ನವದೆಹಲಿ: ನವಂಬರ್ 6 ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕೂಳೆ ಸುಡುವುದರಿಂದ ಆಗುವ ಮಾಲಿನ್ಯವನ್ನು ತಡೆಯಲೆಂದು ರೈತರ ಮೇಲೆ ಹಾಕುತ್ತಿರುವ ದಂಡದ ಪ್ರಮಾಣವನ್ನು ದುಪ್ಪಟ್ಟು ಮಾಡುವ ಅಧಿಸೂಚನೆ ಹೊರಡಿಸಿದೆ.
ಇದು ಒಂದು ಕರಾಳ ಕ್ರಮ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಖಂಡಿಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‍ಸಿಆರ್) ಮತ್ತು ಸುತ್ತಲಿನ ಪ್ರದೇಶದಲ್ಲಿ ವಾಯು ಗುಣಮಟ್ಟ ನಿರ್ವಹಣೆ (ಕೂಳೆ ಸುಡುವದಕ್ಕೆ ಪರಿಸರ ನಷ್ಟಭರ್ತಿ ವಿಧಿಸುವುದು, ಸಂಗ್ರಹ ಮತ್ತು ಬಳಕೆ) ಎಂಬ ಹೆಸರಿನ ಅಧಿಸೂಚನೆಯ ಅಡಿಯಲ್ಲಿ ರೂ.5000 ದಿಂದ 30,000 ವರೆಗೆ ದಂಡ ಹಾಕಲು ಅವಕಾಶ ಕಲ್ಪಿಸಲಾಗಿದೆ.
ಇದಕ್ಕೆ ‘ಪರಿಸರ ನಷ್ಟಭರ್ತಿ’ ಎಂದು ಹೆಸರು ಕೊಟ್ಟು ಬಿಜೆಪಿ ನೇತೃತ್ವದ ಸರಕಾರ ದಿಲ್ಲಿ ಮತ್ತು ಸುತ್ತ-ಮುತ್ತ ಹೊಗೆಮಂಜು ಮತ್ತು ವಾಯು ಮಾಲಿನ್ಯಕ್ಕೆ ಒಣ ಪೈರುಗಳ ಕೂಳೆ ಸುಡುವುದೇ ಕಾರಣ ಎಂದು ಉದ್ದೇಶಪೂರ್ವಕವಾಗಿಯೇ ರೈತರ, ಅದರಲ್ಲೂ ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶದ ರೈತರ ವಿರುದ್ಧ ದಿಲ್ಲಿ ಮತ್ತು ಸುತ್ತಮುತ್ತಲಿನ ನಗರ ಪ್ರದೇಶಗಳಲ್ಲಿ ಕೆಟ್ಟ ಅಭಿಪ್ರಾಯ ಮತ್ತು ದ್ವೇಷ ಸೃಷ್ಟಿಸುತ್ತಿದೆ ಎಂದು ಎಐಕೆಎಸ್ ಆಪಾದಿಸಿದೆ.
ಪಂಜಾಬ್ ಮತ್ತು ಹರ್ಯಾಣದಲ್ಲಿ ಕೂಳೆ ಸುಡುವುದರಿಂದ ರಾಜಧಾನಿ ಪ್ರದೇಶದಲ್ಲಿ ವಾಯು ಮಾಲಿನ್ಯ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ, ಅದು ಅವೈಜ್ಞಾನಿಕ ದಾವೆ ಎಂದಿರುವ ಎಐಕೆಎಸ್ ಇದರ ನೇರ ಪರಿಣಾಮವಿರುವ ಈ ರಾಜ್ಯಗಳಲ್ಲಿ ಇದರ ಬಾಧೆ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕಿಂತ ಕಡಿಮೆಯಿರುವುದೇ ಇದೊಂದು ಬೋಗಸ್ ದಾವೆ ಎಂದು ತೋರಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಮುನಿರತ್ನ ಹನಿಟ್ರಾಪ್ ಪ್ರಕರಣ: ಇನ್ಸ್ಪೆಕ್ಟರ್ ಬಂಧನ
ದಿಲ್ಲಿಯಲ್ಲಿ ವಾಹನಗಳಿಂದ ಮಾಲಿನ್ಯ, ಕಾರ್ಖಾನೆಗಳು ಮತ್ತು ಇಟ್ಟಿಗೆಗೂಡುಗಳ ಮಾಲಿನ್ಯವನ್ನು ತಡೆಯಲು ಯಾವುದೇ ಕ್ರಮಗಳಿಲ್ಲ. ಇವೇ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯಕ್ಕೆ ಹೆಚ್ಚು ಹೊಣೆ ಎಂದು ವೈಜ್ಞಾನಿಕ ಅಧ್ಯಯನಗಳು ತೋರಿಸಿ ಕೊಟ್ಟಿವೆ. ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟೀರಿಯೋಲೊಜಿಯ ದತ್ತಾಂಶಗಳ ಪ್ರಕಾರ ಅಕ್ಟೋಬರ್ 12ರಿಂದ 21ರ ನಡುವೆ ದಿಲ್ಲಿಯ ಪಿಎಂ2.5 ಮಟ್ಟದಲ್ಲಿ ಕೂಳೆ ಸುಡುವುದರಿಂದ ಉಂಟಾದ ಪರಿಣಾಮ ಕೇವಲ 0.92ಶೇ.
ಅಂದರೆ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಹನ, ಕಾರ್ಖಾನೆ ಮತ್ತು ಇಟ್ಟಿಗೆಗೂಡು ಪ್ರದೂಷಣೆಗಳೇ ವಾಯು ಮಾಲಿನ್ಯಕ್ಕೆ ಪ್ರಧಾನ ಕಾರಣಗಳು ಎನ್ನುವುದು ಸ್ಪಷ್ಟ. ಆದರೆ ಇದಕ್ಕಾಗಿ ಶ್ರೀಮಂತರು ಮತ್ತು ಬಂಡವಳಿಗರ ಮೇಲೆ ಯಾವುದೇ ದಂಡ ಹಾಕುತ್ತಿಲ್ಲ, ಈ ಪ್ರದೇಶ ವಾಹನಗಳಿಂದ ತುಂಬಿ ಹೋಗಿರುವುದನ್ನು ತಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಬದಲಿಗೆ ಬಡ ರೈತರ ಮೇಲೆ ಗುರಿಯಿಡಲಾಗುತ್ತಿದೆ ಎಂದು ಎಐಕೆಎಸ್ ಹೇಳಿದೆ. ಈ ಮೂಲಕ ಕಾರ್ಪೊರೇಟ್-ಪರ ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಾರಿತ್ರಿಕ ಹೋರಾಟ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿಗಾಗಿರುವ ಹಿನ್ನಡೆಗಾಗಿ ಅವರ ಮೇಲೆ ಮುಯ್ಯಿ ತೀರಿಸಿಕೊಳ್ಳಲಾಗುತ್ತಿದೆ.
ವಾಸ್ತವವಾಗಿ, ರೈತರು ಕೃಷಿ ಅರಣ್ಯೀಕರಣ ಮತ್ತು ಹಸಿರು ಹೊದಿಕೆಯ ರಕ್ಷಣೆಯ ಮೂಲಕ ದೇಶಕ್ಕೆ ಪರಿಸರ ಸೇವೆ ಸಲ್ಲಿಸುತ್ತಿದ್ದಾರೆ, ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅವರನ್ನು ದಂಡಿಸುತ್ತಿದೆ ಎಂದಿರುವ ಕಿಸಾನ್ ಸಭಾ, ರೈತರಿಗೆ ಸಿ2+50% ಸೂತ್ರದಂತೆ ಫಲದಾಯಕ ಬೆಲೆಗಳ ಭರವಸೆ ಮತ್ತು ಕೂಳೆ ನಿರ್ವಹಣೆಗೆ ಹೆಕ್ಟೇರಿಗೆ 10000 ರೂ.ನಂತೆ ಪರಿಸರ ಸೇವಾ ಶುಲ್ಕವನ್ನು ಕೊಟ್ಟರೆ, ಕೂಳೆ ಸುಡುವ ಈ ಇಡೀ ಸಮಸ್ಯೆಯನ್ನು ಎದುರಿಸಬಹುದು ಎಂದು ಹೇಳಿದೆ.
ನರೇಂದ್ರ ಮೋದಿ ಸರಕಾರ ಡಿಸೆಂಬರ್ 2021ರಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದೊಡನೆ ಮಾಡಿಕೊಂಡ ಒಪ್ಪಂದದಲ್ಲಿ ಕೂಳೆ ಸುಡುವ ಹೆಸರಿನಲ್ಲಿ ರೈತರನ್ನು ಶಿಕ್ಷಿಸುವುದಿಲ್ಲ ಎಂದು ಹೇಳಿತ್ತು. ಈಗ ಈ ವಿಷಯದಲ್ಲಿ ಸರಕಾರ ವಿಶ್ವಾಸಘಾತ ಮಾಡುತ್ತಿದೆ. ಈಗ ಈ ಕರಾಳ ಅಧಿಸೂಚನೆಯನ್ನು ಹೇರಿದರೆ, ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಅಖಲ ಭಾರತ ಕಿಸಾನ್ ಸಭಾ ಈ ಅಧಿಸೂಚನೆಯನ್ನು ತಕ್ಷಣ ರದ್ದು ಮಾಡಬೇಕು ಎಂದು ಆಗ್ರಹಿಸಿದೆ.
ಇದನ್ನೂ ನೋಡಿ: ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ : ಆರೋಪಗಳಿಗೆ ಸಿಕ್ಕಿದ್ದು ತಾತ್ಕಾಲಿಕ ಜಾಮೀನು Janashakthi Media