ಲಂಚ, ವಂಚನೆ ಪ್ರಕರಣ : ಸಿಬಿಐ ತಕ್ಷಣವೇ ಗೌತಮ್ ಅದಾನಿ ಮೇಲೆ ಭ್ರಷ್ಟಾಚಾರದ ಕೇಸು ದಾಖಲಿಸಬೇಕು-ಸಿಪಿಐ(ಎಂ) ಆಗ್ರಹ

ಭಾರತದಲ್ಲಿನ ಲಂಚಪ್ರಕರಣ ಅಮೆರಿಕಾದಲ್ಲಿ ಬಯಲಾಗಿರುವ ನಾಚಿಕೆಗೇಡಿನ ಸಂಗತಿ

ನವದೆಹಲಿ: ಗೌತಮ್ ಅದಾನಿ ಮತ್ತು ಇತರ ಆರು ಜನರ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನಗಳ(ಯುಎಸ್‍) ನ್ಯಾಯಾಲಯದಲ್ಲಿ ಅಲ್ಲಿನ ನ್ಯಾಯಾಂಗ ಇಲಾಖೆಯು ಸಲ್ಲಿಸಿದ ದೋಷಾರೋಪಣೆ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಒಳಗೊಂಡಿದೆ. ಪ್ರಕರಣ

ಭಾರತ ಸರಕಾರ ಇವುಗಳಲ್ಲಿ ಒದಗಿಸಿದ ಸಂಗತಿಗಳ ಆಧಾರದಲ್ಲಿ ತಕ್ಷಣವೇ ಪ್ರಕರಣ ದಾಖಲಿಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ. ಈ ಹಿಂದೆ ಹಿಂಡೆನ್‍ಬರ್ಗ್ ಬಯಲಿಗೆಳೆದ ಸಂಗತಿಗಳ ಸಂದರ್ಭದಲ್ಲಿ ಮಾಡಿದಂತೆ ಯಾವುದೇ ಪರದೆಯ ಹಿಂದೆ ಅಡಗಿಕೊಳ್ಳಲು ಮೋದಿ ಸರಕಾರಕ್ಕೆ ಈಗ ಸಾಧ್ಯವಿಲ್ಲ ಎಂದು ಅದು ಹೇಳಿದೆ. ಪ್ರಕರಣ

ಅದಾನಿಗಳಿಂದ ಇಂತಹ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ಮತ್ತು ಚಿತಾವಣೆಗಳು ಭಾರತದಲ್ಲಿ ಬಯಲಿಗೆ ಬಾರದೆ ಯುಎಸ್‍ನಲ್ಲಿ ಅವರ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಮೂಲಕ ಬಂದಿದೆ ಎಂಬುದು ನಾಚಿಕೆಗೇಡಿನ ಸಂಗತಿ ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದನ್ನೂ ಓದಿ: ಮಾಧ್ಯಮ ಮಾರುಕಟ್ಟೆ ಮತ್ತು ರಾಜಕೀಯ ಭ್ರಷ್ಟಾಚಾರ; ಸಾರ್ವಜನಿಕ ಪ್ರಜ್ಞೆ ಇಲ್ಲದ ಮಾಧ್ಯಮಗಳು ಪ್ರಜಾತಂತ್ರವನ್ನು ಶಿಥಿಲಗೊಳಿಸುತ್ತವೆ

ಆರೋಪಪಟ್ಟಿಯಲ್ಲಿ ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳು ಸೌರ ವಿದ್ಯುತ್ ಪೂರೈಕೆಗಾಗಿ ವಿದ್ಯುತ್ ಮಾರಾಟದ ಒಪ್ಪಂದಗಳನ್ನು ಕಾರ್ಯಗತಗೊಳಿಸುವಂತೆ ಮಾಡಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ರೂ. 2,029 ಕೋಟಿಗಳನ್ನು ನೀಡಲಾಯಿತು ಅಥವಾ ಆ ಕುರಿತು ಭರವಸೆ ನೀಡಲಾಯಿತು ಎಂದು ಹೇಳಲಾಗಿದೆ. ಈ ಪ್ರಕರಣ ಯುಎಸ್ ಹೂಡಿಕೆದಾರರನ್ನು ಅದಾನಿಗಳು ದಾರಿ ತಪ್ಪಿಸಿದ್ದಾರೆ ಎಂಬ ಆರೋಪವಾಗಿ ಅಲ್ಲಿ ಬಂದಿದೆ.

ಸಾಗರ್ ಅದಾನಿಯಿಂದ ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ ಎಂದು ದೋಷಾರೋಪಣೆಯಲ್ಲಿ ಹೇಳಲಾಗಿದೆ, ಇದು ಸರ್ಕಾರಿ ಅಧಿಕಾರಿಗಳಿಗೆ ನೀಡಿದ ಅಥವ ಭರವಸೆ ನೀಡಿದ ಲಂಚದ ನಿರ್ದಿಷ್ಟ ವಿವರಗಳನ್ನು ಒದಗಿಸುತ್ತದೆ.

“ಲಂಚದ ಟಿಪ್ಪಣಿಗಳು (i) ಯಾವ ರಾಜ್ಯ ಅಥವಾ ಪ್ರದೇಶಕ್ಕಾಗಿ ಸರ್ಕಾರಿ ಅಧಿಕಾರಿಗಳಿಗೆ ಲಂಚವನ್ನು ನೀಡಲಾಯಿತು; (ii) ನೀಡಲಾದ ಲಂಚದ ಒಟ್ಟು ಮೊತ್ತ; ಮತ್ತು (iii) ಲಂಚಕ್ಕೆ ಬದಲಾಗಿ ರಾಜ್ಯ ಅಥವಾ ಪ್ರದೇಶವು ಖರೀದಿಸಲು ಒಪ್ಪುವ ಸೌರಶಕ್ತಿಯ ಅಂದಾಜು ಮೊತ್ತ ಇವನ್ನು ಗುರುತಿಸಲಾಗಿದೆ. ಹೆಚ್ಚಿನ ನಿದರ್ಶನಗಳಲ್ಲಿ, ಈ ಲಂಚದ ಟಿಪ್ಪಣಿಗಳು ನೀಡಲಾದ ಒಟ್ಟು ಲಂಚದ ಮೊತ್ತಕ್ಕೆ ಪ್ರತಿ ಮೆಗಾವ್ಯಾಟ್‌ ದರ, ಲಂಚವನ್ನು ಸ್ವೀಕರಿಸಲಿದ್ದ ಸರ್ಕಾರಿ ಅಧಿಕಾರಿಗಳ ಸಂಕ್ಷಿಪ್ತ ಹುದ್ದೆನಾಮಗಳು ಮತ್ತು/ಅಥವಾ ಪ್ರತಿ ರಾಜ್ಯ ಮತ್ತು ಪ್ರದೇಶದೊಳಗಿನ ಸರ್ಕಾರಿ ಅಧಿಕಾರಿಗಳೀಗೆ ಒಟ್ಟು ಲಂಚದ ಮೊತ್ತದಲ್ಲಿನ ಹಂಚಿಕೆಯನ್ನು ಕೂಡ ಗುರುತಿಸುತ್ತವೆ.

ಗೌತಮ್ ಅದಾನಿ ಮತ್ತು ಅವರ ವ್ಯಾಪಾರ ಸಾಮ್ರಾಜ್ಯಕ್ಕೆ ಅವರ ಕಾನೂನುಬಾಹಿರ ಮತ್ತು ಕ್ರಿಮಿನಲ್ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಮೋದಿ ಸರ್ಕಾರದ ಸಂಪೂರ್ಣ ರಕ್ಷಣೆ ದೊರೆತಿದೆ. ಹಿಂಡೆನ್‌ಬರ್ಗ್ ಬಯಲಿಗೆಳೆದ ಸಂಗತಿಗಳಿಂದ ಹೊಮ್ಮಿದ ಆರೋಪಗಳ ಮೇಲೆ ಯಾವುದೇ ವಿಚಾರಣೆ ಅಥವಾ ಕಾನೂನು ಕ್ರಮದಿಂದ ಅದಾನಿಗೆ ಸ್ವತಃ ಪ್ರಧಾನಿ ಮೋದಿ ರಕ್ಷಾಕವಚ ಒದಗಿಸಿದ್ದರು ಎಂದು ನೆನಪಿಸಿಕೊಂಡಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಮೋದಿ ಸರ್ಕಾರ ಈಗ ಯಾವುದೇ ಪರದೆಯ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ. ಯುಎಸ್‍ನಲ್ಲಿ ಫಿರ್ಯಾದಿ ಪಕ್ಷ (ಪ್ರಾಸಿಕ್ಯೂಷನ್) ಒದಗಿಸಿದ ಸಂಗತಿಗಳ ಆಧಾರದ ಮೇಲೆ ತಕ್ಷಣವೇ ಪ್ರಕರಣ ದಾಖಲಿಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶಿಸಬೇಕು ಎಂದು ಆಗ್ರಹಿಸಿದೆ.

ಸಾರ್ವಜನಿಕ ಸೇವಕರಿಗೆ ಲಂಚ ನೀಡುವುದು ಭ್ರಷ್ಟಾಚಾರ ತಡೆ ಕಾಯಿದೆಯಡಿ ಬರುತ್ತದೆ, ಇದು ಸಿಬಿಐ ವ್ಯಾಪ್ತಿಯಡಿಯಲ್ಲಿದೆ. ಅದಾನಿ ಸಮೂಹದ ಕಂಪನಿಗಳ ಎಲ್ಲಾ ಇತರ ತಪ್ಪುನಡೆಗಳನ್ನು ಬಯಲಿಗೆ ತರಲು ಒಂದು ಸ್ವತಂತ್ರ ಏಜೆನ್ಸಿಯಿಂದ ಪೂರ್ಣ ಪ್ರಮಾಣದ ತನಿಖೆಯ ಅಗತ್ಯವಿದೆ ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದನ್ನೂ ನೋಡಿ: ಒಂದು ದೇಶ, ಒಂದು ಚುನಾವಣೆ | ಸಂವಿಧಾನದ ಮೂಲಭೂತರಚನೆಗೆ ಗಂಡಾಂತರ – ಕೆ.ಎನ್. ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *