ವಿದೇಶಗಳಲ್ಲಿ ಭಾರತದ ಶ್ರೀಮಂತರ ಸಂಪತ್ತಿನಲ್ಲಿ ಮೂರೇ ವರ್ಷಗಳಲ್ಲಿ 65% ಏರಿಕೆ!

ಜಿ.ಎಸ್‍.ಮಣಿ

ಭಾರತೀಯ ನಿವಾಸಿಗಳ ವಿದೇಶೀ ಸಂಪತ್ತಿನ ಶೇಖರಣೆ 2018ರಲ್ಲಿ 19.8 ಶತಕೋಟಿ ಡಾಲರುಗಳು ಇದ್ದದ್ದು 2021ರಲ್ಲಿ 32.6 ಶತಕೋಟಿಗೆ ಏರಿದೆ. ಇದು ಇತ್ತೀಚೆಗೆ ಪ್ರಕಟವಾದ ಯುರೋಪಿಯನ್ ಒಕ್ಕೂಟದ ತೆರಿಗೆ ನಿರೀಕ್ಷಣಾ ಕೇಂದ್ರದ ‘ಗ್ಲೋಬಲ್ ಟ್ಯಾಕ್ಸ್ ಇವೇಷನ್ ರಿಪೋರ್ಟ್ 2024’ (ಜಾಗತಿಕ ತೆರಿಗೆಗಳ್ಳತನದ ವರದಿ) ಯಲ್ಲಿನ ಅಂಕಿ-ಅಂಶಗಳಿಂದ ತಿಳಿದು ಬರುವ ಸಂಗತಿ. ( New Estimates of Offshore Wealth held by Indians-C.P. Chandrasekhar and Jayati Ghosh, Nov 14th 2023,Macroscan). ಭಾರತವೂ ಬ್ಯಾಂಕಿಂಗ್ ಮಾಹಿತಿಯ ಸ್ವಯಂಚಾಲಿತ ವಿನಿಮಯ ವ್ಯವಸ್ಥೆಯ ಭಾಗವಾಗಿರುವುದರಿಂದ, ಈ ಹರಿವಿನ ವಿವರಗಳು, ಎತ್ತ ಹೋಗುತ್ತಿವೆ ಮತ್ತು ಈ ಸ್ವತ್ತುಗಳನ್ನು ಹೊಂದಿರುವವರು ಯಾರು ಎಂದು ಭಾರತದ ತೆರಿಗೆ ಸಂಬಂಧಿ ವ್ಯವಸ್ಥೆಗೆ ತಿಳಿದಿರಲೇಬೇಕು. ಆದರೂ ಈ ಮಾಹಿತಿಗಳ ಜಾಡು ಹಿಡಿದು, ಈ ಅಕ್ರಮಗಳನ್ನು ತಡೆಯಬಾರದೇಕೆ, ಈ ಸ್ವತ್ತುಗಳ ಆದಾಯದ ಮೇಲಾದರೂ ಕನಿಷ್ಠ ತೆರಿಗೆಯನ್ನು ಪಾವತಿಸುವಂತೆ ಮಾಡುತ್ತಿಲ್ಲವೇಕೆ? ರಾಜಕೀಯ ವಿರೋಧಿ ನಾಯಕರು ಮತ್ತು ಪ್ರಸ್ತುತ ಸರ್ಕಾರದ ಬಗ್ಗೆ ಭಿನ್ನಮತ ಹೊಂದಿರುವವರ ಮೇಲೆ ಹತ್ತು-ಹಲವು ಪ್ರಕರಣಗಳನ್ನು ಹಾಕುವುದರಲ್ಲಿ ನಿರತವಾಗಿರುವ ಈ ತೆರಿಗೆ ವ್ಯವಸ್ಥೆಯ ಸಂಸ್ಥೆಗಳು ಈ ಶ್ರೀಮಂತರ ವಿದೇಶದಲ್ಲಿರುವ ಅಂತಹ ಹಣಕಾಸು ಸಂಪತ್ತಿನ ನೇರ ಪರೀಕ್ಷಣೆಯನ್ನು ಕೈಗೆತ್ತಿಕೊಳ್ಳುವುದು ಒಳ್ಳೆಯದು, ಏಕೆಂದರೆ ಇದು ವಾಸ್ತವವಾಗಿ ಭಾರತದ ಆರ್ಥಿಕತೆಗೆ ಹಾನಿಕರ ಎಂದು ಡಾ.ಸಿ.ಪಿ.ಚಂದ್ರಶೇಖರ್‌ ಮತ್ತು ಪ್ರೊ. ಜಯತಿ ಘೋಷ್‍ ತಮ್ಮ ಲೇಖನದಲ್ಲಿ ಆಶಿಸಿದ್ದಾರೆ. ಪ್ರಸ್ತುತ ಲೇಖನ ಅವರುಗಳ ಲೇಖನವನ್ನು ಮತ್ತು ಜಾಗತಿಕ ತೆರಿಗೆಗಳ್ಳತನ ವರದಿಯನ್ನು ಆಧರಿಸಿದೆ.

ಭಾರತೀಯ ಬಂಡವಾಳಿಗರು ಸಾಗರೋತ್ತರ ತೆರಿಗೆ-ಆಶ್ರಯಧಾಮಗಳಲ್ಲಿ ಪೇರಿಸಿಟ್ಟಿರುವ ಸಂಪತ್ತಿನ ಬಗೆಗೆ ಹಲವು ವರದಿಗಳು ಬಂದಿವೆ. ಈ ವಿಷಯ ಬಹಳ ಆಸಕ್ತಿ ಕೆರಳಿಸುವ ವಿಷಯ. ನಮ್ಮ ಇಂದಿನ ಪ್ರಧಾನ ಮಂತ್ರಿಗಳು ಅಂದು (2014) ಅಧಿಕಾರಕ್ಕೆ ಬರಲು ಮಾಡಿದ ಭಾಷಣಗಳಲ್ಲಿ ಈ ವಿಷಯವನ್ನು ಬಹಳ ರಮ್ಯವಾಗಿ ರೂಪಿಸಿ ತಾನು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಭಾರತೀಯನ ಖಾತೆಗೂ ಹದಿನೈದು ಲಕ್ಷ ರೂಪಾಯಿಗಳು ಬರುವಂತೆ ಮಾಡುತ್ತೇನೆಂದು ಭರವಸೆ ನೀಡಿ ಆಸೆ ಮೂಡಿಸಿದ್ದರು. ಅಧಿಕಾರಕ್ಕೆ ಬಂದು ಈ ಹತ್ತು ವರ್ಷಗಳಲ್ಲಿ ಈ ವಿಷಯದಲ್ಲಿ ಏನೂ ಮಾಡಿಲ್ಲ ಮಾತ್ರವಲ್ಲ, ಅದೊಂದು’ಜುಮ್ಲಾ’ ಎಂದು ಬದಿಗೆ ತಳ್ಳಲಾಯಿತು ಎಂಬುದು ಬೇರೆ ಮಾತು. ಸಾಗರೋತ್ತರ ತೆರಿಗೆ-ಆಶ್ರಯ ತಾಣಗಳಲ್ಲಿ ನಮ್ಮ ಬಂಡವಾಳಿಗರು ಸಂಪತ್ತು ಸೇರಿಸಿಟ್ಟಿರುವುದು ವಾಸ್ತವ ಎಂಬುದನ್ನೂ ಯಾರೂ ಅಲ್ಲಗಳೆಯುವಂತಿಲ್ಲ. ಅದಾನಿ ಕರ್ಮಕಾಂಡಗಳ ವರದಿ ಬಂದಾಗ ಸಾಗರೋತ್ತರ ತಾಣಗಳಲ್ಲಿ ಕಂಪನಿಗಳನ್ನು ಹುಟ್ಟಿ ಹಾಕಿ ಅವುಗಳ ಮೂಲಕ ಭಾರತದೊಳಗಿನ ಅವರದೇ ಕಂಪನಿಗಳಲ್ಲಿ ಹೂಡಿಕೆಯ ಸೋಗು ಹಾಕಿ ಷೇರು ಬೆಲೆಗಳನ್ನು ಏರಾ ಪೇರಿ ಮಾಡಿ ಲಾಭ ಗುಡ್ಡೆ ಹಾಕಿ ಜನರ ಸುಲಿಗೆ ಮಾಡಿದ ಕುತಂತ್ರಗಳ ಕಥಾನಕಗಳೂ ಬಯಲುಗೊಂಡಿವೆ.

ಇಲ್ಲಿಯವರೆಗೆ ಬರೀ ಕಥಾನಕಗಳ ರೂಪದಲ್ಲೇ ಇರುತ್ತಿದ್ದ ಈ ವರದಿಗಳಲ್ಲಿ ಗಟ್ಟಿಯಾದ ಅಂಕೆ ಸಂಖ್ಯೆಗಳ ಬಲ ಇರುತ್ತಿರಲಿಲ್ಲ.(15ಲಕ್ಷ ರೂ. ಬರದಿರಲು ಇದೂ ಒಂದು ಕಾರಣವಾಗಿರಬಹುದೇ?)ಅಪರೂಪಕ್ಕೊಮ್ಮೆ ಬಂದ “ಪನಾಮಾ ಪೇಪೆರ್ಸ್”ನ ವರದಿಗಳನ್ನು ಬಿಟ್ಟರೆ ಬೇರೆ ಗಟ್ಟಿ ವರದಿಗಳು ಇರಲಿಲ್ಲ. ಈಗ ಯುರೋಪಿನ ಒಕ್ಕೂಟದ ತೆರಿಗೆ ತಪ್ಪಿಸುವಿಕೆಯ ನಿರೀಕ್ಷಣ ಕೇಂದ್ರದ (EuropeanTaxEvasionObservatory) ವರದಿಯೊಂದು ಮೊತ್ತ ಮೊದಲ ಬಾರಿಗೆ ಮೂರ್ತ ಅಂಕೆ ಸಂಖ್ಯೆಗಳನ್ನು ನೀಡುವ ಸಾಹಸ ಮಾಡಿದೆ.ಜಗತ್ತಿನಾದ್ಯಂತ ಹರಡಿರುವ ನೂರು ಸಂಶೋಧಕರ ಒಂದು ತಂಡ ಈಗ ಗಟ್ಟಿಯಾದ ಅಂಕೆ ಸಂಖ್ಯೆಗಳ ರೂಪವನ್ನು ಈ ವಿಷಯಕ್ಕೆ ಕೊಡುವಲ್ಲಿ ಯಶಸ್ವಿಯಾಗಿದೆ.ಈ ತಂಡದ “ಜಾಗತಿಕ ತೆರಿಗೆಗಳ್ಳತನದ ವರದಿ 2024”  ಈಗ ಬಿಡುಗಡೆಯಾಗಿದೆ. ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಮಾಹಿತಿ ಮತ್ತು ಅಂದಾಜುಗಳನ್ನು ಅದು ಕೊಡಲು ಪ್ರಯತ್ನಿಸಿದೆ.

ಬಂಡವಾಳಿಗರು ತೆರಿಗೆ ಆಶ್ರಯಧಾಮಗಳಲ್ಲಿ ಸಂಪತ್ತು ಶೇಖರಿಸಿ ಅಡಗಿಸಿ ಇಡಲು ಕಾರಣಗಳು: * ಆಕ್ರಮವಾಗಿ ಗಳಿಸಿದ ಸಂಪತ್ತನ್ನು ಮುಚ್ಚಿಡುವುದು, * ತೆರಿಗೆ ತಪ್ಪಿಸಿಕೊಳ್ಳಲು,*ಕ ರೆನ್ಸಿಯ ಸವಕಳಿಯ ಹೊಡೆತ ತಪ್ಪಿಸಿಕೊಳ್ಳಲು, *ಆಸ್ತಿಯ ಆರ್ಥಿಕ ನಿರ್ವಹಣೆಯ ವೈಫಲ್ಯ ತಪ್ಪಿಸಿಕೊಳ್ಳಲು, ಇತ್ಯಾದಿ. ಇಂತಹ ಗೈರು ಕಾನೂನಾತ್ಮಕ ಹಣಕಾಸಿನ ಹರಿವುಗಳ ವಾರ್ಷಿಕ ಅಂದಾಜುಗಳನ್ನೂ ಮಾಡುವ ಹೊಸ ವಿಧಾನಗಳನ್ನು ಅದು ರೂಪಿಸಿದೆ. ಬ್ಯಾಂಕುಗಳೊಳಗಿನ ಕೊಡುಕೊಳ್ಳುವಿಕೆಯ ಮಾಹಿತಿಗಳ ವಿನಿಮಯದಿಂದ ಇಂತಹ ಅಂಕೆ ಸಂಖ್ಯೆಗಳನ್ನು ಆಕರಿಸುವ ವಿಧಾನಗಳನ್ನು ಅವರು ರೂಪಿಸಿ ಬಳಸಿದ್ದಾರೆ.ಬಹುರಾಷ್ಟ್ರೀಯ ಕಂಪನಿಗಳು ಮತ್ತು ದೇಶ ದೇಶಗಳೊಳಗಿನ ಪ್ರತಿಯೊಂದು ಮಾರಾಟ ಮತ್ತು ಲಾಭಗಳ ವಹಿವಾಟು ಲೆಕ್ಕ ಹಾಕುವ ಈ ವಿಧಾನ ನಿಜಕ್ಕೆ ಬಹು ಹತ್ತಿರದ ಅಂಕೆ ಸಂಖ್ಯೆಗಳನ್ನು ನೀಡಬಲ್ಲದು.

ಜಾಗತಿಕ ಮಟ್ಟದಲ್ಲಿ ಈ ವರದಿ ಕೆಲವು ಬಹುಮುಖ್ಯ ತೀರ್ಮಾನಗಳಿಗೆ ಬಂದಿದೆ. ವೈಯಕ್ತಿಕ ಮಟ್ಟದ ಸಾಗರೋತ್ತರ ಸಂಪತ್ತಿನ ಪ್ರಮಾಣ ಕಡಿಮೆಯಾಗಿದೆ. ಬ್ಯಾಂಕಿಂಗ್ ಮಾಹಿತಿಗಳ ವಿನಿಮಯದ ಮೂಲಕ ದೇಶಗಳು ಎಲ್ಲಿ ಇಂತಹ ಅಕ್ರಮ ಸಂಪತ್ತಿನ ಕ್ರೋಢೀಕರಣಕ್ಕೆ ತಡೆ ಹಾಕಲು ಬಯಸುತ್ತಾವೋ ಅವು ಅದನ್ನು ಮಾಡಲು ಸಾಧ್ಯವಾಗಿದೆ. ಮಾಹಿತಿ ನೀಡದಇಂತಹ ಸಂಪತ್ತಿನ ಪ್ರಮಾಣ 2007-08 ರಲ್ಲಿ ಶೇ 90-95 ರಷ್ಟಿದ್ದದ್ದು ಶೇ 30-40ಕ್ಕೆ ಇಂದು ಇಳಿದಿದೆ.ಆದರೆ ಹೊಸ ತರಹದ ಸಾಗರೋತ್ತರ ಸಂಪತ್ತಿನ ಆಸ್ತಿಗಳು ಮೂಡಿ ಬರುತ್ತಿವೆ.ಅವುಗಳಲ್ಲಿ ಇಂದು ರಿಯಲ್ ಎಸ್ಟೇಟ್ ಒಂದು ಬಹು ಮುಖ್ಯವಾದ ಸಂಪತ್ತು. ಇದಲ್ಲದೆ ಕಂಪನಿ ತರಿಗೆ ತಪ್ಪಿಸುವಿಕೆಯನ್ನು ಆಸ್ತಿಗಳ (ಷೇರುಗಳು, ಮ್ಯೂಚುವಲ್ ಫಂಡ್, ಇತ್ಯಾದಿ) ಬೆಲೆಗಳ ತಿರಿಚುವಿಕೆಯಿಂದ ಮಾಡಲಾಗುತ್ತಿದೆ. ಉಪಸಂಸ್ಥೆಗಳ ಮೂಲಕ ಲಾಭಗಳನ್ನು ಕಡಿಮೆ ತೆರಿಗೆ ಅಥವಾ ತೆರಿಗೆ ಇಲ್ಲದಿರುವ “ತೆರಿಗೆ-ಆಶ್ರಯಧಾಮ”ಗಳಿಗೆವರ್ಗಾಯಿಸಿ ಇದನ್ನು ಸಾಧಿಸಲಾಗುತ್ತಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ದಿ ಸಂಘಟನೆ (OECD) ಈ ವಿಷಯದಲ್ಲಿ ಮಾಡುತ್ತಿರುವ (ಅರೆಮನಸ್ಸಿನ ?) ಪ್ರಯತ್ನಗಳ ಹೊರತಾಗಿಯೂ ಈ ಸಂಪತ್ತಿನ ಅಕ್ರಮ ಕ್ರೋಢೀಕರಣ ಹೆಚ್ಚಿದೆ.

ಈ ತನಿಖೆಯಲ್ಲಿ ಕಂಡು ಬಂದ ಮುಖ್ಯ ಅಂಶಗಳು ಹೀಗಿವೆ:

  • ಸ್ವಯಂ ಚಾಲಿತ ಮಾಹಿತಿ ವಿನಿಮಯ –ಬಹುದೊಡ್ಡ ಸುಧಾರಣೆ
  • ಈಗಿರುವ ನೀತಿಗಳಿಂದಾಗಿ ತಡೆಯಿಲ್ಲದೆ ಬಹುದೊಡ್ಡ ಪ್ರಮಾಣದಲ್ಲಿ ಲಾಭಾಂಶಗಳು ತೆರಿಗೆ ಸ್ವರ್ಗಗಳಿಗೆ ವರ್ಗಾಯಿತವಾಗುತ್ತಿವೆ
  • ಜಾಗತಿಕ ಕನಿಷ್ಠ ತೆರಿಗೆ ಎಂಬುದು ಅತ್ಯಂತ ದುರ್ಬಲಗೊಳಿಸಲ್ಪಟ್ಟಿದೆ
  • ಹೊಸ ತರಹದ ತೆರಿಗೆ ಸ್ಪರ್ಧೆ ಆಚರಣೆಗೆ ಬಂದು ಸರ್ಕಾರಿ ತರಿಗೆ ಸಂಗ್ರಹಣೆ ಮತ್ತು ಅಸಮಾನತೆಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ
  • ಅತೀ ಕಡಿಮೆ ಅಂತಿಮ ತೆರಿಗೆಯಿಂದಾಗಿ ಜಾಗತಿಕ ಶತಕೋಟಿಪತಿಗಳು ಲಾಭ ಪಡೆಯುತ್ತಿದ್ದಾರೆ
  • ಜಾಗತಿಕ ಶತಕೋಟ್ಯಾಧಿಪತಿಗಳ ಮೇಲೆ ಕನಿಷ್ಠ ತೆರಿಗೆಯೂ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸಾಧ್ಯ

ಇಲ್ಲಿ ನಾವು ಭಾರತೀಯರು ಸಾಗರೋತ್ತರ ತಾಣಗಳಲ್ಲಿ ಸಂಪತ್ತು ಪೇರಿಸಿಟ್ಟಿರುವ ಬಗೆಗೆ ಈ ವರದಿ ಏನು ಹೇಳುತ್ತದೆ ಎಂಬುದನ್ನು ನೋಡೋಣ. ( ಈ ಲೇಖನದಲ್ಲಿನ ಚಿತ್ರಗಳನ್ನು ಮೇಲೆ ಹೇಳಿರುವ Macroscan ಲೇಖನದಿಂದ ಪಡೆಯಲಾಗಿದೆ) ಚಿತ್ರ 1 ನ್ನು ನೋಡಿ. ಇದು ನಿವಾಸಿ ಭಾರತೀಯರು ಸಾಗರೋತ್ತರ ತೆರಿಗೆ-ಆಶ್ರಯತಾಣಗಳಲ್ಲಿ ಹೊಂದಿರುವ ಸಂಪತ್ತಿನ ಅಂದಾಜನ್ನು ತೋರಿಸುತ್ತದೆ. ಫ್ರೆಂಚ್ ಅರ್ಥ ತಜ್ಞ ಗೆಬ್ರೀಯಲ್ ಜುಕ್ಮನ್ (ಮೇಲೆ ಕಾಣಿಸಿದ ವರದಿಯ ಸಹ ಲೇಖಕ)

ಅಭಿವೃದ್ದಿ ಪಡಿಸಿರುವ ವಿಧಾನದಿಂದ ಅಂದಾಜನ್ನು ಇದು ಮಾಡುತ್ತದೆ. ಅಂತರ್ರಾಷ್ಟ್ರೀಯ ಹೂಡಿಕೆ ಇರುವಲ್ಲಿ ದೇಶ ದೇಶಗಳಲ್ಲಿನ ಹೂಡಿಕೆ ನೋಡುವಾಗ ಇದು ಅವುಗಳ ಅಂಕೆ ಸಂಖ್ಯೆಗಳಲ್ಲಿ ಅಸಂಗತತೆಯನ್ನು ತೋರಿಸುತ್ತದೆ. ವ್ಯಕ್ತಿಗಳು ಷೇರು, ಮ್ಯೂಚುವಲ್ ಫಂಡ್, ಅಥವಾ ಬಾಂಡುಗಳನ್ನು ಸಾಗರೋತ್ತರವಾಗಿ ಹೊಂದಿದಾಗ ಮತ್ತು ಅವನ್ನು ಮಧ್ಯವರ್ತಿಗಳ ಮೂಲಕ ಹೊಂದಿದಾಗ ಈ ಹೊಂದುವಿಕೆ ಅಂತರ್ರಾಷ್ಟ್ರೀಯ ಹೂಡಿಕೆ ಅಂಕೆ ಸಂಖ್ಯೆಯಲ್ಲಿ ಅಸಂಗತತೆಯನ್ನು ಉಂಟು ಮಾಡುತ್ತದೆ. ಉದಾಹರಣೆಗೆ ಅಮೆರಿಕದ ಶೇರನ್ನು ಸ್ವಿಸ್ಸ್ ಬ್ಯಾಂಕಿನ ಮೂಲಕ ನಿವಾಸಿ ಭಾರತೀಯನೊಬ್ಬ ಹೊಂದಿದಾಗ ಭಾರತದಲ್ಲಾಗಲಿ ಸ್ವಿತ್ಸರ್ಲ್ಯಾಂಡಿನಲ್ಲಾಗಲಿ ಅದು ಆಸ್ತಿಯಾಗಿ ಪರಿಗಣಿತವಾಗುವುದಿಲ್ಲ. ಅಮೇರಿಕಾದಲ್ಲಿ ಅದು ಒಂದು ಭಾಧ್ಯತೆಯಾಗಿ ಪರಿಗಣಿತವಾಗುತ್ತದೆ. ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಆಸ್ತಿಗಳಿಗಿಂತ ಭಾಧ್ಯತೆಗಳೇ ಹೆಚ್ಚು. ಜುಕ್ಮನ್ ಈ ಅಸಂಗತತೆಯನ್ನು ಉಪಯೋಗಿಸಿ ಸಾಗರೋತ್ತರ ತಾಣಗಳಲ್ಲಿ ಇರುವ ಸಂಪತ್ತುಗಳನ್ನು ಅಂದಾಜು ಮಾಡಬಹುದೆಂದು ತೋರಿಸಿದರು.

ಇದನ್ನೂ ಓದಿ: ದುರಂತ ಬದುಕಿನ ನಡುವೆ ಹಬ್ಬದ ಸಂಭ್ರಮ

ಸಾಗರೋತ್ತರ ಸಂಪತ್ತಿನ ಪೇರಿಕೆ ಕಡಿಮೆಯಾಗುವ ಬದಲು ಹೆಚ್ಚಾಗಿದೆ!

ಚಿತ್ರ 1 ರಲ್ಲಿ ತೋರಿಸಿರುವ ದತ್ತಾಂಶ ಈ ವರದಿಯಲ್ಲಿನ ಅಂಕೆಗಳನ್ನು ಒಟ್ಟುತ್ಪಾದನೆಯ ಭಾಗವಾಗಿ ತೋರಿಸಿ ಅದನ್ನು ಅಮೆರಿಕಾದ ಡಾಲರುಗಳಿಗೆ ಪರಿವರ್ತಿಸಿ ಲೆಕ್ಕ ಮಾಡಲಾಗಿದೆ.ಇದಕ್ಕೆ ವಿಶ್ವ ಬ್ಯಾಂಕಿನ ವರದಿಯಲ್ಲಿನ ಅಂದಾಜುಗಳನ್ನು(ಅಂದರೆ ಜಾಗತಿಕವಾಗಿ ಒಪ್ಪಿತವಾದ ಅಂದಾಜುಗಳು) ಬಳಸಲಾಗಿದೆ. ಹೀಗೆ ಮಾಡಿದ ಅಂದಾಜುಗಳ ಪರಿಣಾಮಗಳು ಬೆಚ್ಚಿಬೀಳಿಸುವಂತಿವೆ.

ಜಗತ್ತಿನ ಬಹುತೇಕ ದೇಶಗಳಲ್ಲಿ 2018 ರ ನಂತರ ಬ್ಯಾಂಕುಗಳ ಮಾಹಿತಿ ವಿನಿಮಯ ಅವಕಾಶ ಹೆಚ್ಚಿದಂತೆಲ್ಲ ಸಾಗರೋತ್ತರ ಸಂಪತ್ತು ಶೇಖರಣೆ ಕಡಿಮೆಯಾದರೆ ಭಾರತದ್ದು ಹೆಚ್ಚಾಗಿದೆ.2018 ಮತ್ತು 2021 ರ ನಡುವೆ ಅಂದಾಜಿಗೆ ಬಳಸಿರುವ ಸಾಗರೋತ್ತರ ತೆರಿಗೆ ಧಾಮಗಳಲ್ಲಿ ಮಾತ್ರ ನೋಡಿದರೆ ಈ ಶೇಖರಣೆ 19.8 ಶತಕೋಟಿ ಡಾಲರುಗಳಿಂದ 32.6 ಶತಕೋಟಿ ಡಾಲರುಗಳಿಗೆ (ಅಂದರೆ 12.8 ಶತಕೋಟಿ ಡಾಲರುಗಳಷ್ಟು) ಹೆಚ್ಚಿದೆ.ಅಂದರೆ ಭಾರತದಲ್ಲಿನ ಆರ್ಥಿಕ ಬೆಳವಣಿಗೆಯ ಬಹುಪಾಲು ಶ್ರೀಮಂತರಿಗೇ ಹೋಗಿದ್ದು ಅದನ್ನು ಅವರು ಆಕ್ರಮವಾಗಿ ಸಾಗರೋತ್ತರ ತೆರಿಗೆ ಸ್ವರ್ಗ ತಾಣಗಳಲ್ಲಿ ಶೇಖರಣೆ ಮಾಡಿರುವುದು ಸ್ಪಷ್ಟ. ಇದು ಇಂದಿನ ಆರ್ಥಿಕ-ರಾಜಕೀಯ ವಲಯದಲ್ಲಿ ಇರುವ ಗ್ರಹಿಕೆ ಕೂಡ ಹೌದು.

ಈ ಸಂಪತ್ತಿನ ಹರಿವಿನ ದಿಕ್ಕೂ ಸಹ ಗಮನಿಸುವಂತಹದ್ದು. ಸ್ವಿತ್ಸರ್ಲ್ಯಾಂಡ್ ಅದರ ಅಂತಿಮ ಗಮ್ಯಸ್ಥಾನವಾಗಿರಲಿಲ್ಲವೇನೋ. ಆ ದೇಶದ ಮೂಲಕ ಹರಿದು ಅಮೆರಿಕ ಮತ್ತು ಯುರೋಪಿನ ದೇಶಗಳಿಗೆ ಹರಿಯುತ್ತಿತ್ತು. ಈಗ ಈ ದೇಶಗಳ ಹೊರತಾಗಿ ಯುಏಇ ಮತ್ತು ಸಿಂಗಾಪುರ ದೇಶಗಳಿಗೆ ಈ ಸಂಪತ್ತು ಹರಿಯುತ್ತಿದೆ.

ಈಗ ಏಳುತ್ತಿರುವ ಮುಖ್ಯ ಪ್ರಶ್ನೆ: ಭಾರತವೂ ಬ್ಯಾಂಕು ಮಾಹಿತಿಗಳ ವಿನಿಮಯದ ಭಾಗವಾಗಿರುವಾಗ ಇಂತಹ ಅಕ್ರಮ ಸಂಪತ್ತಿನ ಹರಿವನ್ನು ತಡೆಯಲು ಹೆಚ್ಚಿನ ಕ್ರಮಗಳೇಕಿಲ್ಲ ಎಂಬುದು.

ನಮ್ಮ ತೆರಿಗೆ ಅಧಿಕಾರಿಗಳಿಗೆ ವಿಷಯ ಗೊತ್ತಿರುವಾಗ ಈ ಅಕ್ರಮ ಹೇಗೆ ತಡೆರಹಿತವಾಗಿ ನಡೆಯುತ್ತಿದೆ? ವಿರೋಧ ಪಕ್ಷಗಳ ನಾಯಕರನ್ನು ಮತ್ತು ಭಿನ್ನ ನಿಲುವು ಹೊಂದಿದವರನ್ನು ಗುರಿಯಾಗಿಸುವ ಸರ್ಕಾರ ದೇಶದ ಆರ್ಥಿಕವನ್ನು ಹಾಳುಗೆಡಹುತ್ತಿರುವಈ ಅಕ್ರಮ ಶೇಖರಣೆಯನ್ನು ಯಾಕೆ ತಡೆಯುತ್ತಿಲ್ಲ?ಇದಲ್ಲದೆ ಸಾಗರೋತ್ತರ ಸಂಪತ್ತಿನ ಬಹು ದೊಡ್ಡ ಭಾಗ ಈಗ ರಿಯಲ್ ಎಸ್ಟೇಟ್ ನತ್ತ ಹರಿಯುತ್ತಿದೆ. ಸಂಶೋಧಕರು ದಿಕ್ಕಿನಲ್ಲೂ ಕೆಲಸ ಮಾಡಿ ಸಂಪತ್ತಿನ ಹರಿವನ್ನು ಕಂಡುಹಿಡಿದಿದ್ದಾರೆ. ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ದುಬೈ ಮುಂಚೂಣಿಯಲ್ಲಿದ್ದರೆ ಸಿಂಗಾಪುರ ಮತ್ತು ಲಂಡನ್ ನಂತರದ ಸ್ಥಾನಗಳಲ್ಲಿವೆ. ಮೇಲಿನ ಚಿತ್ರ 2 ವಿವರಗಳನ್ನು ನೀಡುತ್ತದೆ.

ಭಾರತ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ತೆರಿಗೆಗಳ್ಳತನದ ವಿಷಯದಲ್ಲಿ ಮಾತ್ರ ಸ್ವಲ್ಪ ಕೆಲಸ ಮಾಡಿದಂತೆ ಕಾಣುತ್ತದೆ. ಏಕೆಂದರೆ 2015 ನಂತರ ಕಳ್ಳತನ ಕಡಿಮೆಯಾದಂತೆ ಕಾಣುತ್ತಿದೆ. ವಹಿವಾಟಿನ ಮೇಲೆ ತೆರಿಗೆ ಲೆಕ್ಕ ಹಾಕುವ ಕ್ರಮ ಜಾರಿಗೆ ತಂದಿರುವುದರಿಂದ ಇದು ಸಾಧ್ಯವಾಗಿರಬಹುದು.(ಚಿತ್ರ 3). ಆದರೂ, ಯುರೋಪೇತರ ದೇಶಗಳ ತೆರಿಗೆ ಸ್ವರ್ಗಗಳಿಗೆ ಲಾಭದ ಹರಿವು ದೊಡ್ಡ ಪ್ರಮಾಣದಲ್ಲೇ ಉಳಿದಿದೆ ಎಂಬುದೂ ಸತ್ಯಇದಕ್ಕೆ ಇನ್ನೊಂದು ಸಾಧ್ಯ ಕಾರಣವೆಂದರೆ ಕಂಪನಿಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಿರುವುದು. 2014 ರಿಂದ ಈಚೆಗೆ ಕಂಪನಿಗಳ ಮೇಲಿನ ಪರಿಣಾಮಕಾರಿ ತೆರಿಗೆ ಶೇ 13 ರಿಂದ ಶೇ 11 ಕ್ಕೆ ಇಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಶ್ರಮಿಕರ ಮೇಲಿನ ತೆರಿಗೆ ಶೇ 3 ರಿಂದ ಶೇ 5 ಕ್ಕೆ ಏರಿರುವುದನ್ನೂ ಚಿತ್ರ 4ರಲ್ಲಿ ಕಾಣಬಹುದು.  ಶ್ರೀಮಂತ ಮತ್ತು ಬಡವರ ನಡುವೆ ಅಸಮಾನತೆ ಅಪಾರ ಪ್ರಮಾಣದಲ್ಲಿ ಇರುವ ದೇಶದಲ್ಲಿ ಆಸ್ತಿ ಮತ್ತು ವರಮಾನ ಅಸಮಾನತೆ ಆಳವಾಗಿರುವಾಗ ಇಂತಹ ಜನವಿರೋಧಿ ತೆರಿಗೆ ಹೊರೆಯೂ ಇರುವುದು ಅತ್ಯಂತ ದುರದೃಷ್ಟಕರವಲ್ಲವೇ?

ನಮ್ಮ ದೇಶದಲ್ಲಿ ಶ್ರೀಮಂತರು ಅಪಾರ ಆಸ್ತಿ ಹೊಂದಿಯೂ ತೆರಿಗೆ ತೆರದೆ ಇರಲು ದಾರಿಗಳು ಹಲವು ಇವೆ. ತೆರಿಗೆ ಪದ್ದತಿಯಲ್ಲಿನ ದೋಷಗಳು ಒಂದು ಕಡೆಯಾದರೆ ಆಸ್ತಿ ವಿವರ ಸಲ್ಲಿಸಬೇಕಾದ ಪ್ರಮೇಯವೇ ಕಡಿಮೆ ಇರುವಾಗ ತೆರಿಗೆ ಕಳ್ಳತನ ಸುಲಭ.ಷೆಲ್ ಕಂಪನಿಗಳು ಮತ್ತು ಟ್ರಸ್ಟ್ ಗಳನ್ನು ಮಾಡಿಕೊಂಡು ಅವುಗಳ ಬಗ್ಗೆ ಅತಿ ಕಡಿಮೆ ವಿವರ ಸಲ್ಲಿಸಿ ತೆರಿಗೆ ಕಳ್ಳತನ ಮುಚ್ಚಿಡಲು ಸಾಧ್ಯವಿರುವಾಗ ಅವನ್ನು ಬಳಸದೆ ಇರುತ್ತಾರೆಯೇ?

ಇದನ್ನೂ ಓದಿ: ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು

ಈ ವರದಿ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಸ್ತರಗಳಲ್ಲಿ ತರಿಗೆ ಕಳ್ಳತನ ತಪ್ಪಿಸಲು ಏನೇನು ಮಾಡಬಹುದು ಎಂಬ ಬಗೆಗೆ ಹಲವು ಸೂಚನೆಗಳನ್ನು ನೀಡಿದೆ. ಕೆಲವು ಮುಖ್ಯ ಶಿಫಾರಸುಗಳು ಹೀಗಿವೆ:

  1. ಕಂಪನಿಗಳ ತೆರಿಗೆ ಬಗೆಗಿನ ಅಂತರ್ರಾಷ್ಟ್ರೀಯ ಒಪ್ಪಂದದಲ್ಲಿ ಸುಧಾರಣೆ ತಂದು ‘ತೆರಿಗೆ ಸ್ಪರ್ಧೆ’ ಇಲ್ಲದಂತೆ ಮಾಡಿ ಕನಿಷ್ಠ ಶೇ 25 ರಷ್ಟು ತೆರಿಗೆ ಹೇರುವುದು
  2. ಶತಕೋಟ್ಯಾಧಿಪತಿಗಳ ಸಂಪತ್ತಿನ ಮೇಲೆ ಜಾಗತಿಕ ಕನಿಷ್ಠ ತೆರಿಗೆಯಾಗಿ ಶೇ 2 ರಷ್ಟು ವಸೂಲು ಮಾಡುವುದು
  3. ಬಹಳ ವರ್ಷಗಳ ಕಾಲ ನಿವಾಸಿಗಳಾಗಿದ್ದವರು ಕಡಿಮೆ ತೆರಿಗೆಯ ದೇಶಗಳಿಗೆ ವಲಸೆ ಹೋಗದಂತೆ ತಡೆ ನೀತಿಗಳನ್ನು ರೂಪಿಸುವುದು
  4. ಈ ವಿಷಯಗಳಲ್ಲಿ ಜಾಗತಿಕ ಒಪ್ಪಂದ ಸಾಧ್ಯವಾಗದೆ ಇದ್ದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಶತಕೋಟ್ಯಾಧಿಪತಿಗಳ ಮೇಲೆ ಏಕಮುಖವಾಗಿ ತೆರಿಗೆ ಹೇರಿ ಕನಿಷ್ಠ ತೆರಿಗೆ ವಸೂಲು ಮಾಡುವುದು
  5. ತೆರಿಗೆ ವಂಚನೆ ತಡೆಯಲು ಜಾಗತಿಕ ಆಸ್ತಿ ನೋಂದಣಿ ಪುಸ್ತಕ ಪ್ರಾರಂಭಿಸುವುದು
  6. ಆರ್ಥಿಕ ದುರುಪಯೋಗದ ತಡೆಗೆ ಕ್ರಮಗಳನ್ನು ಕೈಗೊಳ್ಳುವುದು.

ಈ ದಿಸೆಯಲ್ಲಿ ನೀತಿ ರೂಪಿಸಲು ರಾಜಕೀಯ ಸಂಕಲ್ಪ ಶಕ್ತಿ ಅವಶ್ಯ. ಆದಿಲ್ಲದಿದ್ದರೆ ಏನೂ ಸಾಧ್ಯವಾಗದು. ಈ ವಿಷಯದಲ್ಲಿಯೂ ದೊಡ್ಡ ಮಾತುಗಳನ್ನು ಆಡಿದ ನಮ್ಮ ಇಂದಿನ ಕೇಂದ್ರ ಸರ್ಕಾರ ಏನು ಕೆಲಸ ಮಾಡುತ್ತದೆ ಎಂಬುದನ್ನು ನೋಡಬೇಕು!!ಅಂದಾಜು ಮಾಡಿ- ಬಾಕಿ ಸಮೇತ 2024ರಲ್ಲಿ ನಿಮಗೆ ಎಷ್ಟು ಸಿಗುತ್ತದೆ ಎಂಬುದನ್ನು! (ಇದು 19-06-2021ರ ವ್ಯಂಗ್ಯಚಿತ್ರ- ಕೃಪೆ: ಸಜಿತ್‍ ಕುಮಾರ್, , ಡೆಕ್ಕನ್‍ ಹೆರಾಲ್ಡ್)

ವಿಡಿಯೋ  ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?

Donate Janashakthi Media

Leave a Reply

Your email address will not be published. Required fields are marked *