ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಪ್ರಕರಣವನ್ನು ಮುಕ್ತಾಯಗೊಳಿಸಿದ ಸಿಬಿಐ ಮೋದಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗದ ಇನ್ನೊಂದು ನಿದರ್ಶನ

ಸಿ. ಸಿದ್ದಯ್ಯ
ಎನ್‌ಡಿಟಿವಿಯ ಮಾಜಿ ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ದ 2017ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಬಿಐ 2024ರ ಅಕ್ಟೋಬರ್ ಒಂದರಂದು ಮುಕ್ತಾಯಗೊಳಿಸಿದೆ. ಏಳು ವರ್ಷಗಳ ಸುದೀರ್ಘ ತನಿಖೆಯು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಿಬಿಐಗೆ ಈ ಕ್ರಮವು ಅನಿವಾರ್ಯವಾಯಿತು. ಪ್ರಕರಣದ ಮುಕ್ತಾಯ ವರದಿಯಲ್ಲಿ ಸಿಬಿಐ ಅಧಿಕಾರಿಗಳು ಇದನ್ನೇ ಉಲ್ಲೇಖಿಸಿದ್ದಾರೆ. ಈ ಪ್ರಕರಣವು ಆಡಳಿತಾರೂಢ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ನರೇಂದ್ರ ಮೋದಿ ಸರ್ಕಾರದ ಪಬ್ಲಿಕ್ ಟೆಲಿವಿಷನ್ ನೀತಿಗಳ ವಿರುದ್ಧ ಹರಿಹಾಯ್ದ ಎನ್ ಡಿಟಿವಿಯನ್ನು ಗೌತಮ್ ಅದಾನಿ ಕೈಗೆತ್ತಿಕೊಂಡು, ಅದು ಸಂಪೂರ್ಣ ಮೌನವಾದ ನಂತರವೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ. ಪ್ರಣಯ್

ಏನಿದು ಪ್ರಕರಣ?

ಜೂನ್ 2017 ರಲ್ಲಿ, ಐಸಿಐಸಿಐ ಬ್ಯಾಂಕ್‌ ಗೆ 48 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಸಿಬಿಐ ಎನ್‌ಡಿಟಿವಿಯ ಮಾಜಿ ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ಧ ಎಫ್‌ಐಆರ್ ದಾಖಲಿಸಿತು. 2009 ರಲ್ಲಿ ಸಾಲದ ಇತ್ಯರ್ಥದಲ್ಲಿ ಉದ್ದೇಶಪೂರ್ವಕವಾಗಿ ಮೋಸದ ನಡವಳಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಇಬ್ಬರು ಬ್ಯಾಂಕ್‌ ಗೆ ಈ ನಷ್ಟವನ್ನು ಉಂಟುಮಾಡಿದರು ಎಂದು ಸಿಬಿಐ ಆರೋಪಿಸಿತ್ತು.

ತನಗೆ ಇವರಿಂದ ನಷ್ಟವಾಗಿದೆ ಎಂದು ಐಸಿಐಸಿಐ ಬ್ಯಾಂಕ್ ಯಾವುದೇ ದೂರು ನೀಡಲಿಲ್ಲ, ಬದಲಾಗಿ ಖಾಸಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಈ ತನಿಖೆ ಆರಂಭಿಸಿತು ಎಂಬುದು ಗಮನಾರ್ಹ! ಈ ಕ್ರಮವನ್ನು ಮಾಜಿ ಸಿಬಿಐ ಅಧಿಕಾರಿಗಳು ಕೂಡ ತಪ್ಪಾಗಿ ಮಾಡಿದ್ದಾರೆ. ಆದರೆ, ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ನಿವಾಸಗಳು ಹಾಗೂ ಎನ್‌ಡಿಟಿವಿ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿ ಭೀತಿ ಸೃಷ್ಟಿಸಿತ್ತು. 2019 ರಲ್ಲಿ, 35ಕ್ಕೂ ಹೆಚ್ಚು ಶೆಲ್ ಕಂಪನಿಗಳಿವೆ ಎಂದು ಹೇಳಿಕೊಂಡು ಇವರ ಮೇಲೆ ಮತ್ತೊಂದು ಪ್ರಕರಣವನ್ನು ದಾಖಲಿಸಲಾಯಿತು.

ಇದನ್ನೂ ಓದಿ: ಕುರಿ ಕಾಯುವವರ ಮಗ ಎರಡನೇ ಬಾರಿಗೆ ಸಿಎಂ ಆಗಿದ್ದೇ ತಪ್ಪಾ? ‌ನಾನೇನು ತಪ್ಪು ಮಾಡಿದ್ದೇನೆ ಎಂದ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸರ್ಕಾರದ ಈ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ದೇಶದಾದ್ಯಂತ ಪತ್ರಕರ್ತರು ದೂರಿದರು. ಪ್ರತಿಪಕ್ಷಗಳೂ ಅವರನ್ನು ಬೆಂಬಲಿಸಿದವು. ಆದರೆ, ಅಧಿಕಾರದಲ್ಲಿರುವವರಿಗೆ ಅತ್ಯಂತ ನಿಷ್ಠೆಯಿಂದ ನಡೆದುಕೊಳ್ಳುತ್ತಿರುವ ಸಿಬಿಐ ಇದಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ. ಸಿಬಿಐ ಜತೆಗೆ ಇಡಿ, ಸಂಪರ್ಕ ಇಲಾಖೆಗಳೂ ಫೀಲ್ಡಿಗಿಳಿದವು. 2022ರಲ್ಲಿ, ಗೌತಮ್ ಅದಾನಿ ಗ್ರೂಪ್ NDTV ಅನ್ನು ಸ್ವಾಧೀನಪಡಿಸಿಕೊಂಡಿತು. ಸಿಬಿಐ ಯಾವುದೇ ಸಾಕ್ಷ್ಯಾಧಾರಗಳನ್ನು ತೋರಿಸದೆ ಈಗ ಪ್ರಕರಣವನ್ನು ಮುಚ್ಚಿಹಾಕಿದೆ. ಇದರಿಂದ, ಈ ಕಿರುಕುಳಗಳು ಯಾಕಾಗಿ ಮತ್ತು ಯಾರಿಗಾಗಿ ಮಾಡಲಾಗಿದೆ ಎಂಬುದೀಗ ಇಡೀ ದೇಶಕ್ಕೆ ಸ್ಪಷ್ಟವಾಗಿದೆ.

ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್  ಅವರ ಆಳ್ವಿಕೆಯಲ್ಲಿ ಎನ್ ಡಿಟಿವಿ ಸ್ವತಂತ್ರ ಮಾಧ್ಯಮ ಕಂಪನಿಯಾಗಿ ದೇಶಾದ್ಯಂತ ಗುರುತಿಸಲ್ಪಟ್ಟಿದೆ. ಇದು ಜನರನ್ನು ವಿಭಜಿಸುವ ಕೋಮು ನೀತಿಗಳ ವಿರುದ್ಧ ಮತ್ತು ರೈತರ ಆಂದೋಲನಗಳ ಮೂಲ ಕಾರಣಗಳ ಬಗ್ಗೆ ಅನೇಕ ಸುದ್ದಿಗಳನ್ನು ಪ್ರಸಾರ ಮಾಡಿದೆ. ಅದಾನಿಯವರು ಎನ್ ಡಿಟಿವಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಸ್ವತಂತ್ರ ಮಾಧ್ಯಮದ ಮೇಲಿನ ದೊಡ್ಡ ದಾಳಿ ಎಂದು ಹಲವರು ಟೀಕಿಸಿದ್ದಾರೆ. ತನಗಾಗದವರ ವಿರುದ್ಧ ಮೋದಿ ಸರ್ಕಾರ ಜಾರಿಗೆ ತಂದಿರುವ ಪಕ್ಷಪಾತದ ಕ್ರಮಗಳಿಗೆ ಇದು ಒಂದು ನಿದರ್ಶನವಾಗಿದೆ. ಇಂತಹ ಸುದ್ದಿಗಳನ್ನು ಬೆಳಕಿಗೆ ತಂದ ನ್ಯೂಸ್  ಕ್ಲಿಕ್ ಸಂಪಾದಕರಾದ 74 ವರ್ಷದ ಪ್ರಬೀರ್ ಪುರಕಾಯಸ್ಥ ಅವರ ಮೇಲೆ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿತು. ವಿದೇಶದಿಂದ ಅಕ್ರಮವಾಗಿ ಹಣ ಪಡೆದ ಆರೋಪದಲ್ಲಿ ಅವರನ್ನು 225 ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಅವರ ಬಂಧನಕ್ಕೂ ಮುನ್ನ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದರು. ಅಂತಿಮವಾಗಿ, ದೇಶದ ಸುಪ್ರೀಂ ಕೋರ್ಟ್ ಪುರಕಾಯಸ್ಥ ಅವರ ಬಂಧನ ಮತ್ತು ವಿಚಾರಣೆ ಕಾನೂನು ವಿರೋಧಿ ಕ್ರಮ ಎಂದು ಘೋಷಿಸಿ ಅವರಿಗೆ ಜಾಮೀನು ನೀಡಿತು.

ಈ ರೀತಿ ಹೇಳುತ್ತಾ ಹೋದರೆ ಒಂದೇ, ಎರಡೇ. . . ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮದ ಮೇಲೆ ಮೋದಿ ಸರಕಾರದ ದಾಳಿಗಳು ಹಲವು. ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ಉದ್ದೇಶದಿಂದ ಮೋದಿ ಸರ್ಕಾರವು ತಂದಿರುವ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ-1967 (ಯುಎಪಿಎ) ಅಡಿಯಲ್ಲಿ ದೇಶಾದ್ಯಂತ ಅನೇಕ ಬುದ್ಧಿಜೀವಿಗಳು, ಬರಹಗಾರರು ಮತ್ತು ಕಲಾವಿದರನ್ನು ಬಂಧಿಸಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಬಿಮಾಕೋರೆಗಾಂವ್ ಪ್ರಕರಣ ಇದಕ್ಕೊಂದು ಉದಾಹರಣೆ. 2018 ರಲ್ಲಿ ಪ್ರಾರಂಭವಾದ ಈ ಪ್ರಕರಣದಲ್ಲಿ, ವಿವಿಧ ಪ್ರದೇಶಗಳಿಗೆ ಸೇರಿದ 16 ಮಾನವ ಹಕ್ಕುಗಳ ಕಾರ್ಯಕರ್ತರನ್ನು ಮೋದಿ ಸರ್ಕಾರವು ಬಂಧಿಸಿ ಅವರನ್ನು ನಿರ್ಬಂದಿಸಿತು. ಈವರೆಗೆ ಯಾರೊಬ್ಬರ ವಿರುದ್ಧವೂ ಕೂಡಾ ಆರೋಪ ಸಾಬೀತಾಗಿಲ್ಲ. ಒಬ್ಬೊಬ್ಬರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ. ಯುಎಪಿಎ ಪ್ರಕರಣಗಳಲ್ಲಿ ಕೇವಲ ಶೇ. 2.8 ರಷ್ಟು ಜನರ ಮೇಲೆ ಅಪರಾಧ ಸಾಬೀತಾಗಿ ಶಿಕ್ಷೆಯಾಗಿದೆ ಎಂದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಈ ರೀತಿಯ ದಮನಕಾರಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಮಾಡುವುದು ಪ್ರಜಾಸತ್ತಾತ್ಮಕ ಶಕ್ತಿಗಳ ಕರ್ತವ್ಯವಾಗಿದೆ.

ಇದನ್ನೂ ನೋಡಿ: ಸಾಲಕ್ಕಾಗಿ ನೀಡಿದ ಚೆಕ್ ನಿಂದ ಆಗುವ ತೊಂದರೆಗಳು

Donate Janashakthi Media

Leave a Reply

Your email address will not be published. Required fields are marked *