ನವದೆಹಲಿ: ಏಪ್ರಿಲ್ 16 ಬುಧವಾರದಂದು ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 73 ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾಗಿದೆ. ಸುಪ್ರೀಂ
ಮೊದಲ ದಿನವೇ ಎರಡೂ ಕಡೆಯ ವಕೀಲರು ಪ್ರಬಲ ವಾದ ಮಂಡಿಸಿದ್ದು, ಎರಡೂ ಕಡೆಯವರಿಗೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠವು ಹಲವು ಕಠಿನ ಪ್ರಶ್ನೆಗಳನ್ನು ಕೇಳಿದೆ. ಸುಪ್ರೀಂ
ದೀರ್ಘಾವಧಿ ಬಳಕೆ ಮೂಲಕ ವಕ್ಫ್ (ವಕ್ಫ್ ಬೈ ಯೂಸರ್), ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕ ಸಹಿತ ಕಾಯ್ದೆಯ ಹಲವು ನಿಬಂಧನೆಗಳ ಕುರಿತು ನ್ಯಾ| ಸಂಜೀವ್ ಖನ್ನಾ, ನ್ಯಾ| ಸಂಜಯ್ ಕುಮಾರ್ ಮತ್ತು ನ್ಯಾ| ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು ಸ್ಪಷ್ಟನೆಗಳನ್ನು ಕೇಳಿದೆ.
ಇದನ್ನೂ ಓದಿ: ಗುಜರಾತ್| ಅಂಚೆ ಸೇವೆಯ ಮೂಲಕ ಮದ್ಯ ಮಾರಾಟ
ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರಿರಬೇಕು ಎಂದು ಹೊಸ ಕಾಯ್ದೆಯಲ್ಲಿದೆ. ಹಾಗಿದ್ದರೆ ಹಿಂದೂ ದತ್ತಿ ಮಂಡಳಿಗಳಲ್ಲಿ ಮುಸ್ಲಿಮರಿಗೆ ಸದಸ್ಯರಾಗಲು ನೀವು ಅವಕಾಶ ಕೊಡುತ್ತೀರಾ ಎಂದು ಕೇಂದ್ರ ಸರಕಾರವನ್ನು ನ್ಯಾಯಪೀಠ ಪ್ರಶ್ನಿಸಿದೆ.
ಹಳೆಯ ಮಸೀದಿಗಳಿಗೆ ದಾಖಲೆ ಎಲ್ಲಿರುತ್ತದೆ?
ಹಳೆಯ ಕಾನೂನಿನಲ್ಲಿದ್ದ, “ದೀರ್ಘಾವಧಿ ಬಳಕೆಯ ಮೂಲಕ ವಕ್ಫ್’ (ಔಪಚಾರಿಕ ದಾಖಲಾತಿಗಳಿಲ್ಲದಿದ್ದರೂ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ದೀರ್ಘ ಅವಧಿಗೆ ಯಾವುದೇ ಭೂಮಿ ಬಳಕೆಯಾಗಿದ್ದರೆ, ಅದನ್ನು ವಕ್ಫ್ ಆಸ್ತಿ ಎಂದು ಪರಿಗಣಿಸುವುದನ್ನು “ವಕ್ಫ್ ಬೈ ಯೂಸರ್’ ಎನ್ನುತ್ತಾರೆ) ಎಂಬ ನಿಬಂಧನೆಯನ್ನು ಹೊಸ ಕಾನೂನಿನಲ್ಲಿ ತೆಗೆದುಹಾಕಿರುವುದೇಕೆ ಎಂದೂ ನ್ಯಾಯಪೀಠ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. 14ರಿಂದ 16ನೇ ಶತಮಾನದ ವೇಳೆ ನಿರ್ಮಿಸಲಾದ ಬಹುತೇಕ ಮಸೀದಿಗಳಿಗೆ ಸೇಲ್ ಡೀಡ್‌ಗಳೇ ಇರುವುದಿಲ್ಲ. ಅಂಥವುಗಳನ್ನು ನೀವು ಏನೆಂದು ನೋಂದಣಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದೆ.
ದಿಲ್ಲಿ ಹೈಕೋರ್ಟನ್ನು ವಕ್ಫ್ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂಬ ವಾದವೂ ಕೇಳಿಬಂದಿದೆ. ಹಾಗೆಂದು, “ವಕ್ಫ್ ಬೈ ಯೂಸರ್’ ಆಗಿರುವ ಎಲ್ಲ ಭೂಮಿಯ ಘೋಷಣೆಯೂ ಸುಳ್ಳು ಎಂದು ನಾವು ಹೇಳುತ್ತಿಲ್ಲ. ಸುಳ್ಳೂ ಇರಬಹುದು, ಸತ್ಯವೂ ಇರಬಹುದು ಎಂದು ಅರ್ಜಿದಾರರ ಪರ ಹಾಜರಾದ ಮತ್ತೂಬ್ಬ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವೀ ಅವರನ್ನು ಕುರಿತು ನ್ಯಾಯಪೀಠ ಹೇಳಿತು.
ಇದೇ ವೇಳೆ, ಸರಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕಡೆಗೆ ತಿರುಗಿ, ಎಷ್ಟೋ ವರ್ಷಗಳಿಂದ ಇರುವ “ವಕ್ಫ್ ಬೈ ಯೂಸರ್’ ಭೂಮಿಯನ್ನು ನೀವು ಹೇಗೆ ನೋಂದಣಿ ಮಾಡುತ್ತೀರಿ? ಅದಕ್ಕೆ ದಾಖಲೆಗಳು ಎಲ್ಲಿರುತ್ತವೆ? ಕೆಲವೆಡೆ ದುರ್ಬಳಕೆಆಗಿರುವುದು ನಿಜ. ಹಾಗೆಂದು ಎಲ್ಲವನ್ನೂ ದುರ್ಬಳಕೆ ಎಂದು ಘೋಷಿಸಲು ಆಗುತ್ತದೆಯೇ, ಇತಿಹಾಸವನ್ನು ನೀವು ಮತ್ತೆ ಬರೆಯಲಾಗುತ್ತದೆಯೇ ಎಂದು ಪ್ರಶ್ನಿಸಿತು.
ಆದೇಶ ಹೊರಡಿಸಲು ಕೇಂದ್ರ ವಿರೋಧ
“ದೀರ್ಘಾವಧಿ ಬಳಕೆ ಮೂಲಕ ವಕ್ಫ್’ ಸಹಿತ ವಕ್ಫ್ ಎಂದು ಘೋಷಿಸಲಾದ ಆಸ್ತಿಗಳನ್ನು ಡಿನೋಟಿಫೈ ಮಾಡಬಾರದು ಎಂದು ಆದೇಶ ಹೊರಡಿಸುವುದಾಗಿ ನ್ಯಾಯಪೀಠ ಹೇಳಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೇಂದ್ರ, “ಅಂಥ ಆದೇಶ ಹೊರಡಿಸುವ ಮುನ್ನ ನಮ್ಮ ವಾದ ಆಲಿಸಬೇಕು’ ಎಂದು ಮನವಿ ಮಾಡಿತು.
ಅರ್ಜಿಗಳನ್ನು ಯಾವುದಾದರೂ ಒಂದು ಹೈಕೋರ್ಟ್‌ಗೆ ವರ್ಗಾಯಿಸುವ ಕುರಿತು ನ್ಯಾಯಪೀಠ ಪ್ರಸ್ತಾವಿಸಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, “ಇದು ಇಡೀ ದೇಶಕ್ಕೆ ಅನ್ವಯವಾಗುವ ವಿಚಾರವಾದ ಕಾರಣ ಸುಪ್ರೀಂ ಕೋರ್ಟ್‌ನಲ್ಲೇ ವಿಚಾರಣೆ ನಡೆಯುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.
ವಕ್ಫ್ ವಿಷಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆಯೂ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು. ಬಳಿಕ ವಿಚಾರಣೆಯನ್ನು ಗುರುವಾರ ಅಪರಾಹ್ನ 2 ಗಂಟೆಗೆ ಮುಂದೂಡಿತು. ಮುಸ್ಲಿಂ ಅರ್ಜಿದಾರರ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವೀ, ಹುಜೇಫಾ ಅಹ್ಮದಿ ಮತ್ತಿತರ ಪ್ರಮುಖರು ವಾದಿಸಿದರು. ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಾಡಿದರು.
ಮಧ್ಯಾಂತರ ಆದೇಶ ಇಲ್ಲ
ಅರ್ಜಿಗಳಿಗೆ ಸಂಬಂಧಿಸಿ ಮಧ್ಯಾಂತರ ಆದೇಶವೊಂದನ್ನು ನೀಡಲು ಮತ್ತು ನೋಟಿಸ್ ಜಾರಿ ಮಾಡಲು ನ್ಯಾಯಪೀಠ ಇಚ್ಛಿಸಿತಾದರೂ ಕೇಂದ್ರ ಮತ್ತು ಕೆಲವು ರಾಜ್ಯ ಸರಕಾರಗಳು ತಮ್ಮ ವಾದ ಮಂಡಿಸಲು ಕಾಲಾವಕಾಶ ಕೋರಿದ ಕಾರಣ ನ್ಯಾಯಪೀಠವು ಯಾವುದೇ ಮಧ್ಯಾಂತರ ಆದೇಶ ಹೊರಡಿಸಿಲ್ಲ.
ಇದನ್ನೂ ನೋಡಿ: ವಚನಾನುಭವ – 26 |ಅಂಬಿಗರ ಚೌಡಯ್ಯನ ವಚನ ; ಹರಿ ಹರಿಯೆಂದು ಹೊಡವಡುವಿರಿ. ನಿಮ್ಮ ನಡೆಯಲ್ಲಾ ಅನಾಚಾರ Janashakthi Media