ಲಸಿಕೆ ಪಡೆದ ಶೇಕಡಾ 78ರಷ್ಟು ಜನ ಕೋವಿಡ್‌ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಂಡಿದ್ದಾರೆ

ನವದೆಹಲಿ: ಕೇಂದ್ರ ಸರಕಾರವು ಕೋವಿಡ್‌ ಲಸಿಕೆಯನ್ನು ವಿತರಣೆಗೆ ಸಂಬಂಧಿಸಿದಂತೆ ದೇಶಾದ್ಯಂತ ಒಂದೇ ಮಾದರಿಯಲ್ಲಿ ಅನುಕರಣೆಯ ಭಾಗವಾಗಿ ಡಿಜಿಟಲ್‌ ಆನ್‌ಲೈನ್‌ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬೇಕೆಂದು ಅಭಿಯಾನವನ್ನು ಆರಂಭಿಸಿತು. ಆದರೆ, ಕಳೆದ ಜನವರಿ 16ರಿಂದ  ಇದುವರೆಗೆ ದೇಶದಲ್ಲಿ ಲಸಿಕೆಯನ್ನು ಪಡೆದುಕೊಂಡವರಲ್ಲಿ ಶೇಕಡಾ 78ರಷ್ಟು ಮಂದಿ ಲಸಿಕೆ ಅಭಿಯಾನ ಕೇಂದ್ರಗಳಲ್ಲಿಯೇ ನೋಂದಣಿ ಮಾಡಿಕೊಂಡು ಲಸಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಅನಕ್ಷರಸ್ಥರು ಕೋವಿನ್ ಆಪ್‌ನಲ್ಲಿ ಹೇಗೆ ನೋಂದಣಿ ಮಾಡಿಕೊಳ್ಳುತ್ತಾರೆ: ಸರ್ವೋಚ್ಛ ನ್ಯಾಯಲಯ ಪ್ರಶ್ನೆ

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಬಹಿರಂಗಗೊಂಡಿದೆ. ʻʻಸರ್ಕಾರದ ನಿರಂತರ ಡಿಜಿಟಲ್ ಅಭಿಯಾನದ ಹೊರತಾಗಿಯೂ ದೇಶದಲ್ಲಿ ವಿತರಿಸಿದ ಒಟ್ಟಾರೆ ಕೋವಿಡ್ ಲಸಿಕೆ ಪ್ರಮಾಣಗಳ ಪೈಕಿ ಶೇ.78ರಷ್ಟು ಪ್ರಮಾಣದಷ್ಟು ಜನರು ಲಸಿಕೆ ವಿತರಣಾ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಂಡಿದ್ದಾರೆ. ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಕೋವಿನ್ ಪೋರ್ಟಲ್ ಚಾಲನೆ ಮಾಡಿದ್ದು ಈ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ನಿಗಧಿತ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು. ಆದರೆ, ಶೇ.78ರಷ್ಟು ಮಂದಿ ಕೋವಿನ್ ನಲ್ಲಿ ನೋಂದಣಿ ಮಾಡದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದಿದ್ದಾರೆʼʼ ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ನಲ್ಲಿರುವಂತೆ,  ‘23.06.2021ರಂತೆ, ಕೋವಿನ್‌ನಲ್ಲಿ ನೋಂದಣಿ ಮಾಡಿಕೊಂಡ 32.22 ಕೋಟಿ ಫಲಾನುಭವಿಗಳಲ್ಲಿ, 19.12 ಕೋಟಿ (ಸುಮಾರು 59%) ಫಲಾನುಭವಿಗಳನ್ನು ಲಸಿಕೆ ಕೇಂದ್ರಗಳ ಬಳಿಯೇ ನೋಂದಾಯಿಸಲಾಗಿದೆ” ಎಂದು ಸರಕಾರ ತಿಳಿಸಿದೆ. ಕೋವಿನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೋವಿನ್‌ನಲ್ಲಿ ದಾಖಲಾದ ಒಟ್ಟು 29.68 ಕೋಟಿ ಲಸಿಕೆ ಪ್ರಮಾಣಗಳಲ್ಲಿ, 23.12 ಕೋಟಿ ಡೋಸ್‌ಗಳನ್ನು (78%) ಲಸಿಕಾ ಕೇಂದ್ರ ಅಥವಾ ಅಭಿಯಾನಗಳ ಮೂಲಕವೇ ನೋಂದಣಿ ಮಾಡಿಕೊಂಡು ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ.

ಕೇಂದ್ರ ಸರ್ಕಾರವು ಈ ವರ್ಷದ ಜನವರಿ 16 ರಂದು ಕೋ-ವಿನ್ ಡಿಜಿಟಲ್ ಪೋರ್ಟಲ್‌ ಅನ್ನು ಆರಂಭಿಸಿ ಅದರ ಮೂಲಕ ಲಸಿಕೆಯನ್ನು ಪಡೆಯಲು ಕಡ್ಡಾಯವಾಗಿ ಪೂರ್ವ ನೋಂದಣಿ ಅಗತ್ಯವೆಂದು ಸರಕಾರ ತಿಳಿಸಿತ್ತು. ಕೋ-ವಿನ್ ಆಪ್‌ ಮೂಲಕ ಆನ್‌ಲೈನ್ ನೋಂದಣಿ ಸುಲಭಗೊಳಿಸುವ ಪ್ರಯತ್ನವನ್ನು ಮಾಡಿದ ಸರಕಾರ ಇಂಗ್ಲೀಷ್‌ ಒಳಗೊಂಡು ಹಿಂದಿ ಮಾತ್ರವಲ್ಲದೇ ಮರಾಠಿ, ಮಲಯಾಳಂ, ತೆಲುಗು, ಕನ್ನಡ, ಒಡಿಯಾ, ಗುಜರಾತಿ, ಬಂಗಾಳಿ, ಸೇರಿದಂತೆ 14 ಪ್ರಾದೇಶಿಕ ಭಾಷೆಗಳು ಮೂಲಕ ಅನುಕೂಲ ಮಾಡಿಕೊಟ್ಟಿತು. ಈ ಬದಲಾವಣೆಗಳ ನಂತರವೂ, ಬಹುಪಾಲು ಜನರು ಸ್ಥಳದಲ್ಲಿಯೇ ನೋಂದಣಿ ವಿಧಾನಕ್ಕೆ ಮೊರೆ ಹೋದರು.

ಶ್ರೀಮಂತ ಮತ್ತು ನಗರ ಭಾಗದ ಜನರು ಮಾತ್ರ ಪೋರ್ಟಲ್ ಬಳಕೆ ಮಾಡಿ ಲಸಿಕೆಗಾಗಿ ನೋಂದಣಿ ಮಾಡುತ್ತಿದ್ದರು. ಆದರೆ  ಈ ವಿಚಾರದಲ್ಲಿ ಗ್ರಾಮೀಣ ಭಾಗದ ಜನರು ಹಿಂದೆ ಬೀಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಲಸಿಕೆ ಅಭಿಯಾನ ನಿಧಾನಗೊಂಡಿತು. ಸರಕಾರದ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಡಿಜಿಟಲೀಕರಣದ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ಬಂದಿದ್ದವು. ಡಿಜಿಟಲ್‌ ಸಂಪರ್ಕ ಹೊಂದಿರದ, ಸ್ಮಾರ್ಟ್‌ಫೋನ್‌ ಹೊಂದಿರದ, ಫೋನ್‌ ಬಳಕೆ ಬಗ್ಗೆ ಅರಿವು ಇರದ ಜನರ ಹೇಗೆ ಲಸಿಕೆಯನ್ನು ಪಡೆಯಲು ಸಾಧ್ಯವೆಂದು ಸಾಕಷ್ಟು ಕಡೆಗಳಿಂದ ದೂರುಗಳು ಬಂದಿದ್ದವು.

ಇದನ್ನು ಓದಿ: ಲಸಿಕೆ ಪೂರೈಕೆಯನ್ನು ತುರ್ತಾಗಿ ವಿಸ್ತರಿಸಬೇಕಾಗಿದೆ ಮತ್ತು ಅದು ಸಾಧ್ಯವಿದೆ-ಜನವಿಜ್ಞಾನ ಜಾಲದ ಹೇಳಿಕೆ

ಇದರ ನಡುವೆಯೇ ಕೋವಿಡ್‌ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ನಿರಂತರ ವಿಚಾರಣೆಯೊಂದಿಗೆ ಸುಪ್ರೀಂ ಕೋರ್ಟ್‌ ಸಹ ಡಿಜಿಟಲ್‌ ವಿಭಜೀಕರಣದ ಬಗ್ಗೆ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಡಿಜಿಟಲ್‌ ವಿಭಜೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೇ 31ರ ವಿಚಾರಣೆ ವೇಳೆಯಲ್ಲಿ ಸರ್ಕಾರದ ಕಡ್ಡಾಯ ಆನ್‌ಲೈನ್ ನೋಂದಣಿಯನ್ನು ಖಂಡಿಸಿತ್ತು. ಪ್ರಸ್ತುತ ದೇಶದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಡಿಜಿಟಲ್ ವಿಭಜನೆಯನ್ನು ಎತ್ತಿ ತೋರಿಸಿದ ನ್ಯಾಯಾಲಯವು ಪೋರ್ಟಲ್ ಅನ್ನು ಅವಲಂಬಿಸಿ ಸಾರ್ವತ್ರಿಕ ರೋಗನಿರೋಧಕ ಲಸಿಕಾ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ಗಂಭೀರವಾಗಿ ಆರೋಪ ಮಾಡಿತು. ಇದಾದ ನಂತರ ಎಚ್ಚೆತ್ತುಕೊಂಡಿದ್ದ ಕೇಂದ್ರ ಸರ್ಕಾರವು ಯಾವುದೇ ಡಿಜಿಟಲ್ ವಿಭಜನೆಯಿಂದಾಗಿ ಯಾವುದೇ ವ್ಯಕ್ತಿಯನ್ನು ಬಿಟ್ಟುಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿ ಸ್ಥಳದಲ್ಲಿಯೂ ನೋಂದಣಿಗೆ ಅವಕಾಶವನ್ನು ಕಲ್ಪಿಸಿತು.

Donate Janashakthi Media

Leave a Reply

Your email address will not be published. Required fields are marked *