ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ‘ಅದಾನಿ’ ಗುಂಪಿಗೆ ಹಸ್ತಾಂತರ ಗೊಂಡ ನಂತರ, ನಿಲ್ದಾಣದಲ್ಲಿ ಗುತ್ತಿಗೆ ಏಜೆನ್ಸಿಗಳ ಅಡಿ ಕೆಲಸ ಮಾಡುತ್ತಿರುವ ಸಾವಿರದಷ್ಟು ಸ್ಥಳೀಯ ಕಾರ್ಮಿಕರ ಉದ್ಯೋಗಕ್ಕೆ ಅಭದ್ರತೆ ಎದುರಾಗಿದೆ. ಈಗಾಗಲೆ “ಏರ್ ಇಂಡಿಯಾ ಸಾಟ್ಸ್” ಎಂಬ ಗುತ್ತಿಗೆ ಕಂಪೆನಿ 60 ಕ್ಕೂ ಹೆಚ್ಚು ಕಾರ್ಮಿಕರನ್ನು ಕೊರೋನಾ ನೆಪ ಮುಂದಿಟ್ಟು ಹೊರದಬ್ಬಿದೆ.
ಕೆಲಸ ಕಳೆದುಕೊಂಡವರೆಲ್ಲರೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಕಳೆದು ಕೊಂಡು ನಿರ್ವಸಿತರಾದವರ ಕುಟುಂಬಸ್ಥರು, ಹಾಗೂ ತುಳುನಾಡಿನ ಸ್ಥಳೀಯ ನಿವಾಸಿಗಳು. ಜೊತೆಗೆ ಅದಾನಿ ಗ್ರೂಪ್ ಗುತ್ತಿಗೆ ಕಂಪೆನಿಗಳ ಜೊತೆಗಿನ ಒಪ್ಪಂದವನ್ನು ಹೊಸದಾಗಿ ನವೀಕರಿಸಲು ಮುಂದಾಗಿದ್ದು ಸ್ಥಳೀಯರ ಬದಲಿಗೆ ಬಹುತೇಕ ಉತ್ತರ ಭಾರತೀಯರು ಉದ್ಯೋಗಿಗಳಾಗುವ ಸಾಧ್ಯತೆಗಳು ದಟ್ಟವಾಗಿದೆ. ಈಗಾಗಲೆ ಹೊಸ ಸೆಕ್ಯೂರಿಟಿ ಏಜನ್ಸಿ ಆಗಮಿಸಿದ್ದು ಉತ್ತರ ಭಾರತೀಯರನ್ನು ನೇಮಿಸಿಕೊಂಡಿದೆ.
“ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ವಿರೋಧಿ ಹೋರಾಟ ಸಮಿತಿ” ಈ ನಡೆಯನ್ನು ಖಂಡಿಸಿದ್ದು, ಇಂದು ಗುತ್ತಿಗೆ ಕಂಪೆನಿ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ ಕೆಲಸದಿಂದ ಕೈ ಬಿಟ್ಟವರನ್ನು ತಕ್ಷಣ ಮರು ನೇಮಕ ಮಾಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ನಿರ್ವಸಿತರನ್ನು, ಸ್ಥಳೀಯರನ್ಜು ಕೆಲಸದಿಂದ ಕೈ ಬಿಡಬಾರದು, ಹೊಸ ನೇಮಕಾತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿತು.
ನಿಯೋಗದಲ್ಲಿ ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ ದೇವದಾಸ್, ಡಿವೈಎಫ್ಐ ಮುಖಂಡರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ನಿತಿನ್ ಬಂಗೇರ, ಬಜ್ಪೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಹುಲ್ ಹಮೀದ್, ಜೋಕಟ್ಟೆ ಪಂಚಾಯತ್ ಮಾಜಿ ಸದಸ್ಯರಾದ ಅಬೂಬಕ್ಕರ್ ಬಾವಾ, ವಿಮಾನ ನಿಲ್ದಾಣ ನಿರ್ವಸಿತರ ಸಮಿತಿಯ ಮಂಜಪ್ಪ ಸಾಲ್ಯಾನ್, ಬಜ್ಪೆ ನಾಗರಿಕ ಹೋರಾಟ ಸಮಿತಿಯ ಸಾಲಿ ಮರವೂರು, ಅಶ್ರಫ್ ಉಪಸ್ಥಿತರಿದ್ದರು.