ಮತಾಂತರಗೊಂಡ ದಲಿತರಿಗೆ ಎಸ್.ಸಿ. ಸ್ಥಾನಮಾನ ಸಿಗುವುದೇ?

-ಡಾ. ಎಸ್. ವೈ. ಗುರುಶಾಂತ್

ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಎಸ್.ಸಿ. ಸ್ಥಾನಮಾನ ಕೊಡಬೇಕೇ ಎನ್ನುವ ಹಲವು ದಶಕಗಳ ಪ್ರಶ್ನೆಯ ಸುತ್ತ ಅಧ್ಯಯನ ಮಾಡಿ ವರದಿ ನೀಡಲು ನೇಮಕಗೊಂಡಿರುವ ನ್ಯಾ.ಕೆ.ಜಿ.ಬಾಲಕೃಷ್ಣನ್ ಆಯೋಗ ರಾಜ್ಯಕ್ಕೂ ಬಂದು ಹೋಗಿದೆ. ಸುಪ್ರಿಂ ಕೋರ್ಟ್ ನ ಕಡತಗಳಲ್ಲಿ ನೆನೆಗುದಿಗೆ ಬಿದ್ದಿರುವ ಈ ವಿಷಯದಲ್ಲಿ ಅದು ಕೊಡುವ ವರದಿ ಅತ್ಯಂತ ನಿರ್ಣಾಯಕ ಹೇಗೆ? ಓದಿ.

ಸಿಖ್ ಮತ್ತು ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರ ಮತಧರ್ಮಗಳಿಗೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ (ಎಸ್.ಸಿ) ಸ್ಥಾನಮಾನವನ್ನು ನೀಡಬೇಕೇ? ಮತ್ತು ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಎಸ್.ಸಿ. ವರ್ಗಕ್ಕೆ ಸೇರಿಸುವುದರ ಸುತ್ತಲಿನ ಸಂಕೀರ್ಣತೆಗಳನ್ನು ಅನ್ವೇಷಿಸುವ ಉದ್ದೇಶವನ್ನು ಹೊಂದಿರುವ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಆಯೋಗ ಕರ್ನಾಟಕಕ್ಕೆ ಭೇಟಿ ನೀಡಿದೆ. ಭಾರತದ ಒಕ್ಕೂಟ ಸರ್ಕಾರ ರಚಿಸಿರುವ ಈ ಆಯೋಗವು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಅಭಿಪ್ರಾಯ ಅಹವಾಲುಗಳನ್ನು ಸ್ವೀಕರಿಸುತ್ತಿದೆ.

ಸಿಖ್ ಮತ್ತು ಭೌದ್ಧ ಮತಧರ್ಮಕ್ಕೆ ಮತಾಂತರಗೊಂಡ ಪ.ಜಾತಿಗಳ ಜನರಿಗೆ ಎಸ್.ಸಿ.ಸ್ಥಾನಮಾನ ಅಥವಾ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಕೂಡದು ಎನ್ನುವ ಒತ್ತಾಯದ ಮನವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ ಎಂದು ಮಾಧ್ಯಮಗಳ ವರದಿ ಹೇಳುತ್ತಿವೆ. ಪ್ರಶ್ನೆ ಎಂದರೆ ಇಂತಹ ಮನವಿಗಳು ಬಹುತೇಕ ಸಲ್ಲಿಕೆಯಾಗಿರುವುದು ಸಂಘಪರಿವಾರದ ಅಂಗ ಸಂಸ್ಥೆ ಅಥವಾ ಅದಕ್ಕೆ ಸೇರಿದವರಿಂದ ಎನ್ನುವುದನ್ನು ಗಮನಿಸಬೇಕು.

ಇದನ್ನೂ ಓದಿ: ‘ಗೃಹ ಲಕ್ಷ್ಮೀ’ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸ್ಪಷ್ಟನೆ

ಬೇಡಿಕೆ

ಭಾರತೀಯ ಸಮಾಜ ವ್ಯವಸ್ಥೆಯ ವಾಸ್ತವಿಕತೆಗಳನ್ನು ಆಧರಿಸಿದ ಮೀಸಲಾತಿ ನೀತಿಯು ಕೇವಲ ಬಡತನದ ಸಂಬಂಧಿತವಾಗಿಲ್ಲ, ಅದರ ನೀತಿಗಳಿಂದ ಭಿನ್ನವಾಗಿದೆ. ಇದು ನಿರ್ದಿಷ್ಟವಾಗಿ ಜನಾಂಗ, ಬಣ್ಣ, ಲಿಂಗ, ಜಾತಿ ಅಥವಾ ಮತಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಎದುರಿಸುವ ಗುಂಪುಗಳನ್ನು ಗುರಿಯಾಗಿಸುತ್ತದೆ. ಐತಿಹಾಸಿಕವಾಗಿ, ಹಿಂದೂ ಮತಧರ್ಮ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ-ಎಸ್.ಸಿ. ಸಮುದಾಯಗಳು ಮೀಸಲಾತಿ ಪ್ರಯೋಜನಗಳನ್ನು ಪಡೆಯುತ್ತಿವೆ. ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೂ ಮೀಸಲಾತಿಯನ್ನು ಮುಂದುವರಿಸಬೇಕು ಎನ್ನುವ ಬೇಡಿಕೆ ಹಲವು ದಶಕಗಳ ಹಿಂದಿನಿಂದಲೇ ಮುನ್ನೆಲೆಗೆ ಬಂದಿದೆ.

ಹಲವು ಪ್ರಯತ್ನಗಳು-ಶಿಫಾರಸುಗಳು

1990 ರ ನಂತರ, ಈ ಉದ್ದೇಶಕ್ಕಾಗಿ ಹಲವಾರು ಖಾಸಗಿ ಸದಸ್ಯ ಮಸೂದೆಗಳನ್ನು ಸಂಸತ್ತಿನಲ್ಲಿ ತರಲಾಯಿತು. 1996 ರಲ್ಲಿ, ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶಗಳ (ತಿದ್ದುಪಡಿ) ಮಸೂದೆಯನ್ನು ರಚಿಸಲಾಯಿತು, ಆದರೆ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಎರಡು ಪ್ರಮುಖ ಸಮಿತಿಗಳನ್ನು ಸ್ಥಾಪಿಸಿತು. ಅಕ್ಟೋಬರ್ 2004 ರಲ್ಲಿ ರಂಗನಾಥ್ ಮಿಶ್ರಾ ಆಯೋಗ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ, ಇದು 2007 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು, ಅ ಸ್ಥಾನಮಾನವನ್ನು ‘ಧರ್ಮದಿಂದ ಸಂಪೂರ್ಣವಾಗಿ ಡಿ-ಲಿಂಕ್ ಮಾಡಬೇಕು ಮತ್ತು ಪರಿಶಿಷ್ಟ ಪಂಗಡಗಳಂತೆ ಪರಿಶಿಷ್ಟ ಜಾತಿಗಳನ್ನು ಸಂಪೂರ್ಣವಾಗಿ ಧರ್ಮ-ತಟಸ್ಥಗೊಳಿಸಬೇಕು’.

ಮಾರ್ಚ್ 2005 ರಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ದೆಹಲಿ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದ ಏಳು ಸದಸ್ಯರ ಉನ್ನತ ಮಟ್ಟದ ಸಮಿತಿ. ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯು ಮತಾಂತರದ ನಂತರ ಸುಧಾರಿಸಲಿಲ್ಲ ಎಂದು ನ್ಯಾ.ಸಾಚಾರ್ ಆಯೋಗದ ವರದಿ ಗಮನಿಸಿದೆ.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಮತ್ತು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು 2011 ರಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಎಸ್.ಸಿ. ಸ್ಥಾನಮಾನವನ್ನು ನೀಡಲು ಶಿಫಾರಸು ಮಾಡಿತ್ತು.

1950 ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶವನ್ನು ಜಾರಿಗೊಳಿಸಿದಾಗ, ಅದು ಆರಂಭದಲ್ಲಿ ಹಿಂದೂಗಳನ್ನು ಮಾತ್ರ ಪರಿಶಿಷ್ಟ ಜಾತಿಗಳು (Sಅs) ಎಂದು ಗುರುತಿಸಿತ್ತು. ಹಿಂದೂ ಸಮುದಾಯದೊಳಗಿನ ಅಸ್ಪೃಶ್ಯತೆಯಿಂದ ಉಂಟಾಗುವ ಸಾಮಾಜಿಕ ವಿಕಲಾಂಗತೆಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿತ್ತು. ನಂತರದ ತಿದ್ದುಪಡಿಗಳು ಸಿಖ್ ಧರ್ಮಕ್ಕೆ (1956 ರಲ್ಲಿ) ಮತ್ತು ಬೌದ್ಧ ಧರ್ಮಕ್ಕೆ (1990 ರಲ್ಲಿ) ಮತಾಂತರಗೊಂಡ ದಲಿತರನ್ನು ಸೇರಿಸಲು ಈ ಮಾನ್ಯತೆಯನ್ನು ವಿಸ್ತರಿಸಿತು. ಈ ತಿದ್ದುಪಡಿಗಳು ಕಾಕಾ ಕಾಲೇಲ್ಕರ್ ಆಯೋಗದ (1955) ಮತ್ತು ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (1983) ಮೇಲಿನ ‘ಉನ್ನತಾಧಿಕಾರ ತಂಡ’ದ (ಹೈ ಪವರ್ಡ್ ಪ್ಯಾನಲ್) ಶಿಫಾರಸುಗಳನ್ನು ಆಧರಿಸಿವೆ.

ಹೆಗಲೇರಿರುವ ಜಾತಿ ವ್ಯವಸ್ಥೆ ಬದಲಾಗದ ಸ್ಥಿತಿ

ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರ ಪರಿಸ್ಥಿತಿ ವಿಭಿನ್ನವಾಗಿದೆ. ಪರಿಶಿಷ್ಟ ಜಾತಿಗೆ ಐತಿಹಾಸಿಕ ಸಂಬಂಧವಿದ್ದರೂ ಅವರನ್ನು ಎಸ್.ಸಿ. ವರ್ಗಕ್ಕೆ ಸೇರಿಸಲಾಗಿಲ್ಲ. ಬ್ರಿಟೀಶ್ ವಸಾಹತುಶಾಹಿ ಸರ್ಕಾರ ಹೊರಡಿಸಿದ್ದ 1936 ರ ಇಂಪೀರಿಯಲ್ ಆದೇಶದಲ್ಲಿ ದಲಿತ ಕ್ರಿಶ್ಚಿಯನ್ನರನ್ನು ಹೊರಗಿಡಲಾಗಿತ್ತು. ಇದು ನಿರ್ದಿಷ್ಟವಾಗಿ ಭಾರತೀಯ ಕ್ರಿಶ್ಚಿಯನ್ನರನ್ನು ದಮನಕ್ಕೆ ಒಳಗಾದ ವರ್ಗಗಳ (ಡಿಪ್ರೆಸ್ಸ್ಡ್ ಕ್ಲಾಸ್) ಪಟ್ಟಿಯಿಂದ ಹೊರಗಿಟ್ಟಿದೆ. ಅಂದಿನ ಈ ಐತಿಹಾಸಿಕ ನಿರ್ಧಾರ ಇಂದಿಗೂ ಮುಂದುವರಿದಿದ್ದು ಅವರ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತಿದೆ.

ಸಾಮಾಜಿಕ ಮತ್ತು ಆರ್ಥಿಕ ದಮನ, ತಾರತಮ್ಯಗಳು, ದಬ್ಬಾಳಿಕೆಗಳಂತಹ ಗಂಭೀರ ಪ್ರಶ್ನೆಗಳಿಂದ ದಲಿತರು, ಆದಿವಾಸಿಗಳಲ್ಲಿನ ಕೆಲವು ಜನರು ಮತಾಂತರವಾಗುತ್ತಿದ್ದಾರೆ. ಇದು ಕೇವಲ ಆಮಿಷಗಳಿಂದಲೇ ಆಗುತ್ತಿದ್ದಾರೆ ಎನ್ನುವುದು ಅರ್ಥಹೀನ ಹಾಗೂ ವಾಸ್ತವವನ್ನು ಮರೆಸುವ ಹಾದಿ ತಪ್ಪಿಸುವ ತಂತ್ರ. ಹಾಗೆಯೇ ಕ್ರಿಶ್ಚಿಯನ್, ಇಸ್ಲಾಂ ಮತಧರ್ಮಗಳಿಗೆ ಮತಾಂತರಗೊಂಡವರ ಸ್ಥಿತಿಯೇನೂ ಧರ್ಮ ಬದಲಾಯಿಸಿದ ಕೂಡಲೇ ಮೂಲಭೂತವಾಗಿ ಭಾರೀ ಬದಲಾವಣೆಗಳು ಕಂಡು ಬರುವುದಿಲ್ಲ. ಮುಖ್ಯವಾಗಿ, ಅವರ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳು. ಅಲ್ಲಿ ಅವರ ‘ಐಡೆಂಟಿಟಿ’ ಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಕಂಡರೂ ಅಲ್ಲಿಯೂ ಭಾರತೀಯ ಸಮಾಜದಲ್ಲಿನ ಶ್ರೇಣಿಕೃತ ಪರಿಸ್ಥಿತಿಯ ಪರಿಣಾಮ ಮೊದಲಿದ್ದ ಸನ್ನಿವೇಶಗಳಿಗಿಂತ ಬಹಳ ಭಿನ್ನವಿಲ್ಲ. ಜಾತಿ ವ್ಯವಸ್ಥೆಯ ಹಿಂದಿನ ಎಲ್ಲವುಗಳನ್ನು ಹೆಗಲ ಮೇಲೆ ಹೊತ್ತೇ ಅಲ್ಲಿಗೆ ಸಾಗಿರುತ್ತಾರೆ.

ಸರಕಾರಗಳ ನಿರ್ಲಕ್ಷö್ಯ

ಈ ಕಡು ವಾಸ್ತವದ ಸ್ಥಿತಿಯಿಂದಾಗಿಯೇ ಕ್ರಿಶ್ಚಿಯನ್, ಇಸ್ಲಾಂ ಮತದರ್ಮಗಳಿಗೆ ಮತಾಂತರ ಹೊಂದಿದ ದಲಿತರಿಗೂ ಎಸ್.ಸಿ. ಸ್ಥಾನಮಾನ ಮತ್ತು ಮೀಸಲಾತಿ ಮುಂದುವರೆಯಬೇಕು ಎಂಬ ಬೇಡಿಕೆ ನಿರಂತರ ಇದೆ. ಇದು ಸರಿಯಾದ ಬೇಡಿಕೆ. ಸಾಚಾರ್ ಆಯೋಗ, ರಂಗನಾಥ ಮಿಶ್ರಾ ಆಯೋಗ, ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗವೂ ಸಹ ತನ್ನ ಅದ್ಯಯನದ ವರದಿಗಳಲ್ಲಿ ಮತಾಂತರ ಹೊಂದಿದ ದಲಿತರ ಬದಲಾಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಧಾರುಣ ಸ್ಥಿತಿಗತಿ ದಾಖಲಿಸಿದ್ದಾರೆ. ಆದರೆ ಹಿಂದಿನಿಂದಲೂ ಕೇಂದ್ರದಲ್ಲಿ ಕಾಂಗ್ರೆಸ್ ಒಳಗೊಂಡ ಯಾವ ಸರಕಾರಗಳು ಯಾವುದೇ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಿಲ್ಲ. ಭಾರತೀಯ ರಿಜಿಸ್ಟಾçರ್ ಜನರಲ್ (ಆರ್.ಜಿ.ಐ) ಕಚೇರಿ ಹಿಂದೂ ಧರ್ಮ ಅಥವಾ ಸಿಖ್ ಧರ್ಮದ ಆಚೆಗೆ ಸಂವಿಧಾನದ ಆದೇಶದ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ. 2001 ರಲ್ಲಿ, ಪ್ರಾಥಮಿಕವಾಗಿ ಹಿಂದೂ ಮತ್ತು ಸಿಖ್ ಸಮುದಾಯಗಳಲ್ಲಿ ಅಸ್ಪೃಶ್ಯತೆಯ ವ್ಯಾಪಕತೆಯನ್ನು ಉಲ್ಲೇಖಿಸಿದ ರಿಜಿಸ್ಟಾçರ್ ಜನರಲ್ ಆಫ್ ಇಂಡಿಯಾ (ಆರ್.ಜಿ.ಐ.) ದಲಿತ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಎಸ್.ಸಿ.ಗಳಾಗಿ ಸೇರಿಸುವುದರ ವಿರುದ್ಧ ತನ್ನ ನಿಲುವನ್ನು ಪುನರುಚ್ಚರಿಸಿತು. ಆದರೆ ಬೇಡಿಕೆಯ ಕೂಗು ನಿಂತಿಲ್ಲ. ಈ ಬಗ್ಗೆ ಎತ್ತಲಾದ ಪ್ರಶ್ನೆಯ ಮೊಕದ್ದಮೆ ಅಪೆಕ್ಸ್ ಕೋರ್ಟ್ನಲ್ಲಿ ಕಳೆದ 19 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

ವಿರೋಧದ ಅರ್ಥವೇನು?

ಇತ್ತೀಚಿನ ವರ್ಷಗಳಲ್ಲಿ, ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರಿಗೆ ಎಸ್.ಸಿ. ಸ್ಥಾನಮಾನ ನೀಡಬೇಕೇ ಎಂಬ ಬಗ್ಗೆ ಚರ್ಚೆಗಳು ಮತ್ತೇ ತೀವ್ರವಾಗಿ ನಡೆಯುತ್ತಿವೆ. ಈ ವಿಷಯವನ್ನು ಪರಿಶೀಲಿಸಲು 2022 ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿದೆ. ಈ ಆಯೋಗ ರಾಜ್ಯಗಳಿಗೆ ಭೇಟಿ ನೀಡಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ಹೀಗಿರುವಾಗ ಮತಾಂತರ ಹೊಂದಿರುವ ದಲಿತರಿಗೆ, ಆದಿವಾಸಿಗಳಿಗೆ ಎಸ್.ಸಿ. ಮತ್ತು ಎಸ್.ಟಿ. ಸ್ಥಾನಮಾನ ಮುಂದುವರಿಯಬಾರದು ಅದನ್ನು ರದ್ದುಪಡಿಸಬೇಕೆಂದು ಪ್ರಬಲ ಕೂಗು ಎದ್ದಿದೆ. ಅದರಲ್ಲೂ ಅಧಿಕಾರದಲ್ಲಿರುವ ಬಿಜೆಪಿ-ಒಟ್ಟಾರೆ ಸಂಘಪರಿವಾರವೇ ಮುಂಚೂಣಿಯಲ್ಲಿದೆ. ಪ್ರಸಕ್ತವಾಗಿ, ಮತಾಂತರಗೊಂಡ ಆದಿವಾಸಿ-ಬುಡಕಟ್ಟು ಜನರಿಗೆ ಎಸ್.ಟಿ. ಸೌಲಭ್ಯ ಇದೆ. ಅದನ್ನು ರದ್ದುಪಡಿಸಬೇಕೆಂದು ಒತ್ತಾಯವಿದೆ. ‘ಅದನ್ನು ರದ್ದುಪಡಿಸುವುದಿಲ್ಲ, ಮತಾಂತರಗೊಂಡ ಆದಿವಾಸಿ ವ್ಯಕ್ತಿಗಳಿಗೆ ಮುಂದುವರಿಸಲಾಗುವುದು’ ಎಂದು ಕೇಂದ್ರದ ಬುಡಕಟ್ಟು ಸಚಿವ ಜುಯೆಲ್ ಓರಮ್ ಸ್ಪಷ್ಟನೆ ನೀಡಿದ್ದಾರಾದರೂ, ಅದನ್ನು ಉಳಿಸಲಾಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲ. ಯಾಕೆಂದರೆ ಎಸ್.ಟಿ. ಸೌಲಭ್ಯ ನೀಡುವುದರ ವಿರುದ್ಧ ಬಿಜೆಪಿ, ಸಂಘಪರಿವಾರ ದೇಶದಾದ್ಯಂತ ವ್ಯಾಪಕವಾದ ವಿರೋಧವನ್ನು ಸಂಘಟಿಸುತ್ತಿದೆ, ಪ್ರಚಾರಿಸುತ್ತಿದೆ.

ಮುಖ್ಯವಾಗಿ ಕ್ರಿಶ್ಚಿಯನ್, ಇಸ್ಲಾಂ ಮತಧರ್ಮಗಳಿಗೆ ಮತಾಂತರ ಹೊಂದಿದ ಪ.ಜಾತಿಗಳು ಮತ್ತು ಪ.ಪಂಗಡಗಳ ಜನಗಳ ವಿರುದ್ದ ಸಂಘಪರಿವಾರ ಗುರಿ ಇಟ್ಟಿದೆ. ಪ್ರಚಾರ ಮಾತ್ರವಲ್ಲ, ಕೆಲವು ರಾಜ್ಯಗಳಲ್ಲಿ ಧಾಳಿಗಳನ್ನು, ತಿರುಚಿದ ಹಾಗೂ ದ್ವೇಷಪೂರಿತ ಅಪಪ್ರಚಾರ ನಡೆಸುತ್ತಾ ಆ ಸಮುದಾಯಗಳನ್ನು ಪರಸ್ಪರ ಎತ್ತಿ ಕಟ್ಟಿ ವಿಭಜಿಸುತ್ತಿದ್ದಾರೆ. ಒಂದೆಡೆ ದಲಿತ ಮತ್ತು ಆದಿವಾಸಿಗಳಲ್ಲಿರುವ ಐಕ್ಯತೆಯನ್ನು ಒಡೆಯುವುದು. ಇನ್ನೊಂದೆಡೆ, ವಂಚಿತ ಸಮುದಾಯಗಳಿಗೆ ಅವಕಾಶ ನೀಡುವ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವುದು. ಅವರನ್ನು ದಯನೀಯ ಸ್ಥಿತಿಯಲ್ಲೇ ಮುಂದುವರಿಯುವಂತೆ, ತೀವ್ರ ಶ್ರಮ ಶೋಷಣೆ ತಪ್ಪದಂತೆ ನೋಡಿಕೊಳ್ಳುತ್ತದೆ. ಈ ಮೂಲಕ ದಲಿತರು, ಆದಿವಾಸಿಗಳನ್ನು ‘ಹಿಂದುತ್ವ’ದ ತಾತ್ವಿಕತೆ, ಮತಾಂಧ ರಾಜಕಾರಣದೊಳಕ್ಕೆ ಸೆಳೆದು ಹಿಡಿದಿಡುವುದು ನಡೆಯುತ್ತದೆ. ಈಗಾಗಲೇ ಉದ್ಯೋಗ, ಶಿಕ್ಷಣ, ಸಂಪನ್ಮೂಲಗಳಿಂದ ವಂಚಿತವಾದ ಸಮುದಾಯಗಳಿಗೆ ತಮ್ಮವರು ಬೇರೊಂದು ಮತಧರ್ಮವನ್ನು ಅನುಸರಿಸಿದರೆ ಅದನ್ನೇ ನೆಪವಾಗಿಸಿ ಅವರನ್ನು ನಿವಾರಿಸಿಕೊಳ್ಳುವ, ಹೊರಗಟ್ಟುವ ಅಮಾನವೀಯತೆ ಅರಿಯದೇ ಶತೃಗಳಾದರೆ  ದುರಂತವೇ ಸರಿ.

ವಿಭಜನಾ ರಾಜಕಾರಣ

ಕರ್ನಾಟಕದಲ್ಲಿಯೂ ಸಂಘಪರಿವಾರ ತನ್ನ ವನವಾಸಿ ಕಲ್ಯಾಣ ಪರಿಷತ್ ಅಲ್ಲದೇ ಹೊಸ ವೇದಿಕೆಗಳ ಮೂಲಕ ಆದಿವಾಸಿಗಳನ್ನು ಹಲವು ವರ್ಷಗಳಿಂದ ಎತ್ತಿ ಕಟ್ಟುತ್ತಾ ಬರುತ್ತಿದೆ. ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಆದಿವಾಸಿಗಳ ಪರಂಪರೆ ರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳ ಬೃಹತ್ ಸಮಾವೇಶವನ್ನು ನಡೆಸಿ ಅದನ್ನು ಮೀಸಲಾತಿಯ ವಿರುದ್ಧ ಎತ್ತಿಕಟ್ಟಲು ಬಳಸಲಾಯಿತು. ಶಾಂತರಾಮ ಸಿದ್ದಿ ಯವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿರುವುದು ಇಂತಹ ಕೆಲಸಕ್ಕೆ ನೇಮಿಸಿದಂತೆ ಕಾಣುತ್ತದೆ. ‘ಪ.ಜಾತಿ, ಪ.ಪಂಗಡಗಳ ಜನ ಕ್ರಿಶ್ಚಿಯನ್, ಇಸ್ಲಾಂ ಮತಧರ್ಮಗಳಿಗೆ ಹೋಗುವುದೆಂದರೆ ಹಿಂದೂ ಧರ್ಮವನ್ನು ತ್ಯಜಿಸಿದಂತೆ. ಅಂತಹವರಿಗೆ ಯಾಕೆ ಸೌಲಭ್ಯ ಕೊಡಬೇಕು’ ಎನ್ನುವ ತರ್ಕವನ್ನು ಮುಂದಿಡುತ್ತದೆ. ಅವರಿಗೆ ದಲಿತರು, ಆದಿವಾಸಿಗಳು ಯಾಕೆ ಮತಾಂತರ ಆಗುತ್ತಿದ್ದಾರೆ ಎನ್ನುವ ಅಂಶ ಒಂದು ಪರಿಶೀಲಿಸಬೇಕಾದ ಗಹನವಾದ ಪ್ರಶ್ನೆಯಲ್ಲ, ಜನ ಜೀವನದ ಬಗ್ಗೆ ಜತನವಿಲ್ಲ.

ಪರಿಶೀಲಿಸಬೇಕಾದ ಒಂದು ಗಂಭೀರ ಪ್ರಶ್ನೆಯೊಂದಿದೆ. ಆದಿವಾಸಿಗಳು, ದಲಿತರು ಹಿಂದೂ ಮತಧರ್ಮದ ಭಾಗವೇ? ಇದರಲ್ಲಿ ದಲಿತರು-ಪ.ಜಾತಿಗಳಲ್ಲಿರುವವರು ಚಾತುರ್ವರ್ಣ ವ್ಯವಸ್ಥೆಯ ಹಿಂದೂ ಧರ್ಮ ಎನ್ನುವುದರ ಭಾಗವಾಗಿದ್ದಾರೆ. ಆದರೆ ಆದಿವಾಸಿಗಳು ಅಲ್ಲ. ಅವರಿಗೆ ಅವರದ್ದೇ ಆದ ಪ್ರಕೃತಿ ಧರ್ಮ ಇದೆ. ದಲಿತರು ಅಸ್ಪೃಶ್ಯತೆಯಂತಹ ಅಮಾನವೀಯ ವ್ಯವಸ್ಥೆಯ ಕಾರಣಕ್ಕೂ ಆರ್ಥಿಕ, ಸಾಮಾಜಿಕ ಕಾರಣದಲ್ಲೂ ಅತ್ಯಂತ ತುಳಿತಕ್ಕೆ ಒಳಗಾಗಿ ತಾರತಮ್ಯವನ್ನು ಅನುಭವಿಸುತ್ತಾ ಬಂದಿದ್ದಾರೆ. ಹುಟ್ಟಿನ ಕಾರಣಕ್ಕೆ ಒಂದು ಮತದರ್ಮವನ್ನು ಅನುಸರಿಸಲೇ ಬೇಕು, ಸೇರಲೇಬೇಕು ಎನ್ನುವ ಒತ್ತಾಯವಾದರೂ ಏಕೆ? ಜನಗಣತಿಯಲ್ಲಿ ಹಿಂದೂ ಎಂದು ಬರೆಸಲು ಆದಿವಾಸಿಗಳನ್ನು ಒತ್ತಾಯಿಸಲಾಗುತ್ತಿದೆ.

ಮತಾಂತರಗೊಂಡ ಬುಡಕಟ್ಟು ವ್ಯಕ್ತಿಗಳು ತಮ್ಮ ಎಸ್.ಟಿ. ಸ್ಥಾನಮಾನವನ್ನು ಉಳಿಸಿಕೊಳ್ಳಬೇಕೇ ಎಂಬುದು ಚರ್ಚೆ ಮತ್ತು ನೀತಿ ಆಗಬೇಕು. ಐತಿಹಾಸಿಕವಾಗಿ, ಪ.ಪಂಗಡದ ಸ್ಥಾನಮಾನದ ಮಾನದಂಡಗಳು ಮೂಲಭೂತವಾಗಿ, ಸಾಂಪ್ರದಾಯಿಕ ಬುಡಕಟ್ಟು ಆಚರಣೆಗಳು, ಸಂಸ್ಕೃತಿ ಮತ್ತು ಸಾಮಾಜಿಕ ಗುರುತನ್ನು (ಐಡೆಂಟಿಟಿ) ಆಧರಿಸಿವೆ. ಆದಾಗ್ಯೂ, ಧಾರ್ಮಿಕ ಮತಾಂತರಗಳು ಸಂಭವಿಸಿದಂತೆ, ಮತಾಂತರಗೊಂಡ ಆದಿವಾಸಿಗಳ ಸ್ಥಿತಿಯನ್ನು ಹೇಗೆ ಪರಿಹರಿಸುವುದು ಎಂಬ ಪ್ರಶ್ನೆಗಳು ಉದ್ಭವಿಸಿದವು. ಅವನ್ನು ಪರಿಹರಿಸಬೇಕು.

ಈ ಎರಡು ವಿಭಾಗಗಳು ಯಾವುದೇ ಧರ್ಮಕ್ಕೆ ಮತಾಂತರ ಆದಾಗಲೂ ಅವರ ಆರ್ಥಿಕ, ಸಾಮಾಜಿಕ ಸ್ಥಾನಮಾನ ಸುಧಾರಿಸುವುದಿಲ್ಲ. ಇದನ್ನು ಹಲವು ಅಧ್ಯಯನಗಳು ತಿಳಿಸಿವೆ. ಆದ್ದರಿಂದ ಅವರಿಗೂ ಪ.ಜಾತಿ, ಪ.ಪಂಗಡದ ಸ್ಥಾನಮಾನ, ಸೌಲಭ್ಯಗಳು ಅನಿವಾರ್ಯ ಮತ್ತು ಅಗತ್ಯ.

ಬೇಕು ಪ್ರಬಲ ಪ್ರತಿಪಾದನೆ

ಆದರೆ ಈ ಪ್ರಶ್ನೆಗೆ ಸಂವಿಧಾನಾತ್ಮಕ, ಕಾನೂನಾತ್ಮಕ ಪರಿಹಾರದ ಅಗತ್ಯವೂ ಇದೆ. ಅಲ್ಲಿ ಅಡ್ಡಿಯಾಗಿರುವ ಅಂಶಗಳನ್ನು ಇಂದಿನ ವಾಸ್ತವಗಳ ಹಿನ್ನೆಲೆಯಲ್ಲಿ ಪುನರ್ ರೂಪಿಸಬೇಕು. ಮುಕ್ತವಾದ ಮನಸ್ಸಿನಿಂದ, ವಾಸ್ತವಿಕ ಸ್ಥಿತಿಗಳಿಂದ ಪಡೆಯಲಾದ, ನಡೆಸಲಾದ ಅಧ್ಯಯನದ ವರದಿ ಈ ದೆಸೆಯಲ್ಲಿ ಪರಿಹಾರ ನೀಡಬೇಕು. ಈ ಆಯೋಗಕ್ಕೆ ಸಂಬಂಧಿಸಿದ ಸಮುದಾಯಗಳು, ಸಂಘಟನೆಗಳು ವಿಪುಲವಾದ ಮಾಹಿತಿಗಳನ್ನು ಒದಗಿಸುವುದು ಮತ್ತು ಪ್ರಬಲ ಪ್ರತಿಪಾದನೆ ಮೂಲಕ ಸಕ್ರಿಯ ಪಾತ್ರವನ್ನು ವಹಿಸಬೇಕು. ಪ್ರತಿ ರಾಜ್ಯಗಳಿಂದ, ಪ್ರಾದೇಶಿಕವಾಗಿಯೂ ನೀಡುವ ಮಾಹಿತಿಗಳು, ಪ್ರತಿಪಾದನೆಗಳು ಮಹತ್ವದ್ದಾಗಿವೆ. (ಲಿಖಿತವಾಗಿ ಸಲ್ಲಿಸಲು ಅವಕಾಶ ಇದೆ) ಈ ದೃಷ್ಟಿಯಲ್ಲಿ ಈ ಆಯೋಗದ ವರದಿ ನಿರ್ಣಾಯಕವಾಗಲಿದೆ.

1990ರ ನಂತರ, ಈ ಉದ್ದೇಶಕ್ಕಾಗಿ ಹಲವಾರು ಖಾಸಗಿ ಸದಸ್ಯ ಮಸೂದೆಗಳನ್ನು ಸಂಸತ್ತಿನಲ್ಲಿ ತರಲಾಯಿತು.

1996 ರಲ್ಲಿ, ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶಗಳ (ತಿದ್ದುಪಡಿ) ಮಸೂದೆಯನ್ನು ರಚಿಸಲಾಯಿತು, ಆದರೆ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿಲ್ಲ.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಎರಡು ಪ್ರಮುಖ ಸಮಿತಿಗಳನ್ನು ಸ್ಥಾಪಿಸಿತು:

ಅಕ್ಟೋಬರ್ 2004 ರಲ್ಲಿ ರಂಗನಾಥ್ ಮಿಶ್ರಾ ಆಯೋಗ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ

ಇದು 2007 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು, ಎಸ್.ಸಿ. ಸ್ಥಾನಮಾನವನ್ನು “ಧರ್ಮದಿಂದ ಸಂಪೂರ್ಣವಾಗಿ ಡಿ-ಲಿಂಕ್ ಮಾಡಬೇಕು ಮತ್ತು ಪರಿಶಿಷ್ಟ ಪಂಗಡಗಳಂತೆ ಪರಿಶಿಷ್ಟ ಜಾತಿಗಳನ್ನು ಸಂಪೂರ್ಣವಾಗಿ ಧರ್ಮ-ತಟಸ್ಥಗೊಳಿಸಬೇಕು.

ಮಾರ್ಚ್ 2005 ರಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ದೆಹಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದ ಏಳು ಸದಸ್ಯರ ಉನ್ನತ ಮಟ್ಟದ ಸಮಿತಿ.

ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯು ಮತಾಂತರದ ನಂತರ ಸುಧಾರಿಸಲಿಲ್ಲ ಎಂದು ಸಾಚಾರ್ ಆಯೋಗದ ವರದಿ ಗಮನಿಸಿದೆ.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಮತ್ತು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು 2011 ರಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಎಸ್ಸಿ ಸ್ಥಾನಮಾನವನ್ನು ನೀಡಲು ಶಿಫಾರಸು ಮಾಡಿತ್ತು.

ಇದನ್ನೂ ನೋಡಿ: ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣ ಮಾಡಿದ್ರೆ ನಿಮ್ಮ ಸರ್ಕಾರ ಉಳಿಯಲ್ಲ – ಕಾಂಗ್ರೆಸ್ ಗೆ ಎಚ್ಚರಿಸಿದ ಸಿಪಿಐಎಂ ನಾಯಕ

Donate Janashakthi Media

Leave a Reply

Your email address will not be published. Required fields are marked *