ಹಾಸನ: ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ದೌರ್ಜನ್ಯ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ, ಮಹಿಳೆಯರ ಘನತೆಗೆ ಕುಂದುಂಟಾಗುವಂತಹ ವೀಡಿಯೋಗಳು (ಮೀಮ್ಸ್ ಗಳು) ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಈ ವಿಡೀಯೋಗಳನ್ನು ತಯಾರಿಸಿದವರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದವರ ವಿರುದ್ದ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಇನ್ನೂ ಕೆಲವು ಸಂಘಟನೆಗಳ ಪದಾಧಿಕಾರಿಗಳು ದೂರು ನೀಡಿದ್ದಾರೆ. ವೀಡಿಯೋ
ದೂರಿನಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ, ಸಂತ್ರಸ್ತ ಮಹಿಳೆಯರಿಗೆ ಭೀತಿ ಹುಟ್ಟಿಸುವ, ಎಲ್ಲಾ ಮಹಿಳೆಯರ ಘನತೆಗೆ ಧಕ್ಕೆ ತರುವ, ಅತ್ಯಾಚಾರದಂತಹ ಅಪರಾಧವನ್ನು ಗೌಣವಾಗಿ ನೋಡುವ, ಈಗ ನಡೆಯುತ್ತಿರುವ ತನಿಖೆಯ ಗಹನತೆಯನ್ನು ಹಗುರವಾಗಿ ನೋಡುವಂತಹ ಈ ಮೀಮ್ಸ್ ವಿಡಿಯೋಗಳನ್ನು ತಯಾರಿಸಿದವರು ಮತ್ತು ಅವುಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ದ ಐಪಿಸಿ, ಐಟಿ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು.
ಈ ರೀತಿಯ ಮೀಮ್ಸ್ ವೀಡಿಯೋಗಳನ್ನು ಮಾಡುವುದು ಮತ್ತು ಹಂಚಿಕೊಳ್ಳುವುದನ್ನು ತಡೆಯಲು ಈ ಕೂಡಲೆ ಸಾರ್ವಜನಿಕ ಎಚ್ಚರಿಕೆಯನ್ನು ಮಾಧ್ಯಮಗಳ ಮೂಲಕ ನೀಡಬೇಕು. ಈಗಾಗಲೇ ವಾಟ್ಸ್ ಆಪ್ ಮೂಲಕ ಹರಿದಾಡುತ್ತಿರುವ ಲೈಂಗಿಕ ದೌರ್ಜನ್ಯದ ಫೋಟೋ ಮತ್ತು ವಿಡಿಯೋಗಳು ಹಾಗೂ ಸಾಮಾಜಿಕ ಜಾಲತಾಣಗಳಾದ ಫೆಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ, ವಾಟ್ಸ್ಆಪ್ ಮತ್ತಿತರೆ ತಾಣಗಳಲ್ಲಿ ಪ್ರಸಾರವಾಗುತ್ತಿರುವ ಮಹಿಳೆಯರ ಘನತೆಯನ್ನು ಕುಗ್ಗಿಸುವ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುವ ವಿಡಿಯೋಗಳನ್ನು ಸೈಬರ್ ವಿಭಾಗ ಕೂಡಲೇ ವಶಪಡಿಸಿಕೊಂಡು, ಡಿಲಿಟ್ ಮಾಡಿ, ಕ್ರಮ ಕೈಗೊಳ್ಳಬೇಕು ಮತ್ತು ಹಂಚಿಕೆಯಾಗದಂತೆ ತಡೆಗಟ್ಟಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.
ಈ ವೇಳೆ ಹಾಸನ ಜಿಲ್ಲೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್.ನವೀನ್ ಕುಮಾರ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಹಾಸನ ಜಿಲ್ಲಾಧ್ಯಕ್ಷ ಎಂ.ಜಿ.ಪೃಥ್ವಿ, ಹಾಸನ ಜಿಲ್ಲೆ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ವಿ ರಮೇಶ್ ಮತ್ತಿತ್ತರರು ಇದ್ದರು.
ಇದನ್ನು ನೋಡಿ : ಪೆನ್ಡ್ರೈವ್ ಪ್ರಕರಣ : ಬಿಜೆಪಿ ಮೌನಕ್ಕೆ ಕಾರಣವೇನು?ಸಂಧ್ಯಾ ಸೊರಬ ವಿಶ್ಲೇಷಣೆಯಲ್ಲಿ