ʻನಗರೀಕರಣದ ಅಂದವೂ ಬುಲ್ಡೋಜರ್‌ ಸಂಸ್ಕೃತಿಯ ಕ್ರೌರ್ಯವೂ

 

ನಾ ದಿವಾಕರ

 

ನಗರೀಕರಣ ಪ್ರಕ್ರಿಯೆಯ ಮತ್ತೊಂದು ಪ್ರಧಾನ ಅಂಶವೆಂದರೆ ನಗರ ಸೌಂದರ್ಯವನ್ನು ಕಾಪಾಡುವುದು. ಈ ಸೌಂದರ್ಯೋಪಾಸನೆಯ ಮಾರ್ಗಗಳೂ ಬದಲಾದವು. ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಗಿಡಮರಗಳು ಈ ಸೌಂದರ್ಯ ಪ್ರಜ್ಞೆಯಿಂದ ಹೊರತಾದವು. ಪಾದಚಾರಿಗಳಿಗೂ ಅವಕಾಶವಿಲ್ಲದಂತಹ ರಸ್ತೆಗಳನ್ನು ನಿರ್ಮಿಸಲಾಯಿತು. ನಗರ ಸೌಂದರ್ಯವನ್ನು ನೂತನ ಷಾಪಿಂಗ್‌ ಮಾಲ್‌ಗಳ ಝಗಮಗಿಸುವ ಶ್ರೀಮಂತಿಕೆಯಲ್ಲಿ, ಗಾಜಿನ ಗೂಡುಗಳಲ್ಲಿ, ಶ್ರೀಮಂತಿಕೆಯನ್ನು ವೈಭವೀಕರಿಸುವ ಪುತ್ಥಳಿಗಳಲ್ಲಿ ಮತ್ತು ನವಿರಾದ ನೆಲಹಾಸುಗಳಲ್ಲಿ ಕಾಣುವ ಒಂದು ಪರಂಪರೆ ಆರಂಭವಾಯಿತು. ಈ ನವಿರು ನೆಲಹಾಸುಗಳು ಪಾದಚಾರಿ ರಸ್ತೆಗಳನ್ನು ಅಲಂಕರಿಸಲು ಆರಂಭವಾದಂತೆಲ್ಲಾ ರಸ್ತೆ ಬದಿಯ ವ್ಯಾಪಾರಿಗಳು, ತಲೆಯ ಮೇಲೆ ಸರಕು ಹೊತ್ತು ಮಾರಾಟ ಮಾಡುವ ನಿತ್ಯಾದಾಯ ಅವಲಂಬಿತ ಬಡ ಜನತೆ ತಮ್ಮ ವ್ಯಾಪಾರ ಮಾರ್ಗ ಮತ್ತು ವಲಯಗಳನ್ನೇ ಬದಲಾಯಿಸಬೇಕಾಯಿತು….. ಮುಂದೆ ಓದಿ.

ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ನಗರೀಕರಣ ಮತ್ತು ನಗರ ಜೀವನಕ್ಕೆ ಅತ್ಯವಶ್ಯವಾಗುವ ಮೂಲ ಸೌಕರ್ಯಗಳ ಸಂರಚನೆ ಬಹಳ ಮುಖ್ಯವಾಗುತ್ತವೆ. ನವ ಉದಾರವಾದ ಮತ್ತು ಜಾಗತೀಕರಣ ಭಾರತಕ್ಕೆ ಪ್ರವೇಶಿಸಿದ ನಂತರದಲ್ಲಿ ಸಹಜವಾಗಿಯೇ ಈ ಪ್ರಕ್ರಿಯೆಯೇ ಸರ್ಕಾರಗಳ ಆಡಳಿತ ಮತ್ತು ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಮಾರುಕಟ್ಟೆ ಪ್ರೇರಿತ ಅರ್ಥ ವ್ಯವಸ್ಥೆಯಲ್ಲಿ ಶ್ರಮಿಕ ಮತ್ತು ಶ್ರಮ ಎರಡೂ ಸಹ ಬಳಸಿ ಬಿಸಾಡಬಹುದಾದ ಸರಕು ಎನಿಸಿಬಿಡುತ್ತದೆ. ಹಾಗೆಯೇ ಶ್ರಮಶಕ್ತಿಯನ್ನು ವ್ಯಯಿಸುವ ಮನುಷ್ಯರು ಕೇವಲ ನಿಮಿತ್ತ ಮಾತ್ರವಾಗಿಬಿಡುತ್ತಾರೆ. ಬಂಡವಾಳ ಕ್ರೋಢೀಕರಣ ಮತ್ತು ಜಾಗತಿಕ ಹರಿವಿಗೆ ಪೂರಕವಾದ ಮಾರ್ಗಗಳನ್ನು ರೂಪಿಸುತ್ತಿರುವಂತೆಯೇ ಮನುಷ್ಯರು ಈ ಪ್ರಕ್ರಿಯೆಯಲ್ಲಿ ಕಚ್ಚಾವಸ್ತುಗಳಂತಾಗಿಬಿಡುತ್ತಾರೆ. ಮನುಷ್ಯನ ಜೀವನ ಮತ್ತು ಜೀವನೋಪಾಯದ ಮಾರ್ಗಗಳು ಮಾರುಕಟ್ಟೆ ವ್ಯವಸ್ಥೆಯ ಅನುಕೂಲಕ್ಕೆ ತಕ್ಕಂತೆ ರೂಪುಗೊಳ್ಳಬೇಕಾಗುತ್ತದೆ.

ದೇಶ ಎಂದರೆ ಕೇವಲ ನಾಲ್ಕು ಗಡಿಗಳಲ್ಲಿ ಬಂಧಿಸಲ್ಪಟಿರುವ ಭೂಮಿ ಎಂಬ ಪ್ರಾಚೀನ ನಂಬಿಕೆಯನ್ನೇ ಇಂದಿಗೂ ಅನುಕರಿಸುವ ಆಳುವ ವರ್ಗಗಳಿಗೆ ಈ ಮಣ್ಣಿನಲ್ಲಿ ಬದುಕು ಸವೆಸುವ ಜೀವಗಳು ತ್ಯಾಗ ಮಾಡಲೇಬೇಕಾದ ಸಾಧಕಗಳಾಗಿ ಕಾಣುತ್ತವೆ. ಈ ಪರಿಕಲ್ಪಿತ ಭೌಗೋಳಿಕ ʼ ದೇಶ ʼ ಅಭಿವೃದ್ಧಿ ಹೊಂದಬೇಕಾದರೆ, ಪ್ರಗತಿ ಸಾಧಿಸಬೇಕಾದರೆ, ಜನಸಾಮಾನ್ಯರು, ಅಂದರೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕರು, ತ್ಯಾಗ ಮಾಡಬೇಕಾಗುತ್ತದೆ. ಈ ತ್ಯಾಗಿಗಳ ಬದುಕಿನ ಬಂಡಿ ಸಾಗಿಸಲು ಅವಶ್ಯವಾದ ಜೀವನೋಪಾಯದ ಸರಕುಗಳನ್ನು ಒದಗಿಸುವ ಮೂಲಕ, ಬಹುಸಂಖ್ಯಾತರ ಬಡತನವನ್ನು ಮತ್ತು ಒಂದು ವರ್ಗದ ಶ್ರೀಮಂತಿಕೆಯನ್ನು ಶಾಶ್ವತಗೊಳಿಸುವ ಆಡಳಿತ/ಆರ್ಥಿಕ ನೀತಿಗಳನ್ನು ಪ್ರಭುತ್ವ ಅನುಸರಿಸುತ್ತದೆ. ನರಸಿಂಹರಾವ್‌ ಸರ್ಕಾರದಿಂದ ಆರಂಭವಾದ ಈ ʼಅಭಿವೃದ್ಧಿಯ ಮಾರ್ಗʼ ನರೇಂದ್ರ ಮೋದಿ ಸರ್ಕಾರದಲ್ಲಿ ತನ್ನ ಅಂತಿಮ ಸ್ವರೂಪ ಪಡೆದುಕೊಳ್ಳುತ್ತಿದೆ.

ಈ ಪ್ರಗತಿ ಪಥದಲ್ಲಿ ತ್ಯಾಗ ಮಾಡಲೇಬೇಕಾದ ಕೆಲವು ವರ್ಗಗಳನ್ನೂ ಗುರುತಿಸಲಾಗುತ್ತದೆ. ಅರಣ್ಯಗಳನ್ನೇ ನಂಬಿ ಬದುಕುವ ಆದಿವಾಸಿ ಸಮುದಾಯಗಳು, ಭೂಮಿಯನ್ನೇ ನಂಬಿ ಬದುಕುವ ಸಣ್ಣ, ಅತಿಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು, ವ್ಯವಸಾಯೋತ್ಪನ್ನಗಳನ್ನೇ ಅವಲಂಬಿಸಿ, ಬೇಸಾಯಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸುತ್ತಲೇ ಜೀವ ಸವೆಸುವ ಗ್ರಾಮೀಣ ಶ್ರಮಿಕರು, ಗೇಣಿ, ದಿನಗೂಲಿ ಮತ್ತು ಜೀತವನ್ನು ನಂಬಿ ಬದುಕುವ ಗ್ರಾಮೀಣ ಬಡಜನತೆ, ಈ ವಲಯಗಳಿಂದ ಉಚ್ಚಾಟಿಸಲ್ಪಟ್ಟು ನಗರಗಳಲ್ಲಿ ಉದ್ಯೋಗವನ್ನರಸಿ ಬರುವ ವಲಸೆ ಕಾರ್ಮಿಕರು ಮತ್ತು ನಗರಗಳಲ್ಲಿ ತಮ್ಮ ದಿನಗೂಲಿಯನ್ನೇ ನಂಬಿ ಬದುಕುವ ಅಸಂಖ್ಯಾತ ಕೆಳಮಧ್ಯಮ ವರ್ಗದ, ಸಾಮಾನ್ಯ ಜನತೆ. ಈ ಎಲ್ಲ ಜನಸಮುದಾಯಗಳೂ ಸಹ ʼದೇಶದ ಪ್ರಗತಿʼಗಾಗಿ  ತ್ಯಾಗಮಯಿಗಳಾಗಬೇಕಾಗುತ್ತದೆ. ಈ ತ್ಯಾಗಕ್ಕೆ ಪ್ರತಿಫಲವಾಗಿ ಇವರ ಜೀವನಕ್ಕೆ ಚ್ಯುತಿ ಬಾರದಂತೆ ಉಚಿತ ಪಡಿತರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತಲೆಗೊಂದು ಸೂರು ಎಂಬ ಘೋಷಣೆಯಡಿ ಸರ್ಕಾರಗಳು ಈ ಜನರಿಗಾಗಿಯೇ ಕಾಂಕ್ರೀಟ್‌ ಗುಡಿಸಲುಗಳನ್ನು ನಿರ್ಮಿಸಿಕೊಡುತ್ತದೆ.

ಈ ಜನಸಮುದಾಯಗಳ ಶ್ರಮ ಬೆವರು ಮತ್ತು ತ್ಯಾಗಮಯಿ ಮನೋಭಾವ ಇವೆಲ್ಲವೂ ಬಂಡವಾಳ ವ್ಯವಸ್ಥೆಯ ಅಭಿವೃದ್ಧಿಗೆ ಬುನಾದಿಯಾಗುತ್ತದೆ. ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಮೂಲತಃ ಮೂರು ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ಹಣಕಾಸು ಚಟುವಟಿಕೆಗಳನ್ನು ದ್ವಿಗುಣಗೊಳಿಸುವುದು ಮತ್ತು ತೀವ್ರಗೊಳಿಸುವುದು, ಸಮಾಜವನ್ನು ಮತ್ತು ವ್ಯಕ್ತಿಗಳನ್ನೂ ಹೆಚ್ಚು ಉದ್ಯಮಶೀಲರನ್ನಾಗಿ ಮಾಡುವುದು ಹಾಗೂ ಮೂರನೆಯದಾಗಿ ಉತ್ಪಾದಕೀಯ ವಾಹಿನಿಗಳಲ್ಲಿ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು. ಇದು ಸಮಕಾಲೀನ ಸಂದರ್ಭದಲ್ಲಿ ಕಂಡುಬರುವ ವಿದ್ಯಮಾನವಾದರೂ, ಬಂಡವಾಳಶಾಹಿಯ ಇತಿಹಾಸದಲ್ಲೇ ಇದರ ಹೆಜ್ಜೆ ಗುರುತುಗಳನ್ನು ಗುರುತಿಸಬಹುದು. ಈ ಅಭಿವೃದ್ಧಿ ಪಥದಲ್ಲಿ ನಗರೀಕರಣ ಎಂದರೆ ಉತ್ಪಾದನೆ, ಬಳಕೆ ಮತ್ತು ಮರು ಉತ್ಪಾದನೆ ಆಗಿರುತ್ತದೆ. ಆರ್ಥಿಕ ವಿಶ್ಲೇಷಕ ಹೆನ್ರಿ ಲೇಫರ್‌ ನಗರೀಕರಣ ಪ್ರಕ್ರಿಯೆಯನ್ನು ಹೀಗೆ ವಿವರಿಸುತ್ತಾರೆ “ ಗೋದಾಮುಗಳಲ್ಲಿ ಬಿದ್ದಿರುವ ರಾಶಿರಾಶಿ ಪದಾರ್ಥಗಳು, ವಸ್ತುಗಳು ಮತ್ತು ಉತ್ಪನ್ನಗಳು, ಮಾರುಕಟ್ಟೆಯ ಆವರಣದಲ್ಲಿ ರಾಶಿಗಟ್ಟಲೆ ಹಣ್ಣುಗಳು, ಅತಿಯಾದ ಜನಸಂದಣಿ, ಅತಿ ಹೆಚ್ಚಿನ ಪಾದಚಾರಿಗಳು, ಅನೇಕ ಮಾದರಿಯ ವಸ್ತುಗಳು ಇವೆಲ್ಲವನ್ನೂ ಕ್ರೋಢೀಕರಿಸಿ, ಪೇರಿಸಿಟ್ಟು, ಹೇರುವುದರಿಂದ ನಗರಗಳು ನಗರಗಳಾಗಿ ಪರಿಗಣಿಸಲ್ಪಡುತ್ತವೆ  ”.

ಈ ನಗರೀಕರಣವನ್ನು ಸಾಕಾರಗೊಳಿಸಲು ಮಾರುಕಟ್ಟೆಗೆ ಕೆಲವು ಮೂಲ ಸೌಕರ್ಯಗಳು ಅನಿವಾರ್ಯವಾಗುತ್ತವೆ. ಅವುಗಳೆಂದರೆ ಅಗಲವಾದ ರಸ್ತೆಗಳು, ನೂತನ ವಾಹನಗಳಿಗೆ ಸಂಚರಿಸಲು ಸುಲಭವಾಗುವಂತಹ ನವಿರಾದ ರಸ್ತೆಗಳು, ವಾಹನದಟ್ಟಣೆಯನ್ನು ತಪ್ಪಿಸಲು ಮೇಲ್ಸೇತುವೆಗಳು ಅಥವಾ ಸುರಂಗಗಳು, ಸದಾ ಚಲನೆಯಲ್ಲಿರುವ ಮಾರುಕಟ್ಟೆ ಗ್ರಾಹಕರ ಸುಲಭ ಸಂಚಾರಕ್ಕಾಗಿ ನೂತನ ಸಾರಿಗೆ ವ್ಯವಸ್ಥೆ, ನೂತನ ಮಧ್ಯಮ ವರ್ಗಗಳಿಗೆ ಮತ್ತು ಹೆಚ್ಚಾಗುತ್ತಲೇ ಹೋಗುವ ಶ್ರೀಮಂತ ವರ್ಗಗಳಿಗೆ ಸುಗಮ ವಹಿವಾಟಿಗೆ ಅನುಕೂಲವಾಗುವಂತಹ ಷಾಪಿಂಗ್‌ ಮಾಲ್‌ಗಳು ಮತ್ತು ಈ ವರ್ಗಗಳು ಬಳಸುವ ನಾಲ್ಕು ಚಕ್ರದ ವಾಹನಗಳು ಇವೆಲ್ಲವೂ ಅಭಿವೃದ್ಧಿಯ ಸಂಕೇತಗಳಾಗಿಬಿಡುತ್ತವೆ. ದೇಶದ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಧರಿಸುವಲ್ಲಿ ಕಾರು ಮಾರುಕಟ್ಟೆಯನ್ನೂ ಒಳಗೊಂಡಂತೆ, ಆಧುನಿಕ ಪರಿಕರಗಳ ಬಳಕೆ, ಸೌಕರ್ಯಗಳು ಮತ್ತು ಉತ್ಪಾದನೆಯೇ ನಿರ್ಣಾಯಕವಾಗುತ್ತವೆ. ಬಂಡವಾಳಶಾಹಿ ಸಮಾಜ ಪ್ರಗತಿ ಹೊಂದುತ್ತಿರುವಂತೆಲ್ಲಾ ಪ್ರವರ್ಧಮಾನಕ್ಕೆ ಬರುವ ಈ ನೂತನ ಶ್ರೀಮಂತ ವರ್ಗಗಳ ಐಷಾರಾಮಿ ಜೀವನಶೈಲಿಗೆ ತಕ್ಕಂತೆ ಹಿತವಲಯಗಳನ್ನು ಸೃಷ್ಟಿಸುವುದು ಸರ್ಕಾರಗಳ ಆದ್ಯತೆಯಾಗಿಬಿಡುತ್ತದೆ.

ಭಾರತದಲ್ಲಿ 1991ರ ನಂತರ ಆರಂಭವಾದ ನಗರೀಕರಣದ ಭರಾಟೆಗೆ ಜಾಗತಿಕ ಬಂಡವಾಳ ವ್ಯವಸ್ಥೆಯ ಈ ಸಂರಚನೆಯೇ ಕಾರಣವಾಗಿದೆ. ಸಣ್ಣ ಪುಟ್ಟ ಊರುಗಳಲ್ಲೂ ರಸ್ತೆ ಅಗಲೀಕರಣದ ಪ್ರಕ್ರಿಯೆ ಆರಂಭವಾದಾಗ ಅಸಂಖ್ಯಾತ ಕುಟುಂಬಗಳು ತಮ್ಮ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸಿ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದ್ದವು. ದಶಕಗಳಿಂದ ತಮ್ಮ ಜೀವನೋಪಾಯಕ್ಕೆ ಆಧಾರವಾಗಿದ್ದ ಅಂಗಡಿ ಮುಗ್ಗಟ್ಟುಗಳನ್ನು ವರ್ತಕರು ಕಳೆದುಕೊಳ್ಳಬೇಕಾಯಿತು. ನಗರಸಭೆ ಅಥವಾ ಪಟ್ಟಣಗಳ ಪುರಸಭೆಯ ಅನುಮತಿ, ಮಂಜೂರಾತಿ ಪಡೆದು ಮನೆಗಳನ್ನು ಕಟ್ಟಿಕೊಂಡಿದ್ದ ಕೆಳಮಧ್ಯಮ ವರ್ಗದ ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳಬೇಕಾಯಿತು. ಲೋಕೋಪಯೋಗಿ ಇಲಾಖೆಯ ಭೂನಕ್ಷೆಯಲ್ಲಿ ಈ ಮನೆಗಳಿದ್ದ ನಿವೇಶನಗಳು ಸಾರ್ವಜನಿಕ ಬಳಕೆಯ ಭೂಮಿಯಾಗಿದ್ದುದರಿಂದ ಮನೆಗಳ ಮಾಲಿಕರು ಪಡೆದಿದ್ದ ಅನುಮತಿ, ಮಂಜೂರಾತಿ ಎಲ್ಲವೂ ಅಸಿಂಧು ಎಂದು ಘೋಷಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಪರಿಹಾರವೂ ದೊರೆಯಲಿಲ್ಲ.

ರಸ್ತೆಯ ಇಕ್ಕೆಲಗಳಲ್ಲಿ ತಮ್ಮ ಸಣ್ಣ ಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಜೀವನ ಸವೆಸುತ್ತಿದ್ದ ಸಾವಿರಾರು ಸಣ್ಣ ವರ್ತಕರು ರಸ್ತೆ ಅಗಲೀಕರಣದ ಪ್ರಕ್ರಿಯೆಯಲ್ಲಿ ತಮ್ಮ ಕಟ್ಟಡಗಳನ್ನು ಕಳೆದುಕೊಂಡು, ಸರ್ಕಾರ ನೀಡುವ ಅಲ್ಪ ಮೊತ್ತದ ಪರಿಹಾರದಿಂದಲೇ ಸಂತೃಪ್ತರಾಗಿ, ಹಲವು ವರ್ಷಗಳ ವ್ಯಾಪಾರ ಕಳೆದುಕೊಳ್ಳಬೇಕಾಯಿತು. ರಸ್ತೆ ಅಗಲೀಕರಣದ ಕಾಮಗಾರಿ ಮುಗಿದ ನಂತರವಷ್ಟೇ ಈ ವ್ಯಾಪಾರಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲಾಯಿತು. ಈ ಪ್ರಕ್ರಿಯೆಯಲ್ಲಿ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿಗಳನ್ನೇ ಅವಲಂಬಿಸಿದ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಬೀದಿ ಪಾಲಾದವು. ಪುರಸಭೆ ಅಥವಾ ನಗರಸಭೆ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿದ್ದ ಸಣ್ಣ ಅಂಗಡಿಗಳ ಮಾಲೀಕರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು, ಜೀವನೋಪಾಯಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾಯಿತು.

ನಗರೀಕರಣ ಪ್ರಕ್ರಿಯೆಯ ಮತ್ತೊಂದು ಪ್ರಧಾನ ಅಂಶವೆಂದರೆ ನಗರ ಸೌಂದರ್ಯವನ್ನು ಕಾಪಾಡುವುದು. ಈ ಸೌಂದರ್ಯೋಪಾಸನೆಯ ಮಾರ್ಗಗಳೂ ಬದಲಾದವು. ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಗಿಡಮರಗಳು ಈ ಸೌಂದರ್ಯ ಪ್ರಜ್ಞೆಯಿಂದ ಹೊರತಾದವು. ಪಾದಚಾರಿಗಳಿಗೂ ಅವಕಾಶವಿಲ್ಲದಂತಹ ರಸ್ತೆಗಳನ್ನು ನಿರ್ಮಿಸಲಾಯಿತು. ನಗರ ಸೌಂದರ್ಯವನ್ನು ನೂತನ ಷಾಪಿಂಗ್‌ ಮಾಲ್‌ಗಳ ಝಗಮಗಿಸುವ ಶ್ರೀಮಂತಿಕೆಯಲ್ಲಿ, ಗಾಜಿನ ಗೂಡುಗಳಲ್ಲಿ, ಶ್ರೀಮಂತಿಕೆಯನ್ನು ವೈಭವೀಕರಿಸುವ ಪುತ್ಥಳಿಗಳಲ್ಲಿ ಮತ್ತು ನವಿರಾದ ನೆಲಹಾಸುಗಳಲ್ಲಿ ಕಾಣುವ ಒಂದು ಪರಂಪರೆ ಆರಂಭವಾಯಿತು. ಈ ನವಿರು ನೆಲಹಾಸುಗಳು ಪಾದಚಾರಿ ರಸ್ತೆಗಳನ್ನು ಅಲಂಕರಿಸಲು ಆರಂಭವಾದಂತೆಲ್ಲಾ ರಸ್ತೆ ಬದಿಯ ವ್ಯಾಪಾರಿಗಳು, ತಲೆಯ ಮೇಲೆ ಸರಕು ಹೊತ್ತು ಮಾರಾಟ ಮಾಡುವ ನಿತ್ಯಾದಾಯ ಅವಲಂಬಿತ ಬಡ ಜನತೆ ತಮ್ಮ ವ್ಯಾಪಾರ ಮಾರ್ಗ ಮತ್ತು ವಲಯಗಳನ್ನೇ ಬದಲಾಯಿಸಬೇಕಾಯಿತು.

ಮತ್ತೊಂದೆಡೆ ನಗರೀಕರಣ ಪ್ರಕ್ರಿಯೆ ಕೇವಲ ನಗರಗಳಿಗೆ ಸೀಮಿತವಾಗದೆ, ಸಣ್ಣಪುಟ್ಟ ಪಟ್ಟಣಗಳಿಗೂ ವ್ಯಾಪಿಸುತ್ತಿರುವಂತೆಯೇ, ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯವನ್ನು ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಕೃಷಿ ವ್ಯವಸ್ಥೆಯ ಕುಸಿತದಿಂದ, ಭೂಮಿಯನ್ನೂ ಕಳೆದುಕೊಂಡು, ನಗರ ಪ್ರದೇಶಗಳಲ್ಲಿ ನಿರ್ಗತಿಕರಂತೆ ಬದುಕಬೇಕಾಯಿತು. ಈ ವಲಸೆ ಶ್ರಮಿಕರೇ ನಗರಗಳ ಸ್ಲಂ ನಿವಾಸಿಗಳಾದರು. ನಗರ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಗೆ ಈ ಸ್ಲಂ ನಿವಾಸಿಗಳನ್ನು ನಗರಗಳ ಪಟ್ಟಣಗಳ ಅಂಚಿಗೆ ನೂಕುವ ಅನಿವಾರ್ಯತೆಯೂ ಎದುರಾಯಿತು. ಬಡಾವಣೆಗಳು ಹೆಚ್ಚಿದಂತೆಲ್ಲಾ, ಕಟ್ಟಡ ಕಾಮಗಾರಿಗಳು ಹೆಚ್ಚಿದಂತೆಲ್ಲಾ ಈ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗತೊಡಗಿತ್ತು. ಹಾಗೆಯೇ ಈ ಕಾರ್ಮಿಕರ ವಸತಿ ಸಮಸ್ಯೆಯೂ ಹೆಚ್ಚಾಗತೊಡಗಿತ್ತು. ಇವರು ತಮ್ಮ ನಿತ್ಯಬದುಕಿಗಾಗಿ ಆಶ್ರಯಿಸಿದ್ದ ಗೂಡುಗಳು, ಗುಡಿಸಲುಗಳನ್ನು ಎತ್ತಂಗಡಿ ಮಾಡಿ, ನಗರಗಳ ಹೊರವಲಯಕ್ಕೆ ರವಾನಿಸುವುದು ನಗರಾಭಿವೃದ್ಧಿ ಪ್ರಾಧಿಕಾರಗಳ ಆದ್ಯತೆಯಾಗಿಬಿಟ್ಟಿತು.

ಹಿತವಲಯದ ಮಧ್ಯಮ ವರ್ಗಗಳಿಗೆ, ಶ್ರೀಮಂತರಿಗೆ ಅಪ್ಯಾಯಮಾನವಾಗಿ ಕಂಡ ನಗರ ಸೌಂದರ್ಯೀಕರಣ ಮತ್ತು  ರಸ್ತೆ ಅಗಲೀಕರಣ ಪ್ರಕ್ರಿಯೆ ಬಡ ಜನತೆಗೆ, ಸೀಮಿತ ಆದಾಯದ ಕೆಳಮಧ್ಯಮ ವರ್ಗಳಿಗೆ ಮಸಣಸದೃಶವಾಗಿ ಕಂಡಿತ್ತು. ದಶಕಗಳ ಕಾಲ ತಮ್ಮ ಜೀವನ ನಿರ್ವಹಣೆಗಾಗಿ ಶ್ರಮಜೀವಿ ವರ್ಗಗಳು ಆಶ್ರಯಿಸಿದ್ದ ಗುಡಿಸಲುಗಳನ್ನು ಎತ್ತಂಗಡಿ ಮಾಡಿ, ಆ ಭೂಪ್ರದೇಶವನ್ನು ಶ್ರೀಮಂತ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಪರಭಾರೆ ಮಾಡಿ, “ ನಗರ ಸೌಂದರ್ಯ”ವನ್ನು ಹೆಚ್ಚಿಸುವ ಆಧುನಿಕತೆಯ ಒಂದು ಆಯಾಮವನ್ನು ಬಹುತೇಕ ಎಲ್ಲ ನಗರಗಳಲ್ಲೂ ಕಾಣಬಹುದಿತ್ತು. ಕೊಳೆಗೇರಿ ನಿವಾಸಿಗಳ ಉಚ್ಚಾಟನೆಗಾಗಿಯೇ “ ಸ್ಲಂ ಕ್ಲಿಯರೆನ್ಸ್‌ ಬೋರ್ಡ್‌ ” , ಅಂದರೆ ಕೊಳೆಗೇರಿಗಳನ್ನು ನಿರ್ಮೂಲ ಮಾಡುವ ಮಂಡಲಿಗಳನ್ನು ಅಧಿಕೃತವಾಗಿಯೇ ಸ್ಥಾಪಿಸಲಾಯಿತು. ತಮ್ಮ ಮೂಲ ಗ್ರಾಮೀಣ ನೆಲೆಯನ್ನು ಕಳೆದುಕೊಂಡು ಬದುಕು ಕಟ್ಟಿಕೊಳ್ಳಲು ನಗರವಾಸಿಗಳಾದ ಶ್ರಮಜೀವಿಗಳು ಇಲ್ಲಿಯೂ ಸಹ “ ಹೊರಗಿನವರಾಗಿಯೇ ” ಪ್ರತ್ಯೇಕೀಕರಣಕ್ಕೊಳಪಡುವಂತಾಯಿತು. ಇವರಲ್ಲಿ ಬಹುಸಂಖ್ಯೆಯ ಜನರು ತಳಸಮುದಾಯಕ್ಕೆ ಸೇರಿದವರು ಎನ್ನುವುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.

ಇದನ್ನೂ ಓದಿ : ಅಕ್ರಮ ಕಟ್ಟಡಗಳ ನೆಲಸಮ: ಸುಪ್ರೀಂ ಆದೇಶ ಉಲ್ಲಂಘನೆಗೆ ಬೃಂದಾ ಕಾರಟ್‌ ಆಕ್ರೋಶ

ಈ ಹಂತದಲ್ಲಿ ನಮ್ಮ ನಡುವೆ ಅವತರಿಸಿದ ಒಂದು ಯಂತ್ರವೇ ಈ ʼ ಬುಲ್ಡೋಜರ್‌ ʼ. ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಸೂರ್ಯರಥದಂತೆ ಚಲಿಸಲಾರಂಭಿಸಿದ ಈ ಬುಲ್ಡೋಜರ್‌ಗಳು ಸಮಾಜದ ಒಂದು ವರ್ಗಕ್ಕೆ ವಿಮೋಚಕನಂತೆ ಕಂಡರೆ ಮತ್ತೊಂದು ವರ್ಗಕ್ಕೆ ವಿನಾಶನಕಂತೆ ಕಂಡಿತ್ತು. 1980-90ರ ದಶಕದಲ್ಲಿ ಅನೇಕ ಚಲನಚಿತ್ರಗಳಲ್ಲಿ ಇದೇ ಪ್ರಧಾನ ಕಥಾವಸ್ತುವಾಗಿದ್ದುದನ್ನು ಸ್ಮರಿಸಬಹುದು. ನಮ್ಮ ಊರುಗಳು, ಪಟ್ಟಣಗಳು, ನಗರಗಳು ಸುಂದರವಾಗಿ ಕಾಣಬೇಕೆಂದು ಬಯಸಿದ ಹಿತವಲಯದ ಮನಸುಗಳಿಗೆ ಈ ಬುಲ್ಡೋಜರ್‌ ಸಂಸ್ಕೃತಿಯ ಹಿಂದಿನ ಕ್ರೌರ್ಯ ಅರ್ಥವಾಗಲೇ ಇಲ್ಲ, ಇಂದಿಗೂ ಅರ್ಥವಾಗಿಲ್ಲ ಎನ್ನುವುದು ದುರಂತ. ಏಕೆಂದರೆ ಈ ಬುಲ್ಡೋಜರ್‌ಗಳು ಕೇವಲ ಬಂಡವಾಳ ವ್ಯವಸ್ಥೆಯ ಅಭಿವೃದ್ಧಿ ವಾಹಕವಾಗಿ ಕಾರ್ಯನಿರ್ವಹಿಸಲಿಲ್ಲ. ಬದಲಾಗಿ, ಆಳುವ ವರ್ಗಗಳ ಕೋಮು ದ್ವೇಷಕ್ಕೆ, ಮತದ್ವೇಷಕ್ಕೆ ಮತ್ತು ಸಮುದಾಯದ ಮೇಲಿನ ದೌರ್ಜನ್ಯಗಳಿಗೆ ಬುಲ್ಡೋಜರ್‌ ಒಂದು ಪರಿಕರವಾಗಿ ಪರಿಣಮಿಸಿತ್ತು.

ದೇಶದ ಸುಶಿಕ್ಷಿತ, ಹಿತವಲಯದ, ಮಧ್ಯಮ ವರ್ಗದ ಒಂದು ಬೃಹತ್‌ ಜನಸಂಖ್ಯೆ ಈ ಬುಲ್ಡೋಜರ್‌ ಸಂಸ್ಕೃತಿಯನ್ನು ತೆರೆದ ತೋಳುಗಳಿಂದ ಅಪ್ಪಿಕೊಳ್ಳಲಾರಂಭಿಸಿತು. ತಾವು ಸಂಚರಿಸುವ ಅತ್ಯಾಧುನಿಕ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ನುಣುಪಾದ ರಸ್ತೆಗಳಲ್ಲಿ ಸಲೀಸಾಗಿ ಚಲಿಸುವುದರಿಂದ ಸಂತೃಪ್ತರಾದ ಈ ವರ್ಗಗಳಿಗೆ ತಮ್ಮ ನಡುವೆಯೇ ಬೆಳೆದುಬಂದ ಅನೇಕಾನೇಕ ಬಡ ಜೀವಗಳು ರಸ್ತೆಯ ಇಕ್ಕೆಲಗಳಿಂದ ಉಚ್ಚಾಟಿತರಾಗಿ, ಮರೆಯಾಗಿರುವುದು ಗೋಚರಿಸಲೇ ಇಲ್ಲ. ಇವರ ಜಾಗವನ್ನು ಅತ್ಯಾಧುನಿಕ ಬೇಕಾದ ಪದಾರ್ಥವನ್ನು ಬುಟ್ಟಿಗೆ ತುಂಬಿಸಿಕೊಳ್ಳಬಹುದಾದ ಷಾಪಿಂಗ್‌ ಮಾಲ್‌ಗಳು ಆಕ್ರಮಿಸಿದ್ದನ್ನು ಸಂಭ್ರಮಿಸಿದ ಈ ವರ್ಗಗಳಿಗೆ, ತಮಗೆ ಬಾಲ್ಯದಲ್ಲಿ ಬಟಾಣಿ, ಪುಟಾಣಿ, ಪೆಪ್ಪರ್‌ ಮಿಂಟ್‌ ನೀಡುತ್ತಾ ಮಾತನಾಡಿಸಿ ಪದಾರ್ಥಗಳನ್ನು ಕಟ್ಟಿ ಕೊಡುತ್ತಿದ್ದ ಗತಕಾಲದ ಕಿರಾಣಿ ವರ್ತಕರು, ಪೆಟ್ಟಿಗೆ ಅಂಗಡಿಗಳವರು ಬೌದ್ಧಿಕವಾಗಿಯೂ ಗೋಚರಿಸಲಿಲ್ಲ.

ಬುಲ್ಡೋಜರ್‌ ಸೃಷ್ಟಿಸಿದ ಈ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ರೌರ್ಯದ ವಿಕೃತ ಸ್ವರೂಪವನ್ನು ಇಂದು ದೇಶ ರಾಜಧಾನಿಯ ಜಹಂಗೀರ್‌ಪುರದಲ್ಲಿ ಕಂಡಿದೆ. ಗಲಭೆ ಸೃಷ್ಟಿಸುವವರಿಂದಲೇ ಸಾರ್ವಜನಿಕ ಆಸ್ತಿಪಾಸ್ತಿಯ ನಷ್ಟಗಳನ್ನು ವಸೂಲಿ ಮಾಡುವ ಒಂದು ಆಧುನಿಕ ಕ್ರೂರ ಚಿಂತನೆಗೆ ಅಧಿಕೃತತೆಯನ್ನು ನೀಡುತ್ತಿರುವ ಭಾರತದ ಆಡಳಿತ ವ್ಯವಸ್ಥೆಗೆ ಬುಲ್ಡೋಜರ್‌ ಒಂದು ದ್ವೇಷಾಸ್ತ್ರವಾಗಿ, ಕೋಮುವಾದಿ ಕಾರ್ಯಾಚರಣೆಯ ಸೂರ್ಯರಥವಾಗಿ, ಮತದ್ವೇಷವನ್ನು ತೀರಿಸಿಕೊಳ್ಳುವ ಸಾಧನವಾಗಿ ಬಳಕೆಯಾಗುತ್ತಿದೆ. ತಾನು ಕೆಡವುವ ಆಸ್ತಿ, ಕಟ್ಟಡ ಅಥವಾ ಗುಡಿಸಲು ಅಕ್ರಮವೋ ಸಕ್ರಮವೋ ಎಂದು ಬುಲ್ಡೋಜರ್‌ಗೆ ತಿಳಿಯುವುದಿಲ್ಲ. ಅದು ಒಂದು ಯಂತ್ರ ಮಾತ್ರ.. ಅದನ್ನು ಚಲಾಯಿಸುವ ಚಾಲಕನೂ ಸಹ ಎಲ್ಲೋ ಒಂದು ಕಡೆ ತನ್ನ ನೆಲೆ ಕಳೆದುಕೊಂಡವನೇ ಆಗಿರುತ್ತಾನೆ. ಆದರೆ ಈ ಬುಲ್ಡೋಜರ್‌ ಮೂಲಕ ಧ್ವಂಸ ಕಾರ್ಯಾಚರಣೆ ನಡೆಸುವ ಆಡಳಿತ ವ್ಯವಸ್ಥೆಗೆ ಅಕ್ರಮ ಸಕ್ರಮಗಳ ಪರಿವೆ ಇರುತ್ತದೆ. ಬಡಜನತೆಯ ನೋವು, ವೇದನೆ ಕಾಣುವಂತಿರುತ್ತದೆ.

ಈ ಬಡಜನತೆಯ ನೋವಿಗೆ, ವೇದನೆಗೆ, ಸಂಕಷ್ಟಗಳಿಗೆ ಕುರುಡಾಗುವುದರ ಮೂಲಕವೇ ಬಂಡವಾಳಶಾಹಿ ವ್ಯವಸ್ಥೆ ತನ್ನ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ ಎನ್ನುವುದನ್ನು ನಿರೂಪಿಸಲು ಬುಲ್ಡೋಜರ್‌ ಬಳಕೆಯಾಗುತ್ತದೆ. ನಗರ ಸೌಂದರ್ಯೋಪಾಸನೆಯ ಭ್ರಮೆಗೊಳಗಾಗಿ ಮೂರು ದಶಕಗಳ ಹಿಂದೆಯೇ ಬುಲ್ಡೋಜರ್‌ ಸಂಸ್ಕೃತಿಯನ್ನು ಸಂಭ್ರಮಿಸಿದ ಹಿತವಲಯದ ಬೌದ್ಧಿಕ ವರ್ಗ ಒಮ್ಮೆಯಾದರೂ ನಡೆದುಬಂದ ಹಾದಿಯನ್ನು ಹಿಂದಿರುಗಿ ನೋಡುವಂತಾದರೆ, ಬುಲ್ಡೋಜರ್‌ ಸಂಸ್ಕೃತಿಯ ಕ್ರೌರ್ಯವನ್ನು ಕಾಣಲು ಸಾಧ್ಯ. ಇಂದು ಬುಲ್ಡೋಜರ್‌ ನಮ್ಮ ನಡುವೆ ದೈತ್ಯಾಕಾರದಲ್ಲಿ ನಿಂತಿದೆ. ಒಬ್ಬ ಬೃಂದಾ ಕಾರಟ್‌ ಒಂದು ರೂಪಕವಾಗಿ ಕಾಣುತ್ತಾರೆ.

Donate Janashakthi Media

Leave a Reply

Your email address will not be published. Required fields are marked *