ಬೃಹತ್‌ ಒಂಭತ್ತು ಖಾಸಗಿ ಆಸ್ಪತ್ರೆಗಳ ಬಳಿ ಶೇಕಡಾ 50ರಷ್ಟು ಕೋವಿಡ್‌ ಲಸಿಕೆ

ನವದೆಹಲಿ: ಕೋವಿಡ್‌ ಲಸಿಕೆ ಹಂಚಿಕೆ ವಿಚಾರದಲ್ಲಿ ಪ್ರಾರಂಭದಿಂದಲೂ ಅಯೋಮಯವಾಗಿ ಪರಿಣಮಿಸಿತ್ತು. ಅದರೊಂದಿಗೆ ದೇಶದ ಎರಡು ಬೃಹತ್‌ ಲಸಿಕಾ ಉತ್ಪಾದನಾ ಸಂಸ್ಥೆಗಳಿಂದ ಕೇಂದ್ರ ಸರಕಾರಕ್ಕೆ ಶೇಕಡಾ 50ರಷ್ಟು ಮತ್ತು ರಾಜ್ಯ ಸರಕಾರಕ್ಕೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತಲಾ ಶೇಕಡಾ 25ರಷ್ಟು ಲಸಿಕೆ ಹಂಚಿಕೆ ವಿಚಾರಗಳು ಅಂತಿಮಗೊಂಡಿದ್ದವು.

ಇದರಿಂದಾಗಿ ದೇಶದಲ್ಲಿ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರದ ನೀತಿಗಳು ಅತ್ಯಂತ ಸ್ಪಷ್ಟವಾಗಿ ಖಾಸಗಿ ವಲಯಗಳಿಗೆ ಲಾಭ ಮಾಡಿಕೊಡುವುದಾಗಿ ಮತ್ತು ಜನರು ಹೆಚ್ಚಿನ ದರದಲ್ಲಿ ಲಸಿಕೆ ಪಡೆದುಕೊಳ್ಳಲು ಅನುವು ಮಾಡಿದಂತಾಗಿದೆ. ಇದರಿಂದ ದೇಶದಲ್ಲಿ ಲಸಿಕೆ ವಿಚಾರದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಅಸಮಾನತೆಯಾಗಿರುವುದು ಎದ್ದು ಕಾಣುತ್ತದೆ.

ಇದನ್ನು ಓದಿ: ಕೋವಿಡ್‌-19: ಲಸಿಕೆಯೇ ಅಂತಿಮ ಅಸ್ತ್ರ

ಈ ಬಗ್ಗೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಒಂದು ವಿಸ್ತಾರವಾದ ವರದಿಯೊಂದನ್ನು ಸಿದ್ದಪಡಿಸಿದೆ.

ಇಂದಿಗೂ ಲಸಿಕೆ ಹಂಚಿಕೆ ಹಾಗೂ ಖರೀದಿ ವಿಚಾರದಲ್ಲಿ ಏಕರೀತಿಯ ಪಾರದರ್ಶಕತೆ ಇಲ್ಲವಾಗಿರುವುದಕ್ಕೆ ಪ್ರಮುಖ ಕಾರಣ ತಿಳಿದು ಬರುತ್ತಿದೆ. ಅದರಂತೆ, ದೇಶದ ಅತ್ಯಂತ ಬೃಹತ್‌ ಒಂಭತ್ತು ಖಾಸಗಿ ಆಸ್ಪತ್ರೆಗಳ ಬಳಿ ಶೇಕಡಾ 50ರಷ್ಟು ಲಸಿಕೆಗಳನ್ನು ಶೇಖರಿಸಿಕೊಂಡಿದೆ. ಅದೂ ಕೂಡ ತಾವು ಓಪ್ಪಂದ ಮಾಡಿ ನಿಗದಿಪಡಿಸಿಕೊ೦ಡ ಲಸಿಕೆಗಿಂತೆ ಎರಡರಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಉತ್ಪಾದನಾ ಸಂಸ್ಥೆಗಳಿಂತ ಖರೀದಿಸಿರುವುದು ತಿಳಿದುಬಂದಿದೆ.

ಖಾಸಗಿ ಆಸ್ಪತ್ರೆಗಳು ಖರೀದಿಸಿದ ಒಟ್ಟು 1.20 ಕೋಟಿ ಕೋವಿಡ್‌  ಲಸಿಕೆಗಳಲ್ಲಿ ಈ ಒಂಬತ್ತು ಕಾರ್ಪೊರೇಟ್ ಆಸ್ಪತ್ರೆಗಳು 60.57 ಲಕ್ಷ ಡೋಸ್‌ಗಳನ್ನು ಖರೀದಿಸಿದೆ. ಉಳಿದ ಶೇಕಡಾ 50 ರಷ್ಟು ಲಸಿಕೆ 300 ಆಸ್ಪತ್ರೆಗಳು ಸಂಗ್ರಹಿಸಿಕೊಂಡಿವೆ. ಈ 300 ಆಸ್ಪತ್ರೆಗಳು ದೇಶದ ನಗರ ಕೇಂದ್ರಗಳಲ್ಲಿವೆ.

ದೇಶದ ದೊಡ್ಡ ನಗರಗಳಲ್ಲಿ ಇರುವ ಈ ಕಾರ್ಪೋರೇಟ್ ಆಸ್ಪತ್ರೆಗಳು ‌ ಮೇ ತಿಂಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಖರೀದಿಸಿದೆ. ಅದರೊಂದಿಗೆ ದುಬಾರಿ ದರದಲ್ಲಿ ಜನರಿಗೆ ಲಸಿಕೆ ನೀಡಲಾಗುತ್ತಿದೆ.

ಇದನ್ನು ಓದಿ: ಅತಿ ದೊಡ್ಡ ಲಸಿಕೆ ಉತ್ಪಾದನೆ ಸಾಮರ್ಥ್ಯವಿದ್ದರೂ ಭಾರತದ ಜನಗಳಿಗೆ ಲಸಿಕೆ ಹಾಕಲು ಆಗಿಲ್ಲ ಏಕೆ?

ಈ ಆಸ್ಪತ್ರೆಗಳು ಅಥವಾ ಅದರ ಘಟಕಗಳು ಹೆಚ್ಚಾಗಿ ದೇಶದ ದೊಡ್ಡ ದೊಡ್ಡ ನಗರಗಳು ಮತ್ತು ರಾಜ್ಯ ರಾಜಧಾನಿಗಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟಿಕ್‌ನ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಲಸಿಕೆಗೆ ಕೇಂದ್ರ ಸರ್ಕಾರಕ್ಕೆ ಡೋಸ್‌ಗೆ 150 ರೂ.ಗಳ ಬೆಲೆಯನ್ನು ವಿಧಿಸುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‌ಗೆ ಪ್ರತಿ ಡೋಸ್‌ಗೆ 600 ರೂ. ಮತ್ತು ಕೋವಾಕ್ಸಿನ್‌ಗೆ ಪ್ರತಿ ಡೋಸ್‌ಗೆ 1,200 ರೂ. ವಿಧಿಸಲಾಗುತ್ತಿದೆ.

ಒಂಬತ್ತು ಬೃಹತ್‌ ಕಾರ್ಪೋರೇಟ್ ಆಸ್ಪತ್ರೆಗಳಾದ ಅಪೊಲೊ ಆಸ್ಪತ್ರೆಗಳು (ಇದರ ಒಂಬತ್ತು ಆಸ್ಪತ್ರೆಗಳು 16.1 ಲಕ್ಷ ಡೋಸ್‌), ಮ್ಯಾಕ್ಸ್ ಹೆಲ್ತ್‌ಕೇರ್ (ಆರು ಆಸ್ಪತ್ರೆಗಳು, 12.97 ಲಕ್ಷ), ರಿಲಯನ್ಸ್ ಫೌಂಡೇಶನ್ ನಡೆಸುವ ಎಚ್‌ಎನ್ ಹಾಸ್ಪಿಟಲ್ ಟ್ರಸ್ಟ್ (9.89 ಲಕ್ಷ), ಮೆಡಿಕಾ ಆಸ್ಪತ್ರೆಗಳು (6.26 ಲಕ್ಷ), ಫೋರ್ಟಿಸ್ ಹೆಲ್ತ್‌ಕೇರ್ (ಎಂಟು ಆಸ್ಪತ್ರೆಗಳು 4.48 ಲಕ್ಷ), ಗೋದ್ರೇಜ್ (3.35 ಲಕ್ಷ), ಮಣಿಪಾಲ್ ಆರೋಗ್ಯ (3.24 ಲಕ್ಷ), ನಾರಾಯಣ ಹೃದ್ರಾಲಯ (2.02 ಲಕ್ಷ) ಮತ್ತು ಟೆಕ್ನೋ ಇಂಡಿಯಾ ದಮಾ (2 ಲಕ್ಷ) ಲಸಿಕೆಗಳನ್ನು ಖರೀದಿ ಮಾಡಿವೆ.

ಈ ಬೃಹತ್‌ ಖಾಸಗಿ ಆಸ್ಪತ್ರೆಗಳು ಹೆಚ್ಚಾಗಿ ಶ್ರೇಣಿ -1 ಮತ್ತು ಶ್ರೇಣಿ -2 ನಗರಗಳಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಿಕೊಂಡಿವೆ. ಮ್ಯಾಕ್ಸ್ ಹೆಲ್ತ್‌ಕೇರ್ ಕೇವಲ ಆರು ನಗರಗಳಲ್ಲಿ ತನ್ನ ಆಸ್ಪತ್ರೆ ಘಟಕಗಳನ್ನು ಹೊಂದಿದೆ. ಫೋರ್ಟಿಸ್ ಎಂಟು ನಗರಗಳಲ್ಲಿ ಆಸ್ಪತ್ರೆಗಳ ಘಟಕವನ್ನು ಹೋಂದಿದೆ. ಎಚ್‌ಎನ್ ಆಸ್ಪತ್ರೆ (ರಿಲಯನ್ಸ್ ಫೌಂಡೇಶನ್) ಮುಂಬಯಿ ಮತ್ತು ನವೀ ಮುಂಬಯಿಯಲ್ಲಿ ಕೇವಲ ಎರಡು ಆಸ್ಪತ್ರೆಗಳನ್ನು ಹೊಂದಿದ್ದರೆ, ಮೆಡಿಕಾಗೆ ಕೋಲ್ಕತ್ತಾದಲ್ಲಿ ಒಂದು ಆಸ್ಪತ್ರೆ ಇದೆ.

ಶ್ರೇಣಿ -3 ನಗರಗಳಲ್ಲಿನ ಆಸ್ಪತ್ರೆಗಳು ಕೆಲವೇ ಸಾವಿರ ಪ್ರಮಾಣದ ಲಸಿಕೆಗಳನ್ನು ಮಾತ್ರ ಖರೀದಿಸಲು ಸಾಧ್ಯವಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕರ್ನಾಟಕದ ಶಿವಮೊಗ್ಗ ನಗರದ ಸರ್ಜಿ ಎಂಬ ಖಾಸಗಿ ಆಸ್ಪತ್ರೆ ಕೇವಲ 6,000 ಕೋವಿಶೀಲ್ಡ್ ಪ್ರಮಾಣವನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದೆ. ಶಿವಮೊಗ್ಗದಲ್ಲಿ 3.22 ಲಕ್ಷ ಜನಸಂಖ್ಯೆ ಇದೆ.

ಇದನ್ನು ಓದಿ: ಕೋವಿಡ್ ಲಸಿಕೆಯ ಪೂರೈಕೆಯಲ್ಲೂ ‘ಉದಾರೀಕರಣ’ದ ಗೀಳು!!

ಭಾರತದ ವಾಣಿಜ್ಯ ನಗರಿ ಮುಂಬಯಿನ ಸಣ್ಣ ಆಸ್ಪತ್ರೆಗಳು ಲಸಿಕೆ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿವೆ. “ನಾವು 30,000 ಡೋಸ್‌ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದೇವು. ಆದರೆ, ನಮಗೆ ಕೇವಲ 3,000 ಮಾತ್ರ ಸಿಕ್ಕಿತು” ಎಂದು ಹಿಂದೂ ಸಭಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವೈಭವ್ ದಿಯೋರ್ಗಿ ಕರ್ ಹೇಳಿದರು.

ಕೆಲವು ಆಸ್ಪತ್ರೆಗಳು ಲಸಿಕೆಗಾಗಿ ಮಾಡಿಕೊಂಡ ಒಪ್ಪಂದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆದ ಪ್ರಕರಣಗಳೂ ಇವೆ. ಬೆಂಗಳೂರಿನ ಅಪೊಲೊ ಹಾಸ್ಪಿಟಲ್ಸ್ ವಿಭಾಗಗಳು 48,000 ಕೋವಿಶೀಲ್ಡ್ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಅಪೊಲೊ ಹಾಸ್ಪಿಟಲ್‌ಗೆ 2.90 ಲಕ್ಷದಷ್ಟು ಲಸಿಕೆಗಳು ಲಭ್ಯವಾಗಿದೆ. ಅದೇ ರೀತಿಯಲ್ಲಿ ದೆಹಲಿಯ ಮ್ಯಾಕ್ಸ್ ಹೆಲ್ತ್‌ಕೇರ್ 1 ಲಕ್ಷದಷ್ಟು ಕೋವಿಶೀಲ್ಡ್‌ ಲಸಿಕೆಯ ಒಪ್ಪಂದ ಮಾಡಿಕೊಂಡಿದ್ದರೂ 2.90 ಲಕ್ಷ ಲಸಿಕೆಗಳು ಲಭ್ಯವಾಗಿದೆ.

ಖಾಸಗಿ ಆಸ್ಪತ್ರೆಗಳು ಗ್ರಾಹಕರಿಗೆ ಕೋವಿಶೀಲ್ಡ್‌ಗೆ 850-1000 ರೂ ಮತ್ತು ಕೋವಾಕ್ಸಿನ್‌ಗೆ 1,250 ರೂ. ವಿಧಿಸುತ್ತಿವೆ. ಕೊರೊನಾ ಕಾರಣದಿಂದಾಗಿ ಈಗಾಗಲೇ ಸಂಕಷ್ಟವನ್ನು ಎದುರಿಸುತ್ತಿರುವ ಜನಸಾಮಾನ್ಯರು ಲಸಿಕೆ ಪಡೆಯುವಲ್ಲಿಯೂ ದುಬಾರಿ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರಿ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯುತ್ತಾದರೂ ಬಡ, ಮಧ್ಯಮ ವರ್ಗದ ಜನರು  ದುಬಾರಿ ಬೆಲೆ ತೆತ್ತು ಲಸಿಕೆ ಖರೀದಿ ಮಾಡಲು ಆಗದೆ ಚಿಂತಿತರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *