ಬೆಂಗಳೂರು: ಆಗಸ್ಟ್ 1, 2024 ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ಯಾವುದೇ ಸಾಂವಿಧಾನಿಕ ತೊಡಕುಗಳಿಲ್ಲ ಹಾಗೂ ರಾಜ್ಯ ಸರ್ಕಾರಕ್ಕೆ ಆ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಇಡೀ ಭಾರತ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ರಾಜ್ಯದ ಪರಿಸ್ಥಿತಿಯು ಒಳಮೀಸಲಾತಿ ಜಾರಿಗೆ ಬಹಳ ಅನುಕೂಲಕರವಾಗಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಮತ್ತು ದಲಿತ ಸಂಘರ್ಷ ಸಮಿತಿ ಚಾಲನಾ ಸಮಿತಿ ತಿಳಿಸಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗಿ ಒಂದು ದಶಕವೇ ಆಗಿ ಹೋಗುತ್ತಿತ್ತು. ಹಲವು ರಾಜಕೀಯ ಮೇಲಾಟಗಳ ಪರಿಣಾಮವಾಗಿ ಪರಿಶಿಷ್ಟ ಜಾತಿಗಳ ಹೋರಾಟಕ್ಕೆ ಮನ್ನಣೆ ಸಿಗಲಿಲ್ಲ. ಆದರೆ 2023 ರ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಒಳಮೀಸಲಾತಿ ಜಾರಿಗಾಗಿ ಒತ್ತಡ ನಿರ್ಮಾಣವಾದಾಗ, ರಾಷ್ಟ್ರ ಮತ್ತು ರಾಜ್ಯಮಟ್ಟದ ಕಾಂಗ್ರೆಸ್ ಪಕ್ಷವು ಸಕಾರಾತ್ಮಕವಾಗಿ ಸ್ಪಂಧಿಸಿತು.
ಚಿತ್ರದುರ್ಗದಲ್ಲಿ ನಡೆದ ʼಕಾಂಗ್ರೆಸ್ ಐಕ್ಯತಾ ಸಮಾವೇಶʼದಲ್ಲಿ ಅಧಿಕಾರಕ್ಕೆ ಬಂದ ಮೊದಲ ಅದಿವೇಶನದಲ್ಲಿಯೇ ಒಳಮೀಸಲಾತಿ ಜಾರಿಗಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಅದರಂತೆ ಕೇಂದ್ರ ಸರ್ಕಾರಕ್ಕೆ ಒಳಮೀಸಲಾತಿ ಜಾರಿಗಾಗಿ ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಶಿಫಾರಸನ್ನು ಮಾಡಲಾಯಿತು. ಈ ಕ್ರಮಕ್ಕೆ ಸಮಸ್ತ ಪರಿಶಿಷ್ಟ ಜಾತಿಗಳೂ ಸಿದ್ಧರಾಮಯ್ಯರವರ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದವು ಎಂದು ಹೇಳಿದೆ.
ಇದನ್ನೂ ಓದಿ: ರೂಪದರ್ಶಿಗೆ ಕಿರುಕುಳ : ಮೂವರು ಐಪಿಎಸ್ ಅಧಿಕಾರಿಗಳ ಅಮಾನತು
ಈಗ ದಾರಿ ಮತ್ತಷ್ಟು ಸುಗಮವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಸಂವಿಧಾನ ತಿದ್ದುಪಡಿಯ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಕರ್ನಾಟಕ ಸರ್ಕಾರವೇ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಬಹುದು. ಸುಪ್ರೀಂ ಕೋರ್ಟ್ ತೀರ್ಪು ಬಂದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀರ್ಪನ್ನು ಸ್ವಾಗತಿಸಿ, ತಮ್ಮ ಬದ್ದತೆ ಪ್ರದರ್ಶಿಸಿದರು. ಆದರೆ ಒಂದೂವರೆ ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಬೇಕು.
ಕರ್ನಾಟಕ ಸರ್ಕಾರದ ಬಳಿ ಈಗಾಗಲೇ ಪರಿಶಿಷ್ಟರ 101 ಜಾತಿಗಳ ಅಂಕಿಅಂಶವಿದೆ. ಇದರ ಜೊತೆಗೆ ಅಗತ್ಯಬಿದ್ದಲ್ಲಿ ಮತ್ತಷ್ಟು ದತ್ತಾಂಶಗಳನ್ನು ಒಂದು ತಿಂಗಳೊಳಗೆ ಕ್ರೋಡೀಕರಿಸಿಕೊಳ್ಳಬಹುದು. ಆದರೆ ಈ ಕೂಡಲೇ ಸುಗ್ರೀವಾಜ್ಞೆಯ ಮೂಲಕ ʼಒಳಮೀಸಲಾತಿʼಯನ್ನು ಜಾರಿಗೊಳಿಸಿ ಆದೇಶಿಸಬೇಕು ಹಾಗೂ ಒಳಮೀಸಲಾತಿ ಜಾರಿಗೊಳ್ಳುವವರೆಗೂ ಯಾವುದೇ ನೇಮಕಾತಿಗಳನ್ನು ಮಾಡಿಕೊಳ್ಳಬಾರದು ಎಂದು ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ನುಡಿದಂತೆ ನಡೆಯುವ ಸರ್ಕಾರ. ಈಗಾಗಲೇ 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಕೊಟ್ಟ ಮಾತನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಅದೇ ರೀತಿಯಲ್ಲಿ, ರಾಹುಲ್ ಗಾಂಧಿಯವರ ಜಿಸ್ ಕಿ ಜಿತ್ನಿ ಆಬಾದಿ, ಉಸ್ ಕಿ ಉತ್ನಿ ಭಾಗೀದಾರಿ ಎಂಬ ಘೋಷವಾಕ್ಯವು ಬರಿ ಬಾಯಿ ಮಾತಲ್ಲ ಎಂಬುದನ್ನು ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಸಾಬೀತುಪಡಿಸಬೇಕಿದೆ. ರಾಹುಲ್ ಗಾಂಧಿಯವರು ಬಿಜಾಪುರದಲ್ಲಿ ದಲಿತ ನಾಯಕರಿಗೆ ಕೊಟ್ಟ ಮಾತಿನಂತೆ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ʼಒಳಮೀಸಲಾತಿ ಜಾರಿʼ ಆಶ್ವಾಸನೆಯನ್ನು ಈಡೇರಿಸಬೇಕು.
ಈ ಕುರಿತಂತೆ, ಸೆಪ್ಟೆಂಬರ್ 17 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ʼಒಳಮೀಸಲಾತಿ ಜಾರಿʼ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ʼಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟʼ ಆಗ್ರಹಿಸುತ್ತದೆ. ಇದಕ್ಕೆ ಪೂರಕ ವಾತಾವರಣವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತದೆ.
ಹಕ್ಕೊತ್ತಾಯಕ್ಕೆ ಬೆಂಬಲಿಸುವ ಗೌರವಾನ್ವಿತ ಮುಖಂಡರು
ಜಸ್ಟೀಸ್ ಗೋಪಾಲಗೌಡ, ದೇವನೂರು ಮಹಾದೇವ, ಡಾ. ಬರಗೂರು ರಾಮಚಂದ್ರಪ್ಪ, ಪ್ರೊ. ರವಿವರ್ಮ ಕುಮಾರ್, ಸಿ.ಎಸ್ ದ್ವಾರಕನಾಥ್, ಡಾ. ಬಂಜಗೆರೆ ಜಯಪ್ರಕಾಶ್, ಎಸ್.ಜಿ ಸಿದ್ದರಾಮಯ್ಯ, ಗುರುರಾಜ್ ಬೀಡೀಕರ್, ಎನ್ ವೆಂಕಟೇಶ್, ಕೆ ರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಬಿ ಗೋಪಾಲ್, ಎಸ್.ಆರ್ ಹೀರೇಮಠ್, ಪ್ರೊ ಬಾಬು ಮ್ಯಾಥ್ಯೂ ಡಿ.ಜಿ. ಸಾಗರ್, ಎಸ್. ಮಾರೆಪ್ಪ, ಹೆಣ್ಣೂರು ಶ್ರೀನಿವಾಸ್, ಅಂಬಣ್ಣ ಅರೋಲಿಕರ್, ಸುಬ್ಬು ಹೊಲೆಯಾರ್, ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪ್ರಸಾದ್, ಗುರುಪ್ರಸಾದ್ ಕೆರಗೋಡು, ಕೆ.ಪಿ ಅಶ್ವಿನಿ, ಡಾ. ವಿಜಯಮ್ಮ, ಪ್ರೊ. ಜಾಫೆಟ್, ಸಿದ್ದಯ್ಯ ಮಾಜಿ ಐ.ಎ.ಎಸ್, ಗೋನಾಳ್ ಭೀಮಪ್ಪ, ಹೆಚ್.ಟಿ. ತೇಗನೂರು, ಸುಭಾಷ್ ಭರಣಿ, ಪ್ರೊ. ಟಿ.ಎಚ್. ಮೂರ್ತಿ, ಸಿ.ಎಂ ಮುನಿಯಪ್ಪ, ನ. ಮುನಿಸ್ವಾಮಿ, ದೊರೈರಾಜ್, ಮಾವಳ್ಳಿ ಶಂಕರ್, ಇಂಧೂದರ ಹೊನ್ನಾಪುರ, ಡಿ.ಉಮಾಪತಿ, ಮಾರಸಂದ್ರ ಮುನಿಯಪ್ಪ, ಗೋಪಿನಾಥ್, ದು. ಸರಸ್ವತಿ, ಶ್ರೀಪಾದ್ ಭಟ್, ಎಸ್. ಬಾಲನ್, ಗೋಖಲೆ, ಎಸ್ ಮರಿಸ್ವಾಮಿ (ಐಪಿಎಸ್) ಸ್ಫೂರ್ತಿಧಾಮ, ಜೆ.ಎಂ ವೀರಸಂಗಯ್ಯ, ಶಿವಸುಂದರ್, ಡಾ. ವಾಸು ಎಚ್.ವಿ, ನೂರ್ ಶ್ರೀಧರ್, ತಾರರಾವ್, ಯೂಸಫ್ ಖನ್ನಿ, ಹರಿರಾಮ್, ಫಾದರ್ ಜೆರಾಲ್ಡ್, ರೆವರೆಂಡ್ ಮನೋಹರ್ ಚಂದ್ರ ಪ್ರಸಾದ್, ಗುರುಮೂರ್ತಿ, ಕರಿಯಪ್ಪ ಗುಡಿಮನಿ, ಶಿವರಾಯ ಅಕ್ಕರಕ್ಕಿ, ಕನಕಪುರ ಶಿವಣ್ಣ, ಶ್ರೀನಾಥ್ ಪೂಜಾರಿ, ಕೇಶವಮೂರ್ತಿ, ಸೋಮಶೇಖರ್ ಹಾಸನ, ಜೆ.ಬಿ ರಾಜು, ಓಬಳೇಶ್, ನರಸಿಂಹಮೂರ್ತಿ, ಡಾ. ಮೋಹನ್ ರಾಜ್, ಮಲ್ಲೇಶ್ ಹರಿಹರ, ಬಿ.ಪಿ ತಿಪ್ಪೇಸ್ವಾಮಿ, ಸಿ.ದಾನಪ್ಪ ನಿಲೋಗಲ್, ಶ್ರೀಧರ್ ಕಲವೀರ, ವೆಂಕಟೇಶ್ ಆಲೂರು, ವಿಜಯಕುಮಾರ್, ಅಣ್ಣಯ್ಯ ಮಂಜುನಾಥ್, ಅಬ್ರಹಾಂ ಹೊನ್ನಟಿಗಿ, ಬಿ.ಪಿ ಪ್ರಕಾಶ್ ಮೂರ್ತಿ, ಗಂಗಾಧರ ಪೌ.ಸಂಘ, ವೇಣು ಮೌರ್ಯ, ರಘು ಕಾಮಾಕ್ಷಿಪಾಳ್ಯ, ಡಾ. ಕೂಸಣ್ಣ, ಡಾ. ನಾಗೇಶ್, ನಾಗಮಣಿ, ಸಣ್ಣಮಾರಣ್ಣ, ಹನಮಂತಪ್ಪ, ಮಲ್ಲಿಗೆ, ಗೌರಿ, ಮಂಜುನಾಥ್ ಪಿಟಿಸಿಎಸ್, ಕೆ.ಎನ್. ವಿಠ್ಠಲ್, ವಿನಯ್ ಶ್ರೀನಿವಾಸ್ (ಎ.ಎಲ್.ಎಫ್) ಬಸವರಾಜ್ ಕೌತಾಳ್, ಹುಲಿಕುಂಟೆ ಮೂರ್ತಿ, ವಿಕಾಸ್ ಆರ್ ಮೌರ್ಯ, ವಿ.ಎಲ್ ನರಸಿಂಹಮೂರ್ತಿ, ಕೋಡಿಹಳ್ಳಿ ಸಂತೋಷ್, ರವಿಕುಮಾರ್ ಬಾಗಿ, ಬಿ.ಸಿ. ಬಸವರಾಜು, ಚಂದ್ರು ತರಹುಣಿಸೆ, ಮುತ್ತುರಾಜು, ಅಶ್ವಿನಿ ಬೋಧ್ ಮುಂತಾದವರು ಬೆಂಬಲಿಸಿದ್ದಾರೆ.
ಇದನ್ನೂ ನೋಡಿ: ವಚನಾನುಭವ – 12 | ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು | ಮೀನಾಕ್ಷಿ ಬಾಳಿ Janashakthi Media