ಹಾಸನ: ಸಿನೆಮಾದಲ್ಲಿ ಕಮರ್ಷಿಯಲ್ ಸಿನೆಮಾ, ಕಲಾತ್ಮಕ ಸಿನೆಮಾ ಅಂತ ಕೇವಲ ಎರಡೇ ವಿಧಗಳಿಲ್ಲ. ಹತ್ತಾರು ವಿಧಗಳಿವೆ ಹದಿನೇಳೆಂಟು ಸಿನೆಮಾ ಕೇವಲ ಸಂದೇಶ ನೀಡಲು ರೂಪಿಸಿದ ಚಿತ್ರವಲ್ಲ. ಅದೊಂದು ಕತೆ ಎಂದು ಚಿತ್ರ ನಿರ್ದೇಶಕ ಪೃಥ್ವಿ ಕೊಣನೂರು ಅಭಿಪ್ರಾಯ ಪಟ್ಟರು.
ಸೆಪ್ಟೆಂಬರ್ 12ರ ಸಂಜೆ ಹಾಸನ್ ಫಿಲ್ಮ್ ಸೊಸೈಟಿ, ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಡ್ಲಹಳ್ಳಿ ಪಬ್ಲಿಕೇಷನ್ ಹಾಗೂ ಹಾಸನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ “ಹದಿನೇಳೆಂಟು” ಸಿನೆಮಾ ಪ್ರದರ್ಶನ ಹಾಗು ನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಸುತ್ತಲಿನ ಕತೆಗಳನ್ನೇ ಸಿನೆಮಾ ಮಾಡುವುದು ನನ್ನ ಕ್ರಮ. ಅದರಲ್ಲೂ ನನ್ನ ಆಸಕ್ತಿ, ಅಭಿರುಚಿಯ ಕತೆಗಳನ್ನು ಸಿನೆಮಾವನ್ನಾಗಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಜನ ನಾಯಕ ಸೀತಾರಾಂ ಯೆಚೂರಿ ನಿಧನ – ಸಿಪಿಐ(ಎಂ) ಕರ್ನಾಟಕ ರಾಜ್ಯ ಘಟಕದಿಂದ ಶ್ರದ್ಧಾಂಜಲಿ ಸಭೆ
ಜಾತಿಯ ಬಗ್ಗೆ ಸಿನೆಮಾ ಮಾತನಾಡುತ್ತದೆ ಅಂದರೆ ಪೂರ್ಣ ಸತ್ಯವಲ್ಲ. ಜಾತಿಯನ್ನು ಮುಖ್ಯ ವೇದಿಕೆಯಲ್ಲಿಟ್ಟು ಸಿನೆಮಾ ಮಾಡುವುದು ಉದ್ದೇಶವಾಗಿರಲಿಲ್ಲ. ಹದಿಹರೆಯದ ವಿದ್ಯಾರ್ಥಿಗಳ ನಡೆ ಹಾಗು ಸಮಾಜದ ನಡುವೆ ಚಲಿಸುವ ಒಂದು ಕತೆಯಲ್ಲಿ ಜಾತಿಯೂ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಾಹಿತಿ ರೂಪ ಹಾಸನ ಮಾತನಾಡಿ ಮಕ್ಕಳ ಸುರಕ್ಷತೆಯ ಬಗೆಗಿನ ಸಂಗತಿಗಳನ್ನು ಅಧ್ಯಯನ ಮಾಡಿ ಸೂಕ್ಷ್ಮವಾಗಿ ಹದಿನೇಳೆಂಟು ಸಿನೆಮಾ ರೂಪುಗೊಂಡಿದೆ ಎಂದರು. ಶಾಲೆಗಳಲ್ಲಿ ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಸರಕಾರ ರೂಪಿಸಿರುವ ಕೆಲ ವ್ಯವಸ್ಥೆಗಳ ಬಗ್ಗೆ ಗಮನ ಸೆಳೆದರು.
ಡಾ ಸಾವಿತ್ರಿ ಅವರು ಮಾತನಾಡಿ ಹದಿ ಹರೆಯದಲ್ಲಿ ಮಕ್ಕಳ ಮನಸಿನ ಕುರಿತಾಗಿ ಹೆಚ್ಚಿನ ಗಮನ ಇರಬೇಕು ಹಾಗೆಯೇ ಅದನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಅಂತಹಾ ಗಂಭೀರ ವಿಚಾರದ ಬಗ್ಗೆ ಸಿನೆಮಾ ಗಟ್ಟಿಯಾಗಿ ಮಾತನಾಡುತ್ತದೆ ಎಂದರು.
ವಿಜಯ ಶಾಲೆಯ ತಾರಾಸ್ವಾಮಿ ಮಾತನಾಡಿ ತಮ್ಮ ಸಂಸ್ಥೆಯ ಪ್ರೌಡಶಾಲಾ ವಿಭಾಗಕ್ಕೆ ಈ ಸಿನೆಮಾ ಪ್ರದರ್ಶನ ಮಾಡಿಸುವ ಬಗ್ಗೆ ಚಿಂತಿಸುತ್ತೇವೆ ಎಂದರು.
ಪಂಚಾಯತ್ ಅಧಿಕಾರಿ ವತ್ಸಲಾ ಮಾತನಾಡಿ ಈ ಸಿನೆಮಾ ಕೇವಲ ಶಾಲಾ ಕಾಲೇಜುಗಳಿಗೆ ಮಾತ್ರವಲ್ಲ ಹಳ್ಳಿಗಾಡಿನ ಕಡೆಯಲ್ಲಿ ಹೆಚ್ಚಿನ ಜನರನ್ನು ತಲುಪಬೇಕಿದೆ ಎಂದರು.
ಆಯೋಜಕರಾದ ಫಿಲ್ಮ್ ಸೊಸೈಟಿಯ ರೋಹಿತ್ ಅಗಸರಹಳ್ಳಿ ಅಗತ್ಯವಾಗಿ ಎಲ್ಲರೂ ಈ ಸಿನೆಮಾ ನೋಡಬೇಕು ಮಾತ್ರವಲ್ಲ ಆರ್ಥಿಕಾವಾಗಿಯೂ ಇಂತಹಾ ಸಿನೆಮಾಗಳು ಗೆಲ್ಲಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಅಭಿಪ್ರಾಯ ಪಟ್ಟರು.
ಶ್ರಮ ಸಂಶೋಧನಾ ಸಂಸ್ಥೆಯ ನವೀನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಡ್ಲಹಳ್ಳಿ ಪಬ್ಲಿಕೇಷನ್ ಸಂಸ್ಥೆಯ ಚಲಂ ಹಾಡ್ಲಹಳ್ಳಿ ವಂದನಾರ್ಪಣೆ ಮಾಡಿದರು.
ಸಂವಾದದಲ್ಲಿ ಬಿ ಜಿ ವಿ ಎಸ್ ನ ಅಹಮದ್ ಹಗರೆ, ಹಿರಿಯ ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ಸಾಹಿತಿ ಗೊರೂರು ಶಿವೇಶ್, ಧರ್ಮೇಶ್, ಉಷಾ, ಪೂಜಾ ರಘುನಂದನ್, ಚಿನ್ನೇನಹಳ್ಳಿ ಸ್ವಾಮಿ, ಪೃಥ್ವಿ, ಸೀ ಚ ಯತೀಶ್ವರ್, ಬಿ.ಎಸ್.ದೇಸಾಯಿ, ಅಪ್ಪಾಜಿಗೌಡ, ತಿರುಪತಿಹಳ್ಳಿ ಶಿವಶಂಕರಪ್ಪ, ಅಧ್ಯಾಪಕಿ ರಾಣಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ. ಗಿರೀಶ್, ಅಧ್ಯಾಪಕರಾದ ತಿಮ್ಮೇಶ್ ಇನ್ನಿತರರು ಭಾಗವಹಿಸಿದ್ದರು.
ಇದನ್ನೂ ನೋಡಿ: ಬಿಸಿ ಪ್ರಳಯದ ಹೊಸ್ತಿಲಲ್ಲಿ ಕೃಷಿಕರ ಸಮಾಜಕ್ಕೆ ಹೊಸ ಸವಾಲುಗಳು – ನಾಗೇಶ ಹೆಗಡೆ Janashakthi Media