ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಸೇರಿ 7 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿರಂತರ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬಂದು ಹೋಗಲು ತೊಂದರೆಯಾಗುತ್ತಿರುವುದರಿಂದ ಆಯಾ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿ ಶಾಲೆಗಳಿಗೆ ರಜೆ ಘೋಷಿಸಲು ತಿಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ.ವಿಶಾಲ್ ಆರ್. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲೂ ಮಳೆ ಆರ್ಭಟಿಸುತ್ತಿರುವುದರಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಿರಂತರ ಮಳೆ ರಾಜ್ಯದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದು, ಅನೇಕ ಕಡೆಗಳಲ್ಲಿ ರೈತರ ಬೆಳೆಗೆ ಹಾನಿಯಾಗಿದೆ. ಹಲವೆಡೆ ಮನೆ ಕುಸಿತದ ವರದಿಗಳಾಗಿವೆ. ಅನೇಕರಿಗೆ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದು ಡೆಂಘೀ ಹಾಗೂ ಚಿಕನ್ ಗುನ್ಯ ಪತ್ತೆಯಾದ ಪ್ರಕರಣಗಳು ಕಂಡು ಬಂದಿವೆ.
23 ರವರೆಗೆ ಮಳೆ ಸಾಧ್ಯತೆ : ಕರ್ನಾಟಕದ ಇನ್ನಿತರ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಭೀತಿ ಇದೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆಗೆ ರಾಜ್ಯದಲ್ಲಿ 7.31 ಲಕ್ಷ ಹೆಕ್ಟೇರ್ ಬೆಳೆ ಹಾನಿ :
ಭಾರೀ ಮಳೆಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದು ಕೈಗೆ ಬರಬೇಕಿದ್ದ ಫಸಲು ಕಣ್ಣ ಮುಂದೆಯೇ ನೆಲಕಚ್ಚುತ್ತಿದೆ. ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ ಜುಲೈನಿಂದ ನವೆಂಬರ್ 16 ರವರೆಗೂ 7.31 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆ ಹಾನಿಗೊಳಗಾಗಿ ಸಾವಿರಾರು ಕೋಟಿ ರು. ನಷ್ಟಉಂಟಾಗಿದೆ.
ಬೆಳೆ ಹಾನಿ ಬಗ್ಗೆ ಮೊದಲು ಕೃಷಿ ಇಲಾಖೆ ನಷ್ಟದ ಅಂದಾಜಿನ ಬಗ್ಗೆ ಪ್ರಾಥಮಿಕ ವರದಿಯನ್ನು ಕಂದಾಯ ಇಲಾಖೆಗೆ ಶೀಘ್ರದಲ್ಲೇ ಸಲ್ಲಿಸಲಿದ್ದು, ಬಳಿಕ ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ಹಾನಿಯ ಅಂದಾಜು ಮಾಡಲಿವೆ. ಸೆಪ್ಟೆಂಬರ್‌ನಿಂದ ಅಕ್ಟೋಬರ್ ವರೆಗಿನ ಅಂದಾಜನ್ನು ಲೆಕ್ಕ ಹಾಕಲಾಗಿದೆ. ನವೆಂಬರ್‌ನಲ್ಲಿ ಅಕಾಲಿಕ ಮಳೆ ಮುಂದುವರೆಯುತ್ತಿರುವುದರಿಂದ ಕೃಷಿ ಇಲಾಖೆಯು ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದು ಕಂದಾಯ ಇಲಾಖೆಗೆ ರವಾನಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
15 ದಿನದಲ್ಲಿ 48 ಸಾವಿರ ಹೆಕ್ಟೇರ್‌ಗೆ ಹಾನಿ :
ನವೆಂಬರ್ 16 ರವರೆಗೆ 14 ಜಿಲ್ಲೆಯ 48647 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 34447 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ರಾಮನಗರ 10371, ಚಾಮರಾಜನಗರ 1566, ಉತ್ತರ ಕನ್ನಡದಲ್ಲಿ 794 ಹೆಕ್ಟೇರ್‌ನಲ್ಲಿದ್ದ ಬೆಳೆಗೆ ಹಾನಿ ಉಂಟಾಗಿದೆ. ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಕಡಿಮೆ ಹಾನಿಯಾಗಿದ್ದು ಮಳೆ ಮುಂದುವರೆಯುತ್ತಿರುವುದರಿಂದ ಹಾನಿ ಪ್ರಮಾಣ ಇನ್ನೂ ಹೆಚ್ಚಲಿದೆ.
ತಿಂಗಳು ಬೆಳೆ ಹಾನಿ(ಹೆಕ್ಟೇರ್‌ಗಳಲ್ಲಿ)
ಜುಲೈ 250322
ಆಗಸ್ಟ್ 3421
ಸೆಪ್ಟೆಂಬರ್ 371647
ಅಕ್ಟೋಬರ್ 57914
ನವೆಂಬರ್ 48647
ಒಟ್ಟಾರೆ 731951
ಹೆಚ್ಚಿದ ಚಿಕುನ್ ಗುನ್ಯ, ಡೇಂಘೀ ಕೇಸ್ : ನಿರಂತರ ಮಳೆ ಪರಿಣಾಮ ಪ್ರಕರಣ ಹೆಚ್ಚಾಗಿದೆ. ಇಲ್ಲಿಯವರೆಗು ಸುಮಾರು 6 ಸಾವಿರ ಡೆಂಘೀ ಮತ್ತು ಚಿಕೂನ್ ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ( 1,635 ಚಿಕುನ್ ಗುನ್ಯ ಮತ್ತು 4,387 ಡೆಂಘೀ) ಬೆಂಗಳೂರಿನಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದು, ಆಸ್ಪತ್ರೆಗಳಲ್ಲಿ ದಿನೇ ದಿನೇ ಈ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಕೂಡ ಎಚ್ಚರಿಕೆ ನೀಡಿದ್ದು, ಸುರಕ್ಷತಾ ಕ್ರಮ ವಹಿಸುವಂತೆ ಜನರಿಗೆ ತಿಳಿಸಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ, ಮನೆ ಸುತ್ತಮುತ್ತಗಳಲ್ಲಿ ನೀರು ನಿಲ್ಲುತ್ತಿದೆ. ನಿಂತ ನೀರಿನಿಂದಾಗಿ ಸೊಳ್ಳೆ ಹೆಚ್ಚುತ್ತಿದ್ದು, ಪ್ರಕರಣ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಮಳೆಗಾಲ ಬರುತ್ತಿದ್ದಂತೆ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತವೆ. ಮಳೆ ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಸಂತಾನಾಭಿವೃದ್ಧಿ ಹೆಚ್ಚುವ ಜೊತೆಗೆ ಮಾರಕ ಜ್ವರಗಳನ್ನು ಕೂಡ ಹರಡುತ್ತವೆ. ಇದರಿಂದ ಮನೆಯ ಸುತ್ತಲೂ ಇರುವ ಟೈರ್, ಬಕೆಟ್‍ಗಳು, ಆಟಿಕೆಗಳು, ಅಲ್ಲಲ್ಲಿ ನಿಂತಿರುವ ನೀರು, ಹೂವಿನ ಕುಂಡಗಳು ಅಥವಾ ಕಸದ ಡಬ್ಬಿಗಳಲ್ಲಿ ನಿಂತಿರುವ ನೀರಿನಲ್ಲಿ ಸಾಮಾನ್ಯವಾಗಿ ಸೊಳ್ಳೆಗಳು ಸಂತಾನಾಭಿವೃದ್ಧಿ ಮಾಡಿಕೊಳ್ಳುತ್ತವೆ. ಈ ಹಿನ್ನಲೆ ಈ ರೀತಿ ನೀರು ನಿಲ್ಲದಂತೆ ಮನೆಯ ಸುತ್ತ ಶುಚಿತ್ವ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಕೂಡ ಎಚ್ಚರಿಕೆ ನೀಡಿದ್ದು, ಸುರಕ್ಷತಾ ಕ್ರಮ ವಹಿಸುವಂತೆ ಜನರಿಗೆ ತಿಳಿಸಿದೆ.
ಉಸ್ತುವಾರಿ ಮರೆತ ಸಚಿವರು : ರಾಜ್ಯಾದ್ಯಂತ ಎರಡು ತಿಂಗಳಿಗೂ ಹೆಚ್ಚು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಜಿಲ್ಲೆಗಳಲ್ಲಿ ಬೀಡುಬಿಟ್ಟು ಸಂತ್ರಸ್ಥರಿಗೆ ಪರಿಹಾರ ಉಸ್ತುವಾರಿ ನೋಡಿಕೊಳ್ಳಬೇಕಾದ ಸಚಿವರು ಎಲ್ಲಿ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ನೂರಾರು ಮನೆಗಳು ಬಿದ್ದು ಹೋಗಿವೆ. ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಆದರೆ ಸರ್ಕಾರಕ್ಕೆ ಮಾತ್ರ ಇದಾವುದರ ಪರಿವೆ ಇಲ್ಲದಂತಹ ಸ್ಥಿತಿ ನಿರ್ವಣವಾಗಿದೆ. ಯಾವುದೇ ಜಿಲ್ಲೆಯಲ್ಲಿ ಇನ್ನೂ ಪರಿಹಾರ ಕೇಂದ್ರಗಳು ಆರಂಭವಾಗಿಲ್ಲ. ನಷ್ಟದ ಅಂದಾಜು ಮಾಡುವ ಪ್ರಾಥಮಿಕ ಕಾರ್ಯ ಸಹ ನಡೆದಿಲ್ಲ. ಜಿಲ್ಲೆಗಳಲ್ಲಿದ್ದು ಅಧಿಕಾರಿಗಳ ಜತೆ ಸಮನ್ವಯ ಸಾಧಿಸಬೇಕಾದ ಸಚಿವರಲ್ಲಿ ಬಹುತೇಕರು ಉಸ್ತುವಾರಿಯನ್ನೇ ಮರೆತು ಬಿಟ್ಟಿದ್ದಾರೆ.
ಇಂದು ಸಿಎಂ ಸಭೆ: ರಾಜ್ಯದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಆಗಿರುವ ಹಾನಿ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ವಿಡಿಯೋ ಸಂವಾದ ನಡೆಸುವ ಅವರು ತುರ್ತು ಪರಿಹಾರ ಬಿಡುಗಡೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಳೆ ಇನ್ನೂ ಮುಂದುವರಿಯುವ ಲಕ್ಷಣ ಇರುವ ಕಡೆ ಅಪಾಯದ ಪರಿಸ್ಥಿತಿ ಎದುರಾದರೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.