕ್ಷಗಳನ್ನು ನುಂಗಿ ಹಾಕುವುದು ಇಲ್ಲವೇ ಕೆಲಸವಾದ ನಂತರ ಒದೆಯುವ ಕೆಲಸವನ್ನು ಮಾಡುತ್ತಾ ಬಂದಿದೆ. ಇಲ್ಲಿಯೂ ಏಕನಾಥ್‌ ಬಣದ ಶಿವಸೇನೆಯನ್ನು ಒದೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.

ಬಿಹಾರ ಮಾದರಿ ಮಹಾರಾಷ್ಟ್ರಕ್ಕೆ ಅನ್ವಯಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲಾ ಹೇಳಿದ್ದಾರೆ. ಬಿಹಾರದಲ್ಲಿ ಬಿಜೆಪಿಯು ನಿತೀಶ್‌ರನ್ನು ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಾಡಲು ಘೋಷಣೆ ಮಾಡಿದೆ. ಆದರೆ ಬಿಹಾರದಲ್ಲಿ ಘೋಷಿಸಿದ ಹಾಗೆ ಮಹಾರಾಷ್ಟ್ರದಲ್ಲಿ ಸಾದ್ಯವಿಲ್ಲ.  ಮಹಾರಾಷ್ಟ್ರದಲ್ಲಿ ಬಿಜೆಪಿಯ ಬಲ ಹೆಚ್ಚಾಗಿದೆ. ಹಾಗಾಗಿ ಏಕನಾಥ್‌ ಸಿಂಧೆಯವರನ್ನು ಸಿಎಂ ಪಟ್ಟದತ್ತ ಸುಳಿಯದಂತೆ ನೋಡಿಕೊಳ್ಳಲಿದೆ. ಆರ್‌ಎಸ್‌ಎಸ್‌ ಮಾತುಗಳನ್ನು ಕೈಕಟ್ಟಿ ಆಲಿಸುವ ಮತ್ತು ಜಾರಿ ಮಾಡುವ ವ್ಯಕ್ತಿಗಳನ್ನು ಮುಖ್ಯಮಂತ್ರಿಯಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಆ ಕಾರಣದಿಂದ ಸಿಎಂ ಆಯ್ಕೆ ವಿಳಂಬವಾಗುತ್ತಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. 

ಈ ಎಲ್ಲಾ ಬೆಳವಣಿಗೆಗಳ ನಡುವೆ ಏಕನಾಥ್‌ ಶಿಂಧೆ ಸಮಾಧಾನ ಆಗ್ತಾರಾ? ಮೈತ್ರಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಅವರ ಬೇಡಿಕೆಗಳನ್ನು ಈಡೇರಿಸುತ್ತಾ? ಅಥವಾ ಬೇರೆ ರಾಜ್ಯಗಳಲ್ಲಿ ಪ್ರಯೋಗಿಸಿದಂತೆ, ಬಿಜೆಪಿ ಇಲ್ಲಿಯೂ ಹೊಸಬರನ್ನು ಸಿಎಂ ಮಾಡುತ್ತಾ? ಮಹಾರಾಷ್ಟ್ರದಲ್ಲಿ ಯಾರು ಸಿಎಂ ಆಗ್ತಾರೆ ಎಂಬ ರಾಜಕೀಯ ನಾಟಕಕ್ಕೆ ತೆರೆ ಬೀಳುತ್ತಾ? ಎಂಬೆಲ್ಲ ಪ್ರಶ್ನೆಗಳಿಗೆ ಡಿಸೆಂಬರ್‌ 5ರವರೆಗೆ ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *