ಕಾನ್ಪುರ :ರೈಲು ಹಳಿ ಮೇಲಿದ್ದ ವಸ್ತುವೊಂದಕ್ಕೆ ಡಿಕ್ಕಿ ಹೊಡೆದ ಸಬರ್ಮತಿ ಎಕ್ಸ್ ಪ್ರೆಸ್ ರೈಲಿನ 22 ಬೋಗಿಗಳು ಹಳಿ ತಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.
ವಾರಣಾಸಿಯಿಂದ ಸಬರ್ಮತಿಗೆ ಹೊರಟ್ಟಿದ್ದ ರೈಲು ಶನಿವಾರ ಬೆಳಿಗ್ಗೆ ಉತ್ತರ ಪ್ರದೇಶದ ಕಾನ್ಪುರ ಬಳಿ ಹಳಿ ತಪ್ಪಿದೆ. ಇದರಿಂದ ಪ್ರಯಾಣಿರಿಗೆ ಯಾವುದೇ ಹಾನಿ ಆಗಿಲ್ಲವಾದರೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶನಿವಾರ ಮುಂಜಾನೆ 2.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಘಟನೆ ವೇಳೆ ಪ್ರಯಾಣಿಕರು ನಿದ್ದೆಯಲ್ಲಿದ್ದರು. ಹಳಿ ತಪ್ಪಿದ ರೈಲಿನಿಂದಾಗಿ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಾನ್ಪುರ ರೈಲು ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ದೊಡ್ಡ ಶಬ್ದ ಕೇಳಿ ಬಂದಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಶೀಲನೆ ನಡೆಸಿದಾಗ ರೈಲು ಇಂಜಿನ್ ಹಳಿಯ ಮೇಲೆ ಇದ್ದ ವಸ್ತುವೊಂದಕ್ಕೆ ಡಿಕ್ಕಿ ಹೊಡೆದ ಕಾರಣ ಅವಘಢ ಸಂಭವಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಯುವಜನರಿಗೆ ಉದ್ಯೋಗಾವಕಾಶ ಹೆಚ್ಚುತ್ತಿವೆ ಎಂದು ಪ್ರಧಾನಿಯವರು ಹೇಳುತ್ತಿದ್ದರೆ ಅಂಕಿಅಂಶಗಳು ಬೇರೆ ಕತೆಯನ್ನೇ ಹೇಳುತ್ತಿವೆ !
ಈಗಾಗಲೇ ಪ್ರಯಾಣಿಕರ ಸಹಾಯಕ್ಕಾಗಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಘಟನೆಯ ಬಗ್ಗೆ ಪ್ರಯಾಣಿಕರೊಬ್ಬರು ಪಿಟಿಐಗೆ ಹೇಳಿರುವ ಪ್ರಕಾರ, ರೈಲು ಕಾನ್ಪುರ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ, ನಮಗೆ ದೊಡ್ಡ ಶಬ್ದ ಕೇಳಿಸಿತು. ಕೋಚ್ ಅಲುಗಾಡಲು ಪ್ರಾರಂಭಿಸಿತು. ನಾನು ತುಂಬಾ ಭಯಪಟ್ಟೆ ಆದರೆ ರೈಲು ನಿಂತಿತು ಎಂದು ಹೇಳಿದ್ದಾರೆ.
ಪ್ರಯಾಣಿಕರಿಗೆ ಪರ್ಯಾಯವಾಗಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಅಲ್ಲಿಂದ ಸಾಗಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಸಬರಮತಿ ಎಕ್ಸ್ಪ್ರೆಸ್ನ ರೈಲಿನ ಮೇಲೆ ಬಂಡೆ ಕಲ್ಲುಗಳು ಬಿದ್ದ ಕಾರಣ ಇಂಜಿನ್ಗೆ ಹಾನಿಯಾಗಿದ್ದು, ಕೆಲವೊಂದು ಡ್ಯಾಮೆಜ್ಗಳು ಆಗಿವೆ. ಈಗಾಗಲೇ ಪ್ರಯಾಣಿಕರ ರಕ್ಷಣೆ ಹಾಗೂ ಅವರಿಗೆ ಬೇಕಾದ ಎಲ್ಲ ರೀತಿ ಸಹಾಯಗಳನ್ನು ಮಾಡಲಾಗಿದೆ. ಐಬಿ ಮತ್ತು ಯುಪಿ ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಎಕ್ಸ್ ಮೂಲಕ ಟ್ವೀಟ್ ಮಾಡಿದ್ದಾರೆ.