ಬೆಂಗಳೂರು: ಎನ್.ಇ.ಪಿ ಪದವಿ ವಿದ್ಯಾರ್ಥಿಗಳಿಗೆ 2021 ರಿಂದ ಇಲ್ಲಿಯವರೆಗೆ ಅಂಕಪಟ್ಟಿ ನೀಡದಿರುವುದು ಖಂಡಿಸಿ ನವೆಂಬರ್ 28 ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಎಸ್ಎಫ್ಐ ಕರೆ ನೀಡಿದೆ ಎಂದು ರಾಜ್ಯ ಅಧ್ಯಕ್ಷರಾದ ಎನ್. ಶಿವಪ್ಪ ಮತ್ತು ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಟಿ.ಎಸ್ ತಿಳಿಸಿದ್ದಾರೆ .
ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಕರ್ನಾಟಕ ರಾಜ್ಯ ಸಮಿತಿ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಸದರಿ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 50ಲಕ್ಷಕ್ಕೂ ಅಧಿಕ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅಧ್ಯಾಯನ ಕೈಗೊಂಡಿದ್ದಾರೆ. ಅಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ ಎನ್.ಇ.ಪಿ 2021-22 ರಿಂದ ಜಾರಿಯಾಗಿದ್ದು, ಆ ಸಾಲಿನ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಇದುವರೆಗೆ ಮುದ್ರಣರೂಪದಲ್ಲಿ ನೀಡದೇ ಇರುವುದು ಖಂಡನೀಯ.
ಇದನ್ನೂ ಓದಿ : ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮತ್ತು ರುಚಿ ಇಲ್ಲದ ಊಟ ನೀಡುತ್ತಿರುವುದನ್ನು ಖಂಡಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ
ರಾಜ್ಯದಲ್ಲಿ ಸುಮಾರು 50ಲಕ್ಷಕ್ಕೂ ವಿದ್ಯಾರ್ಥಿಗಳಿಗೆ ಮುದ್ರಣಾ ಅಂಕ ಪಟ್ಟಿಯನ್ನು ಕೊಡದೆ 22ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು(ವಿಶ್ವವಿದ್ಯಾನಿಲಯ) ಬಾಕಿ ಉಳಿಸಿಕೊಂಡಿವೆ. ಸರ್ಕಾರ ಈ ಕೂಡಲೇ ಪರಿಗಣಿಸಿ ಯುಯುಎಂಎಸ್ ಸಿಸ್ಟಮ್ನ್ನು ಬದಲಾಯಿಸಿ ಮುದ್ರಣಾ ಅಂಕಪಟ್ಟಿಗಳನ್ನು ಕೂಡಲೇ ನೀಡುವಂತೆ ಕ್ರಮವಹಿಸಬೇಕು ಎಂದು ದಿನಾಂಕ: 6.11.2024 ರಂದು ಎಸ್.ಎಫ್.ಐ ಕರ್ನಾಟಕ ರಾಜ್ಯ ಸಮಿತಿ ಉನ್ನತ ಶಿಕ್ಷಣ ಮಂತ್ರಿಗಳಿಗೆ ಮನವಿ ಮಾಡಿತ್ತು. ಆದರೆ ಇದುವರೆಗೆ ಯಾವುದೆ ಪ್ರತಿಕ್ರಿಯೆ ಸರ್ಕಾರ ನೀಡಿಲ್ಲ. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಲು ಕೋರಲಾಗಿತ್ತು ಎಂದರು.
ಕರ್ನಾಟಕ ಸರ್ಕಾರದ ರಾಜ್ಯಪಾಲರು 27.12.2022ರಂದು ಎಲ್ಲ ವಿಶ್ವವಿದ್ಯಾಲಯಗಳು(ವಿಶ್ವವಿದ್ಯಾನಿಲಯಗಳು) ಕೂಡಲೆ ವಿದ್ಯಾರ್ಥಿಗಳಿಗೆ ಮುದ್ರಣ ಅಂಕಪಟ್ಟಿಯನ್ನು ನೀಡುವಂತೆ ಆದೇಶವನ್ನು ಹೊರಡಿಸಿರುವುದು ತಮಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕರ್ನಾಟಕ ಸರ್ಕಾರ ರಾಜ್ಯಪಾಲರ ಆದೇಶವನ್ನು ಗಂಭೀರವಾಗಿ ಪರಿಗಣಿಸದೆ ಮುದ್ರಣಾ ಅಂಕ ಪಟ್ಟಿಯನ್ನು ನೀಡದೆ ತಾಂತ್ರಿಕ ದೋಷಗಳ ಕಾರಣ ನೀಡಿ ತಡೆಹಿಡಿಯಲಾಗಿದೆ. ಇದನ್ನು ಸರ್ಕಾರ ವಿಶ್ವವಿದ್ಯಾಲಯಗಳ ಆಡಳಿತಗಳ ಮೇಲೆ ಬೊಟ್ಟು ಮಾಡಿ ತೋರಿಸುತ್ತಿದೆ. ಶೈಕ್ಷಣಿಕ ವಲಯದಲ್ಲಿ ಅಂಕಪಟ್ಟಿಯ ದೊಡ್ಡ ಹಗರಣಕ್ಕೆ ಇದು ಕಾರಣವಾಗುತ್ತಿದೆ ಎಂದು ಎಸ್ಎಫ್ಐ ಆರೋಪಿಸಿದೆ.
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ನೀಡಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಕರ್ನಾಟಕ ರಾಜ್ಯ ಸಮಿತಿ 28.11.2024ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ ಎಂದು ಹೇಳಿದರು.
ಇದನ್ನೂ ನೋಡಿ : ನವೆಂಬರ್ 26 ಭಾರತದ ಸಂವಿಧಾನ ದಿನ | ಈ ದಿನದ ಮಹತ್ವ, ಇತಿಹಾಸದ ಬಗ್ಗೆ ತಿಳಿಯಿರಿ Janashakthi Media