ನವದೆಹಲಿ : ಸುಪ್ರಿಂ ಕೋರ್ಟಿನಲ್ಲಿ ಈ ಕುರಿತು ಅರ್ಜಿ ಹಾಕಿದವರು ಎಸ್.ಕೆ.ಎಂ.ಗೆ ಸೇರಿದವರಲ್ಲ. ಆದ್ದರಿಂದ ಕೇಂದ್ರ ಸರಕಾರ ಕೃಷಿ ಸುಗ್ರೀವಾಜ್ಞೆಗಳನ್ನು ಹೊರಡಿಸಿದ ನಂತರ ಒಂದು ವರ್ಷದಿಂದ ಹೋರಾಡುತ್ತಿರುವ ರೈತರನ್ನು ಪ್ರತಿನಿಧಿಸುವ ಯಾವುದೇ ನ್ಯಾಯಬದ್ಧ ಹಕ್ಕನ್ನು ಅವರು ಹೊಂದಿಲ್ಲ. ಸುಪ್ರಿಂ ಕೋರ್ಟ್ ಸೂಚಿಸಿರುವಂತೆ ರೈತರು ಹೋರಾಟದಲ್ಲಿರುವಾಗ ಕೋರ್ಟಿನ ಬಳಿ ಹೋಗುವ ಉದ್ದೇಶವೇನೂ ಇಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.
“ನ್ಯಾಯಾಲಯದ ಬಳಿ ಬಂದ ಮೇಲೆ, ಕಾನೂನು ತನ್ನ ದಾರಿಯಲ್ಲಿ ಸಾಗಲು ಬಿಡಬೇಕು.. ಬದಲಿಗೆ ನೀವು ಪ್ರತಿಭಟನೆ ಮುಂದುವರೆಸುತ್ತಿದ್ದೀರಿ, ರಾಷ್ಟ್ರೀಯ ಹೆದ್ದಾರಿಗಳನ್ನು ಅಡ್ಡಗಟ್ಟಿದ್ದೀರಿ..ನೀವು ನಮ್ಮಲ್ಲಿ ವಿಶ್ವಾಸವಿಡಬೇಕು” ಎಂದು ಸುಪ್ರಿಂ ಕೋರ್ಟಿನ ಪೀಠವೊಂದು ಅಕ್ಟೋಬರ್ 1ರಂದು ಟಿಪ್ಪಣಿ ಮಾಡಿರುವುದಾಗಿ ವರದಿಯಾಗಿದೆ.
ಇದಕ್ಕೆ ಪ್ರತಿಕಿಯಿಸುತ್ತ ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.) ತನಗೆ ಸೇರಿದ ಯಾವ ಸಂಘಟನೆಯೂ ಯಾವುದೇ ನ್ಯಾಯಾಲಯದ ಬಳಿ ಹೋಗಿಲ್ಲ, ಅಥವ ಯಾರಿಗೂ ಆ ಕೆಲಸವನ್ನು ವಹಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಕೃಷಿ ಕಾಯ್ದೆಗಳ ಪರಾಮರ್ಶೆ ನಡೆಸಲೆಂದು ಸುಪ್ರಿಂ ಕೋರ್ಟ್ ನೇಮಿಸಿದ ಆಯೋಗವನ್ನು ಎಸ್.ಕೆ.ಎಂ. ಬಹಿಷ್ಕರಿಸಿದೆ ಎಂಬುದನ್ನೂ ನೆನಪಿಸಿಕೊಳ್ಳಬೇಕು. ಆ ಆಯೋಗದ ವರದಿ ಏನಾಯ್ತು ಎಂದು ಯಾರಿಗೂ ತಿಳಿದಿಲ್ಲ ಎಂದೂ ಎಸ್.ಕೆ.ಎಂ. ಹೇಳಿದೆ.
“ನಮಗೆ ತಿಳಿದಂತೆ, ಸರಕಾರವಾಗಲೀ, ಎಸ್.ಕೆ.ಎಂ. ಆಗಲೀ ಈ ಪ್ರಶ್ನೆಯ ಮೇಲೆ ನ್ಯಾಯಾಲಯದ ಬಳಿಗೆ ಹೋಗಿಲ್ಲ. ರೈತರು ತೊಡಗಿರುವುದು ಒಂದು ಕಾನೂನು ಸಮರದಲ್ಲಿ ಅಲ್ಲ, ಇದು ಅವರ ಜೀವನ ಮತ್ತು ಜೀವನೋಪಾಯದ ಪ್ರಶ್ನೆ. ಜಂತರ್ ಮಂತರ್ ಸೇರಿದಂತೆ ರಾಜಧಾನಿಯ ವಿವಿಧ ಭಾಗಗಳಲ್ಲಿ ವಿವಿಧ ಸಂಘಟನೆಗಳಿಂದ ಕಳೆದ ಒಂದು ವರ್ಷದಿಂದ ಪ್ರತಿಭಟನೆಗಳು ನಡೆಯುತ್ತಲೇ ಇರುವಾಗ, ತಮ್ಮ ಪ್ರತಿಭನಟೆಯ ಮೂಲಕ ತಮ್ಮ ಅಸ್ತಿತ್ವ ಮತ್ತು ಜೀವನೋಪಾಯದ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಿರುವ ರೈತರಿಂದ ಮಾತ್ರ ಇದ್ದಕ್ಕಿದ್ದಂತೆ ಮಂಜೂರಾತಿಯ ಮೊಹರು ಅಥವ ಪ್ರತಿಭಟನೆಗೆ ಪರವಾನಿಗೆ ಪಡೆದಿದ್ದೀರಾ ಎಂದು ಕೇಳುವುದು ಅಸಾಮಾನ್ಯ ಮತ್ತು ವಿಚಿತ್ರ ಸಂಗತಿ” ಎಂದು ಎಸ್.ಕೆ.ಎಂ. ಈ ಕುರಿತು ಅಕ್ಟೋಬರ್ 2ರಂದು ನೀಡಿರುವ ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದೆ.
ಭಾರತದ ಸಂವಿಧಾನ ನಮ್ಮ ನಾಡಿನ ಅತ್ಯುನ್ನತ ಕಾನೂನು. ಸಂವಿಧಾನ ನಾಗರಿಕರಿಗೆ ಜೀವನ ಮತ್ತು ಜೀವನೋಪಾಯದ ಹಕ್ಕು ನೀಡಿದೆ. ಅದು ಸಂಘಟಿಸುವ, ಸಾಮೂಹಿಕ ಚೌಕಾಸಿಯ ಮತ್ತು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನೂ ನೀಡಿದೆ.
ದೇಶದ ರೈತರು ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರ , ಸಂಸತ್ ಸದಸ್ಯರ ಮತದಾನದ ಹಕ್ಕನ್ನು ವಂಚಿಸಿ ತಂದಿರುವ ಮೂರು ಕೃಷಿ ಕಾಯ್ದೆಗಳು ತಮ್ಮ ಜೀವನಕ್ಕೆ ಮತ್ತು ಜೀವನೋಪಾಯದ ಹಕ್ಕಿಗೆ ಬೆದರಿಕೆಯೊಡ್ಡಿದೆ ಎಂದು ಕಳೆದ ಒಂದು ವರ್ಷದಿಂದ .ಬೀದಿಗೆ ಇಳಿಯಬೇಕಾಗಿ ಬಂದಿದೆ.
ಈ ಪ್ರಶ್ನೆಯನ್ನು ಪ್ರಜಾಸತ್ತಾತ್ಮಕವಾಗಿ ಬಗೆಹರಿಸುವಲ್ಲಿ ವಿಫಲವಾಗಿರುವುದು ಪ್ರಧಾನ ಮಂತ್ರಿಗಳ ನೇತೃತ್ವದ ಭಾರತ ಸರಕಾರ. ಅದು ರಾಷ್ಟ್ರೀಯ ಹದ್ದಾರಿಗಳನ್ನು ಅಗೆದು ಹಾಕುವಂತಹ ಕಾನೂನುಬಾಹಿರವಾದ ಕ್ರಮಗಳಿಗೂ ಇಳಿದಿದೆ ಮತ್ತು ರೈತರ ಮೇಲೆ ರಾಷ್ಟ-ವಿರೋಧಿಗಳು ಎಂಬ ಆರೋಪವನ್ನು ಹೊರಿಸಿದೆ. ವಾಸ್ತವವಾಗಿ ಸರಕಾರವೇ ದೇಶಕ್ಕೆ ಅನ್ನ ಉಣಿಸುವ ಜನಗಳ ವಿಷಯದಲ್ಲಿ ವಿಫಲಗೊಂಡಿದೆ. ದೇಶಕ್ಕೆ ಅನ್ನ ಒದಗಿಸುವವರು ವಿನಾಶ ಮತ್ತು ಹಸಿವಿನತ್ತ ಸಾಗುವಂತೆ ಬಲವಂತ ಮಾಡಿರುವುದು ಈ ಸರಕಾರವೇ. ಆದ್ದರಿಂದ ದೇಶ ಮತ್ತು ಸಂವಿಧಾನದ ವಿಷಯದಲ್ಲಿ ವಿಫಲಗೊಂಡಿರುವುದು ಸರಕಾರವೇ ಎಂದು ಎಸ್.ಕೆ.ಎಂ.ಹೇಳಿದೆ.
ಜನವರಿ 22ರಿಂದೀಚೆಗೆ ಸರಕಾರ ರೈತ ಸಂಘಟನೆಗಳೊಂದಿಗೆ ಯಾವುದೇ ಮಾತುಕತೆಗೆ ಒಂದಾದರೂ ಹೆಜ್ಜೆಯನ್ನು ಮುಂದಿಟ್ಟಿಲ್ಲ. ಅತ್ಯುನ್ನತ ತ್ಯಾಗ ಮಾಡಿ ರೈತರು ಹೋರಾಟವನ್ನು ಮುಂದುವರೆಸುತ್ತಿದ್ದಾರೆ. 605ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಪ್ರಾಣ ಕಳಕೊಂಡಿದ್ದಾರೆ. ಈ ಹೋರಾಟ ಆರಂಭವಾದಂದಿನಿಂದ ಪ್ರತಿದಿನ ಇಬ್ಬರು ರೈತರು ಹುತಾತ್ಮರಾಗುತ್ತಿದ್ದಾರೆ ಎಂದಿರುವ ಎಸ್.ಕೆ.ಎಂ., ನಮ್ಮಂತಹ ಒಂದು ಪ್ರಜಾಪ್ರಭುತ್ವದಲ್ಲಿ, ನಡೆಯುತ್ತಿರುವ ಒಂದು ಹೋರಾಟವು ಎತ್ತಿರುವ ಪ್ರಶ್ನೆಗಳಿಗೆ ಒಂದು ಇತ್ಯರ್ಥದತ್ತ ಸಾಗಲು ಇರುವ ಏಕೈಕ ದಾರಿಯೆಂದರೆ ಮತ್ತೆ ಸಂವಾದವನ್ನು ಆರಂಭಿಸುವುದು ಎಂದಿದೆ.
ಇದು ಸದಾ ಎಸ್.ಕೆ.ಎಂ.ನ ಆಗ್ರಹವಾಗಿದೆ. ಬೇರೆ ಯಾರದ್ದೋ ಚಲನೆಯ ಸ್ವಾತಂತ್ರ್ಯದ ಮೇಲೆ ದುಷ್ಪರಿಣಾಮ ಬೀರುವ ಮೊದಲು ಇದರ ಮೊದಲ ಹೊಡೆತವನ್ನು ಎದುರಿಸಿದವರು ರೈತರೇ. ತಮ್ಮ ದೂರುಗಳನ್ನು ಮತ್ತು ದುಸ್ಥಿತಿಯನ್ನು ಸರಕಾರಕ್ಕೆ ತಿಳಿಸಲು ಸಂಸತ್ತಿನತ್ತ ಹೊರಟಾಗ, ರೈತರ ಚಲನೆಯ ಸ್ವಾತಂತ್ರ್ಯವನ್ನು ಕಡಿತಗೊಳಿಸಿದ್ದರಿಂದಾಗಿ ಅವರೀಗ ಗಡಿಗಳಲ್ಲಿದ್ದಾರೆ. ಈ ಇಕ್ಕಟ್ಟನ್ನು ಸೃಷ್ಟಿಸಿರುವುದು ಮತ್ತು ಅದನ್ನು ಶಾಶ್ವತಗೊಳಿಸಿರುವುದು ಸರಕಾರವೇ. ಈ ಪ್ರತಿಭಟನೆಗೆ ಸ್ಪಂದಿಸುವುದು ಮತ್ತು ಈ ಇಕ್ಕಟ್ಟು ಬಗೆಹರಿಯುವ ಖಾತ್ರಿ ಒದಗಿಸಬೇಕಾದ್ದು ಈ ಸರಕಾರವೇ. ರೈತರು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಕಾಯುತ್ತಿದ್ದಾರೆ ಎಂದು ಎಸ್.ಕೆ.ಎಂ. ನೆನಪಿಸಿದೆ.