ಹಿರಿಯ ವಕೀಲ, ಸಂವಿಧಾನ ತಜ್ಞ ಎ.ಜಿ. ನೂರಾನಿ ನಿಧನ

ಮುಂಬೈ : ದೇಶದ ಹಿರಿಯ ಖ್ಯಾತ ವಕೀಲ, ಸಂವಿಧಾನ ತಜ್ಞ ಅಬ್ದುಲ್ ಗಫೂರ್ ಮಜೀದ್ ನೂರಾನಿ ಗುರುವಾರ ಮುಂಬೈನಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮುಂಬೈನಲ್ಲಿ 16, 1930 ರಂದು ಜನಿಸಿದ ನೂರಾನಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿದ್ದರು.

ಕಾಶ್ಮೀರದ ಶೇಖ್ ಅಬ್ದುಲ್ಲಾ ಅವರ ಧೀರ್ಷಾವಧಿಯ ಬಂಧನ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ತಮಿಳುನಾಡಿನ ಜೆ. ಜಯಲಲಿತಾ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ವಾದಿಸಿದ್ದರು.

ಲೇಖಕರಾಗಿಯೂ ಗುರುತಿಸಿಕೊಂಡಿದ್ದ ನೂರಾನಿ ಅವರು ‘ದಿ ಕಾಶ್ಮೀರ್ ಕ್ವೆಶ್ಚನ್’, ‘ಮಿನಿಸ್ಟರ್ ಮಿಸ್‌ ಕಂಡಕ್ಟ್’, ‘ಬ್ರೆಝ್ನೇವ್ಸ್‌ ಪ್ಲ್ಯಾನ್ ಫಾರ್ ಏಷ್ಯನ್ ಸೆಕ್ಯೂರಿಟಿ’, ‘ದಿ ಪ್ರೆಸಿಡೆನ್ಶಿಯಲ್ ಸಿಸ್ಟಮ್’, ‘ದಿ ಟ್ರಯಲ್ ಆಫ್ ಭಗತ್ ಸಿಂಗ್’, ‘ಕಾನ್‌ಸ್ಟಿಟ್ಯೂಶನಲ್ ಕ್ವೆಶ್ಚನ್ಸ್ ಇನ್ ಇಂಡಿಯಾ’, ‘ದಿ ಆರ್‌ಎಸ್‌ಎಸ್‌ ಅಂಡ್ ಬಿಜೆಪಿ: ಎ ಡಿವಿಶನ್ ಆಫ್ ಲೇಬರ್’ ಮತ್ತು ‘ದಿ ಆರ್‌ಎಸ್‌ಎಸ್‌: ಎ ಮೆನೇಸ್ ಟು ಇಂಡಿಯಾ’, ‘ದಿ ಕಾಶ್ಮೀರ್‌ ಡಿಸ್ಪ್ಯೂಟ್‌’ (1947-2012), ‘ಆರ್ಟಿಕಲ್‌ 370: ಎ ಕಾನ್‌ಸ್ಟಿಟ್ಯೂಶನಲ್ ಹಿಸ್ಟರಿ ಆಫ್‌ ಜಮ್ಮು ಅಂಡ್‌ ಕಾಶ್ಮೀರ್’, ‘ಸಾವರ್ಕರ್‌ ಅಂಡ್‌ ಹಿಂದುತ್ವ: ದಿ ಗಾಡ್ಸ್‌ ಕನೆಕ್ಷನ್‌’ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.

ಬದ್ರುದ್ದೀನ್ ತೈಯ್ಯಬ್ಜಿ ಮತ್ತು ಡಾ. ಝಾಕಿರ್ ಹುಸೇನ್ ಅವರ ಜೀವನಚರಿತ್ರೆಯನ್ನೂ ನೂರಾನಿ ರಚಿಸಿದ್ದಾರೆ. ಇವರ ಕೃತಿಗಳು ಸ್ವತಂತ್ರ ಭಾರತದಲ್ಲಿ ಪ್ರಕಟಗೊಂಡ ಮಹತ್ವದ ಕೃತಿಗಳ ಸಾಲಿನಲ್ಲಿ ಸೇರಿವೆ. ಅಲ್ಲದೆ, ರಾಜಕೀಯ ಮತ್ತು ಕಾನೂನು ಕುರಿತು ಪರಿಣಾಮಕಾರಿಯಾಗಿ ವಿಚಾರಗಳನ್ನು ಮಂಡಿಸುತ್ತಿದ್ದ ನೂರಾನಿ ಎಲ್ಲ ತಲೆಮಾರಿಗೂ ಮಾದರಿ ಚಿಂತಕರು ಎನಿಸಿಕೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *