ನವದೆಹಲಿ: ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರವು ತೊಗರಿ ಮತ್ತು ಉದ್ದಿನಬೇಳೆ ಆಮದಿನ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು 2025ರ ಮಾರ್ಚ್ 31ರ ವರೆಗೆ, ಅಂದರೆ ಮತ್ತೊಂದು ವರ್ಷದವರೆಗೆ ವಿಸ್ತರಿಸಿದೆ. ಈ ಕುರಿತು ವಿದೇಶಿ ವ್ಯಾಪಾರ ಮಹಾನಿರ್ದೇಶಕರು ಗುರುವಾರ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೆ ಮಸೂರ್ ದಾಲ್ಗೆ ಆಮದು ಸುಂಕ ವಿನಾಯಿತಿಯನ್ನು ಮಾರ್ಚ್ 2025 ಕ್ಕೆ ಒಂದು ವರ್ಷದವರೆಗೆ ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಅಕ್ಟೋಬರ್ 2021 ರಿಂದ ಜಾರಿಯಲ್ಲಿರುವ ಈ ವಿನಾಯಿತಿಯು 2024ರ ಮಾರ್ಚ್ 31ರ ವರೆಗೆ ಇತ್ತು. ಇದೀಗ ಅಧಿಸೂಚನೆಯನ್ನು ಹೊರಡಿಸಿರುವ ಸರ್ಕಾರ ಅದನ್ನು ಮಾರ್ಚ್ 31, 2025 ರವರೆಗೆ ವಿಸ್ತರಿಸಿದೆ. ಉದ್ದಿನಬೇಳೆ
ಇದನ್ನೂ ಓದಿ: ಶಿವಮೊಗ್ಗ | ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ವರನ ಕುಟುಂಬಕ್ಕೆ ಬಹಿಷ್ಕಾರ
ಭಾರತವು ಹೆಚ್ಚಿನ ಆಹಾರ ಹಣದುಬ್ಬರವನ್ನು ಎದುರಿಸುತ್ತಿದ್ದು, ಅಂಕಿಅಂಶ ಸಚಿವಾಲಯದ ಅಂಕಿಅಂಶಗಳ ಪ್ರಕಾರ ನವೆಂಬರ್ನಲ್ಲಿ ಬೇಳೆಕಾಳುಗಳ ಬೆಲೆಗಳು 20% ದಷ್ಟು ಏರಿಕೆಯಾಗಿದೆ. ಕಳೆದ ನವೆಂಬರ್ನಲ್ಲಿ ಆಹಾರ ಹಣದುಬ್ಬರ 8.7% ಕ್ಕೆ ಏರಿದೆ ಮತ್ತು ಅಕ್ಟೋಬರ್ನಲ್ಲಿ 6.61% ಏರಿಕೆಯಾಗಿತ್ತು.
ಈ ಹಿಂದೆ ಸರ್ಕಾರವು ಅಗತ್ಯ ಸರಕುಗಳ ಕಾಯಿದೆ, 1955 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಸಂಗ್ರಹ ಮಿತಿಗಳ ಅವಧಿಯನ್ನು ಅಕ್ಟೋಬರ್ 30 ರಿಂದ ಡಿಸೆಂಬರ್ 31 ರವರೆಗೆ ತೊಗರಿ ಮತ್ತು ಉದ್ದಿಗೆ ಸಂಬಂಧಿಸಿದಂತೆ ವಿಸ್ತರಿಸಿತ್ತು. ಕೆಲವು ಸಂಗ್ರಹ ಇಡುವ ಘಟಕಗಳಿಗೆ ಸಂಗ್ರಹ ಹಿಡುವಳಿ ಮಿತಿಗಳನ್ನು ಪರಿಷ್ಕರಿಸಿತು. ಸಂಗ್ರಹಣೆಯನ್ನು ತಡೆಗಟ್ಟಲು ಮತ್ತು ಬೆಲೆಗಳು ಮತ್ತಷ್ಟು ಗಗನಕ್ಕೇರುವುದನ್ನು ತಡೆಯಲು ಸಾಕಷ್ಟು ಪ್ರಮಾಣದ ತೊಗರಿ ಮತ್ತು ಉದ್ದು ಮಾರುಕಟ್ಟೆಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗಿದೆ.
ಇದನ್ನೂ ಓದಿ: ಮೂಢನಂಬಿಕೆ ಮೇಲುಗೈ ಸಾಧಿಸಿದರೆ ದೇಶ ಬೆಳೆಯಲು ಅಸಾಧ್ಯ – ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯಾಗಾರದಲ್ಲಿ ಟಿ.ಎ. ಪ್ರಶಾಂತಬಾಬು
ದೇಶೀಯ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ಈ ಹಿಂದೆ ತೊಗರಿ ಬೆಲೆಯಲ್ಲಿ ಏರಿಕೆಯಾಗಿತ್ತು. ನವೆಂಬರ್ನಲ್ಲಿ ಒಂದು ಕೆಜಿ ತೊಗರಿಯ ಬೆಲೆ 156 ರೂ. ಇದ್ದು, ಅದೇ ಬೆಲೆ ಡಿಸೆಂಬರ್ನಲ್ಲಿ 154 ರೂ. ಸ್ಥಿರವಾಗಿ ಉಳಿದಿದೆ. ದೇಶೀಯ ಉತ್ಪಾದನೆಯಲ್ಲಿ ಕುಸಿತವನ್ನು ನಿರೀಕ್ಷಿಸಿ, ಕೇಂದ್ರ ಸರ್ಕಾರವು ಜನವರಿಯಲ್ಲಿ ಸುಂಕ ರಹಿತ ಆಮದು ನೀತಿಯನ್ನು ಮಾರ್ಚ್ 31, 2024 ರವರೆಗೆ ಹುರುಳಿ ಮತ್ತು ಉದ್ದಿನಬೇಳೆಗೆ ವಿಸ್ತರಿಸಿತ್ತು.
2023 ರ ಖಾರಿಫ್ ಋತುವಿನಲ್ಲಿ ತೊಗರಿ ಉತ್ಪಾದನೆಯು ಸುಮಾರು 3.22ನಿಂದ 3.27 ಮಿಲಿಯನ್ ಟನ್ಗಳಷ್ಟು ಆಗಿದೆ ಎಂದು ಅಂದಾಜಿಸಲಾಗಿದೆ. 2022-23 ರ ಋತುವಿನಲ್ಲಿ ಇದು 3.31 ಮಿಲಿಯನ್ ಟನ್ಗಳಷ್ಟು ಇತ್ತು. ಹಾಗಾಗಿ ಕಳೆದ ವರ್ಷಕ್ಕಿಂತ ಸುಮಾರು 2.7% ತೊಗರಿ ಬೆಳೆ ಕುಸಿತವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಉದ್ದು ಉತ್ಪಾದನೆ ಕೂಡಾ ಕಳೆದ ವರ್ಷದ 1.77 ಮಿಲಿಯನ್ ಟನ್ಗಳಷ್ಟಾಗಿದ್ದು, ಈ ವರ್ಷ ಸುಮಾರು 1.5-1.6 ಮಿಲಿಯನ್ ಟನ್ಗಳಿಗೆ ಇಳಿದಿದೆ ಎಂದು ಅಂದಾಜಿಸಲಾಗಿದೆ.
ವಿಡಿಯೊ ನೋಡಿ: ಘನತೆಯ ಬದುಕು, ಹೋರಾಟದ ಹಾದಿ, ಕಲೆಯ ದಾರಿ – ಕಲಾವಿದರು ಹೋರಾಟಗಾರರ ಮಾತುಕತೆ Janashakthi Media