ಭಾಷಾ ಅಸ್ಮಿತೆಯೂ ಕನ್ನಡ ಜನತೆಯ ಅಸ್ತಿತ್ವವೂ ಭಾಷೆಯ ಬೆಳವಣಿಗೆಯೊಂದಿಗೆ ಭಾಷಿಕರ ಬದುಕಿನ ಪ್ರಶ್ನೆಯೂ ನಮ್ಮನ್ನು ಕಾಡಬೇಕಿದೆ

-ನಾ ದಿವಾಕರ

ಕರ್ನಾಟಕದ ಒಂದು ವೈಶಿಷ್ಟ್ಯ ಎಂದರೆ ಭಾಷಾ ಅಸ್ಮಿತೆ, ಬೆಳವಣಿಗೆ ಮತ್ತು ಕನ್ನಡ ಭಾಷೆಯ-ಭಾಷಿಕರ ಹಾಗೂ ಸಮಸ್ತ ಕನ್ನಡಿಗರ ಅಳಿವು ಉಳಿವಿನ ಬಗ್ಗೆ ಗಂಭೀರ ಸಾರ್ವಜನಿಕ ಚರ್ಚೆಗಳು ನಡೆಯುವುದು ಪ್ರತಿವರ್ಷ ನವಂಬರ್‌ 1ರಂದು ಮಾತ್ರ ಅಥವಾ ಆ ದಿನದ ಸುತ್ತಮುತ್ತ. ಭಾಷೆ ಮತ್ತು ಭಾಷಿಕರ ಅಸ್ಮಿತೆಯನ್ನುನ ಭಾವನಾತ್ಮಕ ನೆಲೆಯಲ್ಲಿ ನಿರ್ವಚಿಸುವ ಕನ್ನಡ ಪರ ಸಂಘಟನೆಗಳು ಈ ವಿದ್ಯಮಾನವನ್ನು ʼಕನ್ನಡಿಗರ ರಕ್ಷಣೆ ಮತ್ತು ಭವಿಷ್ಯʼ ದ ದೃಷ್ಟಿಯಿಂದಲೇ ನೋಡುತ್ತವೆ. ಅಂದರೆ ಕನ್ನಡ ಒಂದು ಭಾಷೆಯಾಗಿ ಅಪಾಯದಲ್ಲಿದೆ , ಅಳಿವಿನಂಚಿನಲ್ಲಿದೆ ಎಂದೋ ಅಥವಾ ಕನ್ನಡಿಗರು ಪರಭಾಷಿಕರ ದಾಳಿಯಿಂದ ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೋ ಸಂಕಥನಗಳು ನಡೆಯುತ್ತವೆ. ಇದು ಅರೆವಾಸ್ತವ ಸ್ಥಿತಿಗತಿಗಳನ್ನು ಬಿಂಬಿಸುವ ಒಂದು ವಿದ್ಯಮಾನ. ಭಾಷಾ

ನವ ಉದಾರವಾದ ಮತ್ತು ಬಂಡವಾಳಶಾಹಿಯಿಂದ ನಿರ್ದೇಶಿಸಲ್ಪಡುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ ಭೌಗೋಳಿಕ ಜಗತ್ತನ್ನು ಭೌತಿಕವಾಗಿ ಸಂಕುಚಿತಗೊಳಿಸಿದೆ ಎನ್ನುವುದು ಕಟು ವಾಸ್ತವ. ಆದರೆ ಇದನ್ನು ಮಾರುಕಟ್ಟೆ ಪರಿಭಾಷೆಯಲ್ಲಿ ನಿರ್ವಚಿಸುವುದರ ಬದಲು, ಜನಸಂಖ್ಯಾಶಾಸ್ತ್ರದ (Demographic) ನೆಲೆಯಲ್ಲಿ ನಿಕಶಕ್ಕೊಳಪಡಿಸಿದಾಗ ತಳಮಟ್ಟದ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳೇ ಬೇರೆ. ಭಾಷಾ

ರಾಜಧಾನಿ ಬೆಂಗಳೂರು ಕೇಂದ್ರಿತ ಸಂಕಥನಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ಕನ್ನಡ ಸತ್ತೇಹೋಗಿದೆ ಎಂಬ ಅಭಿಪ್ರಾಯ ಬರುವುದು ಸಹಜ. ಒಂದು ನೆಲೆಯಲ್ಲಿ ಇದು ವಾಸ್ತವವೂ ಹೌದು. ಏಕೆಂದರೆ ಮೆಟ್ರೋಪಾಲಿಟನ್‌ ಸಂಸ್ಕೃತಿಯನ್ನು ಅಪ್ಪಿಕೊಂಡಿರುವ ಬೆಂಗಳೂರು ಜಾಗತೀಕರಣದ ಪ್ರಭಾವದಿಂದ ಕಾಸ್ಮೊಪಾಲಿಟನ್‌ ನಗರವಾಗಿ ರೂಪಾಂತರ ಹೊಂದುತ್ತಿದೆ. ಇಲ್ಲಿ ಭಾಷೆ ಕೇವಲ ಸಂವಹನದ ಸರಕಾಗುತ್ತದೆ. ಭಾಷಾ

ಇದನ್ನೂ ಓದಿ: 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಮಾರುಕಟ್ಟೆ-ಸಂಸ್ಕೃತಿಯ ಮುಖಾಮುಖಿ

ಆದರೆ ಈ ಹೊಸ ಅವತರಣಿಕೆಯು ಪ್ರಧಾನವಾಗಿ ಕಾಣುವುದು ಮಾರುಕಟ್ಟೆ ಮತ್ತು ಆರ್ಥಿಕ ಸಂರಚನೆಗಳ ನೆಲೆಯಲ್ಲಿ. ಕಾರ್ಪೋರೇಟ್‌ ಮಾರುಕಟ್ಟೆಯ ಬೆಳವಣಿಗೆಗೂ, ರಾಜ್ಯದ ಜಿಡಿಪಿ ಅಭಿವೃದ್ಧಿ ಮತ್ತು ಆರ್ಥಿಕ ಮುನ್ನಡೆಗೂ ಅತ್ಯವಶ್ಯವಾದ ಬಂಡವಾಳದ ಹರಿವಿಗೆ ಬೆಂಗಳೂರು ಸದಾ ತೆರೆದೇ ಇದೆ. ಆದರೆ ಈ ಅಂತಾರಾಷ್ಟ್ರೀಯ ಬಂಡವಾಳ ಬೇಷರತ್ತಾಗಿ ಪ್ರವೇಶಿಸುವುದಿಲ್ಲ. ಇದನ್ನು ಪೋಷಿಸುವ-ಸಲಹುವ ಪ್ರಕ್ರಿಯೆಯಲ್ಲಿ ರಾಜ್ಯವು ಸ್ಥಳೀಯ ಭಾಷೆ, ಪ್ರಾದೇಶಿಕ ಸಾಂಸ್ಕೃತಿಕ ಮತ್ತು ಪಾರಂಪರಿಕ ಜೀವನ ವಿಧಾನಗಳಲ್ಲಿ ಮಹತ್ತರ ಪರಿವರ್ತನೆಗಳನ್ನು ಎದುರಿಸಬೇಕಾಗುತ್ತದೆ. ಈ ಪರಿವರ್ತಕ ಶಕ್ತಿಯನ್ನೇ ಬಳಸಿಕೊಂಡು ಕಾರ್ಪೋರೇಟ್‌ ಮಾರುಕಟ್ಟೆಯು ರಾಜಧಾನಿ ಬೆಂಗಳೂರಿನ ಮುಖಚಹರೆಯನ್ನೇ ಬದಲಾಯಿಸುವ ರೀತಿಯಲ್ಲಿ ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾಗುತ್ತದೆ.

ಹಾಗಾಗಿಯೇ ಇಂದು ಬೆಂಗಳೂರು ನಗರವು ಸಾಂಪ್ರದಾಯಿಕ ಧರ್ಮರಾಯನ ಕರಗ, ಸಂತ ಮೇರಿ ಬ್ಯಾಸಿಲಿಕಾ ಆರೋಗ್ಯ ಮಾತಾ ಉತ್ಸವ, ಕಡಲೆ ಕಾಯಿ ಪರಿಶೆ ಈ ಸಾಂಸ್ಕೃತಿಕ ಆಚರಣೆಗಳೊಂದಿಗೇ ಉತ್ತರ ಭಾರತದ ಗರ್ಭಾ ನೃತ್ಯ, ದಾಂಡಿಯಾ ಮುಂತಾದ ಉತ್ಸವಗಳಿಗೂ ತೆರೆದುಕೊಳ್ಳಬೇಕಾಗುತ್ತದೆ.  ಈ ಬೆಳವಣಿಗೆಯ ಹಿಂದೆ ನಿರ್ದಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮುದಾಯಗಳು ಇರುವುದಾದರೂ, ಇದನ್ನು ಉತ್ತೇಜಿಸುವುದು ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಅದರ ಆರ್ಥಿಕ ಹಿತಾಸಕ್ತಿಗಳು. ವಿಶಾಲ ಭಾರತೀಯತೆಯ ನೆಲೆಯಲ್ಲಿ ಒಪ್ಪಿತವಾಗುವ ಈ ಆಚರಣೆಗಳೊಂದಿಗೇ ಅನ್ಯ ಭಾಷೆಗಳೂ ಸಹ ಸಮಾಜದ ತಳಮಟ್ಟದವರೆಗೂ ಒಳನುಗ್ಗುವ ಒಂದು ವಿದ್ಯಮಾನವನ್ನು ಇಲ್ಲಿ ಗುರುತಿಸಬೇಕಾಗುತ್ತದೆ. ಈ ಸಾಂಸ್ಕೃತಿಕ ಪಲ್ಲಟವನ್ನು ಒಪ್ಪಿಕೊಂಡಮೇಲೆ, ಅದರ ಹಿಂದೆಯೇ ಪ್ರವೇಶಿಸುವ ಅನ್ಯ ಭಾಷೆಯನ್ನು ತಿರಸ್ಕರಿಸುವುದಾಗಲೀ, ಅಲ್ಲಗಳೆಯುವುದಾಗಲೀ ಅಸಾಧ್ಯ. ಬೆಂಗಳೂರಿನಲ್ಲಿ ಕನ್ನಡವೇ ಮಾಯವಾಗಿದೆ ಎಂಬ ಹತಾಶ ಪ್ರತಿಪಾದನೆಯನ್ನು ಈ ನೆಲೆಯಲ್ಲಿ ನಿಷ್ಕರ್ಷೆ ಮಾಡಬೇಕಿದೆ. ಭಾಷಾ

ಈ ಸಾಂಸ್ಕೃತಿಕ-ಸಾಮಾಜಿಕ-ಆರ್ಥಿಕ ಪಲ್ಲಟಗಳ ನಡುವೆಯೇ ಕನ್ನಡ ಒಂದು ಭಾಷೆಯಾಗಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಬೇಕಿದೆ. ಮತ್ತೊಂದೆಡೆ ಕರ್ನಾಟಕದ ಸಮಸ್ತ ಜನಕೋಟಿಯನ್ನು ʼಕನ್ನಡಿಗರುʼ ಎಂದು ವ್ಯಾಖ್ಯಾನಿಸುವುದಾದರೆ ಈ ಸಮಾಜದ ಸುಸ್ಥಿರ ಬದುಕು, ಆರ್ಥಿಕ ಏಳಿಗೆ ಹಾಗೂ ಸಾಮಾಜಿಕ ಸಮನ್ವಯತೆಯನ್ನು ಕಾಪಾಡುವುದೂ ಸವಾಲಿನ ಪ್ರಶ್ನೆಯಾಗಿ ಕಾಡುತ್ತದೆ. ಮೂಲತಃ ಕನ್ನಡ ಅಪಾಯದಲ್ಲಿದೆ ಅಥವಾ ಕನ್ನಡಿಗರು ಅವಕಾಶವಂಚಿತರಾಗುತ್ತಿದ್ದಾರೆ ಎಂಬ ಕೂಗಿನ ಹಿಂದಿರುವುದು ಈ ಆತಂಕ. ಒಂದು ಭಾಷೆಯಾಗಿ ಕನ್ನಡ ಅಳಿಯುವುದು ಕಲ್ಪನೆಗೂ ಮೀರಿದ ಆತಂಕ. ಆದರೆ ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಕನ್ನಡದ ಬಳಕೆ ಕ್ಷೀಣಿಸುತ್ತಿರುವುದು ಕಣ್ಣಿಗೆ ರಾಚುವ ಸತ್ಯ. ಇಲ್ಲಿ ತಳಸಮಾಜದ ವ್ಯಕ್ತಿಗತ ನೆಲೆಯಲ್ಲಿ ನಿಂತು ನೋಡಿದಾಗ ಕನ್ನಡ ಒಂದು ಸಂವಹನ ಭಾಷೆಯಾಗಿ ಇಂದಿಗೂ ಜೀವಂತವಾಗಿರುವುದನ್ನೂ ಕಾಣಬಹುದು.

ಆರ್ಥಿಕತೆ ಮತ್ತು ಸಾಂಸ್ಕೃತಿಕ ಸಂಘರ್ಷ

ಅದರೆ ಬಾಹ್ಯ ಸಮಾಜದಲ್ಲಿ, ಅಂದರೆ ಉದ್ಯೋಗ, ವೃತ್ತಿ, ಮಾರುಕಟ್ಟೆ ಮತ್ತು ಸಾರ್ವಜನಿಕ ಜೀವನದಲ್ಲಿ ಇದನ್ನು ಕಾಣಲಾಗುವುದಿಲ್ಲ. ಏಕೆಂದರೆ ಇಲ್ಲಿ ಭಾಷೆ ಎನ್ನುವುದು ತನ್ನ ಅಮೂರ್ತ ಅಸ್ಮಿತೆಯನ್ನು ಕಳೆದುಕೊಂಡು ಮೂರ್ತ ಸ್ವರೂಪದಲ್ಲಿ ಒಂದು ಸಂವಹನ ಸಾಧನವಾಗಿ ಬಳಕೆಯಾಗುತ್ತದೆ. ಎಲ್ಲ ಸ್ತರಗಳಲ್ಲೂ ಜನರು ತಮ್ಮ ನಿತ್ಯ ಜೀವನ ನಿರ್ವಹಣೆಗೆ ಅತ್ಯವಶ್ಯವಾದ ಭಾಷೆಯನ್ನು ಬಳಸುವುದು ಅನಿವಾರ್ಯವಾಗುತ್ತದೆ. ಅನ್ಯ ರಾಜ್ಯಗಳಿಂದ ಬರುವ ತಳಸಮಾಜದ ವಲಸೆ ಕಾರ್ಮಿಕರು ತಮ್ಮೊಡನೆ ಯಾವುದೇ ಸಾಂಸ್ಥಿಕ ಸಂಸ್ಕೃತಿಯನ್ನು ಹೊತ್ತು ತರುವುದಿಲ್ಲ, ದುಡಿಮೆಗಾಗಿ ಬರುವ ಈ ಜನತೆಗೆ ಭಾಷೆ ಎನ್ನುವುದು ಭಾವನಾತ್ಮಕ ನೆಲೆಯಲ್ಲಿ ಕಾಣದೆ, ಜೀವನಾವಶ್ಯ ವಸ್ತುವಾಗಿ ಕಾಣುತ್ತದೆ. ಹಾಗಾಗಿ ಕಾಲಕ್ರಮೇಣ ಈ ಶ್ರಮಿಕರು ಸ್ಥಳೀಯ ಸಂಸ್ಕೃತಿ-ಭಾಷೆಯೊಡನೆ ಸಮ್ಮಿಳಿತಗೊಳ್ಳುವುದು ಸಹಜವಾಗಿ ಕಾಣುತ್ತದೆ.

ಆದರೆ ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಆಧುನಿಕ ತಂತ್ರಜ್ಞಾನ ಸೇವಾ ವಲಯವನ್ನು ಪ್ರವೇಶಿಸುವ ಹೊರ ರಾಜ್ಯದ-ಹೊರದೇಶದ ಸಾಂಸ್ಥಿಕ ಬಂಡವಾಳ ಮತ್ತು ಬಂಡವಾಳಿಗರ ಜೊತೆಗೆ ಅಲ್ಲಿನ ಸಂಸ್ಕೃತಿಯೂ ಸಾಂಸ್ಥಿಕ ರೂಪದಲ್ಲೇ ಇಲ್ಲಿ ಬಂದು ನೆಲೆಸುತ್ತದೆ. ನವ ಉದಾರವಾದದ ವಾತಾವರಣದಲ್ಲಿ ಇದನ್ನು ನಿರಾಕರಿಸಲಾಗುವುದಿಲ್ಲ. ಸ್ಥಳೀಯ ಸಮಾಜದೊಂದಿಗೆ ಸೌಹಾರ್ದತೆಯಿಂದ ಇದ್ದುಕೊಂಡೇ ಈ ಸಾಂಸ್ಥಿಕ ನೆಲೆಗಳು ತಮ್ಮದೇ ಆದ ಸಂಸ್ಕೃತಿ, ಭಾಷೆ ಮತ್ತು ಪರಂಪರೆಗಳನ್ನು ಸ್ಥಾಪಿಸಿಕೊಳ್ಳಲು ಯತ್ನಿಸುತ್ತವೆ. ವಸಾಹತು ಕಾಲದ ಆಂಗ್ಲರು, ಅದಕ್ಕೂ ಮುಂಚಿನ ಹಲವು ವಿದೇಶೀಯರು ಭಾರತವನ್ನು ಪ್ರವೇಶಿಸಿದ ಸಂದರ್ಭವನ್ನು ಇಲ್ಲಿ ತುಲನಾತ್ಮಕವಾಗಿ ನೋಡಬಹುದು. ಪರ್ಷಿಯನ್‌, ಆಂಗ್ಲ ಭಾಷೆಗಳೂ ಸಹ ಈ ವ್ಯಾಪಾರಿಗಳ ಜೊತೆಯಲ್ಲೇ ಭಾರತವನ್ನು ಪ್ರವೇಶಿಸಿ ಇಲ್ಲಿ ನೆಲೆಯೂರಿದ್ದವು. ಈ ಚಾರಿತ್ರಿಕ ಪ್ರಕ್ರಿಯೆಯೇ ಇಂದಿಗೂ ಭಿನ್ನ ರೂಪದಲ್ಲಿ ಚಾಲನೆಯಲ್ಲಿದ್ದು, ವಿಶಾಲ ಮಾರುಕಟ್ಟೆಯೊಳಗೆ ಪ್ರವೇಶಿಸುವ ಭಿನ್ನ ಜನಸಮುದಾಯಗಳು ತಮ್ಮ ಸಾಂಸ್ಕೃತಿಕ ಆಚರಣೆ ಮತ್ತು ಜೀವನಶೈಲಿಯನ್ನೂ ಇಲ್ಲಿ ಸಮ್ಮಿಳಿತಗೊಳಿಸಲು ಯತ್ನಿಸುತ್ತವೆ.

ಹಾಗಾಗಿಯೇ ಬೆಂಗಳೂರಿನಲ್ಲಿ ಇಂದು ಗುಜರಾತಿ, ರಾಜಸ್ಥಾನ ಮೊದಲಾದ ಭಿನ್ನ ಸಾಂಸ್ಕೃತಿಕ ನೆಲೆಗಳು ಸಕ್ರಿಯವಾಗಿ ಕಾಣುತ್ತವೆ. ಸಾಫ್ಟ್‌ವೇರ್‌ ಲೋಕವನ್ನು ಪ್ರವೇಶಿಸುವ ಇಲ್ಲಿನ ಬಂಡವಾಳಶಾಹಿಗಳಿಗೆ ಭಾಷೆ ಮುಖ್ಯವಾಗುವುದೇ ಇಲ್ಲ ಏಕೆಂದರೆ ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಬಳಕೆ ಸಹಜವಾಗಿರುತ್ತದೆ. ಬೆಂಗಳೂರಿನ ಐಟಿ ಪಾರ್ಕ್‌ , ಟೆಕ್‌ ಪಾರ್ಕ್‌ ಮತ್ತು ಅವುಗಳನ್ನು ಪ್ರತಿನಿಧಿಸುವ ವಸತಿ ಸಮುಚ್ಛಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ಒಳಮರ್ಮವನ್ನು ಗ್ರಹಿಸಬಹುದು. ವ್ಯಾಪಾರ ವಹಿವಾಟು, ತಂತ್ರಜ್ಞಾನ ಸಂವಹನ ಮತ್ತು ಸೇವಾ ವಲಯದಲ್ಲಿ ದುಡಿಯುವ ಅನ್ಯಭಾಷಿಕರಿಗೆ ಭಾಷೆ ಒಂದು ತೊಡಕಾಗುವುದೇ ಇಲ್ಲ. ಇಲ್ಲಿ ನಮಗೆ ಒಂದು ಸಂವಹನ ಭಾಷೆಯಾಗಿ ಕನ್ನಡ ನಶಿಸುತ್ತಿದೆ ಎಂಬ ಆತಂಕ ಮೂಡುವುದು ಸಹಜ. ಆದರೆ ಇದನ್ನು ಬಗೆಹರಿಸುವುದು ಹೇಗೆ ?

ಭಾಷೆ ಸಂವಹನ ಬಳಕೆ ಮತ್ತು ಬದುಕು  

ತಳಸಮಾಜದ ಕಾರ್ಮಿಕರನ್ನು ಕನ್ನಡ ಬಳಕೆಗೆ ಒಗ್ಗಿಸುವಷ್ಟು ಸುಲಭವಾಗಿ ಈ ಮೇಲ್ಪದರದ ಸಮಾಜವನ್ನು ಒಗ್ಗಿಸಲಾಗುವುದಿಲ್ಲ. ಏಕೆಂದರೆ ಇವರ ಹಿಂದೆ ಸಾಂಸ್ಥಿಕ ಬಂಡವಾಳ, ಮಾರುಕಟ್ಟೆ ಹಿತಾಸಕ್ತಿ ಮತ್ತು ರಾಜ್ಯದ ಆರ್ಥಿಕತೆಯ ಭವಿಷ್ಯ ಅಡಗಿರುತ್ತದೆ. ಮತ್ತೊಂದೆಡೆ ತಳಮಟ್ಟದ ಸಮಾಜದ ಸದಸ್ಯರು ಈ ಮಾರುಕಟ್ಟೆಯನ್ನು ಪ್ರವೇಶಿಸಬೇಕಾದರೆ ಆಂಗ್ಲ ಭಾಷೆಯ ಸಂವಹನವೇ ಪ್ರಧಾನ ತೊಡಕಾಗಿಯೂ ಕಾಣುತ್ತದೆ. ಇಂದು ಕರ್ನಾಟಕ ಎದುರಿಸುತ್ತಿರುವ ಮೂಲ ಸಮಸ್ಯೆ ಇದು. ಬೆಳೆಯುತ್ತಿರುವ ಮಾರುಕಟ್ಟೆ, ಹಬ್ಬುತ್ತಿರುವ ಮಾಹಿತಿ ತಂತ್ರಜ್ಞಾನದ ಉದ್ಯಮ ಮತ್ತು ಅದರ ಸುತ್ತಲಿನ ಔದ್ಯಮಿಕ ಜಗತ್ತಿನ ಒಳಗೆ ನುಸುಳಬೇಕಾದರೆ ಕನ್ನಡದ ಜನತೆಗೆ ಇಂಗ್ಲಿಷ್‌ ಸಂವಹನ ಅನಿವಾರ್ಯವಾಗಿಬಿಡುತ್ತದೆ. ಭಾವನಾತ್ಮಕ ನೆಲೆಯಲ್ಲಿ ನೋಡದೆ ವಸ್ತುನಿಷ್ಠವಾಗಿ ನೋಡಿದಾಗ, ಗ್ರಾಮೀಣ ಪ್ರದೇಶದಿಂದ ಬರುವ ಕನ್ನಡದ ವಿದ್ಯಾವಂತ ಮಕ್ಕಳು ಇಂದು ಈ ಮಾರುಕಟ್ಟೆಯೊಳಗೆ ಪ್ರವೇಶಿಸಲೂ ಸಾಧ್ಯವಾಗದಿರಲು ಕಾರಣ ಇಂಗ್ಲಿಷ್‌ ಭಾಷಾ ಸಂವಹನದ ಕೊರತೆ ಎನ್ನುವ ಅಂಶ ಸ್ಪಷ್ಟವಾಗುತ್ತದೆ.

ಈ ಸಮಸ್ಯೆಯನ್ನು ನೀಗಿಸದೆ ಹೋದರೆ ಕನ್ನಡಿಗರ ಉದ್ಯೋಗಾವಕಾಶಗಳು ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗಿಬಿಡುತ್ತವೆ. ಇತ್ತೀಚೆಗೆ ರಾಜ್ಯ ಸರ್ಕಾರವು ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಅನುಷ್ಠಾನಗೊಳಿಸಿದಾಗ ತೀವ್ರ ಪ್ರತಿರೋಧವನ್ನೂ ಎದುರಿಸಬೇಕಾದ್ದನ್ನು ಇಲ್ಲಿ ಸ್ಮರಿಸಬಹುದು. ಸರ್ಕಾರದ ಈ ಕ್ರಮ ಅತಿರೇಕದ ನಡೆ ಎನ್ನಬಹುದಾದರೂ, ಪ್ರಾಥಮಿಕ ಮಟ್ಟದಿಂದಲೇ ಶಾಲೆಗಳಲ್ಲಿ ಇಂಗ್ಲಿಷ್‌ ಭಾಷಾ ಬೋಧನೆಯನ್ನು ಅಳವಡಿಸುವ ಮೂಲಕ, ಸಂವಹನದ ಕೊರತೆಯನ್ನು ನೀಗಿಸಬಹುದಿತ್ತು. ಪ್ರಾಥಮಿಕ ಹಂತದಲ್ಲಿ ಮಕ್ಕಳು ಮಾತೃಭಾಷೆ ಅಥವಾ ತಾಯ್ನುಡಿಯಲ್ಲೇ ಶಿಕ್ಷಣ ಪಡೆಯುವುದು ವೈಜ್ಞಾನಿಕವಾಗಿಯೂ ಅತ್ಯವಶ್ಯ. ಆದರೆ ಕರ್ನಾಟಕದಲ್ಲಿ ಶಿಕ್ಷಣ ಮಾಧ್ಯಮವಾಗಿ ಮಾತೃಭಾಷೆ ಅಥವಾ ಕನ್ನಡವನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಪ್ರಾಥಮಿಕ ಶಾಲೆಗಳಲ್ಲಿ ಒಂದು ಭಾಷಾ ಪಠ್ಯವಾಗಿ ಇಂಗ್ಲಿಷ್‌ ಬೋಧನೆ ಆರಂಭಿಸುವುದು ತಳಸಮುದಾಯಗಳ ಹಿತದೃಷ್ಟಿಯಿಂದ ಅತ್ಯವಶ್ಯ.

ಇದು ಸಾಧ್ಯವಾಗದಿರುವುದರಿಂದಲೇ ಆಂಗ್ಲ ಭಾಷೆಯ ಶಾಲೆಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ. ಗ್ರಾಮೀಣ ಮಕ್ಕಳೂ ಸಹ ಇಂಗ್ಲಿಷ್‌ ಶಿಕ್ಷಣದ ಬೆಂಬತ್ತಿ ಪ್ರಾಥಮಿಕ ಹಂತದಿಂದಲೇ ಪಕ್ಕದ ಊರಿಗೆ ಪ್ರಯಾಣ ಮಾಡುವ ಸನ್ನಿವೇಶವನ್ನು ನಾವು ನೋಡುತ್ತಿದ್ದೇವೆ. ತಮ್ಮ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿ ಭವಿಷ್ಯದ ಬದುಕು ರೂಪಿಸಿಕೊಳ್ಳುವ ಹಾದಿಯಲ್ಲಿ ತಳಮಟ್ಟದ ಸಮಾಜ ಎರಡು ಮಜಲುಗಳಲ್ಲಿ ನಡೆಯುತ್ತದೆ. ಒಂದು ಅನುಕೂಲಸ್ಥ ಹಿತವಲಯವು ಉನ್ನತ ವ್ಯಾಸಂಗದತ್ತ ಹೊರಳಿ, ಅಲ್ಲಿರಬಹುದಾದ ಅವಕಾಶಗಳನ್ನು ಬಳಸಿಕೊಳ್ಳುತ್ತಾ ನಗರೀಕರಣಕ್ಕೊಳಗಾಗಿ ಬದುಕು ಕಂಡುಕೊಳ್ಳುತ್ತದೆ. ಮತ್ತೊಂದು ವರ್ಗವು ಈ ಮಟ್ಟದ ಆರ್ಥಿಕ ಸಬಲತೆ-ಸ್ಥಿರತೆ ಇಲ್ಲದ ಕಾರಣ, ಔದ್ಯೋಗಿಕ-ಔದ್ಯಮಿಕ ಜಗತ್ತನ್ನು ಪ್ರವೇಶಿಸುವ ಮೂಲಕ ಬದುಕು ಕಟ್ಟಿಕೊಳ್ಳಲು ಬಯಸುತ್ತದೆ. ಎರಡನೆ ವರ್ಗವನ್ನು ಬಹುತೇಕವಾಗಿ ತಳಸಮುದಾಯಗಳು ಪ್ರತಿನಿಧಿಸುವುದು ವರ್ತಮಾನದ ವಾಸ್ತವ.

ಸಂವಹನ ಸಾಧನವಾಗಿ ಭಾಷೆ

ಈ ಒಂದು ವರ್ಗಕ್ಕೆ ಮಾರುಕಟ್ಟೆ ನಿಯಂತ್ರಿತ ಔದ್ಯಮಿಕ ಜಗತ್ತನ್ನು ಪ್ರವೇಶಿಸಲು ತಡೆಗೋಡೆಯಾಗಿ ಪರಿಣಮಿಸುವುದು ಇಂಗ್ಲಿಷ್‌ ಭಾಷೆಯ ಅರಿವು ಮತ್ತು ಸಂವಹನ ಸಾಮರ್ಥ್ಯ. ವಿಶ್ವವಿದ್ಯಾಲಯಗಳಲ್ಲಿ ಉನ್ನತ ವಿದ್ಯಾರ್ಜನೆ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿಗಳಲ್ಲೂ ಈ ಸಮಸ್ಯೆಯನ್ನು ಗುರುತಿಸಬಹುದು. ಸಂವಹನದ ಕೊರತೆಯೇ ಈ ಯುವ ಸಮುದಾಯದಲ್ಲಿ ಕೀಳರಿಮೆಯನ್ನು ಬೆಳೆಸುತ್ತದೆ. ಇಲ್ಲಿ ಕನ್ನಡದ ಭಾವನಾತ್ಮಕ ಅಸ್ಮಿತೆ ಉಪಯುಕ್ತವಾಗುವುದಿಲ್ಲ. ಏಕೆಂದರೆ ಭಾಷಾ ಸಂವಹನದ ಕೊರತೆಯ ಕಾರಣದಿಂದಲೇ ಅವಕಾಶವಂಚಿತವಾಗುವ ಯುವ ಸಮೂಹದ ಭವಿಷ್ಯ ಇಲ್ಲಿ ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ನಾವು ಇಂಗ್ಲಿಷ್‌ ಭಾಷಾ ಕಲಿಕೆಯನ್ನು ಪ್ರೋತ್ಸಾಹಿಸಬೇಕಿದೆ. ಆಡುಭಾಷೆಯಾಗಿ ಕನ್ನಡದ ಅಸ್ತಿತ್ವವನ್ನು ಕಾಪಾಡಿಕೊಂಡೇ ಬದುಕಿನ ಭಾಷೆಯಾಗಿ ಇಂಗ್ಲಿಷ್‌ ಅಳವಡಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ

ಈಗಾಗಲೇ ನಾವು ವ್ಯಾಪಕವಾಗಿ ಬಳಸುತ್ತಿರುವ ಇಂಗ್ಲಿಷ್‌ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಅಥವಾ ಕನ್ನಡೀಕರಿಸುವ ಸಾಹಸವನ್ನು ಅಕಾಡೆಮಿಕ್‌ ವಲಯಕ್ಕೆ ಬಿಟ್ಟು, ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಈ  ಪದಗಳನ್ನೇ ಸಂವಹನದ ಭಾಗವಾಗಿ ಬಳಸುವುದು ಸೂಕ್ತ. ಉದಾಹರಣೆಗೆ ʼಮೆಟ್ರೋ ʼ ʼಐಟಿ-ಬಿಟಿ ʼ ಮೊದಲಾದ ಪದಗಳು ಬಳಕೆಯಾಗುವಂತೆಯೇ ಇತರ ಸುಲಭವಾಗಿ ಉಚ್ಛರಿಸಬಹುದಾದ ಇಂಗ್ಲಿಷ್‌ ಪದಗಳನ್ನು ಸಾಮಾನ್ಯ ಜನತೆಯ ಸಂವಹನದಲ್ಲೂ ಬಳಸುವುದನ್ನು ಕಲಿಯಬೇಕಿದೆ . ವೈಜ್ಞಾನಿಕ-ತಂತ್ರಜ್ಞಾನಾಧಾರಿತ-ತಾಂತ್ರಿಕ ಕ್ಲಿಷ್ಟ ಇಂಗ್ಲಿಷ್‌ ಪದಗಳನ್ನು ಕನ್ನಡೀಕರಿಸಲು ಹೋಗಿ ಗ್ರಾಮೀಣ ಸಾಮಾನ್ಯ ಜನರ ಉಚ್ಛಾರಣೆಗೂ ನಿಲುಕದ ಸಂಸ್ಕೃತ ಅಥವಾ ಹಿಂದಿ ಪ್ರೇರಿತ ಪದಗಳನ್ನು ಬಳಸುವ ಬದಲು ಸುಲಭಗ್ರಾಹ್ಯ ಇಂಗ್ಲಿಷ್‌ ಪದಗಳನ್ನೇ ಕನ್ನಡ ಸಂವಹನದಲ್ಲಿ ಒಳಗೊಳ್ಳುವ ಹಾದಿಯಲ್ಲಿ ನಾವು ಸಾಗಬೇಕಿದೆ. ಹೀಗೆ ಇಂಗ್ಲಿಷ್‌ ಭಾಷೆಯನ್ನು ಒಳಗೊಳ್ಳುವ ಮೂಲಕ ತಳಸಮಾಜದ ಯುವ ಸಮೂಹದಲ್ಲಿರುವ ಆತಂಕಗಳನ್ನು, ಭವಿಷ್ಯದ ಅನಿಶ್ಚಿತತೆಗಳನ್ನು ಹೋಗಲಾಡಿಸಲು ಸಾಧ್ಯ.

ಸಾಹಿತ್ಯ ವಲಯದ ಜವಾಬ್ದಾರಿ

ಇದರಿಂದ ಕನ್ನಡ ಭಾಷಾ ಬೆಳವಣಿಗೆ ಕುಂಠಿತವಾಗುತ್ತದೆ ಎನ್ನುವುದು ಪೂರ್ಣ ವಾಸ್ತವವಲ್ಲ. ಭಾಷೆ ಬೆಳೆಯುವುದು ಸಾಮಾನ್ಯ ಜನರ ನಿತ್ಯ ಜೀವನದ ಸಂವಹನಗಳಲ್ಲಿ ಮತ್ತು ಅದನ್ನು ಪೋಷಿಸುವಂತಹ ಸಾಹಿತ್ಯ-ಕಲೆ ಮತ್ತಿತರ ಸಾಂಸ್ಕೃತಿಕ ಭೂಮಿಕೆಗಳಲ್ಲಿ. ಇದನ್ನು ಕಾಪಾಡುವ ಮತ್ತು ವಿಸ್ತರಿಸುವ ಜವಾಬ್ದಾರಿ ಕನ್ನಡದ ಬೌದ್ಧಿಕ ವಲಯದ ಮೇಲಿರುತ್ತದೆ. ಪ್ರಾಥಮಿಕ ಹಂತದಿಂದಲೇ ಕನ್ನಡದ ಮಕ್ಕಳಲ್ಲಿ ಭಾಷಾ ಕಲಿಕೆ ಮತ್ತು ಗ್ರಹಿಕೆಯನ್ನು ಉದ್ಧಿಪನಗೊಳಿಸುತ್ತಾ, ಬೆಳೆಯುತ್ತಿದ್ದಂತೆ ಈ ಮಕ್ಕಳಿಗೆ ವಿಪುಲವಾಗಿ ಲಭ್ಯವಿರುವ ಕನ್ನಡದ ಸಾಹಿತ್ಯವನ್ನು ಪರಿಚಯಿಸುವ ಮೂಲಕ, ಒಂದು ಭಾಷೆಯಾಗಿ ಕನ್ನಡವನ್ನು ಒಳಗೊಳ್ಳುವ ಸಮಾಜವನ್ನು ರೂಪಿಸಬಹುದು. ಈ ನಿಟ್ಟಿನಲ್ಲಿ ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಬೌದ್ಧಿಕ ನೆಲೆಯಲ್ಲಿ ಸಾಂಸ್ಥಿಕ ವಲಯ ಸೋತಿರುವುದನ್ನು ಒಪ್ಪಿಕೊಳ್ಳಲೇಬೇಕಿದೆ.

ಸಾಹಿತ್ಯ ಓದನ್ನು ಉತ್ತೇಜಿಸುವ ವಾತಾವರಣವನ್ನೇ ಕಾಣದ ಶೈಕ್ಷಣಿಕ ಜಗತ್ತನ್ನು ನಾವಿಂದು ಕಾಣುತ್ತಿದ್ದೇವೆ. ಶಾಸ್ತ್ರೀಯ ಕನ್ನಡದಿಂದ ಸಮಕಾಲೀನ ಕನ್ನಡದವರೆಗಿನ ಪ್ರಾಚೀನ-ಆಧುನಿಕ ಸಾಹಿತ್ಯ ಪರಂಪರೆಯನ್ನು ಹಂತಹಂತವಾಗಿ ಮಕ್ಕಳಿಗೆ ಪರಿಚಯಿಸುವಂತಹ ಒಂದು ಕಾರ್ಯಯೋಜನೆಯನ್ನು ರಾಜ್ಯ ಸರ್ಕಾರಗಳಾಗಲೀ, ಕನ್ನಡವನ್ನು ಪ್ರತಿನಿಧಿಸುವ ಸಂಸ್ಥೆಗಳಾಗಲೀ, ಕನ್ನಡ ಪರ ಸಂಘಟನೆಗಳಾಗಲೀ ಈವರೆಗೂ ಹಮ್ಮಿಕೊಂಡಂತೆ ಕಾಣುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಸಂಪ್ರದಾಯ ಬೆಳೆಯುತ್ತಿದ್ದರೂ, ಪುಸ್ತಕದ ಓದು, ಅಧ್ಯಯನ ಮತ್ತು ಸಂವಾದ ಒಂದು ಬೌದ್ಧಿಕ ಚಟುವಟಿಕೆಯಾಗಿ ರೂಪುಗೊಂಡಿಲ್ಲ. ಶಾಲಾ ಕಾಲೇಜುಗಳಲ್ಲಿ ಇದು ಸಾಧ್ಯವಾಗದ ಹೊರತು ಕನ್ನಡ ಭಾಷೆಯ ಬೆಳವಣಿಗೆ ಕುಂಠಿತವಾಗಿಯೇ ಇರುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತನ್ನೂ ಒಳಗೊಂಡಂತೆ ಕನ್ನಡದ ಯಾವುದೇ ಸಾಂಸ್ಥಿಕ ನೆಲೆಯಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಕನ್ನಡ ಭಾಷೆಯ ಉಳಿವಿಗಾಗಿ ಅವಿರತ ಹೋರಾಡುವ ಅಸಂಖ್ಯಾತ ಸಂಘಟನೆಗಳಿಗೆ ಭಾಷೆ ಒಂದು ಭಾವನಾತ್ಮಕ ವಸ್ತುವಿನಂತೆ ಕಾಣುತ್ತದೆ. ಸಾಹಿತ್ಯ ಓದು ಮತ್ತು ಸಂವಾದ ಎಂಬ ಉದಾತ್ತ ಪರಿಕಲ್ಪನೆಯೇ ಅಸ್ಮಿತೆಗಳ ಲೋಕದಲ್ಲಿ ವಿಘಟನೆಗೊಳಗಾಗಿರುವುದರಿಂದ ಯಾವುದನ್ನು ಓದಬೇಕು ಎನ್ನುವುದಕ್ಕಿಂತಲೂ ಯಾರನ್ನು ಓದಬೇಕು ಎನ್ನುವುದೇ ಪ್ರಧಾನ ಜಿಜ್ಞಾಸೆಯಾಗಿ ಸಮಾಜವನ್ನು ಕಾಡುತ್ತಿದೆ. ಕನ್ನಡ ಸಾಹಿತ್ಯ ಲೋಕ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದ ಹಂತದಲ್ಲಿರುವ ಈ ಅಸ್ಮಿತೆಯ ಗೋಡೆಗಳನ್ನು ಭೇದಿಸುವ ಕ್ಷಮತೆಯನ್ನು ರೂಢಿಸಿಕೊಂಡು, ಸಾಂಸ್ಥೀಕರಿಸುವ ಪ್ರಯತ್ನಗಳನ್ನು ಮಾಡಬೇಕಿದೆ.

ಅಂತಿಮವಾಗಿ

ಕನ್ನಡ ಪರ ಸಂಘಟನೆಗಳೂ ಸಹ ತಮ್ಮ ಭಾಷಾ ಹೋರಾಟಗಳೊಂದಿಗೇ, ಭಾಷಿಕ ಅಸ್ಮಿತೆ ಮತ್ತು ಅದನ್ನು ಆಶ್ರಯಿಸುವ ಸಾಮಾನ್ಯ ಜನತೆಯ ಬದುಕಿಗೆ ಪೂರಕವಾದ ಭಾಷಾ ಬೆಳವಣಿಗೆಯತ್ತ ಗಮನ ಹರಿಸಬೇಕಿದೆ. ಕರ್ನಾಟಕದಲ್ಲಿ ತಾಯ್ನುಡಿಯಾಗಿ ಕನ್ನಡ ಭಾಷಿಕರ ಸಂಖ್ಯೆ ಶೇಕಡಾ 60ರ ಅಸುಪಾಸಿನಲ್ಲಿದೆ. ಪರಸ್ಪರ ಬೌದ್ಧಿಕ ವಿನಿಮಯವೇ ಇಲ್ಲದ ಹಲವಾರು ತಾಯ್ನುಡಿಗಳು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿವೆ.

ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡ ಎಂಬ ಸೀಮಿತ ಅರ್ಥಕ್ಕೊಳಪಡಿಸದೆ, ಕರ್ನಾಟಕದ ಉದ್ದಗಲಕ್ಕೂ ಜನರು ಬಳಸುವ ತಾಯ್ನುಡಿಗಳ ಒಂದು ಉತ್ಸವದಂತೆ ಆಚರಿಸಬೇಕಿದೆ. ಹಾಗೆಯೇ ಕನ್ನಡವನ್ನೂ ಒಳಗೊಂಡಂತೆ ಈ ಎಲ್ಲ ಭಾಷೆಗಳನ್ನೂ ತಳಸಮಾಜದ ಜನತೆಯ ಬದುಕಿನ ಭಾಷೆಯಾಗಿಸುವುದು ಹೇಗೆ ಎಂದು ಯೋಚಿಸಬೇಕಿದೆ.  ಹಿಂದಿ ಹೇರಿಕೆಯ ಅಪಾಯದ ತೂಗುಗತ್ತಿಯ ಕೆಳಗೇ ಕನ್ನಡದ ಮನಸುಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಯೋಚಿಸುವಂತಾದರೆ, ನವಂಬರ್‌ 1ರ ರಾಜ್ಯೋತ್ಸವ ಸಾರ್ಥಕವಾಗುತ್ತದೆ.

ಇದನ್ನೂ ನೋಡಿ: ಪರ ಭಾಷಿಕರಿಗೆ ಕನ್ನಡ ಕಲಿಸುವ ಅಟೋ ಚಾಲಕ Janashakthi Media

Donate Janashakthi Media

Leave a Reply

Your email address will not be published. Required fields are marked *