ಚೆನ್ನೈ: ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ತಮಿಳುನಾಡಿನ ತೂತುಕುಡಿಯ ಪೊಲೀಸರು ವಶಕ್ಕೆ ಪಡೆದಿದ್ದ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರ ಸಾವಿಗೆ 7 ಗಂಟೆಗಳ ಕಾಲ ಪೊಲೀಸರ ಅಮಾನುಷ ಹಲ್ಲೆಯೇ ಕಾರಣ ಎಂಬ ಅಂಶವನ್ನು ಸಿಬಿಐ ಹೇಳಿದೆ.
ಈ ಘಟನೆಗೆ ದೇಶಾದ್ಯಂತ ಭಾರೀ ವಿರೋಧ, ಹೋರಾಟಗಳು ವ್ಯಕ್ತವಾಗಿದ್ದವು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು. ಈ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಚಾರ್ಜ್ಶೀಟ್ ಸಲ್ಲಿಸಿರುವ ಸಿಬಿಐ, ಸತತ 7 ಗಂಟೆಗಳ ಕಾಲ ಲಾಕಪ್ನಲ್ಲಿ ಜೈರಾಜ್ ಮತ್ತು ಬೆನ್ನಿಕ್ಸ್ ಅವರಿಗೆ ಭೀಕರವಾಗಿ ಹಿಂಸೆ ನೀಡಲಾಗಿತ್ತು. ಅದರ ಪರಿಣಾಮದಿಂದಲೇ ಅವರಿಬ್ಬರೂ ಸಾವನ್ನಪ್ಪಿದ್ದಾರೆ ಎಂಬ ಸತ್ಯವನ್ನು ಬಯಲು ಮಾಡಿದೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ 63 ವರ್ಷದ ಜಯರಾಜ್ ಮರದ ವ್ಯಾಪಾರಿಯಾಗಿದ್ದರು. ಲಾಕ್ಡೌನ್ ವೇಳೆ ಜೂನ್ 19ರಂದು ರಾತ್ರಿ 9 ಗಂಟೆಯ ನಂತರವೂ ಅಂಗಡಿ ತೆರೆದಿದ್ದ ಕಾರಣ ಪೊಲೀಸರು ಜಯರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿರಿಸಿಕೊಂಡಿದ್ದರು. ಜಯರಾಜ್ ಅವರ ಪುತ್ರ ಬೆನ್ನಿಕ್ಸ್ ಮೊಬೈಲ್ ಅಂಗಡಿ ನಡೆಸುತ್ತಿದ್ದು, ತಂದೆಯನ್ನು ಪೊಲೀಸರು ಕರೆದೊಯ್ದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆಗೆ ತೆರಳಿದ್ದರು. ಮಾತಿನ ಚಕಮಕಿ ಬಳಿಕ ಪೊಲೀಸರು ಬೆನ್ನಿಕ್ಸ್ನನ್ನೂ ವಶಕ್ಕೆ ಪಡೆದು, ಕೇಸ್ ದಾಖಲಿಸಿದ್ದರು.
ನವದೆಹಲಿಯ ಸಿಎಫ್ಎಸ್ಎಲ್ ತಜ್ಞರ ಅಭಿಪ್ರಾಯವನ್ನು ಪಡೆದು, ಸಾಕ್ಷಿಗಳನ್ನು ಕಲೆಹಾಕಲಾಗಿದೆ. ಸತನಾಂಕುಲಂ ಪೊಲೀಸ್ ಠಾಣೆಯಲ್ಲಿ ಸಿಕ್ಕ ವಸ್ತುಗಳ ಮೇಲಿನ ರಕ್ತ ಮತ್ತು ಜೈರಾಜ್ ಹಾಗೂ ಬೆನ್ನಿಕ್ಸ್ ರಕ್ತದ ಮಾದರಿ ಒಂದೇ ಆಗಿದೆ. ಪೊಲೀಸ್ ಠಾಣೆಯಲ್ಲಿ ಸಿಕ್ಕ ಮರದ ಲಾಠಿಯ ಮೇಲೆ ರಕ್ತದ ಕಲೆಗಳಿತ್ತು. ಅದನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದೇ ಲಾಠಿಯಿಂದ ಜೈರಾಜ್ ಮತ್ತು ಬೆನ್ನಿಕ್ಸ್ ಅವರನ್ನು ಥಳಿಸಲಾಗಿದೆ ಎಂಬುದಕ್ಕೆ ರಕ್ತದ ಪರೀಕ್ಷೆಯಿಂದ ಸಾಕ್ಷಿ ಸಿಕ್ಕಿದೆ. ಹಾಗೇ, ಸೆಲ್ನಲ್ಲಿದ್ದ ಗೋಡೆಯ ಮೇಲೂ ಜೈರಾಜ್ ಮತ್ತು ಬೆನ್ನಿಕ್ಸ್ ಅವರ ರಕ್ತದ ಕಲೆ ಇತ್ತು. ಹೀಗಾಗಿ, ಲಾಕಪ್ನಲ್ಲಿ ಬೆನ್ನಿಕ್ಸ್ ಮತ್ತು ಜೈರಾಜ್ ಅವರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿರುವುದು ಸತ್ಯ. ಜೂನ್ 19ರ ರಾತ್ರಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಪೊಲೀಸ್ ಠಾಣೆಯ ಒಳಗೆ ಜೈರಾಜ್ ಮತ್ತು ಬೆನ್ನಿಕ್ಸ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಸಿಬಿಐ ತನಿಖೆ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ, ಪೊಲೀಸರು ಸಾಕಷ್ಟು ಸುತ್ತು ಲಾಠಿಯಿಂದ ಥಳಿಸಿದ್ದಾರೆ. ಅವರ ಮೈಮೇಲೆ ಗಾಯಗಳಾಗಿ, ರಕ್ತ ಸೋರುತ್ತಿದ್ದರೂ ಥಳಿಸಿದ್ದಾರೆ. ಇದರಿಂದಲೇ ಅವರಿಗೆ ಪ್ರಜ್ಞೆ ತಪ್ಪಿತ್ತು. ಸತಂಕುಲಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಶ್ರೀಧರ್ ಅವರೇ ಪದೇ ಪದೆ ಅವರಿಬ್ಬರಿಗೂ ಥಳಿಸುವಂತೆ ತಮ್ಮ ಸಿಬ್ಬಂದಿಗಳಿಗೆ ಆದೇಶ ನೀಡಿದ್ದಾರೆ. ನಂತರ ಜೈರಾಜ್ ಮತ್ತು ಬೆನ್ನಿಕ್ಸ್ ಅವರ ಬಟ್ಟೆಯನ್ನೂ ಬಿಚ್ಚಿಸಿ, ಚರ್ಮದಿಂದ ರಕ್ತ ಸೋರುವಂತೆ ಬರಿಮೈಗೆ ಲಾಠಿಯಿಂದ ಹೊಡೆಯಲಾಗಿದೆ ಎಂದು ಕೂಡ ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ.
ತಂದೆಯನ್ನು ಬಿಡುಗಡೆ ಮಾಡುವಂತೆ ಠಾಣೆ ಎದುರು ಪ್ರತಿಭಟಿಸಿದ ಕಾರಣ ಬೆನ್ನಿಕ್ಸ್ಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ ಜಯರಾಜ್ ಅವರಿಗೂ ಥಳಿಸಿದ್ದರು ಎಂದು ಅವರ ಸಂಬಂಧಿಕರು ಪೊಲೀಸರ ಮೇಲೆ ಆರೋಪ ಮಾಡಿದ್ದರು. ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 23ರಂದು ಇಬ್ಬರೂ ಸಾವನ್ನಪ್ಪಿದ್ದರು. ಪೊಲೀಸರ ದೌರ್ಜನ್ಯದಿಂದಲೇ ಅವರಿಬ್ಬರೂ ಸಾವನ್ನಪ್ಪಿದರು ಎಂದು ಜೂನ್ 24ರಂದು ತಮಿಳುನಾಡಿನ ಹಲವೆಡೆ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನ ಬಂದ್ ಮಾಡಿ ಪ್ರತಿಭಟಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಹಲವು ಮಾಹಿತಿಗಳನ್ನು ಬಯಲಿಗೆಳೆದಿದೆ.
ಈ ಪ್ರಕರಣದ ಬಗ್ಗೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತೂತುಕುಡಿ ಎಸ್ಪಿ ಅರುಣ್ ಗೋಪಾಲನ್ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿತ್ತು. ಬಳಿಕ, ತೂತುಕುಡಿ ಪೊಲೀಸ್ ವಿಭಾಗವು ಸಾತ್ತಾನ್ಕುಳಂ ಠಾಣೆಯ ಎಸ್ಐಗಳಾದ ಬಾಲಕೃಷ್ಣನ್ ಮತ್ತು ಪಿ ರಘು ಗಣೇಶ್ ಅವರನ್ನು ಅಮಾನತುಗೊಳಿಸಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. ಇಂದು ಚಾರ್ಜ್ಶೀಟ್ ಸಲ್ಲಿಸಿರುವ ಸಿಬಿಐ ಆ ದಿನ ಏನೇನು ನಡೆದಿತ್ತು, ಅದಕ್ಕೆ ಸಾಕ್ಷಿಗಳೇನು ಎಂಬ ಬಗ್ಗೆ ವಿವರ ನೀಡಿದೆ.