ವಾರ್‌ ಫೀಲ್ಡ್‌ಗೊಂದು ಚೆಕ್‌ಪೋಸ್ಟ್‌ – ಹೋರಾಟದ ನೆಲದಲ್ಲಿ ಕಬಡ್ಡಿ ಆಟವೂ…!

(ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟದ ಸ್ಥಳಕ್ಕೆ ಪತ್ರಕರ್ತ  ಲಿಂಗರಾಜ ಮಳವಳ್ಳಿ ಭೇಟಿ ನೀಡಿ ಅಲ್ಲಿಯ ಅನುಭವಗಳನ್ನು ಜನಶಕ್ತಿ ಮೀಡಿಯಾ ಜೊತೆ ಹಂಚಿಕೊಂಡಿದ್ದಾರೆ)

ಲಿಂಗರಾಜ ಮಳವಳ್ಳಿ

ಗಾಜಿಯಾಪುರ ಉತ್ತರ ಪ್ರದೇಶದ ಗಡಿ ಪ್ರದೇಶ. ದಿಲ್ಲಿಯಿಂದ ಕೇವಲ 9 ಕಿ.ಮೀ. ರಾಜಧಾನಿಗೆ ಬಹಳ ಹತ್ತಿರದ ಗಡಿ ಆಗಿದ್ದರಿಂದ ಇಲ್ಲಿನ ಹೋರಾಟಕ್ಕೆ ಬಹಳ ಮಹತ್ವ ಬಂದಿತ್ತು. ಕಾರಣ, ದಿಲ್ಲಿಗೆ ಯಾವುದೇ ಕ್ಷಣದಲ್ಲಾದರೂ ರೈತರು ಮುತ್ತಿಗೆ ಹಾಕಬಲ್ಲರು ಎಂಬ ಭಯ ಪ್ರಭುತ್ವವನ್ನು ಕಾಡಿತ್ತು. ಅದಕ್ಕಾಗಿಯೇ ಮುಳ್ಳುಬೇಲಿ, ಬ್ಯಾರಿಕೇಡ್ ಗಳ ಗೋಡೆಯ ಜತೆಗೆ ಬಂದೂಕಧಾರಿ ಪೊಲೀಸ್ ಸರ್ಪಗಾವಲು! ಒಂದು ರೀತಿಯ ಅಭೇದ್ಯ ಕೋಟೆ.

ಹೋರಾಟವನ್ನು ಹತ್ತಿಕ್ಕಲು ಬೆದರಿಕೆ, ಬಂದೂಕು ಪ್ರಯೋಜನಕ್ಕೆ ಬಾರದಿದ್ದಾಗ ಸರ್ಕಾರ ಬಳಸಿದ್ದು ಮೀರ್ ಸಾದಿಕ್ ಹಾದಿ. ರೈತರ ವೇಷ ತೊಡಿಸಿ ತಮ್ಮ ಗೂಢಚಾರರನ್ನು ಒಳಬಿಟ್ಟು ರೈತ ಹೋರಾಟದಲ್ಲಿ ಒಡಕು ತರುವ ಹುನ್ನಾರ ನಡೆದಿತ್ತು. ಆಕಾಶ ನೋಡುತ್ತಲೇ ಮಳೆ ಬೀಳುತ್ತದೋ ಇಲ್ಲವೋ ಎಂದು ನಿಖರವಾಗಿ ಹೇಳುವ ರೈತರಿಗೆ, ಇವರ ಹುನ್ನಾರ ಬಹುಬೇಗನೆ ಅರ್ಥವಾಗಿತ್ತು. ಅಂತಹ ಮೀರ್ ಸಾದಿಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಹೀಗಾಗಿ ಛಲದ ಹೋರಾಟ ಮುಂದುವರೆಸಲು ಅಡ್ಡಿಯಾಗಬಹುದಾಗಿದ್ದ ಇಂತಹ ಎಲಿಮೆಂಟ್ ಗಳ ಬಗ್ಗೆ ನಿಗಾ ವಹಿಸುವುದು ಅಷ್ಟೇ ಅಗತ್ಯವಿತ್ತು. ಹಾಗಾಗಿಯೇ, ಹೋರಾಟದ ಸ್ಥಳಕ್ಕೆ ಯಾರೇ ಬರುವುದಿದ್ದರೂ ಚಕ್ ಪೋಸ್ಟ್ ನಲ್ಲಿ ತಪಾಸಣೆಗೆ ಒಳಪಟ್ಟು, ಯಾವುದಾದರೊಂದು ಐಡಿ ಕಾರ್ಡ್ ಕೊಟ್ಟು ಒಳಬರಬೇಕು!  ಚಕ್ ಪೋಸ್ಟ್ ಬಳಿ ಒಬ್ಬ ಶಿಸ್ತಿನ ಸ್ವಯಂಸೇವಕ ತಪಾಸಣೆ ಮಾಡುತ್ತಾರೆ. ತಪಾಸಣೆಯಲ್ಲಿ ಯಾವುದೇ ಖಾಕಿಯ ಗರ್ವ ಕಾಣುವುದಿಲ್ಲ. ಅತ್ಯಂತ ವಿನಯ, ಗೌರವದಿಂದಲೇ ತಪಾಸಣೆ ನಡೆಯುತ್ತದೆ.  ಒಂದು ಚಾರಿತ್ರಿಕ ಹೋರಾಟ ಸಂಘಟಿಸುವಾಗ ವಹಿಸಬೇಕಾದ ಎಚ್ಚರ, ಸೂಕ್ಷ್ಮತೆಯ ಪಾಠ ಇದಲ್ಲವೇ!?

ವರ್ಷದಲ್ಲಿ ಮನೆಗೆ ಹೋಗಿದ್ದು ಎರಡು ದಿನ ಮಾತ್ರ

ಸಿಂಗು, ಟಿಕ್ರಿ ಬಾರ್ಡರ್ ಗಳಲ್ಲಿ ನಡೆಯುತ್ತಿರುವ ರೈತ ಹೋರಾಟಗಳಿಗೆ ಹೋಲಿಸಿದರೆ ಗಾಜಿಯಾಪುರ್ ಬಾರ್ಡರ್ ನಡೆಯುತ್ತಿರುವ ಹೋರಾಟದಲ್ಲಿ ಕಡಿಮೆ ಸಂಖ್ಯೆಯ ರೈತರಿದ್ದಾರೆ. ಆದರೆ, ವಿಶೇಷ ಎಂದರೆ ಇಲ್ಲಿನ ಹೆಚ್ಚಿನ ಪಾಲು ರೈತರು ಸಣ್ಣ ಹಿಡುವಳಿದಾರರು. ಇವರೆಲ್ಲರೂ ಉತ್ತರ ಪ್ರದೇಶದ ರೈತರು. ಗೋದಿ ಮೀಡಿಯಾಗಳನ್ನು ಬಳಸಿ ಕಿಸಾನ್ ಆಂದೋಲನ ಪಂಜಾಬ್ ಗೆ ಸೀಮಿತಗೊಳಿಸಿ, ಬೇರೆಡೆ ಪಸರದಂತೆ ಸಂಚು ರೂಪಿಸುವ ಹಕೀಕತ್ ನಡೆಯುತ್ತಿರುವಾಗ ಡಿಸೆಂಬರ್ 03 ರಂದು ಉತ್ತರಪ್ರದೇಶದ ಸಾವಿರಾರು ಬಡ ರೈತರು ಗಾಜಿಯಾಪುರ್ ಬಾರ್ಡರ್ ನ್ನು ಬಂದ್ ಮಾಡಿ ಸರ್ಕಾರಕ್ಕೆ ಸವಾಲು ಹಾಕಿದ್ದರು. ಇದರಿಂದ ಕೇಂದ್ರ ಸರ್ಕಾರ ಬೆಚ್ಚಿ ಬಿದ್ದಿತ್ತು. ಇಂಥದ್ದೊಂದು ಹೋರಾಟಕ್ಕೆ ನೇತೃತ್ವ ವಹಿಸಿ, ಇಡೀ ಹೋರಾಟದ ರೂಪುರೇಷೆ ರೂಪಿಸಿದ್ದು ಎಐಕೆಸ್‌ನ ರಾಷ್ಟ್ರೀಯ ಮಂಡಳಿ ಸದಸ್ಯರೂ ಆಗಿರುವ  ಡಿ.ಪಿ.ಸಿಂಗ್. ಬಹಳ ದೀರ್ಘಕಾಲದಿಂದಲೂ ಹಲವು ಕಿಸಾನ್ ಆಂದೋಲನಗಳಿಗೆ ಮುಂದಾಳತ್ವ ವಹಿಸಿದ ಅನುಭವ ಇರುವ ಇವರು, ಗಾಜಿಯಾಪುರ್ ಬಾರ್ಡರ್ ಹೋರಾಟವನ್ನು ಮುನ್ನಡೆಸುತ್ತಿರುವ ನಾಯಕರು.

ಉದ್ದಕ್ಕೂ ಇದ್ದ ಟೆಂಟ್ ಗಳನ್ನು ನೋಡುತ್ತಿರುವಾಗ, ನಿಖರ ಮಾಹಿತಿಗಾಗಿ ಯಾರಾದರೂ ಒಬ್ಬ ರೈತ ಮುಖಂಡರೊಡನೆ ಮಾತನಾಡಬೇಕೆನಿಸಿತು. ವಿಚಾರಿಸಿದಾಗ ಎಲ್ಲರ ಬಾಯಲ್ಲೂ ಕೇಳಿ ಬಂದ ಹೆಸರು ಡಿ.ಪಿ.ಸಿಂಗ್! ಹೋರಾಟ ಸ್ಥಳದಲ್ಲೇ ಕಿಸಾನ್ ಸಭಾದ ಕಚೇರಿ ಹೊಕ್ಕಾಗ, ನಾವು ಯಾರೆಂದೂ ಕೇಳುವ ಮೊದಲು ಕುಡಿಯಲು ನೀರು ಕೊಟ್ಟು ನಂತರ ನಮ್ಮ ಪರಿಚಯ ಕೇಳಿದರು. ಪರಸ್ಪರ ಪರಿಚಯದ ನಂತರ 70 ರ ಆಸುಪಾಸಿನ ಅಜಾನುಬಾಹು ಡಿ.ಪಿ.ಸಿಂಗ್ ಒಳ ಬಂದರು.  ಡಿ.ಪಿ ಸಿಂಗ್ ಅವರ ಜತೆ ಮಾತನಾಡುವಾಗ ಹಿಂದಿ ಬಾರದ ನಮಗೆ ಭಾಷೆಯ ಸಮಸ್ಯೆ ಎದುರಾಯಿತಾದರೂ ಅವರ Face expression ಭಾಷೆಯ ತೊಡಕನ್ನು ಹೋಗಲಾಡಿಸಿತು.  ನಾವು ಕೇಳುವ ಸಣ್ಣ ಸರಳ ಪ್ರಶ್ನೆಗೆ ಧೀರ್ಘ ಉತ್ತರವೇ ಸಿಗುತ್ತಿತ್ತು. ಪ್ರಶ್ನಿಸುವ ನಮ್ಮನ್ನು ಇನ್ನಷ್ಟು ಉತ್ತೇಜಿಸುವಂತೆ ಕಾಮ್ರೇಡ್ ಡಿ.ಕೆ.ಸಿಂಗ್ ವಾಗ್ಝರಿ ಇತ್ತು. ಉತ್ತರಿಸುವಾಗ ಕೇವಲ ಘಟನೆಯನ್ನು ವಿವರಿಸದೇ ಅದಕ್ಕಿರುವ ಸೈದ್ಧಾಂತಿಕ ಆಯಾಮವನ್ನು ಕಟ್ಟಿಕೊಡುತ್ತಿದ್ದರು.

ಒಂದು ವರ್ಷದ ಸುಧೀರ್ಘ ಹೋರಾಟವನ್ನು ಗೆದ್ದ ಖುಷಿ ಅವರ ಮುಖದಲ್ಲಿತ್ತು. ಒಂದು ವರ್ಷದಲ್ಲಿ ಅವರು ಮನೆಗೆ ಹೋಗಿ ಬಂದಿದ್ದು, ಕೇವಲ ಎರಡು ಬಾರಿ ಮಾತ್ರ! ಚಳಿ, ಮಳೆ, ಗಾಳಿ ಬಿಸಿಲಿಗೆ ಜಗ್ಗದೇ, ಬೇರುಬಿಟ್ಟು ನಿಂತು ಹೋರಾಟದ ಮುಂದಾಳುತನ ವಹಿಸಿದ್ದಾರೆ.

ಹೋರಾಟದ ನೆಲದಲ್ಲಿ ಕಬಡ್ಡಿ ಆಟವೂ…!

ರೈತ ಮುಖಂಡ ಡಿಪಿ ಸಿಂಗ್ ಅವರ ಜತೆ ಮಾತುಕತೆ ನಡೆದಿತ್ತು. ನಮ್ಮ ಸಂವಾದ ಮುಗಿಯುವ ಹೊತ್ತಿಗೆ ‘ಕೊನೆಯದೊಂದು ಸಣ್ಣ ಪ್ರಶ್ನೆ ಇದೆ’ ಎಂದೆ, ಅದಕ್ಕವರು ನಕ್ಕು ‘ಕೇಳಿ’ ಎಂದ್ರು.  24 ಗಂಟೆಯೂ ಇಲ್ಲೇ ಇರಬೇಕಲ್ಲಾ…! ಟೈಂಪಾಸ್ ಹೇಗ್ ಮಾಡ್ತೀರಾ?  ನನ್ನ ಪ್ರಶ್ನೆ ತೀರ ಸರಳ ಪ್ರಶ್ನೆಯಾದರೂ ಅವರ ಉತ್ತರ ಸರಳವಾಗಿರಲಿಲ್ಲ! ಅದು ಗಂಭೀರವಾಗಿತ್ತು!  ಅವರ ಉತ್ತರ ಹೀಗಿತ್ತು….

ನಿಜ, ನೀವು ಕೇಳಿದ ಪ್ರಶ್ನೆ ಸಹಜವಾದದ್ದೆ! ನೋಡಿ, ಇದೊಂದು ಕೇವಲ ಹೋರಾಟವಲ್ಲ, ಬದಲಾಗಿ ಇದೊಂದು ಯಾವುದೇ ಯೂನಿವರ್ಸಿಟಿ ಯನ್ನು ಮೀರಿಸಬಲ್ಲ ಕಿಸಾನ್ ಯೂನಿವರ್ಸಿಟಿ. ಇಲ್ಲಿ ಟೈಂಪಾಸ್ ಅನ್ನುವುದು ಪ್ರಶ್ನೆಯೇ ಅಲ್ಲ! ನಮ್ಮನ್ನು ಕಾವಲು ಕಾಯುತ್ತಿರುವ ಪೊಲೀಸರಿಗೆ ಟೈಂಪಾಸ್ ದೊಡ್ಡ ಸಮಸ್ಯೆ ಆಗಿರಬಹುದು! ಆದರೆ ಹೋರಾಟನಿರತ ರೈತರಿಗಲ್ಲ.  ನಾವಿಲ್ಲಿ, ರೈತರಿಗೆ ದೇಶದಲ್ಲಿ ರೈತ ಚಳುವಳಿ ನಡೆದುಬಂದ ಬಗೆ, ತ್ಯಾಗ ಬಲಿದಾನ, ಸ್ವಾತಂತ್ರ್ಯ ನಂತರದ ರೈತರ ಬದುಕು – ಬವಣೆ, ಸರ್ಕಾರದ ನೀತಿಗಳು ಹೇಗಿವೆ? ರೈತರ ಆತ್ಮಹತ್ಯೆ ಅದಕ್ಕಿರುವ – ಪರಿಹಾರ, ಈ ಹೋರಾಟದ ನಮ್ಮ ಬೇಡಿಕೆಗಳ ಹಿಂದಿರುವ ಆರ್ಥಿಕ – ರಾಜಕೀಯ ಆಯಾಮಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಲ್ಲಿ ಬುಕ್ ಸ್ಟಾಲ್ ಇವೆ, ರೈತರು ಓದುತ್ತಾರೆ, ಓದಿದದ್ದನ್ನು ಚರ್ಚಿಸುತ್ತಾರೆ. ಈ ಹೋರಾಟದ ನೆಲವೀಗ ಸೈದ್ದಾಂತಿಕ ಚರ್ಚೆಯ ಯೂನಿವರ್ಸಿಟಿ ಆಗಿ ಬದಲಾಗಿದೆ. ಅಷ್ಟು ಮಾತ್ರವಲ್ಲದೇ, ಮೀಡಿಯಾದವರು ದಿನವೂ ತಪ್ಪದೇ ಬರುತ್ತಾರೆ, ಹೆಚ್ಚಿನವರು ರವೀಶ್ ಕುಮಾರ್ ಹೇಳಿದಂತೆ ಗೋದಿ ಮೀಡಿಯಾದವರು (ನಗು) ಆದರೂ ನಾವು ಅವರಿಗೆ ನಾವು ಹೇಳಬೇಕಾದದ್ದನ್ನು ಸಾವಧಾನದಿಂದ ಹೇಳಿ ಕಳುಹಿಸುತ್ತೇವೆ!  ಪ್ರತಿದಿನ ಸಭೆ ನಡೆಸುತ್ತೇವೆ, ಹೋರಾಟದ ಮುಂದಿನ ರೂಪುರೇಷೆ, ಸಂಪನ್ಮೂಲ ಸಂಗ್ರಹ, ಎಲ್ಲವನ್ನೂ ಹೋರಾಟನಿರತ ರೈತರೊಂದಿಗೆ ಚರ್ಚಿಸುತ್ತೇವೆ. ಹಾಗೆಯೇ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತೆ, ನಾನೀಗ ನಿಮ್ಮ ಜತೆ ಮಾತನಾಡುವ ಮುನ್ನ, ಇದೇ ಕಾರ್ಯಕ್ರಮದಲ್ಲಿದ್ದೆ!  ಹಾಗೆಯೇ, ಅಲ್ಲಲ್ಲಿ ವಯಸ್ಸಾದವರು ಹುಕ್ಕಾ ಸೇದುತ್ತಾ ಉಭಯ ಕುಶಲೋಪರಿ ನಡೆಸುತ್ತಾರೆ. ಕಬಡ್ಡಿ ಆಟವೂ ಇದೆ. ‘ನೋಡೋಣ ಬನ್ನಿ’ ಎಂದು ಕಬಡ್ಡಿ ಅಂಗಳಕ್ಕೆ ಕರೆದೊಯ್ದರು!

ವಯಸ್ಸಿನ ಮಿತಿ ಇಲ್ಲದ ಚಂದದ ಕಬಡ್ಡಿ ಆಟ ನೋಡಲು ಬಹಳ ಮಜವಾಗಿತ್ತು! ಯುವಕರು ಮಾತ್ರವಲ್ಲದೇ ವಯಸ್ಸಾದವರೂ ಆಟದಲ್ಲಿದ್ದರು! ಕ್ರೀಡಾಳುಗಳನ್ನು ಹುರಿದುಂಬಿಸುತ್ತಲೇ, ತಮಾಷೆ, ಕೀಟಲೆ, ಕಾಲೆಳೆಯುವುದೂ ನಡೆದಿತ್ತು.  ಹೋರಾಟದ ನೆಲ ಕೇವಲ ಹೋರಾಟದ ನೆಲವಲ್ಲ. ಸಾಧ್ಯವಾದರೆ ಹೋರಾಟ ಮುಗಿಯುವ ಒಳಗೆ ಒಮ್ಮೆ ಬಾರ್ಡರ್ ಗೆ ಬಂದು ನೋಡಿ! ಡಿಪಿ ಸಿಂಗ್‌ ಈ ಹೋರಾಟವನ್ನು ಕಿಸಾನ್‌ ಯುನಿವರ್ಸಿಟಿ ಎಂದಿದ್ದು ಅರ್ಥ ಆಗುತ್ತೆ. ಪುರುಷೋತ್ತಮ ಬಿಳಿಮಲೆಯವರು ಹೇಳಿದಂತೆ ‘ಇಂಥ ಚಳುವಳಿಯಿಂದ ನಾವು ಕಲಿಯುವುದೇ ಹೆಚ್ಚು, ಕಲಿಸುವುದು ಇಲ್ಲವೆಂಬಷ್ಟು ಕಡಿಮೆ.’

(ಮುಂದುವರೆಯುವುದು)

Donate Janashakthi Media

Leave a Reply

Your email address will not be published. Required fields are marked *