64 ವರ್ಷಗಳ ನಂತರ ಈಗೇಕೆ  ಎಲ್.ಐ.ಸಿ.ಯ ಶೇರು ವಿಕ್ರಯ?

  • ಭಾರತೀಯ ಜೀವವಿಮಾ ನಿಗಮವು(ಎಲ್ ಐ ಸಿ) 64 ವರ್ಷಗಳನ್ನು ಪೂರೈಸಿದೆ.
  • ಎಲ್.ಐ.ಸಿ.ಯ ಶೇರು ವಿಕ್ರಯ

ಜನವರಿ 19, 1956ರಂದು ಭಾರತ ಸರಕಾರ ಒಂದು ಸುಗ್ರೀವಾಜ್ಞೆಯ ಮೂಲಕ ದೇಶದಲ್ಲಿ ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಿಸಿತು. ಹೀಗೆ ರಾಷ್ಟ್ರೀಕರಿಸಿದ 154 ಭಾರತೀಯ, 16 ವಿದೇಶಿ ಖಾಸಗಿ ಜೀವ ವಿಮಾ ಕಂಪನಿಗಳನ್ನು ಮತ್ತು ವಿಮಾವ್ಯವಹಾರ ನಡೆಸುತ್ತಿದ್ದ 75 ಪ್ರಾವಿಡೆಂಟ್ ಫಂಡ್ ಸೊಸೈಟಿಗಳನ್ನು ಒಟ್ಟುಗೂಡಿಸಿ ಭಾರತದ ಸಂಸತ್ತು ಒಂದು ಶಾಸನದ ಮೂಲಕ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯ(ಎಲ್‌ಐಸಿ)  ರಚಿಸಿತು. ಸೆಪ್ಟಂಬರ್ 1, 1956ರಿಂದ ಇದು ಕಾರ್ಯಾರಂಭ ಮಾಡಿತು. ಆದರೆ ಈಗ ಭಾರತ ಸರಕಾರ ಅದರ ಶೇರು ವಿಕ್ರಯವನ್ನು, ಅಂದರೆ ಅವೇ ಅದಕ್ಷ, ನಂಬಲನರ್ಹ ಎನಿಸಿಕೊಂಡಿದ್ದ ಖಾಸಗಿಯವರಿಗೇ ಒಪ್ಪಿಸುವ ಪ್ರಕ್ರಿಯೆಯನ್ನು ಆರಂಭಿಸುವ ಧಾವಂತದಲ್ಲಿ ಏಕಿದೆ?

ಎಲ್‌ಐಸಿ 65ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಎಲ್‌ಐಸಿಯ ಬೆಂಗಳೂರು ವಿಭಾಗ-1 ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‍.ಕೆ.ಗೀತಾ ಲೇಖನದಲ್ಲಿ ಪರಿಶೀಲಿಸಿದ್ದಾರೆ.

 ಸೆಪ್ಟೆಂಬರ್ ಒಂದನೇ ತಾರೀಕಿಗೆ ಈ ದೇಶದ ಅತಿದೊಡ್ಡ ಆರ್ಥಿಕ ಸಂಸ್ಥೆಯಾದ ಭಾರತೀಯ ಜೀವವಿಮಾ ನಿಗಮವು(ಎಲ್ ಐ ಸಿ) ತನ್ನ ಅರ್ಥಪೂರ್ಣ 64 ವರ್ಷಗಳನ್ನು ಪೂರೈಸಿದೆ. ಈ 64 ವರ್ಷಗಳಲ್ಲಿ ಎಲ್‌ಐಸಿ ಭಾರತದ ಜನತೆಯ ಪಾಲಿಗೆ ಒಂದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದೆ.

1956 ಕ್ಕೂ ಹಿಂದೆ ಜೀವ ವಿಮಾ ವ್ಯವಹಾರದ ರಾಷ್ಟ್ರೀಕರಣಕ್ಕೆ ಇದ್ದ ಉದ್ದೇಶಗಳೇನು? ಆ ಕಾಲಘಟ್ಟದಲ್ಲಿ ಅದು ಏಕೆ ಅನಿವಾರ್ಯವಾಗಿತ್ತು ಎಂಬುದನ್ನು ನಾವಿಲ್ಲಿ ಸ್ಮರಿಸಿಕೊಳ್ಳೋಣ. ಜೀವ ವಿಮೆ ಉದ್ದಿಮೆಯ ರಾಷ್ಟ್ರೀಕರಣಕ್ಕೆ ಮೂಲಭೂತ ಪ್ರೇರಣೆ ದೊರೆತಿದ್ದು ಸ್ವಾತಂತ್ರ‍ ಸಂಗ್ರಾಮದಲ್ಲೇ. ದೇಶದ ಸ್ವಾತಂತ್ರ‍ಕ್ಕಾಗಿ ಹೋರಾಡುತ್ತಿದ್ದವರು ಕೇವಲ ಬ್ರಿಟಿಷರಿಂದ ಭಾರತವನ್ನು ಬಿಡುಗಡೆಗೊಳಿಸುವುದನ್ನಷ್ಟನ್ನೆ ಉದ್ದೇಶವನ್ನಾಗಿ ಹೊಂದಿರಲಿಲ್ಲ. ಅದರೊಂದಿಗೇ ಸ್ವಾತಂತ್ರದ ನಂತರ ಒಂದು ಸದೃಢ, ಆರ್ಥಿಕ ಸ್ವಾವಲಂಬೀ ದೇಶ ಕಟ್ಟುವ ಕನಸನ್ನೂ ಹೊಂದಿದ್ದರು.

ಎಲ್‌ಐಸಿಸ್ವಾತಂತ್ರ್ಯ ಚಳುವಳಿಯ ಆಶಯಗಳ ಯಶಸ್ವಿ ಈಡೇರಿಕೆ

1934ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಕರಾಚಿ ಅಧಿವೇಶನದಲ್ಲಿ ಸಮಾಜವಾದಿ ಕಾಂಗ್ರೆಸಿಗರು ಮಂಡಿಸಿದ ಆರ್ಥಿಕ ಸನ್ನದು ದೇಶದ ಜನತೆಯ ಉಳಿತಾಯದ ಮೇಲೆ ಸರ್ಕಾರದ ಆಡಳಿತಕ್ಕೆ ಹಿಡಿತವಿರ ಬೇಕೆಂದು ಹೇಳಿತ್ತು.

ದೇಶದ ಸ್ವಾತಂತ್ರ್ಯ ನಂತರ ದೇಶದ ಸ್ವಾವಲಂಬನೆಗೆ ಬಗೆಬಗೆಯ ದೊಡ್ಡ ಕೈಗಾರಿಕೆಗಳ ನಿರ್ಮಾಣ ಮತ್ತು ಅದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ನಿರ್ಮಾಣ ಅನಿವಾರ್ಯವಾಗಿತ್ತು. ಅಂದು ದೇಶದಲ್ಲಿದ್ದ ಬಂಡವಾಳಿಗರ ಕೈಯಲ್ಲಿ ಅಷ್ಟು ದೊಡ್ಡ ಮೊತ್ತದ ಹಣವಿರಲಿಲ್ಲ ಮಾತ್ರವಲ್ಲ ಆ ಹಂತದಲ್ಲಿ ಅದು ಅವರಿಗೆ ಲಾಭದಾಯಕವೂ ಆಗಿರಲಿಲ್ಲ. ಹಾಗಾಗಿ ಅಂತಹ ದೇಶ ನಿರ್ಮಾಣ ಚಟುವಟಿಕೆಗಳಿಗೆ ಬಂಡವಾಳ ಒದಗಿಸಲು ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣ ಮಾಡಲಾಯಿತು. ಆ ಕಾಲಘಟ್ಟದಲ್ಲಿ ಸುಮಾರು 247 ಜೀವ ವಿಮಾ ಸಂಸ್ಥೆಗಳಿದ್ದವು ಈ ಸಂಸ್ಥೆಗಳಲ್ಲಿ ಹಣ ಹೂಡಿದ ಪಾಲಿಸಿದಾರರ ಹಣಕ್ಕೆ ಯಾವುದೇ ಭದ್ರತೆಯೂ ಇರಲಿಲ್ಲ. ಅವ್ಯವಹಾರಗಳ ದೂರುಗಳ ಸಂಖ್ಯೆ ಗಮನಾರ್ಹವಾಗಿತ್ತು.

ಆಗಿನ ಹಣಕಾಸು ಮಂತ್ರಿ ಸಿ.ಡಿ.ದೇಶಮುಖ್ “ಜೀವ ವಿಮೆಯ ರಾಷ್ಟ್ರೀಕರಣ ವಿಮೆ ಮಾಡಿಸಿರುವ ಸಾರ್ವಜನಿಕರ ಮತ್ತು ಉದ್ದಿಮೆಯ ಹಿತರಕ್ಷಣೆಯ ದೃಷ್ಟಿಯಿಂದ ಬಹಳ ಕಾಲದಿಂದ ಅಪೇಕ್ಷಿಸುತ್ತಿದ್ದ ಒಂದು ಕ್ರಮ” ಎಂದು ಆಗ ಖಾಸಗಿ ವಿಮಾಕಂಪನಿಗಳು ಸಾರ್ವಜನಿಕ ಉಳಿತಾಯಗಳನ್ನು ತಮ್ಮ ಅವ್ಯವಹಾರಗಳಿಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಹೇಳಿದ್ದರು. ಇಂತಹ ರಕ್ಷಣೆ ಒದಗಿಸುವುದರೊಂದಿಗೆ, ಸಮುದಾಯದ ಉಳಿತಾಯಗಳು ಇನ್ನು ಮುಂದೆ ದೇಶದ ಆರ್ಥಿಕ ಬೆಳವಣಿಗೆಗೆ ಬಳಕೆಯಾಗುತ್ತವೆ ಎಂದಿದ್ದರು.

ಅಂದಿನ ಸರ್ಕಾರ ಈ 247 ಖಾಸಗಿ ಸಂಸ್ಥೆಗಳನ್ನು ಒಗ್ಗೂಡಿಸಿ ರಾಷ್ಟ್ರೀಕೃತ ಭಾರತೀಯ ಜೀವ ವಿಮಾ ನಿಗಮವನ್ನು ಅಸ್ತಿತ್ವಕ್ಕೆ ತರುವ ಮೂಲಕ ಪಾಲಿಸಿದಾರರ ಹಣಕ್ಕೆ ಭದ್ರತೆ ಒದಗಿಸಿದ್ದು ಮಾತ್ರವಲ್ಲ ದೇಶ ನಿರ್ಮಾಣಕ್ಕೆ ಅಗತ್ಯವಾದ ಬಂಡವಾಳವನ್ನೂ ಕ್ರೋಢೀಕರಿಸುತ್ತಿದೆ. ಭಾರತೀಯ ಜೀವ ವಿಮಾ ನಿಗಮದ 64 ವರ್ಷಗಳ ಈ ಪಯಣವನ್ನು ಗಮನಿಸಿದರೆ ಅದು ತನ್ನ ರಾಷ್ಟ್ರೀಕರಣದ ಈ ಮೂಲ ಉದ್ದೇಶವನ್ನು ಸಂಪೂರ್ಣವಾಗಿ ಈಡೇರಿಸಿದೆ.

ಭಾರತೀಯ ಜೀವವಿಮಾ ನಿಗಮವು ಈ ದೇಶದ ಅತಿದೊಡ್ಡ ಆರ್ಥಿಕ ಸಂಸ್ಥೆಯಾಗಿದೆ. ಸುಮಾರು 40 ಕೋಟಿ ಪಾಲಿಸಿದಾರರನ್ನು ಹೊಂದಿರುವ ಅದು ವಿಶ್ವದ ಅತಿ ದೊಡ್ಡ ವಿಮಾ ಸಂಸ್ಥೆಗಳಲ್ಲೆ ಪ್ರಮುಖವಾದುದು. ದೇಶದ ಜನತೆಗೆ ನೀಡಿದ ಭರವಸೆಯನ್ನು ತಪ್ಪದೇ ಪರಿಪಾಲಿಸುತ್ತಿರುವ ಈ ಸಂಸ್ಥೆಯು ಶೇ. 99.6 ರಷ್ಟು ದಾವೆ (ಕ್ರೈಮ್ಸ್) ಗಳನ್ನು ಇತ್ಯರ್ಥಗೊಳಿಸುವ ಮೂಲಕ ಒಂದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1956ರಲ್ಲಿ ಸರ್ಕಾರ ಇದರಲ್ಲಿ ತೊಡಗಿಸಿದ್ದು ಕೇವಲ 5 ಕೋಟಿ ರೂ. ಬಂಡವಾಳ (ಮುಂದೆ 2011 ರಲ್ಲಿ ಈ ಬಂಡವಾಳವನ್ನು 100 ಕೋಟಿ ರೂ.ಗೆ ಒಂದು ಶಾಸನಾತ್ಮ ಕ್ರಮವಾಗಿಯಷ್ಟೇ ಏರಿಸಲಾಗಿದೆ.) ಈ ಬಂಡವಾಳಕ್ಕೆ ಪ್ರತಿಯಾಗಿ ಸರಕಾರಕ್ಕೆ ಎಲ್‌ಐಸಿ ಈವರೆಗೆ ಸರಿಸುಮಾರು 2660 ಕೋಟಿ ರೂಗಳ ಲಾಭಾಂಶ ನೀಡಿದೆ. ಇತ್ತೀಚಿನ ಅಂಕಿ-ಅಂಶಗಳನ್ನು ನೋಡಿ:

* ಎಲ್‌ಐಸಿ ಯ ಒಟ್ಟು ಆಸ್ತಿಯ ಮೊತ್ತ 32 ಲಕ್ಷ ಕೋಟಿ ರೂ.ಗಳು.

* ಸರ್ಕಾರದ ವಿವಿಧ ಯೋಜನೆಗಳಲ್ಲಿ ಹೂಡಲು ಸಂಗ್ರಹಿಸಿರುವ ಮೊತ್ತ 4 ಲಕ್ಷ ಕೋಟಿ ರೂ.ಗೂ ಹೆಚ್ಚಿನದು.

*ಇಲ್ಲಿಯವರೆಗೆ ಪಂಚವಾರ್ಷಿಕ ಯೋಜನೆಗಳಿಗೆ ಹೂಡಿರುವ ಒಟ್ಟು ಮೊತ್ತ 29 ಲಕ್ಷ ಕೋಟಿಗಳು.

*ವಿವಿಧ ಸರ್ಕಾರಿ ಯೋಜನೆಗಳಲ್ಲಿ ಹೂಡಿರುವ ಒಟ್ಟು ಮೊತ್ತ 2.82 ಲಕ್ಷ ಕೋಟಿ ರೂ.ಗಳು.

ಒಟ್ಟಾರೆಯಾಗಿ ಭಾರತೀಯ ಜೀವವಿಮಾ ನಿಗಮವು ಭಾರತದ ಆರ್ಥಿಕತೆ ಮತ್ತು ದೇಶ ನಿರ್ಮಾಣದ ಅನಿವಾರ್ಯ ಅಂಗವಾಗಿದೆ.

ನವಉದಾರವಾದದ ಕರಿನೆರಳು

90 ರ ದಶಕದಲ್ಲಿ ಆರ್ಥಿಕ ಸುಧಾರಣೆಗಳ ಅಲೆಯೆದ್ದು ನಮ್ಮ ದೇಶವೂ ನವ ಉದಾರೀಕರಣ ನೀತಿಗಳನ್ನು ಅಪ್ಪಿಕೊಳ್ಳಲು ಆರಂಭಿಸುತ್ತಿದ್ದಂತೆ ಅದರ ಛಾಯೆಯು ಆರ್ಥಿಕ ವಲಯದ ಮೇಲೆಯೂ ಬೀಳಲಾರಂಭಿಸಿತು. ಅದರ ಭಾಗವಾಗಿ ವಿಮಾ ಕ್ಷೇತ್ರಗಳ ಸುಧಾರಣೆಗಾಗಿ 1991 ರಲ್ಲಿ ಸರ್ಕಾರ ಮಲ್ಹೋತ್ರ ಸಮಿತಿಯನ್ನು ನೇಮಿಸಿತು. ಮಲ್ಹೋತ್ರ ಸಮಿತಿಯು ಎಲ್‌ಐಸಿಯ ಶೇರು ಬಂಡವಾಳವನ್ನು ನೂರು ಕೋಟಿ ರೂಪಾಯಿಗೆ ಏರಿಸಿ ಅದರ ಶೇ. ರಷ್ಟು ಶೇರುಗಳನ್ನು ಖಾಸಗಿಯವರಿಗೆ ಮಾಡುವಂತೆ ಶಿಫಾರಸ್ಸು ಮಾಡಿತ್ತು. ಅಂದಿನಿಂದಲೇ ಅಖಿಲ ಭಾರತ ವಿಮಾ ನೌಕರರ ಸಂಘದ ನೇತೃತ್ವದಲ್ಲಿ ತೀವ್ರ ಹೋರಾಟ ಆರಂಭವಾಯಿತು

ಎಲ್‌ಐಸಿ ಖಾಸಗೀಕರಣದ ವಿರುದ್ಧ ದೇಶದಾದ್ಯಂತ 1.5 ಕೋಟಿ ಸಹಿ ಸಂಗ್ರಹಿಸಲಾಯಿತು. ಕೊನೆಗೆ 1999 ರಲ್ಲಿ ಆಡಳಿತಾರೂಢ ವಾಜಪೇಯಿ ನೇತೃತ್ವದ ಸರ್ಕಾರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಇ)ಮಸೂದೆ ಸ್ವೀಕರಿಸುವ ಮೂಲಕ ಶೇ. 26 ರಷ್ಟು ವಿದೇಶಿ ಬಂಡವಾಳದೊAದಿಗೆ ಖಾಸಗಿ ವಿಮಾ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದರೂ ಭಾರತೀಯ ಜೀವವಿಮಾ ನಿಗಮವು ಸಂಪೂರ್ಣ ಸಾರ್ವಜನಿಕ ವಲಯದಲ್ಲೇ ಮುಂದುವರೆದಿದೆ. ಎರಡು ದಶಕಗಳ ತೀವ್ರ ಸ್ಪರ್ಧೆಯ ನಡುವೆಯೂ ಇಂದಿಗೂ ಭಾರತದ ವಿಮಾ ಮಾರುಕಟ್ಟೆಯ ಅಗ್ರ ನಾಯಕನಾಗಿ ಮುಂದುವರೆದಿದೆ.

ವ್ಯಂಗ್ಯಚಿತ್ರ:ಮಾಲಿ,ಇಂಡಿಯನ್ ಕಾರ್ಟೂನ್ ಗ್ಯಾಲರಿ

ಭಾರತೀಯ ಜೀವವಿಮಾ ನಿಗಮ ಇಂತಹ ಅದ್ಬುತ ಸಾಧನೆ ಮಾಡುತ್ತಿದ್ದರೂ ಸರ್ಕಾರಗಳು ಈ ಸಂಸ್ಥೆಯನ್ನು ದುರ್ಬಲಗೊಳಿಸುವ, ಖಾಸಗೀಕರಣದ ತಮ್ಮ ಪ್ರಯತ್ನಗಳನ್ನು ಮುಂದುವರೆಸಿವೆ. 2008 ರಲ್ಲಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರಬಂಡವಾಳವನ್ನು ಶೇ.49 ಹೆಚ್ಚಿಸಲಾಗಿದೆ. 2011 ರಲ್ಲಿ ತಿದ್ದುಪಡಿ ತರುವ ಮೂಲಕ ಎಲ್‌ಐಸಿಯ ಬಂಡವಾಳವನ್ನು ನೂರು ಕೋಟಿಗೆ ಏರಿಸಲಾಗಿದೆ. ಎಲ್‌ಐಸಿಯ ಖಾಸಗೀಕರಣಕ್ಕೆ ಸರ್ಕಾರ ನಿರಂತರ ಪ್ರಯತ್ನ ನಡೆಸಿದ್ದರೂ ಸಂಘಟನೆಯು ವಿವಿಧ ಪ್ರಚಾರಾಂದೋಲನದ ಮೂಲಕ ಜನರ ಬೆಂಬಲ ಗಳಿಸಿದ ಕಾರಣ ಅದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ.

ಕಾರ್ಪೊರೇಟ್‌ಗಳಿಗಾಗಿ ಹುಸಿ ತರ್ಕಗಳು

ಇದೀಗ ಆಡಳಿತದಲ್ಲಿರುವ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಅದು ಅನುಸರಿಸುತ್ತಿರುವ ನೀತಿಗಳಿಂದಾಗಿ ದೇಶ ಸಂಕಷ್ಟಕ್ಕೆ ಸಿಲುಕಿದೆ ಇದಕ್ಕೆ ಪರಿಹಾರವಾಗಿ ಸರ್ಕಾರ ಈಗಾಗಲೇ ಬಡ್ಜೆಟ್‌ನಲ್ಲಿ ಎಲ್‌ಐಸಿಯ ಶೇರು ವಿಕ್ರಯದ ಪ್ರಸ್ತಾಪ ಮಾಡಿರುವುದು ಮಾತ್ರವಲ್ಲ ಅದರ ಮುಂದುವರೆದ ಭಾಗವಾಗಿ ಎಲ್‌ಐಸಿ ಯ ಶೇರು ವಿಕ್ರಯದ ಮೌಲ್ಯ ಮಾಪನ ಮಾಡಲು ಡಿಲೈಟ್ ಸಂಸ್ಥೆಯನ್ನೂ ನಿಯೋಜಿಸಿದೆ. ಎಲ್‌ಐಸಿಯ ಶೇರುಗಳನ್ನು ಮಾರಾಟಕ್ಕಿಟ್ಟಿದೆ.

ಇದನ್ನು ಸಮರ್ಥಿಸಿಕೊಳ್ಳಲು ಅದು ಮುಂದಿಟ್ಟಿರುವ ಒಂದು ತರ್ಕ ಇದರಿಂದ ಎಲ್‌ಐಸಿ ಯ ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಬರುತ್ತದೆ ಎಂಬುದು. ಇದು ಹುಸಿ ವಾದ . ಏಕೆಂದರೆ ಎಲ್‌ಐಸಿ ನಿರ್ವಹಣೆಯ ಎಲ್ಲ ಮಾಹಿತಿಗಳಳನ್ನು ಸಂಸತ್ತಿಗೆ ಸಲ್ಲಿಸುತ್ತ ಬಂದಿದೆ, ಮತ್ತು ದೇಶದ ಅತ್ಯುಚ್ಚ ಶಾಸಕೀಯ ಸಂಸ್ಥೆಯಾದ ಸಂಸತ್ತು ಇದನ್ನು ಪರಿಶೀಲಿಸುತ್ತ ಬಂದಿದೆ. ಇದಕ್ಕಿಂತ ಹೆಚ್ಚಿನ ಪಾರದರ್ಶಕತೆ ಇನ್ನೇನು. ಬೇಕು? ಎಲ್‌ಐಸಿ ಯು ಈ ದೇಶಕ್ಕೆ ಮತ್ತು ಅದರ ಅಸ್ತಿತ್ವದ ಉದ್ದೇಶಕ್ಕೆ ಬದ್ಧವಾಗಿರುವುದರಿಂದಲೇ ಇಷ್ಟೊಂದು ಲಾಭದಾಯಕವಾಗಿ ಕೆಲಸ ಮಾಡುತ್ತಿದೆ.

ಎಲ್‍ಐಸಿ ಶೇರುಗಳನ್ನು ಮಾರಾಟ ಮಾಡುವ ಮೂಲಕ ಎಲ್‌ಐಸಿಯ ವ್ಯವಹಾರ ವೃದ್ಧಿಸಲು ಅಗತ್ಯ ಬಂಡವಾಳ ದೊರೆಯುತ್ತದೆಯೆಂದು ಹೇಳಲಾಗುತ್ತಿದೆ. ಇದು ಇನ್ನೊಂದು ಹುಸಿ ತರ್ಕ. ಏಕೆಂದರೆ ಸರ್ಕಾರದ ಯೋಜನೆಗಳಿಗೇ ಎಲ್‌ಐಸಿ ಬಂಡವಾಳ ಕ್ರೋಢೀಕರಿಸುತ್ತಿರುವಾಗ ಅದು ತನ್ನ ವ್ಯವಹಾರ ವಿಸ್ತರಣೆಗೆ ಶೇರುಗಳನ್ನು ಮಾರುವ ಅಗತ್ಯವೇ ಬರುವುದಿಲ್ಲ.

ಎಲ್‌ಐಸಿ ಯ ಶೇರುಗಳನ್ನು ಮಾರುವ ಮೂಲಕ ಸಾರ್ವಜನಿಕರಿಗೆ ಅದರ ಒಡೆತನದಲ್ಲಿ ಪಾಲು ನೀಡಬಹುದೆಂಬುದು ಮತ್ತೊಂದು ವಾದ. ಸಾರ್ವಜನಿಕ ವಲಯದ ಸಂಸ್ಥೆಯೆಂದರೆ ಸಾರ್ವಜನಿಕರೇ ಅದರ ಒಡೆಯರು. ಆದರೆ ಶೇರು ಮಾರುಕಟ್ಟೆಗೆ ಹೋಗುವುದರಿಂದ ಈ ಒಡೆತನ ನಿಜವಾಗಿಯೂ ಕುಂಠಿತಗೊಳ್ಳುತ್ತದೆ. ಏಕೆಂದರೆ ಶೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಶೇರುದಾರರ , ಅಂದರೆ ವೈಯಕ್ತಿಕವಾಗಿ ಹಣ ಹೂಡುವವರ ಪ್ರಮಾಣ ಕೇವಲ ಶೇ. 3. ಅಂದರೆ ಕೇವಲ 3ಶೇ. ರಷ್ಟು ಜನರ ಕೈಗೆ ಒಡೆತನ ನೀಡುವುದು ನಿಜವಾದ ಪಾಲುದಾರಿಕೆಯೆ?

ಎಲ್‌ಐಸಿ ಯಂತಹ ಉತ್ತಮ ಆರ್ಥಿಕ ಸಂಸ್ಥೆಯ ಖಾಸಗೀಕರಣಕ್ಕೆ ಯಾವುದೇ ಸಮರ್ಥ ಕಾರಣವಿಲ್ಲ. ಅದಕ್ಕೆ ಇರುವ ಏಕೈಕ ಕಾರಣ ಸರ್ಕಾರ ನವ-ಉದಾರೀಕರಣ ನೀತಿಗಳಿಗೆ ಹೊಂದಿರುವ ಬದ್ಧತೆ. “ಜನರ ಹಣ ಜನ ಕಲ್ಯಾಣಕ್ಕಾಗಿ” ಎನ್ನುವ ಹಂತದಿಂದ “ಜನರ ಹಣ ಬಂಡವಾಳಗಾರರ ಲಾಭಕ್ಕಾಗಿ” ಎನ್ನುವ ಹಂತಕ್ಕೆ ಈ ಮಹಾನ್ ಸಂಸ್ಥೆಯನ್ನು ಸರ್ಕಾರ ತೆಗೆದುಕೊಂಡು ಹೋಗುತ್ತಿದೆ.

ಹಾಗಾಗದಂತೆ ಎಲ್‌ಐಸಿ ಯನ್ನು ಸಾರ್ವಜನಿಕ ವಲಯದಲ್ಲೇ ಉಳಿಸಿಕೊಳ್ಳಲು ಸೈದ್ಧಾಂತಿಕ ಸಂಘರ್ಷಕ್ಕಿಳಿದಿರುವ ಎಲ್ಲ ನೌಕರರಿಗೆ ಬೆಂಬಲ ನೀಡುವುದು ಎಲ್ಲ ದೇಶ ಪ್ರೇಮಿಗಳ ಕರ್ತವ್ಯ. ಎಲ್‌ಐಸಿಯಂತಹ ಸಾರ್ವಜನಿಕ ಸಂಸ್ಥೆಗಳ ಉಳಿವಿನಲ್ಲೇ ನಿಜವಾದ ಆತ್ಮನಿರ್ಭರತೆ ಅಂದರೆ ಸ್ವಾವಲಂಬನೆ ಅಡಗಿದೆ.

  ಎಸ್.ಕೆ.ಗೀತಾ

 

 

 

Donate Janashakthi Media

Leave a Reply

Your email address will not be published. Required fields are marked *