‘ವಾರದಲ್ಲಿ 70 ಗಂಟೆ ಕೆಲಸ’ದ ಸಲಹೆ: ನಿಜವಾಗಿಯೂ ಯುವಜನರ ಹಿತದೃಷ್ಟಿಯಿಂದಲೋ ಅಥವಾ ಕಾರ್ಪೊರೇಟ್‍ಗಳ ಗರಿಷ್ಟ ಲಾಭಕ್ಕೋ?

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿಯವರ ‘ವಾರದಲ್ಲಿ 70 ಗಂಟೆಗಳ ಕೆಲಸ’ದ ಸಲಹೆಯು ಚರ್ಚೆಗೆ ಗ್ರಾಸವಾಗಿದೆ. ಇದು ನಾರಾಯಣ ಮೂರ್ತಿಯವರ ಬಯಕೆ ಮಾತ್ರವಲ್ಲ, ಭಾರತದ ಬಂಡವಾಳಶಾಹಿಗಳ ಮತ್ತು ನಮ್ಮನ್ನು ಆಳುವವರ ಬಯಕೆಯೂ ಆಗಿದೆ. ಉದ್ಯೋಗ ಮಾಡುತ್ತಿರುವವರೇ ದಿನದ ಹೆಚ್ಚು ಸಮಯ ದುಡಿಯುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಟ್ಟು, ಅವರಿಂದ ದುಡಿಸಿಕೊಳ್ಳಲು ಮುಂದಾಗಿ, ಅಗಾದವಾದ ಮಾನವ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡಾಗ ಮಾತ್ರ ದೇಶದ ಮತ್ತು ಜನತೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದೇಕೆ ನಮ್ಮ “ಉದ್ಯೋಗದಾತ”ರುಗಳು ಯೋಚಿಸುವುದಿಲ್ಲ? ಹಿತದೃಷ್ಟಿ

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಮೋಹನ್ ದಾಸ್ ಪೈ ಜೊತೆಗಿನ ಪಾಡ್ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತೀಯ ಉದ್ಯೋಗಿಗಳ ಉತ್ಪಾದಕತೆ (productivity) ಬಹಳ ಕಡಿಮೆ ಇದೆ. ಚೀನಾದಂತಹ ದೇಶಗಳ ಜೊತೆ ಪೈಪೋಟಿ ನಡೆಸಬೇಕಾದರೆ ಭಾರತೀಯರ ಉತ್ಪಾದಕತೆ ಹೆಚ್ಚಬೇಕು. ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜರ್ಮನಿ ಮತ್ತು ಜಪಾನೀಯರು ಹಾಕಿದ ರೀತಿಯಲ್ಲಿ ಭಾರತೀಯರು ಶ್ರಮ ಹಾಕಬೇಕು ಎಂದು ಮೂರ್ತಿ ಹೇಳಿದ್ದಾರೆ. ಇಷ್ಟೇ ಅಲ್ಲದೆ, “ಭಾರತದ ಕೆಲಸದ ಅವಧಿಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ” ಎಂದೂ ನಾರಾಯಣ ಮೂರ್ತಿ ಹೇಳಿದ್ದಾರೆ.

JSW ಗ್ರೂಪ್ CMD ಸಜ್ಜನ್ ಜಿಂದಾಲ್, Ola ಕ್ಯಾಬ್ಸ್ ಸಹ-ಸಂಸ್ಥಾಪಕ Ola ನ ಭವಿಶ್ ಅಗರ್ವಾಲ್ ಮತ್ತು ಪೈ ಅವರಂತಹ ಹಲವಾರು ಉದ್ಯಮದ ನಾಯಕರು ನಾರಾಯಣ ಮೂರ್ತಿಯವರ ಅಭಿಪ್ರಾಯಗಳನ್ನು ಬೆಂಬಲಿಸಿದರು ಮತ್ತು ನೆಟ್ಟಿಗರಿಂದ ಟೀಕೆಗಳನ್ನು ಎದುರಿಸಿದರು. ಕಳೆದ ವರ್ಷ, ಬಾಂಬೆ ಶೇವಿಂಗ್ ಕಂಪನಿಯ ಸಿಇಒ ಶಂತನು ದೇಶಪಾಂಡೆ ಒಬ್ಬರ ವೃತ್ತಿಜೀವನದ ಆರಂಭಿಕ ಹಂತದಲ್ಲಿ 18 ಗಂಟೆಗಳ ಕೆಲಸದ ದಿನಗಳನ್ನು ಬೆಂಬಲಿಸಿದರು. ಅವರ ಲಿಂಕ್ಡ್‌ಇನ್ ಪೋಸ್ಟ್ ಅವರಿಗೆ ಗಂಭೀರ ಹಿನ್ನಡೆಯನ್ನು ತಂದುಕೊಟ್ಟಿತು, ಅಂತಿಮವಾಗಿ ಅವರು ಕ್ಷಮೆಯಾಚಿಸುವ ಒತ್ತಾಯಕ್ಕೆ ಒಳಗಾದರು.

ಭಾರತದಲ್ಲಿ ಹೆಚ್ಚಿನ ಅವಧಿಯ ದುಡಿಮೆ :

ನಾರಾಯಣಮೂರ್ತಿಯವರು ಹೇಳುವಂತೆ ಭಾರತದಲ್ಲಿ ಕೆಲಸದ ಅವಧಿಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ ಎಂಬುದು ಸತ್ಯವಲ್ಲ. ಒಂದು ಕಾಲದಲ್ಲಿ ಸ್ವತಃ ಉದ್ಯಮಿಯಾಗಿದ್ದ ಐಟಿ ಉದ್ಯಮದ ಡೊಯೆನ್ ಮೂರ್ತಿ, ಭಾರತವು ಕಡಿಮೆ ಉತ್ಪಾದಕತೆಯ ಮಟ್ಟವನ್ನು ಹೊಂದಿದೆ ಎಂದು ತರ್ಕಿಸಿದರು. ILO ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಎಲ್‍ಒ)ದ ದತ್ತಾಂಶ ಮತ್ತು ತಲಾವಾರು ಜಿಡಿಪಿಯನ್ನು ನೋಡಿದಾಗ, ಸಂಪತ್ತು ಮತ್ತು ವಾರದ ಕೆಲಸದ
ಸಮಯದ ನಡುವೆ ತಿರುಗುಮುರುಗಾದ ಸಂಬಂಧವಿದೆ. ಹೆಚ್ಚಿನ ತಲಾವಾರು ಜಿಡಿಪಿ ಹೊಂದಿರುವ ದೇಶಗಳು ಕಡಿಮೆ ಕೆಲಸದ ಸಮಯವನ್ನು ಹೊಂದಿವೆ.

2023 ರಲ್ಲಿ ನವೀಕರಿಸಿದ ಐಎಲ್‍ಒ ದತ್ತಾಂಶದ ಪ್ರಕಾರ, ಪ್ರತಿ ಭಾರತೀಯ ಉದ್ಯೋಗಿ ವಾರಕ್ಕೆ ಸರಾಸರಿ 47.7 ಗಂಟೆಗಳ ಕಾಲ ದುಡಿಯುವ ಈಗಾಗಲೇ ವಿಶ್ವದ ಅತ್ಯಂತ ಕಠಿಣ ಕೆಲಸಗಾರರಾಗಿದ್ದಾರೆ.

ವಾಸ್ತವವಾಗಿ, 10 ದೊಡ್ಡ ಆರ್ಥಿಕತೆಗಳೊಂದಿಗೆ ಹೋಲಿಸಿದರೆ, ಭಾರತೀಯರು ದೀರ್ಘಾವಧಿಯ ಸರಾಸರಿ ಕೆಲಸದ ವಾರವನ್ನು ಹೊಂದಿದ್ದಾರೆ.ಮತ್ತು ಅತಿ ಕಡಿಮೆ ತಲಾವಾರು ಜಿಡಿಪಿ (8,379 ಡಾಲರ್) ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, 30.1 ಗಂಟೆಗಳಲ್ಲಿ ಕಡಿಮೆ ಕೆಲಸದ ವಾರವನ್ನು ಹೊಂದಿರುವ ಫ್ರಾನ್ಸ್ 55,493 ಡಾಲರ್‌ನಲ್ಲಿ ಅತಿ ಹೆಚ್ಚು ತಲಾ ಜಿಡಿಪಿ ಹೊಂದಿದೆ. ಕಾರ್ಮಿಕರು ವಾರದಲ್ಲಿ 46.1 ಗಂಟೆಗಳಲ್ಲಿ ದುಡಿಯುವ ಚೀನಾದಲ್ಲಿ ತಲಾ ಜಿಡಿಪಿ 21,476 ಡಾಲರ್ ಜಿಡಿಪಿ. (ಚಿತ್ರ ನೋಡಿ)

ಕಾರ್ಮಿಕರ ಕೆಲಸದ ಸಮಯ ಮತ್ತು  ಮಾಲಕರ ಹೆಚ್ಚುವರಿ ಮೌಲ್ಯ

ಕಾರ್ಮಿಕನು ತನ್ನ ಮಾಲೀಕನಿಗೆ ತನ್ನ ಶ್ರಮಶಕ್ತಿಯನ್ನು  ಮಾರುವ ಮೂಲಕ ತನ್ನ ಕೂಲಿಯನ್ನು ಪಡೆಯುತ್ತಾನೆ. ಸಾಮಾನ್ಯವಾಗಿ  ಅವನು ಮೊದಲ ನಾಲ್ಕು-ಐದು ಗಂಟೆಗಳ ಶ್ರಮದಲ್ಲಿ ( ಉತ್ಪಾದಕತೆಯ ಮಟ್ಟಕ್ಕೆ ಅನುಗುಣವಾಗಿ) ತಾನು ಪಡೆಯುವ ಕೂಲಿಗೆ ಸಮನಾದ ದುಡಿಮೆಯನ್ನು ಕೊಡುತ್ತಾನೆ. ಅದು ಸಾಮಾಜಿಕವಾಗಿ ಅಗತ್ಯವಾದ ಶ್ರಮ, ಅದರ ನಂತರ ಆತ ಮಾಡುವ ದುಡಿಮೆ ಮಾಲಿಕನ ಬಂಡವಾಳಕ್ಕೆ ಹೆಚ್ಚುವರಿ ಮೌಲ್ಯ ಕೊಡುವ ದುಡಿಮೆಯಾಗಿದೆ, ಇದೇ ಕಾರ್ಮಿಕರ ಶೋಷಣೆಯ ಮೂಲ ಎಂದು ಮಾರ್ಕ್ಸ್ ತೋರಿಸಿಕೊಟ್ಟಿದ್ದಾರೆ.

ಅಂದರೆ ಕೆಲಸದ ದಿನವನ್ನು 12 ಗಂಟೆಗೆ ವಿಸ್ತರಿಸಿದಾಗ, ಅಷ್ಟುಪ್ರಮಾಣದಲ್ಲಿ  ಮಾಲಕನಿಗೆ ದಕ್ಕುವ ಹೆಚ್ಚುವರಿ ಮೌಲ್ಯದ ಪ್ರಮಾಣವೂ ಹೆಚ್ಚುತ್ತದೆ, ಅಂದರೆ ವಾಸ್ತವವಾಗಿ ಕಾರ್ಮಿಕರ ಶೋಷಣೆ ಹೆಚ್ಚುತ್ತದೆ. ಹೀಗೆ, ಕೆಲಸದ ಸಮಯವನ್ನು ಹೆಚ್ಚಿಸುವುದು ಮತ್ತು ಕೂಲಿ/ಸಂಬಳವನ್ನು ಕಡಿಮೆ ಮಾಡುವುದು ಕಾರ್ಮಿಕರ ಶೋಷಣೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಕ್ರಮಗಳಾಗುತ್ತವೆ.

ಈಗಾಗಲೇ ಕೆಲಸ ಮಾಡಬಲ್ಲ ಎಲ್ಲರಿಗೂ ಉದ್ಯೋಗ ಸಿಗದ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಒಂದು ವ್ಯವಸ್ಥೆಯಲ್ಲಿ ಕೆಲಸದ ಸಮಯ ಹೆಚ್ಚು ಮಾಡಿದರೆ ನಿರುದ್ಯೋಗ ಮತ್ತಷ್ಟು ಹೆಚ್ಚಾಗಿ, ಜನರ ಆದಾಯ ಮತ್ತು ಜನರ ಕೊಳ್ಳುವ ಶಕ್ತಿ ಮತ್ತಷ್ಟು ಕಡಿಮೆಯಾಗುತ್ತದೆ. ಇದು ಒಟ್ಟು ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯಾಗುವ ಇತರ ಸರಕುಗಳ / ವಸ್ತುಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ನಿಜವಾಗಿಯೂ ಇಡೀ ದೇಶದ ಅರ್ಥವ್ಯವಸ್ಥೆಯ ಹಿತದೃಷ್ಟಿಯಿಂದ ಯೋಚಿಸುವವರು ಕೆಲಸದ ಸಮಯವನ್ನು ಕೆಲಸದ ಹೆಚ್ಚಿಸುವುದಕ್ಕಿಂತ, ಕಡಿಮೆ ಮಾಡುವ ಬಗ್ಗೆ ಸಲಹೆ ನೀಡಬೇಕಾಗಿತ್ತು.

ಇದನ್ನೂ ಓದಿ: ಬಂಡವಾಳಶಾಹಿ ನಿರುದ್ಯೋಗವನ್ನು ತರುತ್ತದೆ, ಅದನ್ನು ನಿವಾರಿಸಲಾರದು

ಪ್ರಸ್ತುತ, ತಲಾ 8 ಗಂಟೆಗಳಂತೆ ಮೂರು ಪಾಳಿಗಳಲ್ಲಿ ಕೆಲಸ ಮಾಡಲಾಗುತ್ತಿದ್ದಲ್ಲಿ, ಕೆಲಸದ ಸಮಯವನ್ನು 12 ಗಂಟೆಗೆ ಹೆಚ್ಚಿಸಿದರೆ, ಕೇವಲ 2 ಪಾಳಿಗಳನ್ನು ಮಾಡಲಾಗುತ್ತದೆ. ಅಂದರೆ 33%ದಷ್ಟು ಉದ್ಯೋಗ ನಷ್ಟವಾಗುತ್ತದೆ. ಕೆಲಸದ ಸಮಯವನ್ನು ಆರು ಗಂಟೆಗಳಿಗೆ ಇಳಿಸಿದರೆ ದಿನಕ್ಕೆ 4 ಪಾಳಿಗಳನ್ನು ಮಾಡಬಹುದು, ಅಂದರೆ ಯುವಕರಿಗೆ 25%ದಷ್ಟು ಉದ್ಯೋಗಾವಕಾಶಗಳು ಹೆಚ್ಚುತ್ತವೆ.

ನಿಜ, ಅಷ್ಟರ ಮಟ್ಟಿಗೆ “ಉದ್ಯೋಗದಾತ”ರಿಗೆ ಸಿಗುವ ಹೆಚ್ಚುವರಿ ಮೌಲ್ಯದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮಾಲೀಕರಿಗೆ ನಷ್ಟವಾಗುತ್ತದೆ ಎಂದು ಉದ್ಯಮಿಗಳ ಪರ ಇರುವವರು ವಾದಿಸಬಹುದು. ಆದರೆ ಇವರುಗಳು ನಿಜವಾಗಿಯೂ ದೇಶದ, ಯುವಜನರ ಉತ್ಪಾದಕತೆಯ ಬಗ್ಗೆ ಯೋಚಿಸುತ್ತಿದ್ದರೆ, ಉದ್ಯೋಗಗಳ ಅವಕಾಶಗಳು ಹೆಚ್ಚಾದಂತೆ, ಅದರಿಂದ ಶಕ್ತಿ, ಉತ್ಸಾಹ ತುಂಬಿದ ಯುವ ಕಾರ್ಮಿಕರೊಂದಿಗೆ ಉತ್ಪಾದಕತೆ  ಹೆಚ್ಚಾಗುತ್ತದೆ ಎಂದೂ ನಿರೀಕ್ಷಿಸಬಹುದಲ್ಲವೇ? ಜತೆಗೆ ಅವರು ಪಡೆಯುವ ವೇತನದ ಹಣ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ  ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದಂತೆ ಅದು ಮತ್ತಷ್ಟು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಹೆಚ್ಚಳ ಮಾಲಿಕರಿಗೂ ಮತ್ತಷ್ಟು ಲಾಭ ತರುತ್ತದೆ. ಜನರ ಕೊಳ್ಳುವ ಶಕ್ತಿ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಸರಕುಗಳ ಬೇಡಿಕೆಯಲ್ಲಿನ ಸ್ಥಗಿತತೆ ಮತ್ತು ಆರ್ಥಿಕ ಬಿಕ್ಕಟ್ಟಿರುವುದಿಲ್ಲ.

ಕಾರ್ಮಿಕರು ಯಂತ್ರಗಳಲ್ಲ:

ಕಾರ್ಮಿಕರು ಯಂತ್ರಗಳಲ್ಲ. ಯಂತ್ರಗಳ ಕೆಲಸದ ಅವಧಿಯನ್ನು ಕಡಿಮೆ ಮಾಡುವುದರಿಂದ ಉತ್ಪಾದನೆ ಕಡಿಮೆಯಾಗಬಹುದು. ಆದರೆ ಮನುಷ್ಯನ ಕೆಲಸದ ಸಮಯವನ್ನು ಕಡಿಮೆಗೊಳಿಸಿದರೆ ನಿರ್ದಿಷ್ಟ ಸಮಯದೊಳಗೆ ಲಭ್ಯವಿರುವ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿ ಶ್ರಮದ ಉತ್ಪಾದಕತೆ ಹೆಚ್ಚುತ್ತದೆ.

ಮತ್ತು ಅವರ ಸಾಮಾಜಿಕ ಸಂಬಂಧಗಳು ಸುಧಾರಿಸುತ್ತವೆ. ಜಪಾನ್‌ ದೇಶದ ವೇಗವಾಗಿ ಕುಸಿಯುತ್ತಿರುವ ಜನಸಂಖ್ಯೆಯು ಇದನ್ನು ಪ್ರತಿಬಿಂಬಿಸುತ್ತದೆ. ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸಿದ ಅಧ್ಯಯನಗಳೂ ಕೂಡ ಇದನ್ನೇ ಒತ್ತಿಹೇಳುತ್ತಿವೆ. ಅದಕ್ಕಾಗಿಯೇ ಪಶ್ಚಿಮದ ರಾಷ್ಟ್ರಗಳಲ್ಲಿ ಕೆಲಸದ ವಾರವನ್ನು ಐದು ದಿನಗಳಿಗೆ ಮತ್ತು ಕೆಲಸದ ಅವಧಿಯನ್ನು ಆರು ಅಥವಾ ಏಳು ಗಂಟೆಗಳಿಗೆ ಇಳಿಸಲಾಗುತ್ತಿದೆ.

ಹೆಚ್ಚಿನ ಕೂಲಿಗಾಗಿ ಹೋರಾಟ, ಕೆಲಸದ ಅವಧಿ ಏರಿಕೆಯ ವಿರುದ್ದ ದನಿ ಎತ್ತುವುದು ಮತ್ತು ಕಷ್ಟಪಟ್ಟು ಸಂಪಾದಿಸಿದ ಹಕ್ಕುಗಳ ರಕ್ಷಣೆ ಈಗ ಕಾರ್ಮಿಕರ ಕರ್ತವ್ಯವಾಗಿದೆ. ಒಗ್ಗಟ್ಟಿನ ದುಡಿಯುವ ಜನರ ಗುರಿಯು  ಹೊಸ ಸಮಾಜವನ್ನು ಸೃಷ್ಟಿ ಮಾಡುತ್ತದೆ ಎಂದು ಮಾರ್ಕ್ಸ್ ಹೇಳಿದ್ದು ಹೀಗೆ.- ‘ಕೆಲಸ ಮಾಡಲು ಬಯಸುವ ಕೈ ಮತ್ತು ಅದಕ್ಕೆ ಸಿದ್ಧವಾಗಿರುವ ಮನಸ್ಸು ಉತ್ಸಾಹದಿಂದ ತುಂಬಿದ ಹೃದಯದಿಂದ ಇರಬೇಕು.’

ವಿಡಿಯೋ ನೋಡಿ: ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್‌ ವೇಣುಗೋಪಾಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *