5ಜಿ ರಣರಂಗ: ಚೀನಾದ ಮೇಲೆ ಅಮೆರಿಕಾದ ಟೆಕ್ ಸಮರ

    • 5 ಜಿ ನೆಟ್ ಜಾಲ
  • ಚೀನಾದ ಮೇಲೆ ಯುಎಸ್  ಟೆಕ್ ಸಮರ

ಚೀನಾದ ಮೇಲೆ ಯುಎಸ್ ತನ್ನ ಟೆಕ್ ಸಮರವನ್ನು ಮುಂದುವರಿಸುತ್ತಿದೆ. ಈ ನಿಟ್ಟಿನಲ್ಲಿ, ಚೀನಾದ 5 ಜಿ ನೆಟ್ ವರ್ಕ್ ಉಪಕರಣಗಳನ್ನು ತನ್ನ ನೆಟ್ ವರ್ಕ್ ನಿಂದ ನಿಷೇಧಿಸುತ್ತಿದೆ. ಹಾಗೆಯೇ, ತನ್ನ ಫೈ-ಐಸ್(ಆಸ್ಟ್ರೇಲಿಯ, ನ್ಯೂಜಿಲೆಂಡ್, ಕೆನಡಾ, ಯುಕೆ) ಪಾಲುದಾರರು ಹಾಗೂ ನ್ಯಾಟೋ ಮಿತ್ರ ರಾಷ್ಟ್ರಗಳು ಕೂಡ ತನ್ನ ನಡೆಯನ್ನೇ ಅನುಸರಿಸಬೇಕೆಂದು ಯುಎಸ್ ಒತ್ತಾಯಿಸುತ್ತಿದೆ. ಚೀನಾಕ್ಕೆ ಮಾರುಕಟ್ಟೆ ಮತ್ತು ತಂತ್ರಜ್ಞಾನವನ್ನು ನಿರಾಕರಣೆ ಮಾಡುವ ಮೂಲಕ, ಚೀನಾದ 5 ಜಿ ಉಪಕರಣಗಳ ಪ್ರಭಾವವನ್ನು ನಾಶ ಮಾಡಿ, ಯುಎಸ್ ಮತ್ತು ಯುರೋಪಿಯನ್ ಕಂಪನಿಗಳ ಮಾರುಕಟ್ಟೆಯನ್ನು ಮರಳಿ ಪಡೆಯುವ ಪ್ರಯತ್ನ ನಡೆದಿದೆ.

ಪ್ರಸ್ತುತವಿರುವ ಅಂತರಾಷ್ಟ್ರೀಯ ವಾಣಿಜ್ಯ-ವ್ಯಾಪಾರ ಒಪ್ಪಂದಗಳ ಪ್ರಕಾರ, ತಾಂತ್ರಿಕ ಸರಕು ಮತ್ತು ಉಪಕರಣಗಳನ್ನು ವಿಶ್ವದ ಯಾವುದೇ ದೇಶಗಳಿಂದ ಪಡೆಯಬಹುದಾಗಿದೆ. ಇದಕ್ಕಾಗಿ ನಿಯಮಗಳನ್ನೂ ಕೂಡ ರೂಪಿಸಲಾಗಿದೆ. ಆದರೆ, ಈ ಒಪ್ಪಿರುವ ನಿಯಮಗಳನ್ನು ಅಮೆರಿಕಾವೇ ಉಲ್ಲಂಘನೆ ಮಾಡಿ, ಕಳೆದ ವರ್ಷ ಚೀನಾದ “ಹುವಾವೇ” ಕಂಪನಿಯ ಮೇಲೆ ಅಮೆರಿಕಾ ದಿಗ್ಬಂಧನಗಳನ್ನು ಹೇರಿತು. ಶೇ.25 ಅಥವಾ ಅದಕ್ಕಿಂತ ಹೆಚ್ಚು ಯುಎಸ್ ನ ಸರಕುಗಳನ್ನು ಬಳಸುವ ಯಾವುದೇ ಕಂಪನಿ ಯು.ಎಸ್ ನ ದಿಗ್ಬಂಧನಗಳನ್ನು ಪಾಲಿಸಲೇಬೇಕು. ಇದರ ಪ್ರಕಾರ, ಯು.ಎಸ್ ನ ಸಾಫ್ಟ್ ವೇರ್ ಮತ್ತುವಿನ್ಯಾಸಗಳನ್ನು ಆಧರಿಸಿದ ಚಿಪ್ ಗಳನ್ನು “ಹುವಾವೇ”ಗೆ ರಫ್ತು ಮಾಡಬಾರದು. ಇದರ ಜೊತೆಗೆ, ಈ ವರ್ಷದ ಮೇ ತಿಂಗಳಲ್ಲಿ ಕೊನೆಯ ಸುತ್ತಿನ ಮತ್ತಷ್ಟು ಕಠಿಣವಾದ ದಿಗ್ಬಂಧನಗಳನ್ನು ಹೇರಿತು. ಅದರ ಪ್ರಕಾರ ಯುಎಸ್ ಉಪಕರಣ ಗಳೊಂದಿಗೆ ಉತ್ಪಾದಿಸುವ ಯಾವುದೇ ಸರಕುಗಳನ್ನು ಯಾವುದೇ ಕಂಪನಿ ಅಥವಾ ದೇಶ, ಯುಎಸ್ ದಿಗ್ಬಂಧನ ಹೇರಿದ ಕಂಪನಿ ಅಥವಾ ದೇಶಕ್ಕೆ ಮಾರುವಂತಿಲ್ಲ. ಆ ಮೂಲಕ ಯುಎಸ್ ತನ್ನ ದಿಗ್ಬಂಧನಗಳನ್ನು ದೇಶಗಳ ಸಾರ್ವಭೌಮತ್ವ ಮತ್ತು ಗಡಿಗಳನ್ನು ಮೀರಿ ವಿಸ್ತರಿಸಿದೆ.

ಕಳೆದ ಒಂದು ದಶಕದಲ್ಲಿ, ಜಾಗತಿಕ ವ್ಯಾಪಾರದ ಭಾಗವಾಗಿ ಯುಎಸ್ ತನ್ನ ಸಾಮೂಹಿಕ ತಯಾರಿಕೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಬೇರೆ ದೇಶಗಳಿಗೆ ವರ್ಗಾಯಿಸಿತ್ತು. ಆದರೆ ಜಾಗತಿಕ ಹಣಕಾಸು-ಬ್ಯಾಂಕುಗಳು, ಪಾವತಿ ವ್ಯವಸ್ಥೆಗಳು, ವಿಮೆ ಮತ್ತು ಹೂಡಿಕೆ ನಿಧಿಗಳ ನಿಯಂತ್ರಣದ ಮೂಲಕ ಜಾಗತಿಕ ಆರ್ಥಿಕತೆಯ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಯುಎಸ್ ಗೆ ಸಾಧ್ಯವಾಗಿದೆ. ಇದೀಗ ಹೊಸ ನಿರ್ಬಂಧಗಳ ಮೂಲಕ, ಜಾಗತಿಕ ಆರ್ಥಿಕತೆಯ ಮೇಲಿನ ತನ್ನ ನಿಯಂತ್ರಣದ ಮತ್ತೊಂದು ಪದರವನ್ನು ಬಹಿರಂಗ ಪಡಿಸಿದೆ. ಅದೇ ಚೀನಾದ ಮೇಲಿನ ಈ ಟೆಕ್ ಸಮರದಲ್ಲಿ ಬಳಸಲಾಗುತ್ತಿರುವ ಬೌದ್ಧಿಕ ಆಸ್ತಿ ಮತ್ತು ಚಿಪ್ ತಯಾರಿಕೆಯಲ್ಲಿ ನಿರ್ಣಾಯಕ ಉತ್ಪಾದನಾ ಸಾಧನಗಳಾದ ಉಪಕರಣಗಳ ಮೇಲೆ ಯುಎಸ್‍ನ ನಿಯಂತ್ರಣ.

ಯುಎಸ್ ವಿಧಿಸಿರುವ ಈ ಹೊಸ ವ್ಯಾಪಾರ ದಿಗ್ಬಂಧನಗಳು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂ.ಟಿ.ಒ)ಯ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿವೆ. ಇಂತಹ ವಿವಾದಗಳನ್ನು ನಿಭಾಯಿಸುವ ಡಬ್ಲ್ಯೂ.ಟಿ.ಒ ‘ಇತ್ಯರ್ಥ ನ್ಯಾಯ ಮಂಡಳಿ’ಗೆ ತನ್ನ ನಾಮನಿರ್ದೇಶನಗಳನ್ನು ಯುಎಸ್ ತಡೆ ಹಿಡಿದಿದೆ. ಆ ಮೂಲಕ ವಿವಾದಗಳನ್ನು ಇತ್ಯರ್ಥ ಪಡಿಸುವ ನ್ಯಾಯ ಮಂಡಳಿಯನ್ನು ಯುಎಸ್ ನಿಷ್ಕ್ರಿಯಗೊಳಿಸಿದೆ. ಹಾಗಾಗಿ, ಯುಎಸ್ ಎಸಗುವ ಉಲಂಘನೆಗಳ ವಿವಾದವನ್ನು ಇತ್ಯರ್ಥಕ್ಕಾಗಿ ಚೀನಾ ಡಬ್ಲ್ಯೂ.ಟಿ.ಒ ಗೆ ತರಲು ಸಾಧ್ಯವಿಲ್ಲ.

ಹೀಗಾಗಿ, 5 ಜಿ ಮತ್ತು ಹುವಾವೇ ಮೇಲಿನ ಸಮರವು, ಯುಎಸ್-ಚೀನಾದ ಟೆಕ್ ಸಮರದ ರಣರಂಗವಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಕೋವಿಡ್-19 ಚೀನಾದಿಂದ ಹರಡಿತು ಎಂಬುದು ನೆಪ ಮಾತ್ರ ಅಷ್ಟೇ. 5 ಜಿ ನೆಟ್ ವರ್ಕ್ ಮಾರುಕಟ್ಟ್ಟೆಯು 10 ವರ್ಷಗಳಲ್ಲಿ 50 ಶತಕೋಟಿ ಡಾಲರ್ ಗಳನ್ನು ತಲುಪುವ ನಿರೀಕ್ಷೆಯಿದೆ. ಮಾತ್ರವಲ್ಲದೆ ಈ ನೆಟ್ ವರ್ಕ್ ನಿಂದಾಗಿ, ಮುಂದಿನ ವರ್ಷಗಳಲ್ಲಿ ಟ್ರಿಲಿಯನ್ ಡಾಲರ್ ಗಟ್ಟಲೆ ಆರ್ಥಿಕ ಉತ್ಪನ್ನಗಳು ಹೆಚ್ಚಳವಾಗುವ ಸಂಭವವಿದೆ. 5 ಜಿ ತಂತ್ರಜ್ಞಾನವನ್ನು ನಿಯಂತ್ರಿಸುವ ಯಾವುದೇ ಕಂಪನಿ ಅಥವಾ ದೇಶವು ಜಾಗತಿಕ ಆರ್ಥಿಕ ರಂಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಕಾರಣದಿಂದಾಗಿಯೇ, ಅಮೆರಿಕ ಚೀನಾದ ಈ 5 ಜಿ ತಂತ್ರಜ್ಞಾನದ ಮೇಲೆ ಯುದ್ದ ಸಾರಲು ಹೊರಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

5 ಜಿ ಯ ಪಾತ್ರ

5 ಜಿ ಮತ್ತು ಹುವಾವೇ ಮೇಲಿನ ಯುಎಸ್ ಟೆಕ್ ಯುದ್ದವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, 5 ಜಿ ಯ ಪಾತ್ರವನ್ನು ತಿಳಿದುಕೊಳ್ಳವುದು ಅಗತ್ಯವಿದೆ. ಭವಿಷ್ಯದಲ್ಲಿ ವಿಶ್ವದ ಎಲ್ಲಾ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯೋಜಿಸಲು ಈ 5 ಜಿ ಜಾಲ ಅಡಿಪಾಯವಾಗಲಿದೆ. 5 ಜಿ ಜಾಲಗಳು ವೈರ್ ಲೆಸ್ ನೆಟ್ ವೇಗವನ್ನು 10 ರಿಂದ 40 ಪಟ್ಟು ಹೆಚ್ಚಿಸಬಲ್ಲದು. ಪ್ರಸ್ತುತ, ನಿಧಾನಗತಿಯ ವೇಗದ ನೆಟ್ ನಿಂದಾಗಿ, ವಿಡಿಯೋ ಕಾನ್ಫರೆನ್ಸಿಂಗ್, ಮಲ್ಟಿಮೀಡಿಯಾ, ಮಲ್ಟಿ ಪ್ಲೇಯರ್ ಗೇಮ್ಸ್ ಆನ್ ಲೈನ್ ಆಟಗಳಂತಹ, ಹಲವಾರು ಅಪ್ಲಿಕೇಶನ್ ಗಳನ್ನು ಬಳಸಲು ಗ್ರಾಹಕರು ಅಡಚಣೆಗಳನ್ನು ಅನುಭವಿಸುತ್ತಿದ್ದಾರೆ. ಏಕೆಂದರೆ, ಅಲ್ಲಿ ಆಪ್ ಲೋಡ್ ಮತ್ತು ಡೌನ್ ಲೋಡ್ ಎರಡೂ ಸಮಾನವಾದ ಹೆಚ್ಚಿನ ವೇಗದಲ್ಲಿ ಇರಬೇಕಾಗುತ್ತದೆ. ಇದು ನೆಟ್ ಫ್ಲಿಕ್ಸ್ ನಂತಹ ನೆಟ್ ವೀಡಿಯೋ ಗಳನ್ನು ನೋಡುವುದಕ್ಕಿಂತ ಭಿನ್ನವಾಗಿರುತ್ತದೆ. ಅದರಲ್ಲಿ ಡೌನ್‍ಲೋಡ್ ವೇಗ ಮಾತ್ರ ಪ್ರಮುಖವಾಗಿರುತ್ತದೆ. 5 ಜಿ ಜಾಲಗಳು, ಹೆಚ್ಚಿನ ವೇಗದ ನೆಟ್ ನ್ನು ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಮತ್ತು ಮೊಬೈಲ್ ಸಾಧನೆಗಳಲ್ಲಿಯೂ ಅಳವಡಿಸುವುದಕ್ಕೆ ಅನುವು ಮಾಡುತ್ತದೆ.

5 ಜಿ ನೆಟ್ ಜಾಲದಿಂದ, ಹೆಚ್ಚು ಪ್ರಯೋಜನ ಪಡೆಯುವ ಇತರೆ ಎರಡು ಕ್ಷೇತ್ರಗಳೆಂದರೆ, ‘ಚಾಲಕ ರಹಿತ ವಾಹನ’ಗಳು ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಅಥವಾ ‘ವಸ್ತುಗಳ ಜಾಲ. ಇದರಲ್ಲಿ ಎಲ್ಲಾ ನಮ್ಮ ಗ್ಯಾಡ್ಜೆಟ್ ಗಳು ವೈರ್ ಲೆಸ್ ಮೂಲಕ ಪರಸ್ಪರ ಮಾತನಾಡುತ್ತವೆ. ಚಾಲಕ ರಹಿತ ಕಾರುಗಳು ಸದ್ಯದಲ್ಲಿ ಕಾರ್ಯಗತವಾಗದಿದ್ದರೂ ಸಹಾ, ಭವಿಷ್ಯದ ‘ಸ್ಮಾರ್ಟ್ ಸಿಟಿ’ ಗಳಲ್ಲಿ ವಿದ್ಯುತ್, ಸಂಚಾರ ದೀಪಗಳು ನೀರು ಮತ್ತು ಒಳಚರಂಡಿ ವ್ಯವಸ್ಥೆಗಳ ದಕ್ಷತೆಯನ್ನು ಸುಧಾರಿಸುವಲ್ಲಿ ಮತ್ತು ಭೌತಿಕ ಮೂಲ ಸೌಕರ್ಯಗಳನ್ನು ನಿರ್ವಹಿಸಲು ಐಒಟಿ ಹೆಚ್ಚು ಮಹತ್ವಪೂರ್ಣವಾಗಿರುತ್ತದೆ.
5ಜಿ ಯಲ್ಲಿರುವ ‘ಜಿ’ ವೈರ್ ಲೆಸ್ ಸಂವಹನದ ಪೀಳಿಗೆಯ ತಂತ್ರಜ್ಞಾನವನ್ನು ಸೂಚಿಸುತ್ತದೆ. ಈ ಪೀಳಿಗೆ ರೇಡಿಯೋ ತರಂಗಗಳು ಸಾಗಿಸಬಲ್ಲ ಗರಿಷ್ಠ ಮಾಹಿತಿಯ ಪ್ರಮಾಣವನ್ನು ಸೂಚಿಸುತ್ತದೆ. 5 ಜಿ ಸಾಗಿಸುವ ಮಾಹಿತಿಯ ಪ್ರಮಾಣ ಮತ್ತು ವೇಗವನ್ನು ಹೆಚ್ಚಿಸುತ್ತದೆ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಾಧನಗಳನ್ನು ಬೆಂಬಲಿಸುತ್ತದೆ. ಆದರೆ 5ಜಿ, 3 ಜಿ ಮತ್ತು 4 ಜಿ ನಷ್ಟು ದೂರವನ್ನು ಕ್ರಮಿಸಲಾರದು. ಅದೇ ದೂರವನ್ನು ಕ್ರಮಿಸಲು ಹಲವಾರು ರಿಪೀಟರ್ ಹಾಪ್ಸ್ ಅಥವಾ ಕೋಶಗಳು ಮತ್ತು ಆಂಟೆನಾಗಳು ಬೇಕಾಗುತ್ತವೆ. ಅತಿ ದೊಡ್ಡ ವೆಚ್ಚವಿಲ್ಲದೆ, 5 ಜಿ’ ನೆಟ್ ವರ್ಕ್ ಭೌತಿಕ ಕೇಬಲಿಂಗ್ ಇಲ್ಲದೆ ಫೈಬರ್ ಆಪ್ಟಿಕ್ ಕೇಬಲ್ ಗಳ ವೇಗವನ್ನು ಒದಗಿಸುತ್ತದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೇಗದ ನೆಟ್ ಸೇವೆಯನ್ನು ಗ್ರಾಮೀಣ ಪ್ರದೇಶಗಳು ಸೇರಿದಂತೆ ಕಡಿಮೆ ದಟ್ಟನೆ ಇರುವ ಕೇಂದ್ರಗಳನ್ನು ಇದು ತಲುಪಿಸುತ್ತದೆ.

5 ಜಿ ಯ ಘಟಕಗಳು ಮತ್ತು ಕಂಪನಿಗಳು

ಹುವಾವೇ ಹೊರೆತುಪಡಿಸಿ, ಸ್ಯಾಮ್‍ಸಂಗ್ (ದಕ್ಷಿಣ ಕೊರಿಯ), ನೋಕಿಯಾ (ಫಿನ್‍ಲ್ಯಾಂಡ್), ಎರಿಕ್ಸನ್ (ಸ್ವೀಡನ್) ಮತ್ತು ಜಡ್.ಟಿ.ಇ (ಚೀನಾ) 5ಜಿ ತಂತ್ರಜ್ಞಾನದಲ್ಲಿ ಪರಿಣತಿ ಇರುವ ಕಂಪನಿಗಳು. ಯಾವ ಯು.ಎಸ್ ಕಂಪನಿ ಸಹ 5ಜಿ ನೆಟ್ ವರ್ಕ್ ಸಲಕರಣೆಗಳ ಸಾಮಥ್ರ್ಯ ಹೊಂದಿಲ್ಲ. ಆದಾಗ್ಯೂ, ವೈರ್‍ಲೆಸ್ ಘಟಕಗಳು ಮತ್ತು ಚಿಪ್ ಗಳನ್ನು ತಯಾರಿಸುವ ಕ್ವಾಲ್ಕಾಮ್ ಮಾತ್ರ ಯುಎಸ್ ಕಂಪನಿ. ಇದರೊಂದಿಗೆ, ಆಪಲ್ ಸ್ಮಾರ್ಟ್ ಪೋನ್ ಗಳಲ್ಲಿ ಮಾರುಕಟ್ಟೆಯ ಮುಂಚೂಣಿಯಲ್ಲಿದೆ.

ಈ ಹಿಂದೆ ಯುಎಸ್, ಸಾಫ್ಟ್‍ವೇರ್ ನಲ್ಲಿನ ತನ್ನ ಪ್ರಬಲ ಸ್ಥಾನವನ್ನು ಉಪಯೋಗಿಸಿಕೊಂಡು ಹುವಾವೇ ಮೇಲೆ ದಾಳಿಯನ್ನು ನಡೆಸಿತ್ತು. ಗೂಗಲ್ ನ ಆಂಡ್ರಾಯ್ಡ್ ನ್ನು ಚೀನಾದ ಹೆಚ್ಚಿನ ಸ್ಮಾರ್ಟಪೋನ್ ಗಳಲ್ಲಿ ಅಳವಡಿಸಲಾಗಿದೆ. ಆಪೆಲ್ ಪೋನ್ ಗಳನ್ನು ಬಿಟ್ಟರೆ ಜಗತ್ತಿನ ಎಲ್ಲ ಸ್ಮಾರ್ಟ್ ಪೋನ್‍ಗಳಲ್ಲಿ ಆಂಡ್ರಾಯ್ಡ್ ಕಾರ್ಯನಿರ್ವಹಿಸುತ್ತವೆ. ಎಲ್ಲ ಮೊಬೈಲ್ ಉಪಕರಣಗಳಲ್ಲಿ ಬಳಸುವ ಚಿಪ್ ಗಳಲ್ಲಿ, ಪ್ರಸ್ತುತ ಎ.ಆರ್.ಎಮ್ ಪ್ರೋಸೆಸರ್ ಗಳು ಪ್ರಮುಖ ಸ್ಥಾನವನ್ನು ಹೊಂದಿವೆ.

ಹೆಚ್ಚಿನ ಕಂಪನಿಗಳು ಅಡ್ವಾನ್ಸ್ಡ್ ಪ್ರೋಸೆಸರ್ ಗಳು ಬೇಕಾದಲ್ಲಿ ಹಿಂದೆ ಮುಂಚೂಣಿಯಲ್ಲಿದ್ದ ಇಂಟೆಲ್ ನಿಂದ ಎ.ಆರ್.ಎಮ್ ಗೆ ಬದಲಾಯಿಸುತ್ತಿವೆ. ಎ.ಆರ್.ಎಮ್ ಯುಕೆ ಮೂಲದ ಕಂಪನಿ, ಆದರೆ, ಜಪಾನಿನ ಸಾಫ್ಟ್‍ಬ್ಯಾಂಕ್ ನ ಒಡೆತನದಲ್ಲಿದೆ. ಅದು ಸ್ವತಃ ಚಿಪ್ ಗಳನ್ನು ತಯಾರಿಸುವುದಿಲ್ಲ. ಆದರೆ, ಪ್ರೋಸೆಸರ್ ಗಳಿಗೆ ಹೋಗುವ ಕೋರ್ ಗಳಿಗೆ ವಿನ್ಯಾಸಗಳನ್ನು ಒದಗಿಸುತ್ತದೆ. ಆ ನಂತರ, ಇವುಗಳನ್ನು ಹುವಾವೇ, ಕ್ವಾಲ್ಕಾಮ್, ಸ್ಯಾಮ್‍ಸಂಗ್ ಮತ್ತು ಆಪೆಲ್ ನಂತಹ ಕಂಪನಿಗಳಿಗೆ ಪರವಾನಗಿ ನೀಡುತ್ತದೆ. ಇಂತಹ 2, 4, 8 ಕೋರ್ ಗಳನ್ನು ಬಳಸಿ ಪ್ರೋಸೆಸರ್ ಗಳನ್ನು ಅವು ವಿನ್ಯಾಸ ಮಾಡಿ ಸಿಲಿಕಾನ್ ಫೌಂಡ್ರಿಗಳಲ್ಲಿ ಉತ್ಪಾದಿಸುತ್ತವೆ. ಪ್ರೋಸೆಸರ್‍ಗಳು ಮೊಬೈಲ್ ನೆಟ್‍ವರ್ಕ್ ಉಪಕರಣಗಳು, ಮೊಬೈಲ್ ನ್ ಅಥವಾ ಲ್ಯಾಪ್ ಟಾಪ್ ಗಳಿಗೆ ಶಕ್ತಿ ನೀಡುತ್ತವೆ. ಇವುಗಳೆಲ್ಲ ಮೇಲು ನಿಬರ್ಂಧಗಳನ್ನು ಹೇರಲಾಗಿದೆ. ಪ್ರೋಸೆಸರ್ ಗಳನ್ನು ತಯಾರಿಸುವ ಸಿಲಿಕಾನ್ ಫೌಂಡ್ರಿಗಳು ಪ್ರಮುಖವಾಗಿ ತೈವಾನ್, ದ.ಕೊರಿಯಾ, ಚೀನಾಗಳಲ್ಲಿವೆ.

ಯು.ಎಸ್ ನ ಎರಡು ಸುತ್ತಿನ ದಿಗ್ಬಂಧನಗಳು ಆಂಡ್ರಾಯ್ಡ್ ಮತ್ತು ಎ.ಆರ್.ಎಮ್ ಪ್ರೋಸೆಸರ್ ಗಳನ್ನು ಹುವಾವೆಗೆ ನಿರಾಕರಿಸುವ ಮೂಲಕ ಅದನ್ನು ಮಣಿಸಬಹುದು ಎಂದು ತಿಳಿದಿತ್ತು. ಆಂಡ್ರಾಯ್ಡ್ ಮತ್ತು ಅದರ ಆಪ್‍ಗಳಿಗೆ ಗೆ ಹುವಾವೆ ತನ್ನದೇ ಬದಲಿ ಹುಡುಕಿದೆ. ಎ.ಆರ್.ಎಮ್ ಯುಎಸ್ ನಿಬರ್ಂಧಗಳಿಗೆ ಒಳಪಡುವುದಿಲ ಎ.ಆರ್.ಎಮ್ ಪ್ರೋಸೆಸರ್ ಗಳ ಸ್ಟಾಕ್ ಇದೆ. 5 ಜಿ ನೆಟ್ ವರ್ಕ್ ನಲ್ಲಿ ಪ್ರಮುಖ ಅಂಶವಾಗಿರುವ ರೇಡಿಯೋ ಗಳು ಮತ್ತು ಆಂಟೆನಾಗಳಲ್ಲಿ ಹುವಾವೇ ಗಮನಾರ್ಹ ಮುನ್ನಡೆ ಹೊಂದಿದೆ. ಹಾಗಾಗಿ ಹುವಾವೆ ಯನ್ನು ಯು.ಎಸ್ ದಿಗ್ಬಂಧನಗಳು ಮಣಿಸಲಾರವು. ಆದರೆ ಮಧ್ಯ ಮತ್ತು ದೀರ್ಘಕಾಲೀನ ಚಿಪ್ ಮತ್ತು ಪ್ರೋಸೆಸರ್ ತಯಾರಿಗೆ ಸ್ಯಾಮ್ಸಂಗ್ ನ್ನು ಅವಲಂಬಿಸಬೇಕು ಅಥವಾ ಚೀನಾದ ಫೌಂಡ್ರಿಗಳ ಸಾಮಥ್ರ್ಯ ಹೆಚ್ಚಿಸಬೇಕು ಮತ್ತು ತಂತ್ರಜ್ಞಾನವನ್ನು ಆಧುನಿಕೀಕರಿಸಬೇಕು.

ಇದೇ ಸಂದರ್ಭದಲ್ಲಿ, ಹುವಾವೇ ಸ್ಯಾಮ್ ಸಂಗ್ ನ ಚಿಪ್ ಫ್ಯಾಬ್ರಿಕೇಶನ್ ಬಳಸಲು ಉನ್ನತ ಮಟ್ಟದ ಮೊಬೈಲ್ ಪೋನ್ ಮಾರುಕಟ್ಟೆಯನ್ನು ಅದಕ್ಕೆ ಬಿಟ್ಟು ಕೊಡಲು ಚಿಂತನೆ ನಡೆಸಿದೆ. ಹಾಗಾಗಿ, ಸ್ಯಾಮ್‍ಸಂಗ್ ಮತ್ತು ಹುವಾವೇ ಪಾಲುದಾರರಾಗಲು ಸಿದ್ದರಿದ್ದರೆ, ಯು.ಎಸ್ ನ ನಿಬರ್ಂಧಗಳನ್ನು ಹಿಮ್ಮೆಟ್ಟಿಸಲು ಹುವಾವೇ ಗೆ ಸುಲಭವಾಗುತ್ತದೆ. ಹುವಾವೇ ಮತ್ತು ಸ್ಯಾಮ್‍ಸಂಗ್ ಪಾಲುದಾರರಾದರೆ ಸಂಪೂರ್ಣ 5 ಜಿ ಪರಿಹಾರವನ್ನು ಜಗತ್ತಿಗೆ ಒದಗಿಸಬಹುದು. ಸ್ಯಾಮ್‍ಸಂಗ್ 5ಜಿ ರೇಡಿಯೊ ತಂತ್ರಜ್ಞಾನದಲ್ಲಿ ಹಿಂದೆ ಇದ್ದು ಹುವಾವೇ ಯ ಇಂತಹ ಸಲಹೆಯನ್ನು ಸ್ವೀಕರಿಸಲೂಬಹುದು.

ಟೆಕ್ ಯುದ್ದದಲ್ಲಿ ಹುವಾವೇ ಮತ್ತು ಚೀನಾ ತುಂಬಾ ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ. ದಿಗ್ಬಂಧಗಳ ಭಾಗವಾಗಿ ಗೂಗಲ್ ಆಂಡ್ರಾಯ್ಡ್ ಸಿಸ್ಟಮ್ ನಿರಾಕರಣೆಯ ನಂತರ, ಎಆರ್ ಎಮ್ ಪ್ರೋಸೆಸರ್ ನಿಷೇದವು ಸೇರಿಕೊಂಡಿದೆ. ಇದರಿಂದ, ಯುಎಸ್ ಮತ್ತು ಇತರೆ ಪಾಶ್ಚಿಮಾತ್ಯ ಕಂಪನಿಗಳಿಗೆ ತಾತ್ಕಾಲಿಕ ಪ್ರಯೋಜನವಾಗಿದೆ. ಆದರೆ ಇದು, ಯುಎಸ್ ಹೊರಗಿನ ಹೆಚ್ಚಿನ ತಯಾರಕರು ಯುಎಸ್ ಸಾಧನಗಳಿಂದ ದೂರ ಸರಿಯಲು ಪ್ರೋತ್ಸಾಹ ಮತ್ತು ಒತ್ತಡ ಸೃಷ್ಟಿಸಿದೆ. ಈ ಪರಿಸ್ಥಿತಿಯನ್ನು ಮತ್ತು ಭಾರಿ ಜಾಗತಿಕ 5ಜಿ ಮಾರುಕಟ್ಟೆಯನ್ನು ಬರಿಯ ರಾಜಕೀಯ-ಸೈದ್ಧಾಂತಿಕ ಕಾರಣಗಳಿಗೆ ಕಳೆದುಕೊಳ್ಳಲು ಯಾವ ಕಂಪನಿ ಸಹ ಸಿದ್ಧವಿರುವುದಿಲ್ಲ ಎಂಬ ಸಂಗತಿಯನ್ನು ಹುವಾವೇ ಮತ್ತು ಚೀನಾ ಜಾಣ್ಮೆಯಿಂದ ಬಳಸಿಕೊಳ್ಳುವ ಸಾಧ್ಯತೆಯಿದೆ.
ಆದ್ದರಿಂದ, ಈ ಟೆಕ್ ಯುದ್ದದಲ್ಲಿ, ರಾಜಕೀಯ ಆರ್ಥಿಕತೆಯ ಎರಡು ದೊಡ್ಡ ಪ್ರಬಲ ಶಕ್ತಿಗಳೇ ಯುದ್ದವನ್ನು ನಿರ್ಧರಿಸುತ್ತವೆ. ಇತರೆ, ಯಾವುದೇ ಯುದ್ದದಂತಲ್ಲ ಈ ಟೆಕ್ ಯುದ್ದ. 5 ಜಿ ಕೇವಲ ಒಂದು ರಣರಂಗ ಮಾತ್ರ. ಈ ಯುದ್ದದ ಭವಿಷ್ಯವನ್ನು ನಿರ್ಧರಿಸುವ ಇನ್ನೂ ಅನೇಕ ರಣರಂಗಗಳಿವೆ. ಅವುಗಳಲ್ಲಿ ಚೀನಾ ಪ್ರಬಲವಾಗಿದೆ.

  • ನಾಗರಾಜ ನಂಜುಂಡಯ್ಯ
Donate Janashakthi Media

Leave a Reply

Your email address will not be published. Required fields are marked *