ವಿಧಾನಮಂಡಲ ಅಧಿವೇಶನ: ಏಳು ಲಕ್ಷ ಎಕರೆ ಅರಣ್ಯ ಪ್ರದೇಶ ಕಂದಾಯ ವ್ಯಾಪ್ತಿಗೆ ಸೇರ್ಪಡೆ

ಬೆಳಗಾವಿ: ರಾಜ್ಯದಲ್ಲಿ 3,30186.93 ಎಕರೆ ಪ್ರದೇಶವನ್ನು ಮಾತ್ರ ಡಿಮ್ಡ್‌ ಫಾರೆಸ್ಟ್‌ ಪ್ರದೇಶ ಎಂದು ಗುರುತಿಸಲಾಗಿದ್ದು, ಉಳಿದೆಲ್ಲಾ ಜಮೀನನ್ನು ಕಂದಾಯ ಇಲಾಖೆಗೆ ವಾಪಾಸ್ಸು ನೀಡಲಾಗಿದೆ ಸರ್ಕಾರ ಸ್ಪಷ್ಟಪಡಿಸಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕೇಳಲಾದ ಪ್ರಶ್ನೆಗೆ ಸರ್ಕಾರದ ಪರವಾಗಿ ಇಬ್ಬರು ಸಚಿವರು ಉತ್ತರವನ್ನು ನೀಡಿದರು.

ಪರಿಷತ್‌ ಸದಸ್ಯ ಕೆ.ಕೆ.ಹರೀಶ್‍ಕುಮಾರ್, ರಾಜ್ಯದಲ್ಲಿ 9,94,881.11 ಎಕರೆ ಪ್ರದೇಶವನ್ನು ಡಿಮ್ಡ್ ಫಾರೆಸ್ಟ್ ಸ್ಥಾನದಿಂದ ಹಿಂಪಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಆರಂಭದಲ್ಲಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿರುವ ಜಿಲ್ಲಾ ಮಟ್ಟದ ಸಮಿತಿಗಳು ಸುಪ್ರೀಂಕೋರ್ಟ್ ತೀರ್ಪನ್ನು ಆಧರಿಸಿ ಅರಣ್ಯ ಪ್ರದೇಶವನ್ನು ಗುರುತಿಸಿವೆ ಎಂದರು.

ಇದನ್ನು ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಇಲ್ಲ: ಸಚಿವ ಮಾಧುಸ್ವಾಮಿ

ಈ ಪ್ರಕಾರ ರಾಜ್ಯದಲ್ಲಿ ಒಟ್ಟು 3,30,186 ಲಕ್ಷ ಎಕರೆ ಪ್ರದೇಶ ಡಿಮ್ಡ್ ಫಾರೆಸ್ಟ್‌ ಗೆ ಸೀಮಿತವಾಗಿದೆ. ಇದಕ್ಕೂ ಮೊದಲು ಡಿಮ್ಡ್ ಫಾರೆಸ್ಟ್ ವಿಸ್ತೀರ್ಣ 11 ಲಕ್ಷ ಎಕರೆ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿತ್ತು. ನಂತರ ಅದರ ಗಾತ್ರ 9 ಲಕ್ಷ ಎಕರೆಗೆ ಇಳಿದಿತ್ತು. ಪ್ರಸ್ತುತ ಡಿಮ್ಡ್ ಫಾರೆಸ್ಟ್‌ ವಿಸ್ತೀರ್ಣ 3.30 ಲಕ್ಷ ಎಕರೆ ಆಗಿದೆ ಎಂದರು.

ಇದರ ವಿಚಾರವಾಗಿ ಸುಪ್ರೀಂಕೋರ್ಟ್‍ನಲ್ಲಿ ಯಾವುದೇ ವಿಚಾರಣೆ ಬಾಕಿ ಇರಲಿಲ್ಲ. ಆದರೂ ಹಿಂದಿನ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವಾಗ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಉಲ್ಲೇಖಿಸಲಾಗಿತ್ತು. ಅದರ ಪ್ರಕಾರ ನಮ್ಮ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಿದೆ. ಇದರ ಮೇಲೆ ತೀರ್ಪು ಪ್ರಕಟವಾಗುವ ಅಗತ್ಯ ಇಲ್ಲ. ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿರಲಿಲ್ಲ. ಸಂಪುಟ ಸಭೆಯಲ್ಲಿ ಆ ರೀತಿ ನಿರ್ಣಯ ಕೈಗೊಂಡಿದ್ದರಿಂದ ಅದರಂತೆ ನಡೆದುಕೊಂಡಿದ್ದೇವೆ, ವಿಷಯ ಇತ್ಯರ್ಥ್ಯವಾಗಿದೆ. ಜಂಟಿ ಸರ್ವೇ ಹಾಗೂ ಇತರ ವಿಷಯಗಳ ಕುರಿತು ಕಂದಾಯ ಇಲಾಖೆ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದರು.

ಇದನ್ನು ಓದಿ: ಆರ್ ವಿ ದೇಶಪಾಂಡೆ 2022 ನೇ ಸಾಲಿನ ಅತ್ಯುತ್ತಮ ಶಾಸಕ

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಎಕರೆಯಲ್ಲಿ 50 ಮರಕ್ಕಿಂತ ಹೆಚ್ಚಿದ್ದ ಭಾಗವನ್ನು ಅರಣ್ಯ ಎಂದು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅದನ್ನು ಆಧರಿಸಿ ಜಿಲ್ಲಾಧಿಕಾರಿಗಳ ಸಮಿತಿ ಡಿಮ್ಡ್ ಪ್ರದೇಶವನ್ನು ಗುರುತಿಸಿದೆ. 3.30 ಲಕ್ಷ ಎಕರೆ ಬಿಟ್ಟು, ಉಳಿದ 7.73 ಲಕ್ಷ ಎಕರೆ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಾಸ್ಸು ನೀಡಲಾಗಿದೆ. ಈ ವಿಷಯ ಸುಪ್ರೀಂಕೋರ್ಟ್‍ಗೆ ಹೋಗಬೇಕಿರಲಿಲ್ಲ. ಅದು ಅಧಿಕಾರಿಗಳು ಮಾಡಿದ ತಪ್ಪು ಎಂದರು.

ಈ ಹಿಂದೆ ನಿಯಮ 50-53ರಡಿ ಅರ್ಜಿ ಹಾಕಿದ್ದ ರೈತರಿಗೆ ಭೂಮಿ ಮಂಜೂರಾಗಿದೆ. ಅದರ ಪ್ರಮಾಣ 30615.20 ಎಕರೆಯಿದೆ. ಅರ್ಜಿ ಹಾಕಿದ ರೈತರಿಗೆ ಜಮೀನು ಉಳಿದಿದೆ. ಕೆರೆ, ಶಾಲೆ ನಡುತೋಪು ಸೇರಿದಂತೆ 21 ಸಾವಿರ ಎಕರೆ ಕಂದಾಯ ಇಲಾಖೆಗೆ ವಾಪಾಸ್ಸು ಬಂದಿದೆ. ಉಳಿದಂತೆ 1,63,073 ಎಕರೆಯೂ ಬೇರೆ ಮಾದರಿಯಲ್ಲಿ ವಾಪಾಸ್ಸು ಬಂದಿದೆ. ಬಹಳ ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಸಣ್ಣ ರೈತರಿಗೆ ಈಗ ಭೂಮಿ ಲಭ್ಯವಾಗಲಿದೆ ಎಂದು ಸ್ಪಷ್ಟ ಪಡಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *