ಹತ್ರಾಸ್ ನಲ್ಲಿ ಕಾಲ್ತುಳಿತದಿಂದ 121 ಜನರ ಬಲಿ: ಮೂಢನಂಬಿಕೆಗೆ ಕೊನೆಯೇ ಇಲ್ಲವೇ?

– ಸಿ.ಸಿದ್ದಯ್ಯ

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸತ್ಸಂಗ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 121 ಅಮಾಯಕರ ಜೀವಗಳು ಬಹಳ ಸುಲಭವಾಗಿ ಬಲಿಯಾದವು. ಏನಿದು ವಿಕೃತಿ! ಮೂಢನಂಬಿಕೆಗೆ ಕೊನೆಯೇ ಇಲ್ಲವೇ? ಪಾದದ ದೂಳಿನಿಂದ ಭಕ್ತರ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ವ್ಯಾಪಕ ಪ್ರಚಾರ ಮಾಡಿದ ಸ್ವಯಂ ಘೋಷಿತ ದೇವದೂತ ಬೋಲೆ ಬಾಬಾ ಈ ಘೋರಘಟನೆಯ ಕೇಂದ್ರಬಿಂದು. ಲಕ್ಷಾಂತರ ಜನರು ಸೇರುವ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಸ್ಥಳೀಯ ಆಡಳಿತದ ನಿಷ್ಕ್ರಿಯತೆ, ಬಾಬಾ ನೊಡನೆ ಇರುವ ರಾಜಕಾರಣಿಗಳ ನಂಟು, ಅಜ್ಞಾನದ ಕುರುಡು ನಂಬಿಕೆಗಳನ್ನು ಹೋಗಲಾಡಿಸಲು ಆಳುವವರು ಯಾವುದೇ ಪ್ರಯತ್ನ ಮಾಡದಿರುವುದು, ಸ್ವಾರ್ಥಕ್ಕಾಗಿ ಅವುಗಳನ್ನು ದಟ್ಟವಾಗಿ ಪೋಷಿಸಲು ಪ್ರಯತ್ನಿಸುತ್ತಿರುವುದು… ಇವೆಲ್ಲವೂ ಅಮಾಯಕ ಜನರ ಜೀವಗಳು ಬಲಿಯಾಗಲು ಕಾರಣ. ಕಾಲ್ತುಳಿತ 

ಏನಿದು ವಿಕೃತಿ! ಮೂಢನಂಬಿಕೆಗೆ ಕೊನೆಯಿಲ್ಲವೇ? ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸತ್ಸಂಗ ಸಭೆಯಲ್ಲಿ ಕಾಲ್ತುಳಿತದಿಂದ 121 ಅಮಾಯಕ ಜೀವಗಳು ಬಹಳ ಸುಲಭವಾಗಿ ಬಲಿಯಾದವು. ಆಡಳಿತಗಾರರು ಎಂದಿನಂತೆ ಭೀಕರ ದುರಂತಕ್ಕೆ ಸಂತಾಪ ಸೂಚಿಸುವುದು, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವುದು, ಸಂಬಂಧಿಕರಿಗೆ ಸಾಂತ್ವನ ಹೇಳುವುದನ್ನು ಮಾಡುತ್ತಿದ್ದಾರೆ. ಒಂದಷ್ಟು ಹಣದ ರೂಪದ ಪರಿಹಾರವನ್ನೂ ಘೋಷಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ. ಕೆಲವರನ್ನು ಬಂಧಿಸಲಾಗಿದೆ. ಆದರೆ, ಜನರು ಮೌಢ್ಯತೆಗೆ ಒಳಗಾಗದಂತೆ ಪ್ರಭುತ್ವ ಯಾವ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬ ಪ್ರಶ್ನೆಗೆ ಉತ್ತರ ‘ಇಲ್ಲ’ ಎಂಬುದಾಗಿದೆ. ಕಾಲ್ತುಳಿತ 

ಈ ದುರ್ಘಟನೆಗೆ ಮೊದಲನೆಯ ಕಾರಣ ಈ ಭೋಲೆ ಬಾಬಾ ಕಡೆಯವರು ಮಾಡಿದ ಸುಳ್ಳು ಪ್ರಚಾರ ಮತ್ತು ಈ ಪ್ರಚಾರವನ್ನು ಮುಗ್ಧ ಭಕ್ತರು ನಿಜವೆಂದೇ ನಂಬಿದ್ದು. ಪಾದದ ದೂಳಿನಿಂದ ಭಕ್ತರ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ವ್ಯಾಪಕ ಪ್ರಚಾರ ಮಾಡಿದ ಸ್ವಯಂ ಘೋಷಿತ ದೇವದೂತ ನಾರಾಯಣ ಸಾಕಾರ್ ಹರಿ ಅಲಿಯಾಸ್ ಬೋಲೆ ಬಾಬಾ ಈ ಘೋರಘಟನೆಯ ಕೇಂದ್ರಬಿಂದು. ಅವರ ನಿಜವಾದ ಹೆಸರು ಸೂರಜ್ ಪಾಲ್ ಸಿಂಗ್. ಆಧ್ಯಾತ್ಮಿಕ ಗುರುವಾಗಿ ಅವತರಿಸುವ ಮೊದಲು ಉತ್ತರಪ್ರದೇಶದ ಪೊಲೀಸರ ಸ್ಥಳೀಯ ಗುಪ್ತಚರ ವಿಭಾಗದಲ್ಲಿ ಸಾಮಾನ್ಯ ಕಾನ್‌ಸ್ಟೆಬಲ್ ಆಗಿದ್ದರು. ಆ ಸಮಯದಲ್ಲಿ ಅವರ ಮೇಲೆ ಅನೇಕ ದುಷ್ಕೃತ್ಯದ ಪ್ರಕರಣಗಳ ಆರೋಪವಿದೆ. ಲೈಂಗಿಕ ದೌರ್ಜನ್ಯದ ಅಪರಾಧ ಎಸಗಿದವರು. ಈ ಕಾರಣದಿಂದ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಯಿತು, ಆದರೆ ಜಾಮೀನಿನ ಮೇಲೆ ಬಿಡುಗಡೆಗೊಂಡ ಅವರು 1990ರಲ್ಲಿ ಸ್ವಯಂಪ್ರೇರಿತ ನಿವೃತ್ತಿಯನ್ನು ಆರಿಸಿಕೊಂಡರು. ನಂತರ ತನ್ನನ್ನು ತಾನು ‘ದೇವಮಾನವ’ ಎಂದು ಹೇಳಿಕೊಂಡರು. ಅವರು ಮಾರ್ಕೆಟಿಂಗ್ ಮಾದರಿಯಲ್ಲಿ ಕೆಲಸ ಮಾಡಿ ತನ್ನ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಅವರ ಛಾಯಾಚಿತ್ರಗಳು ರೋಗನಿರೋಧಕ ಗುಣಗಳನ್ನು ಹೊಂದಿವೆ ಎಂಬ ಸಂದೇಶವನ್ನು ಬಾಬಾ ಅವರ ಬೆಂಬಲಿಗರು ವ್ಯಾಪಕವಾಗಿ ಹರಡಿದರು.
ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಇತರ ಉತ್ತರದ ರಾಜ್ಯಗಳಲ್ಲಿ ಈ ಬಾಬಾ ಅದ್ಬುತವಾದ ನೆಟ್‌ವರ್ಕ್ ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತದೆ. ಲಕ್ಷಾಂತರ ಭಕ್ತರ ದಂಡು ಹರಿದು ಬರಲು ಈ ಜಾಲವೇ ಕಾರಣ. ಹಿಂದೊಮ್ಮೆ, ಸತ್ತ ಮಕ್ಕಳನ್ನು ಬದುಕಿಸುತ್ತೇನೆ ಎಂದೂ ಕೂಡಾ ಈ ಬಾಬಾ ಹೇಳಿದ್ದಾನೆ.  ಕಾಲ್ತುಳಿತ 

ಎಫ್‌ಐಆರ್‌ನಲ್ಲಿ ಬಾಬಾ ಹೆಸರಿಲ್ಲವೇಕೆ?

ನಿಜವಾಗಿಯೂ ಆ ಬಾಬಾ ದೇವದೂತನೇ ಹಾಗಿದ್ದರೆ, ಘಟನೆಯ ನಂತರ ಓಡಿಹೋಗಿ ತಲೆಮರೆಸಿಕೊಂಡಿದ್ದೇಕೆ? ಈ ಘಟನೆಯ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘರ್ಜಿಸುತ್ತಿದ್ದಾರೆ. ಹಾಗಾದರೆ ಎಫ್‌ಐಆರ್‌ನಲ್ಲಿ ಬಾಬಾ ಹೆಸರನ್ನು ಏಕೆ ನಮೂದಿಸಿಲ್ಲ? ಇದರಲ್ಲಿ ಏನಾದರೂ ಕಪಟ ನಾಟಕವಿದೆಯೇ? ಎಂಬ ಅನುಮಾನಗಳು ಸಹಜವಾಗಿ ಬರುತ್ತಿವೆ.
ಸ್ಥಳೀಯ ಆಡಳಿತದ ಗಮನಕ್ಕೂ ಬರಲಿಲ್ಲವೆ !!

ಇದು ಜಿಲ್ಲಾ ಅಧಿಕಾರಿಗಳಿಂದ ಅನುಮತಿ ಕೋರಿದ ನಿರುಪದ್ರವ ಅರ್ಜಿಯೊಂದಿಗೆ ಪ್ರಾರಂಭವಾಯಿತು. ಸುಮಾರು 80,000 ಭಕ್ತರು ಸತ್ಸಂಗ ಸಭೆಗೆ ಹಾಜರಾಗುವ ನಿರೀಕ್ಷೆಯಿತ್ತು. ಅಧಿಕಾರಿಗಳು ಇದನ್ನು ವಾಡಿಕೆಯ ಕಾರ್ಯವಿಧಾನವಾಗಿ ಅನುಮೋದಿಸಿದರು. ಈ ಸತ್ಸಂಗ ಸಭೆಗೆ 80 ಸಾವಿರ ಮಂದಿಗೆ ಅವಕಾಶ ನೀಡಿದರೆ, ಎರಡೂವರೆ ಲಕ್ಷ ಜನ ಹೇಗೆ ಬಂದರು? ಸರಿಯಾದ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಿಲ್ಲದ ಆ ವ್ಯವಸ್ಥೆ ಎಂಥದು? ಈ ಘಟನೆ ಅಲ್ಲಿನ ಆಡಳಿತದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಅಂತಹ ಸಭೆಗಳಲ್ಲಿ ಜನಸಂದಣಿಯು ನಿರೀಕ್ಷಿಸಿದ ಸಂಖ್ಯೆಗಳನ್ನು ಮೀರಿ ಹೇಗೆ ವೃದ್ಧಿಸಿಕೊಳ್ಳುತ್ತದೆ ಎಂಬುದನ್ನು ಆಡಳಿತವು ಮೊದಲೇ ಮನಗಾಣಬೇಕಿತ್ತು. ಭೋಲೆ ಬಾಬಾ ಅವರ ಅನುಮೋದಿತ ಭಕ್ತರ ಸಂಖ್ಯೆಯ ಮೂರು ಪಟ್ಟು ಹೆಚ್ಚು ಸೇರಿದ್ದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಎಂದು ಸ್ಥಳೀಯ ಆಡಳಿತವೂ ನಿರೀಕ್ಷಿಸಿರಲಿಲ್ಲ ಅಥವಾ ಜನರು ಸೇರುವಾಗಲೂ ಆಡಳಿತದ ಗಮನಕ್ಕೂ ಬರಲಿಲ್ಲ ಎಂದರೆ ನಂಬಲಾಗದು. ಕಾಲ್ತುಳಿತ 

ಇದನ್ನು ಓದಿ : ಪಾಲಿ ಜಲಪಾತದಲ್ಲಿ ಸಿಲುಕಿದ್ದ ಕರ್ನಾಟಕದ 50 ಪ್ರವಾಸಿಗರ ರಕ್ಷಣೆ

2,50,000 ಜನಸಮೂಹವು ಒಮ್ಮೇಗೆ ಮೇಲಿನಿಂದ ಇಳಿಯುವುದಿಲ್ಲ. ಇವರು ರಸ್ತೆಗಳ ಮೂಲಕವೇ ಸತ್ಸಂಗ ಸಭೆಗೆ ಬಂದಿದ್ದರು. ದೂರದ ಊರುಗಳಿಂದ, ಹೊರ ರಾಜ್ಯಗಳಿಂದ ಜನರು ತಂಡೋಪ ತಂಡವಾಗಿ ಬಂದಿರುತ್ತಾರೆ. ಇಷ್ಟು ದೊಡ್ಡ ಸಂಖ್ಯೆಯ ಜನರು ಒಂದಡೆ ಸೇರುವ ಸಂದರ್ಭದಲ್ಲಿಯೂ ಸುಮಾರು ಏಳ ರಿಂದ ಎಂಟು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚು ಸ್ಥಳವು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ. ಭಕ್ತರ ಒಳಹರಿವಿನಿಂದ ಉಂಟಾಗುವ ಟ್ರಾಫಿಕ್ ಜಾಮ್ ಗಳ ಸುದ್ದಿಯನ್ನು ನಗರ ಮತ್ತು ಜಿಲ್ಲಾ ನಿಯಂತ್ರಣ ಕೊಠಡಿಗೆ ಪ್ರಸಾರ ಮಾಡುವ ಸಾಧ್ಯತೆಯಿದೆ. ಇಂತಹ ಸಂದರ್ಭಗಳಲ್ಲಿ ತುರ್ತು ಯೋಜನೆ ಕಡ್ಡಾಯವಾಗಿತ್ತು, ಆದರೆ ಸ್ಥಳೀಯ ಆಡಳಿತ ಯಾವುದನ್ನೂ ಮಾಡಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂವಿಧಾನದ 51-ಎ ವಿಧಿಯಲ್ಲಿ….

ಮನುಷ್ಯನು ಶಾಶ್ವತ ಅನ್ವೇಷಕ, ಸತ್ಯದ ಅನ್ವೇಷಕ. ಪುರೋಹಿತರು ಮತ್ತು ರಾಜರಿಂದ ಅನೇಕ ವಿಜ್ಞಾನಿಗಳು ಹುತಾತ್ಮರಾಗಿದ್ದರೂ, ವಿಜ್ಞಾನವು ಗೆದ್ದಿದೆ. ಆದರೆ, ವೈಜ್ಞಾನಿಕ ವಿಚಾರಗಳನ್ನು ಜನಸಾಮಾನ್ಯರಿಂದ ದೂರವಿಡುವ ಷಡ್ಯಂತ್ರವು ಕಾಲಕಾಲಕ್ಕೆ ಹೊಸ ರೂಪಗಳಲ್ಲಿ ಹೊರಹೊಮ್ಮುತ್ತಲೇ ಇದೆ. ಭಾರತದ ಸಂವಿಧಾನದ 51-ಎ ವಿಧಿಯಲ್ಲಿ ‘ವೈಜ್ಞಾನಿಕ ದೃಷ್ಟಿಕೋನ ಮತ್ತು ವೈಜ್ಞಾನಿಕ ವಿಷಯಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಯಾವಾಗಲೂ ಜನರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಂಡರೆ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದು ಸಲಹೆ ನೀಡಿದೆ. ಆದರೆ, ದೇಶದಲ್ಲಿ ಬೇರೊಂದು ಸಿದ್ಧಾಂತ ಬೇರೂರಿದೆ. ಜಗತ್ತು ತಾಂತ್ರಿಕವಾಗಿ ಮುನ್ನಡೆಯುತ್ತಿದ್ದರೂ, ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗಳಾಗಿದ್ದರೂ, ಸತ್ತವರು ತಮ್ಮ ಸಮಾಧಿಯಿಂದ ಎಚ್ಚೆತ್ತುಕೊಂಡು ಸನಾತನ ಧರ್ಮ ಮತ್ತು ಅಂಧ ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಕಾಯಕಲ್ಪ ಚಿಕಿತ್ಸೆಯಿಂದ ಹಳತಾದ ವೈದಿಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಡುತ್ತಿದ್ದಾರೆ. ಚಂದ್ರನಲ್ಲಿಗೆ ಹೋಗಿ ಬರುತ್ತಿದ್ದಾರೆ. ಅಲ್ಲಿನ ಮಣ್ಣನ್ನೂ ತರುತ್ತಿದ್ದಾರೆ. ಆದರೆ, ಬಾಬಾ, ಸ್ವಾಮೀಜಿಗಳ ಪಾದಧೂಳಿಗಾಗಿ ಲಕ್ಷಾಂತರ ಜನ ಸಾಲುಗಟ್ಟಿ ನಿಲ್ಲುವುದು ದುರಂತ!

ಧಾರ್ಮಿಕ ಮತಾಂಧತೆಯನ್ನು ಹೆಚ್ಚಿಸುತ್ತಿದ್ದಾರೆ

ಜನರಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಹೆಚ್ಚಿಸಿ ಎಂದು ಸಂವಿಧಾನ ಹೇಳಿದರೆ, ಆಡಳಿತಗಾರರು ಧಾರ್ಮಿಕ ಮತಾಂಧತೆಯನ್ನು ಹೆಚ್ಚಿಸುತ್ತಿದ್ದಾರೆ. ಇತ್ತೀಚೆಗೆ ಈ ಮೂಢನಂಬಿಕೆ ಉತ್ತುಂಗಕ್ಕೇರಿದೆ. ನಾನೇ ದೇಶದ ನಿಜವಾದ ಮುಖ್ಯಸ್ಥ ಎಂದು ಹಬ್ಬಿಸಿದರೆ, ಅದೇ ರೀತಿ ಬಾಬಾಗಳು, ಸ್ವಾಮೀಜಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ತಾವು ದೇವರ ಪ್ರತಿನಿಧಿಗಳು ಎಂದು ಹೇಳಿಕೊಳ್ಳುತ್ತಾರೆ. ಹೊಸ ದೀಕ್ಷೆಗಳು, ಸತ್ಸಂಗಗಳು, ಪವಾಡ ರಾತ್ರಿಗಳು ಮತ್ತು ಆಚರಣೆಗಳು ಬರುತ್ತಿವೆ. ಬರಗಾಲದಿಂದ ಹಳ್ಳಿಗಳಲ್ಲಿ ಜಾನುವಾರುಗಳಿಗೆ ಮೇವು, ಜನರಿಗೆ ಆಹಾರ ಸಿಗದೆ ಜನ ಪರದಾಡುತ್ತಿದ್ದಾರೆ. ನಮ್ಮ ಸ್ಥಾನ ನಿರುದ್ಯೋಗ, ಹಸಿವು ಮತ್ತು ಬಡತನದ ತಳದಲ್ಲಿದೆ. ಕಿಲೋಮೀಟರ್ ದೂರದಿಂದ ಕುಡಿಯುವ ನೀರನ್ನೂ ತರುವ ದುರದೃಷ್ಟ ನಮ್ಮದು. ಇದೇ ಸಂದರ್ಭದಲ್ಲಿ ಈ ಸ್ವಾಮೀಜಿಗಳು, ಬಾಬಾಗಳು, ಪೀಠಾಧಿಪತಿಗಳು ಜನರ ಧಾರ್ಮಿಕ ನಂಬಿಕೆಯನ್ನು ಆಸರೆಯಾಗಿಟ್ಟುಕೊಂಡು ಕಳ್ಳರನ್ನು, ದರೋಡೆಕೋರರನ್ನು ಶಿಷ್ಯರನ್ನಾಗಿಸಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ಮೌಲ್ಯ, ಸಿದ್ಧಾಂತ, ಮಾನವೀಯ ಚಿಂತನೆ ಮತ್ತು ಬದ್ಧತೆ ಇಲ್ಲದ ರಾಜಕಾರಣವನ್ನು ನಾವು ನೋಡುತ್ತಿದ್ದೇವೆ. ಸೇವೆ, ತ್ಯಾಗ, ಪ್ರಾಮಾಣಿಕತೆ ಇತ್ಯಾದಿ ಗುಣಗಳೆಲ್ಲ ಮಾಯವಾಗಿ ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿಗಳೇ ರಾಜಕೀಯವಾಗಿ ಮುಂದೆ ಬಂದಿವೆ. ಮೂಢನಂಬಿಕೆಗಳ ಬಗ್ಗೆ ಬಹಳಷ್ಟು ರಾಜಕೀಯ ಪಕ್ಷಗಳು ಅತ್ಯಂತ ತಾತ್ಸಾರ ಮಾಡಿವೆ ಎಂಬುದನ್ನು ಈ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ. ಅಜ್ಞಾನದ ಕುರುಡು ನಂಬಿಕೆಗಳನ್ನು ಹೋಗಲಾಡಿಸಲು ಯಾವುದೇ ಪ್ರಯತ್ನ ಮಾಡದಿರುವುದು, ಸ್ವಾರ್ಥಕ್ಕಾಗಿ ಅವುಗಳನ್ನು ದಟ್ಟವಾಗಿ ಪೋಷಿಸಲು ಪ್ರಯತ್ನಿಸುತ್ತಿರುವುದು ದೊಡ್ಡ ದುರಂತ. ಕಾಲ್ತುಳಿತ 

ಮನುಷ್ಯನ ಮುಗ್ಧತೆ ಮತ್ತು ಧಾರ್ಮಿಕ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಳ್ಳುವ ದೇವಬಾಬಾಗಳು, ಭೋಲೆಬಾಬಾಗಳು ಮತ್ತು ಸ್ವಾಮೀಜಿಗಳು ಪ್ರತಿ ಹಳ್ಳಿ ಮತ್ತು ನಗರಗಳಲ್ಲಿ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೆಲ್ಲವೂ ಮುಗ್ಧ ಭಕ್ತರ ದೌರ್ಬಲ್ಯ ಮತ್ತು ಪ್ರಾಣದೊಂದಿಗೆ ಆಡುವ ಚೆಲ್ಲಾಟಗಳಾಗಿವೆ. ಜನರ ಕುರಿತು ರಾಜಕೀಯ ಚಿತ್ತಶುದ್ಧಿ ಮತ್ತು ವಿಜ್ಞಾನದ ಕೊರತೆ ಇದ್ದಾಗ ಈ ಅವಘಡಗಳು ಇದೇ ರೀತಿ ಸಂಭವಿಸುತ್ತವೆ.

ಸರ್ಕಾರಗಳು ಮತ್ತು ಪ್ರಗತಿಪರರು ನಮ್ಮ ಸಂವಿಧಾನ ನೀಡಿರುವ ಸ್ಫೂರ್ತಿಯೊಂದಿಗೆ ಸಮಾಜವನ್ನು ಜಾಗೃತಗೊಳಿಸಬೇಕು. ಮನೆಯಲ್ಲಿ ಪ್ರಾಥಮಿಕ ಹಂತದಿಂದಲೇ ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಬೇಕು. ಪ್ರಶ್ನಿಸುವುದು ಹೆಚ್ಚಾಗಬೇಕು. ಅಜ್ಞಾನವನ್ನು ಹೆಚ್ಚಿಸುವ ಮತ್ತು ದ್ವೇಷವನ್ನು ಹುಟ್ಟುಹಾಕುವ ಶಕ್ತಿಗಳ ಬಗ್ಗೆ ಜನರು ಎಚ್ಚರದಿಂದಿರಬೇಕು. ಕಾಲ್ತುಳಿತ

ಇದನ್ನು ನೋಡಿ : ಸಾವಿನ ಸತ್ಸಂಗ..! ದೊಡ್ಡ ಕ್ರಿಮಿನಲ್ ಭೋಲೆ ಬಾಬಾ!!Janashakthi Media

Donate Janashakthi Media

Leave a Reply

Your email address will not be published. Required fields are marked *