ಡಿಸೆಂಬರ್ 13 ಮತ್ತು 14ರಂದು ಲೋಕಸಭೆ ಮತ್ತು 16 ಮತ್ತು 17ರಂದು ರಾಜ್ಯಸಭೆಯಲ್ಲಿ “ಭಾರತದ ಸಂವಿಧಾನದ 75 ವರ್ಷಗಳ ಭವ್ಯ ಪಯಣ’ ಎಂಬ ಹೆಸರಿನಲ್ಲಿ ವಿಶೇಷ ಚರ್ಚೆ ನಡೆಯಿತು. ಸಂವಿಧಾನದ ಅಂಗೀಕಾರದ 75ನೇ ವಾರ್ಷಿಕೋತ್ಸವದ ಭಾಗವಾಗಿ ಇದನ್ನು ನಡೆಸಲಾಯಿತು ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ, ಇದನ್ನು ನಡೆಸಿರುವುದು ಆಳುವವರು ಈ ಸಂವಿಧಾನವನ್ನು ಮೂಲೆಗುಂಪು ಮಾಡಿ ತಮ್ಮ ‘ಹಿಂದೂರಾಷ್ಟ್ರ’ ಕಲ್ಪನೆಯನ್ನು ಹೇರಲು ಹೊರಟಿದ್ದಾರೆ ಎಂಬ ಸಂದೇಹ ಬಲಗೊಳ್ಳುತ್ತಿರುವುದನ್ನು 2024ರ ಲೋಕಸಭಾ ಫಲಿತಾಂಶಗಳು ಖಚಿತಪಡಿಸಿರುವ ಹಿನ್ನೆಲೆಯಲ್ಲಿ ಇರಬಹುದೇ ಎಂಬುದು ಕೆಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಏಕೆಂದರೆ, ಇದನ್ನು ಸಿಪಿಐ(ಎಂ) ಸಂಸದ ಡಾ. ಜಾನ್ ಬ್ರಿಟ್ಟಾಸ್ ರಾಜ್ಯಸಭೆಯಲ್ಲಿನ ಚರ್ಚೆಯಲ್ಲಿ ವರ್ಣಿಸಿದಂತೆ, ಪ್ರಧಾನ ಮಂತ್ರಿಗಳು ಸೇರಿದಂತೆ ಆಳುವ ಪಕ್ಷದ ಸದಸ್ಯರು ‘ಭೀಷಣ ಮತ್ತು ಘೋರ’ 65 ವರ್ಷಗಳು ಹಾಗೂ 10 ವರ್ಷಗಳ ‘ಭವ್ಯ’ ಪಯಣದ ಚರ್ಚೆಯಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಜನ್ಮಗಳು
ಅದೇನೇ ಇರಲಿ, ಈ ಚರ್ಚೆ ಮತ್ತು ನಂತರದ ಘಟನೆಗಳು ಆಳುವ ಪಕ್ಷವನ್ನು ಕುರಿತಂತೆ ಸಂದೇಹವನ್ನು ನಿವಾರಿಸುವ ಬದಲು ಇನ್ನಷ್ಟು ಗಟ್ಟಿಗೊಳಿಸಿರುವಂತೆ ಕಾಣುತ್ತದೆ. ಕಾಂಗ್ರೆಸ್ ಮುಖಂಡರು ಲೋಕಸಭಾ ಚುನಾವಣೆಗಳು ಮತ್ತು ಅದರ ಫಲಿತಾಂಶಗಳ ನಂತರ ಸಂವಿಧಾನದ ಬಗ್ಗೆ ಬಹಳಷ್ಟು ಮಾತನಾಡುತ್ತಿರುವುದರಿಂದ ಕುಪಿತರಾದಂತಿರುವ ಗೃಹಮಂತ್ರಿಗಳು ಕಾಂಗ್ರೆಸ್ ಪಕ್ಷವನ್ನು ಅಂಬೇಡ್ಕರ್-ವಿರೋಧಿ ಎಂದು ಬಿಂಬಿಸುವ ಭರದಲ್ಲಿ ಹೇಳಿರುವ ಮಾತುಗಳು ಈಗ ತಮಗೇ ತಿರುಗುಬಾಣವಾಗುತ್ತಿವೆ ಎಂದು ಅವರು ನಿರೀಕ್ಷಿಸಿರಲಿಕ್ಕಿಲ್ಲ. ಆದರೆ ಎಂದಿನಂತೆ ಆಳುವ ಪಕ್ಷ ಅದನ್ನೇ ಒಂದು ಅವಕಾಶವಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ.
ಎಂದಿನಂತೆ ಅರೆ ಸತ್ಯಗಳು, ಮತ್ತು ಸುಳ್ಳುಗಳು
ಅಂಬೇಡ್ಕರ್ ಎನ್ನುವುದು ಈಗೊಂದು ಫ್ಯಾಷನ್ ಆಗಿಬಿಟ್ಟಿದೆ ಎನ್ನುತ್ತ ಆರು ಬಾರಿ ಅಂಬೇಡ್ಕರ್ ಹೆಸರು ಉಚ್ಚರಿಸಿ, ಇಷ್ಟೊಂದು ಬಾರಿ ದೇವರ ಹೆಸರು ತಗೊಂಡಿದ್ದರೆ ಏಳು ಜನ್ಮಗಳ ಕಾಲ ಸ್ವರ್ಗ ಸಿಗುತ್ತಿತ್ತು ಎಂದು ಅವರು ಹೇಳಿರುವುದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿಜ ಹೇಳಬೇಕೆಂದರೆ, ಇದರಲ್ಲಿ ಹೊಸತೇನೂ ಇಲ್ಲ, ಇದು ಅಧಿಕಾರಕ್ಕಾಗಿ ಹಾಕೊಕೊಂಡ ಮುಖವಾಡ ಬಿದ್ದು ಹೋಗಿ ಅವರ ನಿಜಮುಖವನ್ನು ಬಯಲಿಗೆಳೆದು ತಂದಿದೆ ಎನ್ನಬಹುದೇನೋ.
![](https://janashakthimedia.com/wp-content/uploads/2024/12/shah-god-ambedkar-191224-300x233.jpg)
“ಯಾರಿಗೆ ಬೇಕು ಸ್ವರ್ಗ? ಈ ನೆಲದಲ್ಲಿ ನಾನುಬದುಕಲು ಸಾಧ್ಯವಾಗುವಂತೆ ಖಚಿತಪಡಿಸಿದರು!”
‘75 ವರ್ಷಗಳ ಭವ್ಯ ಪಯಣ’ದ ಬಗ್ಗೆ ಹೇಳುವ ಬದಲು ಗೃಹಮಂತ್ರಿ ಅಮಿತ್ ಷಾ ಡಾ. ಅಂಬೇಡ್ಕರ್‌ರವರ ಅವಹೇಳನ ಮಾಡಿದ್ದಷ್ಟೇ ಅಲ್ಲ, ಅವರ ಹೆಸರು ಹೇಳಿ ಕಾಂಗ್ರೆಸನ್ನು ಮೂದಲಿಸಲು ಮಾಡಿದ ಉಲ್ಲೇಖಗಳಲ್ಲಿ ಹೆಚ್ಚಿನವು ಅರೆ ಸತ್ಯಗಳು, ಕೆಲವಂತೂ ಸುಳ್ಳುಗಳು ಎಂದು ಸ್ವತಂತ್ರ ಭಾರತದ ಇತಿಹಾಸ ಕಂಡವರಿಗೆ, ತಿಳಿದವರಿಗೆ ಎದ್ದು ಕಾಣುತ್ತಿದೆ. ಈ ಮೂಲಕ ದೇಶದ ಗೃಹಮಂತ್ರಿಗಳದ್ದು ಮಾತ್ರವಲ್ಲ, ಪ್ರಧಾನ ಮಂತ್ರಿಗಳೂ ಸೇರಿದಂತೆ ಅವರ ಪಕ್ಷದ ನಿಜಚಾರಿತ್ರ್ಯ ಮತ್ತೊಮ್ಮೆ ಬಯಲಿಗೆ ಬಂದಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇಂತಹ ಅವಹೇಳನಕಾರೀ ಟಿಪ್ಪಣಿಗಳ ನಂತರವೂ ಅವರು ದೇಶದ ಗೃಹಮಂತ್ರಿ ಹುದ್ದೆಯಲ್ಲಿರಲು ಅನರ್ಹರು, ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕು ಎಂಬ ಬೇಡಿಕೆ ಹಲವೆಡೆಗಳಿಂದ ಬಂದಾಗಲೂ ದೇಶದ ಪ್ರಧಾನ ಮಂತ್ರಿಗಳು ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.
ಈಗ ಪ್ರಧಾನ ಮಂತ್ರಿಗಳ ಸರ್ಟಿಫಿಕೇಟನ್ನೂ ಪಡೆದಿರುವ ಗೃಹಮಂತ್ರಿ ಗಳ ಈ ಭಾಷಣದಲ್ಲಿ ‘ಹಿಂದೂ ಕೋಡ್ ಬಿಲ್’ನ ಪ್ರಸ್ತಾಪವಿದೆ. ಅದು ಕಾಂಗ್ರೆಸ್ ತಂದ ‘ಹಿಂದೂ-ವಿರೋದಿ’ ಮಸೂದೆ ಎಂದಿದ್ದಾರೆ. ಆದರೆ ನಿಜವಾಗಿಯೂ ಅದು ಹಿಂದೂ ಸಮುದಾಯಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಅನ್ಯಾಯಗಳನ್ನು ಕೊನೆಗೊಳಿಸುವ ಉದ್ದೇಶದ ಸುಧಾರಣಾ ಕಾನೂನುಗಳನ್ನು ಹೊಂದಿದ್ದ ಸಂಹಿತೆಯಾಗಿತ್ತು. ಅದನ್ನು ಸಂವಿಧಾನ ಸಭೆಯಲ್ಲಿಯೇ ಅಕ್ಟೋಬರ್ 1947ರಲ್ಲಿ ಮಂಡಿಸಿದವರು ಸ್ವತಃ ಡಾ.ಅಂಬೇಡ್ಕರ್. ಅದನ್ನು ಬಲವಾಗಿ ಬೆಂಬಲಿಸಿದವರು ಆಗಿನ ಪ್ರಧಾನಿ ನೆಹರೂ. ಬಲವಾಗಿ ವಿರೋಧಿಸಿದವರು ಜನಸಂಘದ ಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಕಾಂಗ್ರೆಸಿನಲ್ಲೇ ಇದ್ದ ಕೆಲವು ಬ್ರಾಹ್ಮಣವಾದಿಗಳು. ಆರೆಸ್ಸೆಸ್ ಇದರ ವಿರುದ್ಧ ದೊಡ್ಡ ಅಪಪ್ರಚಾರವನ್ನೇ ನಡೆಸಿತು. ಕಾಂಗ್ರೆಸಿನಲ್ಲಿದ್ದ ಪ್ರಗತಿಪರರು ‘ಸಮತೋಲನ’ ತರಲು ಪ್ರಯತ್ನಿಸಿದರೂ ಈ ಮಸೂದೆಗೆ ಅಂಗೀಕಾರ ದೊರೆಯಲಿಲ್ಲ. ಇದರಿಂದ ಬೇಸತ್ತು ಡಾ.ಅಂಬೇಡ್ಕರ್ ತಮ್ಮ ಕಾನೂನುಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗೆ ಅವರು ರಾಜೀನಾಮೆ ನೀಡಬೇಕಾಗಿ ಬಂದದ್ದು ನೆಹರೂರವರಿಂದಾಗಿ ಅಲ್ಲ, ಬದಲಾಗಿ ಈಗಿನ ಹಿಂದುತ್ವ ಮಂದಿಯ ಪೂರ್ವಜರು ಮತ್ತು ಸಾಮಾಜಿಕ ಪ್ರಶ್ನೆಗಳಲ್ಲಿ ಅವರಂತೆಯೇ ಯೋಚಿಸುತ್ತಿದ್ದ ಕೆಲವು ಕಾಂಗ್ರೆಸಿಗರಿಂದಾಗಿ ಎಂಬುದನ್ನು ಈ ಸಂದರ್ಭದಲ್ಲಿ ಹಲವರು ನೆನಪಿಸಿದ್ದಾರೆ.
ಗೃಹಮಂತ್ರಿಗಳ ಈ ಮೋದಿ-ಬೆಂಬಲಿತ ಭಾಷಣದಲ್ಲಿನ ಹುಸಿ ಉಲ್ಲೇಖಗಳಿಗೆ ಇದು ಒಂದು ಉದಾಹರಣೆಯಷ್ಟೇ. ಇನ್ನೂ ಹಲವು ಅರೆಸತ್ಯಗಳು ಮತ್ತು ಸುಳ್ಳುಗಳನ್ನು ಹಲವಾರು ರಾಜಕೀಯ ವಿಶ್ಲೇಷಕರು ಬಯಲಿಗೆ ತಂದಿದ್ದಾರೆ.
ಇದಕ್ಕೆ ಮೊದಲು ಈ ವಿಷಯದಲ್ಲಿ ಪ್ರಧಾನ ಮಂತ್ರಿಗಳು ತಮ್ಮದೇ ರೀತಿಯಲ್ಲಿ ದೇಶದ ಒಳಿತಿಗಾಗಿ, ಅವರು ‘ಸಂವಿಧಾನ-ಪ್ರೇರಿತ’ ಎಂದ ‘ಹನ್ನೊಂದು ನಿರ್ಧಾರ’ಗಳನ್ನು ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.
ಸಿಪಿಐ(ಎಂ) ಸಂಸದ ಬ್ರಿಟ್ಟಾಸ್ ರಾಜ್ಯಸಭೆಯಲ್ಲಿ ಇದನ್ನು ಪ್ರಧಾನಿಗಳ ‘ಹನ್ನೊಂದು ಮಂತ್ರ’ಗಳು ಎಂದು ವರ್ಣಿಸಿದ್ದಾರೆ. ಈ ಹೊಸ ಮಂತ್ರಗಳಲ್ಲೂ ಹೊಸದೆಂಬುದು ಏನೂ ಇಲ್ಲ. ಉದಾ: ಇದರಲ್ಲಿ ಮೊದಲನೆಯದು ‘ಎಲ್ಲ ನಾಗರಿಕರು ತಂತಮ್ಮ ಕರ್ತವ್ಯಗಳನ್ನು ನೆರವೇರಿಸಬೇಕು’. ಇದು ಪ್ರಧಾನಮಂತ್ರಿಗಳು ಮಣಿಪುರಕ್ಕೆ ಭೇಟಿ ನೀಡುವುದರೊಂದಿಗೆ ಅವರಿಂದಲೇ ಆರಂಭವಾಗಲಿ ಎಂದು ಈ ಬಗ್ಗೆ ಮಾತಾಡುತ್ತ ಜಾನ್ ಬ್ರಿಟ್ಟಾಸ್ ಹೇಳಿದರು. ದೇಶದ ಎಲ್ಲ ಜವಾಬ್ದಾರಿಯುತ ನಾಗರಿಕರ ಆಶಯವೂ ಇದೇ ಆಗಿದೆ.
ಇದೊಂದು ‘ಮಂತ್ರ ‘ಮಾತ್ರವಲ್ಲ, ಅವರ ಇತರ ಹತ್ತೂ ಮಂತ್ರಗಳನ್ನು ಮೊದಲು ಸ್ವತಃ ಪ್ರಧಾನಿಗಳು ಮತ್ತು ಅವರ ಪಕ್ಷ ಪಾಲಿಸಿ ಮೇಲ್ಪಂಕ್ತಿ ಹಾಕಿದರೆ ದೇಶಕ್ಕೆ ನಿಜವಾಗಿಯೂ ಒಳಿತಾಗುತ್ತದೆ ಎಂದು ಜಾನ್ ಬ್ರಿಟ್ಟಾಸ್ ಮಾತ್ರವಲ್ಲ ಹಲವಾರು ರಾಜಕೀಯ ವಿಶ್ಲೇಷಕರು ಆಶಿಸಿದ್ದಾರೆ. ಇನ್ನು ಕೆಲವರು ಹೇಳುವಂತೆ ಇದು 15 ಲಕ್ಷ ರೂ. ಪ್ರತಿ ಬ್ಯಾಂಕ್ ಖಾತೆಗೆ, ವರ್ಷಕ್ಕೆ 2 ಕೋಟಿ ಉದ್ಯೋಗ ನಿರ್ಮಾಣ ಮುಂತಾದ ವಚನಭಂಗಗಳಿಂದ ಗಮನ ತಿರುಗಿಸಲು ಎಂದೂ ಇರಬಹುದು.( Modi’s Masterplan: 11 Resolutions to Shift Focus from Broken Promises, ಸಂಜಯ್ ಕೆ ಝಾ, ದಿ ವೈರ್, ಡಿ.15).
‘ತಳ್ಳಾಟದ ರಾಜಕೀಯ’
ಗೃಹಮಂತ್ರಿಗಳ ‘ಫ್ಯಾಷನ್’ ಹೇಳಿಕೆಯ ನಂತರ ಈಗ ‘ತಳ್ಳಾಟ’ದ ರಾಜಕೀಯ ಆರಂಭವಾದಂತಿದೆ. ಇದು ಗೃಹಮಂತ್ರಿಗಳಿಗಾಗಿರುವ ‘ಮುಜುಗರ’ದಿಂದ ಗಮನವನ್ನು ಬೇರೆಡೆಗೆ ತಿರುಗಿಸಲಿಕ್ಕಾಗಿ ಎಂದು ಕೆಲವು ವೀಕ್ಷಕರು ಅಭಿಪ್ರಾಯ ಪಟ್ಟರೆ, ಇದರ ಹಿಂದೆ ಇನ್ನೂ ಗಂಭೀರವಾದ ಮತ್ತು ಪ್ರಜಾಪ್ರಭುತ್ವಕ್ಕೆ ಆತಂಕಕಾರಿಯಾದ ಯೋಜನೆ ಇರುವಂತಿದೆ ಎಂದು ಇನ್ನು ಕೆಲವರು ಸಂದೇಹ ಪಡುತ್ತಿದ್ದಾರೆ. ಇದನ್ನೂ ತಳ್ಳಿ ಹಾಕುವಂತಿಲ್ಲ.
![](https://janashakthimedia.com/wp-content/uploads/2024/12/shah-push-politics-201224-2-300x157.jpg)
“ರಾಹುಲ್ ಗಾಂಧಿ ಒಬ್ಬ ಸಂಸದರನ್ನು ತಳ್ಳಿದರು, ಅವರು ನನ್ನ ಮೇಲೆ ಬಿದ್ದರು”
“ರಾಹುಲ್ ನನ್ನನ್ನು ತಳ್ಳಿದರು
ಅದೊಂದು ಕೊಲೆ ಪ್ರಯತ್ನ
ಭಯೋತ್ಪಾದಕ ದಾಳಿ!ಯುಎಪಿಎ!
ಏಕೆಂದರೆ ‘ರಾಹುಲ್ ಗಾಂಧಿ ತಳ್ಳಿದ್ದರಿಂದ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡರು ಎಂದುಆರಂಭವಾದ ಆರೋಪ ಹೊಸ-ಹೊಸ ರೂಪ ಪಡೆದು ಈಗ ರಾಹುಲ್ ಗಾಂಧಿ ಬಿಜೆಪಿಯ ಒಬ್ಬ ಮಹಿಳಾ ಬುಡಕಟ್ಟು ಸಂಸದರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಎಫ್‌ಐಆರ್ ಮಟ್ಟವನ್ನು ತಲುಪಿದೆ. ಬಿಜೆಪಿ ಮಂತ್ರಿಗಳು ತಲೆಗೊಬ್ಬರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ, ‘ಸಂತ್ರಸ್ತರು’ ಹೇಳಿರುವುದಕ್ಕೂ ಅವಕ್ಕೂ ತಾಳೆಯಾಗುತ್ತಿಲ್ಲ. ಆದರೆ ಇದು ಹಾಡುಹಗಲೇ ಸಂಸತ್ತಿನ ಪ್ರವೇಶದ್ವಾರದಲ್ಲೇ ನಡೆದಿದ್ದರೂ, ಎರಡೂ ಸದನಗಳ ಅಧ್ಯಕ್ಷರುಗಳು ಸುತ್ತ ಮುತ್ತ ಇರುವ ಸಿಸಿಟಿವಿಗಳ ಮೂಲಕ ನಿಜವಾಗಿ ನಡೆದಿರುವುದೇನು ಎಂದು ಪರಿಶೀಲಿಸುವ ಬದಲು ಮೌನವಾಗಿದ್ದಾರೆ ಏಕೆ ಎಂದು ಹಲವು ರಾಜಕೀಯ ವೀಕ್ಷಕರು ಆತಂಕದಿಂದ ಕೇಳುತ್ತಿದ್ದಾರೆ.
“ರಾಹುಲ್ ಗಾಂಧಿಯ ಮೇಲೆ ಕೊಲೆಪ್ರಯತ್ನದ ಆಪಾದನೆ ಹಾಕಲಾಗಿದೆ. ಈ ಆರೋಪ ನೈಜ ಎಂದು ಕಾಣುವಂತೆ ಮಾಡಲು ಆ ಇಬ್ಬರು ಬಿಜೆಪಿ ಸಂಸದರನ್ನು ಬಹಳ ಸಡಗರದೊಂದಿಗೆ ಐಸಿಯುನಲ್ಲಿ ದಾಖಲಿಸಲಾಗಿದೆ. ಒಬ್ಬ ಸಂಸದರ ಹಣೆಯ ಮೇಲಿದ್ದ ಸಣ್ಣ ಪಟ್ಟಿ ಕ್ರಮೇಣ ಒಂದು ಮುಂಡಾಸಿನ ರೂಪ ಪಡೆದಿದೆ. ಆಸ್ಪತ್ರೆಯ ಮುಖ್ಯಸ್ಥ ಕ್ಯಾಮರಾ ಮುಂದೆ ಅವರು ವೈದ್ಯಕೀಯ ವೀಕ್ಷಣೆಯಲ್ಲಿ ಇದ್ದಾರೆ ಎನ್ನುತ್ತಾರೆ…….ಇವೆಲ್ಲವೂ ಹಾಸ್ಯಾಸ್ಪದವಾಗಿ ಕಾಣುತ್ತವೆ, ಜತೆಗೇ ಅಷ್ಟೇ ಭೀತಿಯನ್ನೂ ಉಂಟುಮಾಡುತ್ತವೆ” ಎನ್ನುತ್ತಾರೆ ಪ್ರಖ್ಯಾತ ಚಿಂತಕ ಮತ್ತು ದಿಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದರವರು
( ದಿ ವೈರ್, ಡಿ.20)
ತಳ್ಳಾಟದಲ್ಲಿ ಗಾಯಗೊಂಡು ಸಣ್ಣ ತಲೆಪಟ್ಟಿ ಮುಂಡಾಸು ಮಟ್ಟಕ್ಕೇರಿದ ಬಿಜೆಪಿ ಸಂಸದರು, 25 ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಮಿಷನರಿ ಗ್ರಹಂ ಸ್ಟೇನ್ಸ್ ಮತ್ತು ಆತನ ಮೂವರು ಪುಟ್ಟ ಮಕ್ಕಳನ್ನು ಜೀವಂತ ಸುಟ್ಟ ಪ್ರಕರಣದಲ್ಲಿ ಮತ್ತು ನಂತರ ಒಡಿಶಾ ವಿಧಾನ ಸಭೆಯ ಮೇಲೆ ಭಜರಂಗ ದಳ ಮತ್ತು ಇತರ ಸಂಘಟನೆಗಳು ನಡೆಸಿದರೆನ್ನಲಾದ ದಾಳಿಯಲ್ಲಿ ಆರೋಪಿಯಾಗಿದ್ದವರು ಎಂದು ವಿಕಿಪಿಡಿಯದಲ್ಲಿ ದಾಖಲಾಗಿದೆ!
ಯಾವುದೇ ಪ್ರಶ್ನೆಯನ್ನು ಹೂತು ಹಾಕಬಲ್ಲೆವು ಎಂಬುದನ್ನು ಇದುವರೆಗೆ ಬೀದಿಗಳಲ್ಲಿ ತೋರಿಸುತ್ತಿದ್ದುದನ್ನು ಈಗ ಸಂಸತ್ತಿಗೇ ಒಯ್ದಿದ್ದಾರೆ ಎಂದು ಪ್ರೊ. ಅಪೂರ್ವಾನಂದ ಮಾರ್ಮಿಕವಾಗಿ ಹೇಳುತ್ತಾರೆ.