ಗಿಗ್‌ ಆರ್ಥಿಕತೆಯಲ್ಲಿ ಪಿತೃಪ್ರಧಾನ ಧೋರಣೆ

ಡಿಜಿಟಲ್‌ ಪ್ಲಾಟ್‌ಫಾರಂಗಳಲ್ಲಿ ಮಹಿಳಾ ಕಾರ್ಮಿಕರ ಮೊಟ್ಟಮೊದಲ ಮುಷ್ಕರ ಗಮನಾರ್ಹವಾದುದು
ನಾ ದಿವಾಕರ

(ಮೂಲ ಆಧಾರ : ದ ಹಿಂದೂ ಪತ್ರಿಕೆಯಲ್ಲಿ ನವಂಬರ್‌ 11 2024ರಂದು ಪ್ರಕಟವಾದ ಲೇಖನ :  Calling out exploitative labour dynamics on platforms –  ಸೀಮಾ ಸಿಂಗ್‌, ನಿಶಾ ಪನ್ವಾರ್‌, ಸೆಲ್ವಿ (‌ ಗಿಗ್‌ ಕಾರ್ಮಿಕರು ಮತ್ತು GIPSWU ಸಂಘಟನೆಯ ಸಂಸ್ಥಾಪಕರು ) ಮತ್ತು ಚಂದನ್‌ ಕುಮಾರ್ ಕಾರ್ಮಿಕ ಸಂಘಟನೆಯ ಕಾರ್ಯಕರ್ತ )

 

ಇತ್ತೀಚೆಗೆ ಬೆಂಗಳೂರಿನ ಜೈನ್‌ ಪರಿಭಾವಿತ ವಿಶ್ವವಿದ್ಯಾಲಯದ ಸಮಾರಂಭವೊಂದರಲ್ಲಿ ವಿದ್ಯಾರ್ಥಿನಿಯೊಬ್ಬರು ಮಹಿಳೆಯರ ಮುನ್ನಡೆಯ ಹಾದಿಯಲ್ಲಿ ಪಿತೃಪ್ರಧಾನತೆಯು ಸೃಷ್ಟಿಸುವ ಅಡೆತಡೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ವಿತ್ತ ಸಚಿವೆ ನಿರ್ಮಲಾಸೀತಾರಾಮನ್‌, ಯುವ ಮನಸುಗಳು ಪಿತೃಪ್ರಧಾನತೆ ಎಂಬ ಅದ್ಭುತ ಅರ್ಥವಾಗದ ಪರಿಭಾಷೆಗೆ (Fantastic Jargon) ಮರುಳಾಗದಿರುವಂತೆ ಹೇಳಿರುವುದೇ ಅಲ್ಲದೆ, ಈ ಪರಿಭಾಷೆಯನ್ನು ಎಡಪಂಥೀಯ ವಿಚಾರಧಾರೆಯಲ್ಲಿ ಸೃಷ್ಟಿಯಾಗಿರುವ ಒಂದು ಬೌದ್ಧಿಕ ನಿರೂಪಣೆ ಎಂದು ವ್ಯಾಖ್ಯಾನಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಭಾರತದ ಇತಿಹಾಸದಲ್ಲೇ ದಾಖಲಾಗಿರುವ ಹಲವು ಮಹಿಳೆಯರ ಯಶೋಗಾಥೆಯನ್ನು ಉಲ್ಲೇಖಿಸುವ ಮೂಲಕ, ಯುವ ಸಮೂಹ ಇಂತಹ ನಿರೂಪಣೆಗಳಿಗೆ ಮರುಳಾಗದೆ, ಧೈರ್ಯವಾಗಿ ಮುನ್ನಡೆಯುವಂತೆ ಹೇಳಿದ್ದಾರೆ. (ದ ಹಿಂದೂ ವರದಿ 10 ನವಂಬರ್‌ 2024)

ಯುವ ತಲೆಮಾರಿನ ಹೆಣ್ಣುಮಕ್ಕಳನ್ನು ಈ ರೀತಿಯ ಆತ್ಮಸ್ಥೈರ್ಯದೊಂದಿಗೆ ಮುನ್ನುಗ್ಗುವ ಧೈರ್ಯ ತುಂಬುವುದು ವರ್ತಮಾನದ ಸಂದರ್ಭದಲ್ಲಿ ಸ್ವಾಗತಾರ್ಹ. ಆದರೆ ವಿತ್ತ ಸಚಿವರು ಹೇಳಿರುವಂತೆ ಪಿತೃಪ್ರಧಾನತೆ ಎನ್ನುವುದು ಒಂದು ಜಾರ್ಗನ್‌ ಅಲ್ಲ ಎನ್ನುವುದನ್ನೂ ಮನದಟ್ಟುಮಾಡಬೇಕಿದೆ. ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಲಯಗಳಲ್ಲಿ ಮಹಿಳೆಯರ ಸಾಧನೆಗಳನ್ನು, ಸಾಧಕ ಮಹಿಳೆಯರ ಯಶೋಗಾಥೆಯನ್ನು ಸಮ್ಮಾನಿಸುತ್ತಲೇ ನೋಡುವುದಾದರೆ, ಇಂದಿಗೂ ಸಹ ಈ ಎಲ್ಲ ವಲಯಗಳಲ್ಲೂ ಮೌಲಿಕ ನೆಲೆಯಲ್ಲಿ ಪಿತೃಪ್ರಧಾನತೆ ಆಳವಾಗಿ ಬೇರೂರಿರುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಅತ್ಯುನ್ನತ ಹುದ್ದೆಯಲ್ಲಿರುವ ಮಹಿಳೆಯರೂ ಸಹ ತಮ್ಮ ಕೆಲಸದ ಸ್ಥಳಗಳಲ್ಲಿ, ಸಾರ್ವಜನಿಕ ಜೀವನದಲ್ಲಿ ಪಿತೃಪ್ರಧಾನ-ಪುರುಷಾಧಿಪತ್ಯದ ಮೌಲ್ಯಗಳ ವಿರುದ್ಧ ಸೆಣಸಾಡುತ್ತಲೇ ಇರುವುದು ಸುಡು ವಾಸ್ತವ.

ಇತ್ತೀಚಿನ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಡೆಮಾಕ್ರಟ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ಸೋಲಿಗೆ ಪ್ರಮುಖ ಕಾರಣಗಳ ಪೈಕಿ ಪಿತೃಪ್ರಧಾನ ಧೋರಣೆಯ ಸ್ತ್ರೀದ್ವೇಷವೂ ಒಂದು ಎಂದು ಖ್ಯಾತ ವಿಶ್ಲೇಷಕರೂ ಅಭಿಪ್ರಾಯಪಟ್ಟಿದ್ದಾರೆ. ಭಾರತದ ರಾಜಕಾರಣದಲ್ಲೂ ಇದನ್ನು ಹಲವು ಆಯಾಮಗಳಲ್ಲಿ ಕಾಣುತ್ತಲೇ ಬಂದಿದ್ದೇವೆ. ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದನ್ನೇ ಅಥವಾ ಎಲ್ಲ ವಲಯಗಳಲ್ಲಿ ಅವಕಾಶಗಳನ್ನು ಕಲ್ಪಿಸುವುದನ್ನೇ ಸಮಾನತೆ ಎಂದು ಭಾವಿಸುವ ಧೋರಣೆಯೇ ಪುರುಷ ಪ್ರಧಾನವಾದದ್ದು ಎನ್ನುವುದನ್ನು ಇನ್ನಾದರೂ ಗಮನಿಸಬೇಕಿದೆ. ಸಾಂವಿಧಾನಿಕವಾಗಿ ಅಥವಾ ಸ್ವಾಭಾವಿಕ ನ್ಯಾಯದ ಪರಿಕಲ್ಪನೆಯಲ್ಲಿ ವಿಶ್ವದ ಅರ್ಧದಷ್ಟಿರುವ ಮಹಿಳೆಯರು ತಾವು ಪಡೆಯಬೇಕಾದ ಹಕ್ಕುಗಳಿಗೂ, ಪಿತೃಪ್ರಧಾನ ಸಮಾಜವೊಂದು ತನ್ನ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ʼ ನೀಡುವ ʼ ಅಥವಾ ʼ ಕಲ್ಪಿಸುವ ʼ ಅವಕಾಶಗಳಿಗೂ ಬಹಳಷ್ಟು ಅಂತರವಿದೆ. ಇಲ್ಲಿ ಸೂತ್ರ ಯಾರ ಕೈಯ್ಯಲ್ಲಿದೆ ಎನ್ನುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ :ಮಹಾರಾಷ್ಟ್ರ ಚುನಾವಣೆ 2024: ಕಾಂಗ್ರೆಸ್‌ನಿಂದ 28 ಬಂಡಾಯ ಶಾಸಕರಿಗೆ ಗೇಟ್‌ಪಾಸ್ 

ಭಾರತದ ಸಂದರ್ಭದಲ್ಲೇ ಹೇಳುವುದಾದರೆ, ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ ವಲಯಗಳಲ್ಲಿ ಈ ಸೂತ್ರಗಳನ್ನು ನಿಯಂತ್ರಿಸುವುದು, ನಿರ್ವಹಿಸುವುದು ಊಳಿಗಮಾನ್ಯ ಪಿತೃಪ್ರಧಾನತೆಯನ್ನು ಎತ್ತಿಹಿಡಿಯುವ ಪುರುಷಾಧಿಪತ್ಯದ ನೆಲೆಗಳೇ ಎಂದು ದೃಢೀಕರಿಸಲು ಯಾವುದೇ ಸಂಶೋಧನೆಗಳ ಅಗತ್ಯವಿಲ್ಲ. ಸಣ್ಣ ಸಾರ್ವಜನಿಕ ವೇದಿಕೆಯಿಂದ ಹಿಡಿದು ಅತ್ಯುನ್ನತ ಸಂಸತ್‌ ಭವನದವರೆಗೆ ವಿಸ್ತರಿಸುವ ಸಮಾಜದಲ್ಲಿ ಪ್ರತಿಯೊಂದು ಸ್ತರದಲ್ಲೂ ಮಹಿಳಾ ಪ್ರಾತಿನಿಧ್ಯವನ್ನು ಕಡೆಗಣಿಸುವ ಪರಂಪರೆಯನ್ನು ಇಂದಿಗೂ ಕಾಣುತ್ತಿದ್ದೇವೆ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಎಲ್ಲ ಪಕ್ಷಗಳೂ ಸಮ್ಮತಿಸಿದ್ದರೂ, ಈಗಲೂ ಆಯ್ಕೆಯಾದ ಪ್ರತಿನಿಧಿಗಳ ಪೈಕಿ ಮಹಿಳೆಯರ ಪ್ರಮಾಣ ಶೇಕಡಾ 15ರ ಮಿತಿಯನ್ನು ಮೀರಿಲ್ಲ ಎನ್ನುವುದು ವಾಸ್ತವ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿದೆ. ಈ ಹಾದಿಯಲ್ಲಿ ಸುಧಾರಣೆಗಳನ್ನು ಕಾಣಬಹುದಾದರೂ ಅದನ್ನು ವ್ಯವಸ್ಥೆಯ ಔದಾರ್ಯದಂತೆ ಪರಿಭಾವಿಸುವ ಪುರುಷಾಧಿಪತ್ಯದ ನೆಲೆಗಳು ಅಂತಿಮವಾಗಿ ತಮ್ಮದೇ ಪಾರಮ್ಯವನ್ನು ಸಾಧಿಸಿರುವುದೂ ಸತ್ಯ.

ಮಾರುಕಟ್ಟೆ ಆರ್ಥಿಕತೆಯ ಪರಿಸರದಲ್ಲಿ

ನವ ಉದಾರವಾದವು ಸೃಷ್ಟಿಸಿರುವ ಮಾರುಕಟ್ಟೆ ಆರ್ಥಿಕತೆಯಲ್ಲಿ ʼಉದ್ಯೋಗʼ ಎನ್ನುವುದು ಡಿಜಿಟಲೀಕರಣಕ್ಕೊಳಗಾಗಿ, ಹೊರ ಸಮಾಜಕ್ಕೆ ಗೋಚರಿಸದ ಬೃಹತ್‌ ಸಂಖ್ಯೆಯ ದುಡಿಮೆಯ ಕೈಗಳು ಸೃಷ್ಟಿಯಾಗಿವೆ. ಮಾರುಕಟ್ಟೆ ಆರ್ಥಿಕತೆಯ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಒದಗಿಸುವ ಉದ್ಯೋಗಾವಕಾಶಗಳನ್ನು ಅನಿವಾರ್ಯವಾಗಿ ಅವಲಂಬಿಸಬೇಕಾದ ಯುವ ತಲೆಮಾರಿನ ಉದ್ಯೋಗಿಗಳನ್ನು ʼ ಗಿಗ್‌ ಕಾರ್ಮಿಕರು ʼ ಎಂದೇ ಗುರುತಿಸಲಾಗುತ್ತಿದೆ. ( “ಗಿಗ್” ಎಂಬ ಪದವು 1920 ರ ದಶಕದಲ್ಲಿ ಜಾಝ್‌ ಸಂಗೀತ ಕಚೇರಿಯಲ್ಲಿ ತೊಡಗುವವರನ್ನು ಗುರುತಿಸುವ ಗ್ರಾಮ್ಯ ಪರಿಭಾಷೆಯಾಗಿ ಹುಟ್ಟಿಕೊಂಡಿತು.ಸಂಗೀತದ ಪ್ರದರ್ಶನಕ್ಕೆ ಹಾಜರಾಗುವುದು ಅಥವಾ ಸಹಾಯ ಮಾಡುವುದು ಅಥವಾ  ತಾತ್ಕಾಲಿಕ ಕೆಲಸಗಳು ಎಂದೂ ಅರ್ಥೈಸಲಾಗುತ್ತದೆ. “ಗಿಗ್ ಆರ್ಥಿಕತೆ” ಯ ಸಂದರ್ಭದಲ್ಲಿ ಸ್ವತಂತ್ರ ಉದ್ಯೋಗಿಗಳು, ಸ್ವತಂತ್ರ ಗುತ್ತಿಗೆದಾರರು, ಪ್ರಾಜೆಕ್ಟ್-ಆಧಾರಿತ ಕೆಲಸಗಾರರು ಮತ್ತು ತಾತ್ಕಾಲಿಕ ಅಥವಾ ಅರೆಕಾಲಿಕ ಕಾರ್ಮಿಕರನ್ನು ಹೀಗೆ ಕರೆಯಲಾಗುತ್ತದೆ.)

ಭಾರತದ ಗಿಗ್‌ ಆರ್ಥಿಕತೆಯಲ್ಲಿ ಸಂಭವಿಸಿರುವ ಗಮನಾರ್ಹ ಬೆಳವಣಿಗೆಯನ್ನು ಗಮನಿಸಿದಾಗ, ಹೊರ ಸಮಾಜಕ್ಕೆ ಗೋಚರಿಸದೆಯೇ ಆರ್ಥಿಕತೆಗೆ ತಮ್ಮ ಶ್ರಮ ಮತ್ತು ದುಡಿಮೆಯನ್ನು ಒದಗಿಸುವ ಗಿಗ್‌ ಕಾರ್ಮಿಕರ ನಡುವೆಯೂ ಪಿತೃಪ್ರಧಾನತೆ ಇರುವುದು ಸ್ಪಷ್ಟವಾಗುತ್ತದೆ. ಭಾರತದ ಮಹಿಳಾ ಗಿಗ್‌ ಉದ್ಯೋಗಿಗಳು ಕಳೆದ ದೀಪಾವಳಿಯನ್ನು “ ಕರಾಳ ದೀಪಾವಳಿ ”ಯಾಗಿ ಆಚರಿಸಿದ್ದು, ದೇಶವ್ಯಾಪಿ ಡಿಜಿಟಲ್‌ ಮುಷ್ಕರಕ್ಕೆ ನಾಂದಿ ಹಾಡಿದ್ದಾರೆ. ಪ್ರತ್ಯೇಕವಾಗಿ ಮಹಿಳಾ ಕಾರ್ಮಿಕರೇ ತಮ್ಮ ಹಕ್ಕುಗಳಿಗಾಗಿ ಅಥವಾ ತಮ್ಮ ವಿರುದ್ಧ ನಡೆಯುವ ಅನ್ಯಾಯಗಳ ವಿರುದ್ಧ ಮುಷ್ಕರ ಹೂಡಿದ ಉದಾಹರಣೆಗಳು ಔಪಚಾರಿಕ ಆರ್ಥಿಕತೆಯಲ್ಲೂ ಅಪರೂಪದ ವಿದ್ಯಮಾನ.  GIPSWU ( ಗಿಗ್‌ ಪ್ಲಾಟ್‌ಫಾರ್ಮ್‌ ಸೇವಾ ಕಾರ್ಮಿಕರ ಸಂಘಟನೆ) ಆಯೋಜಿಸಿದ್ದ ಈ ದೇಶವ್ಯಾಪಿ ಮುಷ್ಕರ ಯಶಸ್ವಿಯಾಗಿದ್ದು, ಡಿಜಿಟಲ್‌ ಆರ್ಥಿಕತೆಯಲ್ಲಿ ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ತಾರತಮ್ಯಗಳು, ಶೋಷಣೆ ಮತ್ತು ಕಿರುಕುಳಗಳ ಬಗ್ಗೆ ಇದು ಬೆಳಕು ಚೆಲ್ಲಿದೆ. ಈ ದೇಶವ್ಯಾಪಿ ಯಾವುದೇ ಮಾಧ್ಯಮದಲ್ಲಿ ಸುದ್ದಿಯಾಗದಿರುವುದೇ  ಸಂವಹನ ಮಾಧ್ಯಮಗಳಲ್ಲಿರುವ ಪಿತೃಪ್ರಧಾನತೆಯ ಲಕ್ಷಣವಾಗಿ ಕಾಣವುದಿಲ್ಲವೇ ?

ಗಿಗ್‌ ಆರ್ಥಿಕತೆಯ ಒಳಸುಳಿಗಳು

ಗಿಗ್‌ ಪ್ಲಾಟ್‌ಫಾರ್ಮ್‌ಗಳು ದೀಪಾವಳಿ ಅಥವಾ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಗ್ರಾಹಕರಿಗೆ ಅಪಾರ ಪ್ರಮಾಣದ ರಿಯಾಯಿತಿಗಳನ್ನು ನೀಡುವುದು ಸಹಜ ವಿದ್ಯಮಾನ. ಈ ರಿಯಾಯಿತಿಗಳ ಹೊರೆಯನ್ನು ಹೊರಬೇಕಾದವರು ಹಗಲಿರುಳೆನ್ನದೆ ಗುಲಾಮರಂತೆ ದುಡಿಯಬೇಕಾದ ಗಿಗ್‌ ಕಾರ್ಮಿಕರೇ ಎಂದು ಈ ಸಂಘಟನೆಯ ವಕ್ತಾರರು ಹೇಳುತ್ತಾರೆ. ಈ ಕಾರ್ಮಿಕರ ಹೆಚ್ಚುವರಿ ದುಡಿಮೆಯಿಂದ ಉತ್ಪಾದಿತವಾಗುವ ಮೌಲ್ಯವನ್ನು ಮಾರುಕಟ್ಟೆಯಲ್ಲಿ ನಗದೀಕರಿಸಿ ಲಾಭ ಗಳಿಸುವುದು ಕಾರ್ಪೋರೇಟ್ ಗಿಗ್‌ ಪ್ಲಾಟ್‌ಫಾರ್ಮ್‌ಗಳಾಗಿರುತ್ತವೆ. ಸಾಮಾನ್ಯವಾಗಿ ಆರ್ಥಿಕತೆಯ ಸಂಕಥನಗಳಲ್ಲಿ ಯುವ ಜನತೆಗೆ ಯೂನಿಕಾರ್ನ್‌ ಸ್ಟಾರ್ಟ್‌ಅಪ್‌ ( Unicorn Startups) ಗಳಲ್ಲಿ ಸುಲಭವಾಗಿ ನೌಕರಿ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಯೂನಿಕಾರ್ನ್‌ಗಳು ಹೇಗೆ ಲಾಭ ಗಳಿಸುತ್ತವೆ ಎಂದು ಎಲ್ಲಿಯೂ ವಿಶ್ಲೇಷಿಸಲಾಗುವುದಿಲ್ಲ. ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರನ್ನು ತೀವ್ರವಾಗಿ ಶೋಷಣೆಗೊಳಪಡಿಸುವ ಮೂಲಕವೇ ಈ ಲಾಭಗಳಿಕೆ ಸಾಧ್ಯ .

ಕಳೆದ ಅಕ್ಟೋಬರ್‌ನಲ್ಲಿ ಖ್ಯಾತ ವಿಡಂಬನಕಾರರೊಬ್ಬರು ಪ್ರಖ್ಯಾತ ಪ್ಲಾಟ್‌ಫಾರ್ಮ್‌ ಕಂಪನಿಯ ಉತ್ಪನ್ನ ಮತ್ತು ಸೇವೆಗಳಲ್ಲಿ ಕಳಪೆ ಗುಣಮಟ್ಟವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕವಾಗಿ ಪ್ರಸಾರವಾಗಿತ್ತು. ಆದರೆ ಇಂತಹ ಒಂದು ಕಂಪನಿಯ ಸಿಇಒ (CEO) ಈ ಆಪಾದನೆಗಳನ್ನು ಅಲ್ಲಗಳೆದದ್ದೂ ಅಲ್ಲದೆ, ದೇಶದ ಪ್ರಮುಖ ಸುದ್ದಿವಾಹಿನಿಗಳು ಆ ಕಲಾವಿದನನ್ನು ದೇಶದ್ರೋಹಿ ಎಂದು ಬಣ್ಣಿಸುವ ಮಟ್ಟಕ್ಕೆ ಖಂಡಿಸಲಾರಂಭಿಸಿದ್ದವು.  ಇಲ್ಲಿ ಪ್ರಶ್ನೆ ಇರುವುದೆಂದರೆ, ಈ ಪ್ಲಾಟ್‌ಫಾರ್ಮ್‌ ಕಂಪನಿಗಳು ಸಂಪತ್ತು ಸೃಷ್ಟಿಸುವುದರ ಹಿಂದೆ ಅಡಗಿರುವ ಗಿಗ್‌ ಕಾರ್ಮಿಕರ ಶೋಷಣೆ, ಅಗ್ಗದ ಶ್ರಮವೇ ಆಗಿರುತ್ತದೆ.  ಭಾರತದ ಜಿಡಿಪಿಯಲ್ಲಿ ಶೇಕಡಾ 60ರಷ್ಟು ಕೊಡುಗೆ ನೀಡುವ ಈ ಕಾರ್ಮಿಕರ ಶೋಷಣೆಯನ್ನೇಕೆ ದೇಶದ್ರೋಹ ಎಂದು ಪರಿಗಣಿಸಬಾರದು ಎಂದು ಪ್ರಶ್ನಿಸಬೇಕಲ್ಲವೇ ?

ಈ ಕಾರಣಗಳಿಗಾಗಿಯೇ ಸಂಘಟನೆಯು ದೀಪಾವಳಿಯಂದು ದೇಶವ್ಯಾಪಿ ಮುಷ್ಕರ ಹಮ್ಮಿಕೊಂಡಿತ್ತು. ಹಲವು ಮಾಧ್ಯಮಗಳು, ನಾಗರಿಕ ವೇದಿಕೆಗಳು ಮತ್ತು ಗಿಗ್‌ ಕಾರ್ಮಿಕರು ಮಹಿಳೆಯರ ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರು. ಕಾರ್ಮಿಕರ ಸ್ಥಿತಿಗತಿಗಳ ಸಾರ್ವಜನಿಕ ಚರ್ಚೆಗಳಲ್ಲಿ ಹೆಚ್ಚು ಪ್ರಸ್ತಾಪವಾಗದ ಈ ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳು ಮತ್ತು ಬೇಡಿಕೆಗಳು ಗಂಭೀರ ಸ್ವರೂಪದ್ದಾಗಿದ್ದು ದೀರ್ಘಕಾಲದ ಹೋರಾಟಗಳು ಅತ್ಯವಶ್ಯ ಎಂದು ಸಂಘಟನೆಯ ನೇತಾರರು ಹೇಳುತ್ತಾರೆ. ಸರ್ಕಾರಗಳು ಹಾಗೂ ಗಿಗ್‌ ಕಂಪನಿಗಳು ಕನಿಷ್ಠ ಪ್ರಮಾಣದ ಸಾಮಾಜಿಕ ಭದ್ರತೆಗಳ ಬಗ್ಗೆ ಮಾತ್ರ ಯೋಚನೆ ಮಾಡುತ್ತವೆ ಆದರೆ ಇದಾವುದೂ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸುವುದಿಲ್ಲ.  GIPSWU ಸಂಘಟನೆಯ ವಕ್ತಾರರೇ ಹೇಳುವಂತೆ, ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಪ್ರಾಚೀನ ಪಿತೃಪ್ರಧಾನ ಸಂರಚನೆಗಳನ್ನು ಇಂದಿಗೂ ಕಾಪಾಡಿಕೊಂಡಿದ್ದು ಮಹಿಳಾ ಕಾರ್ಮಿಕರನ್ನು ಸೌಂದರ್ಯವರ್ಧಕ ಕೆಲಸಗಳು, ಅಡುಗೆ ಕೆಲಸ ಮತ್ತು ಮನೆ ಕೆಲಸಗಳಿಗಷ್ಟೇ ಸೀಮಿತಗೊಳಿಸುತ್ತವೆ. ಈ ಮಹಿಳಾ ಕಾರ್ಮಿಕರ ನೌಕರಿಯ ಭದ್ರತೆಗೆ ಗ್ರಾಹಕರು ನೀಡುವ ರೇಟಿಂಗ್ಸ್‌ ಅಥವಾ ಸ್ವಯಂ ನಿಯೋಜಿತ ಉದ್ಯೋಗಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ.

ಒಂದು ವೇಳೆ ಮಹಿಳೆಯರು ಶೋಷಣೆಗೊಳಪಡಿಸುವಂತಹ ನಿಯಮಗಳನ್ನು ನಿರಾಕರಿಸಿದರೆ ಅಂತಹವರನ್ನು ನಿಯಮಬಾಹಿರವಾಗಿ ಉಚ್ಚಾಟಿಸಲಾಗುತ್ತದೆ ಅಥವಾ ಬ್ಲಾಕ್‌ ಮಾಡಲಾಗುತ್ತದೆ. ಗಿಗ್‌ ಮಹಿಳಾ ಕಾರ್ಮಿಕರಲ್ಲಿ ಬಹುಪಾಲು ವಿಧವೆಯರು, ಒಂಟಿ ತಾಯಂದಿರು, ಕೌಟುಂಬಿಕ ದೌರ್ಜನ್ಯಗಳನ್ನೆದುರಿಸಿದ ಸಂತ್ರಸ್ತರು ಇರುತ್ತಾರೆ. ಇವರು ತಮ್ಮ ಜೀವನೋಪಾಯಕ್ಕಾಗಿ ಪ್ಲಾಟ್‌ಫಾರ್ಮ್‌ ನೌಕರಿಯನ್ನು ಅರಸಿ ಬರುತ್ತಾರೆ.  ಈ ಕಾರ್ಮಿಕರ ದುಡಿಮೆಯೇ ಅಗ್ಗದ ಶ್ರಮ ಎಂದು ಅರಿತ ಕಂಪನಿಗಳು ಸಂಘಟಿತರಾಗುವುದಕ್ಕೇ ಹಲವು ಅಡಚಣೆಗಳನ್ನು ಉಂಟುಮಾಡುತ್ತವೆ. ದುಡಿಮೆಯನ್ನು ನಿರ್ವಹಿಸಲು ಕೃತಕ ಬುದ್ಧಿಮತ್ತೆಯನ್ನು (Artificial Intellegence ) ನಿಯೋಜಿಸುವ ಮೂಲಕ ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತವೆ. ದುಡಿಮೆಯ ಅವಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡುವ ಮತ್ತು ಆರ್ಥಿಕ ಸ್ವಾತಂತ್ರ್ಯದ ನೆಪದಲ್ಲಿ ಮಹಿಳೆಯರನ್ನು ಆಕರ್ಷಿಸುತ್ತವೆ.

ಊಳಿಗಮಾನ್ಯ ಪಿತೃಪ್ರಧಾನತೆ

ಆದರೆ ಈ ʼ ಔದಾರ್ಯʼದ ಹಿಂದೆ ಸ್ವಾರ್ಥ ಹಿತಾಸಕ್ತಿಗಳೂ ಅಡಗಿರುತ್ತವೆ. ಗಿಗ್‌ ಕಾರ್ಮಿಕರಿಗೆ ಅವಾಸ್ತವಿಕವಾದ ಟಾರ್ಜೆಟ್‌ಗಳನ್ನು ನಿಗದಿಪಡಿಸುವ ಮೂಲಕ ಹೆಚ್ಚಿನ ದುಡಿಮೆಯನ್ನು ನಿರೀಕ್ಷಿಸಲಾಗುತ್ತದೆ. ಈ ಕಾರ್ಮಿಕರ ಕೆಲಸದ ಸಮಯವನ್ನು ನಿಯಂತ್ರಿಸುವ ನೆಪದಲ್ಲಿ ಮಹಿಳಾ ಕಾರ್ಮಿಕರ ಮೇಲೆ ಸಾರಿಗೆ ವೆಚ್ಚ, ಪ್ಲಾಟ್‌ಫಾರ್ಮ್‌ ಶುಲ್ಕ ಮತ್ತು ಸೇವಾ ಉತ್ಪನ್ನಗಳ ಹೊರೆಯನ್ನು ಹೊರಿಸಲಾಗುತ್ತದೆ. ಆದರೆ ಇದಕ್ಕೆ ಪೂರಕವಾದ ಆದಾಯವನ್ನಾಗಲೀ, ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನಾಗಲೀ ಒದಗಿಸಲಾಗುವುದಿಲ್ಲ.  ಗಿಗ್‌ ಪ್ಲಾಟ್‌ಫಾರ್ಮ್‌ಗಳ ಈ ಕಾರ್ಮಿಕ ವಿರೋಧಿ ನೀತಿಗಳನ್ನು ನಿಯಂತ್ರಿಸಲು ಸರ್ಕಾರಗಳು ಯಾವುದೇ ಕಾನೂನು ರೂಪಿಸಿಲ್ಲ. ದತ್ತಾಂಶ ಗೋಪ್ಯತೆಯ ಕಾನೂನುಗಳು ಇಲ್ಲದಿರುವುದರಿಂದ ದೊಡ್ಡ ಪ್ಲಾಟ್‌ಫಾರ್ಮ್‌ ಕಂಪನಿಗಳು  ದುಡಿಮೆಯನ್ನು ಮೂಲದಲ್ಲೇ ಸ್ತ್ರೀಕರಣಕ್ಕೊಪಡಿಸುತ್ತವೆ (Feminisation of labour). ಅಂದರೆ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಹಿಳೆಯರಿಗೇ ನೀಡುವ ಒಂದು ವಿಧಾನ ಅಥವಾ ಮಹಿಳೆಯರ ದುಡಿಮೆಯನ್ನು ಸೀಮಿತಗೊಳಿಸುವ ಮಾದರಿ.

ಈ ಪಿತೃಪ್ರಧಾನ ಸಂರಚನೆಯೇ ಭಾರತದಲ್ಲಿ ಮಹಿಳಾ ಕಾರ್ಮಿಕರನ್ನು ಮೂಲಭೂತ ಮಾನವ ಹಕ್ಕುಗಳು ಮತ್ತು ಕಾರ್ಮಿಕ ಹಕ್ಕುಗಳಿಂದ ವಂಚಿಸಿದೆ. ಅಸಂಖ್ಯಾತ ಮಹಿಳೆಯರು ಈ ಕರಾಳ ಸನ್ನಿವೇಶವನ್ನು ಎದುರಿಸುತ್ತಿರುವಾಗಲೇ ದೇಶಾದ್ಯಂತ ʼ ಬೇಟಿ ಬಚಾವೊ ಬೇಟಿ ಪಢಾವೋ ʼ ಘೋಷಣೆ ಮೊಳಗುತ್ತಿರುವುದು ವಿಪರ್ಯಾಸ ಎನ್ನಬಹುದು .  ಆರ್ಥಿಕ ಸಬಲೀಕರಣದ ಮೂಲಕ ಭಾರತದ ನಿರುದ್ಯೋಗದ ಸಮಸ್ಯೆಯನ್ನು ನೀಗಿಸುವ ನೆಪದಲ್ಲಿ ಯೂನಿಕಾರ್ನ್‌ ಸ್ಟಾರ್ಟ್‌ಅಪ್‌ ಕಂಪನಿಗಳು ಅನುಸರಿಸುವ ಶೋಷಣೆಯ ಮಾದರಿಗಳಿಂದ ಮಹಿಳಾ ಕಾರ್ಮಿಕರು ಪಾರಾಗಲು ಸಾಧ್ಯವಾಗುತ್ತಿಲ್ಲ.  ಸಾಂಪ್ರದಾಯಿಕ ಪಿತೃಪ್ರಧಾನತೆ ಮತ್ತು ಡಿಜಿಟಲ್‌ ಪಿತೃಪ್ರಧಾನತೆಯ ಸಮ್ಮಿಲನದ ನಡುವೆ ಮಹಿಳಾ ಗಿಗ್‌ ಕಾರ್ಮಿಕರು ಇನ್ನೂ ಸಂಕೀರ್ಣವಾದ ಶೋಷಣೆಗಳನ್ನು ಎದುರಿಸುತ್ತಿರುವುದನ್ನು ಈ ಮುಷ್ಕರ ಮುನ್ನಲೆಗೆ ತಂದಿದೆ.

ದೀಪಾವಳಿಯಂದು ನಡೆದ ದೇಶವ್ಯಾಪಿ ಮುಷ್ಕರವು ಮಹಿಳಾ ಗಿಗ್‌ ಕಾರ್ಮಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೇ ಅಲ್ಲದೆ ಯಶಸ್ವಿ ಹೋರಾಟದ ಮಾರ್ಗಗಳನ್ನೂ ಸೂಚಿಸಿವೆ ಎಂದು ಹೆಮ್ಮೆಯಿಂದ ಹೇಳಬಹುದು. . ಇಂತಹ ಹಕ್ಕೊತ್ತಾಯಗಳ ಹೋರಾಟವು ಮತ್ತಾವ ದೇಶದಲ್ಲೂ ಸಾಧ್ಯವಾಗಿಲ್ಲ ಎನ್ನುವುದು ಈ ಸಂಘಟನೆಯ ಹಿರಿಮೆ ಎನ್ನಬಹುದು. ತಳಮಟ್ಟದ ಸಂಘಟನೆಯಲ್ಲಿರುವ ಶಕ್ತಿಯನ್ನು ಈ ಮುಷ್ಕರ ಮತ್ತೊಮ್ಮೆ ನಿರೂಪಿಸಿದೆ.  ವಿಶ್ವದಾದ್ಯಂತ ಗಿಗ್‌ ಕಾರ್ಮಿಕರು ಈ ಮಹಿಳಾ ಮುಷ್ಕರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು , ಇದನ್ನು ಮುಂದುವರೆಸುವ ಜವಾಬ್ದಾರಿ ದೇಶದ ಸಮಸ್ತ ಕಾರ್ಮಿಕ ವರ್ಗದ ಮೇಲಿದೆ. ಭಾರತದ ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನತೆಯನ್ನು ಅಲ್ಲಗಳೆಯುವ ಬದಲು ಅದನ್ನು ನಿವಾರಿಸುವ ನಿಟ್ಟಿನಲ್ಲಿ ಯೋಚನೆ ಮಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿಯೂ ಆಗಿದೆ.

Donate Janashakthi Media

Leave a Reply

Your email address will not be published. Required fields are marked *