ಮೂಲಭೂತ ಸೌಲಭ್ಯ ಹಾಗೂ ಗುಣಮಟ್ಟದ ಊಟಕ್ಕಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ಆಗ್ರಹ

ಹಾವೇರಿ: ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವುದನ್ನು ವಿರೋಧಿಸಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ವಸತಿ ನಿಲಯದಲ್ಲಿ ಗುಣಮಟ್ಟದ ಆಹಾರ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಹಾವೇರಿ ನಗರದ ಹೊರವಲಯದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ನಂ2 ಬಾಲಕರ ವಸತಿನಿಲಯದ ಮುಂದೆ ಮಂಗಳವಾರ ಸಂಜೆಯಿಂದ ತಡ ರಾತ್ರಿವರೆಗೂ ವಿದ್ಯಾರ್ಥಿಗಳು ಪ್ರತಿಭಟನಾ ಧರಣಿ ಮಾಡಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ ಹಾವೇರಿ ನಗರದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸರಿಯಾದ ಊಟದ ವ್ಯವಸ್ಥೆ ಮಾಡುತ್ತಿಲ್ಲ ಗುಣಮಟ್ಟದ ಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ಹಾಗೂ ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ವಾರ್ಡನ್ ಗಮನಕ್ಕೆ ತರಲು ಯತ್ನಿಸಿದರೆ ವಾರ್ಡನ್ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ, ವಸತಿ ನಿಲಯದಲ್ಲಿನ ಕೆಲ ಸಮಸ್ಯೆಗಳ ಜೊತೆಗೆ ಸೂಕ್ತ ಆಹಾರದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆಯಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಗಮನಕ್ಕೆ ಈ ಘಟನೆ ಸೇರಿ ಜಿಲ್ಲೆಯ ಅನೇಕ ಈ ರೀತಿಯ ಸಮಸ್ಯೆಗಳು ಮೇಲಿಂದಮೇಲೆ ಆಗಿರಿವು ಕುರಿತು ಗಮನಕ್ಕೆ ತಂದರೂ ನಿರ್ಲಕ್ಷ್ಯ ಮಾಡುತ್ತಾರೆ, ಹಾಸ್ಟೆಲ್ ಸಮಸ್ಯೆಗಳನ್ನು ಬಗೆಹರಿಸಲು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲೂಕಿನ ಅಧಿಕಾರಿಗಳು ಮುಂದಾಗುತ್ತಿಲ್ಲ, ಸರಿಯಾಗಿ ಹಾಸ್ಟೆಲ್ ನಿರ್ವಹಣೆ ಮಾಡದ ವಾರ್ಡನ್ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದ್ದಾರೆ ಅದಕ್ಕೆ ಮೇಲಧಿಕಾರಿಗಳ ಬೆಂಬಲ ಕೂಡ ಇದೆ ಅಂತ ಅನುಮಾನ ಮೂಡುತ್ತದೆ ಏಕೆಂದರೆ ಮಧ್ಯಾಹ್ನ ಉಳಿದ ಆಹಾರವನ್ನು ರಾತ್ರಿ ನೀಡುತ್ತಾರೆ ಯಾಕೆ ಸರ್ಕಾರದಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರಿಯಾಗಿ ಹಣ ಬರುತ್ತಿಲ್ಲವೆ? ಅಥವಾ ವಿದ್ಯಾರ್ಥಿಗಳ ಹೆಸರಲ್ಲಿ ಅಧಿಕಾರಿಗಳು ಹಣ ಲೂಟಿ ಮಾಡುವು ಚಾಣಾಕ್ಷತನವೇ ಎಂದು ಪ್ರಶ್ನೆ ಮಾಡಿದರು. ಊಟದ ಸಾಂಬರಲ್ಲಿ ಕೊಳೆತ ತರಕಾರಿಗಳು ಆಹಾರದಲ್ಲಿ ಹುಳುಗಳು ದಿನನಿತ್ಯ ಕಾಮನ್ ಆಗಿಬಿಟ್ಟಿವೆ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಉಪಯೋಗಿಸಿದ ಕಾಟ್ ಬೆಡ್ ಗಳನ್ನು ಬದಲಾವಣೆ ಮಾಡಿಲ್ಲ ವಿದ್ಯಾರ್ಥಿಗಳ ಆರೋಗ್ಯದ ಪರಿಸ್ಥಿತಿ ಬಗ್ಗೆ ಯಾರು ಹೊಣೆಗಾರರು? ಕೋವಿಡ್ ಮೂರನೇ ಅಲೆ ಪ್ರಾರಂಭವಾದರೂ ಇದುವರೆಗೂ ಹಾಸ್ಟೆಲ್ ನಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ ವ್ಯವಸ್ಥೆ ಇಲ್ಲ. ಗ್ರಂಥಾಲಯ ನಿರ್ವಹಣೆ ಮಾಡಲು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡಿಸಲು ಅವಕಾಶ ಇದ್ದರು ಇದುವರೆಗೂ ಈ ಯಾವ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡದೇ ವಂಚಿಸಿರುವುದು ನೋಡಿದರೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಚೆನ್ನಾಗಿ ಓದುವುದು ಬೇಕಾಗಿಲ್ಲ ಎನಿಸುತ್ತದೆ. “ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೆ ಇಷ್ಟು ಸಮಸ್ಯೆಗಳಿದ್ದರೆ ಉಳಿದ ಜಿಲ್ಲೆಗಳ ಪರಿಸ್ಥಿತಿ ಏನು?”
ಈ ಕೂಡಲೇ ಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ವಿದ್ಯಾರ್ಥಿಗಳ ಭವಿಷ್ಯ ರಕ್ಷಿಸಲು ಎಸ್ಎಫ್ಐನಿಂದ ದಿಢೀರ್ ಪ್ರತಿಭಟನೆ

ವಿದ್ಯಾರ್ಥಿ ಕುಶಾಲ್ ಲಮಾಣಿ ಮಾತಾನಾಡಿ, ವಿದ್ಯಾರ್ಥಿಗಳಿಗೆ ಸರಿಯಾದ ಸರಕಾರಿ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದು ಖಂಡನೀಯ. ಉಳಿದ ಸಾಂಬಾರಿಗೆ ನೀರು, ಖಾರದ ಪುಡಿ ಬೆರಸಿ ರಾತ್ರಿ ಊಟಕ್ಕೆ ಕೊಡುತ್ತಾರೆ, ವಾರದಲ್ಲಿ ಎರಡು ಮೂರು ಬಾರಿಯಾದರೂ ಊಟದಲ್ಲಿ ಹುಳುಗಳು, ಕೊಳೆತು ತರಕಾರಿಗಳು ಸಿಗುತ್ತವೆ ಈ ರೀತಿಯ ಆಹಾರ ಸೇವನೆಯಿಂದ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಆಗಿದ್ದು ಸೇರಿದಂತೆ ಸಂಪೂರ್ಣ ಹಾಸ್ಟೆಲ್ ನಲ್ಲಿ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುತ್ತಿಲ್ಲ. ಊಟದ ವ್ಯವಸ್ಥೆಯಲ್ಲಿ ತಾರತಮ್ಯ ಬಿಟ್ಟು ಅನಿಯಮಿತ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂದು ಅಳಲು ತೋಡಿಕೊಂಡರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪರಿಶಿಷ್ಟ ಪಂಗಡದ ಜಿಲ್ಲಾ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕಾಧಿಕಾರಿಗಳು ಮನವಿ ಸ್ವೀಕರಿಸಿ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿ ಸಂಘದ ಮುಖಂಡರ ಜೊತೆಗೆ ವಾಗ್ವಾದ ಮಾಡಿ ಇಲಾಖೆ ತಪ್ಪುಗಳನ್ನು ಸಮರ್ಥನೆ ಮಾಡಿಕೊಂಡು ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಧರಣಿ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಹೊನ್ನಪ್ಪ ತಳವಾರ, ಪ್ರದೀಪ್ ಕುರಿಯವರ, ಯುವರಾಜ ಹಂಚಿನಮನೆ, ವಿರೂಪಾಕ್ಷ ಎಚ್, ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ವಸಂತ ವಡ್ಡರ, ಕಾರ್ಯದರ್ಶಿ ಲೋಹಿತ್ ಹೊಸಮನಿ, ಮುಖಂಡರಾದ ಸುನಿಲ್ ಲಮಾಣಿ, ಕುಮಾರ್ ಲಮಾಣಿ, ರಮೇಶ್ ಮಿಶಿ, ಧರ್ಮಣ್ಣ ಲಮಾಣಿ, ಸರ್ಜುನ್ ಲಮಾಣಿ, ಬಸವರಾಜ್ ಬೆಂಡಿಗೇರಿ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *