ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 6 ವರ್ಷಗಳಾಗುತ್ತಿವೆ. ಅವರು ಕೇವಲ ಪತ್ರಕರ್ತೆ ಮಾತ್ರವಾಗಿರದೆ, ಹೋರಾಟಗಾರ್ತಿ ಪತ್ರಕರ್ತೆ (Activist Journalist) ಕೂಡಾ ಆಗಿದ್ದರು ಹಾಗೂ ಪ್ರಭುತ್ವವನ್ನು ಪ್ರಶ್ನಿಸುತ್ತಿದ್ದರು. ಅವರು ಹಾಗಿದ್ದಿದ್ದಕ್ಕೆಯೆ ಅವರ ಧ್ವನಿಯನ್ನು ಅಡಗಿಸಲಾಯಿತು ಎಂಬುವುದರಲ್ಲಿ ಯಾವ ಅನುಮಾನವೂ ಇಲ್ಲ. ದೇಶದ ಪತ್ರಿಕಾ ಸ್ವತಂತ್ಯ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರ ಕುಸಿಯುತ್ತಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಅಘೋಷಿತ ತರ್ತು ಪರಿಸ್ಥಿತಿಯಿದ್ದರೂ ಈಗಲೂ ಹಲವಾರು ಪತ್ರಕರ್ತರು ಜನಪರವಾಗಿ ಕೆಲಸ ಮಾಡುತ್ತಿದ್ದಾರೆ.
ಈ ನಡುವೆ ಹಲವು ಪತ್ರಕರ್ತರನ್ನು ಕೊಲ್ಲಲಾಗಿದೆ, ಬಂಧಿಸಲಾಗಿದೆ, ಚಿತ್ರ ಹಿಂಸೆ ನೀಡಲಾಗಿದೆ. ಆದರೂ ಹಲವಾರು ಜನಪರ ಪತ್ರಕರ್ತರು ತಮ್ಮ ಹೋರಾಟ ಮುಂದುವರೆಸಿದ್ದಾರೆ. ಗೌರಿಯ ಕೊಂದ ಮಾತ್ರಕ್ಕೆ ಅವರು ಯಾರೂ ತಮ್ಮ ಜನಪರ ಪತ್ರಿಕೋದ್ಯೋಗವನ್ನು ನಿಲ್ಲಿಸಿಲ್ಲ. ಜೊತೆಗೆ ಪ್ರಭುತ್ವದ ಕಿರುಕುಳ ನಿಂತಿಲ್ಲ, ನಿಲ್ಲುವುದು ಕೂಡಾ ಇಲ್ಲ. ಇದೆಲ್ಲವರನ್ನೂ ತಿಳಿದೆ ಇಲ್ಲಿ ಸಾವಿರಾರು ಗೌರಿಯಂತಹ ಪತ್ರಕರ್ತರು ತಮ್ಮ ಹೋರಾಟದ ಜೊತೆ ಜೊತೆಗೆ ತಮ್ಮ ಪತ್ರಿಕೋದ್ಯೋಗ ಮಾಡುತ್ತಲೆ ಇದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ಕುರಿತು ತಯಾರಾದ ಸಾಕ್ಷ್ಯಚಿತ್ರ
ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರ ಸಂಜೆ ಹೊತ್ತಿಗೆ ಬೆಂಗಳೂರಿನ ಅವರ ಮನೆಯ ಮುಂದೆಯೆ ಗುಂಡಿಕ್ಕಿ ಕೊಲ್ಲಲಾಯಿತು. ದುಷ್ಕರ್ಮಿಗಳ ಈ ದುಷ್ಕಕೃತ್ಯಕ್ಕೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಯಾಕಾಗಿ ಮತ್ತು ಯಾರು ಹತ್ಯೆ ಮಾಡಿದರು ಎಂಬುದು ಅವರ ಹತ್ಯೆಯನ್ನು ಸಂಭ್ರಮಿಸಿದ ಜನರು ಹಾಗೂ ಅವರ ಹಿನ್ನಲೆಯನ್ನು ಗಮನಿಸಿದರೆ ತಿಳಿಯುತ್ತದೆ. ಅವರು ಕೊಲೆಯಾಗಿ 6 ವರ್ಷಗಳಾದರೂ ಅವರ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಆರೋಪಿಗಳು ಜೈಲಲ್ಲಿದ್ದರೆ, ಪ್ರಕರಣ ಇನ್ನೂ ನ್ಯಾಯಾಲಯದಲ್ಲೆ ಇದೆ.
ಏನಾಯ್ತು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣ?
ಗೌರಿ ಲಂಕೇಶ್ ಹತ್ಯೆಯಾಗಿ ಬರೋಬ್ಬರಿ ಐದು ವರ್ಷಗಳ ನಂತರ ಅಂದರೆ, 2022 ರ ಜುಲೈನಲ್ಲಿ ಪ್ರಕರಣ ವಿಚಾರಣೆ ಪ್ರಾರಂಭವಾಯಿತು. ಇದಕ್ಕಾಗಿ ಸಾರ್ವಜನಿಕರು ಒತ್ತಡ ಹೇರಬೇಕಾಯಿತು. ಕೋರ್ಟ್‌ಗಳು ಮಧ್ಯಪ್ರವೇಶ ಮಾಡಬೇಕಾಯಿತು. ಗೌರಿ ಅವರ ಹತ್ಯೆ ನಡೆದು ಒಂದು ವರ್ಷದ ಒಳಗಡೆ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸದರೂ, ಆರೋಪಿ ಪರ ವಕೀಲರು ವಿನಾಕಾರಣ ವಿಳಂಬ ಮಾಡುತ್ತಿದ್ದ ಕಾರಣ ವಿಚಾರಣೆ 5 ವರ್ಷಗಳ ನಂತರ ಪ್ರಾರಂಭವಾಗಿದೆ.
ಪ್ರಕರಣದಲ್ಲಿ ಪೊಲೀಸರು 10 ಸಾವಿರ ಪುಟಕ್ಕೂ ಹೆಚ್ಚಿನ ಬೃಹತ್ ಚಾರ್ಜ್ ಶೀಟ್ ಅನ್ನು 2018ರ ನವಂಬರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್‌ನಲ್ಲಿ 400ಕ್ಕೂ ಹೆಚ್ಚು ಸಾಕ್ಷಿಗಳನ್ನೂ, 1000 ಕ್ಕೂ ಹೆಚ್ಚು ಪುರಾವೆಗಳನ್ನು ಪೊಲೀಸರು ದಾಖಲಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಮುಚ್ಚಯದ ಕೋರ್ಟ್ ಹಾಲ್ 1 ರಲ್ಲಿ ಸಿಟಿ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2022ರ ಜುಲೈನಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪ್ರತಿ ತಿಂಗಳಲ್ಲಿ ಮೊದಲ ಅಥವಾ ಎರಡನೇ ವಾರದ ಐದು ದಿನಗಳಲ್ಲಿ ಗೌರಿ ಹತ್ಯಾ ಪ್ರಕರಣದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ನಡೆಸುತ್ತಿದೆ. 2022 ರ ಜುಲೈ ನಿಂದ 2023ರ ಆಗಸ್ಟ್ ವರೆಗೆ 83 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 300 ಕ್ಕೂ ಹೆಚ್ಚು ಪುರಾವೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ದಾಖಲೀಕರಿಸಲಾಗಿದೆ.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ: ಕೊಲೆ ನೋಡಿದ ಮೊದಲ ಇಬ್ಬರು ಸಾಕ್ಷಿದಾರರು ಕೋರ್ಟ್ಗೆ ಹಾಜರು
ಆರೋಪಿಗಳು ಯಾರು? ಅವರೆಲ್ಲಾ ಎಲ್ಲಿದ್ದಾರೆ?
ಗೌರಿ ಲಂಕೇಶ್ ಪರವಾಗಿ 2018 ರಿಂದಲೂ ಪ್ರಖ್ಯಾತ ಜನಪರ ವಕೀಲರಾದ ಎಸ್. ಬಾಲನ್ ಅವರೇ ಕೇಸು ನಡೆಸುತ್ತಿದ್ದಾರೆ. ಆರೋಪಿಗಳ ಪರವಾಗಿ ಮಡಿಕೇರಿಯ ಕೆ.ಎಂ. ಕೃಷ್ಣಮೂರ್ತಿ ನಾಯಕತ್ವ ವಹಿಸಿದ್ದು ಅವರಿಗೆ ಏಳೆಂಟು ಹಿರಿಯ ಮತ್ತು ಕಿರಿಯ ವಕೀಲರು ನೆರವು ನೀಡುತ್ತಿದ್ದಾರೆ.
ಗೌರಿ ಹತ್ಯಾ ಪ್ರಕರಣದಲ್ಲಿ 18 ಆರೋಪಿಗಳಿದ್ದು, ಅವರಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ವಿಕಾಸ್ ಪಾಟೀಲ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಮೇಲೆ ಕೊಲೆ , ಸಂಘಟಿತ ಸಂಚು ಇತ್ಯಾದಿಗಳ ಸೆಕ್ಷನ್ 302, 120 (ಬಿ ) ಹಾಗೂ ಶಸ್ತ್ರಾಸ್ತ್ರ ಕಾಯಿದೆ ಕಲಮುಗಳು ಮತ್ತು ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ ( KOCCA) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ಗೌರಿ ಹತ್ಯಾ ಪ್ರಕರಣದಲ್ಲಿ ಈಗ ಬಂಧನದಲ್ಲಿದ್ದು ವಿಚಾರಣೆ ಎದುರಿಸುತ್ತಿರುವ ಆರೋಪಿಗಳ ಮಾಹಿತಿ ಕೆಳಗಿನಂತಿದೆ:
1. ಅಮೋಲ್ ಕಾಳೆ (ಪ್ರಧಾನ ಆರೋಪಿ, ಹತ್ಯಾ ತಂಡದ ನಾಯಕ)
2. ಪರಶುರಾಮ್ ವಾಘಮೋರೆ (ಗೌರಿಯ ಮೇಲೆ ಗುಂಡು ಹಾರಿಸಿದವ)
3. ಗಣೇಶ್ ಮಿಸ್ಕಿನ್ (ಗೌರಿಯ ಮೇಲೆ ಗುಂಡುಹಾರಿಸಿದಾತನನ್ನು ಬೈಕಿನಲ್ಲಿ ಗೌರಿ ಮನೆಗೆ ಕರೆದುಕೊಂಡು ಹೋದವ)
4. ಅಮಿತ್ ಬಡ್ಡಿ (ಹತ್ಯೆ ಮುಗಿದ ಮೇಲೆ ಮತ್ತೊಂದು ವಾಹನದಲ್ಲಿ ಅವರನ್ನು ಶೇಲ್ಟರ್ ಗೆ ಕರೆದುಕೊಂಡು ಹೋಗಲು ಕಾಯುತ್ತಿದ್ದವ)
5. ಅಮಿತ್ ದೇಗ್ವೇಕರ್ (ಸಹ ಸಂಚುಗಾರ)
6. ಭರತ್ ಕುರ್ಣೇ (ಬೆಳಗಾವಿಯಲ್ಲಿ ಗೌರಿ ಹತ್ಯೆಗಾಗಿ ಆರೋಪಿಗಳಿಗೆ ಬಂದೂಕು ತರಬೇತಿ ಆಯೋಜನೆ ಮಾಡಿದ್ದ)
7. ಸುರೇಶ ಎಚ್.ಎಲ್. (ಬೆಂಗಳೂರಿನಲ್ಲಿ ಆರೋಪಿಗಳಿಗೆ ವಾಸ್ತವ್ಯ ಏರ್ಪಡಿಸಿದ್ದ)
8. ರಾಜೇಶ್ ಬಂಗೇರ, ಮಡಿಕೇರಿ (ಬಂದೂಕು ತರಬೇತಿಗೆ ಸಾಧನಗಳನ್ನು ಒದಗಿಸಿದ್ದವ)
9. ಸುಧನ್ವ ಗೊಂದಲೇಕರ್, ಮಹರಾಷ್ಟ್ರದ (ಹತ್ಯೆಯ ಮೊದಲು ನಂತರ ಶಸ್ತ್ರ ಹಾಗೂ ವಾಹನ ಸರಬರಾಜು ಮತ್ತು ಅದರ ನಾಶಕ್ಕೆ ಕಾರಣರಾದ ಆರೋಪಿ)
10. ಶರದ್ ಕಳಸ್ಕರ್ (ಸಹ ಸಂಚುಕೋರ)
11. ಮೋಹನ್ ನಾಯಕ್, ಸುಳ್ಯ (ವೈದ್ಯನ ಹೆಸರಲ್ಲಿ ಆರೋಪಿಗಳಿಗೆ ಬೆಂಗಳೂರಿನಲ್ಲಿ ಮತ್ತೊಂದು ವಾಸ್ತವ್ಯ ಏರ್ಪಡಿಸಿದವ)
12. ವಾಸುದೇವ ಸೂರ್ಯವಂಶಿ, ಮಹಾರಾಷ್ಟ್ರ (ವಾಹನ ವ್ಯವಸ್ಥೆ ಮಾಡಿದವ)
13. ಸುಜಿತ್ ಕುಮಾರ್ (ಸಹ ಆರೋಪಿ-ಸಂಘಟಕ )
14. ಮನೋಹರ್ ಯಡವೆ (ಸಹ ಆರೋಪಿ, ಸಂಘಟಕ)
15. ಶ್ರೀಕಾಂತ್ ಪಂಗಾರ್ಕರ್, ಮಹಾರಾಷ್ಟ್ರ (ಸಹ ಆರೋಪಿ)
16. ನವೀನ ಕುಮಾರ್, ಮಂಡ್ಯ ( ಈತ ಭಗವಾನ್ ಹತ್ಯಾ ಸಂಚಿನ ಪ್ರಕರಣದಲ್ಲೂ ಆರೋಪಿ )
17. ಹೃಷಿಕೇಶ್ ದೇವಡೇಕರ್, ಮಹಾರಾಷ್ಟ್ರ (ಸಹ ಆರೋಪಿ)
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: 17 ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದ ನ್ಯಾಯಾಲಯ
2018ರ ಫೆಬ್ರವರಿಯಲ್ಲಿ ಮೊಟ್ಟ ಮೊದಲಿಗೆ ಬಂಧನವಾದ ನವೀನ ಕುಮಾರ್ ಇಂದ ಹಿಡಿದು ಅದೇ ವರ್ಷ ಬೇರೆಬೇರೆ ಸಮಯದಲ್ಲಿ ಬಂಧನಕ್ಕೊಳಗಾದ ಎಲ್ಲಾ ಆರೋಪಿಗಳು (2020ರಲ್ಲಿ ಬಂಧನಕ್ಕೊಳಗಾದ ಹೃಷಿಕೇಶ್ ದೇವೇಡೆಕರ್ ಅವರನ್ನು ಬಿಟ್ಟು ) 2018ರಿಂದಲೂ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ.
ಹತ್ಯಾ ತಂಡದ ನಾಯಕ ಅಮೋಲ್ ಕಾಳೆ ಸೇರಿದಂತೆ 7 ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದು, ಉಳಿದವರು ಕರ್ನಾಟಕದವರಾಗಿದ್ದಾರೆ. ಎಲ್ಲಾ ಆರೋಪಿಗಳಿಗೂ ಸನಾತನ ಸಂಸ್ಥೆ ಮತ್ತು ಹಿಂದೂ ಜನ ಜಾಗೃತಿ ಸಂಸ್ಥೆಗಳೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಬಂಧಗಳಿವೆ ಎಂಬುದು ಪ್ರಾಸಿಕ್ಯೂಷನ್ ಪತ್ತೆ ಹಚ್ಚಿದೆ.
ಇದೆ ತಂಡವೇ ಮಹಾರಾಷ್ಟ್ರದ ಧಾಬೋಲ್ಕರ್, ಪನ್ಸಾರೆ ಹಾಗೂ ಕರ್ನಾಟಕದ ಪ್ರೊ. ಕಲ್ಬುರ್ಗಿ ಅವರ ಹತ್ಯೆಯಲ್ಲೂ ಆರೋಪಿಗಳಾಗಿದ್ದಾರೆ. ಹೀಗಾಗಿ ಇವರಲ್ಲಿ ಕೆಲವರು ಮಹಾರಾಷ್ಟ್ರದ ಜೈಲಿನಲ್ಲಿದ್ದಾರೆ. ಉಳಿದವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸಿನ ಮೂಲಕ ಹಾಜರು ಪಡಿಸಲಾಗುತ್ತಿದೆ.
ಗೌರಿಗೂ, ಹತ್ಯೆ ಮಾಡಿದವರಿಗೂ ಏನು ಸಂಬಂಧ? ಅವರ ಉದ್ದೇಶವೇನು?
ಪ್ರಾಸಿಕ್ಯೂಷನ್ ಪ್ರಕಾರ ಸನಾತನ ಸಂಸ್ಥೆಯ ಸಿದ್ಧಾಂತ ಮತ್ತು ಗುರಿಗಳು ಗೌರಿ ಅವರನ್ನು ಆರೋಪಿಗಳು ಹತ್ಯೆ ಮಾಡಲು ಪ್ರೇರೇಪಿಸಿದೆ. ಸನಾತನ ಸಂಸ್ಥೆಯ ಮಾರ್ಗ ದರ್ಶಕ ಗ್ರಂಥವಾಗಿರುವ “ಕ್ಷಾತ್ರ ಧಾರ್ಮ ಸಾಧನ”ದ ಪ್ರಕಾರ ಹಿಂದೂ/ ಸನಾತನ ಧರ್ಮಕ್ಕೆ ಕಂಟಕಪ್ರಾಯವಾಗಿರುವ ದುರ್ಜನರನ್ನು ಹತ್ಯೆ ಮಾಡುವ ಮೂಲಕ ಸನಾತನಕ್ಕೆ ಇರುವ ಅಡ್ಡಿಯನ್ನು ನಿವಾರಿಸಿಕೊಳ್ಳಬೇಕು. ಅದರಲ್ಲೂ ಸ್ವಧರ್ಮೀಯರಲ್ಲೇ ಇರುವ ದ್ರೋಹಿಗಳನ್ನು ಶಿಕ್ಷಿಸಬೇಕು. ಈ ಸಿದ್ಧಾಂತವೇ ಆರೋಪಿಗಳಿಗೆ ಗೌರಿ ಹತ್ಯೆ ಕೊಲೆಗೆ ಪ್ರೇರಣೆ ನೀಡಿದೆ ಎಂದು ಪ್ರಾಸಿಕ್ಯೂಷನ್ ವಾದವಾಗಿದೆ.
ಅರೋಪಿಗಳೆಲ್ಲರೂ ಒಂದು ಸಿಂಡಿಕೇಟ್ ರಚಿಸಿಕೊಂಡು ಸಂಚು ಮಾಡಿ ತರಬೇತಿ ಪಡೆದುಕೊಂಡು ಒಂದು ಸಂಚಿನ ಪ್ರಕಾರ ಗೌರಿ ಹತ್ಯೆ ಮಾಡಿದರು. ಈ ಅಪರಾಧದಲ್ಲಿ ಒಬ್ಬೊಬ್ಬರದ್ದು ಒಂದೊಂದು ನಿರ್ದಿಷ್ಟ ಪಾತ್ರವಿದೆ ಎಂದು ಪ್ರಾಸಿಕ್ಯೂಷನ್ ಆರೋಪ ಮಾಡಿದ್ದಾರೆ. ಆರೋಪಗಳನ್ನು ಸಾಬೀತು ಮಾಡಲು ಸಿದ್ಧರಾಮಯ್ಯ ಅವರ ಮೊದಲ ಸರ್ಕಾರವು ಪ್ರಖ್ಯಾತ ಜನಪರ ವಕೀಲ ಬಾಲನ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿದೆ. ಬಿಜೆಪಿ ಸರ್ಕಾರ ಕೂಡ ಅವರನ್ನೆ ಮುಂದುವರೆಸಿತ್ತು, ಅವರನ್ನು ಈವರೆಗೆ ಬದಲಾಯಿಸಲಿಲ್ಲ. ಈಗಲೂ ಅವರೇ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ಹೆಸರಿನಲ್ಲಿ ವಲಸೆ ಕಾರ್ಮಿಕರಿಗೆಗಾಗಿ ಉಚಿತ ಅಂಬುಲೆನ್ಸ್ ಸೇವೆ
ವಿಚಾರಣೆ ಹೇಗೆ ನಡೆಯುತ್ತಿದೆ? ನ್ಯಾಯಾಲಯದಲ್ಲಿ ಏನೇನಾಯಿತು?
2022 ರ ಜುಲೈನಲ್ಲಿ ಪ್ರಕರಣ ವಿಚಾರಣೆ ಪ್ರಾರಂಭವಾಯಿತು. 10 ಸಾವಿರ ಪುಟಕ್ಕೂ ಹೆಚ್ಚಿನ ಬೃಹತ್ ಚಾರ್ಜ್ ಶೀಟ್ ಅನ್ನು 2018ರ ನವಂಬರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು. ಈ ಚಾರ್ಜ್ ಶೀಟ್‌ನಲ್ಲಿ 400ಕ್ಕೂ ಹೆಚ್ಚು ಸಾಕ್ಷಿಗಳನ್ನೂ, 1000 ಕ್ಕೂ ಹೆಚ್ಚು ಪುರಾವೆಗಳನ್ನು ಪೊಲೀಸರು ದಾಖಲಿಸಿದ್ದಾರೆ. 2022 ರ ಜುಲೈ ನಿಂದ 2023ರ ಆಗಸ್ಟ್ ವರೆಗೆ 83 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 300 ಕ್ಕೂ ಹೆಚ್ಚು ಪುರಾವೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ದಾಖಲೀಕರಿಸಲಾಗಿದೆ.
ಆದರೆ ಕಳೆದ ಫೆಬ್ರವರಿಯಿಂದ ತನಿಖಾಧಿಕಾರಿಗಳ ಮತ್ತು ಪ್ರಾಸಿಕ್ಯೂಷನ್‌ನ ವಿಶೇಷ ಮನವಿಯ ಮೇರೆಗೆ ಸಾಕ್ಷಿಗಳ ವಿಚಾರಣೆಯು ಬಹಿರಂಗವಾಗಿ ನಡೆಯುತ್ತಿಲ್ಲ. ಬಹಿರಂಗ ಕೋರ್ಟಿನಲ್ಲಿ ವಿಚಾರಣೆಯು ನಡೆಯುವ ವೇಳೆ ಆರೋಪಿಗಳ ಪರವಾಗಿ ಸಂಬಂಧಪಡದವರೆಲ್ಲಾ ನ್ಯಾಯಾಲಯದಲ್ಲಿ ತುಂಬಿಕೊಂಡು ಪ್ರಾಸಿಕ್ಯೂಷನ್ ನಡಾವಳಿಗೆ ಅಡ್ಡಿಯುಂಟುಮಾಡುತ್ತಿದ್ದರು. ಹೀಗಾಗಿ ವಿಡಿಯೊ ಕಾನ್ಫರೆನ್ಸ್f ಮೂಲಕ ವಿಚಾರಣೆ ನಡೆಸಲಾಗುತ್ತಿದೆ.
ವಿಚಾರಣೆ ನಡೆಸುತ್ತಿರುವ ಪೀಠದಲ್ಲಿ ಈ ವರೆಗೆ ನಾಲ್ವರು ನ್ಯಾಯಾಧೀಶರು ಬದಲಾಗಿದ್ದಾರೆ. ಈ ಅವಧಿಯಲ್ಲಿ ಆರೋಪಿ ಮೋಹನ್ ಜಾಮೀನು ಪಡೆಯಲು ಸೆಷನ್ಸ್ ನ್ಯಾಯಾಲಯದಿಂದ ಹಿಡಿದು, ಸುಪ್ರೀಂ ವರಗೆ ಪ್ರಯತ್ನಿಸಿದ್ದಾರೆ. ಆದರೆ ಎಲ್ಲಾ ನ್ಯಾಯಾಲಯಗಳಲ್ಲೂ ಅವರಿಗೆ ಜಾಮೀನು ನಿರಾಕರಣೆಯಾಗಿದೆ. ಕಳೆದ ತಿಂಗಳು ಆರೋಪಿಗಳಾದ ನವೀನ ಕುಮಾರ್ ಮತ್ತು ಸುರೇಶ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಪ್ರಾಸಿಕ್ಯೂಷನ್ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದೆ.
ಇದನ್ನೂ ಓದಿ: ವಿಷ ತುಂಬಿದ ಕೋಮುವಾದದ ವಿರುದ್ಧ ನಾವೆಲ್ಲ ಹೋರಾಡಬೇಕಿದೆ – ಅರುಂಧತಿ ರಾಯ್
ಈ ನಡುವೆ ವಿಚಾರಣೆಗೆ ಒಳಪಟ್ಟ 83 ಸಾಕ್ಷಿಗಳಲ್ಲಿ ಆರೋಪಿಗಳ ಸಂಘಟನೆಗೆ ಸಂಬಂಧಪಟ್ಟ ಒಬ್ಬ ಸಾಕ್ಷಿ ಉಲ್ಟಾ ಹೊಡೆದಿದ್ದಾರೆ. ಇನ್ನಿಬ್ಬರು ಸಾಕ್ಷಿಗಳು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಗುರುತು ಹಿಡಿಯುವಲ್ಲಿ ಮತ್ತು ಕೆಲವು ದಾಖಲೆಗಳನ್ನು ಧೃಢೀಕರಿಸುವಲ್ಲಿ ವಿಫಲರಾಗಿದ್ದಾರೆ.
“ವರ್ಷಗಳು ಕಳೆದಂತೆ ನಿಖರ ನೆನಪುಗಳು ಅಳಿಸಿಹೋಗುತ್ತವೆ. ಹಾಗೆಯೇ ಸಾಕ್ಷಿಗಳು ಕೆಲವೊಮ್ಮೆ ಬಾಹ್ಯ ಒತ್ತಡಕ್ಕೆ ಪಕ್ಕಾಗಿ ಉಲ್ಟಾ ಹೊಡೆಯಲು ಪ್ರಾರಂಭಿಸುತ್ತಾರೆ. ಅಲ್ಲದೆ ಈಗಾಗಲೇ ಆರೋಪಿಗಳು ಸರಾಸರಿ ಐದು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದು, ವಿಚಾರಣೆ ಅವಧಿಯುದ್ದಕ್ಕೂ ಜಾಮೀನು ನಿರಾಕರಿಸುವುದು ನ್ಯಾಯ ಸಂಹಿತೆಗೆ ವಿರುದ್ಧವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ಒಂದು ವರ್ಷದ ಒಳಗೆ ವಿಚಾರಣೆ ಮುಗಿಸಲು ಅನುಕೂಲವಾಗುವಂತೆ ಗೌರಿಹತ್ಯಾ ಪ್ರಕರಣದ ವಿಚಾರಣೆಗೆ ಒಂದು ವಿಶೇಷ ಕೋರ್ಟನ್ನು ರಚಿಸಬೇಕಿದೆ” ಎಂದು ಚಿಂತಕ ಶಿವಸುಂದರ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಾಹಿತಿ: ಶಿವಸುಂದರ್
ವಿಡಿಯೊ ನೋಡಿ: “ಗೌರಿ ಲಂಕೇಶ್ ಹತ್ಯೆ ಪ್ರಕರಣ” – ಶಿಕ್ಷೆ ವಿಳಂಬ ಹಂತಕರಿಗೆ ಸಹಕಾರಿಯಾಗುವ ಅಪಾಯವಿದೆ – ಬಿ.ಕೆ. ಶಿವರಾಂ