ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಾಜಿ ಸಿಎಂ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ
ಸಂತ್ರಸ್ತೆಯ ತಾಯಿ ಗುರುವಾರ ಸಂಜೆ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಿದ್ದು, ದೂರಿನನ್ವಯ ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಗುರುವಾರ ಮಧ್ಯರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆಬ್ರವರಿ 2ನೇ ತಾರೀಖು, ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಸಹಾಯ ಕೇಳಲು ಹೋಗಿದ್ದಾಗ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ವರದಿಯ ಪ್ರಕಾರ ಯಡಿಯೂರಪ್ಪ ಬಾಲಕಿಯನ್ನು ಕೋಣೆಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತೆ ಕೊಠಡಿಯಿಂದ ಹೊರಗೆ ಓಡಿ ಬಂದಾಗ, ಆಕೆಯ ತಾಯಿಗೆ ಪ್ರಕರಣ ನಡೆದಿರುವುದು ಗೊತ್ತಾಗಿದೆ. ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು , ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದ ಸಂತ್ರಸ್ತೆ ಬಾಲಕಿ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಅಪ್ರಾಪ್ತ
ಇದನ್ನೂ ಓದಿ : ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ
ದೂರಿನಲ್ಲಿ ಏನಿದೆ? ದೂರುದಾರರು ತಿಳಿಸಿರುವಂತೆ ತಾಯಿ ಮತ್ತು ಮಗಳು ಫೆಬ್ರವರಿ 2ರಂದು ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದರು. ಅತ್ಯಾಚಾರ ಪ್ರಕರಣದಲ್ಲಿ ನಮಗೆ ಅನ್ಯಾಯವಾಗಿದೆ ವಿಶೇಷ ತನಿಖಾ ತಂಡ ರಚಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಸಂತ್ರಸ್ತೆ ಹಾಗೂ ಸಂತ್ರಸ್ತೆಯ ತಾಯಿ ಮನವಿ ಮಾಡಲು ಬಿಎಸ್‌ವೈ ಮನೆಗೆ ತೆರಳಿದ್ದರು. ಆ ವೇಳೆ ಬಿಎಸ್ ಯಡಿಯೂರಪ್ಪನವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದಲ್ಲದೇ ಬಳಿಕವೇ ಯಡಿಯೂರಪ್ಪನವರು ಕ್ಷಮೆಯಾಚಿಸಿ, ಪ್ರಕರಣದಲ್ಲಿ ನಿಮಗೆ ಸಹಾಯ ಮಾಡುತ್ತೇನೆ, ಈ ಘಟನೆ ಬಗ್ಗೆ ಹೊರಗಡೆ ಎಲ್ಲೂ ಮಾತನಾಡಬಾರದು ಎಂದು ಹೇಳಿರುತ್ತಾರೆ ಎಂದು ಸಂತ್ರಸ್ತೆಯ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಪ್ರಾಪ್ತ
ಯಾವುದೇ ಸಮಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ಈ ವೇಳೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಅದಲ್ಲದೇ ಪೋಕ್ಸೋ ಪ್ರಕರಣ ದಾಖಲಾಗಿರುವುದರಿಂದ ಬಿಎಸ್ ಯಡಿಯೂರಪ್ಪಗೆ ಬಂಧನದ ಭೀತಿಯೂ ಎದುರಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ದೂರನ್ನು ಕಾನೂನು ರೀತಿ ಎದುರಿಸುತ್ತೇನೆ – ಬಿಎಸ್ ಯಡಿಯೂರಪ್ಪ : ನನ್ನ ವಿರುದ್ಧ ಮಹಿಳೆ ದೂರು ನೀಡಿದ್ದು, ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಕಾನೂನಿನ ರೀತಿ ಇದನ್ನು ಯಾವ ರೀತಿ ಎದುರಿಸಬೇಕೋ ಎದುರಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಇದೆ ಎನ್ನುವ ಆರೋಪವನ್ನು ನಾನು ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಯಾರೋ ಮಹಿಳೆ ದೂರು ಕೊಟ್ಟಿದ್ದಾರೆ ಎಂದು ಗೊತ್ತಾಯಿತು. ಒಂದೂವರೆ ತಿಂಗಳ ಹಿಂದೆ ತಾಯಿ ಮಗಳು ಕಣ್ಣೀರು ಹಾಕುತ್ತಿದ್ದರು. ಅವರು ಸಾಕಷ್ಟು ಬಾರಿ ಬಂದಿದ್ದರೂ ಹತ್ತಿರ ಸೇರಿಸಿರಲಿಲ್ಲ. ಆದರೆ ಅಳುವುದನ್ನು ನೋಡಿ ಒಮ್ಮೆ ಒಳಗಡೆ ಕರೆಸಿ ಕೂರಿಸಿ ಸಮಸ್ಯೆಯನ್ನ ಆಲಿಸಿದೆ. ನನಗೆ ತುಂಬಾ ಅನ್ಯಾಯ ಆಗಿದೆ ಎಂದು ನೋವು ತೋಡಿಕೊಂಡರು. ನಂತರ ನಾನು ಪೊಲೀಸ್ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಇವರಿಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ ವಿಚಾರಿಸಿ ನ್ಯಾಯ ಒದಗಿಸಿ ಕೊಡಿ ಎಂದು ಕೋರಿದ್ದೆ ಎಂದರು.
ಆ ಮಹಿಳೆ ಮತ್ತು ಮಗಳನ್ನು ಪೊಲೀಸ್ ಆಯುಕ್ತರ ಕಚೇರಿಗೆ ಕಳುಹಿಸಿಕೊಟ್ಟಿದ್ದೆ. ಅದಾದ ನಂತರ ನನ್ನ ವಿರುದ್ಧವೇ ಏನೇನೋ ಮಾತನಾಡಲು ಶುರು ಮಾಡಿದರು. ಆಗ ಯಾಕೋ ಅವರ ಆರೋಗ್ಯ ಸರಿ ಇರುವಂತೆ ಕಾಣುವುದಿಲ್ಲ. ಹೆಚ್ಚು ಮಾತನಾಡಿ ಉಪಯೋಗ ಇಲ್ಲ ಎಂದು ಪೊಲೀಸ್ ಆಯುಕ್ತರಿಗೆ ಬಳಿ ಕಳಿಸಿಕೊಟ್ಟು ಸುಮ್ಮನಾದೆ. ಆದರೆ ಇದನ್ನ ಬೇರೆ ರೀತಿ ಮಾಡಿ ದೂರು ದಾಖಲಿಸಲಾಗಿದೆ. ಕಾನೂನು ರೀತಿ ಈ ಪ್ರಕರಣವನ್ನು ಎದುರಿಸುತ್ತೇನೆ. ಆದರೆ ಉಪಕಾರ ಮಾಡಲು ಹೋದರೆ ಹೇಗಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ. ಕಷ್ಟ ಇದೆ ಎಂದು ಹಣವನ್ನು ಕೊಟ್ಟು ಕಳುಹಿಸಿದೆ. ಇಷ್ಟಾದರೂ ಈ ರೀತಿಯ ಬೆಳವಣಿಗೆ ಆಗಿದೆ. ನೋಡೋಣ ಎಲ್ಲವನ್ನೂ ಎದುರಿಸೋಣ ಎಂದು ತಿಳಿಸಿದರು. ಅಪ್ರಾಪ್ತ