ಆರೋಗ್ಯ ಮತ್ತು ಚಿಕಿತ್ಸೆಗಾಗಿ ಭವಿಷ್ಯವಾಣಿಯನ್ನು ನಂಬುವ ಮೌಢ್ಯತೆಯನ್ನು ಹೊಗಲಾಡಿಸಬೇಕಿದೆ – ಡಾ. ವಸುಂಧರಾ ಭೂಪತಿ

ವಿಚಾರ, ಸಾಹಿತ್ಯ, ಕಥೆ, ಕವನ, ವೈದ್ಯ ಲೋಕ ಇತ್ಯಾದಿ ವಿವಿಧ ಪ್ರಕಾರಗಳನ್ನು ಒಳಗೊಂಡಿರುವ ಎಂಟು ಮಹತ್ವದ ಕೃತಿಗಳು ಅಕ್ಟೋಬರ್‌ 29ರಂದು ಬಿಡುಗಡೆಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಸಭಾಂಗಣದಲ್ಲಿ ನಡೆದ ಪುಸ್ತಕಗಳ ಗುಚ್ಚ ಬಿಡುಗಡೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅವರು ಬಿಡುಗಡೆಗೊಳಿಸಿದರು.

ಕ್ರಿಯಾ ಪ್ರಕಾಶನ ಹಾಗೂ ಚಿಂತನ ಪ್ರಕಾಶನದಿಂದ ಪ್ರಕಟಗೊಂಡಿರುವ ಡಾ.ಕೆ.ಷರೀಫಾ ಅವರ ‘ಬಯಲಿಗೂ ಬಾಗಿಲು’ (ಕಥಾ ಸಂಕಲನ) ಮತ್ತು ನಿರೋಳಗಣ ಕಿಚ್ಚು’, ಪ್ರಭಾಕರನ್ ಕೆ ಅನುವಾದಿಸಿರುವ ಆರ್‌.ವಿ.ಆಚಾರಿ ಅವರ ‘ವಾಸ್ತುಶಾಸ್ತ್ರ: ತಿರುಳೋ, ತಿಳಿಗೇಡಿತನವೋ’, ಡಾ.ಕೆ.ಸುಶೀಲಾ ಅವರ ‘ಆಧುನಿಕ ಕಾಯಿಲೆಗಳ ವಿಸ್ಮಯ ಲೋಕ’, ‘ವೈದ್ಯೆಯೊಬ್ಬರ ನೆನಪಿನಂಗಳಿಂದ’, ‘ಮಾಸ್ಕೊದ ಆ ದಿನಗಳು’, ಚಂದ್ರಕಾಂತ ಪೋಕಳೆ ಅನುವಾದಿಸಿರುವ ಇರಾವತಿ ಕರ್ವೆ ಅವರ ‘ಸಾರ್ಥಕತೆ’, ಚಂಪಾ ಜೈಪ್ರಕಾಶ್ ಅವರ’ ಸುಬ್ಬರಾಯನ ಕುಂಟೆ’ (ಕಾದಂಬರಿ) ಬಿಡುಗಡೆಗೊಂಡಿತು.

ಕಾರ್ಯಕ್ರಮದಲ್ಲಿ ಡಾ. ಎಚ್‌. ಎಸ್.‌ ಸತ್ಯನಾರಾಯಣ, ಟಿ. ಸುರೇಂದ್ರ ರಾವ್‌, ಜಹಿದಾ ಶಿರೀನ್‌, ಡಾ. ವಸುಂಧರಾ ಭೂಪತಿ, ಡಾ. ಎಚ್‌.ಜಿ. ಜಯಲಕ್ಷ್ಮಿ ಎಲ್ಲಾ ಎಂಟು ಪುಸ್ತಕಗಳಲ್ಲಿ ಇರುವ ವಿಚಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಡಾ. ಎಚ್‌.ಎಸ್.‌ ಸತ್ಯನಾರಾಯಣ

ಡಾ. ಎಚ್‌.ಎಸ್.‌ ಸತ್ಯನಾರಾಯಣ ಅವರು, ಡಾ.ಕೆ.ಷರೀಫಾ ಅವರ ‘ಬಯಲಿಗೂ ಬಾಗಿಲು’ (ಕಥಾ ಸಂಕಲನ) ಮತ್ತು ನಿರೋಳಗಣ ಕಿಚ್ಚು’ ಪುಸ್ತಕವನ್ನು ಪರಿಚಯಿಸಿದರು. ಶರೀಫಾ ಅವರು, ಬಂಡಾಯ ಚಳುವಳಿಯ ಲೇಖಕಿಯಾಗಿ ತಮ್ಮ ಇಡೀ ಬರಹಗಳಲ್ಲಿ ಬಂಡಾಯದ ಮನೋಧರ್ಮವನ್ನು ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳ ಬದುಕು ಭೀಕರತೆಯ ಹಿಂಸಾತ್ಮಕದಿಂದಾಗಿ ಕೂಡಿದ್ದು, ಶರೀಫಾ ಅವರ ಬಯಲಿಗೂ ಬಾಗಿಲು ಕಥಾ ಸಂಕಲನದಲ್ಲಿ ಚಿತ್ರಿತವಾಗಿದೆ. ಎಲ್ಲೂ ಘಟಿಸಿದ ಒಂದು ಘಟನೆಯ ಎಳೆಯನ್ನು ಪ್ರಸ್ತುತ ಪಡಿಸುತ್ತಾ, ಮುಸ್ಲಿಂ ಹೆಣ್ಣು ಮಕ್ಕಳ ಅಭದ್ರತೆಯ ಚಿತ್ರಣ ಷರೀಫಾ ಬಯಲಿಗೂ ಬಾಗಿಲು ಪುಸ್ತಕದಲ್ಲಿ ಅನಾವರಣಗೊಂಡಿದೆ.

ಇಂತಹ ಮುಸ್ಲಿಂ ಹೆಣ್ಣು ಮಕ್ಕಳ ಬದುಕಿನ ಅನೇಕ ವಿಚಾರಗಳನ್ನು ಸಾರಾ ಅಬೂಬಕರ್‌, ಬಾನು ಮುಸ್ತಾಕ್‌, ಫಕೀರ್‌ ಮಹಮ್ಮದ್‌ ಕಟ್ಪಾಡಿ, ಅವರ ಪುಸ್ತಕಗಳಲ್ಲಿಯೂ ಮೂಡಿಬಂದಿದೆ. ಬಂಡಾಯ ಎಂಬ ಜಾಗೃತಿಯ ಹೋರಾಟದ ವಿಸ್ತರಣೆಯಾಗಿ ಷರೀಫಾ ಅವರ ಕಥೆ ಕವಿತೆಗಳಲ್ಲಿ ಮೂಡಿಬಂದಿದೆ. ತಲಾಖ್‌ ಬಗೆಗಿನ ಕಥೆಯಲ್ಲಿ ಅದು ಕೇವಲ ಗಂಡು ಹೆಣ್ಣುಗಳ ಬೇರ್ಪಡುವ ವಿಚಾರವಷ್ಟೇ ಅಲ್ಲ. ಅದನ್ನು ಎದುರಿಸುವ ತವಕದಲ್ಲಿ ʻನಿನಗೆ ನಾನು ಮುಕ್ತಿ ನೀಡಿರುವೆ ಬದುಕಿಕೋ ಹೋಗುʼ ಎಂಬ ದಿಟ್ಟತನ ಮೆರೆಯಲಾಗಿದೆ. ಭಿಕ್ಷುಕನ ಹೆಣ ಎಂಬ ಕಥೆಯಲ್ಲಿ ಸ್ಥಳೀಯ ಪರಿಸ್ಥಿತಿ ಮತ್ತು ಜೀವಂತವಾಗಿರುವ ಜೀವಿಗಳ ಬದುಕಿನಲ್ಲಿ ಸಾಕಷ್ಟು ಬದಲಾವಣೆಗೊಳ್ಳುತ್ತದೆ. ಅದೇ ಸಂದರ್ಭದಲ್ಲಿ ಮೌಲ್ವಿಯೊಬ್ಬರೊ ಘಟನೆ ಮಹತ್ವದ ತಿರುವಿಗೆ ಬದಲಾದಾಗ ಅತ್ಯಂತ ಸಮಯೋಚಿತವಾಗಿ ಎದುರಾಗುವ ಹಿಂದೂ ಮುಸ್ಲಿಂ ಗಲಭೆಯನ್ನು ಘಟಿಸದಂತೆ ತಂತ್ರರೂಪಿಸಲಾಗಿದೆ. ಹೀಗೆ ಡಾ.ಕೆ.ಷರೀಫಾ ಅವರ ಪುಸ್ತಕದಲ್ಲಿ ಹಲವು ಕಥೆಗಳು ಮಹತ್ವದ ವಿಚಾರಗಳನ್ನು ತಿಳಿಸುತ್ತದೆ ಎಂದು ಡಾ. ಎಚ್‌.ಎಸ್.‌ ಸತ್ಯನಾರಾಯಣ ಹೇಳಿದರು.

ಡಾ. ವಸುಂಧರಾ ಭೂಪತಿ

ಡಾ. ವಸುಂಧರಾ ಭೂಪತಿ ಅವರು, ಡಾ. ಕೆ. ಸುಶೀಲಾ ಅವರ ‘ವೈದ್ಯೆಯೊಬ್ಬರ ನೆನಪಿನಂಗಳಿಂದ’, ‘ಮಾಸ್ಕೊದ ಆ ದಿನಗಳು’ ಪುಸ್ತಕವನ್ನು ಪರಿಚಯ ಮಾಡಿಕೊಟ್ಟರು. ವೈದ್ಯೆಯೊಬ್ಬರ ನೆನಪಿನಂಗಳಿಂದ ಪುಸ್ತಕವು ವೈಚಾರಿಕ ಕೃತಿಯಾಗಿದ್ದು, ಸದಾಭಿರುಚಿಯ ಲೇಖನಗಳು ಒಳಗೊಂಡಿದೆ. ಡಾ. ಸುಶೀಲಾ ಅವರು ತಮ್ಮ 16 ವರ್ಷದ ವೈದ್ಯಕೀಯ ಲೋಕದ ಅನುಭವಗಳು ಈ ಪುಸ್ತಕದಲ್ಲಿ ಅನಾವರಣಗೊಂದಿದೆ. ವೃತ್ತಿಯ ಅನುಭವಗಳೊಂದಿಗೆ ಲಘು ಹಾಸ್ಯದ ನಿರೂಪಣೆ ಒಳಗೊಂಡಿದೆ. ಇದರೊಂದಿಗೆ, ಆರೋಗ್ಯ ವ್ಯವಸ್ಥೆಯಲ್ಲಿನ ಅನಾರೋಗ್ಯವನ್ನು ಬಿಂಬಿಸಲಾಗಿದೆ. ಆರೋಗ್ಯ ಸೇವೆ ಸಾರ್ವಜನಿಕ ಸೇವಾ ಮನೋಭಾವ ಇಂದು ಸಂಪೂರ್ಣವಾಗಿ ಬದಲಾಗಿದ್ದು, ವ್ಯಾಪಾರೀಕರಣಗೊಂಡು, ಲಾಭ ಮಾಡುವ ಉದ್ದೇಶಕ್ಕೆ ಅಂಟಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಂದಿಗೂ ಉತ್ತಮ ವೈದ್ಯರು ಇರುವುದರಿಂದ ಸಮಾಜ ಸ್ವಾಸ್ಥ್ಯ ಇನ್ನೂ ಉಳಿದುಕೊಂಡಿದೆ. ಡಾ. ಸುಶೀಲಾ ಅವರು ತಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವಿಸಿದ ಸಂಕಷ್ಟಗಳ ಬಗ್ಗೆಯೂ ಅನಾವರಣಗೊಂಡಿದೆ. ಆಗಿನ ವೈದ್ಯಕೀಯ ಶಿಕ್ಷಣ ಮತ್ತು ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅಜಗಜಾಂತರ ವ್ಯತ್ಯಾಸವನ್ನು ಗುರುತಿಸುತ್ತದೆ. ರೋಗಿಗಳಲ್ಲಿ ಉಂಟಾದ ಅಪನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ, ಮಾತ್ರೆಗಳ ಬಳಕೆ ಬಗೆಗಿನ ವಿಧಾನಗಳು, ಕಿರುಕುಳಗಳು ಹಾಗೂ ರೋಗಿಗಳು ತಮ್ಮ ಆರೋಗ್ಯ ಮತ್ತು ಚಿಕಿತ್ಸೆಗಾಗಿ ಭವಿಷ್ಯವಾಣಿಯನ್ನು ನಂಬಿ ದಿಕ್ಕು ತಪ್ಪುತ್ತಿರುವ ಜನರ ಮೌಢ್ಯತೆ ನಿವಾರಣೆ ಬಗ್ಗೆ ವೈದ್ಯೆಯೊಬ್ಬರ ನೆನಪಿನಂಗಳಿಂದ ಪುಸ್ತಕದಲ್ಲಿ ವಿವರಿಸಲಾಗಿದೆ.

ಮತ್ತೊಂದು ಮಹತ್ವದ ಕೃತಿ ʻಮಾಸ್ಕೊದ ಆ ದಿನಗಳುʼ ಇದರಲ್ಲಿ ಡಾ.ಕೆ. ಸುಶೀಲಾ ಅವರು ರಷ್ಯಾದಲ್ಲಿ ಮಹತ್ವದ ಕಾಲಘಟ್ಟದ ಸಂದರ್ಭದಲ್ಲಿ ಬದಲಾದ ದಿನಗಳಲ್ಲಿ ಅಂದರೆ 1989 ರಿಂದ 1992 ಅವಧಿಯಲ್ಲಿ ಮಾಸ್ಕೋದಲ್ಲಿ ಇದ್ದ ಅವಧಿಯಲ್ಲಿ ಕಣ್ಣೆದುರು ನೋಡಿದ, ಘಟಿಸಿದ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿದೆ. ಸ್ವಚ್ಚತೆಯ ವಿಚಾರದಲ್ಲಿ, ದ್ವಿಭಾಷ ನೀತಿ, ಸಾರಿಗೆ ವ್ಯವಸ್ಥೆಯಲ್ಲಿನ ಶಿಸ್ತು, ಹವಾಮಾನದ ಅನುಭವಗಳು, ಸಸ್ಯಹಾರದ ಬಗೆಗಿನ ಅನುಭವಗಳು, ಎಲ್ಲರಿಗೂ, ಅದರಲ್ಲೂ ಹೆಣ್ಣು ಮಕ್ಕಳಿಗೆ ಯಾವ ಆತಂಕ, ಅಭದ್ರತೆ, ಅಸುರಕ್ಷಿತೆ ಎದುರಾಗದ ದಿನಾಗಳಾಗಿದ್ದವು. ಮಕ್ಕಳ ಆರೋಗ್ಯದಲ್ಲಿ ವಹಿಸುವ ಕಾಳಜಿ ಮತ್ತು ಅಲ್ಲಿ ಇಡೀ ಜನತೆಗೆ ಅಶಿಸ್ತು, ಅಸುರಕ್ಷಿತೆ, ಅವ್ಯವಸ್ಥೆಗಳು ಎದುರಾಗದಂತ ವಹಿಸಿದ ಕ್ರಮಗಳು ಮಹತ್ವದ ಪೂರ್ಣವಾಗಿರುವ ಬಗೆಗೂ ಪುಸ್ತಕದಲ್ಲಿ ವ್ಯಕ್ತವಾಗಿದೆ. ಅಲ್ಲದೆ, ನಂತರದ ಕಾಲಘಟ್ಟ 1989ರಲ್ಲಿ ಘಟಿಸಿದ ಚುನಾವಣೆಯ ಸಂದರ್ಭದಲ್ಲಿ ಎದುರಾದ ಪ್ರತಿಸ್ಪರ್ಧಿಗಳ ವಿಚಾರಧಾರೆಗಳು, ಪ್ರತಿರೋಧ ವಿಚಾರಗಳು ಬೆಳವಣಿಗೆ ಪಡೆದು, ಇಡೀ ಆಡಳಿತ ವ್ಯವಸ್ಥೆಯೇ ಬದಲಾವಣೆ ಕಂಡಿತು. ನಂತರದ ದಿನಗಳಲ್ಲಿ ಎದುರಾದ ಅರಾಜಕತೆ, ಭೀಕರತೆ ಸಂಭವಿಸಿವ ಸ್ಥಳೀಯತೆಯ ವಿಚಾರಗಳು ಮಾಸ್ಕೊದ ಆ ದಿನಗಳು ಪುಸ್ತಕದಲ್ಲಿ ಇದೆ ಎಂದು ಡಾ. ವಸುಂಧರಾ ಭೂಪತಿ ಅವರು ತಿಳಿಸಿದರು.

ಟಿ. ಸುರೇಂದ್ರರಾವ್‌

ಟಿ. ಸುರೇಂದ್ರರಾವ್‌ ಅವರು, ಆರ್‌.ವಿ. ಆಚಾರಿ ಅವರ ʻವಾಸ್ತುಶಾಸ್ತ್ರ: ತಿರುಳೋ, ತಿಳಿಗೇಡಿತನವೋʼ ಎಂಬ ಪುಸ್ತಕದ ಕುರಿತು ಪರಿಚಯ ಮಾಡಿಕೊಟ್ಟರು. ವಾಸ್ತು ಶಾಸ್ತ್ರವನ್ನು ದುರ್ಬಳಕೆ ಮಾಡಿಕೊಂಡು, ಜನರನ್ನು ಹಣದಾಸೆಗಾಗಿ ಮೌಢ್ಯತೆಯನ್ನು ಬಿತ್ತುವ ಮೂಲಕ ವಂಚಿಸುವ ಕೆಲಸ ಪ್ರಸಕ್ತ ದಿನಗಳಲ್ಲಿ ನಡೆಸುತ್ತಿದೆ. ವಾಸ್ತು ಶಾಸ್ತ್ರ ಎಂಬ ಸರಳ ವಿಧಾನದ ಬಗ್ಗೆ ಹಾಗೂ ಅದರ ಐತಿಹಾಸಿಕ ಹಿನ್ನೆಲೆ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಪುಸ್ತಕಕ್ಕೆ ಗೋವಿಂದನ್‌ ಪಿಳ್ಳೆಯವರು ಮುನ್ನುಡಿಯನ್ನು ಬರೆದಿದ್ದಾರೆ. ಪುಸ್ತಕವು ಪ್ರಸ್ತುಪಡಿದ ರೀತಿ ಅತ್ಯಂತ ಮಹತ್ವಪೂರ್ಣವಾಗಿದೆ. ವಾಸ್ತುಶಾಸ್ತ್ರದ ಬಗೆಗಿನ ನಂಬಿಕೆ ಮತ್ತು ಭ್ರಮೆಯನ್ನು ಈ ಪುಸ್ತಕದಲ್ಲಿರುವ 16 ಅಧ್ಯಾಯಗಳು ಕಳಚಲಿದೆ ಎಂದು ತಿಳಿಸಿದ ಟಿ. ಸುರೇಂದ್ರರಾವ್‌ ಅವರು, ತಾವು ಕಣ್ಣಾರೆ ಕಂಡ ವಾಸ್ತುದೋಷದ ಹೆಸರಿನಲ್ಲಿ ವಂಚಿಸಿದ ಎರಡು ಘಟನೆಗಳನ್ನು ವಿವರಿಸಿದರು.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಈ ಲಿಂಕ್ ಬಳಸಿ

ಜಹೀದಾ ಶಿರೀನ್‌

ಜಹೀದಾ ಶಿರೀನ್‌ ಅವರು, ಇರಾವತಿ ಕರ್ವೆ ಅವರ ಸಾರ್ಥಕತೆ: ಗದ್ಯ ಬರಹಗಳ ಸಂಗ್ರಹ ಪುಸ್ತಕವನ್ನು ಪರಿಚಯ ಮಾಡಿಕೊಟ್ಟರು. ಗದ್ಯ ಬರಹಗಳ ಸಂಗ್ರಹವಾದರೂ ಇದರಲ್ಲಿ ಕಥೆಗಳ ರೂಪದಲ್ಲಿದೆ ಮತ್ತು ಈ ಪುಸ್ತಕ ಹಲವು ವಿಚಾರಗಳ ಬಗ್ಗೆ ಆಲೋಚನೆ ಹಚ್ಚುತ್ತದೆ. ಇರಾವತಿ ಕರ್ವೆ ಅವರು, ತಮ್ಮ ಸಂಶೋಧನೆ ನಿಮಿತ್ತ ಸಂಚರಿಸಿ ದಾಖಲಿಸಿದ ವಿಷಯಗಳು ಸಾಕಷ್ಟು ಇವೆ. ಪುಸ್ತಕದಲ್ಲಿ ಅನುಭವ ಮತ್ತು ಸ್ಥಳೀಯ ಜನರ ಪರಿಸರದ ಬಗೆಗಿನ ವಿಚಾರಗಳು, ಬದಲಾದ ಕಾಲಕ್ರಮೇಣ ಬದಲಾವಣೆ ಘಟಿಸಿದಂತೆ, ಜನರು ಸಹ ಹೊಂದಿಕೊಳ್ಳುವ ಮನೋಭಾವ, ಸಂಸ್ಕೃತಿ, ಆಚಾರ-ವಿಚಾರಗಳು, ಸಂಪ್ರದಾಯಗಳ ಬಗ್ಗೆ ನಿರೂಪಕತೆಯ ಮೂಲಕ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಮಾತೃಹೃದಯತೆ, ಪ್ರೀತಿ, ಮಕ್ಕಳ ಕಾಳಜಿ, ಕೌಟುಂಬಿಕ ಬಾಂಧವ್ಯದ ಬಗೆಗಿನ ವಿಷಯಗಳು ಇರಾವತಿ ಕರ್ವೆ ಅವರ ಪುಸ್ತಕದಲ್ಲಿದೆ ಎಂದು ತಿಳಿಸಿದರು.

 

ಇದನ್ನೂ ಓದಿ : ನನ್ನ ದೂರು ಕೇಳಿ; ಮಹಿಳೆಯರು ನ್ಯಾಯಾಲಯದ ಕದ ತಟ್ಟಿದಾಗ…

ಡಾ. ಎಚ್‌.ಜಿ. ಜಯಲಕ್ಷ್ಮಿ

ಡಾ. ಎಚ್‌.ಜಿ. ಜಯಲಕ್ಷ್ಮಿ ಅವರು, ಡಾ. ಕೆ.ಸುಶೀಲಾ ಅವರ ಆಧುನಿಕ ಕಾಯಿಲೆಗಳ ವಿಸ್ಮಯ ಲೋಕ ಮತ್ತು ಚಂಪಾ ಜೈಪ್ರಕಾಶ್‌ ಅವರ ಸುಬ್ಬರಾಯನ ಕುಂಟೆ ಪುಸ್ತಕವನ್ನು ಪರಿಚಯ ಮಾಡಿಕೊಟ್ಟರು. ಆಧುನಿಕ ಕಾಯಿಲೆಗಳ ಎದುರಿಸುವ ಬಗೆ ಮತ್ತು ಆ ಮೂಲಕ ನಿರಂತರವಾಗಿ ಸಾಗುತ್ತಿರುವ ಸಂಶೋಧನೆಗಳ ಮೂಲಕ ವ್ಯಕ್ತವಾಗುವ ಹೊಸ ಹೊಸ ವಿಧಾನಗಳ ಬಗ್ಗೆ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಆಹಾರ ಪದ್ದತಿ, ಜೀವನ ಕ್ರಮದಲ್ಲಿನ ಬದಲಾವಣೆಗಳು ಪುಸ್ತಕದಲ್ಲಿದೆ. ವೈದ್ಯಕೀಯ ಜಗತ್ತಿನ ವಿಸ್ತಾರವನ್ನು ಎಲ್ಲರು ಓದಿಸಿಕೊಂಡು ಹೋಗುವ ಹಾಗೆ ಅತ್ಯಂತ ಸರಳ ರೀತಿಯಲ್ಲಿ ತಿಳಿಸಲಾಗಿದೆ.

ಮತ್ತೊಂದು ಕೃತಿ ಸುಬ್ಬರಾಯನ ಕುಂಟೆಯಲ್ಲಿ ಲೇಖಕಿ ಚಂಪಾ ಜೈಪ್ರಕಾಶ್‌ ಅವರು, ತಮ್ಮ ಅಜ್ಜನ ಊರಾದ ಗೌರಿಬಿದನೂರು ಪ್ರದೇಶ  ಆಗಿನ ಕಾಲದಲ್ಲಿ ಘಟಿಸಿದ ವಿಚಾರಗಳು ವ್ಯಕ್ತವಾಗಿವೆ. ವಿಶೇಷ ಮಕ್ಕಳ ಕೇಂದ್ರದಲ್ಲಿ ಸಂಭವಿಸಿದ ಧಾರುಣ ಘಟನೆಯು, ಹೆಣ್ಣು ಮಗಳ ಮೇಲಾಗುವ ನಿರಂತರ ಲೈಂಗಿಕ ದೌರ್ಜನ್ಯದ ಭೀಕರತೆಯನ್ನು ಈ ಪುಸ್ತಕದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ ಎಂದು ತಿಳಿಸಿದರು.

ವೇದಿಕೆ ಮೇಲೆ ಚಿಂತನ ಪ್ರಕಾಶನದ ವಸಂತ ರಾಜ್‌ ಎನ್‌.ಕೆ. ಹಾಗೂ ಕ್ರಿಯಾ ಪ್ರಕಾಶನದ ಜಿ. ಚಂದ್ರಶೇಖರ್‌ ಅವರು ಉಪಸ್ಥಿತರಿದ್ದರು.  ಪ್ರಸ್ತಾವಿಕವಾಗಿ ಎನ್‌.ಕೆ. ವಿಶಾಲಮತಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಸಂಗಮೇಶ್‌ ಅವರು ನಡೆಸಿಕೊಟ್ಟರು.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *