ನರೇಗಾ ಯೋಜನೆಯಿಂದ 6 ತಿಂಗಳಲ್ಲಿ 84 ಲಕ್ಷ ಜನರನ್ನು ತೆಗೆದುಹಾಕಲಾಗಿದೆ!

-ಸಿ.ಸಿದ್ದಯ್ಯ

*ಆರು ತಿಂಗಳಲ್ಲಿ 84.8 ಲಕ್ಷ ಜನರನ್ನು ತೆಗೆದುಹಾಕಲಾಗಿದೆ.
*2022-23 ಮತ್ತು 2023-24 ರ ಆರ್ಥಿಕ ವರ್ಷಗಳಲ್ಲಿ ಒಟ್ಟು 8 ಕೋಟಿ ಜನರನ್ನು ತೆಗೆದುಹಾಕಲಾಗಿದೆ.
*ವೈಯಕ್ತಿಕ ಕೆಲಸದ ದಿನಗಳನ್ನು ಕಡಿಮೆ ಮಾಡಲಾಗಿದೆ
*ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ಹೆಚ್ಚಿನ ಸಮಸ್ಯೆಗಳು
*ಲಿಬ್  ಟೆಕ್ ವರದಿಯಿಂದ ಬಹಿರಂಗ
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉದ್ಯೋಗ ಖಾತ್ರಿ ಯೋಜನೆ ಮೇಲೆ ದಾಳಿ ನಡೆಯುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಮತ್ತು ಮುಖ ದೃಢೀಕರಣ ಹಾಜರಾತಿಯಂತಹ ಹೊಸ ವಿಧಾನಗಳನ್ನು ಪರಿಚಯಿಸಲಾಗುತ್ತಿದೆ. ಇಂತಹ ವಿಧಾನಗಳ ಮೂಲಕ ಬಡವರನ್ನು ಉದ್ಯೋಗದ ಖಾತರಿಯಿಂದ ಹೊರಗಿಡಲಾಗುತ್ತಿದೆ. ಕಡ್ಡಾಯ ಆಧಾರ್ ಸೀಡಿಂಗ್ ಅನ್ನು ಅನುಸರಿಸದ ಕಾರಣ 6.7 ಕೋಟಿ ಕಾರ್ಮಿಕರು ಗ್ರಾಮೀಣ ಉದ್ಯೋಗ ಯೋಜನೆಯಡಿ ಕೆಲಸ ಪಡೆಯಲು ಅನರ್ಹರಾಗಿದ್ದಾರೆ ಎಂದು ಡೇಟಾ ತೋರಿಸುತ್ತದೆ. ದೇಶದ ಒಟ್ಟು 24.6 ಕೋಟಿ ನೋಂದಾಯಿತ ಕಾರ್ಮಿಕರಲ್ಲಿ, 2024ರ ಏಪ್ರಿಲ್‌ ನಿಂದ ಸೆಪ್ಟೆಂಬರ್‌ ವರೆಗಿನ 6 ತಿಂಗಳ ಅವಧಿಯಲ್ಲಿ 84 ಲಕ್ಷದ 80 ಸಾವಿರ ಕಾರ್ಮಿಕರನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎಂಜಿಎನ್‌ಆರ್‌ಇಜಿಎಸ್) ರಿಜಿಸ್ಟರ್‌ನಿಂದ ತೆಗೆದುಹಾಕಲಾಗಿದೆ.

‘ಲಿಬ್ ಟೆಕ್’ ಇಂಡಿಯಾ (LibTech India-ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ವಿಜ್ಞಾನಿಗಳ ಸಂಘಟನೆ) ಶುಕ್ರವಾರ (ಅಕ್ಟೋಬರ್ 25, 2024) ಬಿಡುಗಡೆ ಮಾಡಿದ  ಸಮೀಕ್ಷೆಯ ವರದಿಯಿಂದ ಈ ಮಾಹಿತಿ ಬಹಿರಂಗವಾಗಿದೆ. “ಈ ರೀತಿ ನಡೆಯುತ್ತಿರುವ ಪ್ರವೃತ್ತಿಯು ಕಳೆದ ಎರಡೂವರೆ ವರ್ಷಗಳಲ್ಲಿ ಅಂದರೆ, ಏಪ್ರಿಲ್ 2022 ರಿಂದ ಸೆಪ್ಟೆಂಬರ್ 2024 ರವರೆಗೆ ಹೊರಹಾಕಲ್ಪಟ್ಟ ಎಂಟು ಕೋಟಿ ಜನರಲ್ಲಿ ನಿಜವಾದ ಬಡವರ ಭವಿಷ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ” ಎಂದು ವರದಿ ಹೇಳಿದೆ. ವರದಿಯು ಸಚಿವಾಲಯದ ವೆಬ್ ಸೈಟ್ ನಿಂದ ಡೇಟಾವನ್ನು ಪಡೆದುಕೊಂಡಿದೆ.

ಕಳೆದ ಆರು ತಿಂಗಳಲ್ಲಿ 45.4 ಲಕ್ಷ ಹೊಸ ಕಾರ್ಮಿಕರು ಸೇರ್ಪಡೆಗೊಂಡಿದ್ದಾರೆ, ಅಂದರೆ, 84.80 ಲಕ್ಷ ಕಾರ್ಮಿಕರ ಜಾಬ್ ಕಾರ್ಡ್ ಗಳನ್ನು ತೆಗೆದುಹಾಕಿದ ನಂತರವೂ ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ 39.3 ಲಕ್ಷ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ತಮಿಳುನಾಡು (ಶೇ.14.7) ಮತ್ತು ಛತ್ತೀಸ್‌ಗಢ (ಶೇ.14.6) ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಯೋಜನೆಯಿಂದ ತೆಗೆದುಹಾಕಿರುವ ರಾಜ್ಯಗಳಾಗಿವೆ. ಹಲವಾರು ವರ್ಷಗಳಿಂದ ವಜಾಗೊಳಿಸುವಿಕೆಗಳು ನಡೆಯುತ್ತಿವೆ. 2022-23 ಮತ್ತು 2023-24 ರ ಆರ್ಥಿಕ ವರ್ಷಗಳಲ್ಲಿ ಒಟ್ಟು 8 ಕೋಟಿ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂದು ಲಿಬ್  ಟೆಕ್  ವರದಿ ಹೇಳಿದೆ.

ಇದನ್ನೂ ಓದಿ: ಪೆಟ್ರೋಲ್ ತುಂಬಿಸುವ ವೇಳೆ ಬೆಂಕಿ ಹಚ್ಚಿದ ದುಷ್ಕರ್ಮಿ

ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳವರೆಗೆ ಉದ್ಯೋಗವನ್ನು ಒದಗಿಸುವ ಈ ಕಾಯಿದೆಯಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಜಾಬ್ ಕಾರ್ಡ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಹಿಂತೆಗೆದುಕೊಳ್ಳುತ್ತಿವೆ. ನಕಲಿ ಕಾರ್ಡ್‌ಗಳು, ಸಾವುಗಳು, ಕಾರ್ಡ್ ಹೊಂದಿರುವವರು ಯೋಜನೆಯಡಿ ಕೆಲಸ ಮಾಡಲು ಇಷ್ಟವಿಲ್ಲದಿರುವುದು ಇತ್ಯಾದಿಗಳ ಕಾರಣಗಳಿಂದಾಗಿ ಕಾರ್ಡ್  ಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಇದರ ಜೊತೆಗೆ ಇದು ಹೆಚ್ಚುವರಿಯಾಗಿದೆ. ಲಿಬ್‌ ಟೆಕ್ ಇಂಡಿಯಾ ನಡೆಸಿದ ಅಧ್ಯಯನದಲ್ಲಿ ಬಹಳಷ್ಟು ಅಳಿಸುವಿಕೆಗಳು ತಪ್ಪಾಗಿವೆ ಎಂಬುದನ್ನು ಪತ್ತೆಮಾಡಿದೆ.

ಕಡಿಮೆಯಾಗುತ್ತಿರುವ ಕೆಲಸದ ದಿನಗಳು

ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕೆಲಸದ ದಿನಗಳು ಕಡಿಮೆಯಾಗುತ್ತಿವೆ ಎಂದು ಸಂಸ್ಥೆ ಹೇಳಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಒದಗಿಸಲಾದ ಕೆಲಸದ ದಿನಗಳ ಸರಾಸರಿ ಸಂಖ್ಯೆಯಲ್ಲಿ (ಒಂದು ಹಣಕಾಸು ವರ್ಷದಲ್ಲಿ ಯೋಜನೆಯಡಿ ನೋಂದಾಯಿಸಲಾದ ಪ್ರತಿ ವ್ಯಕ್ತಿಗೆ ಒಟ್ಟು ಕೆಲಸದ ದಿನಗಳು) ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಅದು ಹೇಳಿದೆ.

ಈ ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 154 ಕೋಟಿ ವೈಯಕ್ತಿಕ ಕೆಲಸದ ದಿನಗಳಿಗೆ ಗಣನೀಯವಾಗಿ ಕುಸಿದಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಸಂಖ್ಯೆ 184 ಕೋಟಿ ವೈಯಕ್ತಿಕ ಕೆಲಸದ ದಿನಗಳಿದ್ದವು. 2023-24ರ ಅವಧಿಗೆ ಹೋಲಿಸಿದರೆ, 2024-25ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಆರು ರಾಜ್ಯಗಳು ಕೆಲಸದ ದಿನಗಳಲ್ಲಿ ಹೆಚ್ಚಳವನ್ನು ಕಂಡಿವೆ, ಆದರೆ 14 ರಾಜ್ಯಗಳು ವೈಯಕ್ತಿಕ ಕೆಲಸದ ದಿನಗಳ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿವೆ.

“ಈ ಕುಸಿತವು ಕುಗ್ಗುತ್ತಿರುವ ಭಾಗವಹಿಸುವಿಕೆಯ ನೆಲೆಯನ್ನು ಮಾತ್ರವಲ್ಲದೆ ಹೆಚ್ಚು ಅಗತ್ಯವಿರುವವರಿಗೆ ಉದ್ಯೋಗಾವಕಾಶಗಳ ವಿತರಣೆಯಲ್ಲಿ ಸಂಭಾವ್ಯ ಕೊರತೆಯನ್ನು ಸೂಚಿಸುತ್ತದೆ. ನಿರಂತರ ಅನುಷ್ಠಾನ ಸವಾಲುಗಳು, ನಿರ್ದಿಷ್ಟವಾಗಿ ಆಧಾರ್ ಆಧಾರಿತ ಪಾವತಿಗಳು ಮತ್ತು ABPS ಗಾಗಿ ಕೆಲಸಗಾರರ ಅರ್ಹತೆ, ಈ ಸಮಸ್ಯೆಗಳನ್ನು ಉಲ್ಬಣಗೊಳಿಸುವುದನ್ನು ಮುಂದುವರೆಸಿದೆ” ಎಂದು ವರದಿಯು ಗಮನಸೆಳೆದಿದೆ.

ಕಡ್ಡಾಯ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ

ಕಡ್ಡಾಯ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಕಾರ್ಮಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಕಾರ್ಮಿಕರ ಜಾಬ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಬೇಕು. ಆಧಾರ್ ಮತ್ತು ಜಾಬ್ ಕಾರ್ಡ್  ನಲ್ಲಿರುವ ಹೆಸರು ಸರಿಯಾಗಿ ಹೊಂದಿಕೆಯಾಗಬೇಕು. ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಮತ್ತು NPCI ನಲ್ಲಿ ನೋಂದಾಯಿಸಿಕೊಳ್ಳಬೇಕು. ಇವುಗಳಲ್ಲಿ ಯಾವುದಾದರೂ ಸಾಧ್ಯವಾಗದಿದ್ದಲ್ಲಿ, ಕಾರ್ಮಿಕರು ABPS ಗೆ ಅನರ್ಹರಾಗುತ್ತಾರೆ, ಈ ಕಾರಣದಿಂದಾಗಿಯೇ ತಾವು ಅನರ್ಹರಾಗಿದ್ದೇವೆ ಎಂದು 27.4 ಪ್ರತಿಶತದಷ್ಟು ಕಾರ್ಮಿಕರು ಹೇಳಿಕೊಳ್ಳುತ್ತಾರೆ ಎಂದು ಲಿಬ್  ಟೆಕ್ ವಿವರಿಸಿದೆ. ಕಡ್ಡಾಯ ಆಧಾರ್ ಸೀಡಿಂಗ್ ಅನ್ನು ಅನುಸರಿಸದ ಕಾರಣ ದೇಶಾದ್ಯಂತ 6.7 ಕೋಟಿಗೂ ಹೆಚ್ಚು ಕಾರ್ಮಿಕರು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಪಡೆಯಲು ಅನರ್ಹರಾಗಿದ್ದಾರೆ ಎಂದು ಡೇಟಾ ತೋರಿಸುತ್ತದೆ.

ಇದನ್ನೂ ಓದಿ: ಜಾಗತಿಕ ಹಸಿವಿನ ಸೂಚ್ಯಂಕ: 127 ದೇಶಗಳಲ್ಲಿ 105ನೇ ಸ್ಥಾನದಲ್ಲಿ ಭಾರತ

ಕೇಂದ್ರವು ಜನವರಿ 2023 ರಲ್ಲಿ ರಾಷ್ಟ್ರವ್ಯಾಪಿ ABPS ಅನುಷ್ಠಾನವನ್ನು ಕಡ್ಡಾಯಗೊಳಿಸಿತ್ತು. ಆದಾಗ್ಯೂ, ಸಾರ್ವಜನಿಕ ಆಕ್ರೋಶ ಮತ್ತು ಕಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ, ABPS ಅನುಷ್ಠಾನದ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ಆದಾಗ್ಯೂ, ಜನವರಿ 1, 2024 ರಿಂದ ABPS ಅನ್ನು ಕಡ್ಡಾಯಗೊಳಿಸಲಾಗಿದೆ.

ಅಂತಿಮ ಗಡುವುಗಳ ಹಲವಾರು ವಿಸ್ತರಣೆಗಳ ಹೊರತಾಗಿಯೂ, ಎಲ್ಲಾ ನರೇಗಾ ಕೆಲಸಗಾರರಲ್ಲಿ ಶೇ. 27.4 ಮತ್ತು ಸಕ್ರಿಯ ಕೆಲಸಗಾರರಲ್ಲಿ ಶೇ. 4.2ರಷ್ಟು ಕಾರ್ಮಿಕರು ಪ್ರಸ್ತುತ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಪ್ರಯೋಜನಗಳಿಗೆ ಅನರ್ಹರಾಗಿದ್ದಾರೆ. ABPS ಅನುಸರಣೆಯಲ್ಲಿ ಗಮನಾರ್ಹ ರಾಜ್ಯ ಮಟ್ಟದ ಅಸಮಾನತೆಗಳನ್ನು ಈ ವರದಿ ಬಹಿರಂಗಪಡಿಸಿದೆ. ಅಸ್ಸಾಂನಲ್ಲಿ ಎಬಿಪಿಎಸ್  ಗೆ ಅನರ್ಹವಾಗಿರುವ ಸಕ್ರಿಯ ಕಾರ್ಯಕರ್ತರ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದರೆ, ಕೇರಳವು ಕಡಿಮೆ ಪ್ರಮಾಣವನ್ನು ಹೊಂದಿದೆ.

2005 ರಲ್ಲಿ, ಅಂದಿನ ಯುಪಿಎ-1ರ ಸರ್ಕಾರವು (60 ಸಂಸದರಿದ್ದ ಎಡಪಕ್ಷಗಳು ‘ಸಾಮಾನ್ಯ ಕನಿಷ್ಟ ಕಾರ್ಯಕ್ರಮ’ದ ಆಧಾರದ ಮೇಲೆ ಆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿದ್ದವು.) ಗ್ರಾಮೀಣ ಭಾರತದ ಕೋಟಿಗಟ್ಟಲೆ ಜನರಿಗೆ ‘ಕೆಲಸದ ಹಕ್ಕು’ ಖಾತ್ರಿಪಡಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಜಾರಿಗೆ ತಂದಿತು.

ಹಳ್ಳಿಗಳಿಂದ ನಗರಗಳತ್ತ ಹೆಚ್ಚುತ್ತಿರುವ ವಲಸೆ

ಕಳೆದ ವರ್ಷದ ವರದಿಯಲ್ಲಿ, 2022-23 ಮತ್ತು 2023-24 ರ ಹಣಕಾಸು ವರ್ಷಗಳಲ್ಲಿ 8 ಕೋಟಿ ಜನರನ್ನು 100 ದಿನಗಳ ಉದ್ಯೋಗ ಖಾತರಿ ಯೋಜನೆಯ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಲಿಬ್ ಟೆಕ್ ಗಮನಸೆಳೆದಿದೆ. ಅಲ್ಲದೆ, ಆಂಧ್ರಪ್ರದೇಶದಲ್ಲಿ ಲಿಬ್  ಟೆಕ್ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು 15 ಪ್ರತಿಶತದಷ್ಟು ಅಳಿಸುವಿಕೆಗಳು ತಪ್ಪಾಗಿವೆ ಮತ್ತು ಈ ಅಳಿಸುವಿಕೆಗಳು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ ಹೊಂದಿಕೆಯಾಗುತ್ತವೆ ಎಂದು ಕಂಡುಕೊಂಡಿದೆ.

ಶೇ. 27.4 ರಷ್ಟು ನೋಂದಾಯಿತ ಕಾರ್ಮಿಕರು (6.7 ಕೋಟಿ ಕಾರ್ಮಿಕರು) ಮತ್ತು ಶೇ. 4.2 ಸಕ್ರಿಯ ಕೆಲಸಗಾರರು (54 ಲಕ್ಷ ಕಾರ್ಮಿಕರು) ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ (ABPS) ಫಲಾನುಭವಿಗಳಲ್ಲ. ತಂತ್ರಜ್ಞಾನ ಮತ್ತು ಆಧಾರ್ ಬಳಸುವ ನೆಪದಲ್ಲಿ ಮೋದಿ ಸರ್ಕಾರ 100 ದಿನದ ನರೇಗಾ ಯೋಜನೆಯಿಂದ ಕೋಟ್ಯಾಂತರ ಜನರನ್ನು ಹೊರಹಾಕುತ್ತಿದೆ. ಇದರಿಂದಾಗಿ, ಗ್ರಾಮೀಣ ಕಾರ್ಮಿಕರು ಉದ್ಯೋಗ ಸಿಗುವ ಭರವಸೆ ಕಳೆದುಕೊಂಡಿದ್ದು, ಹಳ್ಳಿಗಳಿಂದ ನಗರಗಳತ್ತ ವಲಸೆಯೂ ಹೆಚ್ಚಿದೆ.

ಇದನ್ನೂ ನೋಡಿ: ಮರಕುಂಬಿ ಪ್ರಕರಣ| ಚಾರಿತ್ರಿಕ ತೀರ್ಪು – ದಲಿತರಿಗೆ ದಕ್ಕಿದ ನ್ಯಾಯ Janashakthi Media

Donate Janashakthi Media

Leave a Reply

Your email address will not be published. Required fields are marked *