5000 ಕ್ಕಿಂತಲೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿರುವ ಆಶಾ

ಜ್ಯೋತಿ ಶಾಂತರಾಜು

“ಎಷ್ಟು ಜನರು ಅನಾಥರು ಅಂತ ಇದ್ದಾರೋ ಅವರೆಲ್ಲ ಯಾರೂ ಅನಾಥರಲ್ಲ, ನಾನಿದ್ದೇನೆ ನನ್ನುಸಿರು ಇರುವವರೆಗೂ ನನ್ನಿಂದಾದ ಸಹಾಯ ಮಾಡಬೇಕು, ಅವರ ಸೇವೆ ಮಾಡಬೇಕು” – ಆಶಾ. ವಿ.

ಆಶಾ ಅವರ ಜೀವನ ಆಶಾದಾಯಕವಾಗೇನೂ ಇರಲಿಲ್ಲ, ಹೆಸರಿಗೆ ವೈರುಧ್ಯವಾಗಿತ್ತು. ಶವ ಎಂದರೆ ಶಿವನಿಗೆ ಸಮ ಎಂಬ ಮಾತಿದೆ. ಆತ್ಮಹತ್ಯೆ ಮಾಡಿಕೊಂಡೋ ಅಪಘಾತಗಳಲ್ಲಿ ಸಿಕ್ಕೋ ಸತ್ತವರ ದೇಹಗಳನ್ನ ನೋಡಿಯೇ ಬಹುತೇಕರು ಬೆಚ್ಚಿಬೀಳುವಾಗ ಈ ಹೆಣ್ಣು ಮಗಳು ಗೊತ್ತುಗುರಿಯಿಲ್ಲದ ಸುಮಾರು 5000 ಕ್ಕೂ ಹೆಚ್ಚು ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಪುಣ್ಯದ ಕೆಲಸ ಮಾಡಿದ್ದಾರೆ. ಎಷ್ಟೋ ಜನ ಗಂಡ್ಮಕ್ಳು ತಮ್ಮ ತಂದೆತಾಯಿಯರ ಶವಸಂಸ್ಕಾರ ಮಾಡಲು ಹಿಂಜರಿಯುವ ಈಗಿನ ಕಾಲಘಟ್ಟದಲ್ಲಿ ಈ ಹೆಣ್ಣು ಮಗಳು ಮಾಡುತ್ತಿರುವ ಈ ಕೆಲಸ ಯಾವ ಸಾಹಸಕ್ಕೆ ಕಡಿಮೆಯಾದೀತು…? ಸಮಾಜದ ಎಲ್ಲ ವಿರೋಧಾಭಾಸಗಳನ್ನ ಮೆಟ್ಟಿನಿಂತ ಈ ಅಸೀಮಳ ಜೀವನಗಾಥೆಯನ್ನೊಮ್ಮೆ ನೀವು ಓದಲೇಬೇಕು.

ಇವರು ಹುಟ್ಟಿದ್ದು ರಾಮನಗರ ಬಳಿಯ ಜಯಪುರ ಎಂಬ ಹಳ್ಳಿಯಲ್ಲಿ, ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಕೂಟಗಲ್ಲಿನಲ್ಲಿ ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಪ್ರಥಮ ಪಿ.ಯು.ಸಿ.ಗಾಗಿ ರಾಮನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸಿದ್ದರು. ಅಷ್ಟರಲ್ಲಿ ಅಜ್ಜಿ ತಾತನ ಆಸೆಯಂತೆ ಪಿಯುಸಿ ಓದುವಾಗಲೇ ಇವರ ಮದುವೆಯಾಯಿತು. ಗಂಡನ ಮನೆಯಲ್ಲಿ ಇವತ್ತು ಕೂಲಿ ಮಾಡಿದರೆ ಮಾತ್ರ ಇವತ್ತು ಊಟ ಎನ್ನುವ ಪರಿಸ್ಥಿತಿಯಿತ್ತು. ರಾಮನಗರದಿಂದ ಎರಡು ಕಿ.ಮೀ. ದೂರದಲ್ಲಿರುವ ಚಾಮುಂಡಿಪುರ, ಬೆಳಗುಂಬ ರಸ್ತೆಯಲ್ಲಿ ವಾಸವಾಗಿರುವ ಆಶಾ ಅವರಿಗೆ ಇಬ್ಬರು ಗಂಡು ಮಕ್ಕಳು ತೇಜಸ್, ಮತ್ತು ಮನೀಶ್.

‘ಯಾರೂ ಅನಾಥರಲ್ಲ. ಹುಟ್ಟುವ ಪ್ರತಿಯೊಬ್ಬರೂ ಸಂಬಂಧದೊಂದಿಗೆ ಹುಟ್ಟಿರುತ್ತಾರೆ. ಯಾರಿಲ್ಲದಿದ್ದರೂ ತಾಯಿ-ಮಗು ಎನ್ನುವ ಸಂಬಂಧ ಅಂತೂ ಇದ್ದೇ ಇರುತ್ತದೆ. ಹಾಗಾಗಿ ಯಾರೂ ಅನಾಥರಲ್ಲ’ ಎನ್ನುತ್ತಾರೆ ಆಶಾ.

‘ನಮ್ಮದೊಂದು ಎಂಟರಿಂದ ಹತ್ತು ಜನರು ಸೇರಿ ಒಂದು ಗುಂಪು ಮಾಡಿ ಕೊಂಡಿದ್ದೆವು. ನಾವೆಲ್ಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ನಮಗೆ ಬರುತ್ತಿದ್ದ ಸಂಬಳದಲ್ಲಿ ಎಲ್ಲರೂ ಸ್ವಲ್ಪ ಹಣವನ್ನು ಉಳಿಸಿ ರಸ್ತೆ ಬದಿಯ ಅಸಹಾಯಕ ಜನರಿಗೆ ಊಟ, ಮೆಡಿಸಿನ್ ಕೊಟ್ಟು ಕೆಲವರಿಗೆ ಓದೋಕೆ ಅಂತ ಹಣ ಎತ್ತಿಡುತ್ತಿದ್ದೆವು. ನಮ್ಮ ಮಾವ ಪ್ರವೀಣ್ ಇವತ್ತಿಗೂ ನನಗೆ ತಂದೆ, ತಾಯಿ, ಅಣ್ಣ, ತಮ್ಮ ಬಂಧು ಬಳಗ ಎಲ್ಲ ಆಗಿದ್ದಾರೆ. ನನ್ನ ಬೆನ್ನೆಲುಬಾಗಿ ನಿಂತಿರುವುದು ಅವರೇ. ಆಂಬುಲೆನ್ಸ್ ಚಾಲಕರಾಗಿರುವ ಮಾವ ಕೆಲವೊಮ್ಮೆ ತೀವ್ರ ಸಂಕಷ್ಟದಲ್ಲಿರುವವರನ್ನು ನಮಗೆ ಪರಿಚಯಿಸುತ್ತಿದ್ದರು. ನಾವು ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿ ಬರುತ್ತಿದ್ದೆವು’.

‘ಒಮ್ಮೆ ನಾಲ್ಕೈದು ಜನ ಚಿಕ್ಕ ಹೆಣ್ಣು ಮಕ್ಕಳಿರುವ ತೀರ ಬಡ ಕುಟುಂಬದ ಮುಸ್ಲಿಂ ಮಹಿಳೆಯೊಬ್ಬರು ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಆಗೋಕೆ ಹಣವಿಲ್ಲದ್ದನ್ನು ನಮ್ಮ ಮಾವ ಫೋನ್ ಮಾಡಿ ಹೇಳಿ ಆಸ್ಪತ್ರೆಯಿಂದ ಚನ್ನಪಟ್ಟಣಕ್ಕೆ ಅವರದ್ದೇ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದರು. ನಾನಾಗ ತೋಟದಲ್ಲಿ ನೀರು ಕಟ್ಟುತ್ತಿದ್ದೆ. ತಕ್ಷಣವೇ ಮನೆಗೆ ಹೋಗಿ ನನ್ನ ಸ್ನೇಹಿತರಿಂದ ಒಂದಷ್ಟು ಹಣ ಹೊಂದಿಸಿಕೊಂಡು ಹಾಸ್ಪಿಟಲ್ಲಿಗೆ ಅಡ್ಮಿಟ್ ಮಾಡಿಸಿ ಬರುವಾಗ ರಾಮನಗರ ರೈಲ್ವೆ ಪೊಲೀಸ್ ನಮ್ಮ ಮಾವನಿಗೆ ಒಂದು ಫೋನ್ ಮಾಡಿ ಇಲ್ಲೊಂದು ಶವಸಿಕ್ಕಿದೆ ಬನ್ನಿ ಎಂದರು. ಮಾವ, ಆಗಾಗ ಪೊಲೀಸಿನವರು ಫೋನ್ ಮಾಡುತ್ತಿರುತ್ತಾರೆ ನಾನು ಹೋಗ್ತಾ ಇರುತ್ತೇನೆ ಎಂದರು. ನನಗೂ ಕುತೂಹಲವುಂಟಾಗಿ ಅದು ಹೇಗಿರತ್ತೆ ನಾನೂ ನೋಡಬೇಕು ಬರುತ್ತೇನೆ ಅಂತ ತುಂಬ ಹಠ ಮಾಡಿದೆ. ಆಗ ಮಾವ ಬೇಡಮ್ಮ ನಿನಗೆ ಚಿಕ್ಕ ಮಕ್ಕಳಿವೆ ಬರಬೇಡ ಎಂದರೂ ನೋಡಿಕೊಂಡು ವಾಪಸ್ ಬಂದುಬಿಡುತ್ತೇನೆ ಎಂದು ತುಂಬ ಕೇಳಿಕೊಂಡಾಗ ಕರೆದುಕೊಂಡು ಹೋದರು. ರಾಮನಗರದ ಎಸ್.ಪಿ. ಆಫೀಸ್ ಹಿಂದೆ ಸುಮಾರು ಇನ್ನೂರು ಮೀಟರಿಗಿಂತಲೂ ಹೆಚ್ಚು ದೂರಕ್ಕೆ ಆ ದೇಹ ರಸ್ತೆಯಲ್ಲಿ ತಿಕ್ಕಿ ಛಿದ್ರವಾಗಿ ಹೋಗಿತ್ತು. ಅಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಜನರು ನಿಂತು ನೋಡುತ್ತಿದ್ದರಷ್ಟೇ. ಯಾರೂ ಮುಂದೆ ಬರಲಿಲ್ಲ. ಒಬ್ಬ ಪೊಲೀಸ್ ಜೊತೆಗೆ ಮಾವ ಕೂಡ ಹೋದರು. ಪೊಲೀಸ್ ಚೀಲ ಹಿಡಿದುಕೊಂಡಿದ್ದರು, ಅಲ್ಲಿ ಘಟನೆಗೆ ಸಂಬಂಧಪಟ್ಟ ಏನನ್ನೂ ಬಿಡುವ ಹಾಗಿರಲಿಲ್ಲ. ಹಾಗಾಗಿ ದೇಹ ಛಿದ್ರವಾಗಿದ್ದರೂ ಎಲ್ಲವನ್ನು ಆಯ್ದು ಚೀಲಕ್ಕೆ ತುಂಬಬೇಕು. ನಾನು ದೂರದಿಂದಲೇ ಒಂದು ಫೋಟೋ ತೆಗೆದೆ. ರಕ್ತದ ವಾಸನೆಯಿಂದ ಹತ್ತಿರಕ್ಕೂ ಹೋಗುವಂತಿರಲಿಲ್ಲ. ಅವರಷ್ಟೇ ಇದೆಲ್ಲ ಮಾಡುತ್ತಿದ್ದಾರಲ್ಲ ಅಂತ ಜೀವ ತಡೆಯಲಾಗದೆ ಅವರ ಹತ್ತಿರ ಮಾಸ್ಕ್,  ಗ್ಲೌಸ್ ಕೇಳಿ ಹಾಕಿಕೊಂಡು, ನಾನು ಚೀಲ ಹಿಡಿದುಕೊಂಡು ನೀವು ಮಾಂಸದ ತುಂಡುಗಳನ್ನು ಎತ್ತಿಹಾಕಿ ಎಂದೆ. ಆಗ ಪೊಲೀಸರು, ಇದು ಹೆಣ್ಣು ಮಕ್ಕಳು ಮಾಡುವ ಕೆಲಸವಲ್ಲ. ನೀವು ಈ ಕೆಲಸ ಮಾಡೋಕೆ ಬರಬಾರದು ಅಂತ ನಿರಾಕರಿಸಿದರು. ಏನಾಗತ್ತೆ ಆಗಲಿ ಬಿಡಿ ಸಾರ್ ಅಂತ ಆ ದಿನ ಕೈ ಜೋಡಿಸಿದೆ. ಅದಾದ ಮೇಲೆ ಒಂದೆರಡು ಪ್ರಕರಣಗಳಿಗೆ ಫೋನ್ ಮಾಡಿದರು. ನಾನು ಹೆದರಿಬಿಟ್ಟಿರಬೇಕು ಬರಲಿಕ್ಕಿಲ್ಲ ಅಂತ ಕಾಲ್ ಮಾಡಿದ್ರು, ಆದರೆ ನಾನು ಹೋಗಿದ್ದೆ. ನಾಲ್ಕನೇಯದೋ… ಐದನೆಯದೋ ಬಾಡಿ ನಮ್ಮ ದೂರದ ಸಂಬಂಧಿ ಅಜ್ಜಿಯದು. ನನಗೆ ಅವರನ್ನ ನೋಡಿರುವ ನೆನಪೂ ಇರಲಿಲ್ಲ. ಆ ಅಜ್ಜಿಯ ಪರ್ಸಿನಲ್ಲಿ ಒಂದು ಮೊಬೈಲ್ ನಂಬರ್ ಇತ್ತು. ಆ ನಂಬರಿಗೆ ಫೋನ್ ಮಾಡಿ ವಿಚಾರ ತಿಳಿಸಿದಾಗ ದೇವಸ್ಥಾನದಲ್ಲಿ ಆ ಅಜ್ಜಿ ಕೆಲಸ ಮಾಡುತ್ತಿದ್ದರು ಎಂದು ತಿಳಿಯಿತು. ಅಜ್ಜಿಯ ಶವವನ್ನು ರಾಮನಗರದ ಸರ್ಕಾರಿ ಆಸ್ಪತ್ರೆಗೆ ತಂದೆವು. ಆಗ ನಮ್ಮಣ್ಣ ಓಡಿ ಬಂದ. ಅವ್ವ ಅಜ್ಜಿ ರೈಲಿಗೆ ಸಿಕ್ಕಿದೆಯಂತೆ ಬಾಡಿ ಎಲ್ಲಿದೆ ಎಂದ, ನಾನು ತಂದಿದ್ದೇನೆ ಇಲ್ಲಿದೆ ನೋಡು ಅಂದಾಗ ಅವನಿಗೆ ಅದರ ಮುಖ ನೋಡಲು ಕಷ್ಟವಾಯಿತು ಮುಖದ ಅರ್ಧ ಭಾಗ ಹೋಗಿಬಿಟ್ಟಿತ್ತು. ಇನ್ನು ನಾನು ತೋರಿಸುವ ಫೋಟೋ ನೋಡುವ ಧೈರ್ಯ ಕೂಡ  ಇರದೆ ಹಿಂದೆ ಸರಿದುಬಿಟ್ಟ. ಕೊನೆಗೆ ಸ್ಮಶಾನದಲ್ಲಿ ಅಜ್ಜಿಯ ದೇಹವನ್ನ ಚಿತೆ ಮೇಲೆ ಇಡೋಕೂ ಯಾರೂ ಬರದಿದ್ದಾಗ ನಾವೇ ಎತ್ತಿಟ್ಟು ಸಂಸ್ಕಾರವಾದ ಮೇಲೆ ವಾಪಸ್ ಆದೆವು. ಆ ಅಜ್ಜಿ ಕೆಲಸ ಮಾಡುತ್ತಿದ್ದದ್ದು ದೇವಸ್ಥಾನದಲ್ಲಿ. ಹೊಟ್ಟೆಯಲ್ಲಿ ಗಡ್ಡೆ ಇದೆ, ಯಾವುದೋ ವಾಸಿಯಾಗದ ಖಾಯಿಲೆ ಬಂದಿದೆ, ಹುಷಾರಾಗಲ್ಲ ಅಂತ ರೈಲಿಗೆ ತಲೆ ಕೊಟ್ಟಿದ್ದಾರೆ. ಅಕಸ್ಮಾತ್ ಅವರು ಸ್ವಲ್ಪ ದುಡ್ಡು ಇಟ್ಟಿದ್ದರೆ ನಮಗೆ ಅವರನ್ನ ಮುಟ್ಟೋಕೂ ಬಿಡ್ತಿದ್ರೋ ಇಲ್ವೋ ಅನ್ನಿಸಿತು’.

‘ನಮ್ಮ ಮಾವ ಪ್ರವೀಣ್ ಅವರು ಆಂಬುಲೆನ್ಸ್ ಡ್ರೈವರ್ ಆಗಿ ಇಂತಹ ಸಾಕಷ್ಟು ಕೆಲಸಗಳನ್ನು ಮಾಡಿರುವುದಕ್ಕೆ ‘ಜೀವ ರಕ್ಷಕ’ ಎಂಬ ಅವಾರ್ಡ್ ಬಂದಿದೆ. ನಂತರ ನಾನು ಮಾವನಿಗೆ ಇನ್ನು ಮುಂದೆ ಇಂತಹ ಯಾವುದಾದರೂ ಕೇಸ್ ಇದ್ದರೆ ಹೇಳಿ, ನಾನು ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದೆ. ಅವರು ಬೇಡಮ್ಮ ಮಕ್ಕಳು, ಮನೆ ನೋಡಿಕೊಂಡು ಸುಮ್ಮನಿದ್ದು ಬಿಡು ಇಂತದ್ದೆಲ್ಲ ಬೇಡ ಅಂದರು. ನಾನು, ಇದರಲ್ಲಾದರೂ ನನಗೆ ನೆಮ್ಮದಿ ಸಿಗಬಹುದು ಈ ಕೆಲಸ ಮಾಡುತ್ತೇನೆ ಎಂದು ಮುಂದಾದೆ’.

ಈ ಕೆಲಸಕ್ಕಾಗಿ ಸಿವಿಲ್ ಪೊಲೀಸ್ ಮತ್ತು ರೈಲ್ವೆ ಪೊಲೀಸರ ಕಡೆಯಿಂದ ಆಗಾಗ ಫೋನ್ ಬರ್ತಿತ್ತು. ಇನ್ಮುಂದೆ ಈ ಕೆಲಸವನ್ನೇ ಮಾಡೋಣವೆಂದು ನಿರ್ಧರಿಸಿ 2016-2017ರಲ್ಲಿ ನಾನು ಸಂಪೂರ್ಣವಾಗಿ ಈ ಕೆಲಸದಲ್ಲಿ ತೊಡಗಿಕೊಂಡೆ. ಕೆಲವು ಸ್ನೇಹಿತರು ಇಷ್ಟೊಂದು ಹೆಣ ಎತ್ತುತ್ತೀಯ ಯಾರದ್ದಾದರೂ ಸಹಾಯ ತಗೋ, ಒಬ್ಬಳೇ ಎಷ್ಟು ಮಾಡಲು ಸಾಧ್ಯ. ಅಲ್ಲಿ ಹೋಗಿ ಹೆಣ ಎತ್ತೋದು ಇಲ್ಲಿ ಬಂದು ವ್ಯವಸಾಯ ಮಾಡೋದು.. ನಿನಗೊಬ್ಬಳಿಗೆ ಕಷ್ಟ. ನಿಮ್ಮ ತಂದೆಯಂತೂ ನಿನ್ನನ್ನ ಒಳ್ಳೆಯ ಮನೆಗೆ ಮದುವೆ ಮಾಡಿಕೊಟ್ಟಿಲ್ಲ. ಹೀಗೆ ಆದರೆ ನಿನ್ನ ಮತ್ತು ಮಕ್ಕಳ ಭವಿಷ್ಯ ಹೇಗೆ? ಎಂದರು. ನನಗೆ ಯಾವ ಸಹಾಯ ಬೇಡ. ನಾನು ಈ ಕೆಲಸದಲ್ಲಿ ಖುಷಿ ಕಾಣುತ್ತಿದ್ದೇನೆ. ಯಾರೂ ಇಲ್ಲ ಎಂದವರಿಗೆ ನಾನು ತಂಗಿಯಾಗಿಯೋ, ಮಗಳಾಗಿಯೋ ಅವರ ಕಾರ್ಯ ನಿರ್ವಹಿಸುತ್ತಿರುವುದು ನನಗೆ ತುಂಬ ಖುಷಿ ಕೊಡುತ್ತಿದೆ ಎಂದು ನಾನು ಈ ಕೆಲಸ ಮುಂದುವರೆಸಿಕೊಂಡು ಬಂದೆ.

ಆದರೆ ಅತ್ತೆ ಮಾವ ಇಬ್ಬರೂ ನೀನು ಈ ಕೆಲಸ ಮಾಡುವ ಹಾಗಿದ್ರೆ ನಮ್ಮ ಮನೆಯಲ್ಲಿರಬೇಡ ಇದನ್ನ ಬಿಟ್ಟರೆ ಮಾತ್ರ ಗಂಡನ ಜೊತೆಗೆ ಬದುಕಬಹುದು ಎಂದರು. ಇದನ್ನ ಪ್ರವೀಣ್ ಮಾವನಿಗೆ ಹೇಳಿದೆ. ಅವರು ಈ ಕೆಲಸ ಬಿಟ್ಟು ಗಂಡ ಮಕ್ಕಳ ಜೊತೆಗೆ ಮನೆಯಲ್ಲಿರು ಎಂದರು. ಅದೇನೇ ಆದರೂ ನಾನು ಈ ಕೆಲಸ ಬಿಡಲಾಗುವುದಿಲ್ಲ ಎಂದಾಗ ಅವರೇ ಒಂದು ಬಾಡಿಗೆ ಮನೆಮಾಡಿ ಕೊಟ್ಟು ನಿನ್ನಿಷ್ಟದ ಕೆಲಸ ಮಾಡಿಕೊಂಡು ಬದುಕು ಎಂದರು. ಆಗ ಒಂದಷ್ಟು ಹುಡುಗರನ್ನು ಕರೆಸಿ ಒಂದು ಸಂಸ್ಥೆ ಮಾಡೋಣ ಎಂದಾಗ ಎಲ್ಲರೂ ಒಪ್ಪಿಕೊಂಡು ನಾಳೆ ಬರುತ್ತೇವೆಂದವರು ಯಾರೂ ಫೋನ್ ಕೂಡ ರಿಸೀವ್ ಮಾಡಲಿಲ್ಲ. ಬೇರೆ ನಂಬರಿನಿಂದ ಕರೆಮಾಡಿದಾಗ ಕಷ್ಟ ಅಂದ್ರೆ ಸಹಾಯ ಮಾಡಬಹುದು. ಹತ್ತಿಪ್ಪತ್ತು ಕೊಡಬಹುದು. ಹೆಣ ಎತ್ತು ಅಂದ್ರೆ ಆಗಲ್ಲ, ನಿಮ್ಮ ಸಹವಾಸವೇ ಬೇಡವೆಂದು ದೂರ ಉಳಿದರು. ಆನಂದ ಎನ್ನುವ ಒಬ್ಬ ಹುಡುಗ ಮಾತ್ರ ಏನಾದರೂ ಆಗಲಿ ಅಕ್ಕ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಜೊತೆ ಬಂದ. ಒಮ್ಮೆ ನಾನು ಮತ್ತು ಮಾವ ಬೈಕಿನಲ್ಲಿ ಹೋಗುವಾಗ ಅಪಘಾತವಾಯ್ತು. ಅದರಲ್ಲಿ ನಾವಿಬ್ಬರೂ ಬದುಕುಳಿದದ್ದೇ ಹೆಚ್ಚು. ಅಲ್ಲಿದ್ದ ಜನರೇ ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು. ನಮ್ಮವರೇ ಆ ಆಸ್ಪತ್ರೆಯಲ್ಲಿದ್ದರೂ ಯಾರೂ ನಮ್ಮನ್ನು ಉಪಚರಿಸಲಿಲ್ಲ. ಸಾಲದ್ದಕ್ಕೆ ಇವರಿಬ್ಬರೂ ಎಲ್ಲರ ಹೆಣ ಎತ್ತುತ್ತಾರೆ, ಅದಕ್ಕೆ ಯಾವುದೋ ಆತ್ಮ ಹಿಂಬಾಲಿಸಿ ಹೀಗಾಗಿದೆ ಎಂಬ ಮೂಢನಂಬಿಕೆಯ ಮಾತುಗಳನ್ನಾಡಿದರೇ ಹೊರತು ಸಹಾಯಕ್ಕೆ ಬರಲಿಲ್ಲ. ಆಗ ನಮ್ಮ ಜೊತೆ ನಿಂತದ್ದು ಬೆಟ್ಟಸ್ವಾಮಿ ಅಣ್ಣ’ ಎಂದು ತಮ್ಮ ಕಷ್ಟದ ದಿನಗಳನ್ನ ನೆನೆದರು.

ಇವರು ಒಬ್ಬ ಹೆಣ್ಣಾಗಿ ಅನಾಥ ಹೆಣ ಎತ್ತಲು ಹೋದಾಗ ಜನ ಅವರನ್ನ ನೋಡಿದ ರೀತಿಯೇ ಬೇರೆ. ಅವಹೇಳನ ಮಾಡಿ ನಕ್ಕವರೆಷ್ಟೋ.. ಅವಮಾನಿಸಿದವರೆಷ್ಟೋ.. ಎಲ್ಲದಕ್ಕೂ ಬೆನ್ನೆಲುಬಾಗಿ ನಿಂತದ್ದು ಅವರ ಮಾವ ಪ್ರವೀಣ್ ಎಂದು ಋಣ ಸಂದಾಯದ ಮಾತುಗಳನ್ನಾಡುತ್ತಾರೆ ಆಶಾ.

ತುಂಬ ಕಷ್ಟ ಅನ್ನಿಸಿದಂತ ಸನ್ನಿವೇಶವೊಂದನ್ನು ನನ್ನ ಮುಂದಿಟ್ಟರು. ‘ರೈಲಿಗೆ ಸಿಕ್ಕ ಒಂದು ಹುಡುಗನ ದೇಹವನ್ನು ತೆಗೆದ್ವಿ. ಅವನು ಆಂಧ್ರದವನು. ರಾಮನಗರಕ್ಕೆ ಬಂದು ಒಂದು ಮನೆ ಮಾಡಿಕೊಂಡಿದ್ದ. ಮನೆ ಓನರ್ ಹೆಸರಿನಲ್ಲೇ ಸಿಮ್ ತೆಗೆದುಕೊಂಡಿದ್ದ. ಮೊಬೈಲ್ ತೆಗೆದುಕೊಂಡು ಮೂರು ನಾಲ್ಕು ದಿನವಾಗಿರಬಹುದು. ಹೋಗಿ ರೈಲಿಗೆ ತಲೆ ಕೊಟ್ಟಿದ್ದಾನೆ. ರೈಲ್ವೇ ಪೊಲೀಸಿನವರು ಫೋನ್ ಮಾಡಿ ಮೇಡಂ ಹೀಗಾಗಿದೆ ಬನ್ನಿ ಅಂದರು. ಸರಿ ಅಂತ ಹೇಳಿ ನಾನು ನಮ್ಮ ಮಾವ ಇಬ್ಬರೂ ಹೋದ್ವಿ. ಆ ಹುಡುಗ ಮೊಬೈಲಿಗೆ ಪಾಸ್ವರ್ಡ್ ಇಟ್ಟಿದ್ದಾನೆ. ಕೊನೆಗೆ ಪೊಲೀಸ್ ಸಹಾಯದಿಂದ ಮೊಬೈಲ್ ಓಪನ್ ಆಯ್ತು. ನೋಡಿದರೆ ಅವನು ಆ ಮೊಬೈಲಿನಿಂದ ಯಾವ ನಂಬರಿಗೂ ಫೋನ್ ಮಾಡಿಲ್ಲ. ಸಿಮ್ಮನ್ನು ಟ್ರೇಸಿಗೆ ಕೊಟ್ಟು ಸುಮಾರು ಹದಿನೈದು ದಿನ ಬಾಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಟ್ಟಿದ್ವಿ. ಸಿಮ್ ಟ್ರೇಸ್ ಆದಾಗ ಅವನು ಆಂಧ್ರದವನೆಂದು ತಿಳಿಯಿತು. ಅವನ ತಂದೆತಾಯಿ ತಂಗಿ ಬಂದಿದ್ದರು. ಆ ಹುಡುಗನ ತಂದೆತಾಯಿ ಏನೋ ಮಾತಾಡುತ್ತಿದ್ದರು. ಅವರ ಭಾಷೆ ತೆಲುಗು, ನನಗೆ ತಿಳಿಯದ್ದಕ್ಕೆ ಮಾವನನ್ನು ಕೇಳಿದೆ. ಅವರ ಅಪ್ಪ ಅಮ್ಮ ಊರಿಗೆ ಹೋಗಲು ಕಷ್ಟ ಅಂತ ಮಾತಾಡುತ್ತಿದ್ದರಂತೆ. ಸಾಮಾನ್ಯವಾಗಿ ಭಿಕ್ಷೆ ಬೇಡುವವರು ಕೂಡ ಚಿಲ್ಲರೆ ಕಾಸು ಇಟ್ಟುಕೊಳ್ಳುವುದಿಲ್ಲ, ಎಲ್ಲಾದರೂ ಚಿಲ್ಲರೆ ಕೊಟ್ಟು ನೋಟು ತೆಗೆದುಕೊಳ್ಳುತ್ತಾರೆ. ಆದರೆ ಆ ತಾಯಿ ಒಂದು ರೂಪಾಯಿ ಕಾಯಿನ್, ಐದು ರೂಪಾಯಿ ಕಾಯಿನ್, ಹತ್ತು ರೂಪಾಯಿಯ ಚಿಲ್ಲರೆ ನೋಟುಗಳನ್ನು ಮಡಿಲ ತುಂಬ ತುಂಬಿಕೊಂಡು ಅವರ ಭಾಷೆಯಲ್ಲಿ ಅವರು ಊರಿಗೆ ಮಗನನ್ನು ತೆಗೆದುಕೊಂಡು ಹೋಗದೆ ಇದ್ರೆ ಕಳ್ಳತನದಲ್ಲಿ ದುಡ್ಡು ತೆಗೆದುಕೊಂಡು ಹೋಗಿದ್ದೀಯ ಅಂತ ನಮ್ಮನ್ನು ಊರಿಂದ ಹೊರಗೆ ಹಾಕುತ್ತಾರೆ ಅಂತ ಹೇಳುತ್ತಿದ್ದರು. ಆ ತಾಯಿ ತಂದೆ ತಂಗಿ ಕಣ್ಣಲ್ಲಿ ನೀರು ನೋಡಿ ನನಗೆ ತೀವ್ರ ಸಂಕಟವಾಯ್ತು. ನಮ್ಮ ಗಾಡಿ ರಿಪೇರಿಯಿದ್ದ ಕಾರಣ ಪೊಲೀಸಿನವರು, ನಾವು ಎಲ್ಲರೂ ಸ್ವಲ್ಪ ಸ್ವಲ್ಪ ಹಣ ಹಾಕಿ ಬೇರೆ ಗಾಡಿಯನ್ನು ಬಾಡಿಗೆಗೆ ತಂದು ಅವರ ಊರಿಗೆ ಕಳುಹಿಸಿಕೊಟ್ವಿ. ಅದಾದ ಮೇಲೆ ಎಷ್ಟೋ ಹೀಗಾಗಿದೆ. ಮಣ್ಣಾದ ಮೇಲೆ ಫೇಸ್ಬುಕ್ಕಿನಲ್ಲಿ ನೋಡಿ ಇವರು ನನ್ನ ತಂದೆ ನೀವು ಮಣ್ಣು ಮಾಡಿ ಬಿಟ್ಟಿದ್ದೀರಾ… ಎಂದವರೂ ಇದ್ದಾರೆ. ಹೀಗೆ ತುಂಬ ವಿಚಿತ್ರವಾದ ಮತ್ತು ಕರಳು ಹಿಂಡುವ ಘಟನೆಗಳು ನನ್ನನ್ನ ಸಂಪೂರ್ಣ ಇದೇ ಕೆಲಸಕ್ಕೆ ತೊಡಗಿಸಿಕೊಳ್ಳಲು ಪ್ರೇರಣೆಯಾದವು. ರೈಲ್ವೇ ಪೊಲೀಸರು ಕೆಂಗೇರಿಯಿಂದ ಮಂಡ್ಯದವರೆಗೂ ಎಷ್ಟು ಹೊತ್ತಿನಲ್ಲಿ ಫೋನ್ ಮಾಡಿದರೂ ಯಾವುದೇ ಕೇಸಿದ್ದರೂ ಹೋಗುತ್ತೇನೆ. ರಾಮನಗರ ಜಿಲ್ಲೆಯಾದ್ಯಂತ ಯಾವುದೇ ಅನಾಥ ಶವವಿದ್ದರೂ ಅಲ್ಲಿಗೆ ಹೋಗಿ ನನ್ನಿಂದ ಏನು ಸಾಧ್ಯವೋ ಆ ಸಹಾಯ ಸೇವೆ ಮಾಡಿಬರುತ್ತೇನೆ’ ಎಂದರು.

ಸ್ನೇಹಿತರ ಸಲಹೆಯಂತೆ 2018-2019ರಲ್ಲಿ “ಜೀವರಕ್ಷಾ ಚಾರಿಟಬಲ್ ಟ್ರಸ್ಟ”ನ್ನು ರಿಜಿಸ್ಟರ್ ಮಾಡಿಸಿದ್ದೇನೆ. ಸಂಸ್ಥೆಯ ಮುಖೇನ ಶಾಲಾ ಮಕ್ಕಳಿಗೆ ಪುಸ್ತಕ ಕೊಡುವುದು. ಮದುವೆ, ಗೃಹಪ್ರವೇಶಗಳಂತಹ ಕಾರ್ಯಕ್ರಮಗಳಲ್ಲಿ ಮಿಕ್ಕ ಊಟವನ್ನು ಸಂಗ್ರಹ ಮಾಡಿ ಅವಶ್ಯವಿದ್ದವರಿಗೆ ಹಂಚುವಂತಹ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ . ಇದಾದ ಮೇಲೆ “ಪ್ರಕೃತಿ ಮಡಿಲು” ಎಂಬ ಆಶ್ರಮ ಮಾಡಿಕೊಂಡು, ಗ್ಯಾಂಗ್ರೀನ್ ಆದವರಿಗೆ ಟ್ರೀಟ್ಮೆಂಟ್ ಕೊಡಿಸಿ,  ರಸ್ತೆಬದಿಯ ಅನಾಥರನ್ನ ಕರೆದುಕೊಂಡು ಬಂದು ಸ್ನಾನ ಊಟ ಮಾಡಿಸಿ, ತಮ್ಮ ಮಾಹಿತಿ ನೀಡಿದ ನಂತರ ಫೇಸ್ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ, ಮಾಹಿತಿ ಹಾಕುತ್ತೇನೆ. ಸಂಬಂಧಪಟ್ಟವರು ಬಂದಾಗ ಪರಿಶೀಲಿಸಿ ಖಚಿತಪಡಿಸಿಕೊಂಡು ಅವರ ಜಾಗಕ್ಕೆ ಹೋಗಿ ಬಿಟ್ಟುಬರುತ್ತೇವೆ. ಎಲ್ಲರೂ ಅವರವರ ಸಂಬಂಧಗಳನ್ನು ಸರಿಯಾಗಿ ನಿಭಾಯಿಸಿದರೆ, ಜೀವಕೊಟ್ಟು ಹೊಟ್ಟೆಬಟ್ಟೆ ಕಟ್ಟಿ ನೋಡಿಕೊಂಡ ತಾಯಿತಂದೆಯರಿಗೆ ಅವರ ಕೊನೆಗಾಲದಲ್ಲಿ ಒಂದಷ್ಟು ಪ್ರೀತಿಯುಣಿಸಿದರೆ ಯಾರೂ ಬೀದಿಗೆ ಬರುವುದಿಲ್ಲ ಎಂಬ ಕಾಳಜಿಯ ಮಾತನ್ನಾಡುತ್ತಾರೆ.

‘ಈ ಕೆಲಸ ಪ್ರಾರಂಭಿಸಿದಂದಿನಿಂದ ನನ್ನ ಗಂಡನ ಕುಟುಂಬವಂತೂ ನನ್ನಿಂದ ದೂರವೇ ಉಳಿದಿದೆ. ನನ್ನಮ್ಮ ಕೂಡ ಮೊದಲು ಎರಡು ವರ್ಷ ನನ್ನೊಂದಿಗೆ ಮಾತಾಡಿರಲಿಲ್ಲ. ಅಪ್ಪ ಖುಷಿಯಿಂದ ಧೈರ್ಯ ತುಂಬುತ್ತಿದ್ದಾರೆ. ಇವತ್ತೂ ನಾನಿರೋದು ಬಾಡಿಗೆ ಮನೆಯಲ್ಲಿ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಭತ್ತ, ರಾಗಿ ಬೆಳೆಯುತ್ತೇವೆ. ರಾಗಿ ಚೆನ್ನಾಗಿ ಬೆಳೆದರೆ ವರ್ಷಪೂರ್ತಿ ಊಟಮಾಡುತ್ತೇವೆ. ಈ ವರ್ಷ ರಾಗಿಬೆಳೆ ಪೂರ್ತಿ ಹಾಳಾಗಿದೆ’ ಎಂದು ತಮ್ಮ ಪಾಡು ಹೇಳಿಕೊಂಡರು.

ಹೊಸದಾಗಿ ಬಿಳಗುಂಬ ರಸ್ತೆಯಲ್ಲಿ ಆಶ್ರಮ ಕಟ್ಟಿಸುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಅವರು ಎ.ಸಿ. ರೂಮಿನಲ್ಲಿ ನೌಕರಿ ಮಾಡುವುದು ಬೇಡ, ತಮ್ಮಂತೆಯೇ ಸಮಾಜಸೇವಕರಾಗಿ ನಾಲ್ಕು ಜನರಿಗೆ ಉಪಕಾರಿಗಳಾಗಬೇಕು ಎಂಬ ಕನಸನ್ನ ಹೊತ್ತಿದ್ದಾರೆ. ಅವರ ಕನಸು ನನಸಾಗಲಿ. ಸ್ಮಶಾನವಾಸಿ ಶಿವ ಕಾಯಲಿ. ಇವರ ಕೆಚ್ಚೆದೆಯ ಈ ಕೆಲಸಕ್ಕೆ ಮನಃಪೂರ್ವಕವಾಗಿ ಹ್ಯಾಟ್ಸ್ ಆಫ್ ಹೇಳಲೇಬೇಕು.

Donate Janashakthi Media

Leave a Reply

Your email address will not be published. Required fields are marked *