ಹರಿಯಾಣದಲ್ಲಿ ʼಕೈʼ ಸುಟ್ಟುಕೊಂಡ ಕಾಂಗ್ರೆಸ್‌,  ಕಣಿವೆಯಲ್ಲಿ ಸೋತರೂ ಮತಪ್ರಮಾಣ ಹೆಚ್ಚಿಸಿಕೊಂಡ ಬಿಜೆಪಿ

ಗುರುರಾಜ ದೇಸಾಯಿ

ಹರ್ಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಹರ್ಯಾಣದಲ್ಲಿ ಬಿಜೆಪಿ ಮೈತ್ರಿಕೂಟ ಮ್ಯಾಜಿಕ್‌ ನಂಬರ್‌ ದಾಟಿದ್ದು, ಮೂರನೇ ಅವಧಿಗೆ ಸರ್ಕಾರ ರಚಿಸಲು ಮುಂದಾಗಿದೆ. ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ಗೆ ಬಾರೀ ನಿರಾಶೆಯಾಗಿದೆ.

ಜಮ್ಮು ಕಾಶ್ಮೀರದಲ್ಲಿ ಇಂಡಿಯಾ ಕೂಟ ಮ್ಯಾಜಿಕ್‌ ನಂಬರ್‌ ದಾಟಿದ್ದು ಸರ್ಕಾರ ರಚಿಸುವತ್ತ ದಾಪಾಗಾಲು ಹಾಕಿದೆ. ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದ್ದು, ಪಡಿಪಿ ಪಕ್ಷವನ್ನು ಕಣಿವೆಯ ಜನ ತಿರಸ್ಕರಿಸಿದ್ದಾರೆ.

ಹರಿಯಾಣದಲ್ಲಿ ಕಳೆದ ಬಾರಿ ಬಿಜೆಪಿ 36.49% ಮತ ಪ್ರಮಾಣವನ್ನು ಪಡೆದಿತ್ತು , ಈ ಬಾರಿ 39.24% ಪಡೆದುಕೊಂಡಿದೆ.02.75% ರಷ್ಟು ಮತ ಪ್ರಮಾಣ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್‌ ಕಳೆದ ಬಾರಿ 28.08% ರಷ್ಟು ಮತ ಪಡೆದಿತ್ತು, 39.09% ಮತಗಳನ್ನು ಪಡೆದು 11.01 ರಷ್ಟು ಹೆಚ್ಚಳವಾಗಿದೆ.

ಹರಿಯಾಣದಲ್ಲಿ ಬಿಜೆಪಿಯ ಹ್ಯಾಟ್ರಿಕ್‌ ಗೆಲುವು  ಕಾಂಗ್ರೆಸ್‌ ಸೆಲ್ಫ್‌ ಸುಸೈಡ್

90 ವಿಧಾನ ಸಭಾ ಕ್ಷೇತ್ರವುಳ್ಳ ಹರಿಯಾಣದಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮ್ಯಾಜಿಕ್‌ ನಂಬರ್‌ ದಾಟಿದೆ. ಕಾಂಗ್ರೆಸ್‌ 37 ಸ್ಥಾನಗಳಲ್ಲಿ, ಇತರರು 05 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ 40 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಎಂಟು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ಕಾಂಗ್ರೆಸ್‌ ಕಳೆದ ಬಾರಿ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ 6 ಸ್ಥಾನಗಳನ್ನು ಹೆಚ್ಚಿಸಿಕೊಂಡು 37 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಜೆಜೆಪಿ ಪಕ್ಷ ಕಳೆದ ಬಾರಿ 10 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಖಾತೆ ತೆರೆಯಲು ವಿಫಲವಾಗಿದೆ.

ಹರಿಯಾಣದಲ್ಲಿ ಬಿಜೆಪಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ವಿಫಲವಾಗಿದೆ. ಕಾಂಗ್ರೆಸ್‌ನ ಆಂತರಿಕ ಕಚ್ಚಾಟ, ರೈತ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು, ಎಎಪಿ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳದಿರುವುದು, ಹೂಡಾ ಎನ್ನುವ ಫ್ಯೂಡಲ್ ವ್ಯಕ್ತಿಯ ಹಿಂಬಾಲಕರಿಗೆ ಟಿಕೆಟ್‌ ನೀಡಿದ್ದು ಕಾಂಗ್ರೆಸ್‌ನ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

 

 

ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಫಲ

ಹರಿಯಾಣದಲ್ಲಿ ಇರುವುದು ಒಟ್ಟು 90 ಕ್ಷೇತ್ರಗಳು. ಆದರೆ ಕಾಂಗ್ರೆಸ್ಸಿನ 2,565 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಬಂಡಾಯ ಶಮನ ಮಾಡಲು ಅಭ್ಯರ್ಥಿಗಳ 8 ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅಷ್ಟೇ ಅಲ್ಲದೇ ನಾಮಪತ್ರ ಸಲ್ಲಿಸುವ ಕೊನೆಯ ದಿನ ಕಾಂಗ್ರೆಸ್‌ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಟಿಕೆಟ್‌ ಹಂಚಿಕೆಯಲ್ಲೂ ಭೂಪಿಂದರ್ ಸಿಂಗ್ ಹೂಡಾ ಮಾತೇ ಬಹಳಷ್ಟು ಕಡೆ ಫೈನಲ್‌ ಆಗಿತ್ತು. ಅವರ ಬೆಂಬಲಿಗರಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಹೂಡಾ ಶಿಫಾರಸು ಮಾಡಿದ ಶಾಸಕರ ಪೈಕಿ 13 ಮಂದಿ ಮಾತ್ರ ಗೆದ್ದಿದ್ದಾರೆ.

ಅತಿಯಾದ ವಿಶ್ವಾಸ ಮತ್ತು ಆಂತರಿಕ ಕಿತ್ತಾಟ

ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟು 10 ಕ್ಷೇತ್ರಗಳ ಪೈಕಿ 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಕಾಂಗ್ರೆಸ್‌ ಈ ಚುನಾವಣೆಯನ್ನು ಗೆಲ್ಲಬಹುದು ಎಂದು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಆರಂಭಿಸಿತ್ತು.

ಆಂತರಿಕ ಕಲಹಗಳು, ವಿಶೇಷವಾಗಿ ದಲಿತ ನಾಯಕಿ ಮತ್ತು ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಮತ್ತು ಮಾಜಿ ಸಿಎಂ ಮತ್ತು ಜಾಟ್ ನಾಯಕ ಭೂಪಿಂದರ್ ಸಿಂಗ್ ಹೂಡಾ ನಡುವಿನ ಕಲಹದಿಂದ ಕಾಂಗ್ರೆಸ್‌ ಭಾರೀ ನಷ್ಟ ಅನುಭವಿಸಿದೆ.

ಹೂಡಾ ಹೇಳಿದ ಅಭ್ಯರ್ಥಿಗಳಿಗೆ  ಟಿಕೆಟ್‌ ನೀಡಿದ್ದಕ್ಕಾಗಿ ಪಕ್ಷದೊಂದಿಗೆ ಅಸಮಾಧಾನಗೊಂಡಿದ್ದ ಸೆಲ್ಜಾ ಕೆಲವು ದಿನಗಳ ಕಾಲ ಪ್ರಚಾರದಿಂದಲೇ ದೂರ ಉಳಿದಿದ್ದರು. ಅವರನ್ನು ಮನವೊಲಿಸಿದ ಬಳಿಕ ಕೊನೆಯ ಹಂತದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲದೇ ಅವರು ಪದೇ ಪದೇ ಸಿಎಂ ಕುರ್ಚಿಯ ಮೇಲೆ ಹಕ್ಕು ಸಾಧಿಸಿದ್ದು ಪಕ್ಷಕ್ಕೆ ಮುಳುವಾಯಿತು. ಹರಿಯಾಣದಲ್ಲೂ ಕಾಂಗ್ರೆಸ್‌ ಭರ್ಜರಿ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿತ್ತು.

ಮತ ಎಣಿಕೆಯಲ್ಲಿ ಅಕ್ರಮ ಕಾಂಗ್ರೆಸ್ ಆರೋಪ

ಇನ್ನೊಂದೆಡೆಯಲ್ಲಿ ಈ ಫಲಿತಾಂಶಗಳನ್ನು ಒಪ್ಪಲು ಸಾಧ್ಯವಿಲ್ಲ, ಮತಗಣನೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್‍ ಆರೋಪ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಂತೆ ಈ ಬಾರಿಯೂ ಮತದಾನದ ವಿವರಗಳನ್ನು ಚುನಾವಣಾ ಆಯೋಗ ಪ್ರಕಟಿಸಲಿಲ್ಲ. ಅಷ್ಟೇ ಅಲ್ಲ, ಮತಗಣನೆಯಲ್ಲಿಯೂ ಆರಂಭದಲ್ಲಿ ಭಾರೀ ಮುನ್ನಡೆಯಲ್ಲಿದ್ದ ಕಾಂಗ್ರೆಸ್‍ ಇದ್ದಕ್ಕಿದ್ದಂತೆ ಹಿನ್ನಡೆಗೆ ಇಳಿದದ್ದು ಹೇಗೆ, ಚುನಾವಣಾ ಆಯೊಗದ ವೆಬ್‍ಸೈಟಿನಲ್ಲಿ ಮತಗಣನೆಯ ವಿವರಗಳನ್ನು ಅಪ್‍ಲೋಡ್‍ ನಿಧಾನಗೊಂಡದ್ದು ಯಾಕೆ ಎಂದು ಪ್ರಶ‍್ನಿಸಿರುವ ಕಾಂಗ್ರೆಸ್‍ ವಕ್ತಾರರು  ಕನಿಷ್ಟ ಮೂರು ಜಿಲ್ಲೆಗಳಿಂದ ಮತಗಣನೆಯಲ್ಲಿ ಅಕ್ರಮ ನಡೆದಿರುವ ದೂರುಗಳೂ ಬಂದಿವೆ, ಇಂತಹ ದೂರುಗಳನ್ನು ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.

 

ಜಮ್ಮು ಕಾಶ್ಮೀರ : ಇಂಡಿಯಾಕೂಟಕ್ಕೆ ಜೈ ಹೋ, ಸೋತರೂ ಮತಪ್ರಮಾಣ ಹೆಚ್ಚಿಸಿಕೊಂಡ ಬಿಜೆಪಿ 

ಹತ್ತು ವರ್ಷಗಳ ನಂತರ ನಡೆದ ಜಮ್ಮು ಕಾಶ್ಮೀರದಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷ ಅತೀ ದೊಡ್ಡಪಕ್ಷವಾಗಿ ಹೊರ ಹೊಮ್ಮಿದ್ದು, 42 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ 06 ಸ್ಥಾನಗಳಲ್ಲಿ, ಸಿಪಿಐಎಂ 1 ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಈ ಮೂರು ಪಕ್ಷಗಳು ಇಂಡಿಯಾಕೂಟದ ಭಾಗವಾಗಿದ್ದು ಮ್ಯಾಜಿಕ್‌ ನಂಬರ್‌ ದಾಟಿ ಸರ್ಕಾರ ರಚನೆಗೆ ಮುಂದಾಗಿವೆ. ಬಿಜೆಪಿ 29, ಪಿಡಿಪಿ 3 ಸ್ಥಾನದಲ್ಲಿ ಗೆಲುವು ಸಾಧಿಸಿವೆ.

ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷ 27 ಸ್ಥಾನಗಳಲ್ಲಿ ತನ್ನ ಗೆಲುವನ್ನು ಹೆಚ್ಚಿಸಿಕೊಂಡಿದೆ. ಎನ್‌ ಸಿ ಕಳೆದ ಬಾರಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ 06 ಸ್ಥಾನಗಳಲ್ಲಿ ಗೆದ್ದು, ಆರು ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಸಿಪಿಐಎಂ ಕಳೆದ ಬಾರಿ ಗೆದ್ದ ಕ್ಷೇತ್ರವನ್ನು ಮತ್ತೆ ಉಳಿಸಿಕೊಂಡಿದೆ. ಎಂ.ವೈ ತಾರಿಗಾಮಿಯವರು ಸತತವಾಗಿ ಐದನೆ ಬಾರಿ ಗೆಲುವು ದಾಖಲಿಸಿದ್ದಾರೆ. ಇವರನ್ನು ಸೋಲಿಸಲು ಹಿಂದು ಮತ್ತು ಮುಸ್ಲಿಂ ಮೂಲಭೂತವಾದಿಗಳು ಒಟ್ಟಾಗಿ ಕೆಲಸಮಾಡಿದ್ದರು. ಈ ಎಲ್ಲಾ ಶಕ್ತಿಗಳನ್ನು ಮತದಾರ ಸೋಲಿಸಿದ್ದು, ತಾರಿಗಾಮಿಯವರನ್ನು ಗೆಲ್ಲಿಸುವ ಮೂಲಕ ಜಾತ್ಯಾತೀತ ಶಕ್ತಿಯನ್ನು ಎತ್ತಿ ಹಿಡಿದಿದ್ದಾರೆ. ಬಿಜೆಪಿ 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ನಾಲ್ಕು ಕ್ಷೇತ್ರಗಳಲ್ಲಿ ತನ್ನ ಗೆಲುವು ಹೆಚ್ಚಿಸಿಕೊಂಡಿದೆ. ಹಿಂದುತ್ವದ ಮೂಲಕ ಕೋಮುಧ್ರುವಿಕರಣ ಮಾಡಲು ಪ್ರಯತ್ನಸಿದ್ದ ಬಿಜೆಪಿಗೆ ಮತದಾರರು ಕಪಾಳಕ್ಕೆ ಬಾರಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಈ ಬಾರಿ 25.64% ಪಡೆದುಕೊಂಡಿದೆ. ಕಳೆದ ಬಾರಿ 22.98% ರಷ್ಟು ಮತ ಪಡೆದು 2.66 ರಷ್ಟು ಮತಪ್ರಮಾಣ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್‌ ಕಳೆದ ಬಾರಿ 18.01 ರಷ್ಟು ಮತ ಪಡೆದಿತ್ತು, 11.97% ಮತಗಳನ್ನು ಪಡೆದು 06.04 ರಷ್ಟು ಮತ ಕಳೆದುಕೊಂಡಿದೆ. ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷ ಕಳೆದ ಬಾರಿಯ ಚುನಾವಣೆಯಲ್ಲಿ 20.77% ರಷ್ಟು ಪಡೆದಿತ್ತು. ಈ ಬಾರಿ 23.43% ಮತ ಪಡೆದು, 2.66% ರಷ್ಟು ಹೆಚ್ಚಿಸಿಕೊಂಡಿದೆ. ಪಿಡಿಪಿ ಕಳೆದ ಬಾರಿ 27.67% ಮತ ಪಡೆದಿತ್ತು. ಈ ಬಾರಿ 8.87% ರಷ್ಟು ಮತ ಪಡೆದು, 18.08% ಮತ ಕಳೆದುಕೊಂಡಿದೆ. ಸಿಪಿಐಎಂ ಕಳೆದ ಬಾರಿ 0.50 ರಷ್ಟು ಪಡೆದಿತ್ತು ಈ ಬಾರಿ 0.09% ರಷ್ಟು ಹೆಚ್ಚಿಸಿಕೊಂಡು 0.59 ರಷ್ಟು ಮತ ಪಡೆದಿದೆ.

ಬಿಜೆಪಿ ಸೋಲಿಗೆ ಕಾರಣಗಳು : ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ಕಾಶ್ಮೀರದ ಜನ ದ್ವೇಷ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿದ್ದಾರೆ.  ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ರಾಜಕೀಯ ಮಾಡಲು ಪ್ರಯತ್ನಿಸಿ, ಉಗ್ರರ ಹಾವಳಿ ತಡೆಗಟ್ಟಲು ವಿಫಲವಾಗಿದ್ದು, ವಾಕ್ ಸ್ವಾತಂತ್ರ್ಯದ ಹಕ್ಕನ್ನು ದಮನ ಮಾಡಿದ್ದು. ಬಗೆಹರಿಯದ ನಿರುದ್ಯೋಗ ಸಮಸ್ಯೆ, ಬಿಜೆಪಿ ಭರವಸೆಗೂ ವಾಸ್ತವಕ್ಕೂ ಸಾಕಷ್ಟು ಅಂತರವಿದೆ ಎಂದು ಮತದಾರರು ಅರ್ಥಮಾಡಿಕೊಂಡಿದ್ದರು.  ಬಿಜೆಪಿ ಹಿಂದೂ ಸಮುದಾಯದವರ ಪ್ರಾಬಲ್ಯ ಹೆಚ್ಚಾಗಿದ್ದ ಜಮ್ಮು ಪ್ರದೇಶದ ಎರಡು ಅಸೆಂಬ್ಲಿ ಸ್ಥಾನಗಳಾದ ಬಾನಿ ಮತ್ತು ರಾಂಬನ್​ನಲ್ಲಿ ಸೋಲನ್ನು ಅನುಭವಿಸಿದೆ. ಜಮ್ಮು ಮತ್ತು ಕಾಶ್ಮೀರದ ಬನಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷವು 18,672 ಮತಗಳಿಂದ ಸ್ವತಂತ್ರ ಅಭ್ಯರ್ಥಿಗೆ ಸೋತಿತು. ಆದರೆ, ರಾಂಬನ್‌ನಲ್ಲಿ ಬಿಜೆಪಿ 8,869 ಮತಗಳ ಅಂತರದಿಂದ ನ್ಯಾಷನಲ್ ಕಾನ್ಫರೆನ್ಸ್‌ ವಿರುದ್ಧ ಸೋತಿದೆ.

ಚುನಾವಣಾ ಆಯೋಗದ ಪ್ರಕಾರ, ಸ್ವತಂತ್ರ ಅಭ್ಯರ್ಥಿ ಡಾ. ರಾಮೇಶ್ವರ್ ಸಿಂಗ್ ಅವರು ಬಾನಿ ಕ್ಷೇತ್ರದಲ್ಲಿ ಬಿಜೆಪಿಯ ಜೇವನ್ ಲಾಲ್ ಅವರನ್ನು 18,672 ಮತಗಳ ಅಂತರದಿಂದ ಸೋಲಿಸಿದ್ದಾರೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಜೇವನ್ ಲಾಲ್ ಈ ಕ್ಷೇತ್ರದಿಂದ ಗೆದ್ದಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *