ಸಂಗ್ರಹ: ವೇದರಾಜ ಎನ್.ಕೆ.
ಸೆಪ್ಟಂಬರಿನಲ್ಲಿ ನಿರುದ್ಯೋಗ ದರ ಕಳೆದ 6 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ ಎಂದು ತುಸು ನಿರಾಳಗೊಳ್ಳುತ್ತಿದ್ದಾಗಲೇ, ಅಕ್ಟೋಬರಿನಲ್ಲಿ ಅದು ಕಳೆದ ಎರಡು ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಏರಿದೆ ಎಂಬ ಸುದ್ದಿ ಬಂದಿದೆ. ಇದಕ್ಕೆ ಮೊದಲು 2022-23ರ ಪಿಎಲ್‌ಎಫ್‌ಎಸ್ ವರದಿ ಉದ್ಯೋಗ ಪರಿಸ್ಥಿತಿ ಗಂಭೀರ ಮತ್ತು ಯಾತನಾಮಯವಾಗಿಯೇ ಇದೆ, ಸಂಪಾದನೆಗಳು ಒಂದು ಘನತೆಯುಳ್ಳ ಜೀವನ ನಡೆಸಲು ಸಾಲದವು ಮತ್ತು ಕೆಲಸದ ಕಾರ್ಪಣ್ಯಗಳಿಗೆ ತಕ್ಕುದಾಗಿಲ್ಲ, ಜನರು ಹೇಗಾದರೂ ಬದುಕುಳಿಯಲು ಸಿಕ್ಕ ಕೆಲಸಗಳನ್ನು ಮಾಡುವ ಹಂಗಿನಲ್ಲೇ ಇದ್ದಾರೆ ಎಂದೇ ಸೂಚಿಸಿತ್ತು. ಇಂತಹ ಹಿನ್ನೆಲೆಯಲ್ಲಿ, ದೇಶ ಕಟ್ಟಲು, ನಮ್ಮ ಖಾಸಗಿ “ಉದ್ಯೋಗದಾತ”ರುಗಳ ನಡುವೆ ಉದ್ಯೋಗ ಪಡೆದಿರುವ ಯುವ ಅದೃಷ್ಟವಂತರನ್ನು ವಾರದಲ್ಲಿ 70 ಗಂಟೆಗಳ ಕಾಲ ದುಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ!
ಅಕ್ಟೋಬರ್ 28ರಂದು ಮತ್ತೊಂದು ‘ರೋಜ್‌ಗಾರ್ ಮೇಲಾ’(ಉದ್ಯೋಗ ಮೇಳ) ನಡೆದಿದೆ, ಪ್ರಧಾನಿಗಳು ಮತ್ತೆ 51000 ನೇಮಕಾತಿ ಪತ್ರಗಳನ್ನು ಹಂಚಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ವರ್ಷಕ್ಕೆ 2 ಕೋಟಿ ಉದ್ಯೋಗನಿರ್ಮಾಣದ ವಚನ ಕೊಟ್ಟು ಅಧಿಕಾರಕ್ಕೆ ಬಂದ ಸರಕಾರ ಅದನ್ನು ತನ್ನ ‘ಜುಮ್ಲಾ’ಗಳ ಪಟ್ಟಿಗೆ ಸೇರಿಸಿದೆ ಎಂಬ ಟೀಕೆಗೆ ಉತ್ತರವೆಂಬಂತೆ ಕಳೆದ ಅಕ್ಟೋಬರ್22ರಿಂದ ಈ ‘ಮೇಳ’ಗಳು ನಡೆಯುತ್ತಿವೆ ಎಂಬುದನ್ನು ನೆನಪಿಸಿಕೊಳ್ಳಬಹುದು. ಮುಂದಿನ ಸಾರ್ವತ್ರಿಕ ಚುನಾವಣೆಗಳ ಮೊದಲು 10ಲಕ್ಷ ಸರಕಾರೀ ಉದ್ಯೋಗಗಳನ್ನು ಕೊಡುವ ಉದ್ದೇಶದ ಈ ಸ್ಕೀಮಿನಲ್ಲಿ ಇದುವರೆಗೆ 5.5 ಲಕ್ಷ ನೇಮಕಾತಿ ಪತ್ರಗಳನ್ನು ಹಂಚಲಾಗಿದೆಯಂತೆ. ಈ ಪತ್ರಗಳಲ್ಲಿ ‘ಬಡ್ತಿ’ಯ ಪತ್ರಗಳೂ ಸೇರಿದ್ದವು ಎಂದು ಕಳೆದ ಬಾರಿಯ
‘ಮೇಲಾ’ದ ವೇಳೆಗೆ ಸುದ್ದಿಯಾಗಿತ್ತು ಎಂಬುದು ಬೇರೆ ಮಾತು.
ಈಗಾಗಲೇ ವರದಿಯಾಗಿರುವಂತೆ, ಅಕ್ಟೋಬರ್ 9ರಂದು ಭಾರತ ಸರಕಾರದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ‘ಆವರ್ತಕ ಶ್ರಮ ಶಕ್ತಿ ಸಮೀಕ್ಷೆ’(ಪಿಎಲ್‌ಎಫ್‌ಎಸ್)ನ ಎಪ್ರಿಲ್-ಜೂನ್2023ರ ತ್ರೈಮಾಸಿಕ ಬುಲೆಟಿನ್ ಪ್ರಕಟಿಸಿದೆ. ಇದರ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಉದ್ಯೋಗ ಮಾಡುತ್ತಿರುವವರ ಪ್ರಮಾಣ(ಡಬ್ಲ್ಯುಪಿಆರ್)ದಲ್ಲಿ 0.1% ಹೆಚ್ಚಳವಾಗಿದೆ. ಹಾಗೆಯೇ ದುಡಿಮೆಯ ವಯೋಗುಂಪಿನಲ್ಲಿ ಉದ್ಯೋಗದಲ್ಲಿರುವವರು, ನಿರುದ್ಯೋಗಿಗಳು ಮತ್ತು ಸಕ್ರಿಯವಾಗಿ ಉದ್ಯೋಗ ಅರಸುತ್ತಿರುವವರ ಪ್ರಮಾಣ(ಎಲ್‌ಪಿಎಫ್‌ಆರ್)ದಲ್ಲಿ 0.3% ಏರಿಕೆಯಾಗಿದೆ. ಇದನ್ನೇ ಮುಖ್ಯಧಾರೆಯ ಮಾಧ್ಯಮಗಳು ಮತ್ತು ಸರಕಾರ ಉದ್ಯೋಗಾವಕಾಶ ರಂಗದಲ್ಲಿ ಆಶಾಭಾವನೆ ಉಂಟು ಮಾಡಿರುವ ಸುದ್ದಿ ಎಂದು ಹಿಗ್ಗುತ್ತಿವೆ. 2022-23ರಲ್ಲಿ ನಿರುದ್ಯೋಗ ದರ ಕಳೆದ 6 ವರ್ಷಗಳಲ್ಲೇ (9 ವರ್ಷಗಳಲ್ಲಿ ಅಲ್ಲ!)ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ ಎಂದು ಅಮೃತ ಕಾಲದ ಸರಕಾರ ಬೆನ್ನು ತಟ್ಟಿಕೊಂಡಿತ್ತು.
ಆದರೆ 20223-23ರ ಪಿಎಲ್‌ಎಫ್‌ಎಸ್ ವರದಿಯನ್ನು ವಿವರವಾಗಿ ನೋಡಿದರೆ ಈ ಆಶಾಭಾವನೆಗೆ ಯಾವುದೇ ಅವಕಾಶ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ, ಈ ವರದಿ ಕಡಿಮೆ ಆದಾಯದ ಸ್ವ-ಉದ್ಯೋಗಗಳು ಇಂದಿನ ದುಡಿಮೆ ಲೋಕದ ಬೆನ್ನೆಲುಬಾಗುತ್ತಿವೆ ಮತ್ತು ಕೃಷಿ ವಲಯ ಉದ್ಯೋಗ ಹೆಚ್ಚಳದ ಅಂಗಳವಾಗುತ್ತಿದೆ ಎಂದು ತೋರಿಸುತ್ತಿದೆ; ಕೃಷಿ ವಲಯ ಮತ್ತು ಕೃಷಿಯೇತರ ಅನೌಪಚಾರಿಕ ವಲಯ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ವಲಯಗಳು. ಅಲ್ಲದೆ ಕೆಲಸದ ಲಭ್ಯತೆ ಹಂಗಾಮುಗಳ ಮೇಲೆ ಅವಲಂಬಿತ. ಸಾಮಾಜಿಕ ಭದ್ರತೆ ಇಲ್ಲ. ಮತ್ತು ಕಠಿಣವಾದ ಕೆಲಸಗಳು. ಇವುಗಳ ಹೊರತಾಗಿ ಬೇರೆ
ಎಲ್ಲ ವಲಯಗಳು- ಉತ್ಪಾದನೆ, ವ್ಯಾಪಾರ, ಹೋಟೆಲುಗಳು, ಸಾಗಾಣಿಕೆ ಮತ್ತು ಸಂಪರ್ಕ ಮತ್ತು “ಇತರೆ ಸೇವೆಗಳು” ಅಂದರೆ ಆಡಳಿತಾತ್ಮಕ ಮತ್ತು ಖಾಸಗಿ ಸೇವೆಗಳು, ಶಿಕ್ಷಣ, ಆರೋಗ್ಯ ಇತ್ಯಾದಿ -ಉದ್ಯೋಗಗಳ ಇಳಿತವನ್ನು ಕಂಡಿವೆ.
ಉದ್ಯೋಗಗಳ ವಿವರಗಳನ್ನು ಬಿಡಿಸಿ ನೋಡಿದರೆ, 2018-19 ರಲ್ಲಿ ಒಟ್ಟು ಉದ್ಯೋಗಗಳಲ್ಲಿ ಸ್ವ-ಉದ್ಯೋಗ ಮಾಡುವವರು ಶೇ 52 ರಷ್ಟಿದ್ದರು, ಸಂಬಳ ಪಡೆಯುವವರು ಶೇ 24 ರಷ್ಟು ಮತ್ತು ದಿನಗೂಲಿಗಳು ಶೇ 24 ರಷ್ಟು. 2022-23 ರ ಹೊತ್ತಿಗೆ ಸ್ವ- ಉದ್ಯೋಗಿಗಳ ಪ್ರಮಾಣ ಶೇ 57 ಕ್ಕೆ ಏರಿತ್ತು ,ಸಂಬಳ ಪಡೆಯುವವರ ಮತ್ತು ದಿನಗೂಲಿಗಳ ಪ್ರಮಾಣ ಇಳಿದಿತ್ತು.
ಈ ‘ಸ್ವ-ಉದ್ಯೋಗಿಗಳಲ್ಲಿ ಮಹಿಳೆಯರ ಪಾಲು 2018-19 ರಲ್ಲಿ ಶೇ 53 ಇದ್ದದ್ದು 2022-23 ರಲ್ಲಿ ಶೇ 65ಕ್ಕೆ ಏರಿದೆ. ಇದೇ ಅವಧಿಯಲ್ಲಿ ನಿಯಮಿತ ಸಂಬಳದ ಉದ್ಯೋಗಗಳಲ್ಲಿ ಮಹಿಳೆಯರ ಪಾಲು ಶೇ 22 ರಿಂದ ಶೇ 16 ಕ್ಕೆ ಕುಸಿದಿದೆ. ಹಾಗೆಯೇ ದಿನಗೂಲಿ ಕೆಲಸಗಳಲ್ಲಿ ಶೇ 25 ರಿಂದ ಶೇ 19 ಕ್ಕೆ ಕುಸಿದಿದೆ.
“ದುಡಿಮೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂಬ ಘನಂಧಾರಿ ಹೇಳಿಕೆಯ ಒಳ ಅರ್ಥ ಇಲ್ಲಿ ಅಡಗಿದೆ. ಅತ್ಯಂತ ಕಡಿಮೆ ಪ್ರಮಾಣದ ದುಡಿಮೆ ಇರುವಲ್ಲಿ, ಅದೂ ಹಣದುಬ್ಬರದಿಂದ ಕುಸಿದ ಮೌಲ್ಯದಲ್ಲಿ, ಜೊತೆಗೆ ಸರಿಯಾದ ಉದ್ಯೋಗದ ಕೊರತೆ ಇರುವಾಗ ಮಹಿಳೆಯರು ಸಿಗಬಹುದಾದ ಅಲ್ಪ ಪ್ರತಿಫಲಕ್ಕೆ ಹೆಚ್ಚಿನ ಕೆಲಸ ಮಾಡಿ ಕುಟುಂಬದವರ ಗಳಿಕೆಗೆ ಅಲ್ಪ ಸ್ವಲ್ಪ ಸೇರಿಸುವ ಸಲುವಾಗಿ ಮಾಡುತ್ತಿರುವ ದುಡಿಮೆಗಳು ಈ ‘ಸ್ವ-ಉದ್ಯೋಗಗಳು’. ಚೂರು-ಪಾರು ಕೆಲಸ ಮಾಡಿ ಕೂಡಿಸಿ ಬದುಕುವ ಕೌಟುಂಬಿಕ ಪ್ರಯತ್ನಗಳು ಇವು. ಇಂತಹ ಸ್ವ-ಉದ್ಯೋಗದ ಕೆಲಸಗಳನ್ನು ಹೆಚ್ಚಾಗಿ ಮಹಿಳೆಯರು
ಮಾಡುತ್ತಿದ್ದಾರೆ” ಎಂದು ಈ ವಿಶ್ಲೇಷಣೆ ಹೇಳುತ್ತದೆ.
ಐದು ವರ್ಷಗಳ ಹಿಂದಿನ ವರದಿ(2018-19)ಯೊಂದಿಗೆ ಹೋಲಿಸಿ ನೋಡಿದರೆ ಅದು ಆರ್ಥಿಕ ಸಂಕಷ್ಟದ ಇನ್ನೊಂದು ಆಯಾಮವನ್ನು ತೆರೆದಿಡುತ್ತದೆ ಎನ್ನುತ್ತಾರೆ ಸುಬೋಧ್ ರಾಯ್. ಸ್ವ-ಉದ್ಯೋಗಿಗಳು ಮತ್ತು ನಿಯಮಿತ ಸಂಬಳದ ದುಡಿಮೆಗಾರರಿಬ್ಬರಿಗೂ ಅವರ ವೇತನ ಹೆಚ್ಚಳದ ಪ್ರಮಾಣ ಅದೇ ಅವಧಿಯಲ್ಲಿನ ಬೆಲೆ ಹೆಚ್ಚಳದ ಪ್ರಮಾಣಕ್ಕಿಂತ ಕಡಿಮೆ ಎಂಬುದು ಕಾಣಬರುತ್ತದೆ. ದಿನಗೂಲಿಗಳ ಕೂಲಿ ಹೆಚ್ಚಳದ ಪ್ರಮಾಣ ಸ್ವಲ್ಪ ಉತ್ತಮವಾಗಿದೆ; ಬಹುಶಃ ಅವರ ಕೂಲಿಯೇ ಅತಿ ಕಡಿಮೆ ಇರುವುದರಿಂದ ಇರಬಹುದು.
ಇದನ್ನೂ ಓದಿ:‘ವಾರದಲ್ಲಿ 70 ಗಂಟೆ ಕೆಲಸ’ದ ಸಲಹೆ: ನಿಜವಾಗಿಯೂ ಯುವಜನರ ಹಿತದೃಷ್ಟಿಯಿಂದಲೋ ಅಥವಾ ಕಾರ್ಪೊರೇಟ್‍ಗಳ ಗರಿಷ್ಟ ಲಾಭಕ್ಕೋ?
ಒಟ್ಟಾರೆ ಹೇಳುವುದಾದರೆ, ಉದ್ಯೋಗ ಪರಿಸ್ಥಿತಿ ಗಂಭೀರ ಮತ್ತು ಯಾತನಾಮಯವಾಗಿಯೇ ಇದೆ. ಸಂಪಾದನೆಗಳು ಒಂದು ಘನತೆಯುಳ್ಳ ಜೀವನ ನಡೆಸಲು ಸಾಲದವು ಮತ್ತು ಕೆಲಸದ ಕಾರ್ಪಣ್ಯಗಳಿಗೆ ತಕ್ಕುದಾಗಿಲ್ಲ. ಜನರು ಹೇಗಾದರೂ ಬದುಕುಳಿಯಲು ಸಿಕ್ಕ ಕೆಲಸಗಳನ್ನು ಮಾಡುವ ಹಂಗಿನಲ್ಲೇ ಇದ್ದಾರೆ. ಈ ಕ್ರೂರ ವಾಸ್ತವವನ್ನು ಅರಿತು ನೀತಿ ನಿರೂಪಕರು ವಿವೇಚನೆಯಿಂದ ನಡೆದುಕೊಳ್ಳುವ ಅವಶ್ಯಕತೆಯಿದೆ ಎನ್ನುತ್ತಾರೆ ಈ ವಿಶ್ಲೇಷಕರು. ಆದರೆ ನೀತಿ ನಿರೂಪಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಔಪಚಾರಿಕ ವಲಯದಲ್ಲಿ ಉದ್ಯೋಗ ನಿರ್ಮಾಣದಲ್ಲಿ ಮತ್ತೆ 10% ಇಳಿಕೆ
ಈ ವರ್ಷದ ಎಪ್ರಿಲ್-ಆಗಸ್ಟ್ ಅವಧಿಯ ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ದತ್ತಾಂಶ ಪ್ರಕಟವಾಗಿದ್ದು, ಇದರ ಪ್ರಕಾರ ಈ ಅವಧಿಯಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಯಲ್ಲಿ 49.2 ಲಕ್ಷ ಹೊಸ ಚಂದಾದಾರರ ಸೇರ್ಪಡೆಯಾಗಿದೆ. ಅಂದರೆ ಸಂಘಟಿತ ವಲಯದಲ್ಲಿ ಸುಮಾರು ಇಷ್ಟು ಉದ್ಯೋಗಾವಕಾಶಗಳು ನಿರ್ಮಾಣವಾಗಿವೆ. ಕಳೆದ ವರ್ಷದ ಇದೇ ಅವಧಿಯ ಸಂಖ್ಯೆ 55.1 ಲಕ್ಷ. ಅಂದರೆ 10.7% ಇಳಿಕೆಯಾಗಿದೆ.
18-28 ವಯೋಗುಂಪಿನಲ್ಲಿ, ಅಂದರೆ ಯುವ ಚಂದಾದಾರರ ಸಂಖ್ಯೆ 36.4 ಲಕ್ಷದಿಂದ 33 ಲಕ್ಷಕ್ಕೆ ಇಳಿದಿದೆ, ಅಂದರೆ 9.9% ಇಳಿಕೆ. ಮಹಿಳಾ ಚಂದಾದಾರರ ಸಂಖ್ಯೆಯೂ 14.6 ಲಕ್ಷದಿಂದ 13 ಲಕ್ಷಕ್ಕೆ, ಅಂದರೆ 10.9% ದಷ್ಟು ಇಳಿದಿದೆ.
ನಿಜ, ಇಪಿಎಫ್‌ಒ ದತ್ತಾಂಶ ಒಟ್ಟು ಉದ್ಯೋಗಾವಕಾಶ ನಿರ್ಮಾಣವನ್ನು ಬಿಂಬಿಸುವುದಿಲ್ಲ. ಆದರೆ ಸಾಮಾಜಿಕ ಭದ್ರತೆಯುಳ್ಳ ಉದ್ಯೋಗಗಳ ಪ್ರಮಾಣ ಮತ್ತಷ್ಟು ಇಳಿಯುತ್ತಿದೆ ಎಂಬುದನ್ನಂತೂ ಇದು ಬಿಂಬಿಸುತ್ತದೆ.
ಈ ನಡುವೆ ಅಕ್ಟೋಬರ್ 2023ರಲ್ಲಿ ನಿರುದ್ಯೋಗ ದರ 10.05%- ಇದು ಕಳೆದ ಎರಡು ವರ್ಷಗಳಲ್ಲೇ ಅತೀ ಹೆಚ್ಚಿನ ಮಟ್ಟ ಎಂದು ಈಗ ವರದಿಯಾಗಿದೆ ( ಸಿಎಂಐಇ, ನವಂಬರ್1) ಸಪ್ಟಂಬರಿನಲ್ಲಿ ಇದು 7.09% ಇತ್ತು. ಮುಖ್ಯವಾಗಿ ಗ್ರಾಮಾಂತರದಲ್ಲಿ ನಿರುದ್ಯೋಗ 10.82%ಕ್ಕೆ ನೆಗೆದಿದೆ ಎಂದು ಸಿಎಂಐಇ ಸರ್ವೆ ಹೇಳುತ್ತದೆ.
ವಾರಕ್ಕೆ 70 ಗಂಟೆಗಳ ಕೆಲಸದ ಕರೆ-ಹಲವು ಪ್ರಶ್ನೆಗಳು
ಭಾರತದಲ್ಲಿ ಉದ್ಯೋಗದ ಕುರಿತ ಇಂತಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ದೇಶಕಟ್ಟಲು ಯುವ ಜನರು ವಾರಕ್ಕೆ 70 ಗಂಟೆಗಳ ದುಡಿಯಬೇಕೆಂಬ ಕರೆಯ ಮೇಲೆ ಚರ್ಚೆ ನಡೆಯುತ್ತಿದೆ. ಈ ಕರೆಯಲ್ಲಿ ಅವರು ಮುಂದಿಟ್ಟ ಮಾಹಿತಿಗಳು ಎಷ್ಟು ಪ್ರಮಾಣಿತ ಮತ್ತು ಪ್ರಾಮಾಣಿಕ ಎಂಬ ಪ್ರಶ್ನೆ ಸ್ವಾಭಾವಿಕವಾಗಿಯೇ ಎದ್ದಿದೆ.
* ನಮ್ಮಲ್ಲಿ ಕೆಲಸದ ಅವಧಿ ನಿಜವಾಗಿಯೂ ವಿಶ್ವದಲ್ಲೇ ಕಡಿಮೆಯೇ?* ಕೆಲಸದ ಅವಧಿಗೂ, ಉತ್ಪಾದಕತೆಗೂ ನೇರ ಸಂಬಂಧವಿದೆಯೇ?* ಸ್ವಾತಂತ್ರ್ಯದ 75 ವರ್ಷಗಳ ನಂತರದ, ಅದರಲ್ಲೂ 1% ಅತ್ಯಂತ ಶ್ರೀಮಂತರ ನಿಜಆದಾಯ 30% ಏರಿರುವಾಗ ಅತ್ಯಂತ ಬಡ 25% ಜನಗಳ ನಿಜ ಆದಾಯದಲ್ಲಿ 11% ಇಳಿಕೆಯಾಗಿರುವ ಭಾರತದ ಪರಿಸ್ಥಿತಿಯನ್ನು, ವ್ಯಾಪಕ ಕಷ್ಟ-ನಷ್ಗ, ಹಾನಿಗಳನ್ನು ಉಂಟುಮಾಡಿದ ಎರಡನೇ ಮಹಾಯುದ್ಧಾನಂತರದ ಜರ್ಮನಿ, ಜಪಾನಿನೊಡನೆ ಹೋಲಿಸಬಹುದೇ?* ಈ 70 ಗಂಟೆಗಳ ಲೆಕ್ಕಾಚಾರಕ್ಕೆ ಆಧಾರವಾದರೂ ಏನು? ಇಂತಹ ಇನ್ನೂ ಹಲವಾರು ಪ್ರಶ್ನೆಗಳು ಏಳುತ್ತವೆ.
ಎರಡನೇ ಮಹಾಯುದ್ಧಾನಂತರ ಜರ್ಮನಿ ಮತ್ತು ಜಪಾನಿನಲ್ಲಿ ಅತಿ ಹೆಚ್ಚು ಕೆಲಸದ ಅವಧಿಯೆಂದರೆ ವಾರಕ್ಕೆ 41ರಿಂದ 45 ಗಂಟೆ. ನಂತರ ಅದು ತೀವ್ರವಾಗಿ 26 ರಿಂದ 30 ಗಂಟೆಗೆ ಇಳಿಯಿತು.
ನಾರಾಯಣಮೂರ್ತಿಯವರು ಹೇಳಿರುವ ಒಂದು ಸಣ್ಣ ಅವಧಿಯಲ್ಲಿ ಜರ್ಮನಿ ಮತ್ತು ಜಪಾನಿನಲ್ಲಿ ವರ್ಷದಲ್ಲಿ ಕೆಲಸದ ಗರಿಷ್ಟ ಅವಧಿ 2200 ದಿಂದ 2400 ಗಂಟೆ. ಭಾರತದಲ್ಲಿ 1970ರಿಂದ 2020ರ 50 ವರ್ಷಗಳ ಅವಧಿಯಲ್ಲಿ ಸರಾಸರಿ ವಾರ್ಷಿಕ ಕೆಲಸದ ಗಂಟೆಗಳು 2077 ರಿಂದ 2122 ರ ನಡುವೆ ಇದ್ದವು. ಈ ಅವಧಿಯಲ್ಲಿ ಜರ್ಮನಿಯಲ್ಲಿ ಸರಾಸರಿ ವಾರ್ಷಿಕ ಕೆಲಸದ ಗಂಟೆಗಳು 2402 ರಿಂದ 1386ಕ್ಕೆ ಇಳಿದರೆ, ಜಪಾನಿನಲ್ಲಿ 2012ರಿಂದ 1386 ಕ್ಕೆ ಇಳಿಯಿತು. (ದಿ ಹಿಂದೂ, ಡಾಟಾ ಪಾಯಿಂಟ್, ಅಕ್ಟೋಬರ್ 31).
ಐಎಲ್‌ಒ ದತ್ತಾಂಶಗಳ ಪ್ರಕಾರ ಭಾರತದಲ್ಲಿ ಸರಾಸರಿ ದುಡಿಮೆ ವಾರದಲ್ಲಿ 47.7 ಗಂಟೆಗಳು, ಭಾರತದ ದುಡಿಮೆಗಾರರು ಜಗತ್ತಿನಲ್ಲೇ 6ನೇ ಅತಿ ಹೆಚ್ಚು ಕಷ್ಟಪಟ್ಟು ದುಡಿಯುವವರು. ಜಗತ್ತಿನ 10 ಅತಿದೊಡ್ಡ ಅರ್ಥವ್ಯವಸ್ಥೆಗಳಲ್ಲಂತೂ ಅತಿ ಹೆಚ್ಚು ಅವಧಿಗೆ ದುಡಿಯುವವರು. ಏಷ್ಯಾದಲ್ಲೂ ಕೂಡ. ಚೀನಾದಲ್ಲಿ ಇದು 46.1, ಮಲೇಸ್ಯಾದಲ್ಲಿ 43.2, ವಿಯೆಟ್ನಾಂನಲ್ಲಿ 41.5,ದಕ್ಷಿಣ ಕೊರಿಯಾದಲ್ಲಿ 37.9 ಇಂಡೋನೇಸ್ಯಾದಲ್ಲಿ 39.3 ಗಂಟೆಗಳು. (ಬಿಸಿನೆಸ್ ಸ್ಟಾಂಡರ್ಡ್, ನವಂಬರ್ 5)
ಇನ್ನು, ಶ್ರಮದ ಉತ್ಪಾದಕತೆಯನ್ನು ಒಂದು ಗಂಟೆಯಲ್ಲಿ ಸೃಷ್ಟಿಯಾಗುವ ಜಿಡಿಪಿ ಎಂದು ನಿರೂಪಿಸಲಾಗುತ್ತದೆ. ಮತ್ತು ಜಿಡಿಪಿಗಳನ್ನು ಹೋಲಿಸಲು ಪಿಪಿಪಿ(ಕೊಳ್ಳುವ ಶಕ್ತಿಯ ಹೋಲಿಕೆ) ಎಂಬುದನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಸಾಕ್ಷ್ಯಾಧಾರಗಳು, ಅಂಕಿ-ಅಂಶಗಳೆಂದರೆ ಇವರಿಗೇಕೆ ಇಷ್ಟೊಂದು ಹಗೆತನ !
ನಿಜ, ಈ ರೀತಿಯಲ್ಲಿ ನಿರೂಪಿಸಿರುವ ಉತ್ಪಾದಕತೆಯಲ್ಲಿ ಭಾರತ ಬಹಳ ಹಿಂದಿದೆ, 189 ದೇಶಗಳಲ್ಲಿ 131ನೇ ಸ್ಥಾನದಲ್ಲಿದೆ. ಆದರೆ ಭಾರತದಲ್ಲಿ 89% ದುಡಿಮೆ ಅಸಂಘಟಿತ/ಅನೌಪಚಾರಿಕ ವಲಯದಲ್ಲಿ ನಡೆಯುತ್ತದೆ. ಹೀಗಿರುವಾಗ ನಮ್ಮ ದುಡಿಮೆಗಾರರ ಉತ್ಪಾದಕತೆಯನ್ನು ನಿಖರವಾಗಿ ಅಳೆಯಲು ಸಾಕಷ್ಟು ಅಂಕಿ-ಅಂಶಗಳು ಲಭ್ಯ ಇವೆಯೇ? ಜರ್ಮನಿ ಮತ್ತು ಜಪಾನಿನಲ್ಲಿ ಅಸಂಘಟಿತ/ಅನೌಪಚಾರಿಕ ವಲಯದಲ್ಲಿ ಅನುಕ್ರಮವಾಗಿ 4.2% ಮತ್ತು 8% ಮಾತ್ರ ಎಂಬುದನ್ನೂ ಗಮನಿಸಬೇಕು.
ಇದಲ್ಲದೆ, ತಲಾ ಜಿಡಿಪಿ(ಪಿಪಿಪಿ)ಗೂ ಕೆಲಸದ ಗಂಟೆಗಳಿಗೂ ಸಂಬಂಧವೇನೂ ಇಲ್ಲ ಎಂಬುದನ್ನು ಈ ಐಎಲ್‍ಒ ಅಂಕಿ- ಅಂಶಗಳು ಹೇಳುತ್ತವೆ.
ದೇಶ | ತಲಾಜಿಡಿಪಿ(ಪಿಪಿಪಿ)($) | ಸರಾಸರಿಕೆಲಸದಅವಧಿ(ಗಂ) |
ಯುಎಸ್ | 76399 | 36.4 |
ಜರ್ಮನಿ | 63150 | 34.3 |
ಕೆನಡ | 58400 | 32.1 |
ಫ್ರಾನ್ಸ್ | 55493 | 30.1 |
ಯುಕೆ | 54603 | 35.9 |
ಇಟೆಲಿ | 51865 | 36.1 |
ದ.ಕೊರಿಯ | 50070 | 37.9 |
ಜಪಾನ್ | 45573 | 36.6 |
ಚೀನಾ | 21476 | 46.1 |
ಭಾರತ | 8379 | 47.7 |
ದೇಶಕಟ್ಟುವ ವಿಷಯದಲ್ಲಿ 70 ಗಂಟೆಗಳ ಕೆಲಸದ ಕರೆ ಬಹಳ ಸಂಕುಚಿತ ದೃಷ್ಟಿಯ ವಿಚಾರ ಎಂಬ ಟೀಕೆ ಮಾಡಿರು ಹಲವರು ಭಾರತದಲ್ಲಿ ವೇತನಗಳು ಅತ್ಯಂತ ಕಡಿಮೆ ಎಂಬ ಸಂಗತಿಯತ್ತವೂ ಗಮನ ಸೆಳೆದಿದ್ದಾರೆ.
ಮಾರ್ಗನ್ ಸ್ಟಾನ್ಲಿ ರಿಸರ್ಚ್ ಪ್ರಕಾರ ತಯಾರಿಕಾ ವಲಯದಲ್ಲಿ ಭಾರತದಲ್ಲಿ ವೇತನ ಪ್ರಮಾಣ ಗಂಟೆಗೆ $0.8. ನಮ್ಮ ಏಶ್ಯಾ ಖಂಡದಲ್ಲೇ , ಚೀನಾದಲ್ಲಿ ಸುಮಾರು ಇದರ 8 ಪಟ್ಟು, ಮಲೇಸ್ಯಾದಲ್ಲಿ 6 ಪಟ್ಟು, ವಿಯೆಟ್ನಾಂನಲ್ಲಿ 2 ಪಟ್ಟು ಹೆಚ್ಚಿವೆ, ಇಂಡೋನೇಸ್ಯಾದಲ್ಲೂ ಇದು $1.
ಹೀಗಿರುವಾಗ ನಾರಾಯಣ ಮೂರ್ತಿಯವರು ಭಾರತದಲ್ಲಿ ದುಡಿಮೆಯ ಅವಧಿ ಅತ್ಯಂತ ಕಡಿಮೆ ಮತ್ತು ನಮ್ಮ ಕಾರ್ಮಿಕರ ಉತ್ಪಾದಕತೆ ಅತ್ಯಂತ ಕಡಿಮೆ, ವಾರಕ್ಕೆ 70 ಗಂಟೆ ದುಡಿಸಿಕೊಳ್ಳುವುದು ಇದಕ್ಕೆ ಪರಿಹಾರ ಎಂಬ ತೀರ್ಮಾನಕ್ಕೆ ಯಾವ ಆಧಾರದಲ್ಲಿ ಬಂದರೋ?
ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ, ನಿರುದ್ಯೋಗ ದರ ಸಪ್ಟಂಬರಿನಲ್ಲಿ 7.09% ಇದ್ದದ್ದು ಅಕ್ಟೋಬರಿನಲ್ಲಿ 10.05%ಕ್ಕೆ ಜಿಗಿಯಲು ಕಳೆದ ತಿಂಗಳು ನಾರಾಯಣ ಮೂರ್ತಿಗಳ ಇನ್‍ಫೋಸಿಸ್ ಸೇರಿದಂತೆ ಭಾರತದ ತಾಂತ್ರಿಕ ಸೇವೆಗಳ ಹೊರಗುತ್ತಿಗೆಯ ದೊಡ್ಡ ಕಂಪನಿಗಳು ಕಾಲೇಜು ಗ್ರಾಜುಯೇಟ್‍ಗಳ ಭರ್ತಿಯನ್ನು ಸದ್ಯಕ್ಕೆ ನಿಲ್ಲಿಸುವುದಾಗಿ ಪ್ರಕಟಿಸಿದ್ದು, ಅಂದರೆ, ಸಾವಿರಾರು ಹೊಸ ಯುವ ಇಂಜಿನಿಯರುಗಳಿಗೆ ಉದ್ಯೋಗವಿಲ್ಲದಂತಾಗಿರುವುದು ಒಂದು ಕಾರಣ ಎಂದೂ ಹೇಳಲಾಗಿದೆ.
ಅದೇನೇ ಇರಲಿ, ಭಾರತದ ದುಡಿಮೆಗಾರರನ್ನು ಹೀಯಾಳಿಸುವಾಗ ಜಪಾನ್ ಮತ್ತು ಜರ್ಮನಿಯ ಉದಾಹರಣೆ ಕೊಡುವುದು ಮೇಲ್ವರ್ಗದ ಜನಗಳ ನಡುವೆ ‘ಲಾಗಾಯ್ತಿನಿಂದ ಬಂದಿರುವ ಪರಂಪರೆ’ ಎಂಬುದನ್ನೂ ಗಮನಿಸಬೇಕು.
ವಿಡಿಯೋ ನೋಡಿ: ಶಿಕ್ಷಣ ಇಲಾಖೆಯ ಜವಾಬ್ದಾರಿ ಪಂಚಾಯತ್ ರಾಜ್ ಇಲಾಖೆಗೆ! Janashakthi Media