ನವದೆಹಲಿ: ರಾಜ್ಯಗಳು ಸಂವಿಧಾನದ 39 (ಬಿ) ಅಡಿ ಸಾರ್ವಜನಿಕ ಹಂಚಿಕೆಗಾಗಿ ಎಲ್ಲಾ ಖಾಸಗಿ ಒಡೆತನದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದೆಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೇತೃತ್ವದ ಪೀಠವು 1978ರಲ್ಲಿ ನೀಡಿದ ತೀರ್ಪಿಗೆ ಸಂಬಂಧಿಸಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ , 9 ಮಂದಿ ಯ ಸಾಂವಿಧಾನಿಕ ನ್ಯಾಯಪೀಠದ ಸದಸ್ಯರಾದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಸುಧಾಂಶು ಧುಲಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನ್ಯಾಯಮೂರ್ತಿಗಳಾದ ಕೃಷ್ಣ ಅಯ್ಯರ್ ಹಾಗೂ ಚಿನ್ನಪ್ಪರೆಡ್ಡಿ ನಿರ್ದಿಷ್ಟ ಆರ್ಥಿಕ ಸಿದ್ದಾಂತದ ಪ್ರಭಾವಕ್ಕೊಳಗಾಗಿದ್ದರು ಎಂಬ ಸಿಜೆಐ ಚಂದ್ರಚೂಡ್ ಅವರ ಅನಿಸಿಕೆಯನ್ನು ನ್ಯಾಯಮೂರ್ತಿ ನಾಗರತ್ನ ಅವರು ವಿರೋಧಿಸಿದರು. ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಬಗ್ಗೆ ಸಿಜೆಐ ಚಂದ್ರಚೂಡ್ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅನಪೇಕ್ಷಿತ ಹಾಗೂ ಅಸಮರ್ಥನೀಯ ಎಂದು ನ್ಯಾ. ನಾಗರತ್ನ ಬಣ್ಣಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ: ಸಂವಿಧಾನ ವಿಧಿ 370 ಮರುಸ್ಥಾಪನೆ
ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ನೀಡಿದ್ದ ತೀರ್ಪನ್ನು ವ್ಯಾಖ್ಯಾನಿಸುವಾಗ , ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ಸಾಮಾಜಿಕ, ಆರ್ಥಿಕ ಹಾಗೂ ಸಾಂವಿಧಾನಿಕ ಸಂಸ್ಕೃತಿಯನ್ನು ಪರಿಗಣಿಸಬೇಕೆಂದು ನಾಗರತ್ನ ಹೇಳಿದರು. ಅಲ್ಲದೆ ಒಂದು ನಿರ್ದಿಷ್ಟ ತೀರ್ಪಿಗಾಗಿ ಮಾಜಿ ನ್ಯಾಯಾಧೀಶರನ್ನು ದೂಷಿಸುವುದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದರು.
ಸಿಜೆಐ ಅವರು ಕೃಷ್ಣ ಅಯ್ಯರ್ ಬಗ್ಗೆ ಮಾಡಿರುವ ಟೀಕೆಯು ಅತ್ಯಂತ ಕಟುವಾಗಿದ್ದು,ಅದನ್ನು ಹೇಳುವುದನ್ನು ತಪ್ಪಿಸಬಹುದಾಗಿತ್ತು ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದ್ದಾರೆ.
ಈ ಇಬ್ಬರೂ ನ್ಯಾಯಾಧೀಶರು 1978ರಲ್ಲಿ ತೀರ್ಪು ನೀಡಿದ ಸಂದರ್ಭ ತಮ್ಮ ಅಭಿಪ್ರಾಯಗಳಿಗೆ ಆಧಾರವಾಗಿ ಸಂವಿಧಾನದ ರಚನಾಕಾರರ ದೂರದರ್ಶಿತ್ವವನ್ನು ಪದೇ ಪದೇ ಪ್ರಸ್ತಾವಿಸಿದ್ದರೆಂದು ಅವರು ಹೇಳಿದರು.
ಕೃಷ್ಣ ಅಯ್ಯರ್ ನೇತೃತ್ವದ ಪೀಠದ ತೀರ್ಪನ್ನು ನ್ಯಾ. ಚಂದ್ರಚೂಡ್ ಟೀಕಿಸಿರುವುದನ್ನು ಸುಧಾಂಶು ಧೂಲಿಯಾ ಅವರು ಕೂಡಾ ಬಲವಾದ ಅಸಮಾಧಾನವನ್ನು ವ್ಯಕ್ತಪಡಿಸಿದರು. ನ್ಯಾಯ ಹಾಗೂ ಸಮಾನತೆಯ ಕುರಿತಾದ ಮಾನವತಾ ಸಿದ್ದಾಂತಗಳನ್ನು ಆಧರಿಸಿ ಅವರು ಆಗ ಆ ತೀರ್ಪನ್ನು ನೀಡಿದ್ದರು. ಅಂದಿನ ಕತ್ತಲ ದಿನಗಳಲ್ಲಿ ಸಾಗುವಾಗ ಆ ತೀರ್ಪು ನಮಗೆ ಬೆಳಕನ್ನು ತಂದುಕೊಟ್ಟಿತ್ತು ಎಂದು ಧುಲಿಯಾ ಹೇಳಿದರು.
ಇದನ್ನೂ ನೋಡಿ: ಮರಕುಂಬಿ ಪ್ರಕರಣದ ತೀರ್ಪು :ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಉಳಿಸಿದೆ – ಆರ್ ಕೆ ದೇಸಾಯಿ Janashakthi Media