-ನಾ ದಿವಾಕರ
ನವಭಾರತದಲ್ಲಿ ಮಹಿಳೆ ಎಷ್ಟು ಸುರಕ್ಷಿತಳು ? ಈ ಪ್ರಶ್ನೆ ಎದುರಾದಾಗಲೆಲ್ಲಾ ಆಳ್ವಿಕೆಯ ಕೇಂದ್ರಗಳು ಮತ್ತು ತಾತ್ವಿಕವಾಗಿ ಅವುಗಳಿಂದಲೇ ನಿರ್ದೇಶಿಸಲ್ಪಡುವ ಸಂವಹನ ಮಾಧ್ಯಮಗಳು ಜನರ ಮುಂದೆ ಕಠಿಣ ಕಾನೂನು, ಶಿಕ್ಷೆ ಮತ್ತು ಅಪರಾಧ ನಿಯಂತ್ರಣದ ಸೂತ್ರಗಳನ್ನು ಮುಂದಿಡುತ್ತವೆ. ಕೊಲ್ಕತ್ತಾದ ಆರ್ಜಿ ಕಾರ್ ಆಸ್ಪತ್ರೆಯ ಘಟನೆಯ ಬೆನ್ನಲ್ಲೇ ದೇಶಾದ್ಯಂತ ನಿತ್ಯಸುದ್ದಿಯಾಗುತ್ತಿರುವ ಮಹಿಳಾ ದೌರ್ಜನ್ಯಗಳು ನಮ್ಮ ನಾಗರಿಕತೆಗೇ ಕಪಾಳ ಮೋಕ್ಷ ಮಾಡಿದಂತಿದೆ. ಈ ನಡುವೆ ಕೇರಳದ ಮಲಯಾಳಿ ಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ವರ್ಷಗಳಿಂದ ಎದುರಿಸುತ್ತಿರುವ ಕಿರುಕುಳ-ದೌರ್ಜನ್ಯ-ತಾರತಮ್ಯಗಳನ್ನು ತೆರೆದಿಟ್ಟಿರುವ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಹೆಣ್ತನದ ಘನತೆಯ ಪ್ರಶ್ನೆಯನ್ನು ಮತ್ತೊಮ್ಮೆ ಕೇಂದ್ರದಲ್ಲಿ ತಂದು ನಿಲ್ಲಿಸಿದೆ. ಅಪರಾಧ-ಕಾನೂನು-ಶಿಕ್ಷೆ ಈ ಚೌಕಟ್ಟಿನಿಂದಾಚೆಗೆ ನಾಗರಿಕ ಸಮಾಜ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಜಾಗ್ರತೆ
ಹಿಂಸೆ ದೌರ್ಜನ್ಯ ಮತ್ತು ಸುರಕ್ಷತೆ
ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯರು ಹಲವು ಆಯಾಮಗಳಲ್ಲಿ ದೌರ್ಜನ್ಯ, ಕಿರುಕುಳ ಮತ್ತು ತಾರತಮ್ಯಗಳನ್ನು ಎದುರಿಸುತ್ತಲೇ ಇರುತ್ತಾರೆ. ವರದಕ್ಷಿಣೆ ಕಿರುಕುಳ, ಲೈಂಗಿಕ ಚಿತ್ರಹಿಂಸೆ, ಕೌಟುಂಬಿಕ ಹಿಂಸೆ , ಮಹಿಳೆಯರ ಮೇಲಿನ ಈ ದೈಹಿಕ ಹಿಂಸೆಗಳು ಸಮಾಜಕ್ಕೆ ನೇರವಾಗಿ ಗೋಚರಿಸುವುದರಿಂದ ಇದರ ಸುತ್ತ ಏರ್ಪಡುವ ಚರ್ಚೆಗಳು ಮಹಿಳೆಯರ ರಕ್ಷಣೆಯನ್ನೇ ಪ್ರಧಾನವಾಗಿ ಕೇಂದ್ರೀಕರಿಸುತ್ತವೆ. ಆದರೆ ಈ ಘಟನೆಗಳಿಂದ ಮಹಿಳೆಯರು ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಅನುಭವಿಸುವ ಆಂತರಿಕ ತಲ್ಲಣಗಳು, ಮಾನಸಿಕ ಯಾತನೆ ಮತ್ತು ಅದರ ಮನೋವೈಜ್ಞಾನಿಕ ಪರಿಣಾಮಗಳ ಸುತ್ತ ಚರ್ಚೆಗಳು ನಡೆಯುವುದು ವಿರಳ. ದೈಹಿಕ ಹಿಂಸೆ ಅಥವಾ ದೌರ್ಜನ್ಯಗಳಿಗೆ ತಕ್ಷಣವೇ ಪ್ರತಿಕ್ರಿಯಿಸುವ ಸಮಾಜವೂ ಈ ಹಿಂಸಾತ್ಮಕ ಪ್ರವೃತ್ತಿಯಿಂದ ಸಂತ್ರಸ್ತ ಮಹಿಳೆಯರ ಮನಸ್ಸಿನ ಮೇಲಾಗುವ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಜಾಗ್ರತೆ
ಮತ್ತೊಂದೆಡೆ ಸರ್ಕಾರಗಳಾಗಲೀ ಸಮಾಜವಾಗಲೀ ಮಹಿಳಾ ಸಂಕುಲಕ್ಕೆ ರಾಚನಿಕ ಸುರಕ್ಷತೆಯನ್ನು ಒದಗಿಸುವಲ್ಲಿ ವಿಫಲವಾಗಿರುವುದರಿಂದ ಬಹುಪಾಲು ಸನ್ನಿವೇಶಗಳಲ್ಲಿ ಮಹಿಳೆ ಸ್ವಯಂ ರಕ್ಷಣೆಯ ವಿಧಾನಗಳನ್ನು ಯೋಚಿಸಬೇಕಾಗುತ್ತದೆ. ತತ್ಪರಿಣಾಮವಾಗಿ ತನ್ನ ಸಾಮಾಜಿಕ ಚಟುವಟಿಕೆಗಳ ನಡುವೆಯೇ ಹೆಣ್ಣು ತನ್ನ ಸ್ವ-ರಕ್ಷಣೆಯ ಬಗ್ಗೆ ಸದಾ ಜಾಗ್ರತೆ ವಹಿಸಬೇಕಾಗುತ್ತದೆ. ತನ್ನ ಸುತ್ತಲಿನ ವಾತಾವರಣದಲ್ಲಿ ಎಲ್ಲಿಂದ ಅಪಾಯ ಎರಗಿಬರುತ್ತದೆ ಎಂಬ ಆತಂಕದ ನಡುವೆಯೇ ಸುತ್ತಲ ಸಮಾಜವನ್ನು ಗಮನಿಸುತ್ತಾ ನಡೆಯುವುದು ಹೆಣ್ಣುಮಕ್ಕಳಿಗೆ ಅನಿವಾರ್ಯವಾಗಿಬಿಡುತ್ತದೆ. ಜಾಗ್ರತೆ
ಇದನ್ನೂ ಓದಿ: ವಿವಿಧ ಉತ್ಪನ್ನಗಳ ಮಾರಾಟಕ್ಕೆ ಇ-ಮಾರ್ಕೆಟ್ `ಸಂಜೀವಿನಿ’ ಆರಂಭ!
ಹಾಗಾಗಿ ಎಳೆಯ ವಯಸ್ಸಿನಿಂದಲೇ ನಿರಂತರ ಜಾಗರೂಕತೆಯನ್ನು ರೂಢಿಸಿಕೊಳ್ಳುವಂತೆ ಹೆಣ್ಣು ಮಕ್ಕಳನ್ನು ಪ್ರಚೋದಿಸಲಾಗುತ್ತದೆ. ಸಂಪ್ರದಾಯವಾದಿ ಸಮಾಜದ ದೃಷ್ಟಿಯಲ್ಲಿ ಇದು ಅವಶ್ಯ ಎನಿಸಿಬಿಡುತ್ತದೆ. ಆದರೆ ಆಧುನಿಕತೆಯನ್ನು ಮೈಗೂಡಿಸಿಕೊಂಡ ಸುಶಿಕ್ಷಿತ ಸಮಾಜಕ್ಕೆ ಇದು ಶೋಷಣೆಯ ಒಂದು ಆಯಾಮವಾಗಿ ಕಾಣುತ್ತದೆ. ಜಾಗ್ರತೆ
ಡಿಜಿಟಲ್ ಯುಗದ ನವ ಭಾರತದಲ್ಲೂ ಸಹ ಮಹಿಳೆಯಲ್ಲಿ ಅಪೇಕ್ಷಿಸಲಾಗುವ ಈ ಜಾಗ್ರತೆ ಮತ್ತು ಮುನ್ನೆಚ್ಚರಿಕೆಯ ವರ್ತನೆಯನ್ನು ನಿತ್ಯಬದುಕಿನ ಒಂದು ಭಾಗ ಎಂದೇ ಪರಿಭಾವಿಸುವ ವಿಶಾಲ ಸಮಾಜದಲ್ಲಿ ದಾಳಿ/ಹಲ್ಲೆಗೊಳಗಾದ ಮಹಿಳೆ ತನ್ನ ಮೇಲೆ ನಡೆಯುವ ದೌರ್ಜನ್ಯವನ್ನಾಗಲೀ ಅಥವಾ ಅದರಿಂದ ಉಂಟಾಗುವ ಮಾನಸಿಕ ಬೇಗುದಿಯನ್ನಾಗಲೀ ಹೊರ ಸಮಾಜದ ಮುಂದೆ ವ್ಯಕ್ತಪಡಿಸಲು ಪರದಾಡಬೇಕಾಗುತ್ತದೆ. ಹೇಗೆ ಹೇಳುವುದು, ಯಾರ ಬಳಿ ಹೇಳಿಕೊಳ್ಳುವುದು, ಹೇಳಿಕೊಂಡರೆ ತನ್ನ ಭವಿಷ್ಯದ ಗತಿಯೇನು ಇಂತಹ ಪ್ರಶ್ನೆಗಳ ನಡುವೆಯೇ ಅಪಾರ ಸಂಖ್ಯೆಯ ಹೆಣ್ಣುಮಕ್ಕಳು ತಮ್ಮ ನೋವನ್ನು ಹುಗಿದಿಟ್ಟುಕೊಂಡು ಬದುಕುವುದನ್ನು ನೋಡುತ್ತಲೇ ಇದ್ದೇವೆ. ದೀರ್ಘಾವಧಿಯಲ್ಲಿ ಇದು ಮಹಿಳೆಯರ ಮನಸ್ಸಿನ ಮೇಲೆ ಎಂತಹ ಆಘಾತಗಳನ್ನು, ಅಡ್ಡಪರಿಣಾಮಗಳನ್ನು ಬೀರಬಹುದು ಎಂದು ಯೋಚಿಸುವ ವಿವೇಚನೆಯಾದರೂ ಸಮಾಜಕ್ಕೆ ಇರಬೇಕಲ್ಲವೇ ? ವರ್ತಮಾನದ ಭಾರತದಲ್ಲಿ ಈ ವಿವೇಚನೆ ಮಾಯವಾಗಿದೆ.
ಮನೋವೈಜ್ಞಾನಿಕ ಹೊರೆ
ಸಾಮಾನ್ಯ ಹೆಣ್ಣು ಮಕ್ಕಳ ಮೇಲೆ ಇರುವ ಈ ಸುಪ್ತ ಮನೋವೈಜ್ಞಾನಿಕ ಹೊರೆಯೇ (Psychological burden) ಅವರ ಸಾಮಾಜಿಕ ಒಡನಾಟವನ್ನೂ ನಿರ್ಧರಿಸುತ್ತದೆ. ಕೆಳಸ್ತರದ ಸಮಾಜದಲ್ಲಿ ಇದು ಸ್ಪಷ್ಟವಾಗಿ ಕಾಣುವಂತಹುದು. ನಿರಂತರವಾಗಿ ಕಾಡುವ ಆತಂಕಗಳೇ ಹೆಣ್ಣುಮಕ್ಕಳನ್ನು ಹೊಸ ಜಾಗಗಳಿಗೆ ಹೋಗುವುದರಿಂದ, ಅವಕಾಶಗಳನ್ನು ಬಳಸಿಕೊಳ್ಳುವುದರಿಂದ, ಅಪಾಯಗಳಿಗೆ ಒಡ್ಡಿಕೊಳ್ಳುವುದರಿಂದ ತಡೆಯುತ್ತವೆ. ಮತ್ತೊಂದೆಡೆ ಈ ಆತಂಕಗಳೇ ಆಕೆಯ ವೃತ್ತಿಜೀವನದ ಹಾದಿಗೂ, ವೈಯ್ಯುಕ್ತಿಕ ಸಂಬಂಧಗಳಿಗೂ ತೊಡಕಾಗಿ ಪರಿಣಮಿಸುತ್ತವೆ. ಉದಾಹರಣೆಗೆ ಅನೇಕ ಹೆಣ್ಣುಮಕ್ಕಳು ತಡರಾತ್ರಿಯಲ್ಲಿ ಸಂಚರಿಸಲು ಇಚ್ಚಿಸದೆ ನೌಕರಿಯನ್ನು ನಿರಾಕರಿಸುತ್ತಾರೆ. ಅಥವಾ ಸೂಕ್ತ ರಕ್ಷಣೆ ಇಲ್ಲದೆ ಹೊಸ ಸ್ಥಳಗಳಿಗೆ ಹೋಗಲು ಹಿಂಜರಿಯುತ್ತಾರೆ. ಪಾರ್ಕ್ನಲ್ಲಿ ವಾಯುವಿಹಾರಕ್ಕೆ ಹೋಗುವಾಗಲೂ ಈ ಆತಂಕಗಳು ಕಾಡುವುದನ್ನು ಸಾಮಾನ್ಯವಾಗಿ ಗಮನಿಸಬಹುದು. ಇದರಿಂದ ಹೆಣ್ಣುಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗುವುದನ್ನು ಮನಶ್ಶಾಸ್ತ್ರಜ್ಞರು ಗುರುತಿಸಿದ್ದಾರೆ.
ಸಾಂಪ್ರದಾಯಿಕ ಕುಟುಂಬಗಳಲ್ಲಿ ಈ ಆತಂಕಗಳನ್ನು ಹಿರಿಯ ತಲೆಮಾರಿನಿಂದಲೇ ಕಿರಿಯರಿಗೆ ವರ್ಗಾಯಿಸುವುದನ್ನೂ ಗುರುತಿಸಬಹುದು. ತಾಯಂದಿರೂ ಸಹ ಹೆಣ್ಣುಮಕ್ಕಳಿಗೆ ಸದಾ ಎಚ್ಚರದಿಂದಿರಲು ಹೇಳುತ್ತಲೇ ಹೊರಹೋಗಲು ಅನುಮತಿಸುತ್ತಾರೆ. ಒಂದು ರೀತಿಯಲ್ಲಿ ಈ ಧೋರಣೆಯೇ ಹೆಣ್ಣುಮಕ್ಕಳಲ್ಲಿ, ತಮ್ಮ ರಕ್ಷಣೆಗೆ ತಾವೇ ಜವಾಬ್ದಾರರು ಎಂಬ ಭಾವನೆಯನ್ನು ಬೆಳೆಸುತ್ತದೆ. ಹೊರ ಸಮಾಜಕ್ಕೂ ಮಹಿಳೆಯನ್ನು ರಕ್ಷಿಸುವಂತಹ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಇರುವುದನ್ನು ನಿರ್ಲಕ್ಷಿಸಲಾಗುತ್ತದೆ. ಹಾಗಾಗಿಯೇ ಸಂಪ್ರದಾಯವಾದಿಗಳು ಹೆಣ್ಣುಮಕ್ಕಳು ಧರಿಸುವ ಉಡುಪು, ನಡೆದುಕೊಳ್ಳುವ ರೀತಿ ಎಲ್ಲವನ್ನೂ ನಿಯಂತ್ರಿಸಲು ಪ್ರಯತ್ನಿಸುತ್ತಿರುತ್ತಾರೆ. “ ಅವಳು ಅಷ್ಟು ಹೊತ್ತಿನಲ್ಲಿ ಒಬ್ಬಳೇ ಅಥವಾ ಅವನ ಜೊತೆ ಅಲ್ಲಿಗೇಕೆ ಹೋಗಬೇಕಿತ್ತು ? ” ಎಂಬ ಪ್ರಶ್ನೆ ಪ್ರತಿಯೊಂದು ಘಟನೆಯ ಸಂದರ್ಭದಲ್ಲೂ ಕೇಳಿಬರುತ್ತದೆ.
ರಕ್ಷಣೆ ಮತ್ತು ನಿರ್ಬಂಧಗಳ ನಡುವೆ
ಕೌಟುಂಬಿಕ ನೆಲೆಯಲ್ಲಿ ಹಾಗೂ ಸಾಮುದಾಯಿಕವಾಗಿ ಹೆಣ್ಣುಮಕ್ಕಳ ಮೇಲೆ ಹೇರಲಾಗುವ ಈ ರಕ್ಷಣಾತ್ಮಕ ನಿರ್ಬಂಧಗಳೇ ಮಹಿಳೆಯರ ಚಲನೆಯನ್ನು, ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುತ್ತದೆ. ಇದನ್ನೂ ಹಿಂಸೆ ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿರಂತರ ಜಾಗರೂಕತೆಯೇ ಹೆಣ್ಣುಮಕ್ಕಳು ಹೇಗೆ ಬದುಕುತ್ತಾರೆ ಮತ್ತು ಹೇಗೆ ಬದುಕಲು ಇಚ್ಚಿಸುತ್ತಾರೆ ಎಂಬುದರ ನಡುವೆ ಅಸಂಗತತೆಯನ್ನು ಸೃಷ್ಟಿಸುತ್ತದೆ. ಮಹಿಳೆಯೊಬ್ಬಳು ಹೊರಬೇಕಾದ ಈ ಜಾಗರೂಕತೆಯ ಹೊರೆಯನ್ನು ಜಾತಿ, ಧರ್ಮ ಅಥವಾ ವರ್ಗದ ನೆಲೆಗಳು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ. ಸಾಮಾಜಿಕವಾಗಿ/ಆರ್ಥಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಮಹಿಳೆಯರು ಅತಿ ಹೆಚ್ಚು ಪೂರ್ವಗ್ರಹಗಳನ್ನು, ತಾರತಮ್ಯಗಳನ್ನೂ ಎದುರಿಸಬೇಕಾಗುತ್ತದೆ. ಏಕೆಂದರೆ ಈ ಮಹಿಳೆಯರು ಎದುರಿಸುವ ಅಪಾಯಗಳಿಗೆ ಕೇವಲ ಲಿಂಗತ್ವವೊಂದೇ ಅಲ್ಲದೆ ಸಾಮಾಜಿಕ ಸ್ಥಾನಮಾನಗಳೂ ಮುಖ್ಯ ಕಾರಣವಾಗುತ್ತದೆ.
ಜಾತಿ ಮತ್ತು ವರ್ಗದ ನೆಲೆಯಲ್ಲಿ ಹೆಚ್ಚು ಸೌಕರ್ಯಗಳನ್ನು ಹೊಂದಿರುವ ಮಹಿಳೆಯರು ಕೊಂಚ ಮಟ್ಟಿಗೆ ಹೆಚ್ಚಿನ ಸುರಕ್ಷತೆ ಇರುವ ವಾತಾವರಣದಲ್ಲಿ ಇರುತ್ತಾರೆ. ಖಾಸಗಿ ವಾಹನ ಸಂಚಾರ, ಸುರಕ್ಷಿತ ಗೃಹ ಸಮುಚ್ಛಯಗಳು (Gated communities ) ̧ ಸಹಜವಾಗಿಯೇ ರಕ್ಷಣಾತ್ಮಕವಾಗಿರುತ್ತವೆ. ಆದರೆ ಇದರಿಂದ ಹೊರಗೆ ಈ ಮಹಿಳೆಯರೂ ಕಿರುಕುಳ, ಹಿಂಸೆ, ತಾರತಮ್ಯಗಳಿಂದ ಮುಕ್ತರಾಗಿರುತ್ತಾರೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಅನನುಕೂಲಕರ ಗುಂಪುಗಳಿಗೆ (Disadvantaged groups) ಸೇರಿದ ಮಹಿಳೆಯರಿಗೆ ಈ ಅಪಾಯಗಳು ಸದಾ ಎದುರಾಗುತ್ತಲೇ ಇರುತ್ತವೆ. ತಮ್ಮ ರಕ್ಷಣೆಯ ಬಗ್ಗೆ ನಿಗಾವಹಿಸುವ ಸಾಂಸ್ಥಿಕ ಬೆಂಬಲ ಇಲ್ಲದಿರುವುದರಿಂದ ಈ ಮಹಿಳೆಯರು ಅನಿವಾರ್ಯವಾಗಿ ಅಪಾಯಕಾರಿ ವಾತಾವರಣಗಳಲ್ಲಿ ದುಡಿಯಬೇಕಾಗುತ್ತದೆ. ಇಂತಹ ಸ್ಥಳಗಳಲ್ಲಿ ಶೋಷಣೆ, ನಿಂದನೆ, ತಾರತಮ್ಯ ಮತ್ತು ಅವಹೇಳನಗಳು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಈ ದುರವಸ್ಥೆಗಳನ್ನು ಹೊರಗಿನ ಸಮಾಜ ಗಮನಿಸುವುದೇ ಇಲ್ಲ.
ಮಹಿಳೆಯರು ಆತಂಕ-ಕುತೂಹಲಗಳಿಗಿಂತಲೂ ಸುರಕ್ಷತೆಗೆ ಅಥವಾ ಹೊಸ ಹಾದಿಗಳಿಗಿಂತಲೂ ಮುಂಜಾಗ್ರತೆಗೆ ಹೆಚ್ಚಿನ ಗಮನ ನೀಡಿದರೆ ಅಂತಹವರಿಗೆ ಅವಕಾಶಗಳನ್ನೇ ನಿರಾಕರಿಸಲಾಗುತ್ತದೆ. ಇದರಿಂದ ಮಹಿಳೆ ಮಾನವ ಸಮಾಜದ ಸಹಜಾನುಭವಗಳಿಂದ ವಂಚಿತರಾಗುತ್ತಾರೆ. ಅವರ ಪಾಲಿಗೆ ಜಗತ್ತು ಅಚ್ಚರಿ-ಅನ್ವೇಷಣೆಯ ಜಾಗ ಎನಿಸದೆ ಅಪಾಯ ಮತ್ತು ಮುನ್ನೆಚ್ಚರಿಕೆಯ ಸ್ಥಳ ಎನಿಸಿಬಿಡುತ್ತದೆ. ಇದು ಮಹಿಳೆಯರ ಸ್ವಾನುಭವಗಳನ್ನು ಸೀಮಿತಗೊಳಿಸುವುದಷ್ಟೇ ಅಲ್ಲದೆ , ಇಂತಹ ಹೊರೆಗಳಿಂದ ಬಂಧಿತರಾಗದೆಯೇ ಮಹಿಳೆಯರು ಮುಕ್ತ ವಾತಾವರಣದಲ್ಲಿ ಮನುಕುಲಕ್ಕೆ ನೀಡಬಹುದಾದ ಅನ್ವೇಷಣಾತ್ಮಕ ಕೊಡುಗೆಗಳಿಂದ ಸಮಾಜವೂ ವಂಚಿತವಾಗುತ್ತದೆ. ಇಲ್ಲಿ ಮಹಿಳೆಯರು ಮೌನವಾಗಿ, ಯಾರಿಗೂ ಕಾಣದಂತೆ ಹೊರುವ ಮನೋವೈಜ್ಞಾನಿಕ ಹೊರೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.
ಒತ್ತಡ, ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ
ಇಂತಹ ಒಂದು ಸಾಮಾಜಿಕ ವಾತಾವರಣದಲ್ಲಿ ಮಹಿಳೆ ಎದುರಿಸುವ ಭಾವನಾತ್ಮಕ ಒತ್ತಡಗಳು, ಮನೋವೈಜ್ಞಾನಿಕ ಆಯಾಸ ಮತ್ತು ದಣಿವು, ಕಳೆದುಕೊಳ್ಳುವಂತಹ ಸ್ವ-ಸ್ವಾತಂತ್ರ್ಯ ಮತ್ತು ಹರ್ಷೋಲ್ಲಾಸಗಳು ಇವೆಲ್ಲವೂ ಆಕೆಯ ಮಟ್ಟಿಗೆ ದೈಹಿಕ ಹಿಂಸೆಯಷ್ಟೇ ಯಾತನೆಯನ್ನುಂಟುಮಾಡುತ್ತವೆ. ಈ ಹೊರೆಯನ್ನು ಗುರುತಿಸುವುದು ಮತ್ತು ಅವುಗಳನ್ನು ಹೋಗಲಾಡಿಸುವುದು ಸಮಾನತೆಯನ್ನು ಆಶಿಸುವ ಯಾವುದೇ ಸಮಾಜದ ಆದ್ಯತೆಯಾಗಬೇಕಾಗುತ್ತದೆ. ಅಂತಹ ಸಾಮಾಜಿಕ ವಾತಾವರಣದಲ್ಲಿ ಮಾತ್ರವೇ ಮಹಿಳೆ ಸ್ವತಂತ್ರಳಾಗಿ ಬದುಕುವುದೇ ಅಲ್ಲದೆ ನಿರಂತರ ಭೀತಿಯಿಂದ ಮುಕ್ತವಾಗಿ ಬದುಕಲು ಸಾಧ್ಯವಾಗುತ್ತದೆ. ಈ ಸವಾಲನ್ನು ಎದುರಿಸಬೇಕಾದರೆ ನಾವು ಸುರಕ್ಷತೆ ಮತ್ತು ಹಿಂಸೆಯನ್ನು ನಿರ್ವಚಿಸುವ ವಿಧಾನದಲ್ಲೇ ಮೂಲಭೂತ ಬದಲಾವಣೆ ಅಗತ್ಯವಾಗಿರುತ್ತದೆ. ಮಹಿಳೆಯರ ಮೇಲೆ ನಡೆಯುವ ಹಿಂಸೆಯನ್ನು ಸದಾ ಕಾಲವೂ ಕಣ್ಣಿಗೆ ಕಾಣುವಂತಹ ದೈಹಿಕ ಹಲ್ಲೆಗಳೊಂದಿಗೇ ಸಮೀಕರಿಸುವ ಒಂದು ಸಮಾಜದಲ್ಲಿ, ಅಷ್ಟೇ ಹಾನಿಕಾರಕವಾದ ಅಗೋಚರವಾದ ಹಿಂಸೆಯ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಶಾಲ ದೃಷ್ಟಿಕೋನವನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ತನ್ನ ಸ್ವಾತಂತ್ರ್ಯ ಮತ್ತು ಸುರಕ್ಷತೆಯ ನಡುವೆ ಆಯ್ಕೆ ಮಾಡಿಕೊಳ್ಳುವುದು ಮಹಿಳೆಯರ ಬಾಧ್ಯತೆ ಆಗಕೂಡದು. ಮಹಿಳೆಯ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಅವರ ಸುರಕ್ಷತೆಯ ದೃಷ್ಟಿಯಿಂದ ನಿರ್ಬಂಧಿಸುವಂತಹ ಸರ್ಕಾರಗಳ ಹಾಗೂ ವಿಶಾಲ ಸಮಾಜದ ನಡವಳಿಕೆಗಳು ಬದಲಾಗಬೇಕಿದೆ. ನಮ್ಮ ಮುಂದಿನ ಸವಾಲು ಮಹಿಳೆಯನ್ನು ಭಯ, ಭೀತಿ, ಆತಂಕ ಮತ್ತು ಮುಂಜಾಗ್ರತೆಗಳ ಹೊರೆಯಿಂದ ವಿಮೋಚನೆಗೊಳಿಸುವುದಷ್ಟೇ ಅಲ್ಲ. ಬದಲಾಗಿ ಮಾನವ ಸಮಾಜದ ಅರ್ಧದಷ್ಟಿರುವ ಮಹಿಳಾ ಸಂಕುಲದ ಶಕ್ತಿ-ಸಾಮರ್ಥ್ಯ-ಕ್ಷಮತೆಗೆ ಅನಿರ್ಬಂಧಿತ ವಿಶಾಲ ಅವಕಾಶಗಳನ್ನು ಕಲ್ಪಿಸುವುದು ಮುಖ್ಯ ಸವಾಲಾಗಿದೆ. ಮಹಿಳಾ ಸಂಕುಲದ ಮೇಲೆ ಹೇರಲಾಗುತ್ತಿರುವ ಶಾಶ್ವತ ಮುಂಜಾಗ್ರತೆಯ ಹೊರೆಯನ್ನು ಕೇವಲ ಸ್ವಾಭಾವಿಕ ಅಥವಾ ಸ್ವೀಕೃತ ವಾಸ್ತವ ಎಂದು ಭಾವಿಸದೆ ಇದೂ ಸಹ ಒಂದು ಹಿಂಸೆಯ ಸ್ವರೂಪ ಎಂದು ಪರಿಗಣಿಸುವುದರ ಮೂಲಕ ಈ ಸವಾಲನ್ನು ಸಮರ್ಪಕವಾಗಿ ಎದುರಿಸಬಹುದು.
ಮಹಿಳಾ ಸಂಕುಲವನ್ನು ನೋಡುವ ದೃಷ್ಟಿಕೋನದಲ್ಲಿನ ಈ ಪರಿವರ್ತನೆಯ ಮುಖಾಂತರವೇ ಸಮಾಜದಲ್ಲಿ ಎಲ್ಲರಂತೆ ಮಹಿಳೆಯರೂ ಸಹ ಯಾವುದೇ ಸುರಕ್ಷತಾ ನಿರ್ಬಂಧಗಳಿಲ್ಲದೆ, ಮುಕ್ತ ವಾತಾವರಣದಲ್ಲಿ, ಸಮಾನತೆಯಿಂದ ಬದುಕಿ ವಿಶಾಲ ಸಮಾಜಕ್ಕೆ ಸಮಾನ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಇಂದಿಗೂ ಪ್ರಾಚೀನ ಪಿತೃಪ್ರಧಾನ ಮೌಲ್ಯಗಳಿಂದಲೇ ನಿರ್ದೇಶಿಸಲ್ಪಡುವ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಈ ಪರಿವರ್ತನೆಗಾಗಿ ನಾಗರಿಕ ಸಮಾಜದ ಸಂಸ್ಥೆ/ಸಂಘಟನೆಗಳು, ಸರ್ಕಾರಗಳು ಶ್ರಮಿಸಬೇಕಿದೆ. ದಿನದಿಂದ ದಿನಕ್ಕೆ ಪ್ರಾಚೀನ ಜೀವನ ಮೌಲ್ಯಗಳಿಗೆ ಮರಳುತ್ತಿರುವ ನವ ಭಾರತದ ಕಲಿತ ವರ್ಗಗಳು, ಮುಂದುವರೆದ ಸಮಾಜಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ.
ಇದನ್ನೂ ನೋಡಿ: ರೈತರ ಭೂಮಿ ಜಿಂದಾಲ್ಗೆ! ರೈತರ ಬೆನ್ನಿಗೆ ಚೂರಿ ಹಾಕಿದ ರಾಜ್ಯ ಸರ್ಕಾರ Janashakthi Media