– ವಸಂತರಾಜ ಎನ್ ಕೆ
“ಕಾರ್ಮಿಕ ವರ್ಗದ ರಾಜಿಯಿಲ್ಲದ ಸಮರಧೀರ ಐಕ್ಯ ಹೋರಾಟಗಳನ್ನು ಮುನ್ನಡೆಸುವಲ್ಲಿ ನಾವು ಕಾಂ. ಸೂರಿಯವರ ಪರಂಪರೆಯನ್ನು ಮುಂದುವರಿಸಬೇಕಾಗಿದೆ” ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮತ್ತು ಸಿಪಿಐ(ಎಂ) ಪಾಲಿಟ್‌ಬ್ಯೂರೋ ಸದಸ್ಯರಾದ ಕಾಂ. ತಪನ್ ಸೇನ್ ಕರೆ ನೀಡಿದರು. ಆಗಸ್ಟ್ 24 ರಂದು “ಕಾರ್ಮಿಕ ವರ್ಗದ ಚಳವಳಿ ಮತ್ತು ಕರ್ನಾಟಕದ ಅಭಿವೃದ್ಧಿ” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ ಟೌನ್ ಹಾಲ್‌ನಲ್ಲಿ ‘ಕಾಮ್ರೇಡ್ ಎಸ್ ಸೂರ್ಯನಾರಾಯಣ ರಾವ್ ಶತಮಾನೋತ್ಸವ ಆಚರಣಾ ಸಮಿತಿ’ ವತಿಯಿಂದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಕಾಂ. ಎಸ್.ಸೂರ್ಯನಾರಾಯಣ ರಾವ್ ಅವರು ರಾಜ್ಯದ ಪ್ರಮುಖ ಟ್ರೇಡ್ ಯೂನಿಯನ್ ಮತ್ತು ಕಮ್ಯೂನಿಸ್ಟ್ ನಾಯಕರಾಗಿದ್ದರು ಮತ್ತು ಸಿಐಟಿಯು ಕರ್ನಾಟಕದ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರು 1990ರ ದಶಕದ ಅಂತ್ಯದಲ್ಲಿ ಸಿಪಿಐ(ಎಂ) ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಸದಸ್ಯರಾಗಿದ್ದರು. ಇದು ಕಾಂ. ಸೂರಿಯವರ ಜನ್ಮ ಶತಮಾನೋತ್ಸವದ ಎರಡನೇ ಕಾರ್ಯಕ್ರಮವಾಗಿದೆ.
ರಾಜಿಯಾಗದ ಸಮರಧೀರ ನಾಯಕತ್ವ
ಕಾಂ. ಸೂರಿಯವರ ರಾಜಿಯಾಗದ ಸಮರದೀರ ನಾಯಕತ್ವದ ಗುಣವು, ಬಂಡವಾಳಶಾಹಿ ವ್ಯವಸ್ಥೆಯ ವಿರುದ್ದ ಹೋರಾಡುವ ಮತ್ತು ಅದನ್ನು ಬೇರುಸಹಿತ ಕಿತ್ತುಹಾಕುವ ಮತ್ತು ಬದಲಾಯಿಸುವ ಅವರ ಸೈದ್ಧಾಂತಿಕ ಬದ್ಧತೆಯಿಂದ ಬಂದಿದೆ ಎಂದು ಕಾಂ. ತಪನ್ ಸೇನ್ ಪ್ರತಿಪಾದಿಸಿದರು. ದುಡಿಯುವ ವರ್ಗ ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಹಿಂದೆ ಬಂಡವಾಳಶಾಹಿ ವರ್ಗ ಮತ್ತು ಅದು ಅನುಸರಿಸುವ ನೀತಿಗಳಿವೆ ಎಂಬ ತಿಳುವಳಿಕೆಯಿಂದ ಸಹ ಅವರ ಬದ್ಧತೆ ಬಂದಿದೆ. ಎಂದು ಕಾಂ. ತಪನ್ ಸೇನ್ ಹೇಳಿದರು.
ಸಿಐಟಿಯು ಕೈನೆಸಿಯನ್ ಅಭಿವೃದ್ಧಿ ಮಾದರಿಯ (Keynesian Development model) ಒಮ್ಮತದ ಅವಧಿಯ ನಂತರದ ಭಾರತದ ಅಭಿವೃದ್ಧಿಯ ಹಂತದಲ್ಲಿ ಹುಟ್ಟಿಕೊಂಡಿತು. ಈ ಹಂತದಲ್ಲಿ ಕಾರ್ಮಿಕ ವೆಚ್ಚವನ್ನು ಕನಿಷ್ಠಗೊಳಿಸುವತ್ತ ಮತ್ತು ಲಾಭವನ್ನು ಗರಿಷ್ಠಗೊಳಿಸುವತ್ತ ಗುರಿಯನ್ನು ಬಂಡವಾಳಶಾಹಿ ವರ್ಗ ಪ್ರತಿಪಾದಿಸುತ್ತಾ ತನ್ನ ಬಲದ ಕ್ರೋಢೀಕರಣಕ್ಕೆ ಪ್ರಯತ್ನಿಸುತ್ತಿತ್ತು.. ಸಿಐಟಿಯು ಮತ್ತು ಅದರ ಸ್ಥಾಪಕರಲ್ಲಿ ಒಬ್ಬರಾಗಿದ್ದ ಕಾಂ. ಸೂರಿ ಈ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದರು. ಹಿಂದಿನ ಹಂತದ ರಾಜಕೀಯ ಅಭಿವ್ಯಕ್ತಿಯು ಕಲ್ಯಾಣ ರಾಜ್ಯವಾಗಿತ್ತು. ಇದು ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದೊಂದಿಗೆ ಪ್ರಾರಂಭವಾಯಿತು ಮತ್ತು ಸ್ವಾತಂತ್ರ್ಯದ ನಂತರದ ದಶಕದ ಆರಂಭದಲ್ಲಿ ಮುಂದುವರೆಯಿತು. ಈ ಹಂತದಲ್ಲಿ ಹೆಚ್ಚಿನ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಲಾಯಿತು ಮತ್ತು ಸಮಾಜದಲ್ಲಿ ಕಾರ್ಮಿಕರ ಪಾತ್ರವನ್ನು ಗುರುತಿಸಲಾಯಿತು ಎಂದು ಕಾಂ. ಸೇನ್ ವಿವರಿಸಿದರು.
ಮೊದಲ ಹಂತದ ಅಂತ್ಯದ ವೇಳೆಗೆ, ರಾಜಕೀಯವನ್ನು ದೂರವಿಡುವ ಹೆಸರಿನಲ್ಲಿ ಅನೇಕ ಟ್ರೇಡ್ ಯೂನಿಯನ್‌ಗಳು ರಾಜಿ ಮಾತುಕತೆ ಮತ್ತು ಸಹಯೋಗದಲ್ಲಿ ಕಳೆದುಹೋಗಿದ್ದವು. ಕಾಂ. ಸೂರಿ ಮತ್ತು ಸಿಐಟಿಯು ಬಂಡವಾಳಶಾಹಿ ವರ್ಗ ಮತ್ತು ಪ್ರಭುತ್ವವನ್ನು ಎದುರಿಸುವ ರಾಜಿಯಾಗದ ಸಮಧೀರ ವರ್ಗ ಹೋರಾಟದೊಂದಿಗೆ 1960 ರ ದಶಕದ ಮಧ್ಯಭಾಗದಿಂದ ಪ್ರಾರಂಭವಾಗುವ ಎರಡನೇ ಹಂತಕ್ಕೆ ಪ್ರತಿಕ್ರಿಯಿಸಿದರು. ಕಾಂ. ಸೂರಿ ನೇತೃತ್ವದ ಬೆಂಗಳೂರು ಮೂಲದ ಸಾರ್ವಜನಿಕ ವಲಯದ ಮತ್ತು ಮೈಕೊ, ಐಟಿಸಿ ಯಂತಹ ಪ್ರಮುಖ ಖಾಸಗಿ ಕಾರ್ಖಾನೆಗಳ ಸಮರಧೀರ ಮುಷ್ಕರ, ಹೋರಾಟಗಳು ರಾಷ್ಟ್ರೀಯವಾಗಿ ಸಹ ಇಂತಹ ಹೋರಾಟಗಳಿಗೆ ಮಾದರಿಯಾದವು. ಕಾರ್ಮಿಕರ ವೇತನವನ್ನು ಉತ್ಪಾದಕತೆಗೆ ಜೋಡಿಸುವ ವಿರುದ್ಧದ ಹೋರಾಟವು ಒಂದು ನಿರ್ದಿಷ್ಟ ಉದಾಹರಣೆಯಾಗಿದೆ ಎಂದು ಕಾಂ. ಸೇನ್ ಮಾಹಿತಿ ನೀಡಿದರು.
ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಚಳವಳಿಯ ಪಾತ್ರವನ್ನು ವಿವರಿಸಿದ ಕಾಂ. ತಪನ್ ಸೇನ್, ‘ಸಮಾಜದಲ್ಲಿನ ಮೌಲ್ಯವು ಉತ್ಪಾದಿಸುವ (ಕಾರ್ಮಿಕರು ಮತ್ತು ರೈತರು) ವರ್ಗಗಳಿಂದ ಉತ್ಪತ್ತಿಯಾಗುತ್ತದೆ ಮತ್ತು ಉಳಿದವರು ಅದರ ಉಚಿತ ಪ್ರಯೋಜನವನ್ನು ಪಡೆಯುತ್ತಾರೆ’ ಎಂದು ಹೇಳಿದರು.
ಕಾಂ. ಸೂರಿ ರಾಜಿರಹಿತ ಹೋರಾಟಗಾರರಾಗಿದ್ದರು: ಸಿಎಂ
ಕಾಂ. ಸೂರಿ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅವರು ಅನುಭವಿ ಹಿರಿಯ ನಾಯಕರಾಗಿದ್ದರೂ, 1983 ರಲ್ಲಿ ಕರ್ನಾಟಕ ವಿಧಾನಸಭೆಗೆ ನಾವಿಬ್ಬರೂ ಒಟ್ಟಿಗೇ ಮೊದಲ ಬಾರಿಗೆ ಪ್ರವೇಶಿಸಿದ್ದೆವು. ಕಾಂ. ಸೂರಿ ಅವರು ಶಾಸಕಾಂಗದ ಒಳಗೆ ಮತ್ತು ಹೊರಗೆ ರಾಜಿರಹಿತ ಹೋರಾಟಗಾರರಾಗಿದ್ದರು. ಸೂರಿಯವರು ಕೇವಲ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತ್ರವಲ್ಲ, ಸಮಾಜದ ಎಲ್ಲಾ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದರು. ಸದನದಲ್ಲಿ ಅವರ ಭಾಷಣಗಳಲ್ಲಿ ಅದರ ಹಿಂದಿನ ಅಧ್ಯಯನ ಮತ್ತು ಸಿದ್ಧತೆಯನ್ನು ನೋಡಬಹುದು. ಅವರು ಯಾವುದೇ ವಿಷಯದ ಬಗ್ಗೆ ವಿವಿಧ ಸಮಯಗಳಲ್ಲಿ ವಿವಿಧ ಪಾತ್ರಗಳಲ್ಲಿದ್ದ ನನ್ನ ಕಚೇರಿಗೆ ಬಂದಾಗಲೆಲ್ಲಾ ಅವರು ಸಮಸ್ಯೆಯನ್ನು ಪರಿಹರಿಸದ ಹೊರತು ಅಲ್ಲಿಂದ ಹೊರಡುತ್ತಿರಲಿಲ್ಲ” ಎಂದು ಅವರು ನೆನಪಿಸಿಕೊಂಡರು. ಸಿದ್ದರಾಮಯ್ಯನವರು ಕಾಂ ಸೂರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದನ್ನು ಓದಿ : ಎಲ್ಲವೂ ಕೊಳೆತು ಹೋಗಿರುವುದು ಮೌನ ಇರುವೆಡೆ ಮಾತ್ರ
ಐತಿಹಾಸಿಕ ಹೋರಾಟಗಳಿಂದ ಸ್ಫೂರ್ತಿ ಪಡೆಯಬೇಕು : ಪ್ರೊ. ಜಾನಕಿ ನಾಯರ್
ವಿಚಾರ ಸಂಕಿರಣದ ಮುಖ್ಯ ಪ್ರಬಂಧ ಮಂಡಿಸಿ ಪ್ರೊ.ಜಾನಕಿ ನಾಯರ್ ಅವರು ಮಾತನಾಡಿದರು, 1930 ರ ದಶಕದಲ್ಲಿ ಕೆಜಿಎಫ್‌ನ ಚಿನ್ನದ ಗಣಿ ಕಾರ್ಮಿಕರ ಸ್ವಯಂಪ್ರೇರಿತ ಹೋರಾಟದಿಂದ, ನಂತರದಲ್ಲಿ ಬೆಂಗಳೂರು ಹತ್ತಿ ಗಿರಣಿಗಳ ಕಾರ್ಮಿಕರ ಹೋರಾಟಗಳು, ಐತಿಹಾಸಿಕ ಮೈಕೊ ಕಾರ್ಮಿಕರ ಮತ್ತು ಸಾರ್ವಜನಿಕ ವಲಯದ ಮುಷ್ಕರ, ಇಂದಿನ ಗಿಗ್ ಕೆಲಸಗಾರರರ ಪರಿಸ್ಥಿತಿಯವರೆಗೆ, ನಿರ್ದಿಷ್ಟ ಉದಾಹರಣೆಗಳೊಂದಿಗೆ ಕರ್ನಾಟಕದಲ್ಲಿ ನಡೆದ ಕಾರ್ಮಿಕರ ಚಳುವಳಿಯ ಹಾದಿಯನ್ನು ಗುರುತಿಸಿದರು. ಐತಿಹಾಸಿಕ ಕಾರ್ಮಿಕ ಹೋರಾಟಗಳಿಂದ ಸ್ಫೂರ್ತಿ ಪಡೆಯಬೇಕು ಮತ್ತು ವೈಫಲ್ಯಗಳಿಂದ ಕಲಿಯಬೇಕು ಮತ್ತು ಅವುಗಳ ಹಿಂದಿನ ದೌರ್ಬಲ್ಯಗಳನ್ನು ಗುರುತಿಸಬೇಕು ಎಂದು ಕಾರ್ಮಿಕ ಇತಿಹಾಸಕಾರರಾಗಿ ತಮ್ಮ ಅಭಿಮತವೆಂದು ಒತ್ತಿ ಹೇಳಿದರು. ಕಾರ್ಮಿಕರ ಹೋರಾಟದ ಯಶಸ್ಸಿಗೆ ವರ್ಗದ ಆಧಾರದ ಮೇಲೆ ಸಜ್ಜುಗೊಳಿಸುವುದು ಮುಖ್ಯವಾದರೂ, ಲಿಂಗ, ಜಾತಿ, ಭಾಷೆಯ ಇತರ ಸಾಮಾಜಿಕ ವಾಸ್ತವಗಳನ್ನು ಗುರುತಿಸದಿರುವುದು ಅನೇಕ ದೌರ್ಬಲ್ಯಗಳು ಮತ್ತು ತಪ್ಪುಗಳಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದರು.
ಈ ನಿಟ್ಟಿನಲ್ಲಿ ಕೆಜಿಎಫ್ ಗಣಿ ಕಾರ್ಮಿಕರ ಜಾತಿ ಸಮಸ್ಯೆಗಳು, ಬೆಂಗಳೂರಿನ ಮಿಲ್‌ಗಳಲ್ಲಿ ಜಾತಿ ಮತ್ತು ಲಿಂಗ ಸಮಸ್ಯೆಗಳು, ಸಾರ್ವಜನಿಕ ವಲಯದ ಮುಷ್ಕರದಲ್ಲಿ ಭಾಷಾ ಸಮಸ್ಯೆಗಳ ಕುರಿತು ಅವರು ಮಾತನಾಡಿದರು. ಬ್ರಿಟಿಷ್ ಇಂಡಿಯಾ ಮತ್ತು ಮೈಸೂರು ರಾಜಪ್ರಭುತ್ವದ ಕಾರ್ಮಿಕ ಕಾನೂನುಗಳ ಇತಿಹಾಸವನ್ನು ಸಹ ಗುರುತಿಸಿದರು. ಗಿಗ್ ಕೆಲಸಗಾರರಂತಹ ಹೆಚ್ಚಿನ ಕಾರ್ಮಿಕರಿಗೆ ‘ದಿನದ ಕೆಲಸದ ಅವಧಿ’ ಯನ್ನು ವ್ಯಾಖ್ಯಾನಿಸುವ ಸ್ಥಿತಿಯಲ್ಲಿಲ್ಲ ಎಂದು ವಿಷಾದಿಸಿದ ಅವರು, ದಶಕಗಳ ಹಿಂದೆ ಗೆದ್ದಿದ್ದ ‘ದಿನದ ಕೆಲಸದ ಅವಧಿ’ಯ ವಿಷಯದ ಬಗ್ಗೆ ಮತ್ತೆ ಹೋರಾಡಬೇಕಾದ ದುಃಖದ ಸ್ಥಿತಿಗೆ ಇಂದಿನ ದುಡಿಯುವ ವರ್ಗ ಬಂದಿದೆ ಎಂದರು.
ಕಾರ್ಮಿಕ ವರ್ಗದ ಚಳುವಳಿಯು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ: ವಿಜೆಕೆ ನಾಯರ್
ಸಿಐಟಿಯು ಕರ್ನಾಟಕ ಉಪಾಧ್ಯಕ್ಷರಾದ ಕಾಂ. ವಿಜೆಕೆ ನಾಯರ್ ವಿಚಾರ ಸಂಕಿರಣದ ಅಧ್ಯಕ್ಷೀಯ ಭಾಷಣ ಮಾಡಿ, ಕಾರ್ಮಿಕ ವರ್ಗದ ಚಳುವಳಿ ಮತ್ತು ಕರ್ನಾಟಕದ ಅಭಿವೃದ್ಧಿಯ ನಡುವಿನ ಸಂಬಂಧದ ಹಲವು ಆಯಾಮಗಳನ್ನು ಅನಾವರಣಗೊಳಿಸಿದರು. ಮೂಲಭೂತ ಮಟ್ಟದಲ್ಲಿ, ಬಲವಾದ ಕಾರ್ಮಿಕ ವರ್ಗದ ಚಳುವಳಿಯು ಕಾರ್ಮಿಕರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಇದು ಸರಕು ಮತ್ತು ಸೇವೆಗಳ ಮಾರುಕಟ್ಟೆಯನ್ನು ವಿಸ್ತರಿಸುತ್ತದೆ, ಮೌಲ್ಯವರ್ಧನೆ ಮತ್ತು ಬಂಡವಾಳ ರಚನೆಗೆ ಕಾರಣವಾಗುತ್ತದೆ ಮತ್ತು ಹೆಚ್ಚಿನ ಉತ್ಪಾದನೆಯಲ್ಲಿ ಹೂಡಿಕೆಗೆ ಕಾರಣವಾಗುತ್ತದೆ ಮತ್ತು ಹೀಗೆ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಬಂಡವಾಳಶಾಹಿ ಸಮಾಜದಲ್ಲಿ ಸಂಘಟಿತ ಶಕ್ತಿಯಾಗಿ ಕಾರ್ಮಿಕ ವರ್ಗದ ಚಳುವಳಿಯು ತನ್ನ ಸ್ವಂತ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಪ್ರಜಾಪ್ರಭುತ್ವ ಹಕ್ಕುಗಳನ್ನು ಸ್ಥಾಪಿಸಲು ಮಧ್ಯಪ್ರವೇಶಿಸುತ್ತದೆ. ಮತ್ತು ಅದನ್ನು ಇತರರರಿಗೂ ಕೊಡಮಾಡುತ್ತದೆ. ಒಟ್ಟಾರೆ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವ ನಾಗರಿಕ ಹಕ್ಕುಗಳನ್ನು ಸ್ಥಾಪಿಸಲು, ರಕ್ಷಿಸಲು ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬೆಂಗಳೂರಿನ ಗಿರಣಿ ಕಾರ್ಮಿಕರ ಪಾತ್ರ, “ಮೈಸೂರು ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರ” ಕ್ಕಾಗಿ ಹೋರಾಟದಲ್ಲಿ ಕೆಜಿಎಫ್ ಕಾರ್ಮಿಕರ ಅದ್ಭುತ ಪಾತ್ರವನ್ನು ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಸಾರ್ವಜನಿಕ ವಲಯದ ಕಾರ್ಖಾನೆಗಳೊಂದಿಗೆ ಬೆಂಗಳೂರಿನ ಅಭಿವೃದ್ಧಿಯನ್ನು ಉದಾಹರಣೆಯಾಗಿ ನೀಡಿದರು. ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ ನಂತರದ ಕಾರ್ಮಿಕರ ಚಳುವಳಿಯ ಉಬ್ಬರದ ಭಾಗವಾಗಿ ಸಾರ್ವಜನಿಕ ವಲಯದ ಮುಷ್ಕರ, ಮೈಕೊ ಕಾರ್ಮಿಕರ ಮುಷ್ಕರ ಹಾಗೂ ನರಗುಂದ, ನವಲಗುಂದದಲ್ಲಿ ದಂಗೆಯೊಂದಿಗೆ ದಮನಕಾರಿ ಗುಂಡೂರಾವ್ ಸರ್ಕಾರದ ವಿರುದ್ಧ ನಡೆದ ರೈತ ಚಳವಳಿಯನ್ನು ಬೆಂಗಳೂರಿಗೆ ಕೊಂಡೊಯ್ದ ಸುದೀರ್ಘ ರೈತ ಕಾರ್ಮಿಕರ ಜಾಥಾವನ್ನು ಅವರು ಬಣ್ಣಿಸಿದರು. ಇದು ಅಂತಿಮವಾಗಿ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಕಾರಣವಾಯಿತು. ಇದು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ವಿಸ್ತರಣೆಗೆ ಕಾರಣವಾಯಿತು. ಇದು ತಂತ್ರಜ್ಞಾನ ಮತ್ತು ಪರಿಣತ ಮಾನವಶಕ್ತಿಯ ಹಾಗೂ ಸಾರ್ವಜನಿಕ ವಲಯಗಳ ಎಲೆಕ್ಟ್ರಾನಿಕ್ಸ್ ಕಾರ್ಖಾನೆಗಳ ಭದ್ರ ಬುನಾದಿಯ ಜೊತೆಗೆ ಬೆಂಗಳೂರು ಐಟಿ ಉದ್ಯಮದ ಕೇಂದ್ರವಾಗಲು ಕಾರಣವಾಯಿತು. ಭಾರತದ ಐಟಿ ಉದ್ಯಮದ ಕೇಂದ್ರವಾಗಿ ಈ ಹೊಸ ಉದ್ಯಮವು ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿಯನ್ನು ಮುಂದಕ್ಕೆ ಒಯ್ದಿತು ಎನ್ನುತ್ತಾ ಕಾಂ. ವಿಜೆಕೆಯವರು ಕಾರ್ಮಿಕರ ಚಳುವಳಿ ಮತ್ತು ಕರ್ನಾಟಕದ ಅಭಿವೃದ್ದಿಗಳ ನಡುವಿನ ಸಂಭಂದವನ್ನು ವಿವರಿಸಿದರು.
ಸಿಐಟಿಯು ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕಾಂ. ಮೀನಾಕ್ಷಿಸುಂದರಂ ಸ್ವಾಗತಿಸಿದರು. ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಕಾಂ. ಯು.ಬಸವರಾಜ್ ಮಾತನಾಡಿದರು.
ನರಗುಂದ ರೈತ ಬಂಡಾಯ, ಮೈಕೋ, ಸಾರ್ವಜನಿಕ ವಲಯ, ಮೈಸೂರು ನಗರದಲ್ಲಿ ನಡೆದ ಹೋರಾಟಗಳು ಸೇರಿದಂತೆ ವಿವಿಧ ಪ್ರಮುಖ ಹೋರಾಟಗಳಲ್ಲಿ ಕಾಂ. ಸೂರಿಯವರೊಂದಿಗೆ ಕೆಲಸ ಮಾಡಿದ ಒಡನಾಡಿಗಳ ಸಂಸ್ಮರಣೆಯ ಅಧಿವೇಶನವೂ ನಡೆಯಿತು. ಕಾಂ. ಸೂರಿ ಕುರಿತು ಕಿರುಪುಸ್ತಕವನ್ನು ಬಿಡುಗಡೆ ಮಾಡಿ ಅದನ್ನು ವ್ಯಾಪಕವಾಗಿ ವಿತರಿಸಲಾಯಿತು. ಕಾಂ. ಸೂರಿಯವರ ಜೀವನ ಮತ್ತು ಹೋರಾಟದ ಚಿತ್ರಗಳಿರುವ 20 ನಿಮಿಷಗಳ ವೀಡಿಯೊ ಒಂದನ್ನು ಸಹ ಬಿಡುಗಡೆ ಮಾಡಲಾಯಿತು ಮತ್ತು ಅದನ್ನು ಯೂಟ್ಯೂಬ್‌ನಲ್ಲಿ ಕಾಣಬಹುದು. ಈ ಕಾರ್ಯಕ್ರಮದಲ್ಲಿ 1500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕಾಂ. ಸೂರಿ ಅವರ ಪುತ್ರಿ ರೇಖಾ ಉಪಸ್ಥಿತರಿದ್ದರು. ಅಂತರರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟುವಾದ ರೇಖಾ ಅವರ ಪುತ್ರ ಅಖಿಲ ಅವರನ್ನು ಸನ್ಮಾನಿಸಲಾಯಿತು.
“ಶ್ರಮ ಸಂಸ್ಕೃತಿ ನಾಟಕೋತ್ಸವ”
ಕಾಂ. ಸೂರಿ ಜನ್ಮಶತಮಾನೋತ್ಸವವನ್ನು ಕಾರ್ಮಿಕರ ನಾಟಕಗಳ ಉತ್ಸವ “ಶ್ರಮ ಸಂಸ್ಕೃತಿ ನಾಟಕೋತ್ಸವ” ದೊಂದಿಗೆ ಆಗಸ್ಟ್ 6 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಾರಂಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಆಗಸ್ಟ್ 6ರಂದು ಮೂರು ನಾಟಕಗಳನ್ನು ಪ್ರದರ್ಶಿಸಲಾಯಿತು. ಅದರಲ್ಲಿ ‘ಕಾಂ. ಸೂರಿ ಅವರ ಜೀವನ ಮತ್ತು ಹೋರಾಟಗಳ’ ನಾಟಕ ಗಮನಾರ್ಹವಾಗಿದೆ. ಮಂಡ್ಯದ ಕಾರ್ಮಿಕ ಮಹಿಳಾ ತಂಡದಿಂದ ಪ್ರದರ್ಶಿತವಾದ “ನ್ಯಾಯ ಕೇಳಿದ ನಿಂಗವ್ವ’, ರಾಷ್ಟ್ರಕವಿ ಕುವೆಂಪು ಅವರ “ಜಲಗಾರ” ಪ್ರದರ್ಶಿಸಲಾದ ಇನ್ನೆರಡು ನಾಟಕಗಳು. ಈ ಮೂರೂ ನಾಟಕಗಳಲ್ಲಿನ ಹಲವು ನಟರು ಮತ್ತು ಇತರ ಪಾತ್ರಧಾರಿಗಳು ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯವಾಗಿರುವವರು.
ಕಾಂ. ಸೂರಿಯವರ ಜನ್ಮಶತಮಾನೋತ್ಸವವನ್ನು ರಾಜ್ಯದಾದ್ಯಂತ ಮುಖ್ಯವಾಗಿ ಕಾರ್ಮಿಕ ವರ್ಗದ ಕೇಂದ್ರಗಳಲ್ಲಿ ವಿಚಾರ ಸಂಕಿರಣಗಳು, ಮೇಲೆ ಹೇಳಿದ ನಾಟಕಗಳ ಮರು ಪ್ರದರ್ಶನಗಳು ಮತ್ತು ಇತರ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಆಚರಿಸಲು ಯೋಜಿಸಲಾಗಿದೆ.
ಇದನ್ನು ನೋಡಿ : ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೂ ಮತ್ತು ಹೊರಗೂ ಹೋರಾಟಗಾರರಾಗಿದ್ದರು -ಸಿಎಂ ಸಿದ್ದರಾಮಯ್ಯ Janashakthi Media