-ಸಿ.ಸಿದ್ದಯ್ಯ
2029 ಕೋಟಿ ರೂ. ಲಂಚದ ವ್ಯವಹಾರ ನಡೆಸಿರುವ ಆರೋಪದ ಮೇಲೆ ಗೌತಮ್ ಅದಾನಿ ವಿರುದ್ದ ಅಮೆರಿಕ ನ್ಯಾಯಾಲವೊಂದು ಬಂಧನದ ವಾರೆಂಟ್ ಹೊರಡಿಸಿದೆ. ಅದಾನಿ ಆಪ್ತ ಮಿತ್ರ ನರೇಂದ್ರ ಮೋದಿ ಮತ್ತು ಅದಾನಿ ನೆಚ್ಚಿನ ಪಕ್ಷ ಭಾರತೀಯ ಜನತಾ ಪಕ್ಷ ಅಡಳಿತ ನಡೆಸುತ್ತಿರುವ ಈ ಸಂದರ್ಭದಲ್ಲಿ ಸಹಸ್ರ ಕೋಟಿ ರೂ. ಮೊತ್ತದ ಲಂಚದ ಅವ್ಯವಹಾರ ನಡೆಸಿದ ಅದಾನಿಗೆ ಶಿಕ್ಷೆ ಆಗುತ್ತದೆಯೋ ಇಲ್ಲವೋ ಆದರೆ, ಈ ಲಂಚದ ವ್ಯವಹಾರವು, ವಿದ್ಯುತ್ ಗೆ ದುಬಾರಿ ದರ ವಿಧಿಸುವ ಮೂಲಕ ಜನಸಾಮಾನ್ಯರನ್ನು ನಿರಂತರ ‘ಶಿಕ್ಷೆ’ಗೆ ಗುರಿಪಡಿಸಿದೆ.
ಇದೆಂತಹ ಮಾತು ಅಂತ ಆಡ್ತೀರಿ? ಅದಾನಿ ಸಮೂಹ ಅಧಿಕಾರಿಗಳಿಗೆ ಮತ್ತು ರಾಜಕೀಯ ನಾಯಕರಿಗೆ ಸಾವಿರಾರು ಕೋಟಿ ಲಂಚ ಕೊಟ್ಟರೆ ವಿದ್ಯುತ್ ದರ ದುಬಾರಿ ಹೇಗಾಗುತ್ತದೆ? ಇಂತಹ ಪ್ರಶ್ನೆ ಮೂಡುತ್ತದಲ್ಲವೇ? ತಮ್ಮ ಕೆಲಸ ಮಾಡಿಕೊಡಲಿ ಎಂದು ಒಬ್ಬ ರೈತ ಅಥವಾ ಒಬ್ಬ ಸಾಮಾನ್ಯ ವ್ಯಕ್ತಿ ಅಧಿಕಾರಿಗಳಿಗೆ ಲಂಚ ಕೊಡುವುದೇ ಬೇರೆ. ಉದ್ಯಮಿಗಳು ಹೆಚ್ಚಿನ ಲಾಭಕ್ಕಾಗಿ ತಮ್ಮ ಯಾವುದೋ ಒಂದು ವ್ಯವಹಾರ ಕುದುರಿಸಲು ಆದಿಕಾರಿಗಳಿಗೆ, ರಾಜಕಾರಣಿಗಳಿಗೆ ಲಂಚ ಕೊಡುವುದೇ ಬೇರೆ. ಈ ಎರಡನ್ನೂ ಒಂದೇ ರೀತಿ ನೋಡಲಾಗದು.
ಉದಾಹರಣೆಗೆ ಒಬ್ಬ ರೈತ ತನ್ನ ಜಮೀನಿಗೆ ಪಹಣಿ ಪತ್ರ ಪಡೆಯಲು ಕಂದಾಯ ಇಲಾಖೆ ನೌಕರನಿಗೆ ಲಂಚ ಕೊಡುತ್ತಾರೆ ಎಂದಿಟ್ಟುಕೊಳ್ಳೋಣ. ಇಲ್ಲಿ ರೈತನಿಗಲ್ಲದೆ ಬೇರೊಬ್ಬರಿಗೆ ನಷ್ಟವಿಲ್ಲ. ಒಬ್ಬ ಹಿರಿಯ ನಾಗರಿಕ ತನಗೆ ಬರಬೇಕಾದ ವೃದ್ದಾಪ್ಯ ಪಿಂಚಣಿ ಪಡೆಯಲು ಸಂಬಂಧಪಟ್ಟ ಸರ್ಕಾರಿ ನೌಕರನಿಗೆ ಲಂಚ ಕೊಡುತ್ತಾನೆ ಎಂದಿಟ್ಟುಕೊಳ್ಳೋಣ. ಇಲ್ಲಿ ಆ ಹಿರಿಯ ನಾಗರಿಕನಿಗಲ್ಲದೆ ಬೇರೊಬ್ಬರಿಗೆ ನಷ್ಟವಿಲ್ಲ. ಇದು ಭ್ರಷ್ಟಾಚಾರ ಎಂಬುದಕ್ಕಷ್ಟೇ ಸೀಮಿತವಾಗಿರುತ್ತದೆ.
ಆದರೆ, ಒಬ್ಬ ಉದ್ಯಮಿ ಲಂಚ ಕೊಟ್ಟು, ಸರ್ಕಾರ ಅಥವಾ ಸರ್ಕಾರಿ ಒಡೆತನದ ಸಂಸ್ಥೆ/ಇಲಾಖೆ ಜೊತೆ ಯಾವುದಾದರೂ ಒಪ್ಪಂದ ಕುದುರಿಸಿದರೆ, ಈ ಲಂಚದ ವ್ಯವಹಾರದಿಂದ ಲಂಚ ಕೊಡುವ ಮತ್ತು ಲಂಚ ಪಡೆಯುವ ಇಬ್ಬರಿಗೂ ಲಾಭವಾಗುತ್ತದೆ. ಇದು ಹೇಗೆ ಎನ್ನುತ್ತೀರಾ?
“ವಿದ್ಯುತ್ ಒಪ್ಪಂದಗಳನ್ನು ಗೆಲ್ಲುವ ಮೂಲಕ 2 ಶತಕೋಟಿ ಡಾಲರ್ (ಅಂದಾಜು 16,000 ಕೋಟಿ ರೂ.) ಲಾಭ ಬರುತ್ತದೆ ಎಂದು ಅಮೆರಿಕದ ಹೂಡಿಕೆದಾರರನ್ನು ಅದಾನಿ ಸಮೂಹ ನಂಬಿಸಿದೆ” ಎಂದು ಅಮೆರಿಕಾ ಪ್ರಾಸಿಕ್ಯೂಟರ್‌ಗಳು ಆರೋಪ ಮಾಡಿದ್ದಾರೆ. ಈ 16,000 ಕೋಟಿ ಲಾಭ ಎಲ್ಲಿಂದ ಬರುತ್ತದೆ? ಇದು ಗ್ರಾಹಕರನ್ನು ಸುಲಿಗೆ ಮಾಡುವ ಮೂಲಕವೇ ಅಲ್ಲವೇ? ಅಂದರೆ, 2,000 ಕೋಟಿ ಲಂಚ ಕೊಟ್ಟು 16,000 ಕೋಟಿ ಹಣವನ್ನು ವಿದ್ಯುತ್ ಬಳಕೆದಾರರಿಂದ ಸುಲಿಗೆ ಮಾಡುತ್ತಾರೆ ಎಂದರ್ಥವಲ್ಲವೇ?
ಇದನ್ನೂ ಓದಿ: 87 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೈದ್ಯ – 14 ವರ್ಷದಿಂದ 67 ವರ್ಷಗಳ ವಯಸ್ಸಿನವರ ಮೇಲೂ ಅತ್ಯಾಚಾರ
ಗೌತಮ್ ಅದಾನಿ ಬಂಧನಕ್ಕೆ ವಾರೆಂಟ್
ಮೊದಲಿಗೆ ಅದಾನಿ ಸಮೂಹದ ಲಂಚದ ಪ್ರಕರಣ ಏನೆಂಬುದನ್ನು ನೋಡೋಣ. ಅದಾನಿ ಗ್ರೀನ್ ಎನರ್ಜಿ ಕಂಪನಿಯು ತಾನು ಸೌರಶಕ್ತಿಯಿಂದ ಉತ್ಪಾದಿಸುವ ವಿದ್ಯುತ್ ಪೂರೈಕೆ ಒಪ್ಪಂದವನ್ನು ಪಡೆದುಕೊಳ್ಳಲು ಭಾರತದ ಕೆಲವು ರಾಜ್ಯಗಳ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಅಂದಾಜು 2029 ಕೋಟಿ ಲಂಚ ಕೊಟ್ಟಿದೆ ಎಂದು ಅಮೆರಿಕದ ನ್ಯಾಯಾಲಯವೊಂದು ಆರೋಪಿಸಿದೆ. ಈ ನ್ಯಾಯಾಲಯವು ಗೌತಮ್ ಅದಾನಿ ಬಂಧನಕ್ಕೆ ವಾರೆಂಟ್ ಹೊರಡಿಸಿದೆ. ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಮಂದಿಯ ವಿರುದ್ದ ಅಮೆರಿಕದ ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಣೆ ಮಾಡಿದ್ದಾರೆ. 2020-2024 ರ ನಡುವೆ ಈ ಲಂಚದ ವ್ಯವಹಾರ ನಡೆದಿವೆ ಎಂದು ಅವರು ಆರೋಪಿಸಿದ್ದಾರೆ. ಸೌರ ವಿದ್ಯುತ್ ಯೋಜನೆಗಳಿಗಾಗಿ ಅದಾನಿ ಸಮೂಹ ವಾಸ್ತವಗಳನ್ನು ಮುಚ್ಚಿಟ್ಟು ಅಮೆರಿಕಾ ಬ್ಯಾಂಕ್‌ಗಳು ಮತ್ತು ಹೂಡಿಕೆದಾರರಿಂದ ಹಲವು ಶತಕೋಟಿ ಹಣವನ್ನು ಸಂಗ್ರಹಿಸಿದೆ. ಈ ಮೂಲಕ ಅವರಿಗೆ ಮೋಸ ಮಾಡಿದೆ. ವಿದ್ಯುತ್ ಒಪ್ಪಂದಗಳನ್ನು ಗೆಲ್ಲುವ ಮೂಲಕ 2 ಶತಕೋಟಿ ಡಾಲರ್ (ಅಂದಾಜು 16,000 ಕೋಟಿ ರೂ.) ಲಾಭ ಬರುತ್ತದೆ ಎಂದು ನಂಬಿಸಿದೆ ಎಂದು ಅದು ಆರೋಪಿಸಿದೆ.
ಏನಿದು ಪ್ರಕರಣ?
ಅಮೆರಿಕಾ ಪ್ರಾಸಿಕ್ಯೂಟರ್‌ಗಳ ಆರೋಪಗಳ ಪ್ರಕಾರ… ಭಾರತ ಸರ್ಕಾರದ ಒಡೆತನಕ್ಕೆ ಸೇರಿದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (SECI-SECI)ಗೆ 12 ಗಿಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲು ಅದಾನಿ ಗ್ರೀನ್ ಎನರ್ಜಿ ಮತ್ತು ಅಮೆರಿಕಾ ಸಂಸ್ಥೆಯು ಜಂಟಿಯಾಗಿ ಒಪ್ಪಂದವನ್ನು ಪಡೆದುಕೊಂಡಿವೆ. ಆದರೆ ಎಸ್‌ಇಸಿಐ ಗೆ ಭಾರತದಲ್ಲಿ ಸೌರ ವಿದ್ಯುತ್ ಅನ್ನು ಖರೀದಿ ಮಾಡುವವರು ಕಾಣಲಿಲ್ಲ. ಖರೀದಿದಾರರ ಕೊರತೆಯ ಕಾರಣದಿಂದ ಈ ಒಪ್ಪಂದ ಮುಂದುವರಿಯಲಿಲ್ಲ. ಇದರಿಂದಾಗಿ ಈ ಎರಡು ಕಂಪನಿಗಳು ತಾವು ನಿರೀಕ್ಷಿಸಿದ ಲಾಭವನ್ನು ಪಡೆಯಲಾಗದ ಪರಿಸ್ಥಿತಿ ನಿರ್ಮಾಣವಾಯಿತು. ಆ ಸಮಯದಲ್ಲಿ, ಅದಾನಿ ಗ್ರೂಪ್ ಮತ್ತು ಅಜೂರೆ ಪವರ್ ಜಂಟಿಯಾಗಿ ಒಂದು ಯೋಜನೆಯನ್ನು ರಚಿಸಿಕೊಂಡು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿತು. ಇದಕ್ಕೆ ಪ್ರತಿಫಲವಾಗಿ, ಎಸ್‌ಇಸಿಐ ಜೊತೆಗೆ ವಿದ್ಯುತ್ ಸರಭರಾಜು ಒಪ್ಪಂದಗಳನ್ನು ಕುದುರಿಸಲು ಆ ಅಧಿಕಾರಿಗಳು ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳನ್ನು ಒಪ್ಪಿಸಿದರು. ಈ ಎರಡು ಕಂಪನಿಗಳು ಭಾರತದ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ (2029 ಕೋಟಿ ರೂ.) ಕಾಣಿಕೆಗಳನ್ನು ನೀಡುವುದಾಗಿ ಭರವಸೆ ನೀಡಿವೆ. ಕಾಣಿಕೆಯ ಹೆಚ್ಚಿನ ಭಾಗ ಆಂಧ್ರಪ್ರದೇಶದ ಅಧಿಕಾರಿಗಳಿಗೆ ತಲುಪಿದೆ.
ಅಧಿಕಾರಿಗಳು ಒಪ್ಪಿಗೆ ನೀಡಿದ ನಂತರ ಕೆಲವು ರಾಜ್ಯದ ವಿದ್ಯುತ್ ಕಂಪನಿಗಳು ಎಸ್‌ಇಸಿಐ ಜತೆ ಒಪ್ಪಂದ ಮಾಡಿಕೊಂಡಿವೆ. ಅದರ ಭಾಗವಾಗಿ ಆ ಎರಡು ಕಂಪನಿಗಳಿಂದ ಸೌರ ವಿದ್ಯುತ್ ಖರೀದಿಸಿದರು. ಯಾರು ಯಾರಿಗೆ ಎಷ್ಟೆಷ್ಟು ಹಣ ನೀಡಬೇಕೆಂಬುದರ ಕುರಿತು ಅದಾನಿ ಗ್ರೀನ್ ಎನರ್ಜಿ ಮತ್ತು ಅಜೂರೆ ಪವರ್ ಸೇರಿ ನಿರ್ಧಾರ ಕೈಗೊಂಡಿವೆ. ಆದರೆ ಅವರು ತಮ್ಮ ಗುರುತನ್ನು ಮರೆಮಾಡಲು ಕೋಡ್ ಹೆಸರುಗಳನ್ನು ಕೂಡಾ ಬಳಸಿದ್ದಾರೆ. ಉದಾಹರಣೆಗೆ, ಗೌತಮ್ ಅದಾನಿಯನ್ನು ‘ನ್ಯೂಮೆರೋ ಯುನೊ’, ‘ದಿ ಬಿಗ್ ಮ್ಯಾನ್’ ಎಂದು ಸಂಬೋಧಿಸಿದ್ದಾರೆ. ಗುಪ್ತ ಸಂದೇಶಗಳ ಮೂಲಕ ಸಂವಹನ ನಡೆಸಲಾಗಿದೆ.
ಕಥೆ ತಿರುವು ಪಡೆದಿದ್ದು ಹೀಗೆ
ಇಲ್ಲಿಯೇ ಕಥೆ ತಿರುವು ಪಡೆಯುತ್ತದೆ. ಅಮೆರಿಕದ ಕಂಪನಿಯ ಮಾಲೀಕತ್ವ ಕೈಗಳು ಬದಲಾದಂತೆ ಗುಟ್ಟು ರಟ್ಟಾಗಿದೆ. 2019-2022ರ ನಡುವಿನ ಅವಧಿಯಲ್ಲಿ ರಂಜಿತ್ ಗುಪ್ತಾ ಅವರು ಅಜೂರೆ ಪವರ್ ಗೆ ಸಿಇಒ ಆಗಿ ವ್ಯವಹರಿಸಿದರು. 2022-23 ರಿಂದ ರೂಪೇಶ್ ಅಗರ್ವಾಲ್ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಯೋಜನೆಯಲ್ಲಿ ಭಾಗಿಯಾಗಿರುವ ಕೆಲವು ಕಂಪನಿಯ ಕಾರ್ಯನಿರ್ವಾಹಕರನ್ನು ರಾಜೀನಾಮೆ ನೀಡುವಂತೆ ಕೇಳಲಾಯಿತು. ಭರವಸೆ ನೀಡಿದ ಪ್ರಕಾರ ಕಾಣಿಕೆಗಳನ್ನು ಹೇಗೆ ತಲುಪಿಸಬೇಕು ಎಂಬ ವಿಷಯದ ಮೇಲೆ ಚರ್ಚಿಸಲು ಹಲವಾರು ಸಭೆಗಳು ನಡೆದವು. ಯೋಜನೆಯ ಮೊತ್ತವನ್ನು ಸ್ವಲ್ಪ ಸ್ವಲ್ಪ ಭಾಗಗಳಾಗಿ ವಿಭಜಿಸಿ ಅವುಗಳನ್ನು ವರ್ಗಾಯಿಸುವ ಮತ್ತು ಶುಲ್ಕದ ರೂಪದಲ್ಲಿ ಪಾವತಿ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಿದರು.
ಪಿತೂರಿಗಾರರು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು. ಕಾಣಿಕೆಗಳನ್ನು ಖಾತರಿಯ ನೆರವೇರಿಕೆಯ ಭಾಗವಾಗಿ ಅದರ ಒಂದು ಭಾಗವನ್ನು ಅದಾನಿ ಗ್ರೀನ್ ಎನರ್ಜಿ ಕಂಪನಿಗೆ ಹಿಂತಿರುಗಿಸಿದರು. ಹಣವನ್ನು ಹಿಂತಿರುಗಿಸಲು ಅವರು ಕೆಲವು ಕಾರಣಗಳನ್ನು ಸೃಷ್ಟಿಸಿದರು ಎಂದು ಅಮೆರಿಕಾ ಪ್ರಾಸಿಕ್ಯೂಟರ್‌ಗಳು ವಿವರಿಸಿದ್ದಾರೆ.
ಇದನ್ನೂ ಓದಿ: ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ; ಗ್ರಾಂಥಿಕ ಸಂವಿಧಾನ – ಸಾಂವಿಧಾನಿಕ ಆಶಯಗಳನ್ನು ಮೌಖಿಕವಾಗಿ ತಳಸಮಾಜಕ್ಕೆ ತಲುಪಿಸಬೇಕಿದೆ
ಆಂಧ್ರದ ಉನ್ನತ ಅಧಿಕಾರಿಗೆ 1,750 ಕೋಟಿ ರೂ
ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕಾ ಪ್ರಾಸಿಕ್ಯೂಟರ್‌ಗಳು ಮಾಡಿರುವ ಆರೋಪದಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಮೇ 2019 ರಿಂದ ಈ ವರ್ಷದ ಜೂನ್ ವರೆಗೆ ಆಂಧ್ರಪ್ರದೇಶ ಸರ್ಕಾರದಲ್ಲಿ ಕೆಲಸ ಮಾಡಿದ ಉನ್ನತ ಅಧಿಕಾರಿಯೊಬ್ಬರಿಗೆ ಗೌತಮ್ ಅದಾನಿ ಮತ್ತು ಅವರ ಸಹ-ಸಂಚುಕೋರರು 1,750 ಕೋಟಿ ರೂಪಾಯಿಗಳನ್ನು ‘ಭ್ರಷ್ಟ ಪಾವತಿ’ಯಾಗಿ ಒದಗಿಸಿದ್ದಾರೆ ಎಂದು ಅಮೆರಿಕಾ ಪ್ರಾಸಿಕ್ಯೂಟರ್‌ಗಳು ಬಹಿರಂಗಪಡಿಸಿದ್ದಾರೆ. ಆ ಸರ್ಕಾರಿ ಅಧಿಕಾರಿಯನ್ನು ‘ವಿದೇಶಿ ಅಧಿಕಾರಿ 1’ ಎಂದು ನ್ಯಾಯಾಲಯದ ದಾಖಲಾತಿಗಳಲ್ಲಿ ಗುರುತಿಸಲಾಗಿದೆ. ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿ)ದಿಂದ ಏಳು ಗಿಗಾವ್ಯಾಟ್ ಸೌರ ವಿದ್ಯುತ್ ಖರೀದಿಸಲು ಆಂಧ್ರದ ವಿತರಣಾ ಕಂಪನಿಗಳು ಅಂಗೀಕರಿಸಿದ್ದಕ್ಕೆ ಪ್ರತಿಫಲವಾಗಿ ಈ ಮೊತ್ತವನ್ನು ನೀಡಲಾಗಿದೆ. ಗೌತಮ್ ಅದಾನಿ ವೈಯಕ್ತಿಕವಾಗಿ ಆಂಧ್ರಪ್ರದೇಶಕ್ಕೆ ಸೇರಿದ ವಿದೇಶಿ ಅಧಿಕಾರಿ 1 ಅವರನ್ನು ಹಲವು ಬಾರಿ ಭೇಟಿಯಾದರು. ಸೆಸಿ ಮತ್ತು ಆಂಧ್ರಪ್ರದೇಶ ರಾಜ್ಯ ವಿದ್ಯುತ್ ವಿತರಣಾ ಕಂಪನಿ ನಡುವಿನ ವಿದ್ಯುತ್ ಮಾರಾಟ ಒಪ್ಪಂದವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಜಾರಿಗೆ ತರಬೇಕೆಂದು ಮನವಿ ಮಾಡಿದರು. ಅವರು ಆ ಅಧಿಕಾರಿಯನ್ನು 2021ರ ಆಗಸ್ಟ್ 7, ಸೆಪ್ಟೆಂಬರ್ 12 ಮತ್ತು ನವೆಂಬರ್ 20 ಓ ದಿನಗಳಲ್ಲಿ ಭೇಟಿಯಾದರು. ಕಾಣಿಕೆಗಳ ವ್ಯವಹಾರವನ್ನು ಮುಂದುವರೆಸಲು ಅದಾನಿಗೆ ಸೇರಿದ ನವೀಕರಿಸಬಹುದಾದ ಇಂಧನ ಅಂಗಸಂಸ್ಥೆಗಳಿಗೆ ಅನುಕೂಲವಾಗುವಂತೆ ಒಪ್ಪಂದಕ್ಕೆ ಶೀಘ್ರವಾಗಿ ಸಹಿ ಹಾಕುವುದನ್ನು ಖಚಿತಪಡಿಸಿಕೊಳ್ಳಲು ಈ ಭೇಟಿ ನಡೆದಿದೆ ಎಂದು ಅಮೆರಿಕಾ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆದರೆ, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಇನ್ನೂ ಹಲವರನ್ನೂ ಆರೋಪಿಗಳಾಗಿ ಸೇರಿಸಲಾಗಿದೆ. ಹಾಂಕಾಂಗ್‌ನಲ್ಲಿ ನೆಲೆಸಿರುವ ಅಮೆರಿಕನ್ ಹಾಗೂ ಅಮೆರಿಕದ ಕಂಪನಿಯೊಂದರಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿರುವ ಭಾರತೀಯರೂ ಈ ಪಟ್ಟಿಯಲ್ಲಿದ್ದಾರೆ. ಎಲೆಕ್ಟ್ರಾನಿಕ್ ಸಂದೇಶಗಳು ಸೇರಿದಂತೆ ವಿವಿಧ ವಿಧಾನಗಳನ್ನು ಬಳಸಿಕೊಂಡು ಒಪ್ಪಂದಗಳನ್ನು ಜಾರಿಗೊಳಿಸಲು ಸಹ-ಪ್ರತಿವಾದಿಗಳು ಭಾರತೀಯ ಅಧಿಕಾರಿಗಳನ್ನು ಪ್ರೇರೇಪಿಸಲು ಪ್ರಯತ್ನಿಸಿದರು ಎಂದು ಅಮೆರಿಕಾ ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ವಿದ್ಯುತ್ ಬೆಲೆ ಹೆಚ್ಚಳಕ್ಕೆ ಇದೂ ಒಂದು ಕಾರಣ
ಈಗ ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳದ ವಿಷಯಕ್ಕೆ ಬರೋಣ. ಅದಾನಿ ಸಮೂಹದ ಲಂಚ ಪ್ರಕರಣದಲ್ಲಿ ಅಮೆರಿಕಾ ಪ್ರಾಸಿಕ್ಯೂಟರ್‌ಗಳು ಹೆಸರಿಸಿದ ರಾಜ್ಯಗಳಲ್ಲಿ ಕರ್ನಾಟಕ ಸೇರಿಲ್ಲ. ಆದರೂ, ಅದಾನಿ ಗ್ರೀನ್ ಎನರ್ಜಿ ಜೊತೆಗಿನ ವಿದ್ಯುತ್ ಖರೀಧಿ ಒಪ್ಪಂದದಿಂದಾಗಿ ರಾಜ್ಯದ ಗ್ರಾಹಕರ ಮೇಲೆ ವಿದ್ಯುತ್ ದರ ಹೆಚ್ಚಳದ ಬರೆ ಬಿದ್ದಿರುವುದಂತೂ ಸತ್ಯ.
ಕರ್ನಾಟದಲ್ಲಿ ಅದಾನಿ ಒಡೆತನದ ಅದಾನಿ ಗ್ರೀನ್ ಎನರ್ಜಿ (adani Green Energy) ಸೋಲಾರ್ ಪ್ಲಾಂಟ್ ಮೂಲಕ ಒಟ್ಟು- 1,180 ಮೆ.ವ್ಯಾ. ಉತ್ಪನ್ನ ಮಾಡುತ್ತಿದೆ. ಪಾವಗಡ- 350 ಮೆ.ವ್ಯಾ., ಚಿತ್ರದುರ್ಗ, ಮದುವನಹಳ್ಳಿ ಮತ್ತು ಕಲ್ಲೂರ್ ತಲಾ 100 ಮೆ.ವ್ಯಾ., ರಾಮನಗರ 60 ಮೆ.ವ್ಯಾ., ಮಸ್ಕಲ್, ಹತ್ತಿಗುಡೂರು ಮತ್ತು ರಾಜೇಶ್ವರ್ ತಲಾ 50 ಮೆ.ವ್ಯಾ., ಹೊಳೆನರಸೀಪುರ, ಕೆಆರ್ ಪೆಟ್, ಪಿರಿಯಾಪಟ್ಟಣ, ಬಸವನ ಬಾಗೇವಾಡಿ, ಬ್ಯಾಡಗಿ, ಚೆನ್ನಪಟ್ಟಣ, ಗುಬ್ಬಿ, ಜೀವರ್ಗಿ, ಬಿಜಾಪುರ, ಇಂಡಿ, ಮೆದ್ದೇಬಿಹಾಳ, ಮಾಲೂರು, ಮಾಗಡಿ, ಟಿ.ನರಸೀಪುರ ಮತ್ತು ತಿಪಟೂರು ತಲಾ 20 ಮೆ.ವ್ಯಾ., ಸೋರಾಪುರ್ – 10 ಮೆ.ವ್ಯಾ., ಬಾಗಲಕೋಟೆ ಮತ್ತು ಸಿಂದಗಿ ತಲಾ 5 ಮೆ.ವ್ಯಾ. ವಿದ್ಯುತ್ ಉತ್ಪಾಧಿಸುತ್ತಿವೆ.
ಈ ವಿದ್ಯುತ್ ಅನ್ನು ಅದಾನಿ ಕಂಪನಿ ಆಯಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಒಡೆತನದ ಆಯಾ ESCOM (ವಿದ್ಯುತ್ ಸರಭರಾಜು ಸಂಸ್ಥೆಗಳು) ಗಳೊಂದಿಗೆ ವಿದ್ಯುತ್ ಖರೀದಿ ಒಪ್ಪಂದ (power purchase agreement- PPA)ಗಳನ್ನು ಮಾಡಿಕೊಂಡಿದ್ದಾರೆ. ಗ್ರೀನ್ ಎನರ್ಜಿ ಸೋಲಾರ್ ಪ್ಲಾಂಟ್ ನ ಸೌರ ವಿದ್ಯುತ್ ಯೋಜನೆಗಳಿಂದ 25 ವರ್ಷಗಳ ಅವಧಿಗೆ ಈ ಎಸ್ಕಾಂಗಳಿಂದ ವಿದ್ಯುತ್ ಖರೀದಿಸಲು, ಪ್ರತಿ ಯೂನಿಟ್ ಗೆ 4.79 ರೂಪಾಯಿಗಳಂತೆ ಖರೀದಿಸಲು ESCOMಗಳೊಂದಿಗೆ ಜೂನ್ 2016 ರಲ್ಲಿ ಪಿಪಿಎ ಮಾಡಿಕೊಳ್ಳಲಾಗಿದೆ. ಈ ಖರೀದಿ ದರ ಕಾಲಕಾಲಕ್ಕೆ ಹೆಚ್ಚಳವಾಗುತ್ತದೆ. ಪ್ರಸ್ತುತ ಗೃಹಬಳಕೆಯ ಒಂದು ಯೂನಿಟ್ ವಿದ್ಯುತ್ ಗೆ 5.90 ರೂ. ನಿಗದಿಪಡಿಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಯೂನಿಟ್ ದರದಲ್ಲಿ ಹೆಚ್ಚಳವಾಗುತ್ತದೆ. ವಾಣಿಜ್ಯ ಬಳಕೆಗೆ ದುಬಾರಿ ದರ ನಿಗದಿ ಮಾಡಲಾಗಿದೆ. ವಿದ್ಯುತ್ ಸಾಗಣೆ ಮತ್ತು ವಿತರಣೆಯ ವೆಚ್ಚ ಹಾಗೂ ಸಾಗಣೆ ಮತ್ತು ವಿತರಣೆಯ ಸಂದರ್ಭದಲ್ಲಿ ಆಗುವ ವಿದ್ಯುತ್ ನಷ್ಟಕ್ಕೆ ಎಸ್ಕಾಮ್ ಗಳೇ ಹೊಣೆಯಾಗುತ್ತವೆ.
ಈ ರೀತಿ ಆಗುವ ನಷ್ಟವನ್ನು ತುಂಬಿಕೊಳ್ಳಲು ನಮ್ಮ ವಿದ್ಯುತ್ ಸರಭರಾಜು ಸಂಸ್ಥೆಗಳು ‘’ನಿಗದಿತ ಶುಲ್ಕ ಹೆಚ್ಚಳ, ಹೆವಿ ಲೋಡ್ ದಂಡ, ಇಂದನ ಹೊಂದಾಣಿಕೆ ಶುಲ್ಕ, ಹೆಚ್ಚುವರಿ ಭದ್ರತಾ ಠೇವಣಿ (ASD) ಇತ್ಯಾದಿ ಹೆಸರಿನಲ್ಲಿ ಗ್ರಾಹಕರಿಂದ ವಸೂಲಿಗೆ ಇಳಿದಿವೆ. ವಿದ್ಯುತ್ ಖರೀದಿ ದರವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಈ ಖಾಸಗೀ ಕಂಪನಿಗಳು ಎಸ್ಕಾಮ್ ಮೇಲೆ ಒತ್ತಡ ತರುತ್ತಿವೆ.
ಖಾಸಗಿಯವರ ವಿದ್ಯುತ್ ಅನ್ನು ಸರ್ಕಾರ ಖರೀದಿಸಲೇ ಬೇಕು
ಅಷ್ಟೊಂದು ದುಬಾರಿ ದರ ಕೊಟ್ಟು ಸರ್ಕಾರ ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡುವುದೇಕೆ? ಈ ಪ್ರಶ್ನೆ ಮೂಡುತ್ತದಲ್ಲವೇ? ಇದಕ್ಕೆ ಉತ್ತರ: ಆಳುವ ಸರ್ಕಾರದ ಖಾಸಗಿಕರಣ ನೀತಿಗಳೇ ಕಾರಣ. ವಿದ್ಯುತ್ ಉತ್ಪಾದನೆ, ಸಾಗಣೆ, ವಿತರಣೆ ಸೇರಿದಂತೆ ಸಂಪೂರ್ಣವಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಬಿಟ್ಟುಕೊಡಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ. ಕೇಂದ್ರ ಸರ್ಕಾರ “ವಿದ್ಯುತ್ ತಿದ್ದುಪಡಿ ಮಸೂದೆ-2022” ತಂದಿದೆ. ವಿದ್ಯುತ್ ಉತ್ಪಾದನೆಯಲ್ಲಿ ನವೀಕರಿಸಬಹುದಾದಂತಹ ಇಂಧನದ ಉತ್ಪನ್ನದ ಕುರಿತು ಈ ಮಸೂದೆಯಲ್ಲಿ ಹೇಳಲಾಗಿದೆ. ಈ ಮಸೂದೆಯಲ್ಲಿ ಖಾಸಗಿಯವರು ಉತ್ಪಾಧಿಸಿದ ವಿದ್ಯುತ್ ಅನ್ನು ಸರ್ಕಾರ ಕೊಂಡುಕೊಳ್ಳಲೇ ಬೇಕು ಎಂಬ ಷರತ್ತು ವಿಧಿಸಲಾಗಿದೆ. ಜೊತೆಗೆ ಅವರಿಂದ ಕೊಂಡುಕೊಳ್ಳದಿದ್ದಲ್ಲಿ ಖಾಸಗಿ ಕಂಪನಿಗಳಿಗೆ ಸರ್ಕಾರವೇ ದಂಡ ಕೊಡಬೇಕು ಎಂಬ ಪ್ರಸ್ತಾಪವನ್ನು ಕೂಡ ಮಾಡಲಾಗಿದೆ. ಸರ್ಕಾರ ಉತ್ಪಾದಿಸುವ ಕಡಿಮೆ ಬೆಲೆಯ ವಿದ್ಯುತ್ ಅನ್ನು ಬಿಟ್ಟು ಖಾಸಗಿಯವರಿಂದ ದುಬಾರಿ ಬೆಲೆಯ ವಿದ್ಯುತ್ ಖರೀದಿಸಲೇಬೇಕು ಎಂಬ ಈ ಷರತ್ತುಗಳಿಂದಾಗಿ ವಿದ್ಯುತ್ ಬಳಸುವ ರೈತರು ಮತ್ತು ಇತರ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಕೇಂದ್ರ ತಂದಿರುವ ಈ ತಿದ್ದುಪಡಿ ಮಸೂದೆಯುವ ವಿದ್ಯುತ್ ಕ್ಷೇತ್ರದ ಮೇಲಿನ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.
ಪರ್ಯಾಯ ಮಾರ್ಗ ಏನಿದೆ?
ಖಾಸಗಿ ವಿದ್ಯುತ್ ಕಂಪನಿಗಳ ಜೊತೆಗೆ ಮಾಡಿಕೊಂಡಿರುವ ದುಬಾರಿ ಒಪ್ಪಂದಗಳನ್ನು ಕೈಬಿಟ್ಟು ಸರ್ಕಾರವೇ ಕಡಿಮೆ ವೆಚ್ಚದ ಜಲವಿದ್ಯುತ್ ಮತ್ತು ಉಷ್ಣವಿದ್ಯುತ್ ಉತ್ಪಾದಿಸಬೇಕು. ಸೌರ ವಿದ್ಯುತ್ ಉತ್ಪಾಧನೆಗೆ ಸರ್ಕಾರವೇ ಮುಂದಾಗಬೇಕು. ಇದರಿಂದ ಉತ್ಪಾಧನಾ ವೆಚ್ಚ ಕಡಿಮೆಯಾಗಿ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡಬಹುದು. ಇದಕ್ಕಾಗಿ ಮತ್ತು ಜನಸಾಮಾನ್ಯರನ್ನು ಸುಲಿಗೆ ಮಾಡಲು ಅವಕಾಶ ಕೊಡುವ ಖಾಸಗೀಕರಣ ನೀತಿಗಳ ವಿರುದ್ದ ದ್ವನಿ ಎತ್ತಿ ಹೋರಾಡಬೇಕಿದೆ.
ಇದನ್ನೂ ನೋಡಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media