ಜಲಂಧರ್: ಉನ್ನತ ವ್ಯಾಸಂಗ ಮಾಡುವ ನಿಟ್ಟಿನಲ್ಲಿ ಅನೇಕ ವಿದ್ಯಾರ್ಥಿಗಳು ವಿದೇಶಕ್ಕೆ ಪ್ರಯಾಣಿಸುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ವಿದೇಶಿ ನೀತಿ ನಿಯಮಗಳು, ವೀಸಾ ನಿಯಮಗಳು, ಟ್ರಾವೆಲ್ ಏಜೆಂಟರ ಪೂರ್ವಪರ ತಿಳಿಯದೇ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗುವ ಸಾಧ್ಯತೆಗಳಿದ್ದು, ವಿದೇಶಕ್ಕೆ ಹಾರುವ ವಿದ್ಯಾರ್ಥಿಗಳು ಅತಂತ್ರಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಇಂತಹುದೇ ಘಟನೆಯೊಂದರಲ್ಲಿ ಕೆನಡಾದ ಒಂಟಾರಿಯೊದ ಟೊರೊಂಟೊದಲ್ಲಿರುವ ಹಂಬರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವ ಸಂಬಂಧ ಆದೇಶ ಹೊರಡಿಸಲಾಗಿದೆ. ಸುಮಾರು 700 ವಿದ್ಯಾರ್ಥಿಗಳಿಗೆ ಗಡಿಪಾರು ಆದೇಶ ಬಂದಿದೆ.
ಇದನ್ನು ಓದಿ: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ 80 ಸಾವಿರಕ್ಕೂ ಹೆಚ್ಚು ಭಾರತೀಯರು ಈಗ ಅತಂತ್ರ!
ವಿದೇಶಿಗಳ ನೀತಿ ನಿಯಮ ತಿಳಿಯದ ವಿದ್ಯಾರ್ಥಿಗಳು ವೀಸಾ ಸಮಸ್ಯೆಗೆ ಒಳಗಾಗಿದ್ದಾರೆ. ಮಧ್ಯವರ್ತಿಗಳ ವಂಚನೆ, ಸರಿಯಾದ ದಾಖಲಾತಿ ಪಡೆಯದೇ ಅಲ್ಲಿಗೆ ಹೋಗಿರುವ ವಿದ್ಯಾರ್ಥಿಗಳು ಅತಂತ್ರರಾಗುವ ಘಟನೆ ನಡೆದಿದೆ. ಜಲಂಧರ್‌ನ ಟ್ರಾವೆಲ್ ಏಜೆಂಟ್ 16 ರಿಂದ 20 ಲಕ್ಷ ಪಡೆದು, ನಕಲಿ ದಾಖಲೆ ಮತ್ತು ಪ್ರಮಾಣಪತ್ರ ಸೃಷ್ಟಿಸಿ ಈ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿದ್ದಾನೆ. ಆದರೆ, ಇದೀಗ ಅದನ್ನು ಅರಿತ ಅಲ್ಲಿನ ಕಾಲೇಜು ಮತ್ತು ಸರ್ಕಾರ ಆ ವಿದ್ಯಾರ್ಥಿಗಳು ಕೆನಡಾದಿಂದ ಭಾರತಕ್ಕೆ ಮರಳುವಂತೆ ಸೂಚಿಸಿದೆ.
ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ತೆರಳಿದ ಸುಮಾರು 700 ಭಾರತೀಯ ವಿದ್ಯಾರ್ಥಿಗಳ ವೀಸಾಕ್ಕಾಗಿ ಸಲ್ಲಿಸಿದ ದಾಖಲೆಗಳು ನಕಲಿ ಎಂಬುದು ಸಾಬೀತಾಗಿದೆ. ನಕಲಿ ದಾಖಲೆಗಳನ್ನು ನೀಡಿ ಭಾರತೀಯರಿಗೆ ಕೆನಡಾದ ವೀಸಾ ಕೊಡಿಸುವ ಜಾಲವೊಂದು ಕಾರ್ಯನಿರ್ವಹಿಸುತ್ತಿರುವುದು ಇದರಿಂದ ಬೆಳಕಿಗೆ ಬಂದಿದೆ. ಆ ಜಾಲದ ಮೂಲಕವೇ ಈ ವಿದ್ಯಾರ್ಥಿಗಳು ಕೆನಡಾ ತಲುಪಿರುವುದು ಖಾತ್ರಿಯಾಗಿದೆ.
ಇದನ್ನು ಓದಿ: ಅ-ಡಾಲರೀಕರಣದತ್ತ ಬಿರುಸು ನಡೆ ಆರಂಭ?
ಟ್ರಾವೆಲ್ ಏಜೆಂಟ್ ಸಂಸ್ಥೆಯ ಕಛೇರಿ ಮುಚ್ಚಿ ಆರು ತಿಂಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಮಾಯಕ ವಿದ್ಯಾರ್ಥಿಗಳನ್ನು ವಂಚಿಸಿ, ಆತನ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮಾಹಿತಿ ನೀಡಿರುವ ಡಿಸಿಪಿ ವತ್ಸಲಾ ಗುಪ್ತಾ, ಜಲಂಧರ್‌ನ ಗ್ರೀನ್ ಪಾರ್ಕ್‌ನಲ್ಲಿ ಟ್ರಾವೆಲ್ ಏಜೆಂಟ್ ಇಮಿಗ್ರೇಷನ್ ಕೆಲಸ ಮಾಡುತ್ತಿದ್ದ ಬಗ್ಗೆ ವರದಿಗಳು ಬಂದಿತ್ತು. ಈ ಪ್ರಕರಣ ಸಂಬಂದ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದರೂ, ಈ ಸಂಬಂಧ ಪ್ರಕರಣ ತನಿಖೆಗೆ ಮುಂದಾಗಿದ್ದೇವೆ ಎಂದಿದ್ದಾರೆ.
ಶಿಕ್ಷಣಕ್ಕಾಗಿ ಕೆನಾಡಕ್ಕೆ ಹೋದ ಬಹುತೇಕ ವಿದ್ಯಾರ್ಥಿಗಳು, ಜಲಂಧರ್ ಟ್ರಾವೆಲ್ ಏಜೆಂಟ್ಸ್ ನಡೆಸುತ್ತಿರುವ ಶಿಕ್ಷಣ ವಲಸೆ ಸೇವೆಗಳ ಮೂಲಕ ದಾಖಲಾತಿ ಪ್ರಕ್ರಿಯೆ ನಡೆಸಿದ್ದಾರೆ. ಈ ವಿದ್ಯಾರ್ಥಿಗಳು ಖಾಯಂ ನಿವಾಸಿ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದಾಗ, ಅವರ ಪ್ರವೇಶ ನಮೂನೆಗಳು ನಕಲಿ ಎಂದು ಕಂಡುಬಂದಿದೆ. ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಆದೇಶಗಳನ್ನು ಏಪ್ರಿಲ್-ಮೇ 2022 ರಲ್ಲಿ ನೀಡಲಾಗಿದೆ ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ