ಬಿ. ಶ್ರೀಪಾದ ಭಟ್
ಅಪೀಲು ಸಲ್ಲಿಸಿದ್ದ ಮುಸ್ಲಿಂ ಯುವತಿಯರು ’ಹಿಜಾಬ್ ನಮ್ಮ ಆಯ್ಕೆ’ ಎಂದು ಸ್ಪಷ್ಟವಾಗಿ ಹೇಳಿದರೂ ಸಹ ಮೂರು ಸದಸ್ಯರ ಪೀಠವು ಅದನ್ನು ನಿರ್ಲಕ್ಷಿಸಿರುವುದು ಅಚ್ಚರಿಯಾಗುತ್ತದೆ. ಕರ್ನಾಟಕ ಸರಕಾರವು ತರಾತುರಿಯಲ್ಲಿ ಜಾರಿಗೊಳಿಸಿದ ಸಮವಸ್ತ್ರ ನೀತಿಸಂಹಿತೆಯ ಆದೇಶದಿಂದ ಮುಸ್ಲಿಂ ಯುವತಿಯರ ಆಯ್ಕೆ ಅವಕಾಶವಿಲ್ಲದೆ ಶಿಕ್ಷಣದಿಂದ ಹೊರಗುಳಿಯುವ ಅಪಾಯವನ್ನು ಪೀಠವು ಗ್ರಹಿಸದೇ ಹೋಗಿರುವುದು ಆತಂಕದ ವಿಷಯ. ಹಾಗಿದ್ದಲ್ಲಿ ಅನುಚ್ಚೇದ 19, 21ರ ಅರ್ಥವೇನು? ಮತ್ತು ಮುಖ್ಯವಾಗಿ ಇಡೀ ವಿಚಾರಣೆ ಸಂದರ್ಭದಲ್ಲಿ ಪೀಠವು ಮುಸ್ಲಿಂ ಯುವತಿಯರ ಶಿಕ್ಷಣದ ಕುರಿತು, ಅದರ ಹಕ್ಕಿನ ಕುರಿತು ಒತ್ತು ನೀಡದೆ ಕೇವಲ ಸಮವಸ್ತ್ರಕ್ಕೆ ಸೀಮಿತಗೊಳಿಸಿರುವುದು ಸಹ ಕಳವಳಕಾರಿಯಾಗಿದೆ
ಅನುಚ್ಚೇದ 25 ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲೇಖಿಸುತ್ತಾ ನಿರೀಕ್ಷೆಯಂತೆಯೇ ’ಅಗತ್ಯ ಧಾರ್ಮಿಕ ಆಚರಣೆಗಳು’ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಈ ವಿಚಾರವು ಸದಾ ಗೊಂದಲಗೊಳಿಸುವಂತಹದ್ದಾಗಿದೆ. ಸಂವಿಧಾನ ಅಸೆಂಬ್ಲಿ ಚರ್ಚೆಯಲ್ಲಿ ಮಾತನಾಡುತ್ತಾ ಅಂಬೇಡ್ಕರ್ ಅವರು ’ಧಾರ್ಮಿಕ ಸ್ವಾತಂತ್ರ್ಯವೆಂದರೆ ಎಲ್ಲವೂ ಅಲ್ಲ. ಅಗತ್ಯವಿರುವ ಆಚರಣೆಗಳು’ ಎನ್ನುವ ಅರ್ಥದಲ್ಲಿ ಹೇಳುತ್ತಾರೆ. ಆದರೆ 1954ದ ಶಿರೂಪು ಮಠದ ಪ್ರಕರಣದಿಂದ ಇಲ್ಲಿಯವರೆಗೂ ಈ ’ಅಗತ್ಯ ಧಾರ್ಮಿಕ ಆಚರಣೆಗಳು’ ಆಧರಿಸಿ ತೀರ್ಪು ನೀಡುವಾಗ ಇದು ಗೊಂದಲ, ವಿವಾದಗಳನ್ನು ಹುಟ್ಟಿ ಹಾಕಿದೆ. ಕಾನೂನು ತಜ್ನ ಫೈಜ್ ಮುಸ್ತಾಫ ಅವರು ’ಧರ್ಮದ ಉಗಮವಾದ ಸಂದರ್ಭದಿಂದಲೂ ಈ ’ಅಗತ್ಯ ಧಾರ್ಮಿಕ ಆಚರಣೆಗಳು’ ಚಾಲ್ತಿಯಲ್ಲಿರಬೇಕು ಎಂಬುದು ಅಸಂಗತವಾಗಿದೆ.
ಆನಂದ ಮಾರ್ಗಿ ಪ್ರಕರಣದಲ್ಲಿ ತಾಂಡವ ನೃತ್ಯವನ್ನು ಮಾನ್ಯ ಮಾಡುವುದನ್ನು ಅಪೆಕ್ಸ್ ಕೋರ್ಟ್ ನಿರಾಕರಿಸಿತು. ಏಕೆಂದರೆ 1955ರಲ್ಲಿ ಆನಂದ ಮಾರ್ಗಿ ಹುಟ್ಟಿಕೊಂಡಿದೆ ಮತ್ತು 1966ರಲ್ಲಿ ತಾಂಡವ ನೃತ್ಯ ಶುರುವಾಗಿದೆ ಎಂದು ಸ್ಪಷ್ಟೀಕರಣ ನೀಡಿತು. ಆದರೆ ಕಾಲಾನುಕ್ರಮದಲ್ಲಿ ದರ್ಮವು ವಿಕಸಿತಗೊಳ್ಳುತ್ತಿರುತ್ತದೆ. ವೇದ, ಶೃತಿಗಳಲ್ಲಿ ಪ್ರಸ್ತಾಪಿಸಿಲ್ಲ ಎಂದು ಹಿಂದೂ ಧಾರ್ಮಿಕ ಆಚರಣೆಗಳನ್ನು ಅನೂರ್ಜಿತಗೊಳಿಸಲು ಸಾದ್ಯವಿಲ್ಲ’ ಎಂದು ಬರೆಯುತ್ತಾರೆ. ಆದರೆ ಎಲ್ಲವನ್ನೂ ವೇದ, ಉಪನಿಷತ್ತುಗಳ ಕಾಲಕ್ಕೆ ರೆಫರ್ ಮಾಡುವ ಅಗತ್ಯವಿಲ್ಲದಿದ್ದರೂ ಸಹ ’ಅಗತ್ಯ ಧಾರ್ಮಿಕ ಆಚರಣೆಗಳನ್ನು’ ನಿರ್ಧರಿಸುವವರು ಯಾರು? ಅದಕ್ಕೆ ಅಧಿಕೃತ ಮುದ್ರೆ ಅಂತ ಎಲ್ಲಿದೆ? ಇಂತಹ ಪ್ರಶ್ನೆಗಳು ವಿಚಾರಣೆಯ ಸಂದರ್ಭದಲ್ಲಿ ಚರ್ಚೆಗೆ ಬಂದಿದೆಯೇ? ಗೊತ್ತಿಲ್ಲ? ಇದು ಎಲ್ಲಾ ಕಾಲದಲ್ಲಿಯೂ ವಿವಾದಗ್ರಸ್ತ ಸಂಗತಿ ಎಂದು ಪೀಠಕ್ಕೆ ಮನವರಿಕೆಯಾಗಲಿಲ್ಲವೇ? ಮತ್ತು ಭಾರತದ ಹಲವು ರಾಜ್ಯಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇದವಿಲ್ಲ. ಹಾಗಿದ್ದಲ್ಲಿ ಆ ರಾಜ್ಯಗಳಲ್ಲಿ ಇಸ್ಲಾಂನ ’ಅಗತ್ಯ ಧಾರ್ಮಿಕ ಆಚರಣೆಗಳು’ ಮತ್ತು ಕರ್ನಾಟಕದ ಅಗತ್ಯಗಳೂ ಬೇರೆ ಬೇರೆ ಎಂದು ಪೀಠವು ಭಾವಿಸುತ್ತದೆಯೇ?
ಫೈಜ್ ಮುಸ್ತಾಫ ಅವರು ’ಹೈಕೋರ್ಟ್ ‘ಹಿಜಾಬ್ ಧರಿಸದಿದ್ದರೆ ಶಿಕ್ಷೆ ಕೊಡುವ ನಿಯಮ ಧರ್ಮದಲ್ಲಿ ಇಲ್ಲ, ಹೀಗಾಗಿ ಅದು ಅಗತ್ಯ ಆಚರಣೆಯಡಿ ಬರುವುದಿಲ್ಲ’ ಎಂದು ಹೇಳಿದೆ. ಆದರೆ ಇಸ್ಲಾಂನ ಪ್ರಕಾರ ’homosexuality’ಗೆ ಕಠಿಣ ಶಿಕ್ಷೆ ವಿಧಿಸಬೇಕು. ಹಾಗಿದ್ದಲ್ಲಿ homosexuality ಹರಾಮು ಎಂದು ಪರಿಗಣಿಸಬೇಕೆ’ ಎಂದು ಪ್ರಶ್ನಿಸುತ್ತಾರೆ
ಪೀಠವು ’ಅರ್ಜಿದಾರರು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕನ್ನು claim ಮಾಡಿಲ್ಲ, ಕೇವಲ derivative rights ಮಾತ್ರ claim ಮಾಡಿದ್ದಾರೆ’ ಎಂದು ಅಬಿಪ್ರಾಯಪಟ್ಟಿದೆ. ಅಂದರೆ ಸಾರ್ವಜನಿಕ ಸ್ಥಳಗಳಾದ ಶಾಲೆ, ಕಾಲೇಜುಗಳಿಗೆ ಸಂಬಂದಿಸಿದಂತೆ claim ಮಾಡಿದರೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕು ದೊರಕುತ್ತದೆ, ಇಲ್ಲದೇ ಹೋದರೆ ಇಲ್ಲ ಎಂದರ್ಥವೇ? ಫೈಜನ್ ಹೇಳಿದಂತೆ ಪೀಠವು ’ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನವಾದ ಮೂಲ ಹಕ್ಕುಗಳು (substantive rights) derivative rights ಆಗಿ ಬದಲಾಗುತ್ತದೆ’ ಎಂದು ಹೇಳಿದೆ. ಇದು ತುಂಬಾ ವಿಚಿತ್ರ. ಕಾನೂನು ತಜ್ನರು ಇದಕ್ಕೆ ಉತ್ತರಿಸಬೇಕು.
ಮತ್ತು ಮುಖ್ಯವಾಗಿ ಧರ್ಮನಿರಪೇಕ್ಷತೆ ಎಂದರೆ ’ಅದು ಖಾಸಗಿ ಆಚರಣೆ, ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಮಾಡುವಂತಿಲ್ಲ’ ಎನ್ನುವ ನಿಜದ ಸೆಕ್ಯುಲರಿಸಂನಿಂದ ಮತ್ತಷ್ಟು ದೂರ ಸರಿದಿದ್ದೇವೆ. ಹಿಜಾಬ್ ಪ್ರಕರಣದಲ್ಲಿ ಇಂತಹ ಒಂದು ಚರ್ಚೆ ಹುಟ್ಟು ಹಾಕುವ ಸಾದ್ಯತೆಗಳಿದ್ದವು. ಆದರೆ ಅದನ್ನು ಸಹ ಕಳೆದುಕೊಂಡಂತಾಗಿದೆ. `ಧಾರ್ಮಿಕ ಸ್ಯಾತಂತ್ರ್ಯದ’ ವಾದಿಸುವುದರ ಬದಲು `ಹಿಜಾಬ್ ಸಮವಸ್ತ್ರದ ಭಾಗ, ಮುಸ್ಲಿಂ ಯುವತಿಯರ ಆಯ್ಕೆ’ ಎಂಬಲ್ಲಿಗೆ ಈ ಚರ್ಚೆ ಸೀಮಿತಗೊಳಿಸಿದ್ದರೆ ವಿಚಾರಣೆಯ ದಿಕ್ಕು ಬದಲಾಗುತ್ತಿತೇನೋ? ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಎಂಬುದು ಕತ್ತಿಯ ಮೇಲಿನ ನಡೆ. ಸ್ವಲ್ಪ ಎಚ್ಚರ ತಪ್ಪಿದರೂ ಬಹುಸಂಖ್ಯಾತ ಧರ್ಮ ಮೇಲುಗೈ ಪಡೆಯುತ್ತದೆ. ಈಗ ಕೋರ್ಟ ಹೇಳದೇ ಹೊದರೂ ಸಹ ’ಸಾರ್ವಜನಿಕವಾಗಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಆಚರಣೆ ಸರಿ, ಆದರೆ ಮುಸ್ಲಿಂರ ಆಚರಣೆ ಇಲ್ಲ’ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾದಂತಿದೆ
ಕಡೆಗೂ ಉಗುರಲ್ಲಿ ಹೋಗುವುದನ್ನು ರಣ ಗಾಯ ಮಾಡಿಕೊಂಡ ತಪ್ಪಿಗೆ ಹಿಂದುತ್ವದ ಮತೀಯವಾದದ ಅಡಕೊತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ ಮತ್ತು ಯಾವುದೇ ಕಾರಣವಿಲ್ಲದೆ ಮುಸ್ಲಿಂ ಯುವತಿಯರು ಬಲಿಪಶುಗಳಾಗಿದ್ದಾರೆ. ಸಂಕಟವಾಗುತ್ತದೆ.