ಸಾಮ್ರಾಜ್ಯಶಾಹಿಯ ವಿರುದ್ಧ ಪಶ್ಚಿಮ ಆಫ್ರಿಕಾದ ಪ್ರತಿರೋಧ: ಭಾರತ ಸರಕಾರ ಗಮನಿಸಬೇಕು

-ಪ್ರೊ.ಪ್ರಭಾತ್ಪಟ್ನಾಯಕ್

-ಅನು: ಕೆ.ಎಂ.ನಾಗರಾಜ್

ಭಾರತದಲ್ಲಿ, ನಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ಯಶಸ್ವಿ ಹೋರಾಟದ ನಂತರ, ಆರ್ಥಿಕ ನಿರ್ವಸಾಹತೀಕರಣಕ್ಕಾಗಿ ನಡೆದ ಹೋರಾಟವು ಬಹುಶಃ ರಾಜಕೀಯ ನಿರ್ವಸಾಹತೀಕರಣದ ಹೋರಾಟಕ್ಕಿಂತಲೂ ಹೆಚ್ಚು ಪ್ರಯಾಸದಾಯಕವಾಗಿತ್ತು. ಸೋವಿಯತ್ ಒಕ್ಕೂಟದ ಸಹಾಯದಿಂದಾಗಿ ಈ ಹೋರಾಟವೂ ಯಶಸ್ವಿಯಾಯಿತು. ಆದರೆ ನವ- ಉದಾರವಾದವನ್ನು ಅಪ್ಪಿಕೊಳ್ಳುವ ಮೂಲಕ ನಾವು ಸಂಪಾದಿಸಿದ ಭಾಗ್ಯವನ್ನು ಮತ್ತೊಮ್ಮೆ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಅತ್ತ ಫ್ರೆಂಚ್ ವಸಾಹತುಗಳಾಗಿದ್ದ ಪಶ್ಚಿಮ ಆಫ್ರಿಕಾದ ನೈಜರ್, ಮಾಲಿ ಮತ್ತು ಬುರ್ಕಿನಾ ಫಾಸೊ- ಈ ಪ್ರತಿಯೊಂದೂ ದೇಶದಲ್ಲೂ ಇತ್ತೀಚೆಗೆ ಅಧಿಕಾರವನ್ನು ವಶಪಡಿಸಿಕೊಂಡ ಮಿಲಿಟರಿ ನಾಯಕರು ಫ್ರೆಂಚ್ ಪಡೆಗಳನ್ನು ನಿರ್ಗಮಿಸುವಂತೆ ಹೇಳುತ್ತಿದ್ದಾರೆ. ಸಾಮ್ರಾಜ್ಯಶಾಹಿ

ನೈಸರ್ಗಿಕ ಸಂಪನ್ಮೂಗಳನ್ನು ರಾಷ್ಟ್ರೀಕರಿಸಲು ಮುಂದಾಗುತ್ತಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಪಶ್ಚಿಮ ಆಫ್ರಿಕಾದ ದೇಶಗಳ ಈ ಪ್ರಯತ್ನಗಳು, ನಮ್ಮ ಸರ್ಕಾರವು ನೈಸರ್ಗಿಕ ಸಂಪನ್ಮೂಲಗಳ ಕ್ಷೇತ್ರದಲ್ಲಿಯೂ ಸಹ ಸಾರ್ವಜನಿಕ ವಲಯವನ್ನು ಹಿಂದಕ್ಕೆ ತಳ್ಳುತ್ತಿರುವ ತನ್ನ ಪ್ರಸ್ತುತ ನೀತಿಯನ್ನು ಗಂಭೀರವಾಗಿ ಮರುಪರಿಶೀಲಿಸುವಂತೆ ಮಾಡಬೇಕು. ಒಂದು ದೇಶವು ತನ್ನ ಖನಿಜ ಮತ್ತು ಬರಿದಾಗುವ ಇತರ ಸಂಪನ್ಮೂಲಗಳ ಮೇಲೆ ಮಾಲೀಕತ್ವವನ್ನು ಮತ್ತು ನಿಯಂತ್ರಣವನ್ನು ಸದಾ ಹೊಂದಿರಬೇಕು ಮತ್ತು ಅವುಗಳನ್ನು ತನ್ನ ಸಾರ್ವಜನಿಕ ವಲಯದ ಮೂಲಕವೇ ಅಭಿವೃದ್ಧಿಪಡಿಸಬೇಕು.

ಫ್ರೆಂಚ್ ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟಿದ್ದ ಪಶ್ಚಿಮ ಆಫ್ರಿಕಾದ ಬಹುತೇಕ ಪ್ರದೇಶಗಳಲ್ಲಿ, ಭಾರತದಲ್ಲಿ ಜರುಗಿದ ರೀತಿಯ ನಿರ್ವಸಾಹತೀಕರಣ (ವಸಾಹತುಶಾಹಿಯನ್ನು ಒದ್ದೋಡಿಸುವ ಹೋರಾಟ) ಪ್ರಕ್ರಿಯೆ ಜರುಗಲಿಲ್ಲ. ಮೊದಲಿಗೆ, ವಸಾಹತುಗಳಾಗಿ ಆ ದೇಶಗಳು ಹಿಂದೆ ಹೊಂದಿದ್ದ ಕರೆನ್ಸಿ, ಅದರ ವಿನಿಮಯ ದರ ಮತ್ತು ಅದು ಫ್ರೆಂಚ್ ಕರೆನ್ಸಿಯಾದ ಫ್ರಾಂಕ್‌ನೊಂದಿಗೆ ಹೊಂದಿದ್ದ ಹಳೆಯ ಸಂಬಂಧವೇ ಮುಂದುವರೆಯಿತು. ಇದರ ಅರ್ಥವೆಂದರೆ, ಸ್ವತಂತ್ರ ದೇಶಗಳಾಗಿ ಅವರು ತಮ್ಮ ಆಯ್ಕೆಯ ಒಂದು ಸ್ವತಂತ್ರ ಹಣಕಾಸು ನೀತಿಯನ್ನು ಮತ್ತು ವಿತ್ತೀಯ ನೀತಿಯನ್ನು ಅನುಸರಿಸುವುದು ಸಾಧ್ಯವಾಗಲಿಲ್ಲ (ಒಂದು ವೇಳೆ ಅವರು ತಮ್ಮ ಆಯ್ಕೆಯ ಹಣಕಾಸು ಮತ್ತು ವಿತ್ತೀಯ ನೀತಿಗಳನ್ನು ಅನುಸರಿಸಿದ್ದರೆ, ಫ್ರೆಂಚ್ ಕರೆನ್ಸಿಯೊಂದಿಗೆ ಆ ದೇಶಗಳು ಹೊಂದಿದ್ದ ಸ್ಥಿರ ವಿನಿಮಯ ದರ
ವ್ಯವಸ್ಥೆಯು ಮುರಿದು ಬೀಳುತ್ತಿತ್ತು).

ಇದನ್ನೂ ಓದಿ: ಉದ್ಯಮಿ ರತನ್‌ ಟಾಟಾ ನಿಧನ

ವಸಾಹತು ಭಾರತದಲ್ಲಿ, ದೇಶವು ಸಂಪಾದಿಸಿದ ವಿದೇಶಿ ವಿನಿಮಯ ಮೀಸಲುಗಳನ್ನು, ಮತ್ತು, ವರ್ಷ ವರ್ಷವೂ ಸಂಪಾದಿಸಿದ ಎಲ್ಲ ರಫ್ತು ಮಿಗುತಾಯವನ್ನೂ ಬ್ರಿಟನ್ ತನ್ನ ಜೇಬಿಗೆ ಇಳಿಸಿಕೊಳ್ಳುತ್ತಿದ್ದ ಕಾರಣದಿಂದಾಗಿ ಬಲವಂತದ ಸಾಲಗಳ ಮೂಲಕ ಪಡೆದುಕೊಂಡ ದೇಶದ ಮೀಸಲು ಚಿನ್ನದ ನಿಧಿಯನ್ನೂ ಸಹ, ಲಂಡನ್‌ನಲ್ಲಿ ಇರಿಸುತ್ತಿದ್ದ ಕ್ರಮದ ರೀತಿಯಲ್ಲೇ, ಪಶ್ಚಿಮ ಆಫ್ರಿಕಾದ ಈ ದೇಶಗಳ ವಿದೇಶಿ ವಿನಿಮಯ ಮೀಸಲುಗಳನ್ನು ಮತ್ತು ಅವರ ಮೀಸಲು ಚಿನ್ನದ ನಿಧಿಯನ್ನು ಫ್ರಾನ್ಸ್ ತನ್ನ ಬಳಿ ಇಟ್ಟುಕೊಂಡಿತ್ತು. ಮಾತ್ರವಲ್ಲ, ಔಪಚಾರಿಕವಾಗಿ ನಿರ್ವಸಾಹತೀಕರಣವು ಕೊನೆಗೊಂಡ ಬಳಿಕವೂ ಆ ದೇಶಗಳ ಹಣಕಾಸು ನೀತಿಯನ್ನು ಮತ್ತು ವಿತ್ತೀಯ ನೀತಿಯನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಫ್ರಾನ್ಸ್ ರೂಪಿಸುತ್ತಿತ್ತು. ಆ ದೇಶಗಳ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವೂ ಸಹ ಸಾಮ್ರಾಜ್ಯಶಾಹಿ ದೇಶಗಳ ದೈತ್ಯ ಕಂಪೆನಿಗಳ (metropolitan corporations) ಬಳಿಯೇ ಉಳಿದಿತ್ತು. ಅದಕ್ಕಿಂತಲೂ ಮಿಗಿಲಾಗಿ, ನಿರ್ವಸಾಹತೀಕರಣದ ಹೊರತಾಗಿಯೂ, ಫ್ರೆಂಚ್ ಸೇನಾ ಪಡೆಗಳು ಆ ದೇಶಗಳಲ್ಲೇ ಉಳಿದುಕೊಂಡವು. ಆರಂಭದಲ್ಲಿ, ಫ್ರೆಂಚ್ ಆಸ್ತಿಯನ್ನು ಕಾಪಾಡುವ ನೆಪದಲ್ಲಿ ಉಳಿದುಕೊಂಡವು.

ತರುವಾಯ ಆ ದೇಶಗಳನ್ನು ಇಸ್ಲಾಮಿಕ್ ಉಗ್ರಗಾಮಿಗಳ (ಈ ಉಗ್ರಗಾಮಿಗಳು, ಸಾಮ್ರಾಜ್ಯಶಾಹಿ ದೇಶಗಳು ಲಿಬಿಯಾದಲ್ಲಿ ಗಡಾಫಿ ಆಡಳಿತವನ್ನು ಅಸ್ಥಿರಗೊಳಿಸಿದ ಕಾರಣದಿಂದಾಗಿ ಬಲಿಷ್ಠರಾಗಿ ಬೆಳೆದರು) ಆಕ್ರಮಣದಿಂದ ರಕ್ಷಿಸುವ ನೆಪದಲ್ಲಿ ಉಳಿದುಕೊಂಡವು. ಆದರೆ, ವಾಸ್ತವಿಕವಾಗಿ, ಫ್ರೆಂಚ್ ಸೇನಾ ಪಡೆಗಳು ಆ ದೇಶಗಳಲ್ಲಿ ಉಳಿದುಕೊಂಡ ಕಾರಣವೆಂದರೆ, ಹೊಸದಾಗಿ ವಿಮೋಚನೆಯಾದ ದೇಶಗಳ ಸರ್ಕಾರಗಳು ಫ್ರೆಂಚ್ ಸಾಮ್ರಾಜ್ಯಶಾಹಿಯ ಅಣತಿಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ಆಗಿತ್ತು. ಈ ಪಡೆಗಳನ್ನು ಹೊರಹಾಕುವ ಯಾವುದೇ ಪ್ರಯತ್ನವನ್ನು, ಆಂತರಿಕವಾಗಿ ದಂಗೆ ಎಬ್ಬಿಸುವ ವಿದ್ರೋಹಿ ಕ್ರಮವನ್ನೂ ಸಹ ಒಳಗೊಂಡಂತೆ ಯಾವ ವಿಧಾನದ ಮೂಲಕವಾದರೂ ಸರಿಯೇ ಹೊಸಕಿಹಾಕಲಾಗುವುದು ಎಂಬುದನ್ನು ತೋರಿಸಿಕೊಟ್ಟ ಮೊದಲ ಪ್ರಕರಣವೇ ಬುರ್ಕಿನಾ ಫಾಸೊ.

ಬುರ್ಕಿನಾ ಫಾಸೊದ ಕ್ರಾಂತಿಕಾರಿ ಮಾರ್ಕ್ಸ್ ವಾದಿ ನಾಯಕ ಮತ್ತು ಅಖಿಲ-ಆಫ್ರಿಕಾ ಪರಿಕಲ್ಪನೆಗೆ ಬದ್ಧವಾಗಿದ್ದ ಥಾಮಸ್ ಶಂಕರ, ತನ್ನ ದೇಶದಿಂದ ಫ್ರೆಂಚ್ ಸೈನ್ಯವನ್ನು ಹೊರಹಾಕಬೇಕೆಂದು ಬಯಸಿದ್ದರು. ಸ್ವಂತ ಅವರದೇ ಪಕ್ಷಕ್ಕೆ ಸೇರಿದ ವ್ಯಕ್ತಿಗಳೇ ನಡೆಸಿದ ದಂಗೆಯಲ್ಲಿ ಅವರು ಹತ್ಯೆಗೀಡಾದರು. ಈ ದಂಗೆಯು ಫ್ರೆಂಚ್ ಬೆಂಬಲದಿಂದ ಉತ್ತೇಜಿತವಾಗಿತ್ತು ಎಂದು ಸಾಮಾನ್ಯವಾಗಿ ಭಾವಿಸಲಾಗಿದೆಯಾದರೂ, ಹೆಚ್ಚಿನ ಸಂದರ್ಭಗಳಲ್ಲಿ ಈ ದಂಗೆಗಳ ಅಗತ್ಯವೇ ಬೀಳುವುದಿಲ್ಲ: ಸಾಮ್ರಾಜ್ಯಶಾಹಿ ದೇಶಗಳಲ್ಲಿ ತರಬೇತಿ ಪಡೆದ ನಾಯಕರನ್ನು ಹೊಂದಿದ ಮತ್ತು ಫ್ರೆಂಚ್ ಪಡೆಗಳ ನಿರಂತರ ಉಪಸ್ಥಿತಿಯ ಸಮಸ್ಯೆಯನ್ನು ತಮ್ಮ ರಾಜಕೀಯ
ಅಜೆಂಡಾದಿಂದ ದೂರವಿಡುವ ರಾಜಕೀಯ ಪಕ್ಷಗಳ ಸಾಮಾನ್ಯ ಚುನಾವಣಾ ರಾಜಕೀಯವೇ ಸಾಕಾಗುತ್ತದೆ. ಮೇಲಾಗಿ, ಈ ರಾಜಕೀಯವು ಪ್ರಜಾಪ್ರಭುತ್ವದ ವೇಷವನ್ನು ಧರಿಸಿರುತ್ತದೆ.

ಒಂದು ನಿರ್ಣಾಯಕ ದೋಷ

ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಪಶ್ಚಿಮ ಆಫ್ರಿಕಾದ ಕೆಲವು ದೇಶಗಳ ಬೆನ್ನುಮೂಳೆಯಿಲ್ಲದ ಚುನಾಯಿತ ಸರ್ಕಾರಗಳನ್ನು ಉರುಳಿಸಿದ ಆ ದೇಶಗಳ ಸೇನೆಯೊಳಗಿನ ಕ್ರಾಂತಿಕಾರಿಗಳು ಅಧಿಕಾರವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಪ್ರತಿರೋಧದ ಅಲೆಯನ್ನು ಸೃಷ್ಟಿಸಿದ್ದಾರೆ. ಅಧಿಕಾರವನ್ನು ಈ ರೀತಿಯಲ್ಲಿ ವಶಪಡಿಸಿಕೊಳ್ಳುವ ಕ್ರಮವು ಪ್ರಜಾಪ್ರಭುತ್ವದ ವಿರುದ್ಧ ಒಂದು ಬಲವಾದ ಹೊಡೆತ; ಆದುದರಿಂದ ಅದನ್ನು ಖಂಡಿಸಬೇಕಾಗುತ್ತದೆ ಮತ್ತು ವಿರೋಧಿಸಬೇಕಾಗುತ್ತದೆ ಎಂದು ಸಾಮ್ರಾಜ್ಯಶಾಹಿ ದೇಶಗಳು ಬೊಬ್ಬೆ ಹೊಡೆಯುತ್ತಿರುವ ಹೊತ್ತಿನಲ್ಲಿ, ಒಂದು ವಿಪರ್ಯಾಸದೋಪಾದಿಯಲ್ಲಿ, ಈ ದೇಶಗಳ
ಜನಸಾಮಾನ್ಯರು ತಾವೇ ಪ್ರಜಾಸತ್ತಾತ್ಮಕವಾಗಿ ಚುನಾಯಿಸಿದ ಸರ್ಕಾರಗಳನ್ನು ಬದಲಾಯಿಸಿರುವ ಈ ಹೊಸ ಆಳ್ವಿಕೆಯನ್ನು ಒಂದು ವಿಶಿಷ್ಟ ಉತ್ಸಾಹದಿಂದ ಸ್ವಾಗತಿಸಿದ್ದಾರೆ.

ಇದನ್ನೂ ಓದಿ: ಜೀವಂತ ಜಿಲಟಿನ್ ಕಡ್ಡಿ ಸ್ಫೋಟ; ಬೆರಳುಗಳು ತುಂಡು

ವಾಸ್ತವವಾಗಿ, ಅವು ಹೊಂದಿರುವ ಚುನಾವಣಾ ಪ್ರಜಾಪ್ರಭುತ್ವದ ಕಾರ್ಯಾಚರಣೆಯಲ್ಲಿ ಕಂಡುಬರುವ ಒಂದು ನಿರ್ಣಾಯಕ ದೋಷವನ್ನು ಈ ದೇಶಗಳು ಬಹಿರಂಗಪಡಿಸುತ್ತವೆ. ನಮ್ಮ ಮುಂದೆ ಸಾಮಾನ್ಯವಾಗಿ ಚುನಾವಣಾ ಪ್ರಜಾಪ್ರಭುತ್ವದ ಬಗ್ಗೆ ಒಂದು ಅಂದಗೊಳಿಸಿದ ಚಿತ್ರಣವನ್ನು ಬಿಂಬಿಸಲಾಗುತ್ತದೆ. ಯಾರು ಬೇಕಾದರೂ ಒಂದು ರಾಜಕೀಯ ಪಕ್ಷವನ್ನು ರಚಿಸಬಹುದು, ಯಾವುದೇ ಸಮಸ್ಯೆಯನ್ನು ಎತ್ತಬಹುದು ಮತ್ತು ಚುನಾವಣಾ ಅಖಾಡವನ್ನು ಪ್ರವೇಶಿಸಬಹುದು. ಎಲ್ಲರನ್ನೂ ಸಮಾನವಾಗಿ ಕಾಣುವುದರಿಂದಾಗಿ, ಜನರ ನೈಜ ಕಾಳಜಿಗಳು ಚುನಾವಣಾ ಫಲಿತಾಂಶಗಳಲ್ಲಿ ವ್ಯಕ್ತಗೊಳ್ಳುತ್ತವೆ ಎಂಬುದು ಈ ಚಿತ್ರಣದ ಹೂರಣವಾಗಿರುತ್ತದೆ. ಆದರೆ, ವಾಸ್ತವವಾಗಿ, ಆರ್ಥಿಕ ಸಂಪನ್ಮೂಲಗಳ ಕೊರತೆಗಳು ಚುನಾವಣಾ ಕಣವನ್ನು ಪ್ರವೇಶಿಸುವಲ್ಲಿ ಅಡೆ-ತಡೆಗಳಾಗಿ ಪರಿಣಮಿಸುತ್ತವೆ ಎಂಬ ಅಭಿಪ್ರಾಯವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸುತ್ತಾರೆ.

ಹಾಗಾಗಿ, ಈ ಚುನಾವಣಾ ರಂಗ ಎಂಬುದು ಎಲ್ಲರಿಗೂ ನಿಜಕ್ಕೂ ಸಮಾನ ಅವಕಾಶ ಒದಗಿಸುವ ಆಟದ ಮೈದಾನವಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಆದ್ದರಿಂದ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತೋರುವ ಮತ್ತು ಅದೇ ಸಮಯದಲ್ಲಿ ಜನರನ್ನು ಬಾಧಿಸುವ ನೈಜ ಸಮಸ್ಯೆಗಳನ್ನು ನಿಜಕ್ಕೂ
ಪರಿಹರಿಸದ ಒಂದು ಚುನಾವಣಾ ಪ್ರಜಾಪ್ರಭುತ್ವವನ್ನು ಹೊಂದುವುದು ಸಾಧ್ಯವಿದೆ. ಪಾಶ್ಚ್ಯಾತ್ಯ ಪ್ರಜಾಪ್ರಭುತ್ವಗಳಲ್ಲಿ ಈಗ ನಿಖರವಾಗಿ ಜರುಗುತ್ತಿರುವ ವಿದ್ಯಮಾನವು ಇದುವೇ. ಚುನಾವಣಾ ವ್ಯವಸ್ಥೆಯ ಸುಗಮ ಕಾರ್ಯಾಚರಣೆಯ ಹೊರತಾಗಿಯೂ, ಶಾಂತಿ ಸ್ಥಾಪನೆಗಾಗಿ ಜನರು ಹೊಂದಿರುವ ಅಗಾಧ ಬಯಕೆಯು ಚುನಾವಣಾ ಫಲಿತಾಂಶಗಳಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಡುತ್ತದೆ. ಈ ಲಕ್ಷಣವು, ಪಶ್ಚಿಮ ಆಫ್ರಿಕಾದ ಪ್ರಜಾಪ್ರಭುತ್ವಗಳ ಲಕ್ಷಣವೂ ಹೌದು. ವಿದೇಶಿ ಪಡೆಗಳ ಉಪಸ್ಥಿತಿಯಿಂದ ದೇಶವು ಮುಕ್ತವಾಗಬೇಕೆಂದು ಜನರು ಹೊಂದಿರುವ ಅಗಾಧ ಬಯಕೆಯನ್ನು ಅಲ್ಲಿನ ಚುನಾವಣಾ ವ್ಯವಸ್ಥೆಯ ಕಾರ್ಯಾಚರಣೆಯು ಮುನ್ನೆಲೆಗೆ ತರಲೇ ಇಲ್ಲ.

ಸಹೆಲ್ ಪ್ರಭುತ್ವಗಳ ಮೈತ್ರಿಕೂಟ ಆದಾಗ್ಯೂ, ನೈಜರ್, ಮಾಲಿ ಮತ್ತು ಬುರ್ಕಿನಾ ಫಾಸೊ- ಈ ಪ್ರತಿಯೊಂದೂ ದೇಶವೂ ಇತ್ತೀಚೆಗೆ ಅಧಿಕಾರವನ್ನು ವಶಪಡಿಸಿಕೊಂಡ ಮಿಲಿಟರಿ ನಾಯಕರಿಂದ ಆಳಲ್ಪಡುತ್ತಿದೆ ಮತ್ತು ಫ್ರೆಂಚ್ ಪಡೆಗಳು ನಿರ್ಗಮಿಸುವಂತೆ ಹೇಳುತ್ತಿದೆ. ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧ ಹೋರಾಡುವ ಸಂಬಂಧವಾಗಿ ಹೇಳುವುದಾದರೆ, ಮಾಲಿ ದೇಶವು ರಷ್ಯಾದ ವ್ಯಾಗ್ನರ್ ಗುಂಪನ್ನು (ಈ ಗುಂಪು ಈಗ ರಷ್ಯಾದ ಪ್ರಭುತ್ವದೊಂದಿಗೆ ವಿಲೀನಗೊಳ್ಳುತ್ತಿದೆ) ಅವಲಂಬಿಸಿದೆ. ಬುರ್ಕಿನಾ ಫಾಸೊ, ಮಾಲಿ ಮತ್ತು ನೈಜರ್, ಈ ಮೂರೂ ದೇಶಗಳು ಜುಲೈ 2024ರಲ್ಲಿ ‘ಅಲೈಯನ್ಸ್ ಆಫ್ ಸಹೇಲ್ ಸ್ಟೇಟ್ಸ್’ (ಸಹೆಲ್ ಪ್ರಭುತ್ವಗಳ ಮೈತ್ರಿಕೂಟ) ಎಂಬ ಒಕ್ಕೂಟವನ್ನು ರಚಿಸಿಕೊಂಡಿವೆ. ಈ ಮೂರೂ ಆಡಳಿತಗಳು ಥಾಮಸ್ ಶಂಕರ ಹೊಂದಿದ್ದ ಅಖಿಲ-ಆಫ್ರಿಕಾ ಪರಿಕಲ್ಪನೆಗೆ ಮತ್ತು ಸಾಮ್ರಾಜ್ಯಶಾಹಿ ವಿರೋಧಕ್ಕೆ ಬದ್ಧವಾಗಿವೆ.

ಸಾಮ್ರಾಜ್ಯಶಾಹಿ-ವಿರೋಧಿ ನಿಟ್ಟಿನಲ್ಲಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಬುರ್ಕಿನಾ ಫಾಸೊ, ಮೂಲತಃ ಬ್ರಿಟನ್ನಿನ ಎಂಡೀವರ್ ಮೈನಿಂಗ್ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದ ತನ್ನ ಎರಡು ಚಿನ್ನದ ಗಣಿಗಳನ್ನು ರಾಷ್ಟ್ರೀಕರಣಗೊಳಿಸಿದೆ. ಬುರ್ಕಿನಾ ಫಾಸೊ ವಿಶ್ವದ 13ನೇ ಅತಿ ದೊಡ್ಡ ಚಿನ್ನದ ಉತ್ಪಾದಕ ಎಂದು ಭಾವಿಸಲಾಗಿದೆ. ಅದರ ವಾರ್ಷಿಕ ಚಿನ್ನದ ಉತ್ಪಾದನೆಯು 100 ಟನ್‌ಗಳು ಅಥವಾ ಪ್ರಸ್ತುತ ವಿಶ್ವ ಬೆಲೆಯಲ್ಲಿ ಸುಮಾರು 6 ಬಿಲಿಯನ್ ಡಾಲರ್‌ಗಳು. ಈ ಚಿನ್ನವನ್ನು ಸಂಪೂರ್ಣವಾಗಿ ಯುರೋಪಿಯನ್ ಅಥವಾ ಉತ್ತರ ಅಮೆರಿಕಾದ ಕಂಪನಿಗಳ ಮೂಲಕ ಉತ್ಪಾದಿಸಲಾಗುತ್ತದೆ ಮತ್ತು ಈ ಕಂಪೆನಿಗಳು ಅದನ್ನು ದೇಶದ ಹೊರಗೆ ಪರಿಷ್ಕರಿಸುತ್ತವೆ ಮತ್ತು ಹೆಚ್ಚಿನ ಮೌಲ್ಯದ ಚಿನ್ನವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುತ್ತವೆ. ಈ ಕಾರಣದಿಂದಾಗಿ, ಅಷ್ಟು ಗಣನೀಯ ಪ್ರಮಾಣದ ಚಿನ್ನದ ಉತ್ಪಾದನೆಯ ಹೊರತಾಗಿಯೂ, ಪ್ರಸ್ತುತ ಆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನವು (2022ರಲ್ಲಿ) ಕೇವಲ 19.37 ಬಿಲಿಯನ್ ಡಾಲರ್ ಮಾತ್ರ.

ಪ್ರಸ್ತುತ ಅಲ್ಲಿ ಅಧಿಕಾರದಲ್ಲಿರುವ ಇಬ್ರಾಹಿಂ ಟ್ರಾರ್ ಅವರ ಸರ್ಕಾರವು ಚಿನ್ನದ ಉತ್ಪಾದನೆಯನ್ನು ಸಂಪೂರ್ಣವಾಗಿ
ರಾಷ್ಟ್ರೀಕರಣಗೊಳಿಸುವುದು ಮಾತ್ರವಲ್ಲದೆ ಚಿನ್ನದ ಸಂಸ್ಕರಣಾಗಾರವನ್ನು ಮೊದಲ ಬಾರಿಗೆ ಸ್ಥಳೀಯವಾಗಿ ಸ್ಥಾಪಿಸಲು ನಿರ್ಧರಿಸಿದೆ. ಆ ದೇಶದ ಅರ್ಥವ್ಯವಸ್ಥೆಯು ಕನಿಷ್ಟ 2 ಬಿಲಿಯನ್ ಡಾಲರ್‌ನಷ್ಟು ಹೆಚ್ಚುವರಿ ಮೌಲ್ಯವನ್ನು ಉಳಿಸಿಕೊಂಡರೂ ಸಹ, ಈ ಹೆಚ್ಚುವರಿ ಮೊತ್ತವು GNP ಯ ಶೇ. 10ಕ್ಕಿಂತಲೂ ಹೆಚ್ಚಿಗೆ ಇರುತ್ತದೆ. ಈ ಹಣವನ್ನು ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯ ಸೇವೆಗಳನ್ನು ಒದಗಿಸಲು ಸರ್ಕಾರವು ಬಳಸಿಕೊಳ್ಳಬಹುದು.

ಮೂಲಭೂತ ತತ್ತ್ವ

ಖ್ಯಾತ ಅರ್ಥಶಾಸ್ತ್ರಜ್ಞೆ ಜೋನ್ ರಾಬಿನ್ಸನ್, ದೇಶವೊಂದರ ಖನಿಜ ಸಂಪನ್ಮೂಲಗಳನ್ನು ಹೊರತೆಗೆಯಲು ಬಳಸಲಾಗುವ ಎಲ್ಲ ರೀತಿಯ ವಿದೇಶಿ ಹೂಡಿಕೆಗಳೂ ಅತಿ ಹೆಚ್ಚು ಹಾನಿಕಾರಕವಾಗಿರುತ್ತವೆ ಎಂಬುದನ್ನು ಬಹಳ ಹಿಂದೆಯೇ ಒತ್ತಿಹೇಳಿದ್ದರು. ಅಥವಾ, ವಿಷಯನ್ನು ವಿಭಿನ್ನವಾಗಿ ಹೇಳುವುದಾದರೆ, ಒಂದು ದೇಶವು ತನ್ನ ಖನಿಜ ಸಂಪನ್ಮೂಲಗಳನ್ನು ಬಹುರಾಷ್ಟ್ರೀಯ ಸಂಸ್ಥೆಗಳ ಮೂಲಕ ಅಭಿವೃದ್ಧಿಪಡಿಸುವುದರ ಬದಲಾಗಿ ಸ್ವಂತ ತನ್ನದೇ ಸಾರ್ವಜನಿಕ ವಲಯದ ಮೂಲಕವೇ ಅಭಿವೃದ್ಧಿಪಡಿಸಬೇಕು. ಏಕೆಂದರೆ ಖನಿಜಗಳು ಬರಿದಾಗುವ ಸಂಪನ್ಮೂಲಗಳಾಗಿರುತ್ತವೆ. ಒಂದು ದೇಶಕ್ಕೆ ಈ ಖನಿಜ ಸಂಪನ್ಮೂಲಗಳ ಲಭ್ಯತೆಯು ಒಂದು ಅಲ್ಪಾವಧಿಗೆ ಮಾತ್ರವೇ ಸೀಮಿತವಾಗಿರುತ್ತದೆ. ಆದ್ದರಿಂದ, ಖನಿಜ ಸಂಪನ್ಮೂಲದ ಬಹುಪಾಲು ಮೌಲ್ಯವು ದೇಶದ ಬೊಕ್ಕಸಕ್ಕೆ ಹಿಂತಿರುಗದ ಹೊರತು, ಅರ್ಥವ್ಯವಸ್ಥೆಯನ್ನು ಸೂಕ್ತವಾಗಿ ವೈವಿಧ್ಯಗೊಳಿಸಲಾಗದು. ಈ ಸಂಪನ್ಮೂಲವು ಖಾಲಿಯಾದಾಗ ದೇಶವು ಅನಾಥವಾಗುತ್ತದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ED

ದೇಶವು ಅನಾಥವಾಗುವ ಸಂಗತಿಯು ಸ್ವಂತ ನಮ್ಮ ನೆರೆಯಲ್ಲೇ ಸಂಭವಿಸಿದೆ. ಉದಾಹರಣೆಗೆ ಮ್ಯಾನ್ಮಾರ್. ಅದು ಹೊಂದಿದ್ದ ತೈಲ ನಿಕ್ಷೇಪವನ್ನು ಹೊರತೆಗೆಯುವ ಕಾಲದಲ್ಲಿ ತಾತ್ಕಾಲಿಕವಾಗಿ ಅಲ್ಲೊಂದು ಆರ್ಥಿಕ ಉತ್ಕರ್ಷವಿತ್ತು ಮತ್ತು ತೈಲ ಬಹುರಾಷ್ಟ್ರೀಯ ಕಂಪನಿಗಳು ಅಗಾಧ ಲಾಭ ಗಳಿಸಿದವು. ಈ ಲಾಭವನ್ನು ಅರ್ಥವ್ಯವಸ್ಥೆಯನ್ನು ವೈವಿಧ್ಯಗೊಳಿಸಲು ಬಳಸದ ಕಾರಣ (ತೈಲ ಸಂಪನ್ಮೂಲವನ್ನು ಸಾರ್ವಜನಿಕ ವಲಯದ ಮೂಲಕ ಅಭಿವೃದ್ಧಿಪಡಿಸಿದ್ದರೆ ಅರ್ಥವ್ಯವಸ್ಥೆಯನ್ನು ವೈವಿಧ್ಯಗೊಳಿಸಬಹುದಿತ್ತು), ಮ್ಯಾನ್ಮಾರ್‌ನ ತೈಲ ನಿಕ್ಷೇಪಗಳು ಖಾಲಿಯಾದ ಕೂಡಲೇ ಬಹುರಾಷ್ಟ್ರೀಯ ಕಂಪನಿಗಳು ಗಂಟು ಮೂಟೆ ಕಟ್ಟಿ ಜಾಗ ಖಾಲಿ ಮಾಡಿದವು. ಮ್ಯಾನ್ಮಾರ್ ತನ್ನ ಹಿಂದಿನ ಸ್ಥಿತಿಗೆ ಮರಳಿತು.

ಈ ದೇಶವನ್ನು ವಿಶ್ವಸಂಸ್ಥೆಯು ಈಗ ಅಲ್ಪ ಅಭಿವೃದ್ಧಿ ಹೊಂದಿದ ದೇಶ ಎಂದು ಕರೆಯುತ್ತದೆ. ಒಂದು ದೇಶವು ತನ್ನ ಖನಿಜ ಮತ್ತು ಬರಿದಾಗುವ ಇತರ ಸಂಪನ್ಮೂಲಗಳ ಮೇಲೆ ಮಾಲೀಕತ್ವವನ್ನು ಮತ್ತು ನಿಯಂತ್ರಣವನ್ನು ಸದಾ ಹೊಂದಿರಬೇಕು ಮತ್ತು ಅವುಗಳನ್ನು ತನ್ನ ಸಾರ್ವಜನಿಕ ವಲಯದ ಮೂಲಕವೇ ಅಭಿವೃದ್ಧಿಪಡಿಸಬೇಕು. ಈ ಮೂಲಭೂತ ತತ್ತ್ವವನ್ನು ಅನುಸರಿಸ ಬಯಸುವ ಬುರ್ಕಿನಾ ಫಾಸೊದ ಕ್ರಮವು ನಿಜಕ್ಕೂ ಒಂದು ದೊಡ್ಡ ಮುನ್ನೆಡೆಯೇ ಹೌದು.

ಈ ಉದ್ದೇಶ ಸಾಧನೆಯ ವಿರುದ್ಧವಾಗಿ ಸಾಮ್ರಾಜ್ಯಶಾಹಿಯು ಒಡ್ಡುವ ಅಗಾಧ ಅಡೆತಡೆಗಳನ್ನು ಖಂಡಿತವಾಗಿಯೂ ಕೀಳಂದಾಜು ಮಾಡಲಾಗದು. ಇರಾನ್‌ನಲ್ಲಿ ಮೊಸದೆಗ್ ಸರ್ಕಾರವನ್ನು ಉರುಳಿಸುವುದರೊಂದಿಗೆ ಆರಂಭಗೊಂಡು, ತಮ್ಮದೇ ಆದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸಿದ ಮೂರನೇ ಜಗತ್ತಿನ ಆಡಳಿತಗಳನ್ನು ಅಸ್ಥಿರಗೊಳಿಸಿದ ಸಾಮ್ರಾಜ್ಯಶಾಹಿಯ ಇತಿಹಾಸವು ಸುದೀರ್ಘವಾಗಿದೆ.

ಸಂಪನ್ಮೂಲಗಳ ಮೇಲೆ ನಿಯಂತ್ರಣಕ್ಕೆ ಮರು ಅವಕಾಶ

ಇಂಥಹ ಎಲ್ಲ ಠಕ್ಕುಗಳ ಹೊರತಾಗಿಯೂ, ಮೂರನೇ ಜಗತ್ತಿನ ದೇಶಗಳ ಖನಿಜ ಸಂಪನ್ಮೂಲಗಳ ಮೇಲಿನ ನಿಯಂತ್ರಣವು ಸಾಮ್ರಾಜ್ಯಶಾಹಿಗೆ ದಕ್ಕಿಲ್ಲ. ಅದು ತೃತೀಯ ಜಗತ್ತನ್ನು ಈಗ ನವ-ಉದಾರವಾದಿ ವ್ಯವಸ್ಥೆಯಲ್ಲಿ ಸಿಲುಕಿಸಿದೆ. ನವ-ಉದಾರ ಆರ್ಥಿಕ ನೀತಿಗಳ ಪ್ರಾಥಮಿಕ ಉದ್ದೇಶವು, ಸಾರ್ವಜನಿಕ ವಲಯವನ್ನು ಹಿಮ್ಮೆಟ್ಟಿಸುವುದು ಮತ್ತು ಪಾಶ್ಚ್ಯಾತ್ಯ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಮೂರನೇ ಜಗತ್ತಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದುವ ಅವಕಾಶವನ್ನು ಮರುಕಲ್ಪಿಸುವುದು. ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ನವ-ಉದಾರವಾದಿ ವ್ಯವಸ್ಥೆಯು ಸಾಮ್ರಾಜ್ಯಶಾಹಿಯ ಈ ವಂಚನೆಗಳೊಂದಿಗೆ ಗುರುತಿಸಲ್ಪಟ್ಟಿದೆ.

ಈ ರೀತಿ ಗುರುತಿಸುವುದರೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ರಾಷ್ಟ್ರೀಯ ನಿಯಂತ್ರಣ ಹೊಂದುವ ಅಗತ್ಯವು ಬಹಳ ಮಹತ್ವದ್ದಾಗುತ್ತದೆ. ಭಾರತದಲ್ಲಿ, ನಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ಯಶಸ್ವಿ ಹೋರಾಟದ ನಂತರ, ಆರ್ಥಿಕ ನಿರ್ವಸಾಹತೀಕರಣಕ್ಕಾಗಿ ನಡೆದ ಹೋರಾಟವು ಬಹುಶಃ ರಾಜಕೀಯ ನಿರ್ವಸಾಹತೀಕರಣದ ಹೋರಾಟಕ್ಕಿಂತಲೂ ಹೆಚ್ಚು ಪ್ರಯಾಸದಾಯಕವಾಗಿತ್ತು. ಸೋವಿಯತ್ ಒಕ್ಕೂಟದ ಸಹಾಯದಿಂದಾಗಿ ಈ ಹೋರಾಟವೂ ಯಶಸ್ವಿಯಾಯಿತು. ನವ- ಉದಾರವಾದವನ್ನು ಅಪ್ಪಿಕೊಳ್ಳುವ ಮೂಲಕ ನಾವು ಸಂಪಾದಿಸಿದ ಭಾಗ್ಯವನ್ನು ಮತ್ತೊಮ್ಮೆ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ.

ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಪಶ್ಚಿಮ ಆಫ್ರಿಕಾ ಕೈಗೊಂಡ ಪ್ರಯತ್ನವು, ನಮ್ಮ ಸರ್ಕಾರವು ನೈಸರ್ಗಿಕ ಸಂಪನ್ಮೂಲಗಳ ಕ್ಷೇತ್ರದಲ್ಲಿಯೂ ಸಹ ಸಾರ್ವಜನಿಕ ವಲಯವನ್ನು ಹಿಂದಕ್ಕೆ ತಳ್ಳುತ್ತಿರುವ ತನ್ನ ಪ್ರಸ್ತುತ ನೀತಿಯನ್ನು ಗಂಭೀರವಾಗಿ ಮರುಪರಿಶೀಲಿಸುವಂತೆ ಮಾಡಬೇಕು.  ಈ ಸಂಪನ್ಮೂಲಗಳ ಸಂಬಂಧವಾಗಿ ಪ್ರಾಸಂಗಿಕವಾಗಿ ಹೇಳುವುದಾದರೆ, ದೇಶೀಯ ಖಾಸಗಿ ಉದ್ಯಮಗಳು ವಹಿಸುವ ಪಾತ್ರವು ಬಹುರಾಷ್ಟ್ರೀಯ ಸಂಸ್ಥೆಗಳಿಗಿಂತ ಉತ್ತಮವೇನಲ್ಲ. ದೇಶೀಯ ಖಾಸಗಿ ಉದ್ಯಮವೂ ಸಹ ನಿಖರವಾಗಿ ಅದೇ ದೋಷಗಳಿಂದ ನರಳುತ್ತಿದೆ. ರಾಷ್ಟ್ರೀಯ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಾರ್ವಜನಿಕ ವಲಯಕ್ಕೆ ಪರ್ಯಾಯವೇ ಇಲ್ಲ.

ಖಚಿತವಾಗಿ ಹೇಳುವುದಾದರೆ, ಒಂದು ಸಾರ್ವಜನಿಕ ವಲಯದಲ್ಲೂ ಸಹ, ದುರುಪಯೋಗ ಅಥವಾ ಅಸಮರ್ಥತೆ ಇದ್ದಲ್ಲಿ ಅದು ರಾಷ್ಟ್ರೀಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವುದಿಲ್ಲ. ಆದರೆ, ಸಾರ್ವಜನಿಕ ವಲಯದ ಅಡಿಯಲ್ಲಿ ಸಂಪನ್ಮೂಲಗಳ ಅಭಿವೃದ್ಧಿಯು ಈಗಲೂ ರಾಷ್ಟ್ರೀಯ ಅಭಿವೃದ್ಧಿಗಾಗಿ ಒಂದು ಅಗತ್ಯ ಷರತ್ತು ಆಗುತ್ತದೆ. ಜೊತೆಗೆ, ಸಾರ್ವಜನಿಕ ವಲಯಕ್ಕೆ ಬದ್ಧವಾಗಿರುವ ಒಂದು ಆಡಳಿತವು ತನ್ನ ಕಾರ್ಯವೈಖರಿಯಲ್ಲಿ ಕಾಣಿಸಿಕೊಳ್ಳುವ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯವನ್ನೂ ಸಹ ಹೊಂದಿರುತ್ತದೆ.

ಇದನ್ನೂ ನೋಡಿ: ಜಾತಿಗಣತಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿದ್ದಾರೆ : Janashakthi Media

Donate Janashakthi Media

Leave a Reply

Your email address will not be published. Required fields are marked *