-ಜಿ.ಎನ್.ನಾಗರಾಜ್
ಹಿಂದಿನ ಲೇಖನದಲ್ಲಿ ಕಾರ್ಮಿಕ ವರ್ಗದ ಸಾಮಾಜಿಕ ಮೂಲ ಮತ್ತು ಅದರಿಂದ ಕಾರ್ಮಿಕರ ಕಾರ್ಯಕ್ಷಮತೆ, ಉತ್ಪಾದಕತೆಯ ಮೇಲೆ, ಒಟ್ಟಾರೆ ಕೈಗಾರಿಕಾ ಬೆಳವಣಿಗೆಯ ಮೇಲೆ ಬೀರಿದ ಹಾನಿಕರ ಪರಿಣಾಮಗಳ ಬಗ್ಗೆ ಒಂದಿಷ್ಟು ವಿವರಿಸಲಾಗಿದೆ. ಅದು ಕಾರ್ಮಿಕರ ಒಗ್ಗಟ್ಟು ಮತ್ತು ಚಳುವಳಿಯನ್ನು ಕುಂದಿಸಿರುವ ಬಗ್ಗೆ ವಿಶ್ಲೇಷಿಸಲಾಗಿದೆ. ಈ ಲೇಖನದಲ್ಲಿ ಬಂಡವಾಳದ ಉಗಮ ಮತ್ತು ಅದಕ್ಕಿರುವ ಜಾತಿಯ ತಳಹದಿಯನ್ನು ಸವಿವರವಾಗಿ ವಿವರಿಸಲಾಗಿದೆ. ಓದಿ. ಟಾಟಾ
ಭಾರತದಲ್ಲಿ ಯಾವುದೇ ಸಾಮಾಜಿಕ ಬೆಳವಣಿಗೆ ಜಾತಿ ವ್ಯವಸ್ಥೆಯ ಪರಿಣಾಮಗಳಿಂದ ದೂರವಿರಲು ಸಾಧ್ಯವೇ? ಅದು ಭಾರತದ ವಿಶೇಷ ವಿಶಿಷ್ಟತೆಯಲ್ಲವೇ!
ಭಾರತದಲ್ಲಿ ಯಾರ ಪರಿಚಯವಾದರೂ, ಯಾರ ಹೆಸರು ಕೇಳಿದರೂ ಬಹುಸಂಖ್ಯೆಯ ಜನ ಇವರು ಯಾವ ಜಾತಿ ಎಂದು ಪ್ರಕಟವಾಗಿಯೇ ಕೇಳುತ್ತಾರೆ, ಹಾಗೆ ಕೇಳಲಾಗದಿದ್ದರೆ ತಿಳಿದುಕೊಳ್ಳಲು ಚಡಪಡಿಸುತ್ತಾರೆ.
ನಮ್ಮ ರಾಜಕಾರಣಿಗಳಂತೂ ಬಹಿರಂಗವಾಗಿ ತಮ್ಮ ಜಾತಿಯನ್ನು ಡಂಗುರ ಹೊಡೆಯುತ್ತಾ ಅದನ್ನೇ ತಮ್ಮ ಯಶಸ್ಸಿನ ಅಡಿಪಾಯ ಮಾಡಿಕೊಂಡಿದ್ದಾರೆ.
ಆದರೆ ಸ್ವಾತಂತ್ರ್ಯಾ ನಂತರದ ದಶಕಗಳ ಕಾಲ ಹಲವರ ಜಾತಿ ತಿಳಿಯುತ್ತಿರಲಿಲ್ಲ. ಆಗ ಕೆಲವರಂತೂ ಆ ಬಗ್ಗೆ ದೊಡ್ಡ ಸಂಶೋಧನೆಯನ್ನೇ ಆರಂಭಿಸುತ್ತಿದ್ದರು. ಇಂತಹ ಹಲವು ಕುತೂಹಲಕಾರಿ ಸಂಶೋಧನಾ ವಿಧಾನಗಳೂ ಕಂಡು ಹಿಡಿಯಲ್ಪಟ್ಟಿವೆ. ಅದರಲ್ಲೂ ಸರ್ಕಾರಿ ಕೆಲಸ, ಕಾಲೇಜು, ವಿಶ್ವ ವಿದ್ಯಾಲಯಗಳಿಗೆ ಪ್ರವೇಶ ಇಂತಹ ಸಮಯದಲ್ಲಿ ಈ ಶೋಧ ತಾರಕಕ್ಕೇರುತ್ತದೆ. ಅದರಲ್ಲಿ ಅತಿ ಅಸಹ್ಯಕರವಾದುದೊಂದು, ನನ್ನ ಕಣ್ಣೆದುರೇ ನಡೆದದ್ದು ಹೀಗೆ: ಒಂದು ಉತ್ತಮ ಸರ್ಕಾರಿ ಹುದ್ದೆಗೆ ಸಂದರ್ಶನ ನಡೆಯುತ್ತಿದೆ. ಅದರಲ್ಲಿ ಪಟ್ಟಿಯಲ್ಲಿ ಮೇಲಿದ್ದ ಒಬ್ಬ ಅಭ್ಯರ್ಥಿಯ ಜಾತಿ, ಅವರ ದಾಖಲಾತಿಗಳಿಂದ ಗೊತ್ತಾಗುವಂತೆ ಇರಲಿಲ್ಲ.
ಇದನ್ನೂ ಓದಿ: ಟಾಟಾ ಸಾಮ್ರಾಜ್ಯದ ಬೆಳವಣಿಗೆ | ಬ್ರಿಟನ್ ಮತ್ತು ಭಾರತದಲ್ಲಿ ಬಂಡವಾಳದ ಉಗಮ, ಕಾರ್ಮಿಕ ವರ್ಗದ ಉದಯ – ಭಾಗ 3
ಆ ನೇಮಕಾತಿ ಸಮಿತಿಯ ಒಬ್ಬ ಸದಸ್ಯರಿಗೆ ಅವರ ಜಾತಿ ತಿಳಿದುಕೊಳ್ಳಲೇಬೇಕು ಎನಿಸಿತು. ಅದನ್ನು ತಿಳಿದುಕೊಳ್ಳಲು ತಮ್ಮ ಸಹಾಯಕನೊಬ್ಬನಿಗೆ ಹೇಳಿದರು. ಆ ವ್ಯಕ್ತಿ ಅಭ್ಯರ್ಥಿಯ ಬಳಿ ಅವರ ಹಲವು ವಿವರಗಳನ್ನು ಕೇಳಿ ಅದನ್ನು ತಿಳಿದುಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಒಂದು ಊಹೆಯನ್ನಷ್ಟೇ ಮಾಡಲು ಸಾಧ್ಯವಾಯಿತು. ಆದರೆ ಖಚಿತವಾಗಲಿಲ್ಲ. ಕೊನೆಗೆ ಅವರು ಅಭ್ಯರ್ಥಿಯ ಬೆನ್ನಿನ ಮೇಲೆ ಕೈ ಹಾಕಿ ತಡವಿದರು. ಅಹಾ! ಗೊತ್ತಾಗಿಯೇ ಹೋಯಿತು! ಅವರು ದಾರದವರು, ಆದರೆ ಕಲ್ಕತ್ತಾ ಯೂನಿವರ್ಸಿಟಿ ಅಲ್ಲ!! ಅವರ ಮುಖ ಅರಳಿತು. ಸರಿ ಓಡಿದರು, ಅವರ ಸಾಹೇಬರು ಮಾರ್ಕ್ಸ್ ಹಾಕುವ ಮೊದಲು ಅವರಿಗೆ ವಿಷಯ ತಿಳಿಸಬೇಕಾಗಿತ್ತಲ್ಲಾ!!
ನಮ್ಮ ಸಾಮಾಜಿಕ ಬದುಕಿನಲ್ಲಿ ಇಂತಹ ಹಲವು ಅಸಹ್ಯಗಳು ನಮ್ಮ ಕಣ್ಣೆದುರೇ ನಡೆಯುತ್ತಿರುತ್ತವೆ.
ಹೀಗೆ ಸಾಮಾನ್ಯ ವ್ಯಕ್ತಿಗಳ ಜಾತಿಯ ಬಗೆಗೇ ಈ ಪರಿಯ ಕುತೂಹಲ ಇರುವಾಗ-
‘ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?
ಟಾಟಾ, ಬಿರ್ಲಾರ ಜೋಬಿಗೆ ಬಂತು,
ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ’
ಈ ಹಾಡು ಬಹಳ ಜನ ಕೇಳಿದ್ದೀರಲ್ಲ. ಹೀಗೆ ನೂರಾ ನಲವತ್ತು ಕೋಟಿ ಜನರ ಈ ದೇಶದ ಸ್ವಾತಂತ್ರ್ಯವನ್ನೇ ತಮ್ಮ ಜೋಬಿನಲ್ಲಿ ಬಂಧಿಸಿಟ್ಟು ಕೊಂಡಿರುವಂತಹ ಟಾಟಾ, ಬಿರ್ಲಾಗಳ ಜಾತಿಯ ಬಗ್ಗೆ, ಮಹಾ ಕಾರ್ಪೊರೇಟ್ ಪ್ರಭುಗಳು ಎಂಬ ಸ್ಥಾನ ಅವರಿಗೆ ದಕ್ಕಲು ವಹಿಸಿದ ಪಾತ್ರದ ಬಗ್ಗೆ ತಿಳಿದುಕೊಳ್ಳದಿದ್ದರೆ ಇಲ್ಲಿ ಬಂಡವಾಳದ ಉಧ್ಬವದ ಚರಿತ್ರೆಯಲ್ಲಿ ಏನೋ ಕೊರತೆ ಎನಿಸುವುದಿಲ್ಲವೇ!
ನಮ್ಮ ದೇಶದಲ್ಲಿ ಎರಡು ಸಾವಿರ ವರ್ಷಗಳಿಗಿಂತ ಹಿಂದೆ ಹುಟ್ಟಿ ಇನ್ನೂ ಅಸ್ತಿತ್ವದಲ್ಲಿರುವ ಸಾಮಾಜಿಕ ರಚನೆ ಜಾತಿ ವ್ಯವಸ್ಥೆ. ಈ ಜಾತಿ ವ್ಯವಸ್ಥೆಯ ಬಸಿರಿನಿಂದಲೇ ಎರಡು ನೂರು ವರ್ಷಗಳಿಂದ ಈಚೆಗೆ ಕೈಗಾರಿಕಾ ಯುಗದ ಎರಡು ಮುಖ್ಯ ವರ್ಗಗಳಾದ ಬಂಡವಾಳಶಾಹಿ, ಕಾರ್ಮಿಕವರ್ಗ ಜೊತೆಗೆ ಮಧ್ಯಮ ವರ್ಗಗಳು ಕೂಡ ಹುಟ್ಟಿವೆ. ಟಾಟಾ, ಬಿರ್ಲಾಗಳೂ ಸೇರಿದಂತೆ ಬಂಡವಾಳಶಾಹಿಗಳ ಹುಟ್ಟೂ ಕೂಡಾ ಜಾತಿ ವ್ಯವಸ್ಥೆಯ ಗರ್ಭದಿಂದಲೇ ಆಗಿದೆ. ಇದು ಬಹಳ ಸಹಜ.
ಪ್ರತಿಯೊಬ್ಬರೂ ಒಂದಲ್ಲ ಒಂದು ಜಾತಿಯ ತಾಯಿ ತಂದೆಯರಿಗೇ ಹುಟ್ಟಿರಬೇಕಲ್ಲವೇ! ಆದರೆ ಸಮಸ್ಯೆ ಇರುವುದು ಆ ಜಾತಿಯನ್ನು ಇಂದೂ ಕೂಡಾ ಅವರು ಬಿಟ್ಟಿಲ್ಲದಿರುವುದು. ರಾಜಕಾರಣಿಗಳ ವಿಷಯದಲ್ಲಿ ಹೇಳಿದಂತೆ ಅವರು ಅದನ್ನು ಬಹಿರಂಗವಾಗಿ ಘೋಷಿಸಿಕೊಳ್ಳದಿದ್ದರೂ ಅವರು ಪಡೆದ ಸಾಮಾಜಿಕ ಸ್ಥಾನಮಾನಗಳಿಗೆ, ಇಂದೂ ಕೂಡಾ ಪಡೆಯುತ್ತಿರುವ ಯಶಸ್ಸಿಗೆ ಕಾರಣವಾಗುತ್ತಿರುವುದು. ಅದಕ್ಕಿಂತ ಹೆಚ್ಚಾಗಿ ಇಡೀ ಸಮಾಜದ ಮೇಲೆ, ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬೆಳವಣಿಗೆಯ ಮೇಲೆ ಇಂದೂ ಹಾನಿಕರ ಪರಿಣಾಮ ಬೀರುತ್ತಿರುವುದು.
ಈ ಟಾಟಾ-ಬಿರ್ಲಾ ಯಾರು?
ಹಿಂದಿನ ಲೇಖನದಲ್ಲಿ ಕಾರ್ಮಿಕ ವರ್ಗದ ಸಾಮಾಜಿಕ ಮೂಲ ಮತ್ತು ಅದರಿಂದ ಕಾರ್ಮಿಕರ ಕಾರ್ಯಕ್ಷಮತೆ, ಉತ್ಪಾದಕತೆಯ ಮೇಲೆ, ಒಟ್ಟಾರೆ ಕೈಗಾರಿಕಾ ಬೆಳವಣಿಗೆಯ ಮೇಲೆ ಬೀರಿದ ಹಾನಿಕರ ಪರಿಣಾಮಗಳ ಬಗ್ಗೆ ಒಂದಿಷ್ಟು ವಿವರಿಸಲಾಗಿದೆ. ಅದು ಕಾರ್ಮಿಕರ ಒಗ್ಗಟ್ಟು ಮತ್ತು ಚಳುವಳಿಯನ್ನು ಕುಂದಿಸಿರುವ ಬಗ್ಗೆ ವಿಶ್ಲೇಷಿಸಲಾಗಿದೆ.
ಟಾಟಾ-ಬಿರ್ಲಾರ ಹೆಸರು ಬಹಳ ಜನರಿಗೆ ಚಿರಪರಿಚಿತ. ಈ ಟಾಟಾ-ಬಿರ್ಲಾ ಯಾರು? ಯಾಕೆ ಈ ಹೆಸರುಗಳು ಯಾವಾಗಲೂ ಜೋಡಿಯಾಗಿಯೇ ಬಾಯಿಂದ ಬರುತ್ತವೆ? ಏಕೆಂದರೆ ಭಾರತದ ಮೊದಲ ಅತಿ ದೊಡ್ಡ ಎರಡು ಕಾರ್ಪೊರೇಟ್ ಪ್ರಭುಗಳು ಇವರು. ಅಷ್ಟೇ ಅಲ್ಲ, ಬಂಡವಾಳಶಾಹಿಗಳಾಗಿ ಈ ಇಬ್ಬರ ಉದ್ಭವದಲ್ಲಿಯೂ ಅಫೀಮು ವ್ಯಾಪಾರ, ಹತ್ತಿ ವ್ಯಾಪಾರ ಸಮಾನ ಅಂಶಗಳು. ಆದರೆ ಎಲ್ಲವೂ ಸಮಾನವಲ್ಲ.
ಟಾಟಾಗಳು ಪಾರ್ಸಿ ಸಮುದಾಯಕ್ಕೆ ಸೇರಿದವರೆಂದು ಇತ್ತೀಚೆಗೆ ರತನ್ ಟಾಟಾ ನಿಧನರಾದಾಗ ಎಲ್ಲ ಮಾದ್ಯಮಗಳೂ ಜನರಿಗೆ ಬಿತ್ತರಿಸಿವೆ. ಹಾಗಾದರೆ ಬಿರ್ಲಾ ಯಾವ ಸಮುದಾಯ? ಅವರ ಜಾತಿ ಬನಿಯಾ, ವಾಣಿಜ್ಯ ಎನ್ನುವುದರ ಹಿಂದೀ ರೂಪ. ವೈಶ್ಯರು. ಅದರಲ್ಲಿ ಭಾರತದೆಲ್ಲೆಡೆ ವ್ಯಾಪಿಸಿರುವ ಮಾರ್ವಾರಿ ಅಥವಾ ಮಾರ್ವಾಡಿಗಳು. ಅಂದರೆ ರಾಜಸ್ಥಾನದ ಮಾರವಾರ ಪ್ರದೇಶದ ಮೂಲದವರು.
ಇದು ಕೇವಲ ಟಾಟಾಗಳ, ಬಿರ್ಲಾಗಳ ಜಾತಿಯ, ಮತಧರ್ಮದ ಪ್ರಶ್ನೆ ಮಾತ್ರವಲ್ಲ. ಭಾರತದ ಅತಿದೊಡ್ಡ ಕಾರ್ಪೊರೇಟ್ ಸಮೂಹಗಳನ್ನು ಎರಡು ಸಮುದಾಯಗಳ ಮೂಲದವರೇ ಎಂಬುದು. ಆದಿತ್ಯ ಬಿರ್ಲಾ, ಬಿಕೆ ಬಿರ್ಲಾ, ಎಂ.ಪಿ. ಬಿರ್ಲಾ ಮೊದಲಾದ ಬಿರ್ಲಾ ಸಮೂಹಗಳಲ್ಲದೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಬಳಕೆ ಮಾಡುವ ಉತ್ಪಾದನೆಗಳ ಮೂಲಕ ಜನರಿಗೆ ಹೆಚ್ಚು ತಿಳಿದಿರುವ ಹೆಸರುಗಳು-ಬಜಾಜ್, ಜಿಂದಾಲ್, ಗೋಯೆಂಕಾ, ದಾಲ್ಮಿಯಾ, ಖೈತಾನ್, ಸಿಂಘಾನಿಯಾ, ಮಿತ್ತಲ್, ಸುರಾನಾ, ಪೊದ್ದಾರ್ ಅಗರ್ವಾಲ್, ಬಂಗೂರ್, ಮುಂಧ್ರಾ, ಭಾರ್ತೀಯ, ಒಸ್ವಾಲ್, ಝುಂಝುನ್ ವಾಲಾ, ಕಜಾರಿಯಾ, ಸಿಂಘಾಲ್, ಪಿರಾಮಲ್ ಮತ್ತೆ ಹಲವರು ಕೂಡಾ ಮಾರ್ವಾಡಿಗಳು. ಭಾರತದ ಅತಿದೊಡ್ಡ ಹತ್ತು ಕಾರ್ಪೊರೇಟ್ ಸಮೂಹಗಳಲ್ಲಿ ಮೂರು, ಐವತ್ತರಲ್ಲಿ ಹದಿನಾಲ್ಕು, ನೂರರಲ್ಲಿ ಇಪ್ಪತ್ತಾರು ಕೇವಲ ಒಂದೇ ಸಣ್ಣ ಪ್ರದೇಶದ ಮಾರ್ವಾಡಿ ಸಮುದಾಯದವರು.
ಉಕ್ಕು, ಅಲ್ಯೂಮಿನಿಯಂನಂತಹ ಲೋಹ ಕೈಗಾರಿಕೆಗಳಲ್ಲಿ, ಸಿಮೆಂಟ್‌ನಲ್ಲಿ, ಜವಳಿ, ಸೆಣಬು, ಟೀ, ವಾಹನದ ಟೈರುಗಳು, ರಾಸಾಯನಿಕ ಕೈಗಾರಿಕೆಗಳುಲ್ಲಿ ಮಾರ್ವಾಡಿ ಸಮುದಾಯದ ಕಾರ್ಪೊರೇಟ್ ಸಮೂಹಗಳು ಏಕಸ್ವಾಮ್ಯ ಹೊಂದಿವೆ. ವಾಹನಗಳು, ಫ್ಯಾನ್ ನಂತಹ ಎಫ್‌ಎಮ್‌ಸಿಜಿ ಬಳಕೆ ವಸ್ತುಗಳು, ಸೆರಾಮಿಕ್ ಟೈಲ್ಸ್, ಔಷಧಿ ತಯಾರಿಕೆಗಳಲ್ಲಿ ಗಣನೀಯ ಭಾಗ ಹೊಂದಿವೆ.
ಬೆಲೆಯನ್ನು ವಿಪರೀತ ಏರಿಸಲು ಸಾಧನವಾಗಿರುವ ಏಕಸ್ವಾಮ್ಯ
ಈ ಸಮುದಾಯದ ಕಾರ್ಪೊರೇಟ್‌ಗಳು ತಮ್ಮ ತಯಾರಿಕೆಯ ಮೂಲಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏಕಸ್ವಾಮ್ಯ ಸಾಧಿಸಿರುವುದು ಅವುಗಳ ಬೆಲೆಯನ್ನು ವಿಪರೀತ ಏರಿಸಲು, ದೇಶದ ಜನರ ಗಳಿಕೆಯ ಭಾಗವನ್ನು ಸೆಳೆದುಕೊಳ್ಳಲು ಸಾಧನವಾಗಿವೆ. ಇದು ಒಂದೆಡೆಯಾದರೆ ಮತ್ತೊಂದು ಕಡೆ ಈ ಉತ್ಪಾದನೆಗಳನ್ನು ಬಳಕೆದಾರರಿಗೆ ಮಾರಲು ದೇಶಾದ್ಯಂತ ಹೆಚ್ಚಾಗಿ ಮಾರವಾಡಿಗಳಿಗೇ ಏಜೆನ್ಸಿಗಳು, ಚಿಲ್ಲರೆ ವ್ಯಾಪಾರದ ಅಂಗಡಿಗಳಿಗೆ ಅವಕಾಶ ನೀಡುವ ಮೂಲಕ ಲಕ್ಷಾಂತರ ಜನರ ಸಮಾನಾವಕಾಶದ ಹಕ್ಕನ್ನು ವಂಚಿಸುತ್ತದೆ.
ಈ ಸಮುದಾಯದವರ ವ್ಯಾಪಾರ, ವ್ಯವಹಾರಗಳಲ್ಲಿ, ಅವರ ನಷ್ಟ ಕುಸಿತಗಳಲ್ಲಿ ಸಮುದಾಯದ ಒಳಗೆ ಬೆಂಬಲ ನೀಡುವ ಹಲವು ವಿಧಾನಗಳ ಬಗ್ಗೆ ವಿವಿಧ ಬಾತ್ಮಿಗಳು ಹರಿದಾಡುತ್ತಿವೆ. ಪಾರಸಿಗಳ ಕಾರ್ಪೊರೇಟ್ ಸಮೂಹಗಳು ಕೂಡಾ ಇದೇ ರೀತಿ ಏಕಸ್ವಾಮ್ಯವನ್ನು ಸ್ಥಾಪಿಸಿರುವ ಕುಟುಂಬಗಳು. ಅವುಗಳಲ್ಲಿ ಐದು ಬಿಲಿಯನೇರ್ ಸಮೂಹಗಳು ವ್ಯಾಪಕ ಹಿಡಿತವನ್ನು ಹೊಂದಿವೆ. ಟಾಟಾಗಳ ಜೊತೆಗೆ ಬಹು ಪರಿಚಿತವಾದ ಗೊದ್ರೇಜ್ ಸಮೂಹ, ಸೈರಸ್ ಮಿಸ್ತ್ರಿಯವರಿಂದ ಪರಿಚಿತವಾಗಿರುವ ಮಿಸ್ತ್ರಿಗಳು, ಹಡಗು ತಯಾರಿಕೆಯ ಟೈಕೂನ್‌ಗಳಾದ ವಾಡಿಯಾಗಳು, ಕೋವಿಡ್ ವ್ಯಾಕ್ಸಿನ್ ನ ಸೀರಮ್ ಇನ್ಸ್ಟಿಟ್ಯೂಟ್ ಮೂಲಕ ಪ್ರಸಿದ್ಧವಾದ ಪೂನಾವಾಲಗಳು ಇವು ಆ ಐದು.
ಇದನ್ನೂ ನೋಡಿ: ಋತ್ವಿಕ್ ಕುಮಾರ್ ಘಟಕ್100- ಚಲನಚಿತ್ರೋದ್ಯಮಕ್ಕೆ ವಾಸ್ತವಿಕತೆ ಮತ್ತು ಸಾಮಾಜಿಕ ರಾಜಕೀಯ ದೃಷ್ಟಿಕೋನದ ಪ್ರೇರಣೆ
ಪೆಸ್ಟೋನ್ಜಿ, ದಿನ್‌ಶಾ, ಮೆಹ್ತಾ, ನವರೋಜಿ, ಮೋದಿ, ನಾರಿಮನ್, ರುಸ್ತುಮ್ಜಿ, ಜೆಹಾಂಗೀರ್, ನಸರ್‌ವಾನ್ಜಿ ಮೊದಲಾದ ಸಮೂಹಗಳು ಪಾರಸಿ ಸಮುದಾಯಕ್ಕೆ ಸೇರಿದವರು.
ಇಲ್ಲಿ ಭಾರತದಲ್ಲಿ ಬಂಡವಾಳ ಉದ್ಭವವಾದ ಸಮಯದಲ್ಲಿ ವಾಣಿಜ್ಯ, ಕೈಗಾರಿಕಾ ಬಂಡವಾಳಗಾರರಾದ, ಸ್ವಾತಂತ್ರ್ಯ ಪೂರ್ವದ ಸಮೂಹಗಳನ್ನಷ್ಟೇ ಹೆಸರಿಸಲಾಗಿದೆ. ಸ್ವಾತಂತ್ರ್ಯಾ ನಂತರದ, ಅದರಲ್ಲೂ ಇತ್ತೀಚಿನ ಅಂಬಾನಿ, ಅದಾನಿಗಳ ಪ್ರಸಂಗವೇ ಬೇರೆ.
ಪಾರ್ಸಿಗಳ ಮತಧರ್ಮ, ಜಾತಿ ರಹಿತತೆ ಮತ್ತು ಬಂಡವಾಳ
ಪಾರಸಿಗಳು ಇರಾನಿ ಮೂಲದವರಾಗಿ ಜರತುಷ್ಟ್ರ ಮತಧರ್ಮವನ್ನು ಅನುಸರಿಸುತ್ತಿದ್ದರು. ಭಾರತದ ಹೊರಗಿನ ಮತಧರ್ಮವಾಗಿ ಅವರೊಳಗೆ ಜಾತಿ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಅದಕ್ಕೆ ಅಂಟಿಕೊಂಡ ಮೇಲು ಕೀಳು ಭಾವನೆಗಳೂ ಇರಲಿಲ್ಲ. ಅವರು ಇಲ್ಲಿ ಬಂದು ಗುಜರಾತಿನ ದೊಡ್ಡ ಬಂದರು ಸೂರತ್ ಬಳಿ ನೆಲಸಿದಾಗ ಕೃಷಿಕರೂ ಆಗಿದ್ದರು. ಲೋಹದ ಕೆಲಸ, ಬಡಗಿ, ಕಟ್ಟಡ ನಿರ್ಮಾಣ ಮೊದಲಾದ ಕೆಲಸಗಳಲ್ಲಿ ಯಾವುದೇ ಭೇದವಿಲ್ಲದೆ ತೊಡಗಿಕೊಂಡಿದ್ದರು. ವ್ಯಾಪಾರಿಗಳೂ ಆಗಿದ್ದರು.
ಟಾಟಾಗಳಿಗೆ ಸಂಬಂಧಿಸಿ ಹೇಳಿದಂತೆ ಅವರು ಮುಖ್ಯವಾಗಿ ಹಡಗುಗಳ ಮೂಲಕ ಸಮುದ್ರ ವ್ಯಾಪಾರಿಗಳಾಗಿ ಒಂದು ಕಡೆ ಈಜಿಪ್ಟ್, ಆಫ್ರಿಕಾದ ಪೂರ್ವ ತೀರಗಳಿಂದ ಹಿಡಿದು ಲಂಕಾ, ಮಲಯಾ, ಜಾವಾ ಹಾಂಗ್‌ಕಾಂಗ್, ಚೀನಾಗಳವರೆಗೂ ವ್ಯಾಪಾರ ಸಂಬಂಧ ಹೊಂದಿದ್ದರು. ಭಾರತದ ಪಶ್ಚಿಮ ಕಡಲು ತೀರದ ಗೋವಾ, ಭಟ್ಕಳ, ಮಂಗಳೂರು ಕೊಚಿನ್ ವರೆಗೆ ಅವರುಗಳ ವ್ಯಾಪಾರ ಇತ್ತು. ಅದಕ್ಕೆ ಬೇಕಾದ ಹಡಗುಗಳ ನಿರ್ಮಾಣ ಬಡಗಿ ಕೆಲಸದಲ್ಲಿ ಹಲವು ಕುಟುಂಬಗಳು ಪರಿಣತರಾಗಿದ್ದರು. ವ್ಯಾಪಾರಕ್ಕೆ ಅಂದು ಅವಶ್ಯವಾದ ನಾಣ್ಯ ತಯಾರಿಕೆಯಲ್ಲಿಯೂ ಹೆಸರು ಮಾಡಿದ್ದರು.
ಇದರಿಂದಾಗಿ ಸೂರತ್ ನ ಹಡುಗು ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದ್ದರು. 18ನೇ ಶತಮಾನದಿಂದ 19ನೆಯ ಶತಮಾನದ ಮೊದಲ ಭಾಗದವರೆಗೆ ಹಡಗು ನಿರ್ಮಾಣ, ವ್ಯಾಪಾರದಲ್ಲಿ ಪ್ರಮುಖ ಪಾತ್ರ. ಇತಿಹಾಸಕಾರ ಪ್ರೊ.ಇರ್ಫಾನ್ ಹಬೀಬ್ ರವರು ಹೇಳಿದಂತೆ ಬ್ರಿಟಿಷ್ ಪೂರ್ವ ಭಾರತದಲ್ಲಿ ಕೈಗಾರಿಕೆಯ ಸ್ವರೂಪ ಪಡೆದಿದ್ದ ಉತ್ಪಾದನಾ ವ್ಯವಸ್ಥೆ ಎಂದರೆ ಹಡಗು ನಿರ್ಮಾಣ ಮಾತ್ರ. ಈ ಕೈಗಾರಿಕೆಯಲ್ಲಿ ಬಡಗಿ ಕೆಲಸ, ಅದಕ್ಕೆ ಬೇಕಾದ ಮರ ಮುಟ್ಟು ಸರಬರಾಜು, ಬಂದರುಗಳ ನಿರ್ಮಾಣ, ಹಡಗು ನಿರ್ಮಾಣದ ತಾಂತ್ರಿಕ ಉಸ್ತುವಾರಿ, ಹಡಗನ್ನು ನಡೆಸುವ ನಿಪುಣತೆ ಎಲ್ಲದರಲ್ಲಿ ತೊಡಗಿಕೊಂಡಿದ್ದರು.
ಪಾರಸೀಗಳು ಅಂದು ಇಪ್ಪತ್ತು ಹಡಗುಗಳ ಒಡೆತನ, ನಡೆಸುವುದು ಮತ್ತು ವ್ಯಾಪಾರಗಳ ನಿಯಂತ್ರಣ ಹೊಂದಿದ್ದರು. ಇದರಲ್ಲಿ ಪರಿಣತವಾದ ಒಂದು ಕುಟುಂಬವೇ ವಾಡಿಯಾಗಳು. ನಂತರದ ಕಾಲದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರು ಹಡಗು ನಿರ್ಮಾಣಕ್ಕೆ ತಡೆ ಹಾಕಿದರೂ ಸ್ವಾತಂತ್ರ್ಯಾ ನಂತರ ಅವರು ಹಡಗು ನಿರ್ಮಾಣ, ಸಾಗಾಣಿಕೆ ಹಾಗೂ ವ್ಯಾಪಾರದ ಒಂದು ಏಕಸ್ವಾಮ್ಯ ಕಾರ್ಪೊರೇಟ್ ಆಗಿದ್ದಾರೆ.
ಬ್ರಿಟಿಷರು ಮೊದಲು ಅರಬ್ಬೀ ತೀರದ ಏಳು ದ್ವೀಪಗಳನ್ನು ವಶಪಡಿಸಿಕೊಂಡು ಅದಕ್ಕೆ ಬಾಂಬೆ ಎಂಬ ನಗರದ ಸ್ವರೂಪ ನೀಡಿದಾಗ, ಅದರ ನಿರ್ಮಾಣದ ಹಲವು ಕೆಲಸಗಳ ಸಣ್ಣ ಕಂಟ್ರಾಕ್ಟ್ ಗಳು ಪಾರಸೀಗಳಿಗೆ ದೊರಕಿತು. ಅಲ್ಲಿ ಹೊಸದಾಗಿ ಹಡಗು ನಿರ್ಮಾಣ ಆರಂಭಿಸಿದಾಗಲೂ ಪಾರಸಿಗಳ ಪಾತ್ರ ಮುಖ್ಯವಾಯಿತು. ಅದರಿಂದಾಗಿ ಬ್ರಿಟಿಷರು ಅವರಿಗೆ ಬಾಂಬೆಯಲ್ಲಿ ಗಣನೀಯ ಪ್ರಮಾಣದ ಭೂಮಿಯನ್ನು ಕೊಡ ಮಾಡಿದರು. ಅದರಿಂದಾಗಿ ಅವರಲ್ಲಿ ಕೆಲ ಕುಟುಂಬಗಳು ಇಂದಿಗೂ ರಿಯಲ್ ಎಸ್ಟೇಟ್‌ನಲ್ಲಿ ದೊಡ್ಡ ಕುಳಗಳು. ಮುಂಬಯಿಗೆ ಹೊರಗಿನಿಂದ ಮೊದಲು ಬಂದು ನೆಲಸಿದ ಭಾರತೀಯರಾಗಿ ಅಂದಿನ ಒಂದು ಪತ್ರಿಕೆ ಹೇಳಿದಂತೆ ‘ಬಾಂಬೆಯ ಜನರು ತಮಗೆ ಬೇಕಾದ ಎಲ್ಲ ವಸ್ತುಗಳನ್ನು, ಫರ್ನೀಚರ್ ಗಳನ್ನು ಪಾರಸೀ ಅಂಗಡಿಗಳಿಂದಲೇ ಕೊಳ್ಳುತ್ತಾರೆ’ ಎನ್ನುವಷ್ಟು ವ್ಯಾಪಿಸಿದ್ದರು. ಬ್ರಿಟಿಷರು ಅಲ್ಲಿ ನಾಣ್ಯ ತಯಾರಿಕೆ ಆರಂಭಿಸಿದಾಗ ಅದಕ್ಕಾಗಿ ಒಬ್ಬ ಪಾರಸೀ ಪರಿಣತನನ್ನೇ ಹುಡುಕಾಡಿ ಕರೆತಂದರು.
ಹೀಗೆ ಮುಂಬಯಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದುದರಿಂದ ಬ್ರಿಟಿಷರು ಬಾಂಬೆಯ ಪಟೇಲರನ್ನಾಗಿ ಒಬ್ಬ ಪಾರಸಿಯನ್ನೇ ನೇಮಿಸಿದರು!! ಈ ಎಲ್ಲ ರೀತಿಯ ಪರಿಣತಿಯ ಕಾರಣವಾಗಿ ಬ್ರಿಟಿಷರು ಪಾರಸೀ ಕುಟುಂಬಗಳಿಗೆ ಸೈನ್ಯಕ್ಕೆ ಅವಶ್ಯವಾದ ಗನ್ ಪೌಡರ್, ಫಿರಂಗಿಗಳನ್ನು ತಯಾರಿಸುವ ಕೈಗಾರಿಕೆ ಸ್ಥಾಪಿಸಲು ಅನುಮತಿ ನೀಡಿದರು.
ಮತ್ತೊಂದು ಮುಖ್ಯ ಅಂಶವೆಂದರೆ, ಕಡಲ ವ್ಯಾಪಾರ ಮತ್ತು ಸಂಚಾರದಲ್ಲಿ ತೊಡಗಿದ ಇವರ ಹಲವು ಕುಟುಂಬಗಳು ಲಂಕಾ, ಮಲಕ್ಕಾ, ಸಿಂಗಾಪುರ, ಹಾಂಗ್‌ಕಾಂಗ್ ಗಳಲ್ಲಿ ನೆಲಸಿದ್ದವು. ಮುಂದೆ ಈ ದೇಶಗಳಲ್ಲಿ ಈ ಕುಟುಂಬಗಳಲ್ಲಿ ಕೆಲವರು ಲಂಕಾದಲ್ಲಿ ಅರ್ಥಮಂತ್ರಿ ಸ್ಥಾನ, ಮಲಕ್ಕಾದಲ್ಲಿ ಆಡಳಿತಗಾರರಿಂದ ಖಿಲ್ಲತ್ತುಗಳನ್ನು ಪಡೆದಿದ್ದರು.
ಹಾಗೆಯೇ ಒಬ್ಬರು ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕಾದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೆಲ್ಸನ್ ಮಂಡೇಲಾರ ಸಹಾಯಕರಾಗಿದ್ದರು. ಮುಂದೆ ಅಲ್ಲಿಯ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೇರಿದ ಪ್ರಾಮುಖ್ಯತೆ ಪಡೆದವರಾಗಿದ್ದರು.
ಕೆಲ ಪಾರಸೀಗಳು ಹಾಂಗ್ ಕಾಂಗ್‌ನಲ್ಲಿ ಆ ಕಾಲದಲ್ಲಿಯೇ ಬ್ಯಾಂಕಿಂಗ್, ಕೈಗಾರಿಕೆಗಳ ಸ್ಥಾಪನೆಯಲ್ಲಿ ತೊಡಗಿದ್ದರು. ಹಾಂಗ್ ಕಾಂಗ್ ವಿಶ್ವವಿದ್ಯಾಲಯ ಸ್ಥಾಪನೆಗೆ ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಒಂದೂವರೆ ಲಕ್ಷ ಹಾಂಗ್ ಕಾಂಗ್ ಡಾಲರ್ ದಾನ ನೀಡುವಷ್ಟು ಶ್ರೀಮಂತರಾಗಿದ್ದರು. ಕರಾಚಿಯಲ್ಲಿ ಒಬ್ಬ ಪಾರಸಿ ಸ್ವಾತಂತ್ರ್ಯಾ ನಂತರ ಹನ್ನೆರಡು ವರ್ಷಗಳ ಕಾಲ ಮೇಯರ್ ಆಗಿದ್ದವರು, ಇಬ್ಬರು ಅಲ್ಲಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೇರಿದ್ದರು.
ಈ ವಿವರಗಳನ್ನು ಇಲ್ಲಿ ನೀಡಿರುವ ಉದ್ದೇಶ ಪಾರಸೀಗಳು ವಿದೇಶಗಳಲ್ಲಿ ವಹಿಸುತ್ತಿದ್ದ ಪ್ರಮುಖ ಪಾತ್ರ ಕೂಡಾ ಬ್ರಿಟಿಷರು ಅವರನ್ನು ತಮ್ಮ ಭಾರತೀಯ ಸಹಚರರಾಗಿ ಪರಿಗಣಿಸಲು ಮತ್ತೊಂದು ಕಾರಣವಾಯಿತು ಎಂಬುದನ್ನು ಗುರುತಿಸಲು. ಅದರ ಜೊತೆಗೆ ಟಾಟಾಗಳು ಮತ್ತು ಇತರ ಏಕಸ್ವಾಮ್ಯ ಬಿಲಿಯನೇರ್ ಸಮೂಹಗಳ ಇಂದಿನ ಬೆಳವಣಿಗೆಯಲ್ಲಿ ಪಾರಸೀಗಳ ಈ ಎಲ್ಲ ಸಂಬಂಧಗಳೂ ವಹಿಸಿರಬಹುದಾದ ಪಾತ್ರವನ್ನು ಕೂಡಾ ಗಮನಿಸಬೇಕು. ಇಂತಹ ಧಾರ್ಮಿಕ ಸಮುದಾಯಗಳ ಒಳ ಸಂಬಂಧಗಳು ಬಂಡವಾಳದ ಬೆಳವಣಿಗೆಯಲ್ಲಿ ವಹಿಸಿದ ಪಾತ್ರ ಹೀಗಿದೆ.
ಪಾರ್ಸಿಗಳು ಭಾರತದ ಮುಖ್ಯ ಧರ್ಮಗಳಾದ ಹಿಂದೂ, ಮುಸ್ಲಿಮ್ ಜಾತಿಗಳಿಗೆ ಸೇರಿದವರಲ್ಲ. ಅದರಿಂದಾಗಿ ಒಂದು ಕಡೆ ಎರಡೂ ಧರ್ಮದವರೊಡನೆ ಸಂಬಂಧ, ಅದೇ ಸಮಯದಲ್ಲಿ ಆ ಸಮುದಾಯಗಳೊಡನೆ ಭಾವನಾತ್ಮಕ ಸಂಬಂಧಗಳಿಲ್ಲ. ಹೀಗಾಗಿ ಎರಡೂ ಧರ್ಮದ ನಡುವಣ ವೈಮನಸ್ಸುಗಳೂ ಇವರಿಗೆ ಸಂಬಂಧವಿಲ್ಲದ್ದು. ಭಾರತವನ್ನು ಹಿಂದೆ ಆಳಿದವರಲ್ಲ, ಈಗ ಆಳುತ್ತಿರುವವರೂ ಅಲ್ಲ. ಅದೇ ಸಮಯದಲ್ಲಿ ಇಲ್ಲಿಯ ಭಾಷೆ, ಸಂಸ್ಕೃತಿಗಳ ಜೊತೆ ಒಡನಾಟ, ಜ್ಞಾನ ಇದ್ದವರು.
ಬ್ರಿಟಿಷರು ಮೊದಲು ಕಡಲು ವ್ಯಾಪಾರದಲ್ಲಿ ತೊಡಗಿದಾಗ ಅವರಿಗೆ ಎದುರಾಗಿದ್ದೇ ಅರಬ್ಬೀ ಮುಸ್ಲಿಂ ವ್ಯಾಪಾರಿಗಳಲ್ಲವೇ! ಹಾಗೆಯೇ ದೇಶವನ್ನು, ಅದರ ಹಲವು ಭಾಗಗಳನ್ನು ಆಳುತ್ತಿದ್ದವರು ಕೂಡಾ ಮುಸ್ಲಿಮರೇ. ಕೆಲವು ಪ್ರದೇಶಗಳನ್ನು ರಾಜಪುತ್ರರು, ಪೇಶ್ವಾ ಮೊದಲಾದ ಮರಾಠ ಹಿಂದೂ ರಾಜರೂ ಆಳುತ್ತಿದ್ದರಲ್ಲದೆ, ಅವರು ಮೊಘಲರು ಮೊದಲಾದ ಮುಸ್ಲಿಮರ ಆಡಳಿತದಲ್ಲಿ ಮಂತ್ರಿ, ಸೇನಾಧಿಕಾರಿಗಳಾಗಿದ್ದರು.
ಇಂತಹ ರಾಜಕೀಯ ಸಂದರ್ಭದಲ್ಲಿ ಈ ಎರಡೂ ಧರ್ಮ ಮತ್ತು ಆಡಳಿತದ ಭಾಗವಾಗಿಲ್ಲದ ಪಾರಸೀಗಳು ಬ್ರಿಟಿಷರಿಗೆ ಬಹಳ ಪ್ರಿಯವಾದರು. ಚೀನಾದ ಮೇಲೆ ಬ್ರಿಟಿಷರು ನಡೆಸಿದ ಓಪಿಯಮ್ ವಾರ್ ಗಳಲ್ಲಿ ಪಾರಸೀಗಳ ಹಡಗುಗಳನ್ನು ವ್ಯಾಪಕವಾಗಿ ಬಳಸಿಕೊಂಡರು.
ಒಟ್ಟಾರೆಯಾಗಿ ಬ್ರಿಟಿಷರು ಪಾರಸೀಯರನ್ನು ತಮ್ಮ ಹತ್ತಿರದ ಅಧೀನ ಸಹಚರರನ್ನಾಗಿ ಬಳಸಿಕೊಂಡರು. ಈ ಕಾಂಪ್ರೊಡೋರ್ ದಲ್ಲಾಳಿ ಪಾತ್ರ, ಬಂಡವಾಳ ಶೇಖರಣೆಗೆ ಭಾರತದ ಬೇರೆ ಕುಟುಂಬಗಳಿಗೆ ದೊರಕದ ಅವಕಾಶವನ್ನು ಪಾರಸೀ ಕುಟುಂಬಗಳಿಗೆ ಒದಗಿಸಿತು.
(ಮುಂದಿನ ಭಾಗದಲ್ಲಿ “ವೈಷ್ಣವರಾಗಿ ಪರಿವರ್ತನೆಗೊಂಡ ಮಾರ್ವಾಡಿಗಳ ದೇಶವ್ಯಾಪಿ ವಿಸ್ತರಣೆ)
ಇದನ್ನೂ ಓದಿ: ಸಂವಿಧಾನ – ಓದು ಅಧ್ಯಯನ- ಅರಿವಿನ ಹಾದಿ; ಗ್ರಾಂಥಿಕ ಸಂವಿಧಾನ – ಸಾಂವಿಧಾನಿಕ ಆಶಯಗಳನ್ನು ಮೌಖಿಕವಾಗಿ ತಳಸಮಾಜಕ್ಕೆ ತಲುಪಿಸಬೇಕಿದೆ