ಗುರುರಾಜ ದೇಸಾಯಿ
- ಮೀಸಲಾತಿಗೆ ಎಳ್ಳುನೀರು ಬಿಟ್ಟ ಐಐಎಸ್‌ಸಿ
- ಕ್ಯಾಬಿನೆಟ್‌ನಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ಸರಕಾರ ಐಐಎಸ್‌ಸಿ ವಿಚಾರದಲ್ಲಿ ಯಾಕೆ ಮೌನವಾಗಿದೆ?
- ಐಐಎಸ್‌ಸಿ ವಿರುದ್ದ ಹಲವರ ಆಕ್ರೋಶ
ಸಂಶೋಧನೆ ಹಾಗೂ ಉನ್ನತ ಶಿಕ್ಷಣ ಕಲಿಕೆಗೆ ಹೆಸರುವಾಸಿಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆಯು ಅಧ್ಯಾಪಕರ ನೇಮಕಾತಿಯಲ್ಲಿ ಮೀಸಲಾತಿ ಅನ್ವಯ ಹುದ್ದೆಗಳನ್ನು ಹಂಚಿಕೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅನ್ವಯ ಸೀಟುಗಳನ್ನು ಹಂಚಿಕೆ ಮಾಡಿಲ್ಲ ಎಂಬ ಅಂಶ ಈಗ ಹೊರಬಿದ್ದಿದ್ದು ಅನೇಕರು ಸಂಸ್ಥೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. 2021 ರ ಮೇ ತಿಂಗಳಲ್ಲಿ ನಡೆದ ಅಧ್ಯಾಪಕರ ನೇಮಕಾತಿಯಲ್ಲಿ 465 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು , ತಳ ಸಮುದಾಯದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಅನ್ಯಾಯವನ್ನು ಮಾಡಲಾಗಿದೆ.
ಕೇಂದ್ರ ಸರ್ಕಾರ ತನ್ನ ಕ್ಯಾಬಿನೆಟ್‌ನಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸಾಮಾಜಿಕ ನ್ಯಾಯ ಪಾಲಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿ ರುವಾಗಲೇ ಅದರ ನೆರಳಲ್ಲೇ ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಡಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನೇಮಕಾತಿಯಲ್ಲಿ ರೋಸ್ಟರ್ ಅನುಸರಿಸದೆ ದಲಿತ ಹಿಂದುಳಿದವರ ಪಾಲನ್ನು ಅನ್ಯರಿಗೆ ನೀಡಲಾಗಿದ್ದು ಸಾರ್ವಜನಿಕ ವಲಯಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳು ಹಾಗೂ ನೇಮಕಾತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತರುವುದು ಕಡ್ಡಾಯವಾಗಿದೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಎಸ್.ಸಿ 15%. ಎಸ್‌ಟಿ 7.5% ಒಬಿಸಿ 27% ಸಾಮಾನ್ಯ 50% ಈ ರೀತಿ ಹಂಚಿಕೆ ಮಾಡಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಹಾಗೂ ಸರಕಾರದ ದಾಖಲೆಗಳಲು ಕೂಡಾ ಹೇಳುತ್ತಿವೆ. ಆದರೆ ಭಾರತೀಯ ವಿಜ್ಞಾನ ಸಂಸ್ಥೆ ಈ ನಿಯಮಗಳನ್ನು ಅನ್ವಯ ಮಾಡದೆ ಮನಸೋ ಇಚ್ಚೆ ನೇಮಕ ಮಾಡಿಕೊಂಡಿರುವುದು ಕಂಡುಬಂದಿದೆ.
465 ಹುದ್ದೆಗಳಲ್ಲಿ 438 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಸೇರಿದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಂದರೆ 94.2% ಸ್ಥಾನಗಳನ್ನು ಸಾಮಾನ್ಯ ಜನರಿಗೆ ನೀಡಿದ್ದು. ಎಸ್‌ಟಿ ವರ್ಗಕ್ಕೆ ಸೇರಿದವರಿಗೆ 02 (ಪುರುಷ), 0.4% ರಷ್ಟು ಮಾತ್ರ. ಎಸ್‌ಸಿ ವರ್ಗಕ್ಕೆ ಸೇರಿದವರಲ್ಲಿ 11 ಪುರುಷ, 2 ಮಹಿಳೆ ಸೇರಿದಂತೆ ಒಟ್ಟು 13 ಸ್ಥಾನಗಳನ್ನು ನೀಡಲಾಗಿದೆ. 2.8% ಅಭ್ಯರ್ತಿಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 10 ಪುರುಷ ಹಾಗೂ 2 ಮಹಿಳೆ ಸೇರಿದಂತೆ ಒಟ್ಟು 12 ಸ್ಥಾನಗಳು 2.6 % ಹಿಂದುಳಿದ ವರ್ಗಗಳ ಅಭ್ಯರ್ತಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಪಕ್ಕದ ಚಿತ್ರದಲ್ಲಿರುವ ಅಂಕಿಅಂಶಗಳನ್ನು ಗಮನಿಸಿದರೆ ನಿಮಗೆ ಸ್ಪಷ್ಟವಾದ ಮಾಹಿತಿ ಸುಗುತ್ತದೆ.
ಯಾವುದೇ ನೇಮಕಾತಿಯು 50% ರಷ್ಟನ್ನು ದಾಟಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನವಿದೆ. ಆದರೂ ಇಲ್ಲಿ ಸಾಮಾನ್ಯ ವರ್ಗಕ್ಕೆ 94.2% ಆಧಾರದಲ್ಲಿ ಸ್ಥಾನಗಳನ್ನು ನೀಡಿರುವುದು ಸಂವಿಧಾನದ ಉಲ್ಲಂಘನೆ ಅಲ್ಲವೆ? ಎಂದು ಹಲವರು ಪ್ರಶ್ನೆಗಳನ್ನೆತ್ತಿದ್ದಾರೆ. ಅಷ್ಟೆ ಅಲ್ಲದೆ 33% ಮಹಿಳಾ ಮೀಸಲಾತಿಯನ್ನು ಇಲ್ಲಿ ಉಲ್ಲಂಘಿಸಲಾಗಿದೆ. ನಿಯಮದ ಪ್ರಕಾರ 33% ರಂತೆ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕಿತ್ತು. ಅಂದರೆ 465 ಹುದ್ದೆಗಳಲ್ಲಿ 120 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕಿತ್ತು. ಆದರೆ ಇಲ್ಲಿ ಕೇವಲ 4 ಸ್ಥಾನಗಳಿಗೆ ಮಾತ್ರ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಪಿಎಚ್‌ಡಿ ಪ್ರವೇಶಾತಿಯಲ್ಲೂ ಅನ್ಯಾಯ : ಸಂಶೋಧನಾ ಶಿಕ್ಷಣ (ಪಿಎಚ್‌ಡಿ) ಕಲಿಕೆಯಲ್ಲಿ ತಳ ಸಮುದಾಯಗಳಿಗೆ ಅನ್ಯಾಯವನ್ನು ಮಾಡಲಾಗಿದೆ. ಪಕ್ಕದ ಚಿತ್ರದಲ್ಲಿ ತೋರಿಸಿದ ಮಾಹಿತಿಯಂತೆ ನೋಡುವುದಾದರೆ. 2018 ರಿಂದ 2021 ರ ದಾಖಲೆಗಳನ್ನು ನೋಡುವುದಾದರೆ. 3 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಅನ್ಯಾಯವನ್ನು ಎಸಗಲಾಗಿದೆ. 7.5 % ಮೀಸಲಾತಿಯಲ್ಲಿ ಎಸ್.ಟಿ ವಿಭಾಗಕ್ಕೆ ಪಿಎಚ್‌ಡಿ ಪ್ರವೇಶಕ್ಕೆ ಅವಕಾಶ ನೀಡಬೇಕಿತ್ತು. ಮೂರು ವರ್ಷಗಳಲ್ಲಿ ಕೇವಲ 85 ಜನ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರತಿದೆ. ಅಂದರೆ 2.8% ಸ್ಥಾನಗಳು ಮಾತ್ರ ಸಿಕ್ಕಿವೆ. 286 ಜನ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಪಿಎಚ್‌ಡಿ ಮುಗಿಸಿದ್ದಾರೆ. 15% ಮೀಸಲಿಡಬೇಕಿದ್ದ ಸೀಟುಗಳಲ್ಲಿ 9.3% ಮಾತ್ರ ಇಲ್ಲಿಯವರೆಗೆ ನೀಡಲಾಗಿದೆ. ಇನ್ನೂ 599 ಒಬಿಸಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು 27% ದಲ್ಲಿ 19.5 % ಪ್ರವೇಶ ಪಡೆದಿದ್ದಾರೆ. ಇ.ಡಬ್ಲ್ಯೂ.ಎಸ್ ( ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಮೀಸಲಾತಿ) ನಲ್ಲಿ 119 ಜನ ಪ್ರವೇಶ ಪಡೆದಿದ್ದು. 10% ದಲ್ಲಿ 3.9 % ದಷ್ಟು ಪ್ರವೇಶ ಪಡೆದಿದ್ದಾರೆ. 1985 ಜನ ಸಾಮಾನ್ಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು 64.6% ವಿದ್ಯಾರ್ತಿಗಳು ಪ್ರವೇಶವನ್ನು ಪಡೆದಿದ್ದಾರೆ.
ನೇಮಕಾತಿ ವ್ಯವಸ್ಥೆ ಹೇಗಿದೆ : ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ರೋಲಿಂಗ್ ಜಾಹಿರಾತು ವ್ಯವಸ್ಥೆ ಇದ್ದು, ಯಾವಾಗ ಬೇಕಾದರೂ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬಹುಷಃ ಇದೇ ಮೀಸಲಾತಿ ಉಲ್ಲಂಘನೆಗೆ ಕಾರಣವಾಗುತ್ತಿರಬಹುದು. ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ನಂತರ ಮತ್ತೊಂದು ಅರ್ಜಿಯನ್ನು ಅವರು ನೀಡುತ್ತಾರೆ. ಅದನ್ನು ಭರ್ತಿಮಾಡಿದ ನಂತರ ನಾಲ್ವರು ಸಂದರ್ಶನ ನಡೆಸಿ ಅಂತಿಮವಾಗಿ ಉದ್ಯೋಗವನ್ನು ನೀಡಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಐಐಎಸ್‌ಸಿ ನಿರ್ದೇಶಕರನ್ನು ಸಂಪರ್ಕಿಸುವ ಪ್ರಯತ್ನವನ್ನು ಜನಶಕ್ತಿ ಮೀಡಿಯಾ ನಡೆಸಿತಾದರೂ ಅವರು ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. ಈ ಕುರಿತಾಗಿ ಐಐಎಸ್‌ಸಿ ಆಡಳಿತಾಧಿಕಾರಿಗಳು ಅಲ್ಲಿರುವ ನೇಮಕಾತಿ ವಿಚಾರಗಳನ್ನು ಬಹಿರಂಗಗೊಳಿಸಬೇಕಿದೆ.
ಇದನ್ನೂ ಓದಿ : ದಲಿತರಿಗೆ ಮೀಸಲಿಟ್ಟ ಹಣ ‘ ಇತರ ಯೋಜನೆಗೆ’ ಬಳಕೆ : ನ್ಯಾ. ನಾಗಮೋಹನ ದಾಸ್ ಕಳವಳ
DYFI ರಾಜ್ಯ ಮುಖಂಡ ವಿ.ಅಂಬರೀಶ್ ಈ ಘಟನೆಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಇಲ್ಲಿನ ಬೋಧಕ ವೃಂದದ ಈ ಪಟ್ಟಿಯನ್ನು ಗಮನಿಸಿದಾಗ ಇಲ್ಲಿ ಮೀಸಲಾತಿ ಪದ್ಧತಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಕೇಂದ್ರ ಸರ್ಕಾರದ ಸಂಸ್ಥೆಯೊಂದರಲ್ಲಿ ಈ ರೀತಿಯಾಗಿ ಅಕ್ರಮವಾಗಿ ಹುದ್ದೆಗಳನ್ನು ಭರ್ತಿ ಮಾಡಿರುವುದು ನ್ಯಾಯಾಲಯದ ತೀರ್ಪುಗಳ ಮತ್ತು ಮೀಸಲಾತಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಮೀಸಲಾತಿ ಪದ್ಧತಿಯನ್ನು ಉಲ್ಲಂಘಿಸಿ ನಡೆದಿರುವ ಅಕ್ರಮ ನೇಮಕಾತಿಯನ್ನು ರದ್ದು ಮಾಡಬೇಕು ಮತ್ತು ಈ ನೇಮಕಾತಿಯನ್ನು ನಡೆಸಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಸಂಸ್ಥೆಯ ವಿರುದ್ಧ ಹೋರಾಟ ರೂಪಿಸುವುದಾಗಿ ವಿ.ಅಂಬರೀಶ್ ತಿಳಿಸಿದ್ದಾರೆ.
“ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್” ಬೆಂಗಳೂರು ಇದರಲ್ಲಿ ಸಂವಿಧಾನದ ಮೀಸಲಾತಿಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನ ಬದ್ದವಾಗಿ ಮೀಸಲಾತಿ ಅನ್ವಯ ಉದ್ಯೋಗಗಳನ್ನು ಹಂಚಿಕೆ ಮಾಡದೇ ಇಲ್ಲಿ ಬಹುತೇಕ ದಲಿತರ ಹಿಂದುಳಿದ ವರ್ಗಗಳ ಮೀಸಲು ಇಡಬೇಕಾದ ಸ್ಥಾನಗಳನ್ನು ಮೀಸಲು ಇಡದೇ ದಲಿತ ಹಿಂದುಳಿದ ವರ್ಗಗಳನ್ನು ವಂಚಿಸಿದ್ದು ಮೆಲ್ನೊಟಕ್ಕೆ ಕಂಡು ಬರುತ್ತದೆ ಇಂತಹ ನೇಮಕಾತಿ ಆದೇಶ ರದ್ದು ಮಾಡಬೇಕು ಇಲ್ಲದೆ ಹೊದರೆ ನ್ಯಾಯಾಲಯದ ಮೊರೆ ಹೋಗಿ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸುತ್ತವೆ, ಎಂದು ಹೈಕೋರ್ಟ ವಕೀಲ ಹನುಮೇಶ್ ಗುಂಡೂರು ತಿಳಿಸಿದ್ದಾರೆ.
ದೇಶದ ಅತ್ಯುತ್ತಮ ಮತ್ತು ಅತ್ಯುನ್ನತ ವಿದ್ಯಾ ಸಂಸ್ಥೆಗಳಲ್ಲೋಂದಾದ IISC ವಿದ್ಯಾ ಸಂಸ್ಥೆಯಲ್ಲಿ ಉಪನ್ಯಾಸಕರ ನೇಮಕಾತಿಯಲ್ಲಿ ಜಾತಿ ತಾರತಮ್ಯ ತಾಂಡವಾಡುತ್ತಿರುವುದು ತುಂಬಾ ವಿಷಾದನೀಯ ಎಂದು ಹೇಳುತ್ತಾರೆ ಭೀಮ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ರಾದ ರಾಜಗೋಪಾಲ್ ಡಿ.ಎಸ್. ದೇಶಕ್ಕೆ ಮಾದರಿ ಯಾಗಬೇಕಾದ ವಿದ್ಯಾಸಂಸ್ಥೆ ಇಂದು ಪೂರ್ವಗ್ರಹ ಪೀಡಿತ ಮನಸ್ಸುಗಳು ಈ ವಿದ್ಯಾಸಂಸ್ಥೆಯಲ್ಲಿ ಸೇರಿಕೊಂಡು ,ತಲಾ ತಲಾಂತರದಿಂದ ಜಾತಿ ತಾರತಮ್ಯ ದಿಂದ ಭೇದ ಭಾವ ಅನುಭವಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳಿಗೆ ನೇಮಕಾತಿಯಲ್ಲಿ ಅನ್ಯಾಯ ಮಾಡುವುದು, ಮತ್ತು ಆ ಸಮುದಾಯದ ಬಗ್ಗೆ ಉಡಾಫೆ ಮಾತಗಳನ್ನು ಆಡುವುದು ಸಂವಿಧಾನಕ್ಕೆ ಮತ್ತು ನೋಂದ ಜನಾಂಗದವರಿಗೆ ಮಾಡುವ ಅನ್ಯಾಯಗಳಾಗಿವೆ ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ದಲಿತರಿಗೆ ಮೀಸಲಾತಿಯಲ್ಲಿ ವಂಚನೆ ಹೊಸದೇನಲ್ಲ. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರು ಸಂವಿಧಾನಾತ್ಮಕ ವಾಗಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲೇ ಇಲ್ಲ. ಇನ್ನೂ ಉನ್ನತ ಸಂಶೋಧನಾ ಕೇತ್ರದಲ್ಲಿ ,ಸಂಸ್ಥೆಗಳಲ್ಲಿ ಅಂದರೆ IIT, IIM ಮತ್ತು IIsc ಈ ರೀತಿ ನೂರಾರು ಸಂಸ್ಥೆಗಳಲ್ಲಿ ದಲಿತರಿಗೆ ಉದ್ಯೋಗ ಮೀಸಲಾತಿ ಮರಿಚೀಕೆಯಾಗಿದೆ. ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿಯ (DHS) ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಯಶವಂತಪುರ ದಲ್ಲಿರುವ ಪ್ರತಿಷ್ಟಿತ ಭಾರತೀಯ ವಿಜ್ಞಾನ ಮಂದಿರ(IISC) ಕೆಂದ್ರ ಸರ್ಕಾರದ ಅದೀನ ಸಂಸ್ಥೆ ಯಾಗಿದ್ದು ಇತ್ತೀಚಿಗೆ ಹುದ್ದಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಅತೀ ಹೆಚ್ಚು ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ (ಓ ಬಿ ಸಿ) ವರ್ಗಗಳಿಗೆ ಕೇವಲ 27 ಸ್ಥಾನಗಳನ್ನು ನೀಡಿ, ದಲಿತ, ಹಿಂದುಳಿದ ವರ್ಗಗಳ ಮೀಸಾಲಾತಿ ಹಕ್ಕುಗಳನ್ನು ಕಸಿದು ಕೊಳ್ಳಲಾಗಿದೆ. ಯಾವುದೇ ಕಾನೂನು ಬದ್ದ ನೇಮಕಾತಿ ಪ್ರಕ್ರಿಯೆ ನಡೆದಿರುವುದಿಲ್ಲ. ಆಡಳಿತ ಮಂಡಳಿಯು ಇಂತಹ ಸಂವಿಧಾನಾತ್ಮಕ ಹಕ್ಕುಗಳನ್ನು ವಂಚಿಸುತ್ತಿರುವುದನ್ನು ಖಂಡಿಸಿರುವ ಗೋಪಾಲಕೃಷ್ಣ ರವರು, ಮುಂದೆ ಹೋರಾಟವನ್ನು ರೂಪಿಸುವುದಾಗಿ ತಿಳಿಸಿದ್ದಾರೆ.
ಐಐಎಸ್‌ಸಿ ಈ ರೀತಿ ನಿಯಮ ಉಲ್ಲಂಘನೆ ಮಾಡಿರುವುದು ಸಾಮಾಜಿಕ ನ್ಯಾಯದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಸಾಮಾಜಿಕ ನ್ಯಾಯವನ್ನು ಖಾತ್ರಿ ಪಡಿಸಬೇಕಾದ ಸಂಸ್ಥೆ ಉದ್ಯೋಗ ಮತ್ತು ಕಲಿಕೆ ಎರಡರಲ್ಲೂ ಉಲ್ಲಂಘನೆ ಮಾಡಿರುವುದು ಖೇದಕರವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯರಾದ ಕೆ.ಎಸ್.ಲಕ್ಷ್ಮೀ ತಿಳಿಸಿದ್ದಾರೆ.
ಶುಲ್ಕ ಹೆಚ್ಚಿರುವ ಕಾರಣ ಪಿಎಚ್‌ಡಿ ಪ್ರವೇಶಕ್ಕೆ ಶೋಷಿತ ಸಮುದಾಯದ ವಿದ್ಯಾರ್ಥಿಗಳು ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆಗಳಿವೆ. ತಳಸಮುದಾಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುಲ್ಕವನ್ನು ನಿಗದಿ ಮಾಡಬೇಕಿದೆ. ಇನ್ನೂ ಉದ್ಯೋಗದ ನೇಮಕಾತಿ ಪ್ರಚಾರವೂ ಆಗಿಲ್ಲ ಎಂಬುದು ಈ ದಾಖಲೆಗಳಿಂದ ತಿಳಿದುಬಂದಿದೆ. ಕೇವಲ ವೆಬ್ಸೈಟ್‌ನಲ್ಲಿ ಪ್ರಕಟಿಸಿ ಸುಮ್ಮನಾಗುವುದು ಸರಿಯಾದ ವಿಧಾನವಲ್ಲ. ಎಲ್ಲರೂ ಡಿಜಿಟಲ್ ವಿಧಾನಕ್ಕೆ ಇನ್ನೂ ಒಗ್ಗಿಕೊಂಡಿಲ್ಲ ಹಾಗಾಗಿ ಐಐಎಸ್‌ಸಿಯ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ. ಮಹಿಳಾ ಅಭ್ಯರ್ಥಿಗಳ ಮೀಸಲಾತಿಯಲ್ಲೂ ಅನ್ಯಾಯ ಮಾಡಲಾಗಿದೆ. ಕೂಡಲೆ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಲ ಶಿಕ್ಷಣ ಸಂಸ್ಥೆಗಳು ಈ ರೀತಿ ಮೀಸಲಾತಿ ಪಾಲನೆಗೆ ಆಧ್ಯತೆ ನೀಡುವುದಿಲ್ಲ. ಅವರಿಗೆ ನೇಮಕಾತಿ ಹಾಗೂ ಶಿಕ್ಷಣ ನೀಡುವಿಕೆ ಕಡೆ ಗಮನ ನೀಡುತ್ತಾರೆ. ಐಐಎಸ್ಸಿ ಯಲ್ಲೂ ಇದೇ ರೀತಿ ಇರಬಹುದು ಎಂಬುದು ಕೆಲವರ ವಾದವಾಗಿದೆ. ಆದರೆ ಕೊಡಬೇಕಾದ ಮೀಸಲಾತಿಯನ್ನು ಕೊಡದೆ, ‘ಶಿಕ್ಷಣ ನೀಡುವ ಸಂಸ್ಥೆ’ ಅಲ್ಲಿನ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಹೇಳಿ ಕೊಡುತ್ತದಾ? ಎಂಬ ಪ್ರಶ್ನೆ ಕಾಡದೆ ಇರದು. ಈ ಎಲ್ಲ ಸಮಸ್ಯೆಗಳಿಗೆ ಐಐಎಸ್ಸಿ ಶೀಘ್ರವಾಗಿ ಉತ್ತರಿಸಬೇಕಿದೆ. ಇನ್ನೂ ಕೇಂದ್ರ ಸರಕಾರ ತನ್ನ ಕ್ಯಾಬಿನೆಟ್ ನಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸಾಮಾಜಿಕ ನ್ಯಾಯ ಪಾಲಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿರುವ ಜೊತೆಯಲ್ಲಿಯೇ ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಡುವ ಬದಲು ಸಾಮಾಜಿಕ ನ್ಯಾಯವನ್ನು ರಕ್ಷಿಸಲು ಮುಂದಾಗಬೇಕಿದೆ.